-->
ಲೇಖನ : ಓದುವ ಹವ್ಯಾಸ ಇರಲಿ

ಲೇಖನ : ಓದುವ ಹವ್ಯಾಸ ಇರಲಿ

ಲೇಖನ : ಓದುವ ಹವ್ಯಾಸ ಇರಲಿ    
ಲೇಖಕಿ : ಎ. ಪೂರ್ಣಿಮಾ ಕಾಮತ್ 
ಇತಿಹಾಸ ಉಪನ್ಯಾಸಕರು  
ಸರಕಾರಿ ಪದವಿ ಪೂರ್ವ ಕಾಲೇಜು
ಕೃಷ್ಣಾಪುರ, ಕಾಟಿಪಳ್ಳ, ಸುರತ್ಕಲ್
ಮಂಗಳೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ
          
        ಓದು ನಮ್ಮ ಜೀವನದ ಅವಿಭಾಜ್ಯ ಅಂಗ. ಅಕ್ಷರ ಪ್ರಪಂಚದ ಆರಂಭದಿಂದಲೂ ಓದಿಗೆ ಅದರದೇ ಆದ ಪ್ರಾಮುಖ್ಯತೆ ಮತ್ತು ಪಾವಿತ್ರ್ಯತೆ ಇದೆ. ಊಟ ಬಲ್ಲವನಿಗೆ ರೋಗವಿಲ್ಲ , ಮಾತು ಬಲ್ಲವನಿಗೆ ಜಗಳವಿಲ್ಲ , ಹಾಗೆಯೆ ಓದು ಬಲ್ಲವನಿಗೆ ಬೇಸರವಿಲ್ಲ ಎನ್ನಬಹುದು. ಓದಿದವನೇ ಬಲ್ಲ ಓದಿನ ಸವಿಯ…
        ಆದರೆ ಇಂದಿನ ವಿದ್ಯಾರ್ಥಿಗಳಲ್ಲಿ ಸಂತೋಷಕ್ಕಾಗಿ ಮತ್ತು ಜ್ಞಾನಕ್ಕಾಗಿ ಓದುವ ಅಭ್ಯಾಸ ಮತ್ತು ಹವ್ಯಾಸ ಎಷ್ಟು ಕಡಿಮೆಯಾಗಿದೆ ಎನ್ನುವುದಕ್ಕೆ ನಮ್ಮ ಕಾಲೇಜಿನಲ್ಲಿ ನಡೆದ ಒಂದು ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ. ನವೆಂಬರ 2022ರ ಒಂದು ದಿನ ಉದಯವಾಣಿ ಪತ್ರಿಕೆಯ “ಸುದಿನ“ ಪುಟದಲ್ಲಿ ಉದಯವಾಣಿ ನುಡಿಹಬ್ಬದ ರಸಪ್ರಶ್ನೆ ಸರಣಿಯಲ್ಲಿ ಸರಿ ಉತ್ತರ ನೀಡಿ ವಿಜೇತರಾದ ಅದೃಷ್ಟಶಾಲಿಗಳಲ್ಲಿ ನನ್ನ ಭಾವಚಿತ್ರವೂ ಬಂದಿತ್ತು. ಕಾಲೇಜಿನ ಪ್ರಥಮ ಪಿಯುಸಿಯ ಒಬ್ಬ ವಿದ್ಯಾರ್ಥಿನಿ “ಹಿಸ್ಟರಿ ಮೇಡಂನ ಫೋಟೋ ಪೇಪರಲ್ಲಿ ಬಂದಿದೆ“ ಎಂದು ಸುದ್ದಿ ಹಬ್ಬಿಸಿದಳು. ತಕ್ಷಣ ದ್ವಿತೀಯ ಪಿಯುಸಿಯ ಇಬ್ಬರು ವಿದ್ಯಾರ್ಥಿನಿಯರು ಎಲ್ಲಿ ಅಂತ ಪೇಪರಲ್ಲಿ ಎಷ್ಟು ಹುಡುಕಿದರೂ ಸಿಗದೇ ಇದ್ದಾಗ ನನ್ನಲ್ಲಿ ಕೇಳಿದರು. ನಾನು ಹೇಳಿದೆ, “ಸರಿಯಾಗಿ ಹುಡುಕಿ ಮಕ್ಕಳೇ” ಎಂದು. ಮತ್ತೆ ಹುಡುಕಲು ಆರಂಭಿಸಿ ಕಾಣದಾದಾಗ “ಮೇಡಂ ನಿಮ್ಮ ಫೋಟೋ ಎಷ್ಟು ಹುಡುಕಿದರೂ ಇಲ್ಲ” ಎಂದು ಬೇಸರಿಸಿದರು. ಸರಿ ನಾನೇ ನೋಡುವ ಎಂದು ಹೋದೆ. ನೋಡಿ ನಾನೇ ಬೇಸ್ತು ಬಿದ್ದೆ ! ಜೊತೆಗೆ ಜೋರಾಗಿ ನಗು ಬಂತು. ಅವರು ಆಶ್ಚರ್ಯದಿಂದ “ಯಾಕೆ ನಗುತ್ತೀರಿ ಮೇಡಂ” ಎಂದರು. ಆಗ ನಾನು ಹೇಳಿದೆ “ಈ ಪುಟದಲ್ಲಿ ನನ್ನ ಫೋಟೋ ಬರಲು ನೀವು ಇನ್ನೂ ಸ್ವಲ್ಪ ದಿವಸಗಳು ಕಾಯಬೇಕಾಗಬಹುದು !