-->
ಮಕ್ಕಳ ಕಥೆಗಳು

ಮಕ್ಕಳ ಕಥೆಗಳು

ಮಕ್ಕಳ ಕಥೆಗಳು
ರಚನೆ ಮಾಡಿರುವ ವಿದ್ಯಾರ್ಥಿಗಳು :
◾ಗಣ್ಯ , 8ನೇ ತರಗತಿ
◾ಹೃಷಿಕೇಶ್, 4ನೇ ತರಗತಿ
◾ಆರ್ಯ ಸಮರ್ಥ್, 7ನೇ ತರಗತಿ
◾ಆತ್ಮಿಕಾ ಪದ್ಯಾಣ 3ನೇ ತರಗತಿ
◾ಅನ್ವಿತ ಕೆ, 9ನೇ ತರಗತಿ
◾ಸ್ಮಿತಾ , 9ನೇ ತರಗತಿ
◾ಪ್ರಿನ್ಸನ್ ಲೋಯ್ ಡಿ' ಸೋಜಾ, 7ನೇ ತರಗತಿ 

                                                          

     ಒಂದು ಊರಿನಲ್ಲಿ ಒಬ್ಬ ಜಮೀನ್ದಾರನಿದ್ದ. ಅವನ ಹೆಸರು ಶ್ರೀನಿವಾಸ. ಅವನಿಗೆ ಹಲವಾರು ಜಮೀನಿದ್ದವು. ಒಂದು ಅವನ ಮನೆಯ ಪಕ್ಕದಲ್ಲಿತ್ತು. ಅದರಲ್ಲಿ ಬಾಳೆ ಗಿಡಗಳಿದ್ದವು. ಅದೇ ಊರಲ್ಲಿ ಇಬ್ಬರು ಕಳ್ಳರಿದ್ದರು. ಒಬ್ಬ ಗಿರಿ ಇನ್ನೊಬ್ಬ ಸೋಮು. ಅವರಿಬ್ಬರು ಅವರ ಪಕ್ಕದ ಊರಾದ ರಾಂಪುರಗೆ ಹೋಗಿ, ಅಲ್ಲಿಯ ಜಮೀನ್ದಾರರ ಮನೆಯಲ್ಲಿ ಕಳ್ಳತನ ಮಾಡಿ ಅವರ ಊರಿಗೆ ವಾಪಾಸು ಬರುತ್ತಿದ್ದರು. ಆಗ ಅವರನ್ನು ಪೊಲೀಸರು ಹಿಡಿಯಲು ಬಂದರು. ಹೇಗೋ ಮಾಡಿ ಅವರಿಂದ ತಪ್ಪಿಸಿಕೊಂಡು ಗಿರಿ ಮತ್ತು ಸೋಮು ಅವರ ಊರಿಗೆ ವಾಪಸ್ಸು ಬಂದರು. ಆಗ ತಡರಾತ್ರಿ ಸುಮಾರು ಒಂಭತ್ತು ಗಂಟೆ. ಆಗ ಗಿರಿ ಮತ್ತು ಸೋಮು ಅವರ ಊರಿನ ಜಮೀನ್ದಾರನಾದ ಶ್ರೀನಿವಾಸ ಅವರ ಮನೆಯ ಪಕ್ಕದಲ್ಲಿ ಇರುವ ಬಾಳೆ ತೋಟದಲ್ಲಿದ್ದರು. ಗಿರಿ ಹೇಳುತ್ತಾನೆ, "ಈ ಬಂಗಾರ ತುಂಬಾ ಭಾರವಿದೆ ಇದನ್ನು ಇಲ್ಲಿ ಹೂತಿಟ್ಟು ನಾಳೆ ಬೆಳಗ್ಗೆ ಬೇಗ ಬಂದು ತೆಗೆದುಕೊಳ್ಳುವ." ಎಂದು. ಅದಕ್ಕೆ ಸೋಮು "ಸರಿ." ಎಂದನು. ಹಾಗೆಯೇ ಮಾಡಿ ಮನೆಗೆ ಹೋದರು. ಸ್ವಲ್ಪ ಸಮಯದ ನಂತರ ಜೋರು ಮಳೆ ಮತ್ತು ಸಿಡಿಲು, ಮಿಂಚುಗಳಿದ್ದವು. ಒಂದು ಮಿಂಚು ಬಂದು ಅವರು ಹೂತಿಟ್ಟ ಬಂಗಾರದ ಪಕ್ಕದಲ್ಲಿದ್ದ ಬಾಳೆ ಗಿಡಕ್ಕೆ ತಗುಲಿತು. ಇದನ್ನು ಹೊರಗೆ ಕೂತು ಗಮನಿಸಿದ ಜಮೀನ್ದಾರ ಬೆಳಗ್ಗೆ ಬೇಗನೆ ಎದ್ದು ಬಾಳೆ ಗಿಡವನ್ನು ನೋಡಲು ಹೋದ. ಅದರ ಪಕ್ಕದಲ್ಲಿ ಚಿನ್ನವನ್ನು ಕಂಡು ಅವನಿಗೆ ಆಶ್ಚರ್ಯವಾಯಿತು...! ತನ್ನ ಹೆಂಡತಿಯನ್ನು ಕರೆದ. ಅವಳು ಕೂಡ ನೋಡಿ ತುಂಬಾ ಆಶ್ಚರ್ಯಪಟ್ಟಳು. ಸ್ವಲ್ಪ ಸಮಯವಾದ ನಂತರ ಕಳ್ಳರು ಬಂದರು. ಅವರು ಚಿನ್ನವನ್ನು ಹೂತಿಟ್ಟ ಸ್ಥಳವನ್ನು ನೋಡಿದರು. ಆದರೆ ಅಲ್ಲಿ ಚಿನ್ನವಿರಲಿಲ್ಲ. ಅದನ್ನು ನೋಡಿ ನಿರಾಶರಾಗಿ ಮನೆಗೆ ಹೋದರು. ರಾಂಪುರದ ಜಮೀನ್ದಾರರ ಮನೆಯಲ್ಲಿ ಬಂಗಾರವು ಕಳುವಾಗಿದೆ, ಎಂದು ಶ್ರೀನಿವಾಸನಿಗೆ ತಿಳಿಯಿತು. ಅವನಿಗೆ ಒಮ್ಮೆ ಯೋಚನೆಯಾಯಿತು. ಬೆಳಗ್ಗೆ ಇಲ್ಲದ ಚಿನ್ನ ರಾತ್ರೋರಾತ್ರಿ ಎಲ್ಲಿಂದ ಬಂತು. ಎಂದು ಪಕ್ಕದ ಊರಿನ ಜಮೀನ್ದಾರರ ಬಳಿ ಕೇಳಿದನು. "ಇದು ನಿಮ್ಮ ಮನೆಯ ಚಿನ್ನವೆ...?" ಎಂದು. ಅದಕ್ಕೆ ರಾಂಪುರದ ಜಮೀನ್ದಾರರು "ಹೌದು!" ಎಂದರು. ಹಾಗಾಗಿ ಶ್ರೀನಿವಾಸ ಆ ಚಿನ್ನವನ್ನು ಪಕ್ಕದ ಊರಿನ ಜಮೀನ್ದಾರರಿಗೆ ಹಿಂತಿರುಗಿಸಿದರು. ಇದು ನಮ್ಮ ಊರಿನಲ್ಲಿರುವ ಆ ಎರಡು ಕಳ್ಳರು ಸೋಮು ಮತ್ತು ಗಿರಿ ಮಾಡಿರುವ ಕೆಲಸವೆಂದು ಶ್ರೀನಿವಾಸ ನಿಗೆ ತಿಳಿಯಿತು. ಆದ್ದರಿಂದ ಅವರನ್ನಿಬ್ಬರನ್ನು ಬಂಧಿಸಲಾಯಿತು. ಆಮೇಲೆ ಆ ಎರಡು ಊರಿನ ಮಧ್ಯೆ ಒಳ್ಳೆಯ ಗೆಳೆತನವಿತ್ತು.
...................................................... ಗಣ್ಯ 
8ನೇ ತರಗತಿ
ಸರಕಾರಿ ಪ್ರೌಢಶಾಲೆ ನಯನಾಡು, ಪಿಲಾತಬೆಟ್ಟು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************

