-->
ನನಗೆ ಸ್ಫೂರ್ತಿಯಾಗಿರುವ ಶಿಕ್ಷಕರು - ಮಕ್ಕಳ ಬರಹಗಳು : ಸಂಚಿಕೆ - 01

ನನಗೆ ಸ್ಫೂರ್ತಿಯಾಗಿರುವ ಶಿಕ್ಷಕರು - ಮಕ್ಕಳ ಬರಹಗಳು : ಸಂಚಿಕೆ - 01

ಶಿಕ್ಷಕರ ದಿನಾಚರಣೆಯ ವಿಶೇಷ - 2023
ನನಗೆ ಸ್ಫೂರ್ತಿಯಾಗಿರುವ ಶಿಕ್ಷಕರು
ಮಕ್ಕಳ ಬರಹಗಳು : ಸಂಚಿಕೆ - 01


        ಅಖಂಡ ಮಂಡಲಾಕರಂ 
        ವ್ಯಾಪ್ತಂ ಯೇನ ಚರಾಚರಮ್
        ತತ್ವದಂ ದರ್ಶಿತಂ ಯೇನ 
        ತಸ್ಮೈ ಶ್ರೀ ಗುರುವೇ ನಮಃ
ಶೈಕ್ಷಣಿಕ ಜೀವನದಲ್ಲಿ ನನಗೆ ಸ್ಫೂರ್ತಿಯಾಗಿರುವ ಶಿಕ್ಷಕರು.. ಸ್ಫೂರ್ತಿಯ ಜೊತೆಗೆ ಸಾಧನೆಯೆಂಬ ಹಸಿವಿನಿಂದ ನನ್ನ ಬದುಕಿಗೆ ತಿರುವು ನೀಡಿದ ಸಾರ್ಥಕರು… ನನ್ನ ನೆಚ್ಚಿನ ಗುರುಗಳ ಬಗ್ಗೆ ಶಿಕ್ಷಕ ದಿನಾಚರಣೆ ಯ ಸಂದರ್ಭದಲ್ಲಿ ಬರೆಯುವ ಸುಯೋಗ ನನ್ನದು.
     ತನ್ಮನ ಸೆಳೆಯುವ ಮಾತುಗಳಿಂದ ಹಲವಾರು ಶಿಷ್ಯರ ಮನಗೆದ್ದವರು ನನ್ನ ಗುರುಗಳು. ಮಕ್ಕಳ ಪ್ರತಿಭೆಯ ಗುರುತಿಸಿ ಪ್ರೋತ್ಸಾಹಿಸುವ ನಿಸ್ವಾರ್ಥ ಮನಸುಳ್ಳವರು, ನನಗೇ ತಿಳಿದಿರದ ನನ್ನ ಪ್ರತಿಭೆಯ ಗುರುತಿಸಿ, ಪ್ರೇರಣೆಯ ಮಾತುಗಳೊಂದಿಗೆ ಮಾರ್ಗದರ್ಶನ ಮಾಡುತ್ತಾ ಬೆಳೆಸಿದ ಗುರುಗಳು ನಮ್ಮ ಶಾಲಾ ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ಮಹೇಶ್ ಕುಮಾರ್ ಸರ್. 
       ಎಂದೂ ಮಾತುಗಾರಿಕೆಗಾಗಿ ವೇದಿಕೆ ಹತ್ತದ ನನ್ನನ್ನ 'ಮಳೆಬಿಲ್ಲು' ಎಂಬ ಕಾರ್ಯಕ್ರಮದಲ್ಲಿ ನಿರೂಪಣೆಗಾಗಿ ವೇದಿಕೆಗೆ ಹೆಜ್ಜೆ ಇಡುವಂತೆ ಮಾಡಿದವರು. ಮಳೆ ಬಿಲ್ಲು ಕಾರ್ಯಕ್ರಮ ದಿಂದಲೇ ಕನಸ ನನಸಾಗಿಸುವ ಗುರುವ ಮಾರ್ಗದರ್ಶನ ದಿಂದ ಕನಸ ಹಾದಿಯ ಕಾಮನ ಬಿಲ್ಲು ಕಟ್ಟಲು ಶುರುಮಾಡಿದೆ. ಪ್ರತೀ ಬಾರಿ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದಾಗಲೂ ನನ್ನ ಗುರುಗಳ ಮಾತು ಒಂದೇ… 'ಫಲಿತಾಂಶ ಏನೇ ಇರಲಿ ನಿನ್ನ ಮಾತುಗಾರಿಕೆ ನಿನಗೆ ತೃಪ್ತಿ ಕೊಟ್ಟರೆ ಸಾಕು..' ಇಂತಹ ಗುರುಗಳು ಸಿಗೋದು ಅತಿ ವಿರಳ. ಇಲ್ಲಿಯವರೆಗೂ ನನ್ನ ಜೀವನದಲ್ಲಿ ಅದೆಷ್ಟೋ ಶಿಕ್ಷಕರು ಬಂದು ಹೋಗಿದ್ದಾರೆ. ಆದರೆ ಇವರಂತೆ ಪ್ರೋತ್ಸಾಹಕರು.. ಸಾಧಿಸ ಬೇಕೆಂಬ ಛಲ ತುಂಬಿದವರು ಯಾರೂ ಇಲ್ಲ…! ನನ್ನಲ್ಲಿ ಸಾಧನೆಯ ಕಿಡಿಯ ಹಚ್ಚಿ, ಬೆಳೆಸಿ ಮೊದಲ ಪ್ರಯತ್ನದಲ್ಲೇ ಪ್ರತಿಭಾ ಕಾರಂಜಿಯ, ಭಾಷಣ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿ ಪ್ರಶಸ್ತಿ ಪಡೆಯುವಂತೆ ಮಾಡಿ… ಹಸನ್ಮುಖಿಯಾಗಿ ಹಾರೈಸಿ, ಸನ್ಮಾರ್ಗ ತೋರಿದ, ನನ್ನ ವಿದ್ಯಾರ್ಥಿ ಜೀವನದಲ್ಲಿ ಪರಿವರ್ತನೆಯ ಪ್ರೇರಕರಾದ ರಾಮಕೃಷ್ಣರಂಥ ಗುರುಗಳ ಪಡೆದ ನಾನೇ ಧನ್ಯಳು. ಸದಾ ಚಿರಋಣಿ. ಸಾರ್ಥಕ ಬದುಕಿನ ಸಾಧಕರಾದ ನನ್ನ ಕನಸ ಹಾದಿಗೆ ಜೊತೆಗಿದ್ದ ಗುರುಗಳಾದ ಮಹೇಶ್ ಕುಮಾರ್ ಸರ್ ರವರಿಗೆ ಹೃದಯಪೂರ್ವಕ ನಮನಗಳು  
