-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 10

ನಿಷ್ಪಾಪಿ ಸಸ್ಯಗಳು : ಸಂಚಿಕೆ - 10

ನಿಷ್ಪಾಪಿ ಸಸ್ಯಗಳು : ಸಂಚಿಕೆ - 10
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

        
ಪ್ರೀತಿಯ ಮಕ್ಕಳೇ, ಹೇಗಿದ್ದೀರಿ...?
    ನಾನಿಂದು ನಿಮ್ಮ ಜೊತೆ ಒಂದು ಬೇಲಿ ಗಿಡದ ಬಗ್ಗೆ ಮಾತನಾಡಬೇಕೆಂದಿದ್ದೇನೆ. ಇದನ್ನು  ಜಲಮೂಲಗಳ ಬಳಿ, ಪಾಳು ಭೂಮಿಯಲ್ಲಿ, ಹಾದಿ ಬದಿಯಲ್ಲಿ ಕಾಣಬಹುದಾದರೂ  ಗಟ್ಟಿಕಾಂಡವನ್ನು ಹೊಂದಿರುವ ಇದರ ಗುಣದಿಂದಾಗಿ ಭದ್ರತೆಗೆಂದು ಬೇಲಿಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿತ್ತು. ಇಂದು ಬೇಲಿಗಳೇ ಅಪರೂಪವಾದ ಕಾರಣದಿಂದ ಗಿಡವೂ ವಿರಳವಾಗಿದೆ. ಹಾಗಾದರೆ ಈ ಸಸ್ಯ ಯಾವುದೆಂದು ಬಲ್ಲಿರಾ ? 
     ಹೌದು ಮಕ್ಕಳೇ, ನಿಮ್ಮ ಊಹೆ ಸರಿಯಾಗಿದೆ. ಅದೇ ನೆಕ್ಕಿ ಗಿಡ ಅಥವಾ ಲಕ್ಕಿ ಗಿಡ. ಏಷ್ಯಾ ಹಾಗೂ ದಕ್ಷಿಣ ಆಫ್ರಿಕಾದ ಎಲ್ಲೆಡೆ  ಕಾಣಿಸುವ  ನೆಕ್ಕಿ ಪೊದೆಯಂತೆ ಬೆಳೆಯುವ ಸಸ್ಯವೇ ಆದರೂ ಕೆಲವೊಮ್ಮೆ ಫಲವತ್ತಾದ ಭೂಮಿ ಸಿಕ್ಕಿತೆಂದರೆ 6 ರಿಂದ 12 ಅಡಿಗಳೆತ್ತರವೂ ಬೆಳಯಬಲ್ಲದು. ಗಟ್ಟಿ ಕಾಂಡದ ಮೇಲೆ ಸೂಕ್ಷ್ಮವಾದ ಬಿಳಿಯ ಪದರಗಳು ಕಾಣಿಸುತ್ತವೆ. ಮೂರು, ಐದು ನೀಳ, ಕಿರು ಸಂಯುಕ್ತ ಎಲೆಗಳು ಕಾಂಡದ ