-->
ಜಗದಗಲ ಉರಗಾರಾಧನೆ...!

ಜಗದಗಲ ಉರಗಾರಾಧನೆ...!

ಲೇಖನ : ಜಗದಗಲ ಉರಗಾರಾಧನೆ...!
ಲೇಖಕಿ : ಚಿತ್ರಾಶ್ರೀ ಕೆ.ಎಸ್. 
ಸಹ ಶಿಕ್ಷಕರು (ಕಲಾ), 
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು, 
ಮಂಗಳೂರು ಉತ್ತರ ವಲಯ. 
ದಕ್ಷಿಣ ಕನ್ನಡ ಜಿಲ್ಲೆ

           
      ಕೈಕಾಲುಗಳಿಲ್ಲದೆ ನೆಲದಲ್ಲಿ ಹರಿದಾಡುವ ಹಾವುಗಳ ಬಗೆಗೆ ಮಾನವನಲ್ಲಿರುವ ಭಯ-ಭಕ್ತಿ, ಕಲ್ಪನೆಯ ಶಕ್ತಿ, ಆರಾಧನಾ ಅಭಿವ್ಯಕ್ತಿಗಳನ್ನು ನೋಡುತ್ತಲೇ ಬೆಳೆದ ನನಗೆ ಮಲೆನಾಡಿನಲ್ಲಿ ಕಳೆದ ಬಾಲ್ಯ ಹಾವುಗಳನ್ನು ಕಂಡು ಹೆದರಿ ಓಡುವ ಬದಲು ನಿಂತು ನೋಡುವ ಕುತೂಹಲ ತುಂಬಿ ಬೆಳೆಸಿತು. ಅಲ್ಲಿ ಹಾವುಗಳನ್ನು ನೋಡಲು ಕಾಡಿಗೆ ಹೋಗಬೇಕೆಂದೇನೂ ಇರಲಿಲ್ಲ. ವಾರಕ್ಕೆ ಒಂದೆರಡು ಬಾರಿ ನಮ್ಮ ಹಂಚಿನ ಮನೆಯೊಳಗೆ ನುಸುಳಿ ಬರುವ ಹಾವುಗಳು ತಾವೇ ತಾವಾಗಿ ಹಗಲು- ರಾತ್ರಿಗಳೆನ್ನದೇ ದರ್ಶನ ಭಾಗ್ಯ ಕಲ್ಪಿಸುತ್ತಿದ್ದವು!. 'ನಿನ್ನನ್ನು ಮಲಗಿಸಿದ್ದ ತೊಟ್ಟಿಲ ಹಗ್ಗಕ್ಕೇ ಹಾವು ಸುತ್ತಿಕೊಂಡು ಇಳಿದಿತ್ತು' ಅಂತ ಅಮ್ಮ ಇತಿಹಾಸ ಬಿಚ್ಚಿಟ್ಟಮೇಲೆ ಹಾವುಗಳನ್ನು ಕಾಣುವ ದೃಷ್ಟಿಕೋನಕ್ಕೆ ಕುತೂಹಲದ ಲೇಪವಾಯಿತು. ಹಾವುಗಳ ಆರಾಧನೆ ಜಗತ್ತಿನ ಬಹುತೇಕ ಎಲ್ಲಾ ನಾಗರಿಕತೆಗಳಲ್ಲಿಯೂ ಇತ್ತು ಎಂದು ತಿಳಿದ ನಂತರ ಇದು ಸಂಸ್ಕೃತಿಯ ತಾಯಿಬೇರು ಎನ್ನಿಸಿತು. 
      