...................................................... ಲಿಖಿತಾ 
9ನೇ ತರಗತಿ
ಸರಕಾರಿ ಪದವಿಪೂರ್ವ ಕಾಲೇಜು 
(ಪ್ರೌಢಶಾಲಾ ವಿಭಾಗ) ಸಿದ್ದಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ*
*****************************************ಜಗಲಿಯ ಬಳಗಕ್ಕೆ ಪ್ರೀತಿಪೂರ್ವಕ ನಮಸ್ಕಾರಗಳು....
    ಬಹಳ ದಿನಗಳ ಬಳಿಕ ಮತ್ತೆ ಜಗಲಿಗೆ ಲೇಖನ ಬರೆದು ಕಳಿಸಿರುವೆ...
    ಗೌರವಾನ್ವಿತ ಶಿಕ್ಷಕ ಬಳಗಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು...
    ಗುರುಗಳೆಂದಾಕ್ಷಣ ಅಕ್ಷರ ಕಲಿಸಿದ ಶಾಲಾ ಶಿಕ್ಷಕರು ಮಾತ್ರವಲ್ಲ, ನಮ್ಮ ನಿತ್ಯ ಜೀವನದಲ್ಲಿ ಹಲವಾರು ಗುರುಗಳು ನಮಗೆ ಪ್ರತ್ಯಕ್ಷವಾಗುತ್ತಾರೆ... ನಾವು ಪ್ರತಿದಿನ ಪ್ರತಿಯೊಬ್ಬರಿಂದಲೂ ಒಂದಲ್ಲ ಒಂದು ವಿಷಯವನ್ನು ಕಲಿಯುತ್ತೇವೆ. ಕಲಿಕೆಗೆ ಕಾರಣವಾದವರೆಲ್ಲರೂ ನಮ್ಮ ಗುರುಗಳೇ.. ಜನನಿಯು ಮೊದಲ ಗುರುವಾಗಿದ್ದಾಳೆ. ಅವಳಿಂದ ಕಲಿತ ಪಾಠ ಅಗಣಿತವಾದದ್ದು. ಅದನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ. ನಮಗೆ ಲೇಖನಿ ಹಿಡಿಯಲು ಕಲಿಸಿ, ಅಕ್ಷರ ಬರೆಯಿಸಿ, ತಪ್ಪುಗಳನ್ನು ತಿದ್ದಿ ಸನ್ಮಾರ್ಗವನ್ನು ತೋರಿ ಪ್ರತಿಯೊಬ್ಬ ಮಕ್ಕಳು ತಮ್ಮ ಸ್ವಂತ ಮಕ್ಕಳೇ ಎಂದು ತಿಳಿದು ನಮಗೆ ಶಾಲೆಯಲ್ಲಿ ಪಠ್ಯ ಬೋಧನೆ ಮಾಡುವವರು ಶಿಕ್ಷಕರು. ಸರ್ವಪಲ್ಲಿ ರಾಧಾಕೃಷ್ಣ ನ್ ಅವರ ಜನುಮದಿನ ವನ್ನು ಶಿಕ್ಷಕರ ದಿನವೆಂದು ಆಚರಿಸುತ್ತೇವೆ. ಇವರು ನಮಗೆ ಅನುದಿನವು ಕಾಣುವ ಪ್ರತ್ಯಕ್ಷ ದೇವರಾಗಿದ್ದಾರೆ.
ಅವರ ಸೇವೆ ನಿಸ್ವಾರ್ಥವಾದುದು ತಾಳ್ಮೆಯಿಂದ ಬಹು ಅರ್ಥಪೂರ್ಣವಾಗಿ ಜ್ಞಾನಾರ್ಜನೆ ಮಾಡುತ್ತಾರೆ. ಇಂತಹ ಗುರುಗಳಲ್ಲಿ ನನಗೆ ಒಂದನೇ ತರಗತಿಯಿಂದ 12ನೇ ತರಗತಿ ವರೆಗೆ ಹಲವಾರು ಶಿಕ್ಷಕರು ಪಾಠ ಬೋಧಿಸಿ ವ್ಯಕ್ತಿತ್ವ ವಿಕಸನ ಮತ್ತು ದಾರಿದೀವಿಗೆಯಾಗಿದ್ದಾರೆ. ಅವರಲ್ಲಿ ನನಗೆ ಅತಿ ನೆಚ್ಚಿನ ಹಾಗೂ ವ್ಯಕ್ತಿತ್ವದ ಬದಲಾವಣೆಗೆ ಕಾರಣವಾದ ಶಿಕ್ಷಕಿ ಎಂದರೆ ಅವರು ತೇಜಸ್ವಿ ಅಂಬೆಕಲ್ಲು. ಇವರು ನಮ್ಮ ಜಗಲಿಯ ಆಪ್ತರು. ನನ್ನನ್ನು ಜಗಲಿಗೆ ಕರೆತಂದು ಬಳಗದೊಂದಿಗೆ ಜೊತೆಗೂಡಲು ಕಾರಣವಾದವರು...
