ಹಕ್ಕಿ ಕಥೆ : ಸಂಚಿಕೆ - 112
Tuesday, August 15, 2023
Edit
ಹಕ್ಕಿ ಕಥೆ : ಸಂಚಿಕೆ - 112
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ನಮ್ಮ ಹಿಮಾಲಯ ಚಾರಣದ ಎರಡನೇ ಭಾಗವಾಗಿ ನಾವು ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ಮಂಡಲ್ ಎಂಬ ಊರನ್ನು ತಲುಪಿದೆವು. ಮಂಡಲ್ ನಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಅನಸೂಯ ದೇವಿ ಮಂದಿರ ಮತ್ತು ಅತ್ರಿಮುನಿ ಆಶ್ರಮ ನಮ್ಮ ಗುರಿಯಾಗಿತ್ತು. ಮಂಡಲ್ ನಲ್ಲಿ ನಮ್ಮ ಬೆಳಗ್ಗಿನ ಉಪಾಹಾರ ಮುಗಿಸಿ ಚಾರಣ ಆರಂಭಿಸಿದೆವು. ಚಾರಣದ ಆರಂಭದಲ್ಲೇ ಸಣ್ಣದೊಂದು ನದಿ ಸಿಗುತ್ತದೆ. ಕಬ್ಬಿಣದ ಕಮಾನುಗಳಿಂದ ಮಾಡಿದ ಸೇತುವೆಯನ್ನು ದಾಟಿ ಮುಂದುವರಿದಾಗ ಸಿರೋಲಿ ಎಂಬ ಹಳ್ಳಿ ಸಿಗುತ್ತದೆ.
ಹಿಮಾಲಯದಲ್ಲೆಲ್ಲ ಸಿಗುವ ಕಲ್ಲುಗಳನ್ನು ಬಳಸಿ ಮಾಡಿದ ಸುಂದರವಾದ ಮನೆಗಳು. ಕಾಂಕ್ರೀಟು ಹಾಸಿದ ರಸ್ತೆ, ನಿಧಾನವಾದ ಏರುದಾರಿ. ಬೆಳಗ್ಗೆ ಎದ್ದು ಹಳ್ಳಿಗರು ತಮ್ಮ ದನಕರುಗಳ ಆರೈಕೆ ಮಾಡುತ್ತಾ, ಚಹಾ ಹೀರುತ್ತಾ ಕುಳಿತಿದ್ದರು. ಸುಮಾರು ಅರ್ಧ ಕಿಲೋಮೀಟರ್ ನಂತರ ಮನೆಗಳು ಮುಗಿದು ಕಾಡಿನ ನಡುವೆ ದಾರಿ ಪ್ರಾರಂಭವಾಗಿತ್ತು. ನಮ್ಮ ಎಡಗಡೆಗೆ ಹರಿಯುತ್ತಿದ್ದ ನದಿಯ ಶಬ್ದ ಸ್ವಲ್ಪ ಜೋರಾಗಿಯೇ ಇತ್ತು. ಕಳೆದ ಎರಡು ದಿನಗಳಿಂದ ಅಲ್ಲೆಲ್ಲ ಚೆನ್ನಾಗಿ ಮಳೆಯಾಗಿತ್ತಂತೆ. ನದಿಯ ಹರಿವಿನಿಂದಾಗಿ ಎರಡೂ ಕಡೆಗೆ ಆಳವಾದ ಕಣಿವೆ ಸೃಷ್ಟಿಯಾಗಿತ್ತು. ನಾವು ನಡೆಯುತ್ತಿದ್ದ ಕಡೆಗೆ ಕಾಡು ಚೆನ್ನಾಗಿ ಬೆಳೆದಿತ್ತು. ನಾವು ಚಾರಣ ಆರಂಭಿಸಿ ಸುಮಾರು ಎರಡು ಕಿಲೋಮೀಟರ್ ನಂತರ ಮತ್ತೊಂದು ಕಬ್ಬಿಣದ ಸೇತುವೆ ಸಿಗುತ್ತದೆ. ಆ ಸೇತುವೆ ದಾಟಿದಲ್ಲೊಂದು ಚಹಾ ಅಂಗಡಿ, ಅಲ್ಲಿಂದ ಮುಂದೆ ದಟ್ಟ ಕಾಡಿನ ನಡುವೆ ಏರುದಾರಿ.
