ಹಕ್ಕಿ ಕಥೆ : ಸಂಚಿಕೆ - 111
Wednesday, August 9, 2023
Edit
ಹಕ್ಕಿ ಕಥೆ : ಸಂಚಿಕೆ - 111
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಹಿಮಾಲಯ ಎಂದರೆ ನನ್ನ ಕಲ್ಪನೆ ಮಂಜಿನ ಬೆಟ್ಟಗಳು ಎಂದಾಗಿತ್ತು. ಆ ಮಂಜಿನ ಬೆಟ್ಟಗಳ ಕೆಳಗೆ ಸುಂದರವಾದ ಹುಲ್ಲುಗಾವಲು ಮತ್ತು ಅದಕ್ಕೂ ಕೆಳಗಡೆ ದಟ್ಟವಾದ ಕಾಡುಗಳು ಇರುತ್ತವೆ ಎಂದು ನನಗೂ ತಿಳಿದಿರಲಿಲ್ಲ. ರುದ್ರನಾಥದ ಚಾರಣ ಅಂತಹ ಕಾಡು ಮತ್ತು ಹುಲ್ಲುಗಾವಲಿನ ಪರಿಚಯ ಮಾಡಿಸಿತ್ತು. ಎರಡು ದಿನಗಳ ಚಾರಣ ಮುಗಿಸಿ ರುದ್ರನಾಥ ತಲುಪಿ ವಿಶ್ರಾಂತಿ ಮಾಡಿದ ನಾವು ಆ ದಿನ ಸಂಜೆ ರುದ್ರನಾಥದ ಸುತ್ತಮುತ್ತಲಿನ ಸುಂದರ ಬುಗಿಯಾಲ್ಗಳ ದರ್ಶನ ಮಾಡಿದೆವು. ಹಿಮಾಲಯದಲ್ಲಿ ಹುಲ್ಲುಗಾವಲು ಪ್ರದೇಶಗಳಿಗೆ ಬುಗಿಯಾಲ್ ಎಂದು ಕರೆಯುತ್ತಾರೆ. ರುದ್ರನಾಥ ದೇವಾಲಯದ ಬದಿಯಲ್ಲೇ ಚಂದದ ಹುಲ್ಲುಗಾವಲು ಪ್ರದೇಶವಿತ್ತು. ಗುಡ್ಡದ ಇಳಿಜಾರಿನ ಆ ಪ್ರದೇಶ ದೊಡ್ಡದೊಂದು ಬುಟ್ಟಿಯಂತೆ ಕಾಣಿಸುತ್ತಿತ್ತು. ಹುಲ್ಲುಗಾವಲಿನ ಮಧ್ಯೆ ಸಣ್ಣದೊಂದು ಕೆರೆ ಇತ್ತು. ಈ ಕೆರೆಯನ್ನು ಸೂರ್ಯ ಕುಂಡ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಅಲ್ಲೇ ಒಂದು ಹೇಸರಗತ್ತೆ ಮೇಯುತ್ತಿತ್ತು. ಇವುಗಳನ್ನು ಅಲ್ಲಿನ ಜನ ಖಚ್ಚರ್ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಗುಡ್ಡದ ದುರ್ಗಮ ದಾರಿಗಳಲ್ಲಿ ಅಗತ್ಯ ಸಾಮಾನುಗಳನ್ನು ಸಾಗಿಸಲು ಇವುಗಳೇ ಆಸರೆ. ಸೂರ್ಯ ಕುಂಡದಿಂದ ಸ್ವಲ್ಪ ಮೇಲೆ ಗುಡ್ಡದ ಇಳಿಜಾರಿನ ಕಲ್ಲುಬಂಡೆಯ ಅಡಿಯಲ್ಲಿ ಸರಳವಾದ ರುದ್ರನಾಥ ಶಿವದೇವಾಲಯವಿದೆ. ಅಲ್ಲೇ ಸಿಗುವ ಕಲ್ಲುಗಳನ್ನೇ ಬಳಸಿ ಸುಂದರವಾಗಿ ಇದನ್ನು ನಿರ್ಮಿಸಿದ್ದಾರೆ. ಅದರ ಪಕ್ಕದಲ್ಲಿ ಅಲ್ಲಿನ ಪ್ರಕೃತಿಯ ಸಂಕೇತವಾಗಿ ವನದೇವಿಯ ಗುಡಿ ಇದೆ.
