-->
ಇತಿಹಾಸ ಅರಿಯೋಣ…. ಪ್ರಾಚ್ಯ ಪ್ರಜ್ಞೆ ಬೆಳೆಸೋಣ : ಸಂಚಿಕೆ - 02

ಇತಿಹಾಸ ಅರಿಯೋಣ…. ಪ್ರಾಚ್ಯ ಪ್ರಜ್ಞೆ ಬೆಳೆಸೋಣ : ಸಂಚಿಕೆ - 02

ಇತಿಹಾಸ ಅರಿಯೋಣ…. 
ಪ್ರಾಚ್ಯ ಪ್ರಜ್ಞೆ ಬೆಳೆಸೋಣ.
ಸಂಚಿಕೆ - 02
ಲೇಖಕರು : ಮಹೇಶ್ ಕುಮಾರ್. ವಿ. ಕರ್ಕೇರ
ಸಮಾಜವಿಜ್ಞಾನ ಅಧ್ಯಾಪಕರು
ಸರಕಾರಿ ಪದವಿಪೂರ್ವ ಕಾಲೇಜು 
ಪ್ರೌಢಶಾಲಾ ವಿಭಾಗ ಸಿದ್ದಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : 9480763133


       ಪ್ರಿಯ ವಿದ್ಯಾರ್ಥಿಗಳೇ…. ಭಾರತ ಕೇವಲ ಭೂಮಿಯ ಒಂದು ತುಣುಕಲ್ಲ. ಅದೊಂದು ಭವ್ಯ ಸಂಸ್ಕೃತಿ, ಪರಂಪರೆಯ ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಪುಣ್ಯ ಭೂಮಿ. ನಮ್ಮ ನೆಲದ, ನಮ್ಮ ಹಿರಿಯರ ಜ್ಞಾನ, ವಿಜ್ಞಾನ, ಕಲೆ ವಾಸ್ತುಶಿಲ್ಪ ಗಳ ಅದ್ಭುತ ಇತಿಹಾಸ ವನ್ನು ನಾವು ತಿಳಿಯಬೇಕು. ಡಾ.ಬಿ.ಆರ್ ಅಂಬೇಡ್ಕರ್  ಹೇಳಿದಂತೆ, "ಇತಿಹಾಸ ತಿಳಿಯದವ ಇತಿಹಾಸ ಸೃಷ್ಟಿಸಲಾರ.." ಇತಿಹಾಸ ಅರಿಯದವನಿಗೆ ಭವಿಷ್ಯವಿಲ್ಲ.
...... ಮಹೇಶ್ ಕುಮಾರ್. ವಿ. ಕರ್ಕೇರ


                         
        ಮೌಂಟ್ ಕಾರ್ಮೆಲ್ ಬೆಟ್ಟದ ತುದಿಯಿಂದ ಸಿಡಿದ ಗುಂಡು ಮೇಜರ್ ದಳಪತ್ ಸಿಂಗ್ ರ ಎದೆಯನ್ನು ಸೀಳಿಬಿಟ್ಟಿತು. ತನ್ನೆದೆಗೆ ನಾಟಿದ ಗುಂಡು ಸಿಡಿದು ಬಂದ ಬೆಟ್ಟದತ್ತ ದಿಟ್ಟಿಸಿ ನೋಡಿದ ದಳಪತ್ ಸಿಂಗ್ ರ ಕಣ್ಣುಗಳು ಮಂಜಾಗ ತೊಡಗಿತ್ತು. ಬೆಟ್ಟದ ತುಂಬಾ ಟರ್ಕಿ ಸೈನಿಕರನ್ನು ಕಂಡ ದಳಪತ್ ಸಿಂಗ್ ಹತಾಶೆಯ ನಿಟ್ಟುಸಿರು ಚೆಲ್ಲಬೇಕು ಎನ್ನುವಾಗ ಟರ್ಕಿಯ ಸೈನಿಕರ ನಡುವೆ ಕೋಲ್ಮಿಂಚಿನಂತೆ ಗೋಚರಿಸಿತು ಮೈಸೂರಿನ ಯೋಧರ ಗಂಡಭೇರುಂಡ ಧ್ವಜ..!! ಮೌಂಟ್ ಕಾರ್ಮೆಲ್ ಬೆಟ್ಟದ ತುದಿ ತಲುಪಿದ ಮೈಸೂರು ಯೋಧರು ಅಸಾಮಾನ್ಯ ರಣವಿಕ್ರಮ ಮೆರೆಯುತ್ತಾ ಯುದ್ಧದ ಗತಿಯನ್ನೇ ಬದಲಾಯಿಸಿದರು. ಬೆಟ್ಟದ ಮೇಲೆ ಮಷೀನ್ ಗನ್ ಗಳನ್ನು ಸ್ಥಾಪಿಸಿ ಭದ್ರವಾಗಿ ಕೂತಿದ್ದ ಟರ್ಕಿಯ ಸೈನಿಕರ ಮೇಲೆ ಉಲ್ಕಾಪಾತವಾದಂತಿತ್ತು ..! ಬಂಕರುಗಳನ್ನು ಧಂಸ ಮಾಡಿ ಮಷೀನ್ ಗನ್ನುಗಳನ್ನು ಬುಡಮೇಲು ಮಾಡಿ ಟರ್ಕಿಯ ಸೈನಿಕರ ಎದೆಗೆ ಭರ್ಜಿಗಳನ್ನು ನಾಟಿಸಿದ ಮೈಸೂರಿನ ವೀರರ ಅಶ್ವಪಡೆ ಬೆಟ್ಟ ಇಳಿದು ಹೈಫಾ ಬಂದರಿನ ಕಡೆಗೆ ನಾಗಲೋಟದಿಂದ ದೌಡಾಯಿಸಿತ್ತು. ಗಂಭೀರ ಸ್ಥಿತಿಯಲ್ಲಿದ್ದ ದಳಪತ್ ಸಿಂಗ್ ಈ ಅನಿರೀಕ್ಷಿತ ಬೆಳವಣಿಗೆಯನ್ನು ಕಣ್ತುಂಬಿಕೊಂಡು ಕೊನೆ ಯುಸಿರೆಳೆದರು.
        ಕ್ಯಾಪ್ಟನ್ ಅಮನ್ ಸಿಂಗ್ ಜೋಧಾ ಜೋಧಪುರದ ಸೈನ್ಯವನ್ನು ಸಜ್ಜುಗೊಳಿಸಿ ಹೈಫಾ ಬಂದರಿನತ್ತ ಯಶಸ್ವಿಯಾಗಿ ನುಗ್ಗಿದರು. ಮಿಂಚಿನ ವೇಗದಲ್ಲಿ ನುಗ್ಗಿ ಟರ್ಕಿ ಸೈನಿಕರ ಎದೆಗೆ ಈಟಿಯನ್ನು ನಾಟಿಸಿದ ನಮ್ಮ ಯೋಧರ ವೇಗಕ್ಕೆ ನಡುಗಿದ ಟರ್ಕಿಯ ಸೈನ್ಯ ದಿಕ್ಕಾಪಾಲಾಗಿ ಓಡಿಹೋಗಿತ್ತು. ಜಗತ್ತಿನ ಯುದ್ಧ ಇತಿಹಾಸದ ಕಟ್ಟ ಕಡೆಯ ಈಟಿ ಹಿಡಿದು ಕುದುರೆಗಳ ಮೇಲೆ ಕುಳಿತು ಹೋರಾಡಿದ ಯುದ್ಧದಲ್ಲಿ ಭಾರತೀಯ ಯೋಧರು ಸುವರ್ಣ ಇತಿಹಾಸ ಬರೆಯಲು ಹೊರಟಿದ್ದರು..! ಒಂದೇ ಗಂಟೆಯಲ್ಲಿ 'ಹೈಫಾ ಬಂದರು' ನಗರ ನಮ್ಮ ಯೋಧರ ಪಾಲಾಯಿತು…!!

        ಇತಿಹಾಸದ ಪುಟಗಳೆಂದರೆ ಅದು ರಣರೋಚಕ ಕದನಗಳ ಸರಮಾಲೆ. ಆದರೂ  ತರೈನ್, ಪಾಣಿಪತ್, ಪ್ಲಾಸಿ, ಬಕ್ಸಾರ್, … ಹೀಗೆ ನಮ್ಮ ಹಿರಿಯರ ಸೋಲಿನ ಸರಮಾಲೆ ಯ ಕದನಗಳೇ ಪಠ್ಯಗಳಲ್ಲಿ ಕಣ್ಣಿಗೆ ರಾಚುವಾಗ ನಮ್ಮ ಹಿರಿಯರ ಗೆಲುವಿನ ಸಾಹಸಗಾಥೆ ಗಳಿಗಾಗಿ ಮನ ತಡಕಾಡುವುದು ಸಹಜ.
      ಪ್ರಿಯ ವಿದ್ಯಾರ್ಥಿಗಳೇ.. ಭಾರತೀಯರ ನರನಾಡಿಗಳಲ್ಲಿ ಮಿಂಚು ಹರಿಸುವ ಅದೊಂದು ಕದನ..! ತಮ್ಮದಲ್ಲದ ನೆಲದಲ್ಲಿ, ಗುಂಡಿನ ಸುರಿಮಳೆ ಗೈಯ್ಯುವ ಮಶೀನ್ ಗನ್ ಗಳ ಎದುರು ಈಟಿ ಹಿಡಿದು ಅಸಾಧ್ಯವನ್ನು ಸಾಧ್ಯವಾಗಿಸಿದ ರಣರೋಚಕ ಕದನದ ಬಗ್ಗೆ ಕೇಳಿದ್ದೀರಾ..?!!

        "BATTLE OF HAIFA" …!! ಹೌದು.. ನಂಬಲೇಬೇಕು..! ಕುದುರೆಗಳ ಮೇಲೆ ಕುಳಿತು ಹೋರಾಡಿದ ಜಗತ್ತಿನ ಕೊನೆಯ ಯುದ್ಧವಿದು..! ಮಧ್ಯ ಪೂರ್ವದಲ್ಲಿ 600 ವರ್ಷಗಳ ಕಾಲ ಮೆರೆದಿದ್ದ ಟರ್ಕಿ ಸಾಮ್ರಾಜ್ಯದ ಅಡಿಗಲ್ಲನ್ನು ಭಾರತೀಯ ಯೋಧರು ಜಾರಿಸಿದ ರಣರೋಚಕ ಕದನವೇ ಹೈಫಾ ಕದನ..!! ಕೇವಲ ಈಟಿ, ಖಡ್ಗಗಳ ಮೂಲಕ ಅತ್ಯಾಧುನಿಕ ಮೆಷಿನ್ಗನ್ನು, ಟ್ಯಾಂಕುಗಳನ್ನು ಕುದುರೆ ಸವಾರ ಯೋಧರು ಬುಡ ಮೇಲಾಗಿಸಿ ಕ್ಷಣಾರ್ಧದಲ್ಲಿ ಹಿಮ್ಮೆಟ್ಟಿಸಿದ ಕದನವೇ ಹೈಫಾ ಕದನ.!
       1500 ಟರ್ಕಿ ಯೋಧರನ್ನು ಕೇವಲ 400 ಭಾರತೀಯ ಲ್ಯಾನ್ಸರ್ ಗಳು ಮಿಂಚಿನ ಧಾಳಿಯ ಮೂಲಕ ಕಂಗೆಡಿಸಿ, ಟರ್ಕಿ ಸೈನಿಕರು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡುವಂತೆ ಮಾಡಿದ ಕದನವೇ ಹೈಫಾ ಕದನ..!!
      ಅಷ್ಟಕ್ಕೂ ಏನಿದು ಹೈಫಾ..? ಕುತೂಹಲ ಮೂಡಿರಬೇಕಲ್ಲವೇ? ಮೆಡಿಟರೇನಿಯನ್ ಕಡೆಯಿಂದ ಟರ್ಕಿ ಸಾಮ್ರಾಜ್ಯಕ್ಕೆ ಬರುವವರ ಹೆಬ್ಬಾಗಿಲೇ 'ಹೈಫಾ'…