       ನಮ್ಮ ಪುರಾಣೇತಿಹಾಸಗಳ ಪುಟಗಳಲ್ಲಿ ಹಾವುಗಳ ಬಗೆಗಿನ ಉಲ್ಲೇಖಗಳನ್ನು ಗಮನಿಸುತ್ತಾ ಹೋದರೆ ಸಮುದ್ರ ಮಂಥನದಲ್ಲಿ ಕಡಗೋಲಿನ ಹಗ್ಗವಾಗಿ, ವಿಷವನ್ನು ಕುಡಿದ ನೀಲಕಂಠನ ಕಂಠಾಭರಣವಾಗಿ, ಪಾತಾಳ ಲೋಕದಲ್ಲಿ ವಿಹರಿಸುವವರಾಗಿ, ವಿಷ್ಣುವನ್ನು ಹೊತ್ತ ಆದಿಶೇಷನಾಗಿ, ಕೃಷ್ಣನಿಂದ ಮಣಿಸಲ್ಪಟ್ಟ ಕಾಳಿಂಗನಾಗಿ, ಭೀಮನನ್ನು ಅಮೃತ ನೀಡಿ ಕಾಪಾಡಿದ ನಾಗ ಕುಲದವರಾಗಿ, ಅರ್ಜುನನ ಬೀಗರಾಗಿ, ಸರ್ಪ ಯಜ್ಞಕ್ಕೆ ಕಾರಣರಾಗಿ ಅಲ್ಲಲ್ಲಿ ಕಂಡುಬರುವ ಹಾವುಗಳ ವಿಚಾರ ನಮಗೆಲ್ಲ ಸುಪರಿಚಿತ. ನಾಗಾಲ್ಯಾಂಡ್ ಎಂಬ ರಾಜ್ಯದ ನಾಗಾ ಜನರು, ನಾಗಾ ಸಾಧುಗಳೆಂಬ ನಿಗೂಢ ಸಾಧಕರೂ ನಮ್ಮ ದೇಶದ ನಾಗ ನಂಬಿಕೆಯ ಪ್ರಾಚೀನತೆಯನ್ನು ಪ್ರತಿಬಿಂಬಿಸುತ್ತಾರೆ. 
      
