-->
ಜೀವನ ಸಂಭ್ರಮ : ಸಂಚಿಕೆ - 97

ಜೀವನ ಸಂಭ್ರಮ : ಸಂಚಿಕೆ - 97

ಜೀವನ ಸಂಭ್ರಮ : ಸಂಚಿಕೆ - 97
ಲೇಖಕರು : ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ


                
    ಮಕ್ಕಳೇ, ನಾವು ಸುಖ ಮತ್ತು ಆನಂದ ಒಂದೇ ಎಂದು ಭಾವಿಸುತ್ತೇವೆ. ಸುಖಕ್ಕೂ ಮತ್ತು ಆನಂದಕ್ಕೂ ವ್ಯತ್ಯಾಸವಿದೆ. ಏನೆಂದು ನೋಡೋಣ.

             ಇದು ವಸ್ತುಗಳನ್ನು ಮತ್ತು ಇಂದ್ರಿಯಗಳನ್ನು ಅವಲಂಬಿಸಿದೆ. ವಸ್ತುಗಳಿದ್ದು ಇಂದ್ರಿಯಗಳಿಲ್ಲದಿದ್ದರೆ ಸುಖವಾಗುವುದಿಲ್ಲ. ಅದೇ ರೀತಿ ಇಂದ್ರಿಯಗಳಿದ್ದು ವಸ್ತುಗಳಿಲ್ಲದಿದ್ದರೆ ಸುಖವಾಗುವುದಿಲ್ಲ. ಕಲ್ಲು ಸಕ್ಕರೆ ಬಾಯಲ್ಲಿ ಇಟ್ಟುಕೊಂಡರೆ ಸಿಹಿ ಉಂಟಾಗುತ್ತದೆ. ಈ ಸಿಹಿಯು ನಮಗೆ ಸಂತೋಷ ಉಂಟುಮಾಡುತ್ತದೆ. ಇದು ಸುಖ. ಒಂದು ಸುಂದರ ಹೂವನ್ನು ಕಣ್ಣು ನೋಡುತ್ತದೆ. ಆ ಸೌಂದರ್ಯ ನಮಗೆ ಸುಖ ನೀಡುತ್ತದೆ. ನಮಗೆ ಮಧುರವಾದ, ಹಿತವಾದ ಹಾಡು ಅಥವಾ ಶಬ್ದ ಕೇಳಿದರೆ, ನಮಗೆ ಸುಖವಾಗುತ್ತದೆ. ಮೃದುವಾದ ವಸ್ತು ಸ್ಪರ್ಷಿಸಿದರೆ ಸುಖವಾಗುತ್ತದೆ. ಪರಿಮಳದಿಂದ ಕೂಡಿದ ವಾಸನೆ ಸವಿದರೆ ನಮಗೆ ಸುಖದ ಅನುಭವವಾಗುತ್ತದೆ. ಸುಖಪಡಲು ವಸ್ತು ಮತ್ತು ಇಂದ್ರಿಯಗಳು ಅಗತ್ಯವಾಗಿ ಬೇಕು. ಆದರೆ ಈ ಸುಖ ಕ್ಷಣಿಕ. ಶಾಶ್ವತವಾಗಿ ಇರುವುದಿಲ್ಲ. ಆ ವಸ್ತು ನಮ್ಮ ಇಂದ್ರಿಯಗಳ ಸಂಪರ್ಕಕ್ಕೆ ಎಷ್ಟು ಹೊತ್ತು ಇರುತ್ತೋ ಅಷ್ಟು ಹೊತ್ತು ಮಾತ್ರ ಸುಖ. ಅವು ದೂರ ಸರಿಯುತ್ತಿದ್ದಂತೆ ಸುಖ ಮಾಯವಾಗುತ್ತದೆ. ಹೀಗೆ ಯಾವುದೇ ಸುಖ ಸ್ಥಿರವಲ್ಲ. ಹಾಗಾಗಿ ಮನುಷ್ಯ ಸುಖ ಸ್ಥಿರ ಮಾಡಿಕೊಳ್ಳಲು ವಸ್ತುಗಳನ್ನು ಬಯಸುತ್ತಾನೆ. ಈ ವಸ್ತು ದೊರಕಿದರೂ ಸುಖ ಸ್ಥಿರವಾಗಿರುವುದಿಲ್ಲ. ಏಕೆಂದರೆ ಯಾವುದೇ ವಸ್ತು ಇದ್ದಂತೆ ಇರುವುದಿಲ್ಲ. ರೂಪ ಬದಲಾಗುತ್ತದೆ. ಬಣ್ಣ ಬದಲಾಗುತ್ತದೆ. ಕಾರ್ಯಕ್ಷಮತೆ ಕಳೆದುಕೊಳ್ಳುತ್ತದೆ. ನಾಶವಾಗುತ್ತದೆ. ಮತ್ತು ಇದನ್ನು ಬೇರೆ ಯಾರಾದರೂ ಕದ್ದುಕೊಂಡು