ಹೃದಯದ ಮಾತು : ಸಂಚಿಕೆ - 10
Thursday, September 28, 2023
Edit
ಹೃದಯದ ಮಾತು : ಸಂಚಿಕೆ - 10
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಶಿಕ್ಷಕ ವೃತ್ತಿಯ ಸುದೀರ್ಘ ಪಯಣದಲ್ಲಿ ವೈವಿಧ್ಯಮಯ ಅನುಭವಗಳಿಗೇನೂ ಕೊರತೆಯಿರದು. ಹತ್ತು ಹಲವು ಚಿತ್ರವಿಚಿತ್ರ ಸನ್ನಿವೇಶಗಳು. ಅಯ್ಯಪ್ಪಾ ಅಂದರೂ ಜಗ್ಗದ ಬಗ್ಗದ ವಿದ್ಯಾರ್ಥಿಗಳು. ದಿನಚರಿಯಲ್ಲಿ ದಾಖಲಾಗುವ ಅಸಹಜ ವರ್ತನೆಗಳು. ನನ್ನ ಜಾಫರ್ ಯಾವುದೇ ಪ್ರಯತ್ನಕ್ಕೂ ಮಿಸುಕಾಡದ ಸ್ವಭಾವದ ಹುಡುಗ. ಅದೆಲ್ಲೋ ಶಾಲೆಗೆ ಹೋಗಿ ಅರ್ಧದಲ್ಲೇ, ಅಲ್ಲಿಂದ ಓಡಿ ಶಾಲಾ ಗೋಡೆಗಳ ಹೊರಗೆ ಸ್ವಚ್ಛಂದವಾಗಿ ಓಡಾಡುತ್ತಿದ್ದ. ಅಪ್ಪ, ಅಮ್ಮ, ಮಾವ, ಭಾವ, ಗುರು ಇವರ್ಯಾರಿಗೂ ಹಿಡಿತಕ್ಕೆ ಸಿಗದ ವಿಚಿತ್ರ ವ್ಯಕ್ತಿತ್ವ. ಕಟ್ಟ ಕಡೆಗೆ ಅಮ್ಮ ಆಯ್ಕೆ ಮಾಡಿದ್ದು ನಮ್ಮ ಶಾಲೆ. ಜಾಫರ್ ವಿಚಿತ್ರವಾಗಿದ್ದರೂ, ಆತನ ಅಮ್ಮನ ಕಣ್ಣೀರು ನೋಡಲಾಗದೆ ಹತ್ತನೇ ತರಗತಿಗೆ ಪ್ರವೇಶ ನೀಡಲಾಯಿತು. ಆದರೆ ಆತನೊಬ್ಬ ಕಲ್ಲು ಹೃದಯಿಯಾಗಿದ್ದ. ಆತನ ಹೃದಯ ಕರಗಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳು ವಿಫಲವಾದಾಗ ಆತನಿಗೊಂದು ಪತ್ರ ಬರೆದೆ. ಈ ಪತ್ರ ಜಾಫರ್ ನನ್ನು ಬದಲಾಯಿಸಿತೆ? ಎಂಬ ಪ್ರಶ್ನೆ ಅನೇಕ ಶಿಕ್ಷಕರಿಗೆ ಮೂಡುತ್ತಿದೆ... ಪತ್ರ ಓದಿ, ಪರಿಣಾಮ ಕೊನೆಗಿದೆ.
ಪ್ರೀತಿಯ ಜಾಫರ್........ ನನ್ನ ಮನದಲ್ಲಿ ಮೂಡುತ್ತಿರುವ ಭಾವನೆಗಳನ್ನು ನಿನ್ನೊಂದಿಗೆ ಹಂಚಿಕೊಳ್ಳಬೇಕೆಂದು ಬಹು ದಿನಗಳಿಂದ ಯೋಚಿಸುತ್ತಿದ್ದೇನೆ. ಆದರೆ ಅದು ಹೇಗೆ?... ಎಂದು ತಿಳಿಯದೆ ಚಡಪಡಿಸುತ್ತಿದ್ದೇನೆ. ಕಡೆಗೂ ಇದುವೇ ಸರಿಯಾದ ಮಾರ್ಗವೆಂದು ಬಗೆದು ಈ ಪತ್ರ ಬರೆಯುತ್ತಿದ್ದೇನೆ. ಇದರಿಂದ ಕಲ್ಲಿನಂತೆ ದೃಢವಾಗಿರುವ ನಿನ್ನ ಹೃದಯ ಕರಗದೇ ಹೋದರೂ, ನನ್ನ ಮನಸ್ಸಿಗಾದರೂ ಕಿಂಚಿತ್ತು ಸಮಾಧಾನವಾಗಬಹುದು.