     ನಾವು ಬನದೊಳಗಿದ್ದ ನಾಗನ ಹುತ್ತ ಅಥವಾ ಕಲ್ಲುಗಳಿಗೆ ಅಭಿಷೇಕ ನಡೆಸುತ್ತೇವೆ. ಅದು ಭೂಮಿಯೊಳಗೆ ಇಂಗುವುದನ್ನು ನೋಡುತ್ತೇವೆ. ಅಲ್ಲಲ್ಲಿ ಅದನ್ನು ಇರುವೆಗಳು ಹೀರುವುದನ್ನು ಗಮನಿಸುತ್ತೇವೆ. ಮನೆಗೆ ಬಂದ ಮೇಲೆ ನಾಲ್ಕೈದು ಫೋಟೋ ವೀಡಿಯೋಗಳನ್ನು ಹಂಚಿಕೊಂಡು ಮರೆತುಬಿಡುತ್ತೇವೆ. ಆದರೆ ನಾವು ಎರೆದ ಹಾಲು - ಎಳನೀರುಗಳನ್ನು ಆಹಾರವಾಗಿ ಸೇವಿಸುವ ಇರುವೆ- ಗೆದ್ದಲು ಇತ್ಯಾದಿ ಸಣ್ಣ ಜೀವಿಗಳ ಅಭಿವೃದ್ಧಿಗೆ ಇದು ಸದ್ದಿಲ್ಲದೇ ಮುನ್ನುಡಿ ಬರೆದಿರುತ್ತದೆ. ಮುಂದೆ ಅವುಗಳನ್ನು ತಿನ್ನುವ ಕಪ್ಪೆ, ಓತಿಕ್ಯಾತ, ಇಲಿ, ಹೆಗ್ಗಣಗಳು, ಸಣ್ಣ ಹಾವುಗಳು ಮುಂತಾದ ಜೀವಿಗಳ ಸಂತತಿ ಪೋಷಣೆಯಾಗುತ್ತದೆ. ಅವುಗಳನ್ನು ಹಿಡಿದು ತಿನ್ನುವ ದೊಡ್ಡ ಹಾವುಗಳಾದ ನಾಗರ ಹಾವು, ಕಾಳಿಂಗ ಮುಂತಾದ ಜೀವಿಗಳ ಸಂತತಿ ಬೆಳೆಯಲು ಮುಂದೆ ಇದು ಕಾರಣವಾಗುತ್ತದೆ. ಪರೋಕ್ಷವಾಗಿ ಆಹಾರ ಸರಪಳಿಯನ್ನು ಪೋಷಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ದೊಡ್ಡ ಹಾವುಗಳ ಸಂತತಿ ಹೆಚ್ಚಿಸುವ, ರಕ್ಷಿಸುವ ಹಾಗೂ ಮುಂದೆ ಬೆಳೆಯ ಕೊಯ್ಲಿನ ಹೊತ್ತಿಗೆ (ಅಕ್ಟೋಬರ್ - ನವೆಂಬರ್) ನಮ್ಮ ಬೆಳೆ ತಿನ್ನಲು ಬರುವ ದಂಶಕಗಳಾದ ಇಲಿ- ಹೆಗ್ಗಣಗಳ ನಿಯಂತ್ರಣಕ್ಕೆ ಅವುಗಳ ಸಹಾಯ ಪಡೆಯುವ ಹಿರಿಯರ ಆಲೋಚನಾ ವಿಧಾನವೇ ಈ ಹಬ್ಬದ ಆಚರಣೆಯ ಜೀವಾಳ ಎಂದು ಅರ್ಥೈಸಿಕೊಳ್ಳುವಲ್ಲಿ ಏಕೆ ಎಡವಿದ್ದೇವೆ? ಎಂಬ ಪ್ರಶ್ನೆ ಏಳುತ್ತದೆ. ಮೂಢ ನಂಬಿಕೆ - ಅರ್ಥವಿಲ್ಲದ ಆಚರಣೆ ಎಂದು ಸುಮ್ಮನೆ ದೂಷಿಸುವ ಬದಲು ಆಚರಣೆಯ ಆಳಕ್ಕಿಳಿದು ನೋಡುವ ಪ್ರಯತ್ನ ನಮ್ಮದಾಗಬೇಕು. ನಮ್ಮಲ್ಲಿ ಮಾತ್ರವಲ್ಲ, ಜಗದಗಲ ವಿವಿಧ ದೇಶಗಳಲ್ಲಿ ನಡೆದಿರುವ ಉರಗಾರಾಧನೆಯ ಬಗೆಗೆ ನಾವು ತಿಳಿದುಕೊಂಡರೆ 'ವಸುಧೈವ ಕುಟುಂಬಕಂ' ಎಂಬ ವಾಸ್ತವ ಸಂತಸ ನೀಡುತ್ತದೆ.

      ಪ್ರಾಚೀನ ಜಗತ್ತಿನ ವಿವಿಧ ನಾಗರಿಕತೆಗಳಾದ ಮೆಸಪಟೋಮಿಯ, ಈಜಿಪ್ಟ್, ಮಾಯ, ಇಂಕಾ, ಅಜ್ಟೆಕ್, ಚೀನಾ ಹಾಗೂ ಸಿಂಧೂ- ಸರಸ್ವತಿ ನಾಗರಿತೆಗಳಲ್ಲಿ ಹಾವುಗಳ ಆರಾಧನೆ ಕಂಡುಬರುತ್ತದೆ. ಕ್ವಟ್ಝಲ್ಕೊಆಟಲ್ ಎಂಬ ಹೆಸರಿನ ಅಜ್ಟೆಕ್ ನಾಗರಿಕತೆ ಆರಾಧಿಸುತ್ತಿದ್ದ ಹಾವಿಗೆ ಹಾಗೂ ಕುಕುಲ್ಕಾನ್ ಎಂಬ ಮಾಯಾ ನಾಗರಿಕತೆಯ ಆರಾಧನೆಗೆ ಒಳಪಟ್ಟ ರ್ಯಾಟಲ್ ಹಾವುಗಳಿಗೆ ಹಕ್ಕಿಗಳಂತೆ ಗರಿಗಳಿದ್ದವೆಂಬ ಚಿತ್ರಣವಿದೆ! ಈಜಿಪ್ಟ್ ನಾಗರಿಕತೆಯಲ್ಲಿ ವ್ಯಾಜೆಟ್ ಎಂಬ ಸರ್ಪ ದೇವತೆಯು ಸಂತಾನ ರಕ್ಷಣೆ ಹಾಗೂ ಈಜಿಪ್ಟಿನ ರಾಜ ಫೆರೋ ರಕ್ಷಣೆಯ ಕಾರಣಕ್ಕಾಗಿ ಗೌರವಾರ್ಹವಾಗಿತ್ತು. ರೆನೆನುಟೆಟ್ ಭ್ರೂಣ ರಕ್ಷಣೆಯ ಹೊಣೆ ಹೊತ್ತ ನಾಗ ದೇವತೆಯಾಗಿದ್ದು ಪಾತಾಳ ಲೋಕದ ರಕ್ಷಕನೆನೆಸಿದ್ದ ನೆಹೆಬ್ಕಾವ್ ನ ತಾಯಿಯೂ ಹೌದು. ನೆಹೆಬ್ಕಾವ್ ಸೂರ್ಯದೇವ 'ರಾ' ನ ಬಲಶಾಲಿ ಸಹಚರ ಎಂಬ ನಂಬಿಕೆ ಇತ್ತು. ಆಸ್ಟ್ರೇಲಿಯಾದ ನಾಗರಿಕತೆಯಲ್ಲಿ ರೈನ್ಬೋ ಹಾವಿನ ಆರಾಧನೆಯ ಇತಿಹಾಸವಿದೆ. ಹವಾಮಾನದ ನಿಯಂತ್ರಣ ಹಾಗೂ ನೀರು ಬತ್ತದಂತೆ ಕಾಪಾಡುವುದು ಈ ಹಾವಿನ ಶಕ್ತಿಗಳೆನಿಸಿವೆ. ಯೋರ್ಮಂಗಂದ್ರ್ ಎಂಬ ಹಾವು ಸ್ಕ್ಯಾಂಡಿನೇವಿಯಾ ದೇಶಗಳ ಜನರ ನಂಬಿಕೆಯ ಪ್ರಕಾರ ಸಾಗರದಲ್ಲಿ ವಾಸಿಸುವ ಅತಿ ಬಲಶಾಲಿಯಾದ ಭೂಮಿಯನ್ನೇ ಆವರಿಸಿರುವ ಹಾವು! ಚೀನಾದಲ್ಲಿ ಕೆಲವು ಪ್ರಾಂತ್ಯಗಳಲ್ಲಿ ಹಾವುಗಳನ್ನು ನಿಸರ್ಗದ ಅತ್ಯುನ್ನತ ಶಕ್ತಿ ಎಂಬ ಭಾವದಿಂದ ನೋಡಲಾಗುತ್ತದೆ. ಹಾವುಗಳನ್ನು ಸಣ್ಣ ಗಾತ್ರದ ಡ್ರ್ಯಾಗನ್ ಎಂದೇ ಭಾವಿಸಲಾಗುತ್ತದೆ. ಚೀನಾದ ಚಾಂದ್ರಮಾನ ದಿನಚರಿಯ ಏಳನೇ ತಿಂಗಳಿನ ಏಳನೇ ದಿನದಂದು ಫುಜಿಯಾನ್ ಪ್ರಾಂತ್ಯದ ಝಾಂಗು ನಗರದ ಜನರು ಜೀವಂತ ಹಾವುಗಳನ್ನು ಹಿಡಿದು ಮೆರವಣಿಗೆ ನಡೆಸಿ ಹಬ್ಬದ ಆಚರಣೆಯ ನಂತರ ಕಾಡಿಗೆ ಹಿಂದಿರುಗಿಸುವ ಪರಿಪಾಠವಿದೆ! ಮೆಸಪಟೋಮಿಯಾದ ನಾಗರಿಕತೆಯಲ್ಲಿ ನಿಂಜಿಸ್ಝೀಡಾ ಎಂಬ ದೇವರು ನಮ್ಮ ಶಿವನಂತೆ ನಾಗಗಳನ್ನು ಧರಿಸಿದವನು. ಹಾವುಗಳು ಪೊರೆ ಕಳಚಿ ಪುನಃ ತಮ್ಮ ಶಕ್ತಿ ಹೆಚ್ಚಿಸಿಕೊಂಡಂತೆ ಬೆಳೆಯುವುದನ್ನು ನೋಡಿ ಅಲ್ಲಿಯ ಜನರು ಅವುಗಳ ಆರಾಧನೆಗೆ ಮಹತ್ವ ನೀಡಿದರು.