                     
      

       ಒಂದು ಊರಿನಲ್ಲಿ ಸುರೇಶ ತನ್ನ ಅಪ್ಪ-ಅಮ್ಮನೊಂದಿಗೆ ವಾಸವಾಗಿದ್ದ. ಅವನು ದಿನವೂ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ. ಒಂದು ದಿನ ನಡೆದುಕೊಂಡು ಶಾಲೆಗೆ ಹೋಗುತ್ತಿರಬೇಕಾದರೆ ಅವನ ಕಾಲಿಗೆ ಇರುವೆಗಳು ಕಚ್ಚಿದವು. ಅವನಿಗೆ ಬಹಳ ನೋವಾಯಿತು. ಆತನಿಗೆ ಅಳು ಬಂದು ಬಿಟ್ಟಿತು. ಕೈಯಿಂದ ಇರುವೆಗಳನ್ನು ದೂರ ಸರಿಸುತ್ತಾ ಸುರೇಶ ಮುಂದಕ್ಕೆ ಸಾಗಿದ. ಸುರೇಶ ಅಳುತ್ತಾ ಹೋಗುತ್ತಿರುವುದನ್ನು ಆತನ ಗೆಳೆಯ ಗಿರೀಶ ಮನೆಯಿಂದ ನೋಡಿದವನೇ, "ಲೋ ಸುರೇಶ ಏನಾಯಿತು? ಯಾಕೆ ಅಳುತ್ತಿರುವೆ!" ಎಂದು ಕೇಳಿದ. ಸುರೇಶನಿಗೆ ಗಿರೀಶನ ಮಾತು ಕೇಳಲೇ ಇಲ್ಲ. ಆತ ಅಳುತ್ತಲೇ ಮು಼ಂದೆ ನಡೆದ. ಸುರೇಶ ನಡೆದುಕೊ಼ಂಡು ಹೋಗುವ ದಾರಿಯಲ್ಲಿ ಮಕ್ಕಳ ಕಳ್ಳನೊಬ್ಬ ಮರದಡಿಯಲ್ಲಿ ಕುಳಿತುಕೊಂಡಿದ್ದ. ಸುರೇಶ ಕುಂಟುತ್ತಾ ಸಾಗುತ್ತಿರುವುದನ್ನು ಆತ ನೋಡಿದ. ಸುರೇಶನ ಬಳಿ ಯಾರೂ ಇಲ್ಲದಿರುವುದನ್ನು ಗಮನಿಸಿದ ತಕ್ಷಣವೇ ಸುರೇಶನ ಕೈಹಿಡಿದು ಕಳ್ಳ ದರದರನೇ ಎಳೆದುಕೊಂಡು ಹೋದ. ಸುರೇಶ ಜೋರಾಗಿ ಅಳಲು ಪ್ರಾರಂಭಿಸಿದ. ಆದರೆ ಅವನ ಧ್ವನಿ ಯಾರಿಗೂ ಕೇಳಿಸಲಿಲ್ಲ. ಸುರೇಶನನ್ನು ಎಳೆದುಕೊಂಡು ಹೋದ ಕಳ್ಳ ಆತನನ್ನು ಒಂದು ಕೋಣೆಯೊಳಗೆ ಕೂಡಿ ಹಾಕಿದ. ಸುರೇಶ ಅತ್ತೂ ಅತ್ತೂ ಸುಸ್ತಾಗಿ ಅಪ್ಪ ಬೇಕೆಂದು ಹಠ ಹಿಡಿದ. ಸುರೇಶನ ಅಪ್ಪನಿಂದ ತುಂಬಾ ದುಡ್ಡನ್ನು ವಸೂಲಿ ಮಾಡಬಹುದೆಂದು ಕಳ್ಳ ಯೋಚಿಸಿದ. ಅಪ್ಪನಿಗೆ ಫೋನ್ ಮಾಡಲೆಂದು ಸುರೇಶನಿಗೆ ಮೊಬೈಲ್ ನೀಡಿದ ಕಳ್ಳ. ಸುರೇಶ ಅಪ್ಪನೊಂದಿಗೆ ಫೋನಿನಲ್ಲಿ ಮಾತನಾಡುತ್ತಾ, ಆದಷ್ಟು ಬೇಗ ನನ್ನನ್ನು ಬಿಡಿಸಿಕೊಂಡು ಹೋಗಿ ಎಂದು ಬೇಡಿಕೊಂಡ. ಮೊಬೈಲ್ ನಲ್ಲಿ ಮಾತನಾಡಿದ ಅಪ್ಪ ಒಂದು ಗಂಟೆಯ ಬಳಿಕ ಸುರೇಶ ಇದ್ದಲ್ಲಿಗೆ ಬಂದರು. ಆತನ ಅಪ್ಪ ಪೊಲೀಸ್ ಅಧಿಕಾರಿಯಾಗಿದ್ದರು. ಅವರು ಕೂಡಲೇ ಕಳ್ಳನನ್ನು ಬಂಧಿಸಿ ಸುರೇಶನನ್ನು ಬಿಡಿಸಿದರು. ಸುರೇಶ ಸಂತೋಷದಿಂದ ಅಪ್ಪನೊಂದಿಗೆ ಮನೆಯ ಕಡೆಗೆ ನಡೆದನು.
................................................ ಹೃಷಿಕೇಶ್
4ನೇ ತರಗತಿ
ಸ.ಹಿ.ಪ್ರಾ.ಶಾಲೆ, ನಡುಮೊಗರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************
 

                  

