-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 76

ಸ್ಫೂರ್ತಿಯ ಮಾತುಗಳು : ಸಂಚಿಕೆ - 76

ಸ್ಫೂರ್ತಿಯ ಮಾತುಗಳು : ಸಂಚಿಕೆ - 76
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                     
      “ಗುರು” ವಿಗೆ ಪೂರ್ಣ ಮತ್ತು ದೊಡ್ಡ ಎಂದು ಅರ್ಥವಿದೆ. ಗಾತ್ರ ಮತ್ತು ಆಕಾರದಲ್ಲಿ ದೊಡ್ಡದೆಂದರ್ಥವಲ್ಲ. ಹಿರಿತನ, ಶ್ರೇಷ್ಠತೆ, ಸ್ಥಾನ ಮಾನ ಮುಂತಾದ ಅರ್ಥದಲ್ಲಿ ದೊಡ್ಡದೆಂದು ಅರಿಯಬೇಕು. ಗುರುವು ಯಾರು ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ದೊರೆಯುವ ಉತ್ತರ, “ಒಂದಕ್ಷರ ಕಲಿಸಿದವನೂ ಗುರು" ಎಂದಲ್ಲವೇ?. ಈ ಉತ್ತರವೇ ಸರಿಯೆಂದಾದರೆ, ವಯಸ್ಸಿನಲ್ಲಿ ನಮಗೆ ಕಿರಿಯರಾದವರೂ ಗುರುಸ್ಥಾನಕ್ಕೆ ಅರ್ಹರಾಗುತ್ತಾರೆ. ಆದುದರಿಂದ “ಗುರು” ಎನ್ನುವಾಗ ವಯೋ ಹಿರಿತನ ಎನ್ನುವುದಕ್ಕಿಂತ ವ್ಯಕ್ತಿತ್ವದ ಹಿರಿಮೆ ಎಂದೆನ್ನುವುದೇ ಸಮಂಜಸವಾಗುತ್ತದೆ. ವಯಸ್ಸಿನಲ್ಲಿ ಕಿರಿಯರೂ ಗುರುಗಳಾಗಬಹುದು, ಕಿರಿತನದಲ್ಲೂ ಹಿರಿಮೆ ಇರುತ್ತದೆನ್ನುವುದಕ್ಕೆ ಪುರಾಣದ ಪ್ರಹ್ಲಾದ, ಧ್ರುವ, ನಚಿಕೇತ ಮುಂತಾದ ಬಾಲಕರೇ ಉದಾಹರಣೆ. ಕೆಲವು ಸಂದರ್ಭಗಳಲ್ಲಿ ಅಮ್ಮ ಅಥವಾ ಅಪ್ಪನಿಗೆ ಮಕ್ಕಳೂ, ಅಣ್ಣ-ಅಕ್ಕನಿಗೆ ತಮ್ಮ ಯಾ ತಂಗಿಯೂ ಗುರುವಾಗಬಹುದು.
       ಮನೆಯೇ ಮೊದಲ ಪಾಠ ಶಾಲೆ ಎನ್ನುವಾಗ ಮನೆಯಲ್ಲಿರುವವರೆಲ್ಲರೂ ಗುರುವಾಗುತ್ತಾರೆ. ಶಾಲಾ ಕಾಲೇಜುಗಳನ್ನು ಸಮಾಜದ ಅಂಗಗಳು ಎನ್ನುವೆವು. ಸಮಾಜ ಎಂದೊಡನೆ ಶಾಲಾ ಕಾಲೇಜುಗಳ ಬೋಧಕರು ಯಾ ಉಪನ್ಯಾಸಕರು ಮಾತ್ರವೇ ಗುರು ಎಂಬ ಮೀಸಲು ಹೇಳಿಕೆ ಸೂಕ್ತವಾಗದು. ಸಮಾಜದಲ್ಲಿ ಗೆಳೆಯರ ಬಳಗ, ಗಣ್ಯರ ಬಳಗ, ಸಮಾಜ ಸುಧಾರಕರ ಬಳಗ... ಹೀಗೆ ಅನೇಕ ಬಳಗಗಳು ನಮಗೆ ಗುರುಗಳಾಗಿ ದೊರೆಯುತ್ತಾರೆ. ವಿದ್ಯಾಲಯಗಳಲ್ಲಿರುವ ಗುರುಗಳು ನಮ್ಮ ಶಿಕ್ಷಣಾವಧಿಯ ಬಹುಭಾಗ ನಮಗೆ ಮಾರ್ಗದರ್ಶನ ನೀಡುತ್ತಾರೆಯಾದುದರಿಂದ ಅವರಿಗೆ ಹೆಚ್ಚು ಮಹತ್ವವನ್ನು ಕೊಡುತ್ತೇವೆ. ಶಿಕ್ಷಣವು ಎಲ್ಲೂ ನಿಲ್ಲುವುದಿಲ್ಲ, ಅದು ನಿರಂತರ ಹರಿಯುವ ಪ್ರವಾಹ. ಆದುದರಿಂದ ನಮ್ಮ ಬದುಕಿನೊಂದಿಗೆ ಶಿಕ್ಷಣವೂ ಪ್ರಯಾಣಿಸುತ್ತಲೇ ಇರುತ್ತದೆ. ಹಾಗಾದುದರಿಂದ ನಮಗೆ ಅಸಂಖ್ಯ ಗುರುಗಳು ನಿರಂತರ ಒದಗುತ್ತಿರುತ್ತಾರೆ. ನಮ್ಮನ್ನು ಹೊರುವ ಭೂಮಿ ತಾಯಿ ಮತ್ತು ಪ್ರಕೃತಿ ಮಾತೆ ನಮಗೆ ಕಲಿಸದ ಪಾಠಗಳಿಲ್ಲ. ಭೂಪ್ರಕೃತಿಯೂ ಗುರುವೇ ನಮಗೆಲ್ಲ.
       ಪುಟ್ಟ ಮಗು ನಗುತ್ತಾ ಇರುತ್ತದೆ. ಅದರ ಮನದೊಳಗೆ ಕಪಟ, ಸ್ವಾರ್ಥ, ನಾಟಕೀಯತೆ ಇಲ್ಲ. ಅದುದರಿಂದ ಮುಗ್ಧತೆಯ ಪಾಠದಲ್ಲಿ ನಮಗೆ ಮಗುವೇ ಗುರು. ಗುರುವೆನ್ನುವುದು ಗೌರವ ಭಾವನೆಯ ಪ್ರತೀಕ. ಗುರುವಿಗೆ ನೀಡುವ ಗೌರವ ಭಗವಂತನಿಗೆ ಮಾಡುವ ಪೂಜೆಗೆ ತುಲ್ಯ. ಗುರು ದಕ್ಷಿಣೆಯೆಂಬ ಸಂಸ್ಕಾರ ಭಾರತೀಯರಲ್ಲಿದೆ. ದಕ್ಷಿಣೆಯೆನ್ನುವುದು ಪ್ರತಿಫಲವಲ್ಲ, ಗೌರವದ ಪ್ರತೀಕ. ಗುರುದಕ್ಷಿಣೆಗೂ ಗಾತ್ರ, ಆಕಾರ ಮತ್ತು ಮಾರುಟ್ಟೆಯ ಮೌಲ್ಯ ಮುಖ್ಯವಾಗದು. ಬಂಗಾರದ ಕಿರೀಟವಾದರೂ, ವಸ್ತ್ರದ ರುಮಾಲಾದರೂ ಸಮಾನ. ಗುರುದಕ್ಷಿಣೆಯಲ್ಲಿ ಸುವರ್ಣ ಪುಷ್ಪವಾದರೂ, ಪ್ರಾಕೃತಿಕ ಪುಷ್ಪವಾದರೂ ಗುಣ ಗೌರವಗಳಲ್ಲಿ ಸಮಾನವಾಗುತ್ತವೆ.
        ಹಸಿವೆ ನೀಗುವ ಅನ್ನದಾತ, ದೇಶ ಕಾಯುವ ಯೋಧ, ಆರೋಗ್ಯ ರಕ್ಷಿಸುವ ವೈದ್ಯ, ಆಹಾರ ವಿತರಿಸುವ ವ್ಯಾಪಾರಿ, ಕಳ್ಳ ಕಾಕರನ್ನು ತಿದ್ದುವ ಪೋಲಿಸ್, ನಾನಾ ಕಾಯಕಗಳನ್ನು ನಡೆಸುವ ಕಾರ್ಮಿಕರೂ ನಮ್ಮ ಬದುಕಿನಲ್ಲಿ ಗುರು ಸಮಾನರಾಗುತ್ತಾರೆ. ಮಠಾಧಿಪತಿಗಳು, ಪೀಠಾಧಿಪತಿಗಳು, ಪುರೋಹಿತರು, ಸಂನ್ಯಾಸಿಗಳು, ಸಾಧು ಸಂತರು, ಹರಿದಾಸರು, ಜ್ಯೋತಿಷಿಗಳೇ ಮುಂತಾದವರನ್ನು ಗುರುವೆಂದು ಅಭಿಮಾನದಿಂದ ಗೌರವಿಸುವ ದೇಶ ಭಾರತ.
