-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 78

ಸ್ಫೂರ್ತಿಯ ಮಾತುಗಳು : ಸಂಚಿಕೆ - 78

ಸ್ಫೂರ್ತಿಯ ಮಾತುಗಳು : ಸಂಚಿಕೆ - 78
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                     
         ಗಳಿಕೆ ಎಂದೊಡನೆ ಸಂಪಾದನೆ, ಪಡೆಯುವುದು, ಸಾಧಿಸುವುದು ಮುಂತಾಗಿ ಅರ್ಥವಾಗುತ್ತದೆ. ಗಳಿಕೆಯ ಪ್ರಮಾಣವು ಗರಿಷ್ಠವಾದರೆ ಅದು ಹೆಗ್ಗಳಿಕೆ. ಹಣಕಾಸು, ಆಸ್ತಿ, ಅಧಿಕಾರ, ಭಾವನೆ ಅಥವಾ ಕ್ಷಮತೆ ಇವೆಲ್ಲವೂ ಗಳಿಕೆಯೇ ಆಗಿದೆ. ಗಳಿಕೆಯಾದ ಮೇಲೆ ಆ ಗಳಿಕೆಯನ್ನು ವರ್ಧಿಸುವ ಚಿಂತನೆಯು ಪ್ರತಿಯೊಬ್ಬರಿಗೂ ಸಹಜ. ಗಳಿಕೆಯು ಉಳಿಕೆಯಾಗುತ್ತಾ ಹೊಸ ಗಳಿಕೆ ಸೇರುತ್ತಾ ಹೋದರೆ ಅದು ವರ್ಧಿಸುತ್ತದೆ. ಗಳಿಕೆಯನ್ನು ಕಳೆಯುವುದು ಬಹಳ ಸುಲಭ. ಗಳಿಸುವುದು, ಗಳಿಸಿದುದನ್ನು ಉಳಿಸಿಕೊಳ್ಳುವುದು ಮತ್ತು ಹೆಚ್ಚಿಸುವುದು ಅತ್ಯಂತ ತ್ರಾಸಕರ. ಒಂದು ಚಂದದ ಚಿತ್ರ ಬಿಡಿಸಿದುದನ್ನು ನೋಡಿದಾಗ, “ವಾವ್ ಎಂದು ಸಂಭ್ರಮಿಸುತ್ತೇವೆ. ಚಿತ್ರಕಾರನಿಗೆ Keep it up” ಎನ್ನುತ್ತೇವೆ. ಸಾಧಿಸಿರುವುದನ್ನು ಉಳಿಸಿ ಬೆಳೆಸು ಎಂದು ಹಾರೈಸುವುದೇ “keep it up” ಇದರ ಅಂತರಾಳ.
      ಮಕ್ಕಳ ಜಗಲಿಯಲ್ಲಿ ಅಸಂಖ್ಯ ಮಕ್ಕಳು ಚಿತ್ರ, ಕವನ, ಲೇಖನ, ಕಥೆ. ಮುಂತಾಗಿ ಸಾಹಿತ್ಯಗಳನ್ನು ಪ್ರಕಟಿಸುತ್ತಾರೆ. ಈ ಪ್ರಕಟಣೆಗಳಿಗೆ ಸಾಕಷ್ಟು ಮೆಚ್ಚುಗೆ ಬರುತ್ತದೆ. ಈ ಮೆಚ್ಚುಗೆ ಒಂದು ಗಳಿಕೆ. ಅವರ ಪ್ರಕಟಣೆ ಅವರನ್ನು ಸಮಾಜಕ್ಕೆ ಪರಿಚಯಿಸುತ್ತದೆ. ಪರಿಚಯವೂ ಗಳಿಕೆಯಾಗುತ್ತದೆ. ಆ ಮಕ್ಕಳು ಮುಂದಿನ ಪ್ರಕಟಣೆಗೆ ಸಂಬಂಧಿಸಿದ ಬರವಣಿಗೆಗಳಿಗೆ ಚಿಂತನೆ ಮಾಡುತ್ತಾರೆ, ಮನಸ್ಸನ್ನು ಕೇಂದ್ರೀಕರಿಸುತ್ತಾರೆ ಇವೆಲ್ಲವೂ ಗಳಿಕೆಗಳೇ ಆಗುತ್ತವೆ. ತಮ್ಮ ರಚನೆಗಳಿಂದಾಗಿ ಮಕ್ಕಳು ಅನೇಕ ಅಭಿಮಾನಿಗಳನ್ನು ಪಡೆಯುತ್ತಾರೆ. ಅವರಿಗೆ ವ್ಯಾಪಕವಾಗಿ ಗೌರವ ಬರುತ್ತದೆ, ಬಹಳಷ್ಟು ಜನರ ಪ್ರೀತಿಗೆ ಪಾತ್ರರಾಗುತ್ತಾರೆ. ಈ ಭಾವನೆಗಳ ಗಳಿಕೆ ಸಾಮಾನ್ಯವಾದ ಗಳಿಕೆಯಲ್ಲ. ನಾಲ್ಕಾರು ಕಾಸು ಗಳಿಸಿದರೆ ಅದು ವ್ಯಯವಾಗುತ್ತದೆ, ಉಳಿತಾಯವಾಗದೆಯೂ ಇರಬಹುದು. ಇತರರಿಂದ ಗಳಿಸಿದ ಭಾವನೆಗಳು ಜೀವನದ ಶಾಶ್ವತ ಗಳಿಕೆಯಾಗುತ್ತದೆ, ಜೀವನವು ಜಯಶಾಲಿಯಾಗುತ್ತದೆ.
     ಪ್ರಸಿದ್ಧಿಯ ಗಳಿಕೆ ಚಟವಾಗಬಾರದು. “ಏನಕೇನ ಪ್ರಕಾರೇಣ ಪ್ರಸಿದ್ಧಿರ್ಭವತು” ಎಂಬ ಹಾರೈಸುವಿಕೆಯೂ ಇದೆ. “ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋ ಜಾಯತೆ” ಹೇಗಾದರೂ ಆಗಲಿ ತಾನು ಪ್ರಸಿದ್ಧನಾಗಬೇಕೆಂಬ ಗುಂಗು ಮಾನವನ ದೌರ್ಬಲ್ಯ. ಅದೊಂದು ರೀತಿಯ ಮಾನಸಿಕ ಕಾಯಿಲೆ. ಪ್ರಸಿದ್ಧಿಯು ಅನೈಚ್ಛಿಕವಾಗಿ ಪ್ರದಾನವಾಗಬೇಕೇ ಹೊರತು ಯಾಚಿತವಾಗಬಾರದು. ನಮ್ಮ ಕಾರ್ಯ ಸಾಧನೆಯ ಮೂಲಕ ತಾನಾಗಿಯೇ ಪ್ರಸಿದ್ಧಿಯು ಬರಬೇಕೇ ಹೊರತು ಪ್ರಸಿದ್ಧಿಯ ಉದ್ದೇಶಕ್ಕಾಗಿ ಕಾರ್ಯಗಳಿರ ಬಾರದು. ದಾರಿಯಲ್ಲಿ ಗಾಜಿನ ಚೂರುಗಳನ್ನು ಚೆಲ್ಲಿದರೂ ಪ್ರಸಿದ್ಧಿಯ ಗಳಿಕೆಯಾಗುತ್ತದೆ. ದಾರಿ ಬದಿಯಲ್ಲಿ ಗಾಜಿನ ಅರಮನೆ ಕಟ್ಟಿಸಿದರೂ ಪ್ರಸಿದ್ಧಿಯ ಗಳಿಕೆಯಾಗುತ್ತದೆ. ಸುಪ್ರಸ್ಸಿದ್ಧಿಯ ಗಳಿಕೆಯಾದರೆ ಗೌರವವಿರುತ್ತದೆ. ಕುಪ್ರಸಿದ್ಧಿಯಾದರೆ ಛೀಮಾರಿಗಳಿರುತ್ತವೆ. ಇವು ಶಾಪಗಳಾಗಿ ಪರಿಣಮಿಸುತ್ತವೆ. ಕುಪ್ರಸಿದ್ಧಿಯ ಗಳಿಕೆಯು ನಮ್ಮನ್ನು ಹಿಗ್ಗಿಸದು. ನಾವು ಮಾಡುವ ಎಲ್ಲ ಕೆಲಸಗಳೂ ಹಿರಿಮೆಯ ಗಳಿಕೆಗೆ ತಾರಕವಾಗಿರಬೇಕು. ನಾವು ಹೆಸರುವಾಸಿಯಾಗಲು ನೆರವಾಗಬೇಕು.
       “ನೀನು ಉದ್ಯೋಗದಲ್ಲಿ ಏನು ಗಳಿಸಿದೆ? ನಿನ್ನ ಜೀವನದ ಗಳಿಕೆಯೇನು?” ಎಂದು ಕೇಳುವವರಿರುವರು. ಬಹಳಷ್ಟು ಜನರು ಹಣಗಳಿಕೆ ಯಾ ಸಂಪತ್ತಿನ ಗಳಿಕೆಯ ಬಗ್ಗೆ ಹೇಳುತ್ತಾರೆ. ಮನೆ ಕಟ್ಟಿಸಿದೆ, ಗಾಡಿ ಕೊಂಡೆ, ನಿರಖು ಠೇವಣಿ ಗಳಿಸಿದೆ, ಹೆಂಡತಿ ಮಕ್ಕಳಿಗೆ ಚಿನ್ನ ಖರೀದಿಸಿದೆ ಹೀಗೆ ಭೌತಿಕ ಗಳಿಕೆಗಳನ್ನು ಹೇಳುತ್ತಾರೆ. ಆದರೆ ನಾನು ಸಮಾಜದ ಪ್ರೀತಿಯನ್ನು ಗಳಿಸಿದೆ, ನನಗೆ ಸಮಾಜ ಗೌರವದಿಂದ ನಡೆಸಿದೆ, ಬಡವರಿಗೆ ಸಹಾಯ ನೀಡಿದೆ, ವಿದ್ಯಾರ್ಥಿಗಳಿಗೆ ಪರಿಕರ ಒದಗಿಸಿದೆ ಎಂದು ಹೇಳುವವರು ಅಪರೂಪ. ಈ ಅಪರೂಪದವರೇ ನಿಜವಾಗಿಯೂ ಬಹಳವಾಗಿ ಗಳಿಸಿದವರು. ಸ್ವಹಿತಕ್ಕಾಗಿ ಬಹಳಷ್ಟನ್ನು ಗಳಿಸಿ (ಹಣ) ನಾವು ಗೌಣರಾಗ ಬಾರದು. ಪರಹಿತದ ಮೂಲಕ ನಾವೇನನ್ನೇ ಗಳಿಸಿದರೂ ಅದು ಗೌರವಾರ್ಹವಾಗುತ್ತದೆ, ‘ಶಾಶ್ವತ ಸಂತಸ’ ದ ಗಳಿಕೆಯೂ ಆಗುತ್ತದೆ.
      ಕ್ಷಮತೆ ಎಂದರೆ ಸಾಮರ್ಥ್ಯ. ಶಿಕ್ಷಣ, ಆರೋಗ್ಯ, ಕೌಶಲ್ಯ, ಹೃದಯವಂತಿಕೆ, ಸೇವೆ ಮೊದಲಾದುವುಗಳೆಲ್ಲವೂ ಕ್ಷಮತೆಯ ಪರಿಧಿಗೆ ಬರುತ್ತವೆ. ಇವುಗಳೆಲ್ಲವೂ ಗಳಿಕೆಯಲ್ಲಿ ಪ್ರಧಾನ ಭೂಮಿಕೆಗಳಾಗಿ ಸಹಕರಿಸುತ್ತವೆ. ಯಕ್ಷಗಾನದಲ್ಲಿ ಭಾಗವತಿಕೆ, ಅಭಿನಯ, ಅರ್ಥಗಾರಿಕೆ, ಚೆಂಡೆ, ಮದ್ದಳೆ, ಚಕ್ರತಾಳವಾದನ ಹೀಗೆ ನಾನಾ ವಿಭಾಗಗಳಿವೆ. ಈ ವಿಭಾಗಗಳಲ್ಲಿ “ಗಳಿಕೆ” ಆಗಬೇಕಾದರೆ ಆ ಕಲೆಯ ಪ್ರೌಢ ಕೌಶಲ್ಯ, ಕೌಶಲ್ಯಗಳ ಪ್ರದರ್ಶನಕ್ಕೆ ಆರೋಗ್ಯ ಮತ್ತು ಹೃದಯವಂತಿಕೆ ಇರಲೇ ಬೇಕಲ್ಲವೇ? ಹಾಗೆಯೇ ಇತರರನ್ನು ರಂಜಿಸಬೆಕೆಂಬ ಸೇವಾಕಾಂಕ್ಷೆಯೂ ಬೇಕು. ಹಿಮ್ಮೇಳದಲ್ಲಾಗಲಿ, ಮುಮ್ಮೇಳದಲ್ಲಾಗಲಿ ಹಣ ಮತ್ತು ಕೀರ್ತಿಗಳ ಗಳಿಕೆಯಾಗುತ್ತದೆ. ಕೇವಲ ಯಕ್ಷಗಾನ ಮಾತ್ರವಲ್ಲ, ನಾನಾ ಕಲಾ ಕ್ಷೇತ್ರಗಳು, ಸಾಹಿತ್ಯ ಕ್ಷೇತ್ರಗಳು, ಶಿಕ್ಷಣ ಕ್ಷೇತ್ರಗಳು, ಸಾಮಾಜಿಕ ಕ್ಷೇತ್ರಗಳು, ರಾಜಕೀಯ ಕ್ಷೇತ್ರಗಳು, ಕೈಗಾರಿಕಾ ಕ್ಷೇತ್ರಗಳು, ವ್ಯವಸಾಯ ಕ್ಷೇತ್ರಗಳು ಎಲ್ಲವೂ “ಗಳಿಕೆ”ಗೆ ಪ್ರಶಸ್ತವೇ ಆಗಿರುತ್ತವೆ. ನಿಸ್ವಾರ್ಥ ತೊಡಗಿಸುವಿಕೆಯ ಮನೋಗಳಿಕೆ ನಮ್ಮದಾಗಬೇಕು.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 



Ads on article

Advertise in articles 1

advertising articles 2

Advertise under the article