      ನಾನು 6ನೇ ತರಗತಿಯಿಂದ ಎಂಟನೇ ತರಗತಿವರೆಗೆ ಇವರ ಪಾಠವನ್ನು ಆಲಿಸಿರುವೆ.. ನನಗೆ ಕನ್ನಡ ಪಾಠವನ್ನು ಸತತ ಮೂರು ವರ್ಷಗಳ ಕಾಲ ಬೋಧಿಸಿದ್ದಾರೆ. ಇವರ ತರಗತಿಯೆಂದರೆ ನನಗೆ ಇನ್ನಿಲ್ಲದ ಆಸಕ್ತಿ. ಅವರ ಆ ಮುಗುಳ್ನಗೆ, ಗಾಂಭೀರ್ಯತೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಇವರು ಕಲೆಗೆ ಅತ್ಯಂತ ಪ್ರೋತ್ಸಾಹ ನೀಡುತ್ತಿದ್ದರು. ಅವರು ತರಗತಿಯಲ್ಲಿ ನಮಗಾಗಿ ಪ್ರೀತಿಯಿಂದ ಹಾಡುತ್ತಿದ್ದರು. ಭರತನಾಟ್ಯ, ಹಾಡು, ಅಭಿನಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು ತನ್ನಿಂದಲೂ ಹಲವಾರು ಹಾಡುಗಳನ್ನು ಹಾಡಿಸಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಇವರ ಕೊಡುಗೆ ಇದೆ. ಆಂತರ್ಯ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಕನ್ನಡ ಓದುವಿಕೆಯಲ್ಲಿ ಸ್ವರ ಏರಿಳಿತ ಸ್ಪಷ್ಟತೆಯನ್ನು ಕಲಿತದ್ದು ಇದರಿಂದಲೇ. ಅವರು ಕನ್ನಡ ಓದುತ್ತಿದ್ದುದು ನನಗೆ ಈಗಲೂ ಕಿವಿಗೆ ಕೇಳಿಸುತ್ತಿದೆ. ದೃಢತೆ, ಪ್ರಾಮಾಣಿಕತೆ, ಬದ್ಧತೆಯ ಮಾರ್ಗದಲ್ಲಿ ಸಾಗಲು ದಾರಿದೀಪವಾಗಿದ್ದಾರೆ. ಎಲ್ಲಾ ಮಕ್ಕಳನ್ನು ಸಮಾನವಾಗಿ ಕಾಣುತ್ತಿದ್ದರು. ಬಹಳ ಚೆನ್ನಾಗಿತ್ತು ಆದರೆ ಅವರು ನನ್ನ ಅಕ್ಷರವನ್ನು 'ಭವ್ಯನ ಅಕ್ಷರ ಬಹಳ ಚೆನ್ನಾಗಿದೆ' ಅಂತ ಹೇಳುತ್ತಿದ್ದಾಗ ಮುಜುಗರ ಅನ್ನಿಸ್ತಿತ್ತು. ಮಕ್ಕಳನ್ನು ಬಹಳ ಪ್ರೀತಿಯಿಂದ ಆಲಿಂಗನ ಮಾಡಿಕೊಳ್ಳುವುದು ಇವರ ವಾಡಿಕೆ..
     ನನ್ನಲ್ಲಿ ಕನ್ನಡದ ಪ್ರೀತಿಯನ್ನು ಕಟ್ಟಿಕೊಟ್ಟಿದ್ದು ಇವರೇ.. ದಿನಪತ್ರಿಕೆಗಳನ್ನು ಓದುವಲ್ಲಿ ಆಸಕ್ತಿ ತುಂಬಿದ್ದಾರೆ. ಪುಸ್ತಕ ಓದುವ ಹವ್ಯಾಸ ನನಗಿರಲಿಲ್ಲ ಅದನ್ನು ಕಲಿಸಿದ್ದು ತೇಜಸ್ವಿ ಮೇಡಂನ ಪ್ರೇರಣೆಯಿಂದಲೇ. ಅವರು ಪ್ರತಿ ದಿನ ತರಗತಿಯಲ್ಲಿ ಪಾಠಕ್ಕಿಂತಲೂ ಹೆಚ್ಚಾಗಿ ಜೀವನ ಮೌಲ್ಯಗಳನ್ನು ಹೇಳಿಕೊಡುತ್ತಿದ್ದರು. ಸತ್ಯ , ಧನಾತ್ಮಕ ಆಲೋಚನೆಗಳನ್ನು ಮಾಡಬೇಕೆಂದು ಹಲವು ಬಾರಿ ಹೇಳುತ್ತಿದ್ದುದು ನೆನಪಿದೆ. ನಾನು ಇಂದು ಲೇಖನಿ ಹಿಡಿದು ಬರೆಯಬೇಕೆಂದರೆ ಅದಕ್ಕೆ ಸ್ಪೂರ್ತಿಯಾದವರು ತೇಜಸ್ವಿ ಮೇಡಂ.. ತಪ್ಪುಗಳನ್ನು ತಿದ್ದಿ ಬೆನ್ನುಡಿ ಬರೆದ ಕೈದಾರಿಯಲ್ಲಿ ಹೋಗಲು ಮಾರ್ಗಸೂಚಿಯಾಗಿದ್ದಾರೆ. ತೇಜಸ್ವಿ ಮೇಡಮ್ ನಿಂದ ನನಗೆ ಸಾಹಿತ್ಯ ಪ್ರೀತಿ ಮೂಡಿದೆ. ಹೊಸ ವಿಷಯಗಳನ್ನು ತಿಳಿದುಕೊಳ್ಳುವ ತವಕ. ಈ ಎಲ್ಲಾ ಆಸಕ್ತಿ ಮೂಡಿದು ಇವರಿಂದಲೇ. ಮುಗ್ಧ ಮಕ್ಕಳೊಂದಿಗೆ ಬಹಳ ಅಕ್ಕರೆಯಿಂದ ಬೆರೆಯುತ್ತಿದ್ದರು. ಶಾಲೆಯಲ್ಲಿ ಒಂದು ದಿನ ಬಿಸಿ ಊಟವಿಲ್ಲದಿದಾಗ ಅವರು ನೀಡಿದ ಬುತ್ತಿಯ ಊಟ ಸವಿದ ರುಚಿ ಇಂದಿಗೂ ನಾಲಿಗೆಯಲ್ಲಿದೆ. ಮಕ್ಕಳು ಹಸಿದು ಇರುವುದು ಬೇಡವೆಂದು ತಾವು ಊಟ ಮಾಡದೇ ತಮ್ಮ ಬುತ್ತಿ ನೀಡಿದ್ದಾರೆ. ಮೊನ್ನೆ ಆಂತರ್ಯ ಪುಸ್ತಕ ಕೇಳಲೆಂದು ಶಾಲೆಯ ಕಡೆ ಹೋಗಿದ್ದೆ.. ಅವರ ಬಳಿ ಆ ಪುಸ್ತಕ ಇರಲಿಲ್ಲ ನಿರಾಸೆ ಮಾಡಿ ಹಿಂದಕ್ಕೆ ಕಳಿಸಲು ಇಷ್ಟವಾಗದ ಅವರು ನನಗೆ ಪೂರ್ಣಚಂದ್ರ ತೇಜಸ್ವಿಯವರ ಪರಿಸರದ ಕಥೆ ಎಂಬ ಪುಸ್ತಕವನ್ನು ನೀಡಿ ಓದಲು ಅವಕಾಶ ನೀಡಿದ್ದಾರೆ...
    ನಿಮ್ಮ ಈ ಅಕ್ಕರೆ, ಕಾಳಜಿ ಸದಾ ಹೀಗಿರಲಿ.. ಸಾಹಿತ್ಯ ಕ್ಷೇತ್ರದಲ್ಲಿ ನಿಮ್ಮ ನಡೆ ಬಹುದೂರ ಯಶದಿ ಸಾಗಲಿ. ಇನ್ನಷ್ಟು ಹೊಸ ಕೃತಿಗಳನ್ನು ಕನ್ನಡಕ್ಕಾಗಿ ನೀಡಿ. ನಮಗೆ ಓದಲು ಅವಕಾಶ ಮಾಡಿಕೊಡಿ. ನನ್ನ ಮುಂದಿನ ವಿದ್ಯಾಭ್ಯಾಸ ಜೀವನದಲ್ಲೂ ನಿಮ್ಮಂತ ಶಿಕ್ಷಕಿಯನ್ನು ಕಾಣಲು ಇಚ್ಛಿಸುತ್ತೇನೆ. ದೇವರು ನಿಮಗೆ ಆಯುಷ್ಯ ಆರೋಗ್ಯ ನೀಡಿ ಕಾಪಾಡಲಿ ಎಂದು ಬೇಡುತ್ತಾ.. ನನ್ನ ಬರಹಕ್ಕೆ ಪೂರ್ಣ ವಿರಾಮ ಇಡುತ್ತೇನೆ...
ನಮಸ್ಕಾರಗಳು...
.............................................. ಭವ್ಯಶ್ರೀ 
ದ್ವಿತೀಯ ಪಿಯುಸಿ
ಸರಕಾರಿ ಪದವಿಪೂರ್ವ ಕಾಲೇಜು ಕೊಣಾಲು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************    ಎಲ್ಲರಿಗೂ ನಮಸ್ಕಾರ.... ನನಗೆ ಸ್ಪೂರ್ತಿಯಾದ ಶಿಕ್ಷಕರೆಂದರೆ ನರೇಂದ್ರ ಕುಮಾರ್ ಕೋಟ ಸರ್.... ಇವರ ಬಗ್ಗೆ ಈಗಾಗಲೇ ಲೇಖನ ಬರೆದಿದ್ದೇನೆ. ಆ ಲೇಖನ ಮಕ್ಕಳ ಜಗಲಿಯಲ್ಲಿ ಪ್ರಕಟವಾಗಿದೆ. 
            ನನ್ನ ಸರ್ ಬಗ್ಗೆ ಎಷ್ಟು ಹೇಳಿದರೂ ಸಾಕಾಗುವುದಿಲ್ಲ. ಇವರು ಎಲ್ಲಾ ರೀತಿಯಲ್ಲೂ ಸ್ಪೂರ್ತಿದಾಯಕ ವ್ಯಕ್ತಿಯೇ... ನನಗೆ ಮೊದಲು ಸಾಹಿತ್ಯ ರಚಿಸಲು ಬರುತ್ತಿರಲಿಲ್ಲ. ನಾನು 7ನೇ ತರಗತಿ ಉತ್ತೀರ್ಣಳಾಗಿ 8ನೇ ತರಗತಿಗೆ ವಿವೇಕ ಬಾಲಕಿಯರ ಪ್ರೌಢಶಾಲೆ  ಕೋಟಕ್ಕೆ ಸೇರಿದೆ. ಅದೇ ನನ್ನ ಜೀವನದ ಪುಣ್ಯ. ನನಗೆ ಅಂತಹ ಒಳ್ಳೆಯ ಗುರುಗಳು ಸಿಕ್ಕಿದರು. ಅವರು ಮೊದಲ ಬಾರಿಗೆ ಪಾಠಕ್ಕೆ ಬಂದಾಗ ಅವರ ಭೋಧನೆಯ ರೀತಿ ನೋಡಿ ಆಶ್ಚರ್ಯವೆನ್ನಿಸಿತು. 
        ನಾನು ಮೊದಲಿದ್ದ ಶಾಲೆಯಲ್ಲಿನ ಶಿಕ್ಷಕರು ಪುಸ್ತಕ ನೋಡಿ ಪಾಠ ಮಾಡುವವರು. ಆದರೆ ಇವರು ಪುಸ್ತಕವನ್ನೇ ನೋಡದೆ ಅದರಲ್ಲಿರುವ ಎಲ್ಲಾ ವಿಷಯಗಳನ್ನೂ ಎಳ್ಳಷ್ಟೂ ತಪ್ಪಿಲ್ಲದೇ ಭೋಧಿಸತೊಡಗಿದರು. ಅಲ್ಲದೇ ಕವನ, ಕವಿಗಳ ಭಾವಸ್ಪುಟತೆಗಳನ್ನು ಸೇರಿಸಿ ಪಾಠಮಾಡುತ್ತಿದ್ದರು. ಆಗಲೇ ಅವರು ತುಂಬಾ ಡಿಫರೆಂಟ್ ಅಂತನ್ನಿಸಿತು. ಅವರ ಪಾಠ ಮೊದಲ ಬಾರಿಗೆ ಕೇಳಿದಾಗಲೇ ಅವರು ನನ್ನ ನೆಚ್ಚಿನ ಗುರುಗಳಾದರು. ಅವರ ಬಗ್ಗೆ ತಿಳಿದುಕೊಳ್ಳಲು ಪ್ರಾರಂಭಿಸಿದಾಗ ಅವರು ಲೇಖಕರು, ನಿರೂಪಕರು ಹೀಗೆ ಹಲವಾರು ವಿಷಯಗಳು ತಿಳಿಯಿತು. ಅವರು ಪಾಠಮಾಡುವಾಗ ಅವರು ಬರೆದ ಪುಸ್ತಕದಲ್ಲಿನ ಕವನಗಳು ಅವರಿಂದ ಹೊರಬರಲು ಪ್ರಾರಂಭಿಸಿದವು. ಆಗಲೇ ನನ್ನಲ್ಲಿ ಸಾಹಿತ್ಯಾಸಕ್ತಿ ಪ್ರಾರಂಭವಾಗಿದ್ದು. 
       ನಾನೀಗ ರಚಿಸುವ ಕಥೆಯಾಗಲೀ, ಕವನಗಳಾಗಲೀ ಒಬ್ಬರು ಗುರುಗಳಾಗಿ ಅವರಿಂದ ಧಾರೆಯಾದ ಅಂಶಗಳು. ಇಷ್ಟೇಯಲ್ಲದೆ ಅವರು ಪರರೊಂದಿಗೆ ಸಂವಹನಿಸುವ ರೀತಿ... ಎಲ್ಲಾ ವಿಷಯದಲ್ಲಿಯೂ ಅವರು ನನಗೆ ಸ್ಪೂರ್ತಿದಾಯಕವಾಗಿದ್ದಾರೆ. ನಾನೊಂದು ಹುಚ್ಚು ಬೆಳೆಸಿಕೊಂಡೆ..! ಅವರ ಭಾಷಣಗಳು, ಅವರ ಪುಸ್ತಕಗಳನ್ನು ಓದುವ, ಕೇಳುವ ಹುಚ್ಚು. ಅದೆಷ್ಟೆಂದರೆ ಅವರ ಮಾತನ್ನು ಕೇಳಿ ಕೇಳಿ ನಾನೂ ಏನಾದರೂ ಮಾತನಾಡುವಾಗ ಪ್ರಾಸ ಕವನಗಳನ್ನು ಹೇಳುವಷ್ಟು....!.. 
    ಅವರು ನನ್ನಲ್ಲಿ ಕೇವಲ ಸಾಹಿತ್ಯಾಸಕ್ತಿಯನ್ನು ತುಂಬಲಿಲ್ಲ. ಅವರ ಪೂರ್ತಿಜೀವನವೇ ನನಗೆ ಸ್ಪೂರ್ತಿದಾಯಕವೇ. ಸದಾ ಮೊಗದಲ್ಲಿ ಚಂದಿರನಂತಹ ನಗು, ಲವಲವಿಕೆ, ಚಟುವಟಿಕೆಯಿಂದ ಕೂಡಿರುವ ಅವರು ನನಗೆ ತಿಳಿಹೇಳಿದ್ದಿಷ್ಟೇ. ಜೀವನದಲ್ಲಿ ಕಷ್ಟಗಳು ಸಮುದ್ರದ ಅಲೆಗಳ ರೀತಿಯಲ್ಲಿ ಪದೇಪದೇ ಬರುತ್ತಲಿರುತ್ತದೆ. ಆದರೆ ಅದನ್ನು ಮರಳು ಹೀರಿಕೊಳ್ಳುವಂತೆ ನಾವು ಸಹಿಸಿಕೊಂಡು ಹೊಗಳಿಕೆ, ತೆಗಳಿಕೆ ಏನೇ ಬರಲಿ ಎಲ್ಲವನ್ನೂ ಸ್ವೀಕರಿಸಿಕೊಂಡು ನೋವೆಂದು ಭಾವಿಸದೇ ಜೀವನ ಪಾಠವೆಂದು ಭಾವಿಸಬೇಕೆಂದು...‌‌‌!! 
      ನರೇಂದ್ರ ಕುಮಾರ್ ಸರ್ ನನ್ನ ಗುರುಗಳೆನ್ನಲು ನನಗೆ ಬಹಳ ಹೆಮ್ಮೆಯಿದೆ. ಅಲ್ಲದೇ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಕೊಡಮಾಡುವ 2023ನೇ ಸಾಲಿನ ''ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ'' ಗೆ ಇವರು ಕೂಡ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 5ಕ್ಕೆ ಇವರಿಗೆ ಪ್ರಶಸ್ತಿ ಪ್ರದಾನವಾಗುತ್ತದೆ. ನನಗಂತೂ ಇವರ ಮೇಲಿರುವ ಹೆಮ್ಮೆ, ಅಭಿಮಾನ, ಪ್ರೀತಿ ಎಲ್ಲಾ ಹೆಚ್ಚಾಯಿತು. ನಮ್ಮ ದೇಶದ ಪ್ರಧಾನಿಯವರಾದ ನರೇಂದ್ರ ಮೋದಿಯವರು ದೆಹಲಿಯಲ್ಲಿ ಮಕ್ಕಳನ್ನುದ್ದೇಶಿಸಿ ಮಾತನಾಡಿದಾಗ ''ಹೆತ್ತವರು ಜನ್ಮವನ್ನು ನೀಡಿದರೆ ; ಶಿಕ್ಷಕರು ಜೀವನವನ್ನು ನೀಡುತ್ತಾರೆ'' ಎಂದರು. ನನಗೆ ಜೀವನ ಪಾಠ ಬೋಧಿಸಿದ ನನ್ನೆಲ್ಲಾ ಶಿಕ್ಷಕರಿಗೂ ಹಾಗೂ ನನ್ನ ನರೇಂದ್ರ ಕುಮಾರ್ ಸರ್ ರವರಿಗೂ ನನ್ನ ಹೃದಯಸ್ಪರ್ಶಿ ವಂದನೆಗಳು...
........................................ ಶರ್ಮಿಳಾ ಕೆ.ಎಸ್    
9ನೇ ತರಗತಿ                   
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ.
*****************************************


ನಮಸ್ತೆ...
 ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ನಾನಿಂದು ಬಾಲಕೃಷ್ಣ ಶ್ರೀಮಾನ್ ಇವರ ಬಗ್ಗೆ ಹೇಳಲು ಇಷ್ಟಪಡುವೆ. ಇವರು ನನಗೆ ಇಂಗ್ಲಿಷ್ ಪಾಠ ವನ್ನು ಹೇಳಿ ಕೊಡುತ್ತಾರೆ. ಇವರ ಪಾಠ ಬಹಳ ಚೆನ್ನಾಗಿ ಅರ್ಥವಾಗುತ್ತದೆ. ನಾನು ಇಂಗ್ಲಿಷ್ ಮಾತಾನಾಡಲು ಬರೆಯಲು ಓದಲು ಬಹಳ ಕಷ್ಟಪಡುತ್ತಿದ್ದೆ ಆದರೆ ಈಗ ನನಗೆ ಬಹಳ ಸುಲಭವಾಗಿ ಇಂಗ್ಲಿಷ್ ಬರುತ್ತದೆ. ಇದಕ್ಕೆಲ್ಲ ಕಾರಣ ನಮ್ಮ ಬಾಲಕೃಷ್ಣ ಶ್ರೀಮಾನ್ ಇವರಿಗೆ ನನ್ನ ಪರವಾಗಿ ವಂದನೆ......
