-->
ಹಕ್ಕಿ ಕಥೆ : ಸಂಚಿಕೆ - 114

ಹಕ್ಕಿ ಕಥೆ : ಸಂಚಿಕೆ - 114

ಹಕ್ಕಿ ಕಥೆ : ಸಂಚಿಕೆ - 114
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

              
     ಎಲ್ಲರಿಗೂ ನಮಸ್ಕಾರ.. ಚಾರಣದೊಂದಿಗೆ ಹಕ್ಕಿ ಕಥೆ ಸರಣಿಯ ಹೊಸದೊಂದು ಹಕ್ಕಿ ಪರಿಚಯಕ್ಕೆ ಸ್ವಾಗತ.
     ಗೋವಿಂದಘಾಟ್ ನಿಂದ ಹೂವಿನ ಕಣಿವೆಯ ಚಾರಣ ಮಾರ್ಗದಲ್ಲಿ ಹಿಮಾಲಯದ ನೀಲಿ ಸಿಳ್ಳಾರ ಹಕ್ಕಿ ಕಂಡಲ್ಲಿ ಕಳೆದ ಬಾರಿಯ ಕಥೆ ನಿಂತಿತ್ತು. ಲಕ್ಷ್ಮಣಗಂಗಾ ಎಂಬ ಹಿಮಾಲಯದ ಪುಟ್ಟದೊಂದು ನದಿಗೆ ಕಟ್ಟಲಾದ ಸೇತುವೆಯನ್ನು ದಾಟಿ ಮತ್ತೆ ಏರುದಾರಿಯನ್ನು ನಡೆಯುತ್ತಾ ಸುಮಾರು ಬೆಳಗ್ಗಿನ ಹತ್ತೂವರೆ ಗಂಟೆಗೆ ಬೇಸ್ ಕ್ಯಾಂಪ್ ಗಂಘಾರಿಯಾ ಎಂಬ ಹಳ್ಳಿ ತಲುಪಿದೆವು. ಅಲ್ಲೊಂದಿಷ್ಟು ಚೌಕಾಶಿ ಮಾಡಿ ರೂಮ್ ಒಂದನ್ನು ಪಡೆದೆವು. ರೂಮ್ ಮಾಲೀಕನಲ್ಲಿ ಮಾತನಾಡುತ್ತಾ ಇವತ್ತು ಇನ್ನು ಹೇಮಕುಂಡಕ್ಕೆ ಹೋಗಲು ಸಾದ್ಯವಿಲ್ಲ. ಹನ್ನೊಂದು ಮೂವತ್ತರ ಒಳಗೆ ತಲುಪಿದರೆ ಹೂವಿನ ಕಣೆವೆಯನ್ನು ನೋಡಬಹುದು ಎಂಬ ಮಾಹಿತಿ ಸಿಕ್ಕಿತು. ಬೇಗನೆ ನಮ್ಮ ಹೆಚ್ಚುವರಿ ವಸ್ತುಗಳನ್ನು ರೂಮಿನಲ್ಲಿ ಬಿಟ್ಟು, ಅಗತ್ಯವಾದ ವಸ್ತುಗಳನ್ನು ಮತ್ತು ಮಧ್ಯಾಹ್ನಕ್ಕೆ ಸ್ವಲ್ಪ ಬಿಸ್ಕೆಟ್ ಮತ್ತು ನೀರು ತೆಗೆದುಕೊಂಡು ಬೇಗನೆ ಹೂವಿನ ಕಣಿವೆಗೆ ಪ್ರವೇಶ ಪಡೆಯುವ ಅರಣ್ಯ ತನಿಖಾ ಸ್ಥಳ ತಲುಪಿದೆವು. ನಾಲ್ಕು ಗಂಟೆಯ ಒಳಗೆ ವಾಪಾಸು ಬರಬೇಕು ಮತ್ತು ಯಾವುದೇ ಪ್ಲಾಸ್ಟಿಕ್ ತುಂಡನ್ನು ಎಸೆಯಬಾರದು ಎಂಬ ಕರಾರಿನೊಂದಿಗೆ ಎಲ್ಲರನ್ನೂ ಪರಿಶೀಲಿಸಿ ಒಳಗೆ ಬಿಡಲಾಯಿತು. ಸುಮಾರು ಒಂದು ಕಿಲೋಮೀಟರ್ ಕಾಡು ಮತ್ತು ನದೀಬದಿಯಲ್ಲಿ ಸಾಗಿದ ದಾರಿ ಆನಂತರ ಪೂರ್ತಿ ಒಂದೂವರೆ ಕಿಲೋಮೀಟರ್ ಬೆಟ್ಟ ಹತ್ತಬೇಕು. ಆಗಲೇ ಎಂಟು ಕಿಲೋಮೀಟರ್ ನಡೆದ ನಮಗೆ ಉರಿಬಿಸಿಲು ಇದ್ದುದರಿಂದ ಬಹಳ ಕಷ್ಟವಾಯಿತು. ಆನಂತರ ದಾರಿ ಸಮತಟ್ಟಾಯಿತು. ಅಲ್ಲಲ್ಲಿ ಹಿಮದ ರಾಶಿ ಮತ್ತು ಅದರಿಂದ ಕರಗಿ ನೀರಾಗುವ ನೀರನ್ನು ಜೀವನದಲ್ಲೇ ಮೊದಲ ಬಾರಿಗೆ ನಾನು ನೋಡಿದ್ದು. ಕೆಲವೆಡೆ ಮಂಜಿನ ಹಾಸಿಗೆಯ ಮೇಲೆ ನಡೆಯುವ ಅವಕಾಶವೂ ಜೀವನದಲ್ಲೇ ಮೊದಲ ಬಾರಿಗೆ ದೊರಕಿತ್ತು. ಅಲ್ಲಿಂದ ಮುಂದೆ ಕಾಣುವುದೆಲ್ಲವೂ ಹೂವಿನ ಕಣಿವೆ. ನಡೆಯುವುದು ಸಾದ್ಯವಾದರೆ ಸುಮಾರು 5ಕಿಮೀ ಆ ಕಣಿವೆಯಲ್ಲೇ ನಡೆಯಬಹುದು. ಆದರೆ ಮುಂದೆ ಹೆಜ್ಜೆ ಇಡಲೂ ಸಾದ್ಯವಿಲ್ಲದಿರುವ ಕಾರಣ ಹೂವಿನ ಕಣಿವೆಯ ನಡುವೆ ಕುಳಿತು ದಣಿವಾರಿಸಿಕೊಳ್ಳುತ್ತ ಕಣಿವೆಯ ಚಂದವನ್ನು ಮನತುಂಬಿಕೊಂಡೆವು. ತಂದಿದ್ದ ಬಿಸ್ಕೆಟ್ ಮತ್ತು ನೀರುಗಳು ಮೃಷ್ಟಾನ್ನದಂತೆ ರುಚಿಯಾಗಿದ್ದವು. ನಿಧಾನಕ್ಕೆ ಮತ್ತೆ ಇಳಿದು ಗಂಘಾರಿಯಾ ತಲುಪಿದಾಗ ಸಂಜೆ ನಾಲ್ಕುಗಂಟೆ. ಸುಮಾರು ಹದಿನಾಲ್ಕು ಕಿಲೋಮೀಟರ್ ನಡಿಗೆಯನ್ನು ಒಂದೇ ದಿನ ಮುಗಿಸಿದ ಕಾರಣ ಎಲ್ಲರೂ ಸುಸ್ತಾಗಿದ್ದರು. ರೂಮಿನಲ್ಲಿ ಬಂದು ಕುಳಿತಲ್ಲೇ ಗಾಢನಿದ್ರೆ. ಎಚ್ಚರಾದಾಗ ಕತ್ತಲು ಆವರಿಸತೊಡಗಿತ್ತು. ಸಂಜೆಯ ಚಹಾ ಕುಡಿದು, ಅಲ್ಲಿನ ಢಾಬಾಗಳನ್ನು ಸುತ್ತಿಬಂದೆವು. ಅರಣ್ಯ ಇಲಾಖೆಯ ವತಿಯಿಂದ ಹೂವಿನ ಕಣಿವೆಯ ಬಗ್ಗೆ ಸಂಜೆ ನಡೆಯುವ ಸಾಕ್ಷ್ಯಚಿತ್ರವನ್ನೂ ವೀಕ್ಷಿಸಿ ರಾತ್ರಿಯ ಊಟ ಮಾಡಿ ಮಲಗಿಕೊಂಡೆವು.
        ಮರುದಿನ ಬೆಳಗ್ಗೆ ಬೇಗನೆ ಎದ್ದು ಐದು ಗಂಟೆಗೇ ಚಹಾ ಕುಡಿದು ನಾವು ತಯಾರಾದೆವು. ಇವತ್ತಿನ ನಮ್ಮ ಗುರಿ ಲೋಕಪಾಲ ಸರೋವರ ಅಥವಾ ಲಕ್ಷ್ಮಣತೀರ್ಥ ಸರೋವರ ಎಂಬ ಸರೋವರ. ಅದರ ದಡದಲ್ಲೇ ಲಕ್ಷ್ಮಣನು ಶೇಷನಾಗನ ರೂಪದಲ್ಲಿ ತಪಸ್ಸು ಮಾಡಿದ ಎಂಬ ಪ್ರತೀತಿ ಇರುವ ಲಕ್ಷ್ಮಣನ ಮಂದಿರ ಹಾಗೂ ಸಿಖ್ಖರ ಗುರು ಗೋವಿಂದ ಸಿಂಗರು ತಪಸ್ಸು ಮಾಡಿದ್ದರು ಎಂದು ಹೇಳಲಾಗುವ ಜಾಗದಲ್ಲಿ ಕಟ್ಟಿದ ಗುರುದ್ವಾರಾ ಹೇಮಕುಂಡ ಸಾಹೀಬ್. ಗಂಘಾರಿಯಾ ದಿಂದ ನಿರಂತರ ಸುಮಾರು ಆರು ಕಿಲೋಮೀಟರ್ ಏರುದಾರಿ. ಅರ್ಧದಾರಿಯ ನಂತರ ದಾರಿಯ ಎರಡೂ ಕಡೆ ಮಂಜಿನರಾಶಿ. ಅದನ್ನು ಮುಟ್ಟಿಕೊಂಡೇ ನಡೆಯುವ ಅನುಭವ ವರ್ಣಿಸಲಸಾಧ್ಯ. ಮೇಲೆ ತಲುಪಿದಾಗ ಹಿಮದಿಂದಾವೃತವಾದ ಗುಡ್ಡಗಳ ನಡುವೆ ಹೇಮಕುಂಡ ಅಥವಾ ಲೋಕಪಾಲ ಸರೋವರ ಪೂರ್ತಿ ಮಂಜಿನಿಂದ ಆವರಿಸಿ ಮಂಜುಗಡ್ಡೆಯಾಗಿತ್ತು. ಬಿಸಿಲಿಗೆ ನಿಧಾನವಾಗಿ ಕರಗಿ ನೀರಾಗಿ ಇಳಿಯುತ್ತಿತ್ತು. ಆಕಡೆಯಿಂದ ಮೋಡಗಳು ನಮ್ಮ ಕಡೆಗೇ ಧಾವಿಸಿ ಬಂದು ನಮ್ಮನ್ನು ಆವರಿಸಿಕೊಂಡಿತು. ನೀರಿನ ಮೂರೂ ಸ್ಥಿತಿಗಳಾದ ಘನ, ದ್ರವ ಮತ್ತು ಅನಿಲಗಳು ಏಕಕಾಲದಲ್ಲಿ ಕಾಣಿಸಿಕೊಂಡದ್ದು ನಿಜಕ್ಕೂ ಅದ್ಭುತ. ಗುರುದ್ವಾರೆಯ ದರ್ಶನ ಮಾಡಿ, ಪ್ರಸಾದರೂಪೀ ಉಪಾಹಾರ ಸೇವಿಸಿ, ಹಿಂದೆ ನಮ್ಮ ಪ್ರಯಾಣವನ್ನು ಆರಂಭಿಸಿದೆವು. ಚೆನ್ನಾಗಿ ಬಿಸಿಲು ಬಂದು ಭೂಮಿ ಸ್ವಲ್ಪ ಬೆಚ್ಚಗಾಗಿತ್ತು.
