-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 11

ನಿಷ್ಪಾಪಿ ಸಸ್ಯಗಳು : ಸಂಚಿಕೆ - 11

ನಿಷ್ಪಾಪಿ ಸಸ್ಯಗಳು : ಸಂಚಿಕೆ - 11
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

        
         ಪ್ರೀತಿಯ ಮಕ್ಕಳೇ, ಹೇಗಿದ್ದೀರಿ? ನಮ್ಮ ಇತ್ತೀಚಿನ ದಿನಮಾನಗಳ ಬಗ್ಗೆ ನೀವು ಗಮನಿಸ್ತಾ ಇದ್ದೀರಾ...? ಹಿಂದೆಲ್ಲಾ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಎಡೆಬಿಡದೆ ಸುರಿಯುತ್ತಿದ್ದ ಮಳೆ ಈ ಬಾರಿ ಕೆಲವು ದಿನಗಳಿಗೆ ಮಾತ್ರ ಸೀಮಿತಗೊಳಿಸಿ ವಿಶ್ರಮಿಸಿದೆ.
      ಮಳೆಯ ಪ್ರಭಾವದಿಂದಾಗಿ ಅದೆಷ್ಟೋ ಕ್ರಿಮಿ ಕೀಟಗಳು, ಪುಟಾಣಿ ಸಸ್ಯಗಳು, ಲಲ್ಲೆಗರೆಯುವ ಹೂಗಳು ನಗಬೇಕಿತ್ತು. ವಸುಧೆಗೆ ಸವಿಯುಣಿಸಬೇಕಿತ್ತು. ಆದರೆ ಎಲ್ಲವೂ ಸ್ಥಿತ್ಯಂತರಕ್ಕೆ ಸಿಲುಕಿ ಒದ್ದಾಡುತ್ತಿವೆ ಎಂದು ಗಮನಿಸಿದರೆ ಅರಿವಾಗುವುದು.
      ಹೀಗೆ ಮಳೆಗಾಗಿ ಕತ್ತು ನೋಯುವಂತೆ ಕಾಯುತ್ತಿರುವ ಒಂದು ನಿಷ್ಪಾಪಿ ಸಸ್ಯ ಅಂದರೆ ನಮ್ಮ ಇಂದಿನ ಮಾತುಕತೆಯ ಬಳ್ಳಿ ನಾಮದ ಬೇರು. ಮಳೆಗಾಲದ ಆರಂಭದಲ್ಲಿ ಎಲ್ಲೆಡೆ ಚಿಗುರೊಡೆಯುವ ಈ ಬಳ್ಳಿಯ ಫೋಟೋ ತೆಗೆಯಲು ನಾನು ಈ ಬಾರಿ ಗುಡ್ಡವೆಲ್ಲ ಸುತ್ತಿದರೂ ಉಲ್ಲಾಸದಿಂದ ನಗುವ ಒಂದು ಬಳ್ಳಿ ಯನ್ನೂ ಕಾಣಲಿಲ್ಲ. ಚಿಗುರು ಮುರುಟಿಸಿಕೊಂಡು ಮಳೆಗಾಗಿ ಆಕಾಶವನ್ನೆ ನೋಡುತ್ತಿರುವಂತೆ ಅನಿಸಿತು. ಮಲೆನಾಡು, ಕರಾವಳಿ, ಬೆಟ್ಟ ಗುಡ್ಡ, ಪೊದರುಗಳ ನಡುವೆ ಯಥೇಚ್ಛವಾಗಿ ಕಂಡುಬರುತ್ತಿದ್ದ ಈ ಬಳ್ಳಿ ಈಗೀಗ ಮಾನವನು ಮಣ್ಣನ್ನೇ ಮಾರುತ್ತಿರುವ ಕಾರಣದಿಂದಾಗಿಯೂ ಅಪರೂಪವಾಗುತ್ತಿದೆ.
