-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 75

ಸ್ಫೂರ್ತಿಯ ಮಾತುಗಳು : ಸಂಚಿಕೆ - 75

ಸ್ಫೂರ್ತಿಯ ಮಾತುಗಳು : ಸಂಚಿಕೆ - 75
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                     
     ಭಾಷಾ ಕಲಿಕೆ ಮತ್ತು ಜ್ಞಾನ ವರ್ಧನೆಯಲ್ಲಿ ನಾಲ್ಕು ಸಂಗತಿಗಳು ಪ್ರಮುಖವಾಗಿವೆ. ಈ ನಾಲ್ಕು ಸಂಗತಿಗಳೇ ಭಾಷಾ ಕಲಿಕೆಯ ಹಂತ ಮತ್ತು ಗುರಿಗಳೂ ಆಗಿವೆ ಎಂಬುದು ವಿಶೇಷ. ಆಂಗ್ಲ ಅಕ್ಷರಗಳೊಡನೆ ವಿವರಣೆ ನೀಡುವುದಾದರೆ ಅವು LSRW. ಎಲ್ ಎಂದರೆ ಆಲಿಸುವಿಕೆ, ಎಸ್ ಎಂದರೆ ಮಾತನಾಡುವುದು, ಆರ್ ಎಂದರೆ ಓದು ಮತ್ತು ಡಬ್ಲ್ಯು ಎಂದರೆ ಬರವಣಿಗೆ. ಮಗು ಯಾವುದೇ ಭಾಷೆಯನ್ನಾದರೂ ಆಲಿಸಿಯೇ ಕಲಿಯುತ್ತದೆ. ಹೆತ್ತವರ, ಮನೆಯವರ, ನೆರೆಯವರ ಮಾತುಗಳನ್ನು ಆಲಿಸಿ, ಸಂದರ್ಭೋಚಿತವಾಗಿ ನೀಡುವ ಚಿತ್ರಗಳ ವೀಕ್ಷಣೆ ಮಗುವಿನಲ್ಲಿ ಮಾತುಗಳನ್ನು ಬಲಗೊಳಿಸುತ್ತದೆ. ತರಗತಿ ಒಂದರಲ್ಲೂ ಭಾಷಾ ಕಲಿಕೆಗೆ ಮೊದಲ ಸೂತ್ರ ಆಲಿಸುವಿಕೆ ಮತ್ತು ವೀಕ್ಷಿಸುವಿಕೆ. ನಂತರದಲ್ಲಿ ಆ ಮಗುವು ಆಲಿಸಿದ ಭಾಷೆಯಲ್ಲಿ ಮಾತು ಆರಂಭಿಸಿ ಮಾತನಾಡುವುದರಲ್ಲಿ ಪ್ರಬುದ್ಧತೆಯತ್ತ ಸಾಗುತ್ತದೆ. ನಂತರದಲ್ಲಿ ಅಕ್ಷರ ಕಲಿಕೆಯೂ ಆಲಿಸುವಿಕೆ, ವೀಕ್ಷಿಸುವಿಕೆ ಮತ್ತು ಕೈತಿರುಗಿಸುವ ಪ್ರಯತ್ನದೊಂದಿಗೆ ಬರವಣಿಗೆ ಸಿದ್ಧಿಯಾಗುತ್ತಾ ಜೊತೆ ಜೊತೆಗೆ ಅನುಕರಣಾ ಓದು ಸ್ವತಂತ್ರ ಓದುಗಳ ಅಭ್ಯಾಸದೊಂದಿಗೆ ಮಗು ಭಾಷಾ ಪ್ರಭುತ್ವ ಪಡೆಯುತ್ತದೆ.