     ಹಲವು ತಿಂಗಳ ಹಿಂದೆ ನಾನು ಬೇರೆ ಶಾಲೆಗೆ ಅಡ್ಮಿಷನ್‌ ಆಗಿದ್ದೆ. ಅಲ್ಲಿ ನನಗೆ ಒಬ್ಬ ಹುಡುಗ ಸಿಕ್ಕಿದ್ದ. ಅವನೇ ಪ್ರಾಣದ ಗೆಳೆಯ ಸಾನ್ವಿತ್.‌ ಮೊದಮೊದಲು ಅವನಿಗೆ ಮತ್ತು ನನಗೆ ಇಬ್ಬರಿಗೂ ಸಂಕೋಚ. ಇಬ್ಬರೂ ಮಾತನಾಡುತ್ತಿರಲಿಲ್ಲ. ಕೆಲವು ದಿನಗಳ ನಂತರ ನಮ್ಮ ತರಗತಿ ಶಿಕ್ಷಕಿ ನಮ್ಮ ಜಾಗ ಬದಲಿಸಿದಾಗ ಅವನು ನಾನು ಒಟ್ಟಿಗೆ ಕುಳಿತುಕೊಂಡೆವು. ನಂತರ ನಾವು ಮಾತನಾಡಲಾರಂಭಿಸಿದೆವು. ಆಗ ನಮ್ಮ ಗೆಳೆತನ ಪ್ರಾರಂಭವಾಯಿತು. ಅವನು ಓದುವುದರಲ್ಲಿ ಕಡಿಮೆ ಅಂಕ ತರುತ್ತಿದ್ದ. ನಾನು ಅವನಿಗೆ ಓದುವುದರಲ್ಲಿ ಸಹಾಯ ಮಾಡತೊಡಗಿದೆ. ನಂತರ ಅವನು ಒಳ್ಳೆಯ ಅಂಕ ತರಲು ಪ್ರಾರಂಭಿಸಿದ್ದು ನನಗೆ ತುಂಬಾ ಸಂತಸ ತಂದಿತು. ಈ ತರ ನನಗೆ ಬರದೇ ಇರುವುದನ್ನು ಅವನು, ಅವನಿಗೆ ಬರದೇ ಇರುವುದನ್ನು ನಾನು ಹೇಳಿಕೊಡಲು ಪ್ರಾರಂಭಿಸಿದೆವು. ನಂತರ ಅವನ ಮನೆ ಎಲ್ಲಿ ಎಂದು ಕೇಳಿದಾಗ ಅವನ ಮನೆ ನನ್ನ ಮನೆಯಿಂದ ಬರೀ ಒಂದು ಕಿಲೋಮೀಟರ್.‌ ನಾನು ಅವನ ಮನೆಗೆ ಹೋಗಿ ಬರುತ್ತಿದ್ದೆ. ಹಾಗೆಯೇ ಅವನೂ ನನ್ನ ಮನೆಗೆ ಬಂದು ಹೋಗುತ್ತಿದ್ದ. ಬೇಸಿಗೆ ಕಾಲದ ರಜೆಯಲ್ಲಂತೂ ನಾನು ಅವನು ತುಂಬಾ ಆಟ ಆಡುತ್ತಿದ್ದೆವು. ಒಂದು ದಿನ ಆಟ ಆಡುತ್ತಾ ಆಡುತ್ತಾ ಇರುವಾಗ ಅವನ ಅಮ್ಮ ಅವರ ಮನೆಯಿಂದ ಹೊರಗಡೆ ಬಂದು ʼಮಗಾ, ಬಾ ಇಲ್ಲಿʼ ಎಂದು ಅಳುತ್ತಾ ಕೂಗಿದರು. ಆಗ ನಮ್ಮಿಬ್ಬರಿಗೂ ಒಂದೇ ಪ್ರಶ್ನೆ. ಅವರು ಏಕೆ ಅಳುತ್ತಿದ್ದಾರೆಂದು. ನಾನು ಅವನೊಂದಿಗೆ ಅವನಮ್ಮನ ಹತ್ತಿರ ಹೋದೆ. ಆಗ ಅವನಮ್ಮ, ʼನಿಮ್ಮಜ್ಜ ತೀರಿಕೊಂಡರು ಕಣೋ..ʼ ಎಂದು ಅತ್ತರು. ಈ ಮಾತನ್ನು ಕೇಳಿ ಅವನು ಗೊಳೋ ಎಂದು ಅಳಲು ಪ್ರಾರಂಭಿಸಿದನು. ನಂತರ ನಾನು ಅವನನ್ನು ಸಮಾಧಾನ ಮಾಡಿದೆ. ಅವರು ಅವರ ಊರಿಗೆ ಹೋಗಲು ರೈಲ್ವೇ ಠಾಣೆಗೆ ಹೋದರು. ನಾನು ಜೊತೆಯೇ ಹೋದೆ. ಹೋಗಿ ʼಹುಷಾರಾಗಿ ಹೋಗಿ ಬನ್ನಿʼ ಎಂದು ಹೇಳಿ ಅಲ್ಲಿಂದ ಹೊರಟೆ. 
      ಅಷ್ಟೇ! ಅವನನ್ನು ಕೊನೆಯ ಬಾರಿ ನೋಡಿದ್ದು. ಪ್ರತಿದಿವಸ ಅವನ ಮನೆಯ ಬಳಿ ಹೋಗಿ ಅವನು ಊರಿನಿಂದ ಬಂದನೋ ಎಂದು ನೋಡುತ್ತಿದ್ದೆ. ಒಂದು ದಿವಸ ಅವನ ಮನೆಯ ಬಳಿ ಹೋದಾಗ ಒಬ್ಬರು ಮಹಿಳೆ ಸಾನ್ವಿತ್‌ ಅವರ ಅಜ್ಜ ಇಲ್ಲದಿರುವ ಕಾರಣ ಅವನ ಅಪ್ಪ ಊರಿನಲ್ಲಿರುವ ತೋಟವನ್ನು ನೋಡಿಕೊಳ್ಳಬೇಕಾಗಿದೆ ಮತ್ತು ಅವನ ಅಜ್ಜಿಯನ್ನು ಕೂಡ ನೋಡಿಕೊಳ್ಳಬೇಕಾಗಿದೆ ಎಂದರು. ಆಗ ನನಗೆ ಏನು ಮಾಡುವುದೆಂದು ತಿಳಿಯಲಿಲ್ಲ. ಬೇಗನೇ ಓಡೋಡಿಕೊಂಡು ಮನೆಗೆ ಹೋಗಿ ಅವನ ದೂರವಾಣಿ ಸಂಖ್ಯೆಗೆ ಕರೆ ಮಾಡಿದೆ. ಅದು ಸ್ವಿಚ್‌ ಆಫ್‌ ಆಗಿತ್ತು. ನಂತರ ಪತ್ರ ಬರೆಯೋಣವೆಂದರೆ ಅವನ ಮನೆಯ ವಿಳಾಸ ಗೊತ್ತಿರಲಿಲ್ಲ. ಎಲ್ಲಿಯಾದರೂ ಆಡಲು ಹೋದರೆ ಅವನು ಕರೆದಂತೆ ಭಾಸವಾಗುತ್ತಿತ್ತು. ಆಗ ನಾನು ತುಂಬಾ ದುಃಖ ಪಡುತ್ತಿದ್ದೆ. ನನಗೆ ನನ್ನ ಜೀವನದಲ್ಲಿ ಒಂದು ಅತ್ಯಮೂಲ್ಯ ವಸ್ತುವನ್ನು ಕಳೆದುಕೊಂಡಂತೆ ಭಾಸವಾಯಿತು ಮತ್ತು ಈಗಲೂ ಭಾಸವಾಗುತ್ತಿದೆ. ನನ್ನ ಜೀವನದಲ್ಲಿ ಅವನ ತರಹ ಇರುವ ಇನ್ನೊಬ್ಬ ಗೆಳೆಯ ಸಿಗುವುದಕ್ಕೆ ಸಾದ್ಯವೇ ಇಲ್ಲ. ಹಾಗೆಯೇ ಅವನನ್ನು ಮರೆಯಲೂ ಸಾದ್ಯವಿಲ್ಲ. ಅಂತಹ ಗೆಳೆಯನಾದ ಸಾನ್ವಿತ್‌ ಗೆ ನನ್ನ ಪ್ರಣಾಮಗಳು.
........................................ ಆರ್ಯ ಸಮರ್ಥ್
7ನೇ ತರಗತಿ
ಶ್ರೀ ಸಿದ್ದಿವಿನಾಯಕ ರೆಸಿಡೆನ್ಷಿಯಲ್ ಸ್ಕೂಲ್,
ಹಟ್ಟಿಯಂಗಡಿ, ಉಡುಪಿ ಜಿಲ್ಲೆ
*******************************************