ರುದ್ರನಾಥನ ಗುಡಿಯ ಪಕ್ಕದಲ್ಲಿ ನಡೆದು ಹೋದರೆ ಅಲ್ಲೇ ಸ್ವಲ್ಪ ಎತ್ತರದಲ್ಲಿ ಇನ್ನೊಂದು ನೀರಿನ ಮೂಲವಿದೆ. ಸುಂದರವಾದ ಈ ಕೊಳವನ್ನು ಸರಸ್ವತೀಕುಂಡ ಎಂದು ಕರೆಯುತ್ತಾರೆ. ಅಲ್ಲಿನ ನೀರು ಸ್ಫಟಿಕದಂತೆ ಶುಭ್ರವಾಗಿ ಕಾಣುತ್ತಿತ್ತು. ಅದರ ಸುತ್ತಮುತ್ತಲಿನ ಪರಿಸರವನ್ನು ನೋಡಿಯೇ ಅನುಭವಿಸಬೇಕು. ಕತ್ತಲಾಗುತ್ತಿದ್ದಂತೆ ದೇವಾಲಯದಲ್ಲಿ ಪೂಜೆ ಆರಂಭವಾಯಿತು. ಪೂಜೆ ಮುಗಿಸಿಕೊಂಡು ನಮ್ಮ ವಸತಿ ತಲುಪುವಾಗಲೇ ಮಳೆ ಆರಂಭವಾಗಿತ್ತು. ಬೇಗನೆ ಊಟ ಮುಗಿಸಿ ಬೆಚ್ಚಗೆ ಮಲಗಿಕೊಂಡೆವು. ರಾತ್ರಿಯೆಲ್ಲ ಗುಡುಗು ಸಹಿತ ಜೋರಾದ ಮಳೆಯ ಶಬ್ದ ಕೇಳುತ್ತಿತ್ತು. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದಾಗ ಮಳೆಯೆಲ್ಲ ಸುರಿದು ಆಕಾಶ ಶಾಂತವಾಗಿತ್ತು. ನಿಧಾನವಾಗಿ ಆಕಾಶ ತಿಳಿಯಾಗತೊಡಗಿತ್ತು. ಎಲ್ಲರೂ ಎದ್ದು ತಯಾರಾಗಿ ಬೆಳಗ್ಗಿನ ಚಹಾ ಕುಡಿದು ಹೊರಡಲು ತಯಾರಾದೆವು. ಸುಮಾರು ಐದೂವರೆಗೆ ನಾವು ಹೊರಟಾಗ ದಾರಿ ಕಾಣುವಷ್ಟು ಬೆಳಕಾಗಿತ್ತು. ಹಿಂದಿನ ರಾತ್ರಿ ಬಂದ ಭಾರೀ ಮಳೆಗೆ ನಡೆಯುವ ದಾರಿಯೆಲ್ಲ ತೊಳೆದಿಟ್ಟಂತಾಗಿತ್ತು. ಮಳೆ ಬಂದು ಆಕಾಶ ತಿಳಿಯಾದ್ದರಿಂದ ಸುತ್ತಮುತ್ತಲಿನ ದೃಶ್ಯಗಳೆಲ್ಲ ಬಹಳ ಸುಂದರವಾಗಿ ಕಾಣುತ್ತಿದ್ದವು. ಹಿಂದಿನ ಎರಡೂ ದಿನ ಸರಿಯಾಗಿ ಕಾಣದ ಹಿಮಾಲಯದ ಮಂಜಿನ ಬೆಟ್ಟಗಳು ಕಾಣಲಾರಂಭಿಸಿದ್ದವು.