.................................................... ಲತಿಕಾ
6ನೇ ತರಗತಿ
ಶ್ರೀ ರಾಮ ವಿದ್ಯಾಕೇಂದ್ರ  
ಹನುಮಾನ್ ನಗರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ*
*****************************************


      ಮಕ್ಕಳ ಜಗಲಿಗೆ ಜನನಿ ಮಾಡುವ ನಮಸ್ಕಾರಗಳು. ಮೊದಲನೆಯದಾಗಿ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಇಂದು ಸೆಪ್ಟೆಂಬರ್ 5ರಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ನವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಒಬ್ಬ ವಿದ್ಯಾರ್ಥಿಯ ಜೀವನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಾದುದು. ವಿದ್ಯಾರ್ಥಿ ಮಾಡಿದ ತಪ್ಪು ಕೆಲಸಗಳನ್ನು ತಿದ್ದಿ ಸರಿ ದಾರಿಗೆ ಕೊಂಡೊಯ್ಯುವಲ್ಲಿ ಶಿಕ್ಷಕರು ಪ್ರಮುಖರಾಗಿರುತ್ತಾರೆ. ಒಬ್ಬ ವಿದ್ಯಾರ್ಥಿಯ ಜೀವನದಲ್ಲಿ ತಾಯಿಯ ಬಳಿಕ ಶಿಕ್ಷಕರ ಪಾತ್ರ ಅತೀ ಮುಖ್ಯ. ಇಂದಿನ ವಿದ್ಯಾರ್ಥಿಯೆ ಮುಂದಿನ ಜನಾಂಗ ಈ ಜನಾಂಗವನ್ನು ಸರಿಯಾದ ರೀತಿಯಲ್ಲಿ ರೂಪಿಸುವವರು ಶಿಕ್ಷಕರು. ಆದ್ದರಿಂದ ಮಹಾನ್ ವ್ಯಕ್ತಿಯಾದ ರಾಧಾಕೃಷ್ಣನ್ ನವರು ತಮ್ಮ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ಕರೆ ನೀಡಿದರು. ಮಕ್ಕಳಲ್ಲಿ ದೇಶಕ್ಕಾಗಿ ಹಾಗೂ ಞಮ್ಮ ತಾಯ್ನಾಡಿಗಾಗಿ ಹೋರಾಡಿದ ಮಹನೀಯರ ಬಗ್ಗೆ ವಿವರಿಸುತ್ತಾ ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಬೆಳೆಸಲು ಶಿಕ್ಷಕರಿಗೆ ಮಾತ್ರ ಸಾಧ್ಯ. ಕನ್ನಡ ಅಕ್ಷರ ಮಾಲೆಯನ್ನು ಅಂಗನವಾಡಿ ಶಿಕ್ಷಕಿಯಿಂದ ಕಲಿತೆನು. ತಾಯಿಯ ಪ್ರೀತಿಯನ್ನು ಶಿಕ್ಷಕರಲ್ಲಿ ಕಂಡೆನು. ನಲಿಕಲಿಯಲ್ಲಿ ಪದಗಳನ್ನು ಜೋಡಿಸಲು ನಲಿಕಲಿ ಶಿಕ್ಷಕರು ಕಲಿಸಿಕೊಟ್ಟರು. ನನ್ನ ಮುಂದಿನ ತರಗತಿಯಲ್ಲೂ ಅಷ್ಟೇ, ಶಿಕ್ಷಕರು ತುಂಬಾ ಆತ್ಮೀಯರಾಗಿದ್ದಾರೆ. ನನಗೆ ಅರ್ಥವಾಗದ ವಿಷಯಗಳನ್ನು ಕೇಳಿದಾಗ ಅವರ ಕೆಲಸಗಳನ್ನು ಬದಿಗಿಟ್ಟು ನನಗೆ ಬಲು ಬೇಗನೆ ಹೇಳಿ ಕೊಡುತ್ತಾರೆ. ನನಗೆ ವಿದ್ಯೆಯನ್ನು ಧಾರೆಯೆರೆದ ಎಲ್ಲಾ ಆತ್ಮೀಯ ಶಿಕ್ಷಕರಿಗೂ ಧನ್ಯವಾದಗಳು. ಹಾಗೆಯೇ ನೃತ್ಯ ಗುರುಗಳು ಮಾಡಿದ ಸಹಾಯವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಎಲ್ಲಾ ವಿದ್ಯಾರ್ಥಿಗಳಲ್ಲಿ ನನ್ನದೊಂದು ಪುಟ್ಟ ವಿನಂತಿ. ನಾವು ಕಲಿತ ಶಾಲೆ ಹಾಗೂ ವಿದ್ಯೆ ನೀಡಿದ ಶಿಕ್ಷಕರನ್ನು ಎಂದೂ ಮರೆಯಬಾರದು. ವಿದ್ಯಾರ್ಥಿಗಳಿಗೆ ಒಳ್ಳೆಯ ಉದ್ಯೋಗ ಸಿಕ್ಕಿದಾಗ ನಾವು ಕಲಿತ ಶಾಲೆಗೆ ಕೈಲಾಗುವ ಸಹಾಯವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಮಾಡಬೇಕು. ವಿದ್ಯಾರ್ಥಿ ಮತ್ತು ಶಿಕ್ಷಕರ ಬಂಧವು ತೀರಿಸಲಾಗದ ಅನುಬಂಧ. ವಿದ್ಯಾರ್ಥಿಗಳಿಗೆ ಜ್ಞಾನವೆಂಬ ಬೆಳಕನ್ನು ನೀಡುವವರು ಗುರುಗಳು. ಶಿಕ್ಷಕರ ದಿನಾಚರಣೆಯ ಈ ಸಮಯದಲ್ಲಿ ವಿದ್ಯಾರ್ಥಿಗಳ ಜೀವನವನ್ನು ಉತ್ತಮವಾಗಿ ರೂಪಿಸುವ ಶಿಕ್ಷಕ ವೃಂದದವರಿಗೆಲ್ಲರಿಗೂ ಗೌರವ ಪೂರ್ವಕ ನಮನಗಳು. ಮಾತ್ರ ದೇವೋಭವ , ಪಿತೃ ದೇವೋಭವ,ಗುರು ದೇವೋಭವ.