       ಮಂಜು ಕರಗಿ ನೀರಾಗಿ ಹರಿಯುವ ಪರಿಯನ್ನು ನೋಡುವುದೇ ಒಂದು ಚಂದ. ಹೀಗೆ ಸುಮಾರು ಕೆಳಗಿಳಿಯುವಾಗ ನೀರಹರಿವಿನ ನಡುವೆ ಬಂಡೆಗಳು ಇರುವಲ್ಲಿ ಸುಮಾರು ರಾಬಿನ್ ಹಕ್ಕಿಯ ಗಾತ್ರದ ಇನ್ನೊಂದು ಹಕ್ಕಿ ನೀರು ಮತ್ತು ಬಂಡೆಗಳ ನಡುವೆ ಕುಪ್ಪಳಿಸುತ್ತಾ ಓಡಾಡುತ್ತಿತ್ತು. ಮೈ, ಹೊಟ್ಟೆ, ಬೆನ್ನಿನ ಭಾಗವೆಲ್ಲ ಚಂದದ ಕೇಸರಿ ಬಣ್ಣ. ರೆಕ್ಕೆ ಮತ್ತು ಬಾಲಗಳು ಕಪ್ಪು ಬಣ್ಣ. ತಲೆಯ ಮೇಲೊಂದು ಬಿಳೀ ಟೋಪಿ. ನೀರು ಮತ್ತು ಬಂಡೆಗಳ ಮೇಲೆ ಆಟವಾಡುತ್ತಾ, ಕುಪ್ಪಳಿಸುತ್ತಾ, ಆಹಾರ ಹುಡುಕುತ್ತಾ ಓಡಾಡುತ್ತಿತ್ತು.
         ಹಿಮಾಲಯದ ನೀರ ಹರಿವಿನ ಜಾಗಗಳ ಆಸುಪಾಸಿನಲ್ಲಿ ಮಾತ್ರ ಕಾಣಸಿಗುವ ಈ ಹಕ್ಕಿ ಪ್ರಪಂಚದ ಬೇರೆಲ್ಲೂ ಕಾಣಸಿಗುವುದಿಲ್ಲವಂತೆ. ಹಿಮಾಲಯದ ತೊರೆಗಳ ನಡುವೆ ಬಂಡೆಗಳ ಎಡೆಯಲ್ಲಿ ಗೂಡುಮಾಡಿ ಸಂತಾನೋತ್ಪತ್ತಿ ಮಾಡುವ ಈ ಹಕ್ಕಿ ಮಡಿವಾಳ ಹಕ್ಕಿಯಂತೆಯೇ ಆಗಾಗ ತನ್ನ ಬಾಲವನ್ನು ಎತ್ತಿ ಇಳಿಸುತ್ತಿರುತ್ತದೆ. ಒಂದು ಕ್ಷಣ ಒಂದೆಡೆ ಕುಳಿತುಕೊಳ್ಳದೆ ಓಡಾಡುವ ಸುಂದರ ಪುಟಾಣಿ ಹಕ್ಕಿಯನ್ನು ನೋಡಿ ನನಗೂ ಬಹಳ ಸಂತೋಷವಾಯಿಯತು. 
ಇಂಗ್ಲೀಷ್ ಹೆಸರು: White-capped Redstart
ವೈಜ್ಞಾನಿಕ ಹೆಸರು: Chaimarrornis leucocephalus
ಚಿತ್ರ : ಅರವಿಂದ ಕುಡ್ಲ
ಮುಂದಿನ ವಾರ ಇನ್ನೊಂದು ಹಕ್ಕಿಯನ್ನು ನೋಡಿದ ಕಥೆಯೊಂದಿಗೆ ಮತ್ತೆ ಸಿಗೋಣ.           
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************



Ads on article

Advertise in articles 1

advertising articles 2

Advertise under the article