          ಸ್ನೇಹಕ್ಕೆ ‘ಗುರು’ ಕಾಗೆ. ಮುದ್ದು ಮಾತಿಗೆ ‘ಗುರು’ ಗಿಳಿ, ಮಧುರ ಧ್ವನಿಗೆ ‘ಗುರು’ ಕೋಗಿಲೆ, ಸೌಂದರ್ಯಕ್ಕೆ ‘ಗುರು’ ಪುಷ್ಪಗಳು, ಸುಗಂಧಕ್ಕೆ ‘ಗುರು’ಗಳನೇಕರು- ಶ್ರೀಗಂಧದಂತಹ ವೃಕ್ಷಗಳು, ಜಾಜಿ, ಮಲ್ಲಿಗೆಯಂತಹ ಕುಸುಮಗಳು, ಕಸ್ತೂರಿಯಂತಹ ಪ್ರಾಣಿಗಳು.... ಎಲ್ಲವೂ ಗುರುವಿನಂತೆ ಮನ್ನಣೆಗೆ ಅರ್ಹವಾಗಿವೆ. ಮರಳಿ ಪ್ರಯತ್ನ ಮಾಡಲು ಕಲಿಸುವ ಜೇಡ, ಶಿಸ್ತಿನ ಸರತಿಯ ಸಾಲಿಗೆ ಇರುವೆ, ವಿಶ್ವಾಸಕ್ಕೆ ನಾಯಿ, ಪರಿಶ್ರಮದ ಜೀವನಕ್ಕೆ ಜೇನು ನೊಣ ಇವೂ ನಮಗೆ “ಗುರು” ಎಂದರೆ ತಪ್ಪಾಗದು. ಕಸವನ್ನು ತಿಂದು ಸತ್ವಶಾಲಿಯಾದ ಹಾಲನ್ನು ಈಯುವ ಹಸು ಮಮತಾಮಯಿಯಾದ ಮಾತೆಯ ಸ್ಥಾನದಲ್ಲಿ ವಿಜೃಂಭಿಸುವ ಶ್ರೇಷ್ಠ ಗುರು.
         ಕೆಲವರು ನಿರ್ದಿಷ್ಟ ಬಣ್ಣದಲ್ಲಿ ಹಿರಿಮೆಯನ್ನು ನೋಡುತ್ತಾರೆ. ಧ್ವಜಗಳನ್ನೂ ಗುರುವಿನಂತೆ ಮಾನ್ಯ ಮಾಡುವವರಿದ್ದೇವೆ. ಜ್ಞಾನದಾತ ಪುಸ್ತಕವನ್ನು ಗುರು ಎಂದು ಹೇಳಲೇ ಬೇಕು. ಸ್ಮಾರಕಗಳು, ದೇವಾಲಯಗಳು, ಮಠ ಮಂದಿರಗಳು, ಮಸೀದಿಗಳು, ಬಸದಿಗಳು, ಚೈತ್ಯಾಲಯಗಳು, ಹೀಗೆ ಎಲ್ಲ ಪ್ರಾರ್ಥನಾಲಯಗಳ ವೀಕ್ಷಣೆಯಿಂದಲೂ ಅಪಾರ ಮತ್ತು ಅನರ್ಘ್ಯ ಜ್ಞಾನ ನಮಗೆ ದೊರೆಯುತ್ತದೆ. ಇವೆಲ್ಲವೂ ನಮ್ಮ ಮಹಾನ್ “ಗುರುಗಳು” ಎಂದರೆ ಒಪ್ಪಲೇಬೇಕು. “ಗುರು”ವನ್ನು ಗೌರವಿಸುವ ಗುರುತರ ವ್ಯಕ್ತಿಗಳಾಗೋಣ. ನಮಸ್ಕಾರ
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 



Ads on article

Advertise in articles 1

advertising articles 2

Advertise under the article