ಪಿತೃಧಾರಾ ಎಂಬಲ್ಲಿಗೆ ಬಂದಾಗ ಉತ್ತರದಲ್ಲಿ ಹಿಮಾಲಯ ಪರ್ವತಗಳು ಎಳೆಬಿಸಿಲಿಗೆ ಸುಂದರವಾಗಿ ಕಾಣುತ್ತಿದ್ದವು. ತ್ರಿಶೂಲ ಪರ್ವತ, ನಂದಾದೇವಿ, ಹಾಥೀ ಘೋಡಾ ಪರ್ವತ, ಚೌಖಂಭಾ ಎಂದೆಲ್ಲ ಅವುಗಳ ಹೆಸರನ್ನು ಹೇಳಿ ನಮ್ಮ ಗೈಡ್ ಅಮಿತ್ ನಮಗೆ ಅವುಗಳನ್ನು ಪರಿಚಯಿಸಿದ. ಅಲ್ಲಿಂದ ಹೊರಡುವುದಕ್ಕೆ ಮನಸ್ಸಾಗದಿದ್ದರೂ ಸಂಜೆಯ ವೇಳೆಗೆ ಮತ್ತೆ ಸಗರ್ ಹಳ್ಳಿ ತಲುಪಬೇಕಾದ್ದರಿಂದ ನಿಧಾನಕ್ಕೆ ಮುಂದುವರೆದೆವು. ಒಂದು ದಿನ ಹಿಂದೆ ನಾವು ಉಳಿದುಕೊಂಡಿದ್ದ ಪನಾರ್ ಬುಗಿಯಾಲ್ ನ ಢಾಬಾದಲ್ಲಿ ಬೆಳಗ್ಗಿನ ತಿಂಡಿ ಆಲೂಪರಾಠಾ ಮತ್ತು ಮ್ಯಾಗಿ ಸೇವಿಸಿ ಚಹಾ ಕುಡಿದೆವು. ಅಲ್ಲಿಂದ ಕೆಳಗಿನ ಕಣಿವೆಯೂ ಸುಂದರವಾಗಿ ಕಾಣುತ್ತಿತ್ತು. ಹೊಟ್ಟೆಯೂ ತುಸು ಶಾಂತವಾದ್ದರಿಂದ ಸುತ್ತಲಿನ ದೃಶ್ಯಗಳು ಇನ್ನೂ ಸುಂದರವಾಗಿ ಕಾಣಲಾರಂಭಿಸಿದ್ದವು. ಹಿಂದಿನ ರಾತ್ರಿ ಬಂದ ಭಾರೀ ಮಳೆಗೆ ನಡೆಯುವ ದಾರಿಯಲ್ಲೆಲ್ಲ ಹೊಸ ಜಲಪಾತಗಳು ಹುಟ್ಟಿಕೊಂಡಿದ್ದವು. ಕೆಲವೆಡೆ ದಾರಿಗೆ ಹಾಕಿದ್ದ ಕಲ್ಲುಗಳೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದವು. ಎರಡು ದಿನದ ಹಿಂದೆ ನಾವು ಗುಡ್ಡ ಏರುವಾಗ ಥಳುಕು ಬಳುಕಿನೊಂದಿಗೆ ವಯ್ಯಾರವಾಗಿ ಹರಿಯುತ್ತಿದ್ದ ನೀರು, ಸಿಟ್ಟಿನಿಂದ ಮುನಿಸಿಕೊಂಡಂತೆ ಭಾಸವಾಗುತ್ತಿತ್ತು. ಏರುವಾಗ ಆವರಿಸದ್ದ ಮಂಜಿನ ಮುಸುಕು ಇಳಿಯುವಾಗ ಇಲ್ಲದ ಕಾರಣ ಸುತ್ತಲಿನ ದಟ್ಟಕಾಡು ಸ್ಪಷ್ಟವಾಗಿ ಕಾಣುತ್ತಿತ್ತು.
ಹಕ್ಕಿ ಎಂದು ಹರಿಯುವ ನೀರಿನ ನಡುವೆ ಬಂಡೆಯೊಂದರತ್ತ ಕೈಮಾಡಿ ತೋರಿಸಿದರು. ಇನ್ನೆಲ್ಲೋ ನೋಡುತ್ತಿದ್ದ ನಾನು ಆ ಕಡೆ ತಿರುಗಿದಾಗ ಬಂಡೆಯ ಕಪ್ಪು ಬಣ್ಣಕ್ಕೂ ಹಕ್ಕಿಯ ಕಪ್ಪು ಬಣ್ಣಕ್ಕೂ ವ್ಯತ್ಯಾಸ ತಿಳಿಯದೆ ತಕ್ಷಣ ಹಕ್ಕಿ ಕಾಣಲೇ ಇಲ್ಲ. ಅಲ್ಲಿಂದ ಮುಂದಿನ ಬಂಡೆಗೆ ಹಾರುತ್ತಾ ನೆಗೆದಾಗಲೇ ನನಗೆ ಹಕ್ಕಿ ಕಾಣಿಸಿದ್ದು. ಸುಮಾರು ಮೈನಾ ಗಾತ್ರದ ಹಕ್ಕಿ. ಉದ್ದನೆಯ ಬಾಲ. ಬಾಲದಲ್ಲಿ ಬಿಳಿ ಗೀಟುಗಳು. ಬಾಲದ ತುದಿ, ಹೊಟ್ಟೆಯ ಭಾಗ, ರೆಕ್ಕೆ ಮತ್ತು ಹಣೆಯಲ್ಲಿ ಬಿಳಿ ಬಣ್ಣ. ಬೆನ್ನಿನ ಭಾಗದಲ್ಲಿ ಬಿಳೀ ಚುಕ್ಕೆಗಳು. ದೇಹದ ಉಳಿದ ಭಾಗಗಳೆಲ್ಲ ಕಡುಕಪ್ಪುಬಣ್ಣ. ಸಣ್ಣ ನೀರಿನ ಹರಿವಿನ ಸುತ್ತಲಿನ ಬಂಡೆಗಳ ಮೇಲೆ ಜಿಗಿಯುತ್ತಾ ಆ ದಡದಿಂದ ಈ ದಡಕ್ಕೆ ಹಾರುತ್ತಾ ನೀರಿಗೆ ಸಮೀಪದಲ್ಲೇ ಓಡಾಡುತ್ತಿತ್ತು. ಬಾಲವನ್ನು ಆಗಾಗ ಅಲ್ಲಾಡಿಸುತ್ತಾ ನೃತ್ಯ ಮಾಡಿದಂತೆ ಕಾಣುತ್ತಿತ್ತು. ಒಂದು ಜಾಗದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳದೇ ಆ ಕಡೆ, ಈ ಕಡೆ ಜಿಗಿಯುತ್ತಲೇ ಇತ್ತು. ಹಾರುವಾಗ ನೀರಿನ ಮೇಲೆಯೇ ತೇಲಿದಂತೆ ನೀರಿಗೆ ಸಮೀಪದಲ್ಲೇ ಹಾರುತ್ತಿತ್ತು. ಈ ಬಗ್ಗೆ ಮಾಹಿತಿ ಹುಡುಕಿದಾಗ ತಿಳಿದದ್ದು ಇದು ಕೇವಲ ಹಿಮಾಲಯದ ದಟ್ಟಕಾಡುಗಳ ನೀರಿನ ಮೂಲಗಳ ಬಳಿಯಲ್ಲೇ ವಾಸಮಾಡುವ, ಹಿಮಾಲಯದಲ್ಲಿ ಮಾತ್ರ ಕಾಣಸಿಗುವ ಹಕ್ಕಿ.
ಅಲ್ಲೇ ಇನ್ನೂ ಹಕ್ಕಿಗಳನ್ನು ಹುಡುಕೋಣ ಎಂದುಕೊಂಡರೂ ಅದಾಗಲೇ ಮಧ್ಯಾಹ್ನ ಕಳೆದಿತ್ತು, ಹೊಟ್ಟೆ ತಾಳಹಾಕುತ್ತಿತ್ತು. ಇನ್ನೂ ಬಹಳ ದೂರ ನಡೆಯುವುದು ಬಾಕಿ ಇತ್ತು. ಹಾಗಾಗಿ ಬೇಗಬೇಗನೇ ನಡೆದು ಮುಂದೆ ಸಿಕ್ಕ ಢಾಬಾ ದಲ್ಲಿ ಊಟ ಮಾಡಿ, ಸಂಜೆಯ ವೇಳೆಗೆ ಸಗರ್ ಹಳ್ಳಿ ತಲುಪಿದೆವು. ಹಿಮಾಲಯದಲ್ಲಿ ಮಾತ್ರ ಕಾಣಸಿಗುವ ಸ್ಪಾಟೆಡ್ ಫೋರ್ಕ್ ಟೈಲ್ ಹಕ್ಕಿಯ ಚಿತ್ರ ಮನಸ್ಸಿನಲ್ಲಿ ಇನ್ನೂ ಹಾಗೇ ಇತ್ತು.
ಇಂಗ್ಲೀಷ್ ಹೆಸರು: Spotted Forktail
ವೈಜ್ಞಾನಿಕ ಹೆಸರು: Enicurus maculatus
ಚಿತ್ರ ಕೃಪೆ: ಕೇಹಾರ್ ಸಿಂಗ್
ಮುಂದಿನ ವಾರ ಇನ್ನೊಂದು ಹಿಮಾಲಯದ ಹಕ್ಕಿಯನ್ನು ನೋಡಿದ ಕಥೆಯೊಂದಿಗೆ ಮತ್ತೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************