        ಭಾಷಾ ಪ್ರಭುತ್ವವು ಜ್ಞಾನವರ್ಧನೆಗೆ ಪೂರಕವಾಗುತ್ತದೆ. ಭಾಷಾ ಸಾಹಿತ್ಯ ಮತ್ತು ವಿಷಯ ಪಾಂಡಿತ್ಯದ ವಿಕಸನಕ್ಕೆ ನಿರಂತರ ಓದು, ಆಲಿಸುವಿಕೆ ಮತ್ತು ಬರವಣಿಗೆಗಳ ಅನುಸರಣೆ ಬೇಕಾಗುತ್ತದೆ. ಪ್ರಾಜ್ಞ ಭಾಷಣಗಳ ಆಲಿಸುವಿಕೆ, ಪ್ರಬುದ್ಧ ಸಾಹಿತ್ಯದ ಓದು, ವೇದಿಕೆಯಲ್ಲಿ ನೀಡುವ ಪ್ರವಚನೋಪನ್ಯಾಸಗಳು ನಮ್ಮನ್ನು ಸಾಹಿತ್ಯ ಸ್ವರಚಕರನ್ನಾಗಿ ಬೆಳೆಸಲು, ಸಾಹಿತ್ಯದ ಸುಗಂಧದೊಂದಿಗೆ ವಾಙ್ಮಯಲೋಕದಲ್ಲಿ ಔನ್ನತ್ಯ ಗಳಿಸಲು ಸಾಧ್ಯವಾಗುತ್ತದೆ. ಓದದ ಬಾಯಿ ಬಿಲದ ಬಾಯಿ ಎಂಬ ಉಕ್ತಿಯೊಂದಿದೆ. ಹಾಗೆಯೇ ಭಾಷಾ ಸೊಗಡನ್ನು ಆಲಿಸದ ಕಿವಿಯೂ ಬಿಲದ ಬಾಯಿಯೇ ಎನ್ನಬಹುದು. ಜ್ಞಾನ ಗ್ರಹಣದಲ್ಲಿ ಓದು ಮತ್ತು ಆಲಿಸುವಿಕೆಗಳು ಪ್ರಮುಖ ಘಟ್ಟ. ಜಾಲತಾಣದ ಯುಗದಲ್ಲಿ ಓದಿಗೆ ಅಸಂಖ್ಯ ಸರಕುಗಳು ಬೇರೆ ಬೇರೆ ಮಾಧ್ಯಮಗಳಲ್ಲಿ ದೊರೆಯುತ್ತವೆ. ಆದರೆ ಪುಸ್ತಕ ಓದಿನಲ್ಲಿ ನಮಗೆ ಬೇಕಾದ ಜ್ಞಾನ ಪಡೆಯಲು ಸಾಕಷ್ಟು ಆಯ್ಕೆಗಳಿವೆ. ಜಾಲ ತಾಣದ ಸಾಹಿತ್ಯ ಪ್ರಸರಣದಲ್ಲಿ ಈ ಆಯ್ಕೆಗೆ ಅವಕಾಶ ವಿರಳ. ಫೇಸ್ ಬುಕ್, ವಾಟ್ಸಾಪ್ ಸಾಹಿತ್ಯಗಳ ಓದು ಕಣ್ಣಿಗೂ ತ್ರಾಸದಾಯಕ, ಜೊತೆಗೆ ಅವುಗಳ ವಿಕಿರಣಗಳು ಆರೋಗ್ಯಕ್ಕೂ ಮಾರಕವಾಗುತ್ತವೆ. ಇಂದು ಓದಲು ಅವಕಾಶಗಳು ಹೇರಳವಿವೆ. ಗ್ರಾಮ ಪಂಚಾಯತುಗಳಲ್ಲಿ ಉತ್ತಮ ಗ್ರಂಥಾಲಯಗಳಿವೆ. ಹೆಚ್ಚಿನ ಬಸ್ ಸ್ಟಾಪ್ ಗಳಲ್ಲಿ ಓದುವ ಗೂಡುಗಳಿರುತ್ತವೆ. ಶಾಲೆಗಳಲ್ಲೂ ಉತ್ತಮ ಪುಸ್ತಕಗಳಿರುವ ಗ್ರಂಥಾಲಯಗಳಿವೆ. ಓದುವ ಮನಸ್ಸು ಬಹಳ ಅಗತ್ಯ.
       ಕೇವಲ ಓದುವಿಕೆಯಿಂದ ಜ್ಞಾನವರ್ಧನೆಯಾಗದು. ಓದುವಿಕೆಯಲ್ಲಿ ತಲ್ಲೀನತೆಯಿದ್ದರೆ ಓದು ಪರಿಣಾಮಕಾರಿಯಾಗುತ್ತದೆ. ತಲ್ಲೀನತೆ ಸಿಗಲು ಪ್ರಶಾಂತ ವಾತಾವರಣ ಮತ್ತು ಪ್ರಶಾಂತ ಮನಸ್ಸು ಬೇಕಾಗುತ್ತದೆ. ಮನಸ್ಸಿನ ಕೇಂದ್ರೀಕರಣವಾಗಲು ಧ್ಯಾನ ಪ್ರಾಣಾಯಾಮಗಳು ಸಹಕಾರಿಯಾಗುತ್ತವೆ. ಓದುತ್ತಾ ಮನನ ಮಾಡುತ್ತಾ ಸಾಗಿದರೆ ಓದು ಸಾರ್ಥಕವಾಗುತ್ತದೆ. ಆಸಕ್ತಿಯಿಂದ ಓದಿದಾಗ ಅದು ಮನದಟ್ಟಾಗಲು ಸುಲಭ. ಓದು ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಲ್ಲ. ಪರೀಕ್ಷಾ ದೃಷ್ಟಿಯಿಂದ ಕೆಲವರು ಓದುತ್ತಾರೆ. ಪರೀಕ್ಷೆ ಮುಗಿದಾಗ ಓದು ನಿಲುಗಡೆಯಾಗುತ್ತದೆ. ಆದರೆ ಜ್ಞಾನ ವರ್ಧನೆಯಾಗ ಬೇಕಾದರೆ ನಿರಂತರ ಓದು ಅಗತ್ಯ. ದಿನದಲ್ಲಿ ಮೂವತ್ತು ನಿಮಿಷ ಕಾಲ ಓದಿದರೂ ಭಾಷಾ ಜ್ಞಾನ ಗಟ್ಟಿಯಾಗುತ್ತದೆ; ಜೊತೆಗೆ ವಿಷಯಜ್ಞಾನ ವಿಶಾಲ ಹಾಗೂ ಆಳವಾಗುತ್ತದೆ.
      ಕೆಲವರು ಓದಿದಂತೆ ಅಗತ್ಯಾಂಶಗಳನ್ನು ಟಿಪ್ಪಣಿ ಮಾಡುತ್ತಾರೆ. ಭಾಷಣ ಅಥವಾ ಇತರ ಮೂಲಗಳಿಂದ ಹೊಸ ವಿಷಯ ಗಮನಕ್ಕೆ ಬಂದರೆ ಟಿಪ್ಪಣಿ ಮಾಡಿಕೊಳ್ಳುತ್ತಾರೆ. ಇದು ಉತ್ತಮ ಅಭ್ಯಾಸ ಮತ್ತು ಹವ್ಯಾಸ. ಆದರೆ ಟಿಪ್ಪಣಿಗಳು ವಿಷಯವಾರು ವಿಭಜಿಸಿ ದಾಖಲಿಸಿದರೆ ಉತ್ತಮ. ಉದಾಹರಣೆಗೆ ಅತ್ಯಂತ ದೊಡ್ಡ ಪಕ್ಷಿ ಉಷ್ಟ್ರ ಪಕ್ಷಿ. ಅದನ್ನು ಮತ್ತು ಅದರ ಪೂರಕ ವಿವರಗಳನ್ನು ಪಕ್ಷಿಗಳು ಎಂಬ ವಿಭಾಗದಲ್ಲಿ ಬರೆದಿಟ್ಟರೆ ಮುಂದೆ ಅಗತ್ಯ ಬಂದಾಗ ಹುಡುಕಿ ತೆಗೆಯಲು ಶ್ರಮ ಕಡಿಮೆಯಾಗುತ್ತದೆ. ನುಡಿಮುತ್ತುಗಳು, ಗಾದೆ ಮಾತುಗಳು, ವಿಶೇಷ ಹೇಳಿಕೆಗಳು, ಕ್ರೀಡಾ ಸಾಧಕರು, ಸ್ಮಾರಕಗಳು ಹೀಗೆ ವಿಭಾಗಗಳು ಅಸಂಖ್ಯವಿವೆ. ಟಿಪ್ಪಣಿ ಮಾಡುವಾಗ ಅದರ ಅಗತ್ಯವನ್ನು ಮನನ ಮಾಡಿಕೊಂಡರೆ ಉತ್ತಮ ಮತ್ತು ಮರೆಗುಳಿಗಳಿಗೆ ಟಿಪ್ಫಣಿ ಸಹಕಾರಿ.
............ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article