ಹೋದರೆ ಎನ್ನುವ ಭಯವಿರುತ್ತದೆ. ರೂಪ ಬದಲಾದರೆ ದುಃಖ. ಬಣ್ಣ ಮಾಸಿದರೆ ಅಥವಾ ಬದಲಾದರೆ ದುಃಖ. ಕಾರ್ಯಕ್ಷಮಕ್ಕೆ ಇಲ್ಲದಿದ್ದರೆ ದುಃಖ. ನಾಶವಾದರೆ ದುಃಖ ಮತ್ತು ಕಳೆದು ಹೋದರು ದುಃಖವೇ. ಹೀಗೆ ಸುಖ ದುಃಖಗಳು ಖಾಯಂ ಆಗಿ ಇರುವುದಿಲ್ಲ. ಅದನ್ನು ಖಾಯಂ ಮಾಡಬೇಕೆನ್ನುವುದೇ ತಾಪ. ಆದರೆ ಇದನ್ನು ಯಾರು ಖಾಯಂ ಮಾಡಲು ಸಾಧ್ಯವಿಲ್ಲ. ಅದಕ್ಕೆ ನಾವು ಮಾಡಬೇಕಾದದ್ದು ಏನೆಂದರೆ, ಯಾವುದೇ ವಸ್ತು ಇದ್ದಂತೆ ಇರುವುದಿಲ್ಲ ಎನ್ನುವುದನ್ನು ತಿಳಿದುಕೊಂಡು, ಆ ವಸ್ತುವಿನ ಅನುಭವ ಮಾಡಿಕೊಳ್ಳಬೇಕು. ವಸ್ತು ಇರುವುದೇ ಅನುಭವ ಮಾಡಿಕೊಳ್ಳಲು ಎನ್ನುವುದನ್ನು ತಿಳಿದುಕೊಂಡಿರಬೇಕು. ಹಾಗಾಗಿ ನಾವು ವಸ್ತುವಿನ ಸೌಂದರ್ಯ, ಮಾಧುರ್ಯ, ರುಚಿ, ವಾಸನೆ, ಸ್ಪರ್ಶ ಹಾಗೂ ಅದರಲ್ಲಿರುವ ಕೌಶಲ್ಯವನ್ನು ತಿಳಿದು ಮನಸ್ಸಿನಲ್ಲಿ ತುಂಬಿಕೊಳ್ಳಬೇಕು. ನಾವು ಅನುಭವದಲ್ಲಿ ಶ್ರೀಮಂತರಾಗಬೇಕು. ಜೀವನ ಎಂದರೆ ಅನುಭವಗಳ ಪ್ರವಾಹ ಎಂಬುದನ್ನು ತಿಳಿದುಕೊಂಡಿರಬೇಕು. ವಸ್ತುವಿನ ಸಂಗ್ರಹಕ್ಕಿಂತ ವಸ್ತುವಿನ ಅನುಭವ ಬಹಳ ಮುಖ್ಯ. ಆದರೆ ನಾವು ಅನುಭವಕ್ಕೆ ಮಹತ್ವ ನೀಡದೆ, ವಸ್ತುಗಳನ್ನು ಸಂಗ್ರಹಿಸುವ ಕಡೆ ಗಮನ ಕೊಡುತ್ತಿದ್ದೇವೆ. ಸಂಗ್ರಹಿಸಿದ ವಸ್ತು ಎಣಿಸುತ್ತೇವೆ. ಎಣಿಸಿದಾಗ ಕಡಿಮೆ ಎನಿಸಿದರೆ ಮತ್ತಷ್ಟು ಸಂಗ್ರಹಣೆಗೆ ಒತ್ತು ನೀಡುತ್ತೇವೆ. ಮತ್ತೆ ವಸ್ತುಗಳನ್ನು ಬೇರೊಂದರೊಂದಿಗೆ ಹೋಲಿಸುತ್ತೇವೆ. ಆಗ ಕಡಿಮೆ ಇದ್ದರೆ, ಲೋಪ ಇದ್ದರೆ ಮತ್ತೆ ದುಃಖವಾಗಿ ಹೋಗುತ್ತದೆ. ನಾವು ವಸ್ತುವಿನ ಒಳ್ಳೆಯದರ ಕಡೆ ಗಮನಹರಿಸದೆ, ಅದರ ಲೋಪದ ಕಡೆ ಗಮನ ಹರಿಸುತ್ತೇವೆ. ಯಾವುದೇ ಲೋಪ, ಕೊರತೆ ಸುಖ ನೀಡುವುದಿಲ್ಲ. ನಾವು ಎಣಿಸುವುದು, ಹೋಲಿಸುವುದು ಮತ್ತು ಅದರ ಲೋಪದ ಕಡೆ ನೋಡದೆ, ಅದರಲ್ಲಿರುವ ವಿಶೇಷ ಗುಣಲಕ್ಷಣಗಳನ್ನು ಅನುಭವ ಮಾಡಿಕೊಳ್ಳಬೇಕು. ಹೀಗೆ ವಸ್ತು ಮತ್ತು ಇಂದ್ರಿಯಗಳ ಸಂಪರ್ಕದಿಂದ ಆದ ಸಂತೋಷಕ್ಕೆ ಸುಖ ಎನ್ನುತ್ತೇವೆ. ಇದು ಕ್ಷಣಿಕ.