     ಹೆಚ್ಚಿನ ನಾಗರಿಕತೆಗಳಲ್ಲಿ ಹಾವುಗಳನ್ನು ನಮ್ಮ ಸಂತತಿಯ ರಕ್ಷಣೆಗಾಗಿ, ಬಲವರ್ಧನೆಗಾಗಿ, ಅವುಗಳ ನಿಗೂಢ ಶಕ್ತಿಗಾಗಿ ಆರಾಧಿಸುವ ಪದ್ಧತಿಗಳಿದ್ದವು. ಆಫ್ರಿಕಾ ಖಂಡದ ಬೆನಿನ್ ರಿಪಬ್ಲಿಕ್ ಹಾಗೂ ಅದರ ಪಕ್ಕದಲ್ಲಿರುವ ನೈಜೀರಿಯಾ ದೇಶಗಳಲ್ಲಿ ಹೆಬ್ಬಾವುಗಳನ್ನು ಪೂಜಿಸುವ ಸಂಸ್ಕಾರ ಇಂದಿಗೂ ಇದೆ. ಅವುಗಳಿಗಾಗಿ ದೇವಾಲಯವೂ ಇದೆ ಎಂದರೆ ನಮಗೆ ಅಚ್ಚರಿಯಾಗುವುದಿಲ್ಲವೇ...? ಕಾಡಿನಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಅಳಿಸಿ ಶತ್ರುಗಳಿಂದ ರಕ್ಷಿಸುವ ಕಾರಣಕ್ಕೆ ಅವರಿಗೆ ಹೆಬ್ಬಾವು ಅಷ್ಟು ಪೂಜನೀಯ. ಯಾರೂ ಅವುಗಳನ್ನು ಕೊಲ್ಲುವಂತಿಲ್ಲ. ಕೊಂದರೆ ಮರಣ ದಂಡನೆಯ ಕಠಿಣ ಶಿಕ್ಷೆ ತೀರಾ ಇತ್ತೀಚಿನ ವರ್ಷಗಳವರೆಗೂ ಇತ್ತು. ಈಗ ಹಣದ ರೂಪದಲ್ಲಿ ದಂಡ ಕಟ್ಟಿ ಸಂಸ್ಕಾರ ನಡೆಸುವ ಪದ್ಧತಿ ಇದೆ. 
      
