-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 13

ನಿಷ್ಪಾಪಿ ಸಸ್ಯಗಳು : ಸಂಚಿಕೆ - 13

ನಿಷ್ಪಾಪಿ ಸಸ್ಯಗಳು : ಸಂಚಿಕೆ - 13
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

       
ಪ್ರೀತಿಯ ಮಕ್ಕಳೇ, ಹೇಗಿದ್ದೀರಾ?
        'ಧೋ' ಎಂದು ಮಳೆ ಸುರಿಯಬೇಕಿದ್ದ ದಿನಗಳು ಉರಿಬಿಸಿಲ ಮೂಲಕ ಧರೆಯನ್ನೇ ಸುಡುತ್ತಿದೆ ! ಈ ಆಗಸ್ಟ್ ತಿಂಗಳು 100 ವರ್ಷಗಳಲ್ಲೇ ಕನಿಷ್ಟ ಮಳೆಯನ್ನು ಕಂಡ ಕಾಲವೆಂದು ದಾಖಲಾಗುತ್ತಿರುವುದು ಭವಿಷ್ಯದ ಬಗ್ಗೆ ಯೋಚಿಸುವಂತೆ ಮಾಡಿದೆ.
        ಈ ಪ್ರಕೃತಿಯನ್ನು ಎಗ್ಗಿಲ್ಲದೆ ನಾಶ ಗೊಳಿಸುತ್ತಿರುವ ಮಾನವ ತುರ್ತಾಗಿ ಅವುಗಳನ್ನು ಉಳಿಸುವ ಯೋಜನೆ ಹಾಕಬೇಕಿದೆ ಅಂತನಿಸ್ತಿದೆ ಅಲ್ವಾ?
        ನಮ್ಮ ಸುತ್ತಲಿನ ಪರಿಸರದಲ್ಲಿ ಹಲವಾರು ವಿಶೇಷತೆಗಳನ್ನು ಹೊಂದಿರುವ ಸಸ್ಯಗಳಿವೆ ಅಲ್ಲವೇ...? ಅವುಗಳಲ್ಲಿ ಕೆಲವು ಸಸ್ಯಗಳು ವಿಶೇಷವಾದ ಪರಿಮಳವನ್ನೂ ಹೊಂದಿರುತ್ತವೆ. ಅಂತಹ ಸಸ್ಯಗಳಲ್ಲಿ ಸಾಂಭ್ರಾಣಿಯೂ ಒಂದು. ಮೂಲ ದಕ್ಷಿಣ ಮತ್ತು ಪೂರ್ವ ಆಫ್ರಿಕಾದ ಈ ಸಸ್ಯವನ್ನು ದಕ್ಷಿಣ ಭಾರತದಲ್ಲಿ ಹೆಚ್ಚು ಬಳಸುತ್ತಾರೆ.
       ಇಂದಿಗೂ ಅಜ್ಜಿ ಮೊಮ್ಮಕ್ಕಳಿಗೆ ಜ್ವರ, ನೆಗಡಿ, ಕಫದ ಸಮಸ್ಯೆಗಳು ಕಾಡಿದಾಗ ವೈದ್ಯರ ನೆರವು ಪಡೆಯುವ ಮೊದಲು ಸಾಂಬ್ರಾಣಿ ಎಂಬ ಅತ್ಯಮೂಲ್ಯ ಗಿಡದ ಬಳಿ ಹೋಗುತ್ತಾರೆ. ಮೂರ್ನಾಲ್ಕು ಎಲೆಗಳನ್ನು ತಂದು ಒಲೆಯಲ್ಲಿ ಒಂದಿಷ್ಟು ಬಿಸಿ ಮಾಡಿ ಅಂಗೈಯಲ್ಲಿ ಹಾಕಿ ತಿಕ್ಕಿ ಬಂದ ರಸವನ್ನು ಮಕ್ಕಳ ತಲೆಗೆ ಹಾಕಿ, ಒಂದಿಷ್ಟು ರಸ ನೀಡಿದರೆ ಎರಡು ಮೂರು ಗಂಟೆಯೊಳಗೆ ಮಕ್ಕಳು ಮಾಮೂಲಿ ಸ್ಥಿತಿಗೆ ತಲುಪುದನ್ನು ಬಹುಶ: ನಾವೆಲ್ಲರೂ ಗಮನಿಸಿರುತ್ತೇವೆ.
    ಹೌದು, ಸಾಂಭ್ರಾಣಿ ಗಿಡ ಇರದ ಮನೆಗಳು ಬಹಳ ವಿರಳವೆಂದೇ ಹೇಳಬಹುದು. ಅಲ್ಪ ಕಾಲದಲ್ಲಿ ಜಾದೂ ನಡೆಸುವ ಈ ಸಸ್ಯವು ಹೂಗಿಡಗಳ ನಡುವೆ ಅಲಂಕಾರಕ್ಕಾಗಿ, ಔಷಧಿಗಾಗಿ, ಆಹಾರಕ್ಕಾಗಿ, ಕೀಟಗಳ ವಿರೋಧಿಯಾಗಿಯೂ ಸ್ಥಾನಪಡೆದಿರುತ್ತದೆ. ಇದನ್ನು ದೊಡ್ಡಪತ್ರೆ, ಸಾಂಬಾರ್ ಬಳ್ಳಿ, ಅಜಿವಾನ, ಕರ್ಪೂರ ಬಳ್ಳಿಯೆಂದೂ ಕರೆಯುತ್ತಾರೆ. ಕೊಲಿಯಸ್ ಅಂಬೋಯ್ನಿಕಸ್ ಎಂಬ ವೈಜ್ಞಾನಿಕ ಹೆಸರಿರುವ ಸಾಂಬ್ರಾಣಿ ಲ್ಯಾಮಿಯೇಸಿ ಸಸ್ಯ ಕುಟುಂಬಕ್ಕೆ ಸೇರಿದೆ.
       ಗಿಡದ ಕಾಂಡ ಹಾಗೂ ಎಲೆಗಳು ರಸಭರಿತವಾಗಿದ್ದು ನೆಲಕ್ಕೆ ತಾಗುವ ಗಿಣ್ಣುಗಳಿಂದ ಬೇರುಗಳು ಮೊಳೆಯುತ್ತವೆ. 30 ರಿಂದ 90 ಸೆಂ.ಮೀ. ಬೆಳೆಯುವ ಈ ಸಸ್ಯವು ಪುಟ್ಟ ರೆಂಬೆಗಳನ್ನು ಹೊಂದಿದೆ. ಕಾಂಡವು ಬುಡದ ಕಡೆ ನುಣುಪಾಗಿದ್ದು ಹೊಳಪಿನಿಂದ ಕೂಡಿರುತ್ತದೆ. ಆದರೆ ತುದಿಭಾಗದ ಕಡೆ ಗ್ರಂಥಿ ರೋಮಗಳಿರುವುದರಿಂದ ಹೊಳಪು ಕಂಡು ಬರುವುದಿಲ್ಲ. ನೀರು ತುಂಬಿರುವ ಎಲೆಗಳು ದಪ್ಪವಾಗಿದ್ದು ಅಂಡಾಕಾರದಲ್ಲಿರುತ್ತವೆ. ಎಲೆಯ ಅಂಚು ಹಲ್ಲಿನಂತಿರುತ್ತದೆ. ಎಲೆಗಳ ಮೇಲೆ ನಾಲಿಗೆಯಂತೆ ದಪ್ಪ ಸೂಕ್ಷ್ಮವಾದ ಚುಂಗು ಇದ್ದು ಉಷ್ಣಕಾರಕವಾಗಿದೆ. ಕಾಂಡದ ತುದಿಯಿಂದ ಬರುವ ಅಂತ್ಯಾರಂಭಿ ಪುಷ್ಪಮಂಜರಿಯಲ್ಲಿ ತಿಳಿನೇರಳೆ ಬಣ್ಣದ ಹೂಗಳ ಜೋಡಣೆಯಾಗಿರುತ್ತದೆ. ಗಿಡದ ಎಲ್ಲಾ ಭಾಗದಿಂದಲೂ ಒಂದು ರೀತಿಯ ಸುವಾಸನೆ ಹೊಮ್ಮುತ್ತಿರುತ್ತದೆ.
       ಹೆಚ್ಚಿನ ತೇವಾಂಶ ಹಾಗೂ ಮರಳು ಮಿಶ್ರಿತ ನೆಲದ ಮೇಲಲ್ಲದೇ ಒಡೆದ ಮಡಕೆ ಅಥವಾ ಚಟ್ಟಿಗಳಲ್ಲಿ ಬೇರು ಸಹಿತ ಗಿಡ ಅಥವಾ ಗಿಣ್ಣನ್ನು ನೆಟ್ಟರೂ ಬೆಳೆದು ಹಬ್ಬುವ ಈ ನಿರುಪದ್ರವಿ ಸಸ್ಯ ಹೆಚ್ಚೇನೂ ಕಾಳಜಿ ಬೇಡದು. ಸ್ವಲ್ಪ ನೀರು ಕಡಿಮೆ ಎಂದಾದರೂ ಸಹಿಸಿಕೊಳ್ಳುತ್ತದೆ.
      ಆಫ್ರಿಕಾ ದೇಶದಲ್ಲಿ ಪುದೀನದ ಬದಲಿಗೆ ಈ ಸಾಂಭ್ರಾಣಿಯನ್ನೇ ಬಳಸುತ್ತಾರೆ. ನಮ್ಮಲ್ಲೂ ಎಲೆಗಳಿಂದ ತಂಬ್ಳಿ, ಚಟ್ನಿ, ಚಿತ್ರಾನ್ನ, ದೋಸೆ, ಕಡಲೆ ಹಿಟ್ಟಿನ ಜೊತೆ ಸೇರಿಸಿ ಪಕೋಡಗಳನ್ನು ಮಾಡುವ ಮೂಲಕ ಆಹಾರವಾಗಿ ಬಳಸುತ್ತಾರೆ. ಚಹಾ, ಕಷಾಯವಾಗಿಯೂ ಬಳಸುತ್ತಾರೆ.
      ಎಲ್ಲಕ್ಕಿಂತಲೂ ಮಿಗಿಲಾಗಿ ಈ ನಿಷ್ಪಾಪಿ ಸಸ್ಯ ಮಾನವನಿಗೆ ಅಮೃತಕಲಶವನ್ನೇ ಹೊತ್ತು ಅಂಗಳದ ಮೂಲೆಯಲ್ಲಿ ಸದ್ದಿರದೆ ಕುಳಿತಿರುತ್ತದೆ ಎಂದರೆ ತಪ್ಪಾಗದು. ಮಳೆಗಾಲದಲ್ಲಿ ಆಗಾಗ ವಕ್ಕರಿಸುವ ಜ್ವರ, ಶೀತ, ಕೆಮ್ಮು, ಗಂಟಲು ನೋವುಗಳಿಗೆ ಈ ಸಸ್ಯದ ರಸವೊಂದು ರಾಮಬಾಣ. ಒಂದಿಷ್ಟು ಸಾವಧಾನದಿಂದ ಈ ಗಿಡದ ಪ್ರಯೋಜನದ ಬಗ್ಗೆ ಗಮನ ನೀಡಿದರೆ ಸುಖಾಸುಮ್ಮನೆ ವೈದ್ಯರ ಬಳಿ ಓಡುವುದನ್ನು ತಪ್ಪಿಸಬಹುದು.
        ಅಜೀರ್ಣ, ಹವಾಮಾನ ವ್ಯತ್ಯಾಸ, ಶ್ವಾಸಕೋಶದಲ್ಲಿ ಕಫ, ಕೆಮ್ಮು, ಉಬ್ಬಸ, ತಲೆಭಾರ, ಮಾನಸಿಕ ಒತ್ತಡ, ಗ್ಯಾಸ್ಟ್ರಿಕ್‌, ಕಣ್ಣುರಿ, ತುರಿಕೆ, ಕಜ್ಜಿ, ಚರ್ಮದ ಕಾಂತಿ, ಬೆವರುಸಾಲೆ, ಸ್ತನ ಕ್ಯಾನ್ಸರ್, ಸಂಧಿನೋವು, ಮೂತ್ರಕೋಶದ ಕಲ್ಲು ಕರಗಿಸಲು, ಅರಸಿನ ಕಾಮಾಲೆ, ರಕ್ತಶುದ್ಧಿ, ಮಲಬದ್ಧತೆ ಇತ್ಯಾದಿಗಳಿಗೆ ಪ್ರಯೋಜನಕಾರಿಯಾಗಿದೆ. ಹಿಂದೆ ಕಾಲರಾ ದಂತಹ ಕಾಯಿಲೆಯನ್ನು ಹತೋಟಿಗೆ ತರುವಲ್ಲಿ ಈ ಸಾಂಭ್ರಾಣಿ ಗಿಡ ಮಹತ್ವದ ಪಾತ್ರ ವಹಿಸುತ್ತಿತ್ತು.
       ವಿಟಮಿನ್ ಎ, ಸಿ ಗಳನ್ನು ಹೊಂದಿರುವ ಈ ಮೂಲಿಕೆ ಒಮೆಗಾ 6 ಕೊಬ್ಬಿನಂಶವನ್ನು, ಫೈಬರ್ ನ್ನೂ ಹೊಂದಿದೆ. ಚೇಳು, ಕಂಬಳಿ ಹುಳು ಅಥವಾ ಇತರ ಕೀಟಗಳ ಕಡಿತಗಳಾದಲ್ಲಿ ಉರಿ, ತುರಿಕೆ ಕಡಿಮೆಗೊಳಿಸಲು ಇದರ ರಸವನ್ನು ಬಳಸುತ್ತಾರೆ.
       ಈ ಮೂಲಿಕೆಯ ರಸವನ್ನು ಅತಿಯಾಗಿ ಸೇವಿಸಿದಾಗ ಅಡ್ಡ ಪರಿಣಾಮವಾಗಿ ಅಮಲೇರಬಹುದು. ಗರ್ಭಿಣಿಯರೂ ಬಳಸುವಲ್ಲಿ ಜಾಗ್ರತೆವಹಿಸುವುದು ಉತ್ತಮ.
       ನೋಡಿದಿರಾ ಮಕ್ಕಳೇ, ನೋಡಲು ಬರೇ ಸಣ್ಣ ಸಸ್ಯ. ಆದರೆ ಅದರ ಮಹತ್ವ ಎಷ್ಟೆಂದು... ಇಂತಹ ಅಮೂಲ್ಯ ಸಸ್ಯ ನಮ್ಮ ಹಿತ್ತಲಲ್ಲಿ ಇರಲೇ ಬೇಕಲ್ಲವೇ...? ಕೇವಲ ಸಸ್ಯದ ಇರುವಿಕೆ ಮಾತ್ರವೇ ಮುಖ್ಯವಲ್ಲ. ಅದರ ಬಳಕೆಯನ್ನೂ ನಾವು ಮಾಡಿಕೊಂಡಾಗ ಮಾತ್ರ ನಾವು ಪ್ರಕೃತಿಗೆ ಹತ್ತಿರವಾಗಿ ಬಾಳಿದಂತಾಗುತ್ತದೆ ಅಲ್ಲವೇ...? ಏನಂತೀರಾ.. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ, ನಮಸ್ಕಾರ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************


Ads on article

Advertise in articles 1

advertising articles 2

Advertise under the article