-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 77

ಸ್ಫೂರ್ತಿಯ ಮಾತುಗಳು : ಸಂಚಿಕೆ - 77

ಸ್ಫೂರ್ತಿಯ ಮಾತುಗಳು : ಸಂಚಿಕೆ - 77
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                     
    “ತಿರುಳು” ಸತ್ವ, ಸಾರ, ಮುಖ್ಯವಾದ ಭಾಗ ಮುಂತಾದ ಅರ್ಥವನ್ನು ಕೊಡುತ್ತದೆ. ಇದಕ್ಕೆ ವಿರುದ್ಧ ಅರ್ಥದ ಪದಗಳಾಗಿ ಟೊಳ್ಳು ಅಥವಾ ಜಳ್ಳು ಎಂದು ವಿವರಿಸಬಹುದು. ಲೇಖನದ ತಿರುಳು, ಹಣ್ಣಿನ ತಿರುಳು, ಬೀಜದ ತಿರುಳು, ವಿದ್ಯೆಯ ತಿರುಳು, ಕಥೆಯ ತಿರುಳು, ಮರದ ತಿರುಳು, ಅಕ್ಕಿಯ ತಿರುಳು, ಮಾತಿನ ತಿರುಳು, ಭಾಷಣದ ತಿರುಳು, ಚಲನ ಚಿತ್ರದ ತಿರುಳು, ಹಾಡಿನ ತಿರುಳು, ಭಾಷೆಯ ತಿರುಳು, ನಾಟಕದ ತಿರುಳು, ಕಾವ್ಯದ ತಿರುಳು, ವೇದದ ತಿರುಳು, ಮಹಾಭಾರತದ ತಿರುಳು..... ಹೀಗೆ ಊಹನೆಗೆ ನಿಲುಕದಷ್ಟು ‘ತಿರುಳು’ ಜೋಡಿತ ಪದಗಳನ್ನು ಪಡೆಯುತ್ತೇವೆ. ಜಳ್ಳು ಅಥವಾ ಟೊಳ್ಳು ಜೋಡಿಸಿದರೆ ವಿರುದ್ಧಾರ್ಥಕ ಪದಗಳು ಸಿಗುತ್ತವೆ. ಜಳ್ಳು ಮಾತು, ಟೊಳ್ಳು ಬೀಜ, ಟೊಳ್ಳು ಕಥೆ ಹೀಗೆ ಮುಂದುವರಿಸಲಾಗುತ್ತದೆ.
      ವ್ಯಕ್ತಿಯ ಸಾಮರ್ಥ್ಯವು ಜೀವನವನ್ನೂ ಟೊಳ್ಳು ಮತ್ತು ತಿರುಳು ಎಂದು ರೂಪಿಸುತ್ತದೆ. ಸಿಹಿ ಗೆಣಸು ಸ್ವಾದಿಷ್ಟವೆನಿಸಲು ಅದು ಉತ್ತಮ ತಿರುಳನ್ನು ಹೊಂದಿರಬೇಕು. ಅದಕ್ಕೆ ತಿರುಳು ಸೇರಲು ಪೋಷಣೆ ಸೂಕ್ತವಾಗಿರಬೇಕು. ಉತ್ತಮ ರಸಗೊಬ್ಬರ, ನೀರಾವರಿ, ಮೃಗಗಳಿಂದ ರಕ್ಷಣೆ, ರೋಗಗಳು ಬಾರದಂತೆ ಮುಂಜಾಗರೂಕತೆ ಹೀಗೆ ಅನೇಕ ಕ್ರಮಗಳನ್ನು ಪಾಲನೆ ಮಾಡಬೇಕು. ಕಟಾವು ಕೂಡಾ ಸಕಾಲದಲ್ಲೇ ಆಗಬೇಕು. ಹಾಗಿರುವಾಗ ಜೀವನಕ್ಕೂ “ತಿರುಳು” ಸೇರಲು ಅನೇಕ ಕ್ರಮಗಳು ಬೇಡವೇ? ರಾಮಧ್ಯಾನ ಚರಿತೆಯಲ್ಲಿ ಅಕ್ಕಿ ಮತ್ತು ರಾಗಿಗಳ ನಡುವೆ ಶ್ರೇಷ್ಠತೆ ಬಗ್ಗೆ ಜಗಳವುಂಟಾದ ಘಟನೆಯಿದೆ. ಜಗಳ ತಾರಕಕ್ಕೇರಿದಾಗ ಶ್ರೀರಾಮನೇ ಜಗಳ ತಣಿಸಲು ಉದ್ಯುಕ್ತನಾದನು. ಅವನ ಸೂಚನೆಯಂತೆ ಹಿಡಿ ಅಕ್ಕಿಯನ್ನು ಮತ್ತು ಹಿಡಿ ರಾಗಿಯನ್ನು ಪ್ರತ್ಯೇಕ ಪೊಟ್ಟಣಗಳಲ್ಲಿ ಒಂದು ಕೋಣೆಯೊಳಗೆ ಕಾಪಿಡಲಾಯಿತು. ಕೆಲವು ಸಮಯದ ನಂತರ ನೋಡಿದಾಗ ಅಕ್ಕಿ ಧೂಳಾಗಿ ಅಸ್ತಿತ್ವವನ್ನು ಕಳೆದುಕೊಂಡಿದ್ದರೆ, ರಾಗಿಯು ಮಾತ್ರ ಇನ್ನೂ ಗಟ್ಟಿಮುಟ್ಟಾಗಿಯೇ ಇತ್ತು. ರಾಗಿಯ ತಿರುಳಿನ ತಾಕತ್ತು ಅದನ್ನು ದೀರ್ಘಕಾಲ ಕಾಪಾಡಿದೆ. ನಮ್ಮ ಜೀವನವೂ ದೀರ್ಘಕಾಲ ನಿರಾತಂಕವಾಗಿರಲು ನಮ್ಮೊಳಗೂ ತಿರುಳಿರಲೇ ಬೇಕು.
         ನಮ್ಮೊಳಗಿರಬೇಕಾದ ತಿರುಳು ಮನ ಮನೆಗಳನ್ನು ಶಾಂತಾವಾಗಿಡಲು ಕಾರಣವಾಗಬೇಕು. ಮೇಲರಿಮೆ, ಕ್ರೋಧದ ಭಾವ, ಮನೆಯ ಇತರರ ಬಗ್ಗೆ ತಾತ್ಸಾರಗಳು ಮನ ಮನೆಗಳು ಟೊಳ್ಳಾಗಲು ಕಾರಣವಾದರೆ, ಎಂದೂ ಬತ್ತದ ಪ್ರೀತಿಯ ಮಹಾ ಒರತೆ, ಸಹಿಷ್ಣುತೆ, ಸಾಮರಸ್ಯಗಳು ಮನ ಮನೆಗಳ ತಿರುಳನ್ನು ಘನಗೊಳಿಸುತ್ತವೆ. ಜೀವನ ಸಂಭ್ರಮವಾಗಲು ತಿರುಳು ಬಹಳ ಮುಖ್ಯ. ಮನೆಯೊಂದು ಬೆಳಗಿದರೆ ಸಮಾಜವೂ ಬೆಳಗುತ್ತದೆ. ಸಮಾಜದ ತಿರುಳು ದೃಢಗೊಳ್ಳಲು ವ್ಯಕ್ತಿತ್ವದ ಮನೆ ಮನೆಗಳೇ ಕಾರಣ ಎಂಬುದು ನಿರ್ವಿವಾದ.
     ಧಾನ್ಯಗಳನ್ನು ಪೇರಿಸುವಾಗ ಅದರಿಂದ ಬೇರೆ ಬೇರೆ ವಿಧಾನಗಳನ್ನು ಬಳಸಿ ಜಳ್ಳುಗಳನ್ನು ಹೊರದೂಡುವುದನ್ನು ನಾವು ಗಮನಿಸುತ್ತೇವೆ. ಬೇರ್ಪಡಿಸಲಾದ ಜಳ್ಳು ತಿಪ್ಪೆ ಅಥವಾ ಗೊಬ್ಬರದ ಗುಂಡಿ ಸೇರುತ್ತವೆ. ಅವುಗಳನ್ನು ಖಾದ್ಯವಾಗಿ ಬಳಸಲಾಗುವುದಿಲ್ಲ. ಸಮಾಜದಲ್ಲಿಯೂ ಟೊಳ್ಳಾದ ವ್ಯಕ್ತಿತ್ವಗಳನ್ನು ದೂರವಿಡುತ್ತಾರೆಯೇ ಹೊರತು, ಸ್ಥಾನ ಮಾನಗಳಿಂದ ಗೌರವಿಸುವುದಿಲ್ಲ. ಅದಕ್ಕಾಗಿ ನಾವು ಸಮಾಜದ ತಿರುಳುಗಳಾಗಲು ಹೆಣಗಬೇಕು. ನಾವು ಮಾತನಾಡುವಾಗ ಕೆಲವರ ಬಗ್ಗೆ ಅವರು ಸಮಾಜದ Asset ಎನ್ನುವುದಿದೆ. ಅವರು ಸಮಾಜದ ಆಸ್ತಿಯಾಗಲು ಅವರಲ್ಲಿರುವ ಜ್ಞಾನ, ಅನುಭವ, ಅವಿರತ ಪ್ರಯತ್ನದ ಮೂಲಕ ಗಳಿಸಿದ ಉನ್ನತ ವ್ಯಕ್ತಿತ್ವವೇ ಕಾರಣವೆಂಬುದನ್ನು ಸದಾ ನೆನಪಿನಲ್ಲಿಡಬೇಕು. ನಾವೂ ತಿರುಳುಗಳಾಗೋಣವೇ?
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 



Ads on article

Advertise in articles 1

advertising articles 2

Advertise under the article