      ಹಾವುಗಳನ್ನು ಆರಾಧಿಸುವ ವಿಚಾರವಾಗಿ ಪ್ರತಿ ಬಾರಿ ಈ ಹಬ್ಬ ಬಂದಾಗ ನಡೆಯುವ ಚರ್ಚೆಯೂ ಸ್ವಾರಸ್ಯಕರವಾಗಿರುತ್ತದೆ. ಹಾಲು- ಎಳನೀರು ಚೆಲ್ಲಿ ಹಾಳು ಮಾಡುವ ಬಗೆಗೆ ಕೆಲವರ ಆಕ್ಷೇಪ. ಭಕ್ತರು ತಂದ ಹಾಲು - ಎಳನೀರುಗಳನ್ನು ಇಂದಿನ ಕಾಂಕ್ರೀಟ್ ನಾಗಬನಗಳು ಹೀರಿಕೊಳ್ಳದ ಕಾರಣ ಅವುಗಳನ್ನು ಸಂಗ್ರಹಿಸಿ ಮಿಶ್ರಣಮಾಡಿ ಹಂಚುವ ಹೊಸ ಪರಿಪಾಠದ ಆರಂಭ..! ಇದನ್ನೆಲ್ಲ ನೋಡುವಾಗ ಹಬ್ಬದ ಆಚರಣೆಯ ಹಿನ್ನೆಲೆಯ ಬಗೆಗೆ ನಾವು ಆಳವಾಗಿ ಯೋಚಿಸದೇ ಕೈಗೊಂಡ ಆಧುನಿಕ ಬದಲಾವಣೆಗಳಿಂದ ನಮ್ಮ ಹಿರಿಯರ ದೂರದೃಷ್ಟಿಯ ನಂಬಿಕೆಗಳು ಇಂದಿನ ಜನಾಂಗದೆದುರು ಎಷ್ಟೆಲ್ಲ ಅನಾದರಕ್ಕೆ ಒಳಗಾಗಿವೆ ಎನ್ನಿಸುತ್ತದೆ. 
 