.................................................. ಜನನಿ .ಪಿ
7ನೇ ತರಗತಿ 
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಕೊಯಿಲ ಕೆ.ಸಿ.ಫಾರ್ಮ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ*
*****************************************     ನನಗೆ ಸ್ಫೂರ್ತಿಯಾಗಿರುವ ಶಿಕ್ಷಕರು ಎಂದರೆ ಅದು ನಮ್ಮ ಚಿತ್ರಕಲಾ ಶಿಕ್ಷಕರು ಯಶವಂತ ಸರ್. ನಾನು ಮೂರನೇ ತರಗತಿ ಇರುವಾಗಲೇ ನನಗೆ ಕವನವನ್ನು ಕಲಿಸಿಕೊಟ್ಟರು. ಚಿತ್ರಕಲೆಗಳನ್ನು ಮಾಡಲು ಕಲಿಸಿಕೊಟ್ಟರು. ನನ್ನೊಳಗೆ ಇರುವ ಪ್ರತಿಭೆಗಳನ್ನು ಹೊರತಂದರು. ಕವನಗಳನ್ನು ಹೇಗೆ ಬರೆಯಬಹುದು, ಹಾಡುಗಳನ್ನು ಹೇಗೆ ಬರೆಯಬಹುದು ಹಾಗೆಯೇ ವಿವಿಧ ಚಿತ್ರಗಳನ್ನು ಮಾಡಲು ಕಲಿಸಿಕೊಟ್ಟರು. ಕೆಲವು ಮಕ್ಕಳ ಪ್ರತಿಭೆಗಳನ್ನು ತೋರಿಸಿದರು. ನನ್ನ ಈ ಪ್ರತಿಭೆಯನ್ನು ತೋರಿಸಲು ವಿವಿಧ ಸ್ಪರ್ಧೆಗಳಿಗೆ ಸೇರಿಸಿದರು. ಶಾಲೆಯಲ್ಲಿ ಭವಿತಾ ಎಂದು ಹೆಸರಿದ್ದ ನನಗೆ ಕವಯಿತ್ರಿ ಎಂದು ಹೆಸರು ಬಂತು. ಇದಕ್ಕೆಲ್ಲಾ ಕಾರಣರಾದ ಯಶವಂತ ಸರ್ ರವರಿಗೆ ಧನ್ಯವಾದಗಳು. ಮುಂದೆ ಕೆಲವು ಕವನ, ಹಾಡುಗಳನ್ನು ಬರೆದು ಶಾಲೆಗೆ ಮತ್ತು ಮನೆಯವರಿಗೆ ಹೆಸರು ಬರುವ ಹಾಗೆ ನಾನು ಮಾಡುತ್ತೇನೆ ಎಂದು ನನ್ನ ಶಿಕ್ಷಕರಾದ ಯಶವಂತ ಸರ್ ಗೆ ಭರವಸೆ ತುಂಬಲು ಇಷ್ಟಪಡುತ್ತೇನೆ. ನಾನು ಯಶವಂತ ಸರ್ ನವರ ಬಗ್ಗೆ ಹೇಳಲೇ ಬೇಕು... ಅವರು ಅಂದರೆ ನಮ್ಮ ಶಾಲೆಯ ಎಲ್ಲಾ ಮಕ್ಕಳಿಗೆ ಬಹು ಪ್ರೀತಿ ಅವರು ನಮ್ಮ ಶಾಲೆಯ ಚಿತ್ರಕಲಾ ಶಿಕ್ಷಕರು ಜೊತೆಗೆ ಕೆಲವು ಮಕ್ಕಳಿಗೆ ಹಾಡು ಕಲಿಸುವ ಶಿಕ್ಷಕರು. ಅವರನ್ನು ಯಶು ಸ್ನೇಹಗಿರಿ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರೆ. ಇವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನನಗೆ ಬಬಿತಾ ಟೀಚರ್ , ಲವೀನ ಟೀಚರ್ ರವರು ನನಗೆ ಅಕ್ಷರಾಭ್ಯಾಸವನ್ನು ಕಲಿಸಿದರು. ಜೊತೆಗೆ ನಮ್ಮಗೆ ಒಂದರಿಂದ ಎಂಟನೇ ತರಗತಿಯರಿಗೆ ಕಲಿಸಿದ ಹಾಗೂ ಮುಂದೆಯೂ ಕಲಿಸುವ ಶಿಕ್ಷಕರಿಗೆ ಧನ್ಯವಾದ ಅರ್ಪಿಸಲು ಇಷ್ಟಪಡುತ್ತೇನೆ. ನನಗೆ ಕಲಿಸಿರುವ ಶಿಕ್ಷಕರು ಶ್ವೇತಾ ಟೀಚರ್, ವೀರಾ ಟೀಚರ್, ಧನುಷಾ ಟೀಚರ್, ರೇಖಾ ಟೀಚರ್, ಸ್ಮೀತಾ ಟೀಚರ್, ಸವಿತಾ ಟೀಚರ್, ರಮ್ಯ ಟೀಚರ್, ಕವಿತಾ ಟೀಚರ್, ಸೌಮ್ಯ ಟೀಚರ್, ಪಂಚಾಕ್ಷರೀ ಸರ್, ಶೈಲಜಾ ಟೀಚರ್, ಪ್ರಜ್ಞ ಟೀಚರ್, ಸಂದ್ಯ ಟೀಚರ್, ವಸುಧ ಟೀಚರ್ , ಮುಂತಾದ ಶಿಕ್ಷಕರಿಗೆ ಧನ್ಯವಾದ ಅರ್ಪಿಸಲು ಇಷ್ಟಪಡುತ್ತೇನೆ. ಆದರೆ ಯಶವಂತ ಸರ್ ಎಂಬ ಶಿಕ್ಷಕರನ್ನು ಮರೆಯಲು ಸಾಧ್ಯವೇ ಇಲ್ಲ ಎಲ್ಲಾ ಶಿಕ್ಷಕರಿಗು ನನ್ನ ಕಡೆಯಿಂದ ಶಿಕ್ಷಕರ ದಿನಾಚರಣೆಗೆ ಶುಭಾಶಯಗಳನ್ನು ಕೋರುತ್ತೇನೆ.