        ಮೊದಲ ಮಹಾಯುದ್ಧದ ಸಂದರ್ಭವದು. ಎಲ್ಲಾ ದಿಕ್ಕುಗಳಿಂದ ಟರ್ಕಿಯನ್ನು ಕಟ್ಟಿ ಹಾಕಿದರೂ ಹೈಫಾ ಬಂದರನ್ನು ವಶಪಡಿಸಿಕೊಳ್ಳುವುದು ಬ್ರಿಟಿಷರಿಗೆ ಸಾಧ್ಯವಾಗಲಿಲ್ಲ, ಸಾಧ್ಯವೂ ಇರಲಿಲ್ಲ.! ಒಂದು ದಿಕ್ಕಿಗೆ ಸಮುದ್ರ. ಮೂರು ದಿಕ್ಕುಗಳಲ್ಲಿ ಅಭೇಧ್ಯವಾದ ಪರ್ವತಗಳ ಸಾಲು. 1500 ಮೀಟರ್ ಎತ್ತರದ ಮೌಂಟ್ ಕಾರ್ಮೆಲ್ ಬೆಟ್ಟ. ಬೆಟ್ಟದ ತುದಿಯಲ್ಲಿ ಬಂಕರು ಗಳನ್ನು ತೋಡಿ ಮಷೀನ್ಗನ್ನುಗಳೊಂದಿಗೆ ಕಾವಲು ಕಾಯುತ್ತಿದ್ದ ಟರ್ಕಿ ಯೋಧರು. ಎದುರುಗಡೆಯ ಇನ್ನೊಂದು ಸಣ್ಣ ಗುಡ್ಡದ ಮೇಲೂ ಮಷೀನ್ ಗನ್ನುಗಳೊಂದಿಗೆ ನೂರಾರು ಸೈನಿಕರು. ಇವೆರಡರ ನಡುವೆ ಹೈಫಾ ಬಂದರಿಗೆ ಹೋಗುವ ಮುಖ್ಯ ರಸ್ತೆ..! ಯಾವನಾದರೂ ಈ ರಸ್ತೆಗೆ ಕಾಲಿಟ್ಟರೂ ಗುಡ್ಡದ ತುದಿಯಿಂದ ತೂರಿ ಬರುವ ಗುಂಡು ಅವನೆದೆಯನ್ನು ಸೀಳುವುದು ಖಚಿತ! ಇಂತಹ ಭದ್ರಕೋಟೆ ಹೈಫಾ ಮೇಲೆ ದಾಳಿ ನಡೆಸುವ ಎದೆಗಾರಿಕೆ ಯಾರಿಗಿರಬಹುದು ಹೇಳಿ? ಅದ್ಭುತ ರಣತಂತ್ರದ ಜೊತೆಗೆ ಶತ್ರುವಿಗೆ ರೆಪ್ಪೆ ಮಿಟುಕಿಸಲೂ ಅವಕಾಶ ನೀಡದ ಮಿಂಚಿನ ವೇಗದ ದಾಳಿಯಿಂದ ಮಾತ್ರ ಹೈಫಾವನ್ನು ತಲುಪಬಹುದಿತ್ತು. ಇಂತಹ ಕದನ ಕಲಿಗಳು ಯಾರಿದ್ದಾರೆ ಎಂದು ಯೋಚಿಸಿದ ಬ್ರಿಟಿಷ್ ಅಧಿಕಾರಿಗಳ ಕಣ್ಣಿಗೆ ಬಿದ್ದವರು ಭಾರತೀಯ ಅಶ್ವದಳದ ಯೋಧರು!!

         ಬ್ರಿಟಿಷ್ ಭಾರತದ 15ನೇ ಬ್ರಿಗೇಡ್ ನ ಯೋಧರಿಗೆ ಗುಡ್ಡಗಾಡು ಯುದ್ಧದಲ್ಲಿ ವಿಶೇಷ ಪರಿಣತಿಯಿತ್ತು. ಜೋಧಪುರದ ಅಶ್ವದಳ ಮತ್ತು ಮೈಸೂರು ಲ್ಯಾನ್ಸರ್ ಗಳನ್ನು ಹೈಫಾ ಚಕ್ರವ್ಯೂಹವನ್ನು ಭೇದಿಸಲು ಆಯ್ಕೆ ಮಾಡಲಾಯಿತು. ಜೋಧಪುರ ಅಶ್ವದಳದ ಮುಖ್ಯಸ್ಥ 'ಮೇಜರ್ ದಳಪತ್ ಸಿಂಗ್' ಅವರಿಗೆ ಧಾಳಿಯ ಪ್ರಧಾನ ಜವಾಬ್ದಾರಿ ನೀಡಲಾಗಿತ್ತು.

          ಮೇಜರ್ ದಳಪತ್ ಸಿಂಗ್..!        ಹೈಫಾ ಚಕ್ರವ್ಯೂಹ ಬೇಧಿಸಲು ಆದ್ಭುತ ವ್ಯೂಹ ಹೆಣೆದ 'ದಳಪತಿ '.. "Hero of haifa battle" ಎಂದೇ ಪ್ರಸಿದ್ದರಾದವರು. ಮೈಸೂರು ಲ್ಯಾನ್ಸರ್ ಗಳು ಮೌಂಟ್ ಕಾರ್ಮೆಲ್ ಬೆಟ್ಟವನ್ನು ಹಿಂಭಾಗದಿಂದ ಹತ್ತಿ ಟರ್ಕಿ ಸೈನಿಕರ ಸದೆ ಬಡಿಯಬೇಕು. ಜೋಧಪುರದ ಯೋಧರು ಕುರುಚಲು ಕಾಡಿನ ಮೂಲಕ ಕಿಶೋನ್ ನದಿಯ ನ್ನು ದಾಟಿ ಹೈಫಾ ಕಡೆಗೆ ನುಗ್ಗಬೇಕು. ಯೋಜನೆಯೇನೋ ತಯಾರಾಯಿತು. ಅತ್ಯಾಧುನಿಕ ಮಷೀನ್ ಗನ್ ಟ್ಯಾಂಕುಗಳ ಎದುರು, ಈಟಿಗಳನ್ನು ಹಿಡಿದ ಅಶ್ವ ದಳವೊಂದು ಹಿಮ್ಮೆಟ್ಟಿಸುವ ಯೋಜನೆ ಯಾವ ರೀತಿಯಲ್ಲೂ ಸಮಬಲದ ಹೋರಾಟವಾಗಿರಲಿಲ್ಲ.