ಕಾಂಕ್ರೀಟು ಹಾಕಿ ಸರಿಯಾದ ರಸ್ತೆಯನ್ನೇ ನಿರ್ಮಿಸಿದ್ದಾರೆ. ಮರಗಳಿಂದಾಗಿ ಸೂರ್ಯನ ಬೆಳಕು ಒಳಬರದಂತೆ ಚಂದದ ಚಪ್ಪರ. ಸುತ್ತಲೂ ನೂರಾರು ಬಗೆಯ ಮರಗಳು. ಎರಡು ಕಿಲೋಮೀಟರ್ ಏರುದಾರಿ ಮುಗಿದು ನೇರದಾರಿ ಪ್ರಾರಂಭವಾಗುವಲ್ಲಿ ಕಲ್ಲಿನ ಬಂಡೆಯ ಮೇಲೆ ಕೆತ್ತಿದ ಪ್ರಾಚೀನ ಶಿಲಾಶಾಸನವೊಂದು ಸಿಗುತ್ತದೆ. ಅಲ್ಲಿಂದ ಮುಂದೆ ಗಣೇಶನ ಗುಡಿ, ಅದು ಬಂತು ಎಂದರೆ ಅನಸೂಯಾ ಮಂದಿರ ಬಂತೆಂದು ಅರ್ಥ. ಅಲ್ಲೇ ಭತ್ತದ ಗದ್ದೆ ನಳನಳಿಸುತ್ತಿತ್ತು. ನಮ್ಮನ್ನು ನೋಡಿ ಗಾಬರಿಗೊಂಡು ಜಿಂಕೆಯ ಜಾತಿಗೆ ಸೇರಿದ ಚಾರ್ ಸೀಂಗಾ ಎಂಬ ಪ್ರಾಣಿ ಓಡಿಹೋಯಿತು. ಕಥೆಗಳಲ್ಲಿ ಓದಿದ ಋಷಿ ಮುನಿಗಳು ತಪಸ್ಸು ಮಾಡಿದ ಆಶ್ರಮ ಪರಿಸರ ಎಂಬುದು ಅನುಭವಕ್ಕೆ ಬರುವಂತಿತ್ತು ಆ ಜಾಗ.
ಮಂದಿರಕ್ಕೆ ಹೋಗಿ ಅನಸೂಯಾ ದೇವಿಯ ದೇವರ ದರ್ಶನ ಪಡೆದೆವು. ಸಣ್ಣಗೆ ಮಾತನಾಡಿದರೂ ಸರಿಯಾಗಿ ಕೇಳುವಷ್ಟು ನಿಶ್ಶಬ್ದ ಪರಿಸರ. ಅರ್ಚಕರು ಮಧುರವಾದ ಕಂಠದಿಂದ ಮಂತ್ರಗಳನ್ನು ಹಾಡಿ ಪ್ರಸಾದ ನೀಡಿದರು. ಅತ್ರಿಮುನಿ ಅನಸೂಯಾ ದೇವಿ, ತ್ರಿಮೂರ್ತಿಗಳು ಮತ್ತು ದತ್ತಾತ್ರೇಯನ ಕಥೆಯನ್ನು ಹೇಳಿದರು. ಅಲ್ಲಿಂದ ಮುಂದೆ ಸುಮಾರು ಒಂದೂವರೆ ಕಿಲೋಮೀಟರ್ ನಡೆದರೆ ಅತ್ರಿಮುನಿಗಳು ತಪಸ್ಸು ಮಾಡಿದ ಗುಹೆ ಸಿಗುತ್ತದೆ. ಅದಕ್ಕೂ ಮೊದಲೇ ಜಲಪಾತವೊಂದನ್ನು ದಾಟಬೇಕು. ಜಲಪಾತದಲ್ಲಿ ನೀರು ರಭಸವಾಗಿ ಬೀಳುತ್ತಿದ್ದುದರಿಂದ ನಮಗೆ ಆಕಡೆ ದಾಟುವುದು ಸಾದ್ಯವಾಗಲಿಲ್ಲ. ಜಲಪಾತವನ್ನು ಕಣ್ತುಂಬಾ ನೋಡಿ ಮತ್ತೆ ಆ ಸುಂದರವಾದ ಕಾಡುದಾರಿಯಲ್ಲಿ ಅನಸೂಯಾ ಮಂದಿರಕ್ಕೆ ಬಂದೆವು.