     ಪ್ರಕೃತಿಯ ಆಹಾರ ಸರಪಳಿಯ ಪ್ರಮುಖ ಕೊಂಡಿಯಾಗಿರುವ ಉರಗಗಳ ಮಹತ್ವ ತಿಳಿದಿದ್ದ ಜಗತ್ತಿನ ಎಲ್ಲಾ ಸಂಸ್ಕೃತಿಗಳಲ್ಲಿ ಉರಗಗಳ ಆರಾಧನೆ ನೋಡುವಾಗ ನಾಗರಿಕತೆಗಳ ತಾಯಿಬೇರು ಎಲ್ಲವನ್ನೂ ಬೆಸೆದ ಭಾವ! ಅನಗತ್ಯವಾಗಿ ನಮ್ಮನ್ನು ಕಾಡದ, ಬದಲಿಗೆ ಪರೋಕ್ಷವಾಗಿ ನಮ್ಮ ಆಹಾರವನ್ನು ಬೆಳೆಸಲು - ಉಳಿಸಲು ಸಹಾಯ ಮಾಡುವ ಹಾವುಗಳಿಗೆ ನಾವು ಕೃತಜ್ಞತಾ ರೂಪದಲ್ಲಿ ಗೌರವಪೂರ್ವಕ ಆಹಾರವನ್ನು ಪರೋಕ್ಷವಾಗಿ ಸಲ್ಲಿಸುವ ಆಚರಣೆ ಇದು. ಹಾಗಾಗಿ ಕಾಂಕ್ರೀಟ್ ಬಳಸದ ನಾಗಬನಗಳು ಎಂದರೆ ನೂರಾರು ವರ್ಷಗಳ ಗಿಡಮರಗಳನ್ನು ಹೊತ್ತ ನೈಸರ್ಗಿಕ ಬನಗಳ ರಕ್ಷಣೆ ನಮ್ಮ ಆಯ್ಕೆಯಾಗಿರಲಿ. ಆಧುನೀಕರಣ ನಮ್ಮ ನಾಗಬನಗಳ ಆಚರಣೆಯ ಅರ್ಥವನ್ನೇ ಕೆಡಿಸುತ್ತದೆಂಬ ಎಚ್ಚರ ನಮಗಿರಲಿ. ಅಲ್ಲಿನ ವಾತಾವರಣದಲ್ಲಿ ನೂರಾರು ವರ್ಷ ಆರಾಧಿಸಿದ ನಮ್ಮ ಹಿರಿಯರ ಹೆಜ್ಜೆ ಮೂಡಿದ ಮಣ್ಣಿನ ಒಡನಾಟದ ದಿವ್ಯ ಅನುಭೂತಿಯನ್ನು ಒಂದರೆಕ್ಷಣ ಕಣ್ಣುಮುಚ್ಚಿ ಸಂಸ್ಕಾರದ ತಣ್ಣನೆಯ ನೆರಳಿನಲ್ಲಿ ಅನುಭವಿಸುವ ಸಂತಸ ನಮ್ಮದಾಗಲಿ. ಅರಣ್ಯ ರಕ್ಷಣೆಯಲ್ಲಿ ಬನವೆಂಬ ಪವಿತ್ರ ಸ್ಥಳದ ಪ್ರಾಮುಖ್ಯತೆ ಎಷ್ಟೆಂಬ ಅರಿವು ನಮಗಿರಲಿ. ಅಲ್ಲಿ ಉಳಿದು ಬೆಳೆದ ಮರ-ಗಿಡ-ಬಳ್ಳಿಗಳ ವೈವಿಧ್ಯ ಹಾಗೂ ಹಾವುಗಳ ಜೊತೆಗಿನ ನಮ್ಮ ಒಡನಾಟ ಇನ್ನಷ್ಟು ಪೀಳಿಗೆಗೆ ವಿಸ್ತರಿಸಲಿ. 'ನಾಗರ ಪಂಚಮಿ ನಾಡಿಗೆ ದೊಡ್ಡದು' ಎಂಬ ಕವಿವಾಣಿ ಅನುರಣಿಸುತ್ತಿರಲಿ. ಎಲ್ಲರಿಗೂ ನಾಗರ ಪಂಚಮಿ ಶುಭದಾಯಕವಾಗಲಿ.  
(ವಿವಿಧ ನಾಗರಿಕತೆಗಳ ಮಾಹಿತಿ & ಫೋಟೋ ಕೃಪೆ: ವಿಕಿಪೀಡಿಯ)
........................................ ಚಿತ್ರಾಶ್ರೀ ಕೆ.ಎಸ್. 
ಸಹ ಶಿಕ್ಷಕರು (ಕಲಾ), 
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು, 
ಮಂಗಳೂರು ಉತ್ತರ ವಲಯ. 
ದಕ್ಷಿಣ ಕನ್ನಡ ಜಿಲ್ಲೆ 
Mob : 9449946810
********************************************


ಪ್ರೀತಿಯ ಮಕ್ಕಳೇ, ಹಾವುಗಳ ಬಗೆಗೆ ಹೆಚ್ಚಿನ ಮಾಹಿತಿ ತಿಳಿಯುವ ಆಸಕ್ತಿ ನಿಮಗಿದ್ದರೆ ಉರಗ ರಕ್ಷಕರಾದ ಶ್ರೀ ಗುರುರಾಜ ಸನಿಲ್ ಬರೆದಿರುವ 'ಹಾವು- ನಾವು' ಪುಸ್ತಕ ಓದಬಹುದು. ಅದರಲ್ಲಿ ನಮ್ಮ ಪರಿಸರದ ಬಹುತೇಕ ಎಲ್ಲಾ ಹಾವುಗಳ ಫೋಟೋ ಸಹಿತ ಸ್ಪಷ್ಟ ವಿವರಣೆ ಲಭ್ಯ. ಜ್ಞಾನವಿದ್ದಲ್ಲಿ ಭಯ ಕಾಡುವುದಿಲ್ಲ.

Ads on article

Advertise in articles 1

advertising articles 2

Advertise under the article