            

     ಒಂದು ದಟ್ಟವಾದ ಕಾಡು ಇತ್ತು. ಆ ಕಾಡಿನಲ್ಲಿ ತುಂಬಾ ಪ್ರಾಣಿ ಪಕ್ಷಿಗಳು ವಾಸಿಸುತ್ತಿದ್ದವು. ಒಂದು ದಿನ ಗಿಳಿ, ಕೋಗಿಲೆ , ನವಿಲುಗಳು ಗರಿ ಬಿಚ್ಚಿ ಆಟವಾಡುತ್ತಿದ್ದವು. ಆಗ ಆ ಜಾಗದ ಮಾಲಿಕ ಕೋತಿ ಬಂದನು. "ನೀವು ಯಾಕೆ ಇಲ್ಲಿ ಆಟವಾಡುತ್ತಿದ್ದೀರಿ?" ಎಂದು ಕೋತಿ ಕೇಳಿತು. "ನಮಗೆ ಬೇರೆ ಚಂದದ ಜಾಗ ಸಿಗಲಿಲ್ಲ. ಅದಕ್ಕೆ ಇಲ್ಲಿ ಆಟವಾಡುತ್ತಿದ್ದೇವೆ" ಎಂದು ನವಿಲು ಹೇಳಿತು. "ಆದರೆ ಇದು ನನ್ನ‌ ಜಾಗವಲ್ಲವೇ..?" ಎಂದು ಕೋತಿ ಹೇಳಿತು. "ನಮ್ಮನ್ನು ಕ್ಷಮಿಸಿ‌‌ ಮಾಲಿಕ. ನಮಗೆ ಗೊತ್ತಿಲ್ಲದೆ‌‌‌ ನಾವು ಇಲ್ಲಿ‌ ಆಟವಾಡಲು ಬಂದೆವು" ಎಂದು ನವಿಲು ಹೇಳಿತು. ಸರಿ ನೀವು ಸ್ವಲ್ಪ ಹೊತ್ತು ಇಲ್ಲಿ ಎಂದನು ಮಾಲಿಕ. ನವಿಲು, ಗಿಳಿ,‌‌ ಕೋಗಿಲೆಗಳು ಖುಷಿಯಿಂದ ಆಟವಾಡಿದವು.
ನೀತಿ : ನಾವು ಒಳ್ಳೆಯ ಕೆಲಸಗಳನ್ನು ಮಾಡಿದರೆ ನಮಗೆ ಒಳ್ಳೆಯದೇ ಆಗುತ್ತದೆ.
........................................ ಆತ್ಮಿಕಾ ಪದ್ಯಾಣ
ಮೂರನೇ ತರಗತಿ
ದ‌.ಕ.ಜಿ.ಪ. ಉ. ಹಿ.ಪ್ರಾ. 
ಶಾಲೆ, ಚೆನ್ನೈತೋಡಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