ಅಲ್ಲೇ ಇದ್ದ ಪುಟ್ಟ ಹೋಟೆಲಿನಲ್ಲಿ ಚಹಾ ಹೀರುತ್ತಿದ್ದಾಗ ಹತ್ತಿರದ ಕಟ್ಟಡದ ಮೇಲೆ ಗುಬ್ಬಚ್ಚಿಯೊಂದು ಓಡಾಡುತ್ತಿರುವುದು ಕಾಣಿಸಿತು. ಭತ್ತದ ಗದ್ದೆಗಳು ಇದ್ದುದರಿಂದ ಅವುಗಳಿಗೆ ಆಹಾರ ಸಿಗುವ ಕಾರಣ ಇಲ್ಲಿವೆ ಎಂದುಕೊಂಡು ಅವುಗಳ ಫೋಟೋ ತೆಗೆದುಕೊಂಡೆ. ಆಗ ಅದರ ಪಕ್ಕ ಇನ್ನೊಂದು ಗುಬ್ಬಚ್ಚಿ ಬಂತು. ನೋಡುವಾಗ ಗಂಡು ಗುಬ್ಬಚ್ಚಿ ಎಂದು ಅನಿಸಿತು. ಆದರೆ ಅದರ ಬಣ್ಣ ಮತ್ತು ದೇಹದ ಮೇಲಿನ ವಿನ್ಯಾಸ ನಮ್ಮ ಊರಿನ ಗುಬ್ಬಚ್ಚಿಗಳ ಹಾಗಿರಲಿಲ್ಲ. ತಲೆಯ ಮೇಲೆ ಬೂದುಬಣ್ಣದ ಬದಲಾಗಿ ಕೆಂಪು ಮಿಶ್ರಿತ ಕಂದು ಬಣ್ಣ, ಅದು ಬೆನ್ನು ಮತ್ತು ರೆಕ್ಕೆಗಳ ಮೇಲೆಲ್ಲಾ ಆವರಿಸಿತ್ತು. ತಕ್ಷಣ ನೋಡುವಾಗ ಸನ್ಯಾಸಿಗಳು ಧರಿಸುವ ಕಾವಿ ಬಣ್ಣದಂತೆ ಭಾಸವಾಗುತ್ತಿತ್ತು. ಹೆಣ್ಣು ಗುಬ್ಬಚ್ಚಿಯ ರೆಕ್ಕೆಯ ಮೇಲೂ ಕಾವಿಬಣ್ಣದ ಛಾಯೆ ತಿಳಿಯಾಗಿ ಕಾಣುತ್ತಿತ್ತು. ಹೊಟ್ಟೆ ಮತ್ತು ಕೆನ್ನೆಯ ಭಾಗದಲ್ಲಿ ತಿಳಿ ಹಳದಿಬಣ್ಣ ಹೊಂದಿರುವ ಈ ಗುಬ್ಬಚ್ಚಿಯನ್ನು ಸರಿಯಾಗಿ ನೋಡಿದಾಗ ನಮ್ಮೂರಿನ ಗುಬ್ಬಚ್ಚಿಗಳಿಗಿಂತ ವರ್ಣಮಯವಾಗಿ ಸುಂದರವಾಗಿ ಕಾಣುತ್ತಿತ್ತು. ಅಲ್ಲೇ ಸಿಗುವ ಕಾಳುಗಳನ್ನು ಹೆಕ್ಕಿ ತಿನ್ನುತ್ತಾ ಚೀಂವ್ ಗುಟ್ಟುತ್ತಾ ಓಡಾಡುತ್ತಿತ್ತು. ನನ್ನ ಹಕ್ಕಿ ಪುಸ್ತಕ ತೆರೆದು ಇದನ್ನು ಹುಡುಕಿದಾಗಲೇ ತಿಳಿದದ್ದು ಇದು ಹಿಮಾಲಯದ ತುಸು ಎತ್ತರ ಪ್ರದೇಶದ ಹಳ್ಳಿಗಳ ಕಾಡಂಚಿನಲ್ಲಿ, ಕೃಷಿ ಭೂಮಿಯ ಆಸುಪಾಸಿನಲ್ಲಿ ಮಾತ್ರ ಕಾಣಸಿಗುವ ಗುಬ್ಬಚ್ಚಿ. ಕೆಲವೇ ಸೀಮಿತ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವ ಇಂತಹ ಸ್ಥಳೀಯ ಜೀವಿಗಳಿಗೆ Endemic Species ಎಂದು ಕರೆಯುತ್ತಾರೆ.
ಕನ್ನಡದ ಹೆಸರು: ಕೆಂಗಂದು ಗುಬ್ಬಚ್ಚಿ
ಇಂಗ್ಲೀಷ್ ಹೆಸರು: Russet Sparrow
ವೈಜ್ಞಾನಿಕ ಹೆಸರು: Passer rutilans
ಚಿತ್ರ: ಅರವಿಂದ ಕುಡ್ಲ
ಸುಂದರವಾದ ಹಿಮಾಲಯದ ಈ ಹಳ್ಳಿ ಹಾಗೂ ಕೆಂಗಂದು ಗುಬ್ಬಚ್ಚಿ ನೋಡಿದ ಸಂತೋಷವನ್ನು ಮೆಲುಕು ಹಾಕುತ್ತಾ ಮತ್ತೆ ಕೆಳಗಿಳಿದು ಮಂಡಲ್ ಎಂಬ ಊರನ್ನು ತಲುಪಿ, ಊಟ ಮುಗಿಸಿ. ನಮ್ಮ ಮುಂದಿನ ಗುರಿಯಾದ ಉರ್ಗಾಮ್ ಎಂಬ ಹಳ್ಳಿಗೆ ಹೊರಟೆವು.
ಮುಂದಿನ ವಾರ ಇನ್ನೊಂದು ಹಕ್ಕಿಯನ್ನು ನೋಡಿದ ಕಥೆಯೊಂದಿಗೆ ಮತ್ತೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************