ನೀನೆಷ್ಟೇ ದೊಡ್ಡವನಾಗಿ ಬೆಳೆದರೂ, ನಿನ್ನ ಅಪ್ಪ ಅಮ್ಮನಿಗೆ ಮಗುವಾಗಿಯೇ ಕಾಣುತ್ತಿ. ಅದೇ ರೀತಿ ನನಗೂ ನೀನೊಬ್ಬ ಅಮಾಯಕ ಮಗು ಇದ್ದ ಹಾಗೆ. ನಿನ್ನ ಪ್ರತಿಯೊಂದು ಬೆಳವಣಿಗೆಯ ಬಗ್ಗೆ ಅಪ್ಪ ಅಮ್ಮನಷ್ಟೇ ಕಾಳಜಿ ನನಗೂ ಇದೆ. ನಿನ್ನ ಓದು ಅರ್ಧದಲ್ಲೇ ನಿಂತು ಹೋಗುವ ಪರಿಸ್ಥಿತಿಗೆ ಬಂದಿತ್ತು ಎಂಬುವುದನ್ನು ನೆನಪಿಸಿಕೋ.... ಅದು ನಿನಗೆ ದೊಡ್ಡ ವಿಷಯವಾಗಿ ಕಾಣದಿರಬಹುದು. ಏಕೆಂದರೆ ನೀನಿನ್ನೂ ಹದಿಹರೆಯದ ಹುಡುಗ. ಆದರೆ ನಿನ್ನ ಅಪ್ಪ ಅಮ್ಮ ನಿನಗಾಗಿ, ನಿನ್ನ ಭವಿಷ್ಯಕ್ಕಾಗಿ ನೆನೆದು ಅದೆಷ್ಟು ಕಣ್ಣೀರಿಡುತ್ತಿದ್ದಾರೆ ಎಂಬುವುದನ್ನು ಅವರ ಮಗನಾಗಿ, ಪ್ರತಿದಿನ ಅವರ ಒಡನಾಟದಲ್ಲಿ ಇರುವ ನಿನಗೆ ಕಾಣದಿದ್ದರೂ, ಎಲ್ಲೋ ಇರುವ ನನಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಾರಣ ನಾನು ನಿನ್ನನ್ನು ಅಷ್ಟೊಂದು ಹಚ್ಚಿಕೊಂಡಿದ್ದೇನೆ ಕಣೋ..... ಎಸ್.ಎಸ್.ಎಲ್.ಸಿ. ತರಗತಿಗೆ ನಮ್ಮ ಶಾಲೆಯಲ್ಲಿ ನೇರ ಪ್ರವೇಶ ನೀಡುವ ಪದ್ಧತಿ ಇಲ್ಲದೇ ಇದ್ದರೂ, ನಿನ್ನ ಅಮ್ಮನ ನಿರಾಸೆ ಹಾಗೂ ಹಾಗೂ ಹತಾಶೆಯ ಪರಿಸ್ಥಿತಿ ನೋಡಿ ನಾವು ನಿನಗೆ ಪ್ರವೇಶ ನೀಡಿದೆವು. ನಿನ್ನ ಅಮ್ಮ, ಮಾವ ಇವರೆಲ್ಲಾ ನನ್ನಲ್ಲಿ ಅತೀವ ನಂಬಿಕೆ ಇಟ್ಟವರು. ನಿನ್ನ ಬದುಕಿಗೆ ಒಂದು ಸ್ಪಷ್ಟ ರೂಪ ನೀಡಲು ನನ್ನಿಂದ ಮಾತ್ರ ಸಾಧ್ಯ ಎಂದು ಭಾವಿಸಿದವರು. ಆದರೆ ಕಂದಾ ನಾನು ಅವರ ನಂಬಿಕೆ ಉಳಿಸಿಕೊಳ್ಳುವಲ್ಲಿ ಸೋಲುತ್ತಿದ್ದೇನೆ. ನಿನ್ನ ಕರಗದ ಕಲ್ಲು ಹೃದಯದ ಮುಂದೆ ನಾನು ಅಸಹಾಯಕನಾಗಿದ್ದೇನೆ.
ಮಗುವೇ..... ನಿನ್ನ ಅಮ್ಮ ಅದೊಂದು ದಿನ ಶಾಲೆಗೆ ಬಂದು, ನಿನ್ನ ಬಗ್ಗೆ ಮಾತನಾಡುವಾಗ ಅವರ ಕಣ್ಣಂಚಿನಿಂದ ಜಾರುತ್ತಿದ್ದ ಕಣ್ಣೀರು ನೀನು ಕಂಡವನಲ್ಲವೇ?... ಅಮ್ಮನಿಗಿಂತ ಶ್ರೇಷ್ಠ ಈ ಜಗತ್ತಿನಲ್ಲಿ ಬೇರೆ ಯಾರಿದ್ದಾರೆ ಪುಟ್ಟಾ?... ಅಮ್ಮನ ಕಣ್ಣೀರು ಒರೆಸುವ ಮಕ್ಕಳು ನಾವಾಗಬೇಕೇ ಹೊರತು ಅವರಿಗೆ ಕಣ್ಣೀರು ಬರಿಸೋ ಮಕ್ಕಳು ನಾವಾಗಬಾರದಲ್ವಾ?.... ಅಂದು ನಿನ್ನ ಬಗ್ಗೆ ಬೇಸರಗೊಂಡು ಭಾರವಾದ ಹೃದಯದೊಂದಿಗೆ ಹೋದ ಅಮ್ಮ ಅದೆಷ್ಟೇ ಹೇಳಿ ಕಳುಹಿಸಿದರೂ, ಮತ್ತೆ ಶಾಲೆಗೆ ಬಂದಿಲ್ಲ ಅಲ್ವೇ?... ಯಾಕೆ ಎಂದು ಒಮ್ಮೆಯಾದರೂ ಯೋಚಿಸಿದ್ದಿಯಾ?... ಅದಿರಲಿ ನಿನ್ನ ಮಾವ ಒಬ್ಬರು ಗುರುಗಳು. ನೂರಾರು ಮಕ್ಕಳಿಗೆ ಆಧ್ಯಾತ್ಮಿಕ ಶಿಕ್ಷಣ ಬೋಧನೆ ಮಾಡುವವರು. ಆದರೆ ಅವರಾದರೂ ನಿನ್ನ ಬಗ್ಗೆ ವಿಚಾರಿಸಲು ಶಾಲೆಗೆ ಬರಲು ನಾಚಿಕೆ ಪಡಲು ಕಾರಣವೇನೆಂದು ತಿಳಿದಿದ್ದಿಯಾ?... ಅವರೆಲ್ಲರ ನಿರೀಕ್ಷೆ ಒಂದೇ ಜಾಫರ್ ಬದಲಾಗಬೇಕು. ಅವನೊಬ್ಬ ಒಳ್ಳೆಯ ವಿದ್ಯಾವಂತ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಬೇಕು. ಆದರೆ ಅದು ನಿನ್ನ ಸಹಕಾರವಿಲ್ಲದೆ ಸಾಧ್ಯವೇ?...
ನಿನ್ನ ಅಪ್ಪ ಬಿಸಿಲಿನ ಬೇಗೆಯನ್ನೂ ಲೆಕ್ಕಿಸದೆ, ಸುಡು ಬಿಸಿಲಿನಲ್ಲಿ ಬೀದಿ ಬದಿ ವ್ಯಾಪಾರ ಮಾಡಿ ತಡರಾತ್ರಿ ತನಕ ಕಷ್ಟಪಡುತ್ತಿರುವುದು ನಿನಗಾಗಿ ಅಲ್ಲವೇ?... ನಿನ್ನ ಅಮ್ಮ ಸಮಾಜದ ನೊಂದವರ ನೋವಿಗೆ ಸ್ಪಂದಿಸಿ, ಹತ್ತಾರು ಮಂದಿಗೆ ಸಹಾಯ ಮಾಡುತ್ತಿದ್ದರೆ, ನನ್ನ ಮಗನೇ ನನ್ನ ಮಾತು ಕೇಳುತ್ತಿಲ್ಲವೆಂಬ ಕೊರಗು ಅವರಿಂದ ಸಹಿಸಲು ಸಾಧ್ಯವೇ?...