      

    ಒಂದು ಊರಿನಲ್ಲಿ ಒಬ್ಬ ಶ್ರೀಮಂತ ಮನುಷ್ಯ ಇರುತ್ತಾನೆ. ಅವನು ಕಷ್ಟದಲ್ಲಿರುವ ಮನುಷ್ಯ ಅಥವಾ ಪ್ರಾಣಿಗಳಿಗೆ ಸಹಾಯ ಮಾಡುವ ದೊಡ್ಡ ಮನಸ್ಸಿರಲ್ಲಿಲ್ಲ. ಆದರೆ ಅವನ ಮನೆಗೆ ಒಂದು ಕಾಗೆಯೋ ಪ್ರತಿದಿನ ಬರುತ್ತಿತ್ತು. ಆದರೆ ಅವನು ಮಾತ್ರ ಆ ಕಾಗೆಗೆ ಆಹಾರವನ್ನು ಹಾಕುತ್ತಿರಲ್ಲಿಲ್ಲ. ಆ ಕಾಗೆಯೊ ಇನ್ನೂ ನನಗೆ ಆಹಾರ ಸಿಗುವ ಲಕ್ಷಣವಿಲ್ಲವೆಂದು ಅಲ್ಲಿದ ಹಾರಿ ಹೋಗುತ್ತದೆ.
       ಮಾರನೇ ದಿನ ಆ ಮನುಷ್ಯ ನೋಡುವಾಗ, ಪಕ್ಕದ ಮನೆಯಲ್ಲಿ ಆ ಕಾಗೆಗೆ ಊಟವನ್ನು ಹಾಕುವುದನ್ನು ನೋಡುತ್ತಾನೆ. ಹಾಗೇ ಸುಮ್ಮನೆ ಮನೆಯೊಳಗೆ ಹೋಗುತ್ತಾನೆ. ಆಚೆ ಮನೆಯವ ಆ ಕಾಗೆಯನ್ನು ತನ್ನ ಮನೆಯಲ್ಲೆ ಇಟ್ಟುಕೊಳ್ಳುತ್ತಾನೆ. ಆ ಕಾಗೆಯೋ ಅವನ ಜೊತೆಗೆ ಇರುತ್ತದೆ. ಹಾಗೇ ಸ್ವಲ್ಪ ದಿನಗಳು ಕಳೆಯಿತು. ಟಿ.ವಿ ಪೋನ್ ಗಳಲ್ಲಿ ಕೊರೊನ ದ ಬಗ್ಗೆ ಭಾರಿ ಸುದ್ದಿಗಳು ಬರುತ್ತದೆ. ಇಬ್ಬರಿಗೂ ಬಹಳ ಭಯವಾಗುತ್ತದೆ. 
      ಒಂದು ದಿನ ಶ್ರೀಮಂತ ಮನುಷ್ಯನ ಗೆಳೆಯ ಬೆಂಗಳೂರಿನಿಂದ ಶ್ರೀಮಂತನ ಮನೆಗೆ ಬರುತ್ತಾನೆ. ಈ ಖುಷಿ ಖುಷಿ ಯಿಂದ ಪಾರ್ಟಿ ಮಾಡುತ್ತಾನೆ. ಮಾರನೇ ದಿನ ಅವನಿಗೆ ಜ್ವರ, ತಲೆ ನೋವು, ಕೆಮ್ಮು ಶುರುವಾಗುತ್ತದೆ. ಇವನು ಭಯದಿಂದ ಡಾಕ್ಟರ್ ನ ಬಳಿ ಹೋಗುತ್ತಾನೆ. ಡಾಕ್ಟರ್ ಪರೀಕ್ಷಿಸಿ, ನಿಮಗೆ ಕೊರೊನ ಪಾಸಿಟಿವ್ ಬಂದಿದೆ ನೀವು ಇನ್ನು ಬದುಕುವುದು ಕಮ್ಮಿ ದಿನವೆಂದು ಹೇಳುತ್ತಾರೆ. ಅವನು ದುಖಃ ದಿಂದ ಮನೆಗೆ ತೆರುಳುತ್ತಾನೆ. ಸ್ವಲ್ಪ ದಿನಗಳು ಕಳೆಯಿತು. ರೋಗ ತೀವ್ರವಾಗಿ ಅವನು ಸಾಯುತ್ತಾನೆ. ಹಾಗೇ ಹನ್ನೊಂದನೇ ಕಾರ್ಯದ ದಿನ ಅವನ ಪಿಂಡವನ್ನು ನೀರಿನಲ್ಲಿ ಬಿಡುವಾಗ ಒಂದೇ ಒಂದು ಕಾಗೆ ಬರುವುದಿಲ್ಲ. ಊರವರು ಎಲ್ಲಾ ಅವನು ಮಾಡಿದ ಪಾಪಗಳನ್ನು ಮಾತಾಡಿಕೊಂಡು ಹೋದರು.
.......................................... ಅನ್ವಿತ ಕೆ
9ನೇ ತರಗತಿ
ಸರಕಾರಿ ಹಿರಿಯ ಪ್ರಾಥವಿುಕ ಶಾಲೆ ಬದನಾಜೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


