ಜಗಲಿ ಕಟ್ಟೆ : ಸಂಚಿಕೆ - 11
Tuesday, August 8, 2023
Edit
ಜಗಲಿ ಕಟ್ಟೆ : ಸಂಚಿಕೆ - 11
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿ
www.makkalajagali.com
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ
ಇಂದು ನೀಡಲಾಗುವ ಅದೆಷ್ಟೋ ಪ್ರಶಸ್ತಿಗಳು ಯಾರದೋ ಶಿಫಾರಸ್ಸಿನ ಮೇಲೆ ಘೋಷಣೆಯಾಗುತ್ತದೆ ಎನ್ನುವುದು ಹಲವರ ನಂಬಿಕೆ. ಈ ನಂಬಿಕೆಗೆ ಪೂರಕವೆನಿಸುವಂತಹ ಅದೆಷ್ಟೊ ಘಟನೆಗಳು ಕೂಡ ನಡೆಯುತ್ತದೆ ಎನ್ನುವುದು ಅಷ್ಟೇ ಸತ್ಯ. ಪ್ರಶಸ್ತಿ ತನ್ನದಾಗಿಸಬೇಕೆಂಬ ಒಂದೇ ಒಂದು ಆಸೆಯಿಂದ ಪ್ರಭಾವಿ ವ್ಯಕ್ತಿಗಳಿಂದ ಫೋನ್ ಮಾಡಿಸುವುದು ಒಂದು ವಾದವಾದರೆ ತನ್ನ ಪ್ರತಿ ಸ್ಪರ್ಧಿಗಳಿಗೆ ಸ್ಪರ್ಧೆಯಿಂದ ಹಿಂದೆ ಸರಿಯುವ ಹಾಗೆ ಮನವೊಲಿಸುವುದು ಇನ್ನೊಂದು ತಂತ್ರ. ಹೀಗೆ ಪ್ರಶಸ್ತಿಯನ್ನು ಪಡೆಯುವವರ ಸಂಖ್ಯೆ ಇದ್ದರೂ ಕೂಡ ಪ್ರಾಮಾಣಿಕವಾಗಿ ಪ್ರಶಸ್ತಿಯನ್ನು ಪಡೆಯುವ ಸಾಧಕರು ಇದ್ದಾರೆ ಅನ್ನೋದು ಮರೆಯಬಾರದು. ಅತ್ಯಂತ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸುವವರು ಇದ್ದಾರೆ ಅನ್ನೋದನ್ನ ಕೂಡ ಮರೆಯಬಾರದು.
ಎಲ್ಲವುಗಳಿಂದ ಮುಖ್ಯ ಸಮಾಜಕ್ಕೆ ಮಾದರಿಯಾಗಿರಬೇಕೆಂದು ಬಯಸುವವರಾಗಬೇಕು. ಮಕ್ಕಳಿಗಾಗಿ ಹಾಗೂ ಸಮಾಜಕ್ಕಾಗಿ ಯಾವುದೇ ಸ್ವಾರ್ಥವಿಲ್ಲದೆ ತನ್ನ ಸೇವೆಯನ್ನು ಮುಡುಪಾಗಿಟ್ಟವರು ಪ್ರಶಸ್ತಿಗೆ ಅರ್ಹರಾಗಬೇಕಾಗಿದೆ.
ನನ್ನ ಆತ್ಮೀಯರಾದ ಮಕ್ಕಳ ಜಗಲಿಯಲ್ಲಿ ಪ್ರಕೃತಿಯ ಬಗ್ಗೆ ಲೇಖನಗಳನ್ನು ಬರೆಯುವ ದಿನೇಶ್ ಹೊಳ್ಳರ ಬಗ್ಗೆ ಒಂದು ಮಾತು ಹೇಳಲೇಬೇಕು. ಒಂದು ಸಂಸ್ಥೆಯವರು ಕಲೆ ಸಾಹಿತ್ಯ ಹಾಗೂ ಸಾಮಾಜಿಕ ಸೇವೆಗಳಿಗಾಗಿ ನೀಡಲಾಗುವ ಪ್ರಶಸ್ತಿಯನ್ನು ನೀಡುವುದಕ್ಕಾಗಿ ಅರ್ಹ ವ್ಯಕ್ತಿಯನ್ನು ಹೆಸರಿಸುವಂತೆ ನನ್ನಲ್ಲಿ ಕೇಳಿಕೊಂಡರು. ಆ ಸಂದರ್ಭದಲ್ಲಿ ನನಗೆ ತಟ್ಟನೆ ಹೊಳೆದಂತಹ ಹೆಸರು ದಿನೇಶ್ ಹೊಳ್ಳ.