ಮಗುವೇ...ನಿನಗೆ ಅದೆಷ್ಟೋ ಅವಕಾಶ ಕೊಟ್ಟೆವು. ಸ್ವಂತ ಮಕ್ಕಳಿಗಿಂತಲೂ ಹೆಚ್ಚಾಗಿ ನಿನ್ನನ್ನು ಪ್ರೀತಿಸಿದೆ. ಬರೆದಿಟ್ಟರೆ ಗ್ರಂಥವಾಗುವಷ್ಟು ಬುದ್ಧಿವಾದ, ನೀತಿ ಪಾಠಗಳನ್ನು ಹೇಳಿದೆ. ಆದರೆ ಫಲಿತಾಂಶ ಶೂನ್ಯ.... ಅದೇಕೆ ಕಂದಾ ನಿನ್ನಲ್ಲಿ ಅಷ್ಟೊಂದು ಹಠ?... ನಾವೆಲ್ಲಾ ಪ್ರಯತ್ನಿಸುತ್ತಿರುವುದು ನಿನಗಾಗಿ ನಿನ್ನ ಭವಿಷ್ಯಕ್ಕಾಗಿ ಕಣೋ... ನಮ್ಮನ್ನು ಅರ್ಥ ಮಾಡಿಕೊಳ್ಳೋ ಪ್ಲೀಸ್..... ನೀನು ಮನೆಗೆ ಹೋದರೆ ಟಿ.ವಿ.ಮುಂದೆ ಮಲಗುತ್ತಿ ಹೊರತು ಪುಸ್ತಕ ಕಿಂಚಿತ್ತೂ ಬಿಡಿಸಲ್ಲ ಎಂಬುವುದನ್ನು ಬಲ್ಲೆ. ರಜಾದಿನಗಳು ನಿನ್ನ ಆಟದ ಸೋಪಾನವಾಗಿರುವುದು ತಿಳಿದಾಗ ತುಂಬಾನೇ ಬೇಸರವಾಗುತ್ತಿದೆ ಕಣೋ.... ಕಂದಾ ನಮ್ಮ ಮೇಲೆ ಇಲಾಖೆ ತುಂಬಾ ಭರವಸೆ ಇಟ್ಟಿದೆ. ಅದರಂತೆ ಪೋಷಕರು, ಹೆತ್ತವರು ಕೂಡಾ ತುಂಬಾ ನಂಬಿಕೆ ಇಟ್ಟಿದ್ದಾರೆ. ನನಗೂ ತುಂಬಾನೇ ಆಸೆ ಇದೆ. ಅದೆಂದರೆ ನಮ್ಮ ಶಾಲೆಗೆ ಶೇಕಡಾ ನೂರು ಫಲಿತಾಂಶ ಬರಬೇಕೆಂದು. ಆದರೆ ನನಗೆ ನಿನ್ನ ಬಗ್ಗೆ ತುಂಬಾ ಭಯವಿದೆ. ನಿನ್ನ ಹಠ ನನ್ನನ್ನು ಸೋಲುವಂತೆ ಮಾಡಿದೆ. ನೀನು ಮನಸ್ಸು ಮಾಡಿದರೆ ಖಂಡಿತಾ ಸಾಧಿಸಬಲ್ಲೆ. ನಿನ್ನಲ್ಲಿ ಸಾಧಿಸಬಲ್ಲ ಶಕ್ತಿ ಸಾಮರ್ಥ್ಯ ಎಲ್ಲಾ ಇದೆ. ಅದಕ್ಕಾಗಿ ನಿನ್ನ ಭಾವನೆಗಳನ್ನು ಸ್ವಲ್ಪ ಬದಲಾಯಿಸಿದರೆ ಸಾಕು. ನಿನ್ನ ಯೋಚನೆಗೆ ಒಂದು ಹೊಸ ದಿಕ್ಕು ಕೊಟ್ಟರಷ್ಟೇ ಸಾಕು. ಎರಡು ಕಾಲು ಇಲ್ಲದ ಹೆಣ್ಣು ಮಗಳು ಇಂಗ್ಲೀಷ್ ಕಾಲುವೆ ಈಜಿ ಇತಿಹಾಸ ಬರೆಯುತ್ತಾಳೆ. ಅವಳ ಬದುಕಿಗೊಂದು ಸಾರ್ಥಕ ರೂಪ ಕೊಡುತ್ತಾಳೆ. ಒಂದು ಕಾಲು ಕಳೆದುಕೊಂಡ ಹೆಣ್ಣು ಮಗಳೊಬ್ಬಳು ಒಂದೇ ಕಾಲಲ್ಲಿ ಮೌಂಟ್ ಎವರೆಷ್ಟ್ ತುದಿಯಲ್ಲಿ ಭಾರತದ ಧ್ವಜ ಹಾರಿಸುತ್ತಾಳೆ. ಕಣ್ಣಿಲ್ಲದ ವ್ಯಕ್ತಿಯೊಬ್ಬ ಸಂಗೀತ ನಿರ್ದೇಶಕನಾಗುತ್ತಾನೆ. ಎರಡೂ ಕೈಗಳಿಲ್ಲದ ಹೆಣ್ಣೊಬ್ಬಳು ಸುಂದರವಾದ ಚಿತ್ರಕಲೆ ರೂಪಿಸುತ್ತಾಳೆ. ಮಗುವೇ ಇವೆಲ್ಲಾ ಸಾಧ್ಯವಾಗುವುದಾದರೆ, ದೇವರು ನಿನಗೆ ಎಲ್ಲವನ್ನೂ ಕೊಟ್ಟಿದ್ದಾನಲ್ಲಾ?... ಇಷ್ಟೊಂದು ಕಾರುಣ್ಯವನ್ನು ದೇವರು ನಿನಗೆ ಕರುಣಿಸಿರುವಾಗ ನಿನ್ನ ಜೀವನದ ಯಶಸ್ವಿಗಾಗಿ ಒಂದೆರಡು ಗಂಟೆ ಶ್ರಮಪಡಲಾರದಷ್ಟು ನಿನ್ನ ಹೃದಯ ಕಲ್ಲಾಯಿತೇ?... ಕಂದಾ ಮತ್ತೊಮ್ಮೆ ಮಗದೊಮ್ಮೆ ಯೋಚಿಸು. ಇನ್ನೊಮ್ಮೆ ಚಿಂತಿಸು. ನಿನ್ನ ತಾಯಿಯ ಕಣ್ಣಂಚಿನಲ್ಲಿ ನಿನಗರಿವಿಲ್ಲದಂತೆ ಜಾರುತ್ತಿರುವ ಕಣ್ಣೀರನ್ನು ಕಂಡುಹಿಡಿದು ಒರೆಸುವ ಮಗನಾಗು. ಯೋಚಿಸು ಪುಟ್ಟಾ... ನಿನ್ನನ್ನು ಒಂಭತ್ತು ತಿಂಗಳು ಗರ್ಭದಲ್ಲಿ ಹೊತ್ತು ನಡೆಯುವಾಗ ಅದೆಷ್ಟೋ ಕನಸು ಹೊತ್ತ ನಿನ್ನ ಅಮ್ಮ ಹೊಸ ಜಗತ್ತನ್ನೇ ಕಂಡಿದ್ದಳು. ನೀನು ಬೆಳೆದಂತೆ ನಿನ್ನ ಒಂದೊಂದು ಹೆಜ್ಜೆಯಲ್ಲೂ ಸಂತೋಷಪಟ್ಟಿದ್ದಳು. ಇದನ್ನು ಅರೆ ಕ್ಷಣ ಮೌನವಾಗಿ ಯೋಚಿಸಿ ನೋಡು. ನಿನ್ನ ಶಿಕ್ಷಕನಾಗಿ ನಿನ್ನನ್ನು ಬದಲಾಯಿಸಲು ಸಾಧ್ಯವಾಗಿಲ್ಲ ಎಂಬ ಕೊರಗು ನನ್ನನ್ನು ಕಾಡುತ್ತಿದೆ. ನಿನ್ನ ಅಪ್ಪ ಅಮ್ಮನ ನಿರೀಕ್ಷೆ ನನ್ನಿಂದ ಹುಸಿಯಾಗಿರುವಾಗ, ನನ್ನ ಸೋಲನ್ನು ಅವರಲ್ಲಿ ಹೇಗೆ ಹೇಳಲಿ. ರಾಜ್ಯಕ್ಕೇ ಮಾದರಿ ಅನ್ನಿಸಿಕೊಂಡ ಒಬ್ಬ ಶಿಕ್ಷಕನಿಗೆ ಒಬ್ಬ ವಿದ್ಯಾರ್ಥಿಯನ್ನು ಬದಲಾಯಿಸಲು ಸಾಧ್ಯವಾಗಿಲ್ಲವೆಂಬ ಶಾಶ್ವತ ಅಪಕೀರ್ತಿ ನನ್ನದಾಗಿದೆ. ಅದು ನನ್ನ ಮನಸ್ಸನ್ನು ತೀವ್ರವಾಗಿ ಕಾಡುತ್ತಿದೆ. ಮಗುವೇ.. ನನಗೆ ನಿನ್ನ ಮೇಲೆ ಕೊನೆಯ ನಂಬಿಕೆ ಇನ್ನೂ ಉಳಿದಿದೆ. ಉಳಿದ ಸಮಯ ನಿನ್ನ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸಲಿ. ನಾಳೆಯಿಂದ ಕೇವಲ ಬದಲಾದ ನನ್ನ ಜಾಫರ್ ನನ್ನು ನೋಡಲು ಕಾಯುತ್ತಿದ್ದೇನೆ. ಆತ್ಮ ವಿಶ್ವಾಸ ತುಂಬಿದ, ಜೀವನದಲ್ಲಿ ಏನನ್ನಾದರೂ ಸಾಧಿಸಿಯೇ ತೀರುತ್ತೇನೆ ಎಂದು ಹಠ ತೊಟ್ಟ ಒಬ್ಬ ವೀರನನ್ನು ನಿನ್ನಲ್ಲಿ ನೋಡಬಯಸುತ್ತೇನೆ. ನೀನು ಬದಲಾದರೆ ಮಾತ್ರ ಅದು ಸಾಧ್ಯ. ಬದಲಾಗುವ ನಂಬಿಕೆ ನನಗಿದೆ.
ಪತ್ರ ಬರೆದು ಜಾಫರ್ ನ ಮನೆಗೆ ತೆರಳಿದೆ. ಜೊತೆಗೆ ಹಿಂದಿ ಶಿಕ್ಷಕರು. ಮನೆಯಲ್ಲಿ ಅಮ್ಮ ಇದ್ದರು. ಅದೆಲ್ಲೋ ಇದ್ದ ಅಪ್ಪನನ್ನು ಕರೆಸಿದರು. ಜೊತೆಗೆ ಮಾವನೂ ಬಂದರು. ಇವರೆಲ್ಲರ ಮುಂದೆ ಜಾಫರ್ ಪತ್ರ ಓದ ತೊಡಗಿದ. ಆಶ್ಚರ್ಯ ಮೊದಲ ಬಾರಿ ಜಾಫರ್ ನ ಕಣ್ಣಾಲಿಗಳು ತುಂಬಿ ಬಂದವು. ಓದಿ ಮುಗಿಸಿದವನೇ ಅಮ್ಮನನ್ನು ಅಪ್ಪಿಕೊಂಡ. ಅದೆಷ್ಟೋ ವರ್ಷಗಳ ನಂತರದ ಸುದೀರ್ಘ ಅಪ್ಪುಗೆ. ಹೌದು ಈ ಪತ್ರವೇ ಜಾಫರ್ ನನ್ನು ಬದಲಾಯಿಸಿತು. ಎಸ್.ಎಸ್.ಎಲ್. ಸಿ. ಪಾಸಾದ ಜಾಫರ್ ನ ಬಗ್ಗೆ ನನಗೆ ಹೆಮ್ಮೆಯಿದೆ. ವೃತ್ತಿಯಲ್ಲಿ ಸಾರ್ಥಕತೆ ಇದೆ. ಈ ಪತ್ರ ನಿಮಗೂ ಪ್ರೇರಣೆ ನೀಡಿದರೆ ನಾನೊಬ್ಬ ಪುಣ್ಯವಂತ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************