              

     ಒಂದು ಕಾಡಿನಲ್ಲಿ ಒಂದು ದೊಡ್ಡ ಮರವಿತ್ತು. ಆ ಮರದಲ್ಲಿ ಕಾಗೆ ಮತ್ತು ಮರಿಗಳು ವಾಸವಾಗಿದ್ದವು. ಪಕ್ಕದ ಮರ ಒಂದರಲ್ಲಿ ಪಾರಿವಾಳ, ಗುಬ್ಬಚ್ಚಿ ಮತ್ತು ಬೇರೆ ಪಕ್ಷಿಗಳು ವಾಸವಾಗಿದ್ದವು. ಒಂದು ದಿನ ಕಾಗೆಯು ಆಹಾರ ಹುಡುಕಲು ಹೋಯಿತು. ಆಗ ಒಂದು ಹಾವು ಕಾಗೆಯ ಎರಡು ಮರಿಗಳನ್ನು ತಿಂದು ಬಿಟ್ಟಿತು. ನಂತರ ಕಾಗೆ ಬರುವುದನ್ನು ಕಂಡು ಹಾವು ಓಡಿಹೋಯಿತು. ಕಾಗೆ ಬಂದು ನೋಡಿದಾಗ ಅದರ ಮೂರು ಮರಿಗಳು ಮಾತ್ರ ಇದ್ದವು. ಇನ್ನೆರಡು ಮರಿಗಳು ಇರಲಿಲ್ಲ. ಇದನ್ನು ನೋಡಿ ಕಾಗೆಗೆ ತುಂಬಾನೆ ಬೇಸರವಾಯಿತು. 
     ಎರಡನೇ ದಿನ ಹೀಗೆ ನಡೆಯಿತು. ಇದನ್ನು ಕಂಡ ಕಾಗೆಯು ಅಳತೊಡಗಿತು. ಆಗ ಪಕ್ಕದ ಮರದಲ್ಲಿದ್ದ ಪಕ್ಷಿಗಳು ಅಲ್ಲಿಗೆ ಬಂದು "ಏನಾಯಿತು ಕಾಗಕ್ಕ? ನೀನು ಏಕೆ ಅಳುತ್ತಿರುವೆಯಾ?" ಎಂದು ಪ್ರಶ್ನಿಸಿದವು. ಆಗ ಕಾಗೆಯು ನಡೆದದ್ದನ್ನೆಲ್ಲ ಹೇಳಿತು. ನಂತರ ಎಲ್ಲಾ ಪಕ್ಷಿಗಳು ಮಾತನಾಡಿಕೊಂಡವು. ಮೂರನೇ ದಿನ ಕಾಗೆ ಆಹಾರಕ್ಕಾಗಿ ಹೋಯಿತು. ಎಲ್ಲಾ ಪಕ್ಷಿಗಳು ಮರಿಗಳ ಮೇಲೆ ಕಣ್ಣಿಟ್ಟಿದ್ದವು. ಎಂದಿನಂತೆ ಹಾವು ಅಲ್ಲಿಗೆ ಬಂತು. ಇದನ್ನು ಕಂಡ ಎಲ್ಲಾ ಪಕ್ಷಿಗಳು ಹಾವಿನ ಮೇಲೆ ದಾಳಿ ನಡೆಸಲು ಮುಂದಾದವು. ಹಾವು ಭಯದಿಂದ ದೂರ ಓಡಿಹೋಯಿತು. ಮತ್ತೆ ಅಲ್ಲಿಗೆ ಬರಲಿಲ್ಲ. ಕಾಗೆಯು ತನ್ನ ಮರಿಯೊಂದಿಗೆ ನೆಮ್ಮದಿಯಾಗಿ ಇರುತ್ತಿತ್ತು.
........................................................ ಸ್ಮಿತಾ 
9ನೇ ತರಗತಿ
ಸರಕಾರಿ ಪ್ರೌಢಶಾಲೆ, ಸಿದ್ಧಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************