   ತೆಳ್ಳಗಿನ ಉದ್ದನೆಯ ಎಲೆಯ ನಡುವೆ ಚಾಚಿರುವ ಬಿಳಿಯ ಗೆರೆಯು ಈ ಬಳ್ಳಿಗೆ ನಾಮದ ಬೇರೆಂಬ ಹೆಸರು ತಂದರೆ ಇದರ ಬೇರಿಗಿರುವ ಆಹ್ಲಾದಕರ ಸುಗಂಧದಿಂದಾಗಿ ಸುಗಂಧಿ ಬಳ್ಳಿಯಾಗಿದೆ. ಎಲೆಯನ್ನು ಕೊಯ್ದಿರೆಂದರೆ ಹಾಲಿನಂತಹ ದ್ರವ ಒಸರುವುದರಿಂದ ಹಾಲುಬಳ್ಳಿ, ಬೇರನ್ನು ಸಂಪೂರ್ಣವಾಗಿ ಅಗೆದು ತೆಗೆಯಲು ಕಷ್ಟಸಾಧ್ಯವಾದುದರಿಂದ ಅನಂತಮೂಲ. ನಮ್ಮ ಹಿರಿಯರು ಎಷ್ಟೊಂದು ಚಂದದ ಹೆಸರುಗಳನ್ನಿಡುವ ಮೂಲಕ ಈ ಸಸ್ಯವನ್ನು ಪರಿಚಯಿಸಿದ್ದಾರಲ್ಲವೇ!
     ನನ್ನಾರಿ, ಸೊಗದೆ ಬೇರು, ಸಾರಿವ ಎಂದೂ ಕರೆಸಿಕೊಳ್ಳುವ ಈ ಬಳ್ಳಿ ಹಳ್ಳಿಗರಿಗೆ ತೀರಾ ಪರಿಚಿತವಾದ ಸಸ್ಯ. ಇದು ಹಬ್ಬಿಕೊಳ್ಳಲು ಆಶ್ರಯವಿಲ್ಲದೆಡೆಗಳಲ್ಲಿ ಬರಿಯ ನೆಲದ ಮೇಲೇ ಹರಡಿಕೊಳ್ಳುತ್ತದೆ. ಆದರೆ ಬೇರುಗಳು ಆಳವಾಗಿ ಇಳಿಯುತ್ತವೆ. ಬಹಳ ತೆಳ್ಳಗಿರುವ ಈ ಬಳ್ಳಿಯ ಬೇರೂ ಕೂಡ ಬೆರಳ ಗಾತ್ರ ಮೀರುವುದು ಅತಿ ವಿರಳ.
      Hemidesmus Indicus ಎಂಬ ಸಸ್ಯಶಾಸ್ತ್ರೀಯ ಹೆಸರುಳ್ಳ ನಾಮದ ಬೇರನ್ನು ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಬಳಸಬಹುದು. ನಿತ್ಯಕ್ಕೆ ಬೆಲ್ಲ ಮತ್ತು ನಿಂಬೆಯ ಜೊತೆ ಕಷಾಯ ಸೇರಿಸಿ ಪಾನಕವಾಗಿಯೂ, ಚಹಾ ಪುಡಿಯ ಜೊತೆ ಜೊತೆಗೆ ಇದರ ಪುಡಿಯನ್ನೂ ಸೇರಿಸಿ ಬೇಯಿಸಿಯೂ ಬಳಸುತ್ತಾರೆ. ಇದರ ಪರಿಮಳಕ್ಕೆ ಒಂದಿಷ್ಟು ಜೀರಿಗೆಯೂ ಸಾಥ್ ನೀಡಿದರೆ ಮತ್ತಷ್ಟು ಸೊಗಸು.
      ಈ ಸೊಗದೆ ಅಥವಾ ನಾಮದ ಬೇರು ಆಯುರ್ವೇದದಲ್ಲಿ ಹಲವಾರು ರೋಗಗಳಿಗೆ ಪರಿಣಾಮಕಾರಿ ಔಷಧಿಯಾಗಿದೆ. ಮೂತ್ರಮಾರ್ಗದ ಎಲ್ಲಾ ಸಮಸ್ಯೆಗಳನ್ನು ತನ್ನ ಚಮತ್ಕಾರದಿಂದ ಗುಣಪಡಿಸುತ್ತದೆ. ಆಸ್ಪತ್ರೆಗಳಿಗೆ ತೆರಳಿದರೂ ಕಡಿಮೆಯಾಗದ ಆರೋಗ್ಯ ಸಮಸ್ಯೆಗಳಿಗೆ ಇದು ಕೆಲವೊಮ್ಮೆ ಪರಿಹಾರ ನೀಡಬಲ್ಲದು. ವೈರಸ್ ವಿರುದ್ಧ ಹೋರಾಡುವ ಇದರ ಗುಣದಿಂದಾಗಿ ಏಡ್ಸ್, ಕಾಮಾಲೆ, ಅಜೀರ್ಣ, ಪದೇಪದೇ ಜ್ವರ, ಹಸ್ತ ಪಾದ ಬೆವರುವುವುದು, ಮೂತ್ರದಲ್ಲಿ ಉರಿ, ನೋವು, ಹುಣ್ಣು ಇತ್ಯಾದಿಗಳಲ್ಲಿ ಉಪಶಮನಕಾರಿಯಾಗಿದೆ. ವಾತ, ಪಿತ್ತ, ಕಫಗಳ ಸಮತೋಲನ ಕಾಯಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಮೊಡವೆ, ಸೌಂದರ್ಯ ವೃದ್ಧಿಗೆ, ಒಣಕೆಮ್ಮು, ದೇಹದ ಕಾಂತಿ ವೃದ್ಧಿಗೆ, ಅಗ್ನಿ ವೃದ್ಧಿಕಾರಕವಾಗಿ, ಕಣ್ಣಿನ ಹೂವಿಗೆ, ಅತಿ ಬಾಯಾರಿಕೆ, ರಕ್ತ ವಿಕಾರ, ಚರ್ಮವ್ಯಾಧಿ ಇತ್ಯಾದಿಗಳಿಗೆ ನಾಮದ ಬೇರನ್ನು ಬಳಸಲಾಗುತ್ತದೆ.
      ನಿತ್ಯವೂ ಸೇವನೆ ಹೇಗೆ ಉಚಿತವಲ್ಲವೋ ಹಾಗಯೇ ಬೇರನ್ನು ಹೆಚ್ಚು ಬೇಯಿಸುವುದೂ ಸರಿಯಲ್ಲ. ಕೆಲವೊಮ್ಮೆ ಇಂತಹ ಮೂಲಿಕೆಗಳು ಮನೆಯ ಬಳಿಯೇ ಇದ್ದರೂ ನಮ್ಮ ಗಮನಕ್ಕೆ ಬಾರದೆ ಮೂಲೆಗಂಪಾಗುವುದಿದೆ. ಆಳವಾದ ಬೇರನ್ನು ಅಗೆದು ತೆಗೆಯುವಾಗ ಕೊನೆಗೊಂದಿಷ್ಟು ಬೇರನ್ನು ಬಿಟ್ಟು ಮಣ್ಣು ಹಾಕಿದರೆ ಗಿಡವು ಮತ್ತೆ ಚಿಗುರಲು ಅನುಕೂಲವಾಗುವುದು. ಏಕೆಂದರೆ ಇದನ್ನು ಚಟ್ಟಿಯಲ್ಲಿ ಬೆಳೆಸುವ ಸಾಹಸ ಕೈಗೂಡುವುದು ಕಷ್ಟ.
         ಹೀಗಿದ್ದ ಮೇಲೆ ಈ ನಾಮದ ಬೇರಿನ ಪರಿಮಳದ ಬಗ್ಗೆ ನಿಮಗೂ ಕುತೂಹಲ ಮೂಡಿರಬಹುದಲ್ಲವೇ? ನಿಸರ್ಗ ನೀಡಿದ ನೈಜ ಘಮ ನಿಮ್ಮನ್ನೂ ತಟ್ಟಲೆಂದು ಹಾರೈಸುವೆ. ಹುಡುಕಿ ಬಳಸಿ. ನನಗೂ ತಿಳಿಸಿ.
      ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗೋಣ. ಏನಂತೀರಾ.... 
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************

Ads on article

Advertise in articles 1

advertising articles 2

Advertise under the article