       ಆನಂದ ಎನ್ನುವುದು ಶಾಶ್ವತ. ಇದು ವಸ್ತುಗಳನ್ನು ಅವಲಂಬಿಸಿರುವುದಿಲ್ಲ. ಇದು ಅನುಭವವನ್ನು ಅವಲಂಬಿಸಿರುತ್ತದೆ. ಹೆಚ್ಚು ಹೆಚ್ಚು ಸಂತೋಷದ ಅನುಭವವಾದಂತೆ ಮನಸ್ಸು ಅನುಭವದಿಂದ ಶ್ರೀಮಂತವಾಗುತ್ತದೆ. ಆಗ ಮನಸ್ಸಿನ ತುಂಬೆಲ್ಲ ಸೌಂದರ್ಯ, ಮಾಧುರ್ಯ, ಸುವಾಸನೆ, ಸುರುಚಿ, ಸುಸ್ಪರ್ಶ ತುಂಬಿರುತ್ತದೆ. ಈ ಸೌಂದರ್ಯ, ಮಾಧುರ್ಯ, ಸುವಾಸನೆ, ಸುರುಚಿ ಮತ್ತು ಸುಸ್ಪರ್ಶ ಮಾಸುವುದಿಲ್ಲ, ರೂಪ ಕೆಡುವುದಿಲ್ಲ, ಹಾಳಾಗುವುದಿಲ್ಲ, ನಾಶವಾಗುವುದಿಲ್ಲ. ಇದು ಸದಾ ಇರುವುದರಿಂದ ಸಂತೋಷ ಶಾಶ್ವತವಾಗಿರುತ್ತದೆ. ಇದಕ್ಕೆ ಆನಂದ ಎನ್ನುವರು. ಅದಕ್ಕೆ ತಿಳಿದವರು ಹೇಳಿದ್ದು ಅನುಭವವಿಲ್ಲದ ಜ್ಞಾನ ಶಿಕ್ಷಣವಲ್ಲ ಎಂದು. ಶಿಕ್ಷಣ ಇರುವುದು ಮನಸ್ಸನ್ನು ಶ್ರೀಮಂತ ಮಾಡಿ, ಸದಾ ಆನಂದ ಅನುಭವಿಸಲಿ ಎಂದು. ಆದರೆ ಇಂದು ಶಿಕ್ಷಣದಲ್ಲಿ ಅನುಭವಕ್ಕೆ ಮಹತ್ವ ನೀಡದೆ, ಬರೀ ಜ್ಞಾನ ಮತ್ತು ಅಂಕದ ಹಿಂದೆ ಬಿದ್ದಿರುವುದರಿಂದ, ಸಂತೋಷ ಮಾಯವಾಗಿದೆ. ಅದನ್ನು ವಸ್ತುವಿನಲ್ಲಿ ಕಂಡುಕೊಳ್ಳಲು ಹೋರಾಡುತ್ತಿದ್ದೇವೆ. ನಾವೆಲ್ಲಾ ಪ್ರವಾಸಕ್ಕೆ ಹೋಗುತ್ತೇವೆ. ಪ್ರವಾಸದ ಅನುಭವವನ್ನು ಮನಸ್ಸಿನಲ್ಲಿ ತುಂಬಿಕೊಳ್ಳುವುದಕ್ಕೆ ಬಿಟ್ಟು ಮೊಬೈಲ್ ನಲ್ಲಿ ಚಿತ್ರೀಕರಿಸುವುದಕ್ಕೆ ಮಹತ್ವ ನೀಡುತ್ತೇವೆ. ಇದರಿಂದ ನಮಗೆ ಪ್ರವಾಸದ ಅನುಭವವಾಗಲಿಲ್ಲ. ಚಿತ್ರಿಕರಿಸಿದ್ದೆ ಆಯ್ತು. ಅಂದರೆ ಪ್ರವಾಸದ ಅನುಭವಕ್ಕಿಂತ ಚಿತ್ರಕ್ಕೆ ಮಹತ್ವ ಕೊಟ್ಟೆವು. ಇದು ನಮಗೆ ಅನುಭವ ನೀಡುವುದಿಲ್ಲ. ಮಕ್ಕಳೇ ವಸ್ತುವಿನ ಅನುಭವ ಮಾಡಿಕೊಳ್ಳಲು ವಸ್ತುಗಳನ್ನು ಸಂಗ್ರಹ ಮಾಡಬೇಕಾಗಿಲ್ಲ. ಅದು ಇರುವಲ್ಲೇ ಹೋಗಿ ಅನುಭವ ಮಾಡಿಕೊಳ್ಳಬಹುದು. ಅಂದರೆ ವಸ್ತುವಿಗಿಂತ ವಸ್ತುವಿನ ಅನುಭವ ಮುಖ್ಯ ಅಲ್ಲವೆ ಮಕ್ಕಳೇ. ಇದರಿಂದ ಶಾಶ್ವತ ಆನಂದ ಲಭಿಸುತ್ತದೆ.
......................................... ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************Ads on article

Advertise in articles 1

advertising articles 2

Advertise under the article