         1500 ಟರ್ಕಿ ಯೋಧರನ್ನು ಕೇವಲ 400 ಭಾರತೀಯರು ಗೆಲ್ಲುತ್ತಾರೆಂಬ ಕನಸೂ ನಂಬಲು ಕಷ್ಟಕರವಾಗಿತ್ತು. 1918ರ ಸಪ್ಟೆಂಬರ್ 23ರ ಬೆಳಗಿನ ಹೊತ್ತದು..! ಶಿಬಿರಗಳಲ್ಲಿ ತಮ್ಮ ಆಯುಧಗಳನ್ನು ಪೂಜಿಸಿ ಹೊರಟ ಮೈಸೂರಿನ ಯೋಧರು 60 ಡಿಗ್ರಿಯಷ್ಟು ಕಡಿದಾದ ಬೆಟ್ಟವನ್ನು ಹತ್ತತೊಡಗಿದರು. ಜಾರುತ್ತಿದ್ದ ಮಣ್ಣು, ಉರುಳುತ್ತಿದ್ದ ಕಲ್ಲುಗಳು.. ಕುದುರೆಗಳು ಉರುಳಿ ಬಿದ್ದರೂ ಕಂಗೆಡಲಿಲ್ಲ ನಮ್ಮ ವೀರಪಡೆ..! ಆದರೆ ನಿಗದಿತ ಸಮಯದಲ್ಲಿ ಬೆಟ್ಟ ದ ತುದಿಯನ್ನು ತಲುಪಲಾಗಲಿಲ್ಲ. ಇತ್ತ ಕಿಶೋನ್ ನದಿಯ ಪಕ್ಕದಲ್ಲಿ ಮೌಂಟ್ ಕಾರ್ಮೆಲ್ ಬೆಟ್ಟದ ತುದಿಯತ್ತ ದೃಷ್ಟಿ ನೆಟ್ಟು ಮೈಸೂರು ಪಡೆಯ ಸೂಚನೆಗೆ ಕಾದು ಕುಳಿತಿದ್ದ ಜೋಧಪುರದ ಪಡೆ ಗೊಂದಲಕ್ಕೆ ಬಿತ್ತು. ಯೋಜನೆಯಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳದ ದಳಪತ್ ಸಿಂಗ್ ತಾನೇ ಮುಂದಾಗಿ ಕುದುರೆಯನ್ನು ಕಿಶೋನ್ ನದಿಗೆ ಧುಮುಕಿಸಿದರು. ಮೌಂಟ್ ಕಾರ್ಮೆಲ್ ಬೆಟ್ಟದಿಂದ ಮಿಷನ್ ಗನ್ನುಗಳ ಭೋರ್ಗರೆತಕ್ಕೆ ಹಲವು ಕುದುರೆಗಳ ಕಾಲುಗಳು ಕತ್ತರಿಸಿ ಹೋದವು. ಇಕ್ಕೆಲಗಳಿಂಧ ಸಿಡಿಯುತ್ತಿದ್ದ ಗುಂಡಿನ ಸುರಿಮಳೆ ಗೆ ಜೋಧಪುರದ ಅಶ್ವದಳ ಹಿಂದೆ ಸರಿಯಬೇಕಾಯಿತು. ದಳಪತ್ ಸಿಂಗ್ ರ ಎದೆಯನ್ನು ಸೀಳಿದ ಗುಂಡು ರಜಪೂತ ಕ್ಷಾತ್ರ ರಕ್ತವನ್ನು ಕೆರಳಿಸಿತ್ತು. ಆಗಲೇ ಮೌಂಟ್ ಕಾರ್ಮೆಲ್ ಬೆಟ್ಟದ ತುದಿಯಲ್ಲಿ ಕಾಣಿಸಿಕೊಂಡಿದ್ದು ಮೈಸೂರಿನ ಗಂಡಭೇರುಂಡ ಧ್ವಜ..!! ಕೇವಲ ಒಂದೇ ಘಂಟೆಯಲ್ಲಿ ಹೈಫಾ ಚಕ್ರವ್ಯೂಹವನ್ನು ಭೇದಿಸಿದ ಭಾರತೀಯ ಯೋಧರನ್ನು ಅಲ್ಲಿನ ಬಹಾವೀ ಸಮುದಾಯ ಅದ್ದೂರಿ ಮೆರವಣಿಗೆಯ ಮೂಲಕ ಸ್ವಾಗತಿಸಿತ್ತು. 
        ಹೈಫಾ ಇಂದು ಇಸ್ರೇಲಿನ ಪ್ರಮುಖ ಬಂದರು ನಗರ. ಪ್ರತೀ ವರ್ಷ ಸೆಪ್ಟೆಂಬರ್ 23ರಂದು ತನ್ನ ನಾಡಿಗಾಗಿ ಪ್ರಾಣ ತ್ಯಾಗ ಮಾಡಿದ ಭಾರತೀಯರನ್ನು ಇಸ್ರೇಲ್ 'ಹೈಫಾ ದಿನ' ವೆಂದು ಸ್ಮರಿಸುತ್ತದೆ.