ಅಂದಹಾಗೆ ದಿನೇಶ್ ಹೊಳ್ಳ ಓರ್ವ ಕವಿ , ಸಾಹಿತಿ, ಕಲಾವಿದ, ಚಾರಣಿಗ, ಪರಿಸರದ ಉಳಿವಿನ ನಿಸ್ವಾರ್ಥ ಹೋರಾಟಗಾರ, ಸಮಾಜದ ಕಟ್ಟ ಕಡೆಯ ಅಡವಿ ಮಕ್ಕಳ ಶೈಕ್ಷಣಿಕ ಹೋರಾಟಗಾರ, ತನ್ನ ಕಲಾತ್ಮಕ ಗಾಳಿಪಟದಿಂದ ಭಾರತದ ಹೆಸರನ್ನು ಪ್ರಪಂಚದಾದ್ಯಂತ ಸಾರಿದ ಮೇರು ವ್ಯಕ್ತಿ ಹೀಗೆ ಮಾತನಾಡಲು ಹೊರಟರೆ ದಿನವೇ ಸಾಲದು.
ಇಷ್ಟೊಂದು ಸಾಧನೆ ಮಾಡಿರುವ ವ್ಯಕ್ತಿ "ಪ್ರಶಸ್ತಿ ಬೇಡ" ಎಂದು ನಯವಾಗಿ ಪ್ರಶಸ್ತಿಯನ್ನು ಸ್ವೀಕರಿಸದಿರುವ ಭಾವನೆಯನ್ನು ಬೆಳೆಸಿಕೊಂಡಿದ್ದಾರೆಂದರೆ ಅದರ ಹಿಂದಿರುವ ಅವರ ವ್ಯಕ್ತಿತ್ವವನ್ನು ಗಮನಿಸಲೇಬೇಕು. ಪ್ರಶಸ್ತಿಗಾಗಿ ಯಾವತ್ತೂ ಕೆಲಸ ಮಾಡಲೇಬಾರದು. ನಾವು ಮಾಡುವ ಕೆಲಸದಿಂದ ಪ್ರಶಸ್ತಿಗಳು ಹುಡುಕಿಕೊಂಡು ಬರುವ ಹಾಗೆ ಇರಬೇಕು ಎನ್ನುವ ಅನುಭವಿಗಳ ಮಾತನ್ನು ಅರ್ಥೈಸಿಕೊಳ್ಳಬೇಕಾಗಿದೆ.
ಕಳೆದ ಸಂಚಿಕೆಯ ಜಗಲಿಕಟ್ಟೆ - 10 ಅಂಕಣದಲ್ಲಿ ಶ್ರೀರಾಮ ಮೂರ್ತಿ ನಿವೃತ್ತ ವಿಜ್ಞಾನ ಶಿಕ್ಷಕರು, ವಿದ್ಯಾ ಗಣೇಶ್ ಚಾಮೆತ್ತಮೂಲೆ ಮನೆ, 7ನೇ ತರಗತಿ ವಿದ್ಯಾರ್ಥಿನಿ ಜನನಿ ಪಿ ..... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....
ಜಗಲಿಕಟ್ಟೆಯಲ್ಲಿ ಅಡ್ಡಾಡಿದಾಗ..