“ ಯಾಕೆಂದರೆ ಅವರಿಬ್ಬರೂ ಅಷ್ಟೂ ಹೊತ್ತು ಹುಡುಕುತ್ತಾ ಇದ್ದದ್ದು ಶ್ರದ್ಧಾಂಜಲಿ ಕಾಲಂನಲ್ಲಿ ! ಕೊನೆಗೆ ನಾನೇ “ಸುದಿನ” ಪುಟದಲ್ಲಿ ತೋರಿಸಿದೆ.
      ಇಂದಿನ ವಿದ್ಯಾರ್ಥಿಗಳು ಪರೀಕ್ಷೆ ಮತ್ತು ಅಂಕಗಳಿಗಾಗಿ ಮಾತ್ರ ಪಾಠ ಪುಸ್ತಕಗಳನ್ನು ಮತ್ತು ಶಿಕ್ಷಕರು ಕೊಟ್ಟ ನೋಟ್ಸ್ ಗಳನ್ನು ಓದುತ್ತಾರೆ. ಇತರ ಯಾವುದೇ ಪುಸ್ತಕ ಗಳನ್ನಾಗಲೀ, ವರ್ತಮಾನ ಪತ್ರಿಕೆಗಳನ್ನಾಗಲೀ ಓದುವ ಅಭ್ಯಾಸವೇ ಇಲ್ಲ ಅಂದ್ರೆ ತಪ್ಪಾಗಲಾರದು. ಇದಕ್ಕೆ ಅವರ ಹೆತ್ತವರು ಮತ್ತು ಹಿರಿಯರು ಕಾರಣ ಎನ್ನಬಹುದು. ಸಮಯದ ಮಿತಿ ಮತ್ತು ಓದುವ ಹವ್ಯಾಸದ ಕೊರತೆ ಇದರ ಹಿಂದಿದೆ. Seeing is believing but feeling is the truth ಎಂಬ ಆಂಗ್ಲೋಕ್ತಿಯಂತೆ ಮಕ್ಕಳು ನಾವು ಹೇಳಿದ್ದನ್ನು ಪಾಲಿಸುವುದಕ್ಕಿಂತ ನಾವು ಮಾಡಿದ್ದನ್ನು ನೋಡಿ ಪಾಲಿಸುತ್ತಾರೆ ಮತ್ತು ಅನುಭವಿಸಿ ತಿಳಿಯುತ್ತಾರೆ. ಆದ್ದರಿಂದ ದೊಡ್ಡವರಾದ ನಾವು / ಶಿಕ್ಷಕರು ಓದುವ ಹವ್ಯಾಸ ಬೆಳೆಸಿ ಅವರಿಗೆ ಮಾದರಿಯಾಗ ಬೇಕಲ್ಲವೇ....?  
      ಮಕ್ಕಳು ಸಂತೋಷಕ್ಕಾಗಿ ಮತ್ತು ಜ್ಞಾನ ಹೊಂದುವುದಕ್ಕಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕಳೆದು ಹೋದ ಸಮಯ ಮತ್ತೆಂದೂ ಬಾರದು. ಸಂಭವಿಸಿದ ಘಟನೆಗಳಾಗಲೀ, ಅನುಭವಗಳಾಗಲೀ ಮತ್ತೊಮ್ಮೆ ನಮಗೆ ಬೇಕೆಂದರೂ ಅದನ್ನು ಮತ್ತೆ ರಚಿಸಲು ಅಥವಾ ಪುನರಾವರ್ತಿಸಲೂ ಸಾಧ್ಯವಿಲ್ಲ. ಏಕೆಂದರೆ ಅವು ನಮ್ಮ ಹಿಡಿತದಲ್ಲಿಲ್ಲ. ಆದರೆ A good Book is a boon, we can open it again and again ಅಂದ್ರೆ ಉತ್ತಮ ಪುಸ್ತಕ ಎನ್ನುವುದು ಒಂದು ವರ. ಬೇಕೆಂದಾಗ ಅದನ್ನು ನಾವು ಪದೇಪದೇ ತೆರೆಯಬಹುದು. ಓದಿ ಮುಗಿಸಿದ ಮೇಲೂ ಪ್ರತೀ ಪುಟಗಳನ್ನೂ ಮತ್ತೆ ಮತ್ತೆ ತೆರೆಯಲು, ಓದಲು, ನಮ್ಮ ಜ್ಞಾನದ ಹರವನ್ನು ಹೆಚ್ಚಿಸಲು ಇರುವ ದೊಡ್ಡ ಕೊಡುಗೆ. ಪ್ರತೀ ಸಲವೂ ಪುಟಗಳನ್ನು ತೆರೆದಾಗ ಹೊಸ ವಿಚಾರಗಳನ್ನು ತಿಳಿಸಿ ಹೊಸ ಪ್ರಪಂಚವೇ ತೆರೆದುಕೊಳ್ಳುತ್ತದೆ.