       ಹೈಫಾ ಕದನದ ನೂರನೇ ವರ್ಷಾಚರಣೆಯ ಸಂದರ್ಭದಲ್ಲಿ 2018 ಸಪ್ಟಂಬರ್ 23ರಂದು ಭಾರತ ಇಸ್ರೇಲ್ ದೇಶಗಳು ಹೈಫಾ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೈಫಾ ನಗರದ ಮೇಯರ್ ಯೋನಾ ಯಹಾವ್ ಆಡಿದ ಮಾತುಗಳು ಸ್ಮರಣೀಯ. "ಮೇಜರ್ ದಳಪತ್ ಸಿಂಗ್ ಕೇವಲ ನನ್ನ ನಗರದ ಚರಿತ್ರೆ ಯನ್ನು ಮಾತ್ರ ಬದಲಿಸಿದ್ದಲ್ಲಾ… ಇಡೀ ಮಧ್ಯ ಪೂರ್ವದ ಚರಿತ್ರೆ ಯ ಬದಲಾವಣೆ ಗೆ ಕಾರಣರಾದರು. ಈ ಮಹಾನ್ ಭಾರತೀಯ ಕದನ ಕಲಿಗಳ ಸಾಹಸಗಾಥೆ ಯನ್ನು ನಮ್ಮ ನಗರದ ಯುವಪೀಳಿಗೆ ಓದಬೇಕೆಂದು ಪಠ್ಯ ಪುಸ್ತಕವನ್ನೇ ಬದಲಿಸಿ ಹೈಫಾ ಕದನದ ರೋಚಕ ಅಧ್ಯಾಯವನ್ನು ಸೇರಿಸಿದ್ದೇವೆ." ನಿಜಕ್ಕೂ ಹೆಮ್ಮೆ ಎನಿಸುತ್ತದೆ ನಮ್ಮ ಹಿರಿಯರ ಯಶೋಗಾಥೆ.. ಅಲ್ಲವೇ ಮಕ್ಕಳೇ….?
       ದೆಹಲಿ ಯ 'ತೀನ್ ಮೂರ್ತಿ ಸ್ಮಾರಕ'.. ಬಹುತೇಕರು ಹೆಸರೇ ಕೇಳಿರಲಿಕ್ಕಿಲ್ಲ ಅಲ್ಲವೇ..? ಹೈಫಾ ಕದನ ಕಲಿಗಳ ನೆನಪು ಅಮರವಾಗಿರಬೇಕೆಂದು ದೆಹಲಿಯಲ್ಲಿ ತೀನ್ ಮೂರ್ತಿ ಸ್ಮಾರಕ ಮತ್ತು ತೀನ್ ಮೂರ್ತಿ ಭವನ ನಿರ್ಮಿಸಲಾಯಿತು.

       ಕೈಯಲ್ಲಿ ಈಟಿ ಹಿಡಿದು ನಿಂತ ಮೂವರು ಯೋಧರು ಜೋಧಪುರ, ಮೈಸೂರು, ಹೈದರಾಬಾದ್ ಯೋಧರನ್ನು ಪ್ರತಿನಿಧಿಸುತ್ತಾರೆ. 

      ಈ ಸ್ಮಾರಕದ ಹಿಂದಿನ ಮೈ ನವಿರೇಳಿಸುವ ರೋಚಕ ಸಾಹಸ ಗಾಥೆಯನ್ನು ಪಠ್ಯ ಪುಸ್ತಕಗಳಲ್ಲಿ ಓದಲು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರೆಗೆ ಕಾಯಬೇಕಾಯಿತು. ಪ್ರಿಯ ವಿದ್ಯಾರ್ಥಿಗಳೇ "ತೀನ್ ಮೂರ್ತಿ ಹೈಫಾ ಚೌಕ" ದ ಹಿಂದಿನ ರಣ ರೋಚಕ ಕಥೆಯನ್ನು ನಿಮ್ಮ ಮುಂದೆ ತೆರೆದಿಡಲು ಪ್ರೇರಣೆಯಾಗಿದ್ದು ನನ್ನ ಅಜ್ಜ ..!! ಹೌದು.. ನನ್ನ ಅಜ್ಜ ದಿ.ಸೋಮಯ್ಯ ಪೂಜಾರಿಯವರು ಹೈದರಾಬಾದ್ ರೆಜಿಮೆಂಟಿನ ಯೋಧನಾಗಿ ಒಂದನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದರು ಎಂಬ ವಿಚಾರವನ್ನು ನನ್ನ ತಂದೆಯವರಿಂದ ಕೇಳಿದಾಗ ಹೆಮ್ಮೆ ಎನಿಸಿತ್ತು. ಸಮಾಜ ವಿಜ್ಞಾನ ಶಿಕ್ಷಕನಾಗಿ ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಹೈಫಾ ಕದನದ ಮಾಹಿತಿಯನ್ನು ಕಂಡಾಗ ಚರಿತ್ರೆಯನ್ನು ಹುಡುಕುವ ಹಂಬಲ ಉಂಟಾಯಿತು.  
        ಪ್ರಿಯ ವಿದ್ಯಾರ್ಥಿ ಮಿತ್ರರೇ…. ಇತಿಹಾಸ ಅಧ್ಯಯನ ಕೇವಲ ಪರೀಕ್ಷೆ ಗಳಲ್ಲಿ ಅಂಕ ಗಳಿಕೆಗೆ ಸೀಮಿತವಾಗಬಾರದು. ಇತಿಹಾಸ ಅಧ್ಯಯನದ ಮೂಲ ಆಶಯ ಈಡೇರುವುದು ನಮ್ಮ ನೆಲದ, ನಮ್ಮ ಮನೆಯ ಗತಕಾಲದ ಘಟನೆಗಳನ್ನು ಹುಡುಕುವ ಸಂಶೋಧನಾ ಪ್ರವೃತ್ತಿ ನಮ್ಮಲ್ಲಿ ಅಂಕುರಿಸಿದಾಗ. ದೇಶದ ಇತಿಹಾಸವನ್ನು ತಿಳಿಯುತ್ತಾ ನಮ್ಮ ಕುಟುಂಬದ ಇತಿಹಾಸವನ್ನು ಅರಿಯುತ್ತಾ ದೇಶಾಭಿಮಾನ ವನ್ನು ಬಿತ್ತುತ್ತಾ ಹಿರಿಯರ ಸದಾಭಿಮಾನದ ಕಿರಿಯರು ನಾವಾಗೋಣ ಅಲ್ಲವೇ..?
       ಇನ್ನೊಂದು ರೋಚಕ ಐತಿಹಾಸಿಕ ವಿಚಾರದೊಂದಿಗೆ ಮತ್ತೆ ಭೇಟಿಯಾಗೋಣ.. ಎಲ್ಲಾ ವಿದ್ಯಾರ್ಥಿಮಿತ್ರರಿಗೂ ಸ್ವಾತಂತ್ರ್ಯ ದಿನಾಚರಣೆ ಯ ಶುಭಾಶಯಗಳು.
"ಸರ್ವೇ ಜನಾ: ಸುಖಿನೋ ಭವಂತು."

ಕೃಪೆ: 
▪️'ಯಹೂದಿ' ಕೃತಿ: ಶ್ರೀಕಾಂತ್ ಶೆಟ್ಟಿ.
▪️ವಿಕಿಪೀಡಿಯ.
▪️ವಿಕಿಮೀಡಿಯ
▪️ಯೂಟ್ಯೂಬ್ 
ಚಿತ್ರ ಕೃಪೆ: YouTube
…..................ಮಹೇಶ್ ಕುಮಾರ್. ವಿ. ಕರ್ಕೇರ
ಸಮಾಜವಿಜ್ಞಾನ ಅಧ್ಯಾಪಕರು
ಸರಕಾರಿ ಪದವಿಪೂರ್ವ ಕಾಲೇಜು 
ಪ್ರೌಢಶಾಲಾ ವಿಭಾಗ ಸಿದ್ದಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : 9480763133
*******************************************
Ads on article

Advertise in articles 1

advertising articles 2

Advertise under the article