.................................................. ಭವಿತ 
8ನೇ ತರಗತಿ
ಎಸ್ ಎಲ್ ಎನ್ ಪಿ ವಿದ್ಯಾಲಯ
ಪಾಣೆಮಂಗಳೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************     ನಮಸ್ತೆ ನನ್ನ ಹೆಸರು ಸಿಂಚನಾ ಶೆಟ್ಟಿ. ನನ್ನ ಮೊದಲ ಗುರು ನನ್ನ ಅಮ್ಮ. ನಂತರ ಟೀಚರ್. ನಮ್ಮ ಟೀಚರ್ ತನ್ನ ಮಕ್ಕಳ ಹಾಗೆಯೆ ನೋಡಿಕೊಳ್ಳುತ್ತಾರೆ. ನನ್ನ ಟೀಚರ್ ಎಂದರೆ ನನಗೆ ತುಂಬಾ ತುಂಬಾ ಇಷ್ಟ. ನಾವು ಒಂದು ಪ್ರಶ್ನೆಯನ್ನು ಕೇಳಿದಾಗ ಅದರ ಉತ್ತರ ಹಾಗೂ ಅದಕ್ಕೆ ಸಂಬಂಧಪಟ್ಟ ವಿವರ ಕೊಡುತ್ತಾರೆ. ಅವರು ಏನೇ ಬೈದರೂ ನನ್ನ ತಪ್ಪನ್ನು ತಿದ್ದಿಕೊಳ್ಳುತ್ತೇನೆ. 
     ನಾನು ನನ್ನ ಶಿಕ್ಷಕರನ್ನು ದೇವರ ರೂಪದಲ್ಲಿ ನೋಡುತ್ತೇನೆ. ಪ್ರತಿಯೊಂದು ಸಂದರ್ಭದಲ್ಲಿ ಅವರು ಹೇಳುವ ಮಾತು ನಮಗೆ ತಿಳಿಯುವುದು. ನನ್ನ ಒಬ್ರು ಟೀಚರ್ ಇದ್ದಾರೆ. ಅವರಿಗೆ ನಾನು ನನ್ನ ಚಿಕ್ಕಮ್ಮನ ಸ್ಥಾನವನ್ನು ಕೊಡುತ್ತೇನೆ. ನನಗೆ ಕಲಿಸಿದ ಪ್ರತಿಯೊಬ್ಬ ಶಿಕ್ಷಕರಿಗೂ ಧನ್ಯವಾದಗಳು.
......................................... ಸಿಂಚನಾ ಶೆಟ್ಟಿ
6ನೇ ತರಗತಿ 
ಉದಯಗಿರಿ, ಕುದ್ದುಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ*
*****************************************     ನಾನು ನನ್ನ ನೆಚ್ಚಿನ ಟೀಚರ್ ಆಗಿರುವ ವಿಜಯಲಕ್ಷ್ಮಿ ಅವರ ಬಗ್ಗೆ ಹೇಳುತ್ತೇನೆ. ಇವರು ತುಂಬಾ ಒಳ್ಳೆಯವರು. ಇವರು ಮಾಡುವ ಪಾಠ ತುಂಬಾ ಚೆನ್ನಾಗಿ ಅರ್ಥವಾಗುತ್ತದೆ. ಇವರು ನಮ್ಮ ಶಾಲೆಯಲ್ಲಿ 4ವರ್ಷಗಳಿಂದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಚೆನ್ನಾಗಿ ಹಾಡು ಹಾಡುತ್ತಾರೆ. ಇವರು ಯಾವಾಗಲೂ ನಮ್ಮ ಒಳ್ಳೆಯದನ್ನು ಬಯಸುವ ಶಿಕ್ಷಕಿ. ಇವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ನಮ್ಮ ನೆಚ್ಚಿನ ಟೀಚರ್ ಇವರು. ಇವರು ನಮಗೆ ಸಮಾಜ ಮತ್ತು ಹಿಂದಿ ಪಾಠ ಮಾಡುತ್ತಾರೆ. ಸಮಾಜವನ್ನು ತುಂಬಾ ಅರ್ಥವಾಗುವಂತೆ ಪಾಠ ಮಾಡುತ್ತಾರೆ ಹಾಗೂ ನೆನಪಿನಲ್ಲಿ ಉಳಿಯುವಂತೆ ಪಾಠ ಮಾಡುತ್ತಾರೆ. ಹಿಂದಿ ಪಾಠ ತುಂಬಾ ಚೆನ್ನಾಗಿ ಮಾಡುತ್ತಾರೆ ಹಾಗೂ ಹಿಂದಿ ಚೆನ್ನಾಗಿ ಮಾತನಾಡುತ್ತಾರೆ. ಅವರು ನಮ್ಮ ಬಳಿ "ನಾನು ಕಲಿಸಿದ ಮಕ್ಕಳು ಒಳ್ಳೆಯ ಹೆಸರು ಪಡೆದರೆ ನನಗೆ ತುಂಬಾ ಸಂತೋಷವಾಗುತ್ತದೆ" ಎಂದು ಹೇಳಿದರು. ಇವರು ಉಡುಪಿಯ ಕುಂದಾಪುರದವರು. ಇವರು ಸ್ವಲ್ಪ ಶಿಸ್ತಿನ ಟೀಚರ್ ಆದರೆ ತುಂಬಾ ಒಳ್ಳೆಯವರು. ನಮ್ಮ ಒಳ್ಳೆಯದನ್ನು ಯಾವಾಗಲೂ ಬಯಸುತ್ತಾರೆ. ಇವರಿಗೆ ದೇವರು ಯಾವಾಗಲೂ ಒಳ್ಳೆಯದು ಮಾಡಲಿ ಎಂದು ಹಾರೈಸುತ್ತೇನೆ.....
.............................................. ವಿಸ್ಮಿತ ಎಂ 
7ನೇ ತರಗತಿ 
ಸ ಹಿ ಪ್ರಾ. ಶಾಲೆ ಬಡಗನ್ನೂರು
ಪಡುವನ್ನೂರು ಗ್ರಾಮ, ಮುಖಾರಿಮೂಲೆ ಮನೆ ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

Ads on article

Advertise in articles 1

advertising articles 2

Advertise under the article