ಅಗೋಸ್ತು ಬಂತು ಎಂದರೆ ಹಬ್ಬಗಳ ಸರಮಾಲೆಯ ಸಂಭ್ರಮ. ಹಬ್ಬಗಳು ಭಾರತದ ಸಂಸ್ಕೃತಿಯ ಜೀವಾಳ. ಹಬ್ಬಗಳ ರಸಾಸ್ವಾದನೆಯೊಂದಿಗೆ ಜಗಲಿಯಲ್ಲಿ ಅಡ್ಡಾಡಿದರೆ ಪ್ರಪಂಚವೇ ನಮ್ಮೆದುರಿಗೆ ಪ್ರತ್ಯಕ್ಷವಾಗುತ್ತದೆ. ಜಗಲಿಯಲ್ಲಿ ಅಣ್ಣ, ಅಕ್ಕ, ತಮ್ಮ, ತಂಗಿ, ಹಿರಿಯರು, ಗುರುಗಳು ಎಲ್ಲರೂ ಇದ್ದಾರೆ. ಸಾಹಿತ್ಯ ಮತ್ತು ಕಲಾಸ್ವಾದನೆ ಮಾಡಲು ಜಗಲಿಯೇ ಸೂಕ್ತ ಸ್ಥಳ. ಮಂಚಿ ಕೊಳ್ನಾಡು ಪ್ರೌಢ ಶಾಲಾ ನಿವೃತ್ತ ವಿಜ್ಞಾನ ಅಧ್ಯಾಪಕ ಶ್ರೀ ಶ್ರೀರಾಮ ಮೂರ್ತಿಯವರು ಇತ್ತೀಚೆಗೆ ಬಾಯಾರಿನ ಆವಳ ಮಠದಲ್ಲಿ ಭೇಟಿಯಾದಾಗ ಹೇಳಿದ ಮಾತು, “ಮಕ್ಕಳ ಜಗಲಿ ಅಸಂಖ್ಯ ಸಾಧಕರನ್ನು ಗುರುತಿಸಿ ಬೆಳೆಸಲು ಸಹಾಯ ಮಾಡಿದೆ. ದೂರ ದೂರದ ಊರಿನಲ್ಲಿರುವ ಮನಸ್ಸುಗಳನ್ನು ಅತ್ಯಂತ ಆಪ್ತಗೊಳಿಸಲು ಮಕ್ಕಳ ಜಗಲಿ ಆಕಾಶದಷ್ಟು ಅವಕಾಶಗಳನ್ನು ಸೃಷ್ಟಿಸಿದೆ. ಜಗಲಿಯಲ್ಲಿ ಕಣ್ಣೋಡಿಸಿದರೆ ಮನದ ಬೇಸರ ಮಾರು ದೂರ ಓಡುತ್ತದೆ.” ಈ ಹೊತ್ತೂ ನನ್ನ ಕಿವಿಗಳಲ್ಲಿ ಅನುರಣನಗೊಳ್ಳುತ್ತಿದೆ. ಅವರಂತೆ ಮಾತನಾಡುವ ನೂರಾರು ಮನಸ್ಸುಗಳಿವೆ. ಮಕ್ಕಳ ಜಗಲಿಯಲ್ಲಿ ಮಕ್ಕಳೂ ಹಿರಿಯರಂತೆ ಹಿರಿಮೆ ಮೆರೆಯುತ್ತಿದ್ದಾರೆ. ಹಿರಿಯರು ಮಕ್ಕಳ ಹಿರಿಮೆಗೆ ಸುಂದರ ಸ್ವರೂಪ ಒದಗಿಸುತ್ತಿರುವುದು ಶ್ಲಾಘನೀಯ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
***************************************
ಎಲ್ಲರಿಗೂ ನಮಸ್ಕಾರಗಳು. ಈ ಸಲದ ಮಕ್ಕಳ ಜಗಲಿಯ ಎಲ್ಲಾ ಬರಹಗಳು ತುಂಬಾ ಚೆನ್ನಾಗಿದೆ. ನಾವು ಜಗತ್ತಿಗೆ ಬಂದಿದ್ದು, "ಗಳಿಸಲು ಕೂಡಿಸಲು ಅಲ್ಲ ಜಗತ್ತಿನ ವೈಭವವನ್ನು ವೈವಿಧ್ಯತೆಯನ್ನು ಅನುಭವಿಸಲು. ಅನುಭವ ನಮ್ಮನ್ನು ಸುಂದರ ಮಾಡುತ್ತದೆ." ಎಂಬುದನ್ನು ತುಂಬಾ ಚೆನ್ನಾಗಿ ತೋರಿಸಿದ ಎಂ.ಪಿ ಜ್ಞಾನೇಶ್ ಸರ್ ನಿಮಗೆ ತುಂಬಾ ಧನ್ಯವಾದ. ರಮೇಶ್ ಎಂ ಬಾಯರ್ ಸರ್ ಬರೆದ ಸ್ಪೂರ್ತಿಯ ಮಾತುಗಳು ನನಗೆ ತುಂಬಾ ಇಷ್ಟ ಆಯ್ತು. ಕಥೆ, ಮಕ್ಕಳ ಚಿತ್ರ ಹೃದಯದ ಮಾತು, ಪ್ರೀತಿಯ ಪುಸ್ತಕ ಎಲ್ಲವೂ ಒಂದಕ್ಕಿಂತ ಒಂದು ಚೆನ್ನಾಗಿತ್ತು.