              
     ಒಂದಾನೊಂದು ಕಾಡಿನಲ್ಲಿ ತುಂಬಾ ಪ್ರಾಣಿಗಳು ಮತ್ತು ಪಕ್ಷಿಗಳು ಸಂತೋಷದಿಂದ ಮತ್ತು ಶಾಂತಿಯಿಂದ ಬಾಳುತ್ತಿದ್ದವು. ಆ ಕಾಡಿನಲ್ಲಿ ಒಂದು ಗುಬ್ಬಿ ಇತ್ತು. ಅದು ತುಂಬಾ ದಯಾಳು ಹಾಗೂ ಪ್ರಾಮಾಣಿಕವಾಗಿತ್ತು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿತ್ತು. ಅದೇ ಕಾಡಿನಲ್ಲಿ ಒಂದು ಕಾಗೆ ಇತ್ತು. ಅದು ಗುಬ್ಬಿಯನ್ನು ನೋಡಿ ಅಸಹ್ಯ ಪಡುತ್ತಿತ್ತು. ಒಂದು ದಿನ ಮುಂಜಾನೆ ಗುಬ್ಬಿ ಕಾಡಿನಲ್ಲಿ ಸಂತೋಷವಾಗಿ ಹಾರಾಡುತ್ತಿತ್ತು. ತಕ್ಷಣ ಅದು ಕೆಳಗೆ ನೋಡಿತು. ಆಗ ಅಲ್ಲಿ ಒಂದು ನವಿಲಿನ ಮರಿ ತಲೆ ತಿರುಗಿ ಬಿದ್ದಿತ್ತು. ಗುಬ್ಬಿ ತಕ್ಷಣ ಹೋಗಿ ನವಿಲಿನ ಮರಿಗೆ ನೀರು ಕುಡಿಸಿ ಎಚ್ಚರ ಮಾಡಿತು. ಆ ನವಿಲು ಗುಬ್ಬಿಗೆ ಧನ್ಯವಾದ ಹೇಳಿ ಹಾರಿ ಹೋಯಿತು. ಆಗ ಅದನ್ನು ನೋಡಿದ ಕಾಗೆ ಎಂದಿತು. "ಹೇ ಗುಬ್ಬಿಯೇ ನೀನು ಯಾಕೆ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಿ. ನೀನು ನಿನ್ನ ಆಹಾರವನ್ನು ತಿಂದುಕೊಂಡು ಸಂತೋಷವಾಗಿರಬಹುದಲ್ಲವೇ ಎಂದಿತು." ಆಗ ಗುಬ್ಬಿ, "ಸಹಾಯ ಮಾಡುವುದು ಪ್ರಾಣಿ, ಪಕ್ಷಿ ಮನುಷ್ಯ ಧರ್ಮ" ಎಂದಿತು. ಕಾಗೆ ಅದನ್ನು ಕೇಳಿ ಗುಬ್ಬಿಗೆ ಎಷ್ಟು ಹೇಳಿದರು ತಿಳಿಯುವುದಿಲ್ಲ ಎಂದು ಹಾರಿ ಹೋಯಿತು. ಗುಬ್ಬಿ ಹೀಗೆ ಒಂದು ದಿನ ಗೂಡಲ್ಲಿ ತನ್ನ ಮರಿಗಳೊಂದಿಗೆ ಆಹಾರ ಸೇವಿಸುತ್ತಿತ್ತು. ಹಾಗೆ ಕೆಳಗೆ ನೋಡಿದಾಗ ಕಾಗೆ ಕೆಳಗೆ ಆಹಾರ ಇಲ್ಲದೆ ಹಸಿವೆಯಿಂದ ಬಳಲುತ್ತಿತ್ತು. ಆಗ ಗುಬ್ಬಿ ತಕ್ಷಣ ಹೋಗಿ ಕೇಳಿತು. "ಯಾಕೆ ಕಾಗೆ ತುಂಬಾ ದುಃಖದಿಂದಿರುವೆ" ಆಗ ಕಾಗೆ ಹೇಳಿತು "ನಾನು ಆಹಾರ ಸೇವಿಸದೆ ಮೂರು ದಿನವಾಯಿತು" ಆಗ ಗುಬ್ಬಿ ಆಹಾರ ಕೊಟ್ಟು ಅದನ್ನು ಸಮಾಧಾನಿಸಿತು. ಆಗ ಕಾಗೆ ಹೇಳಿತು, "ಗುಬ್ಬಿ ನನ್ನ ಕ್ಷಮಿಸು ನೀನು ನವಿಲಿನ ಮರಿ ತಲೆತಿರುಗಿ ಬಿದ್ದಾಗ ನೀನು ಸಹಾಯ ಮಾಡಿದ್ದು ನೋಡಿ ನನಗೆ ಅಸಹ್ಯವಾಯಿತು. ಆದರೆ ನಾನು ನಿನಗೆ ಅಸಹ್ಯಪಟ್ಟಿದ್ದರೂ ಕೂಡ ನೀನು ಸಹಾಯ ಮಾಡಿದ್ದಿ" ಆಗ ಗುಬ್ಬಿ ಹೇಳಿತು, "ನಾವು ಬೇರೆಯವರಿಗೆ ಸಹಾಯ ಮಾಡಿದರೆ ಅವರು ನಮಗೆ ಸಹಾಯ ಮಾಡುತ್ತಾರೆ."          ನೀತಿ : ನಾವು ಕಷ್ಟ ಬಂದಾಗ ಯಾರಿಗಾದರೂ ಸಹಾಯಮಾಡಬೇಕು                                
...................... ಪ್ರಿನ್ಸನ್ ಲೋಯ್ ಡಿ' ಸೋಜಾ 
7ನೇ ತರಗತಿ 
ದ.ಕ. ಜಿ. ಪಂ. ಹಿ. ಪ್ರಾಥಮಿಕ 
ಶಾಲೆ ಕೊಯಿಲ ಬಡಗನ್ನೂರು 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************



Ads on article

Advertise in articles 1

advertising articles 2

Advertise under the article