      ಆದ್ದರಿಂದ ಮಕ್ಕಳೇ, ನಿಮ್ಮ ಶಾಲೆಯಲ್ಲಿರುವ ಗ್ರಂಥಾಲಯಕ್ಕೆ ಹೋಗಿ. ರಾಮಾಯಣ, ಮಹಾಭಾರತ, ಪುರಾಣದ ಕತೆ ಪುಸ್ತಕಗಳು, ಪಂಚತಂತ್ರದಂಥ ನೀತಿ ಕತೆಗಳು , ವಿಜ್ಞಾನ, ಆರೋಗ್ಯ, ಸಾಮಾನ್ಯ ಜ್ಞಾನ, ಮಹಾಪುರುಷರ / ಸಾಧಕರ ಜೀವನಕತೆಗಳು, ಇತಿಹಾಸದ ಪುಸ್ತಕಗಳು, ಮಕ್ಕಳ ಕತೆಗಳು ಮತ್ತು ವಿವಿಧ ವರ್ತಮಾನ ಪತ್ರಿಕೆಗಳು ಇತ್ಯಾದಿಗಳೆಲ್ಲ ಅಲ್ಲಿವೆ. ಸಮಯ ಸಿಕ್ಕಾಗಲೆಲ್ಲಾ ಅಲ್ಲಿಗೆ ಹೋಗಿ ಅವುಗಳನ್ನು ಓದಿ. ಇದರಿಂದ ನಿಮ್ಮಲ್ಲಿ ಏಕಾಗ್ರತೆ, ಶಿಸ್ತು, ಸಮಯದ ಪ್ರಜ್ಞೆ, ಬೌದ್ಧಿಕ ಬೆಳವಣಿಗೆ, ಬರವಣಿಗೆ ಕೌಶಲ್ಯ, ಉತ್ತಮ ಆಲೋಚನೆಗಳು, ಸಂಸ್ಕಾರ, ಆರೋಗ್ಯವಂತ ಮನಸ್ಸು ಬೆಳೆದು, ಸಂತೋಷವೂ ಸಿಗುತ್ತದೆ. ನಿಮ್ಮ ಉತ್ತಮ ಗೆಳೆಯರಂತೆ ನಿಮಗೆ ಒಂಟಿತನ, ಬೇಸರ, ಆಲಸ್ಯ ಕಳೆಯುತ್ತದೆ. ಜೊತೆಗೆ ನಿಮ್ಮ ಭಾಷಾಜ್ಞಾನ ವೃದ್ಧಿಯಾಗುತ್ತದೆ. ಹಾಗೆಯೇ ಎಲ್ಲಾ ಪರೀಕ್ಷೆಗಳನ್ನೂ, ಸ್ಪರ್ಧೆಗಳನ್ನೂ, ಸವಾಲುಗಳನ್ನೂ ಎದುರಿಸುವ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಜೀವನಾಸಕ್ತಿಯನ್ನು ಉಳಿಸಿ, ಬೆಳೆಸಿ ಸದಾ ಚೈತನ್ಯ ತುಂಬುವುದು. ಉತ್ತಮ ಪುಸ್ತಕಗಳನ್ನು ಓದುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿರುವಾಗ ಮಕ್ಕಳೇ.. ಇನ್ಯಾಕೆ ತಡ ಮಾಡುತ್ತೀರಿ?. ಓದುವ ಹವ್ಯಾಸ ಇಂದೇ ಬೆಳೆಸಿಕೊಳ್ಳುತ್ತೀರಲ್ಲವೇ..?      
........................... ಎ. ಪೂರ್ಣಿಮಾ ಕಾಮತ್ 
ಇತಿಹಾಸ ಉಪನ್ಯಾಸಕರು  
ಸರಕಾರಿ ಪದವಿ ಪೂರ್ವ ಕಾಲೇಜು
ಕೃಷ್ಣಾಪುರ, ಕಾಟಿಪಳ್ಳ, ಸುರತ್ಕಲ್
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊ. ನಂ.9535337035
******************************************



Ads on article

Advertise in articles 1

advertising articles 2

Advertise under the article