ಪ್ರೇಮಲತಾ ಮೇಡಂ ಬರೆದ, ಮನಸಿದ್ದರೆ ಮಾರ್ಗ ನಿಜಕ್ಕೂ ತುಂಬಾ ಚೆನ್ನಾಗಿದೆ. ವಿಜಯ ಮೇಡಂ ಬರೆದ ನಿಷ್ಪಾಪಿ ಸಸ್ಯದಲ್ಲಿ ದುರ್ವೆಯ ಬಗ್ಗೆ ನೀಡಿದ ಮಾಹಿತಿ ತುಂಬಾ ಉಪಯೋಗಕಾರಿ ಗಣೇಶನಿಗೆ ಇಷ್ಟವಾದ ಗರಿಕೆ ಔಷಧಿಯ ಗುಣವನ್ನು ಹೊಂದಿದೆ.
ಒಟ್ಟಾಗಿ ಮಕ್ಕಳ ಜಗಲಿ ತುಂಬಾ ಒಳ್ಳೊಳ್ಳೆಯ ಮಾಹಿತಿಯನ್ನು ನೀಡುತ್ತದೆ. ನಿಜವಾಗಿಯೂ ಖುಷಿ ಅನಿಸುತ್ತದೆ. ಇದೇ ರೀತಿ ಮಕ್ಕಳ ಜಗಲಿ ಇನ್ನೂ ಎತ್ತರಕ್ಕೆ ಹೋಗಲಿ ಎಂಬುದೇ ನನ್ನ ಆಸೆ.
ಸಿದ್ದಾಪುರ ತಾಲೂಕು, ಉತ್ತರ ಕನ್ನಡ ಜಿಲ್ಲೆ
***************************************
ಜಗಲಿಯ ಎಲ್ಲರಿಗೂ ನನ್ನ ಪ್ರೀತಿಯ ನಮಸ್ಕಾರಗಳು.
ಜಗಲಿ ಕಟ್ಟೆಯಲ್ಲಿ ನನ್ನ ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ವ್ಯಾಮೋಹದ ಬಂಧನವನ್ನು ಕಳಚಿ ಜಗತ್ತಿನ ವೈವಿಧ್ಯತೆ, ಸೌಂದರ್ಯವನ್ನು ಅನುಭವಿಸಿ ಎನ್ನುವ ಕಿವಿಮಾತನ್ನು ಭರ್ತೃ ಹರಿ ಹಾಗೂ ಸಿರಿವಂತ ಮತ್ತು ನಾಯಿಯ ಕಥೆಯ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ಸುಂದರವಾಗಿ ನಿರೂಪಿಸಿದ್ದಾರೆ. ಎರಡೂ ಕಥೆಗಳು ತುಂಬಾ ಇಷ್ಟವಾದುವು. ರಸಾಸ್ವಾದನೆಯಿಂದ ನಮ್ಮ ಮನಸ್ಸು ದೇಹ ಪುಳಕಿತಗೊಳ್ಳುತ್ತದೆ. ಮನಸ್ಸು ಚೆನ್ನಾಗಿದ್ದಾಗ ದೇಹವೂ ಸ್ವಸ್ಥವಾಗುತ್ತದೆ. ರಸಾಸ್ವಾದನೆ - ರಮೇಶ್ ಬಾಯಾರ್ ರವರ ಚೆಂದದ ಲೇಖನ .
ಸುಂದರ ಛಾಯಾಚಿತ್ರದೊಂದಿಗೆ ಪಾರಿವಾಳವನ್ನು ಹೋಲುವ ಹಕ್ಕಿಯ ಪರಿಚಯದ ಜೊತೆಗೆ ಚಾರಣದ ಅನುಭವಗಳ ಮಿಶ್ರಣ ಚೆನ್ನಾಗಿತ್ತು. ಅರವಿಂದರವರಿಗೆ ನನ್ನ ನಮನಗಳು. ಪ್ರಥಮ ವಂದಿತ ಗಣೇಶನಿಗೆ ಪ್ರಿಯವಾದ ಗರಿಕೆ ಬಗ್ಗೆ ವಿವರಣಾತ್ಮಕವಾದ ಮನೋಜ್ಞ ಲೇಖನ ವಿಜಯಾ ಮೇಡಂರವರಿಂದ. ಈ ಸಲದ ಸಂಚಿಕೆ ತುಂಬಾ ಖುಷಿ ಕೊಟ್ಟಿತು. ಧನ್ಯವಾದಗಳು ಮೇಡಂ.
ಉಗ್ಗುವಿಕೆಯಿದ್ದರೂ ಇಲೆಕ್ಟ್ರಿಕಲ್ ಎಂಜಿನಿಯರ್ ಪದವಿ ಪಡೆದು ಜಗತ್ತಿನ ಶ್ರೇಷ್ಟ ಮೂಕ ನಟನಾದ ರೋವನ್ ಮಿ! ಬೀನ್ ಎಂದೇ ಪ್ರಸಿದ್ಧ. ಅವನ ಸಾಧನೆ ಜಗಲಿಯ ಎಲ್ಲರಿಗೂ ಸ್ಫೂರ್ತಿ. ಯಾಕೂಬ್ ಸರ್ ರವರ ಸುಂದರ ಸ್ಪೂರ್ತಿಯುತ ಲೇಖನಕ್ಕೆ ನನ್ನ ವೈಯಕ್ತಿಕ ನಮನಗಳು.
ವಾಣಿಯಕ್ಕನವರ ಗಣಿತ ಕಲಿತ ಗಿಣಿ ಪುಸ್ತಕ ಪರಿಚಯ ಚೆನ್ನಾಗಿತ್ತು. ಶಿಕ್ಷಕ ಡೈರಿಯಲ್ಲಿ ಪ್ರೇಮಲತಾ ಮೇಡಂ ರವರು ವಿಕಲ ಚೇತನ ಮಗುವಿನ ಕಲಿಕಾ ಮಟ್ಟವನ್ನು ಹೆಚ್ಚಿಸಿದ ಬಗ್ಗೆ ಅನುಭವವನ್ನು ಹಂಚಿಕೊಂಡಿರುವುದು ತುಂಬಾ ಇಷ್ಟವಾಯಿತು. ಪ್ರೇಮಲತಾ ಮೇಡಂ ರವರಿಗೆ ವಂದನೆಗಳು. ಕುಳಾಯಿಯ ಕೀರ್ತನ್ ರವರ ಚಿತ್ರಗಳು ಸೊಗಸಾಗಿವೆ. ಈ ಸಲದ ಆರ್ಟ್ ಗ್ಯಾಲರಿಯಲ್ಲಿ ರಕ್ಷಿತ್ ರವರ ಪರಿಚಯದ ಜೊತೆಗೆ ಅವರ ಚಿತ್ರಗಳು ಅದ್ಭುತವಾಗಿದ್ದವು. ಈ ವಾರದ ಪದದಂಗಳ ಸಂಚಿಕೆಯೂ ಚೆನ್ನಾಗಿದ್ದು ಮಕ್ಕಳ ಬುದ್ಧಿಮತ್ತೆಯನ್ನು ಹೆಚ್ಚಿಸಲು ಸಹಕಾರಿ. ಈ ವಾರದ ಸಂಚಿಕೆ ಅಂದವಾಗಿ ಮೂಡಿ ಬರಲು ಕಾರಣರಾದ ತಾರಾನಾಥರವರಿಗೆ ಹಾಗೂ ಜಗಲಿಯ ಎಲ್ಲರಿಗೂ ನನ್ನ ಮನದಾಳದ ವಂದನೆಗಳು.
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
***************************************
ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡ ಮಕ್ಕಳ ಜಗಲಿ ಕುಟುಂಬದ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು, ಭಾರತಿ ರಂಗನಾಥ್ ಹೆಗಡೆ ಹಳ್ಳಿ ಬೈಲ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ರಮೇಶ ಎಂ ಬಾಯಾರು.....ಇವರಿಗೆ ಧನ್ಯವಾದಗಳು.
ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************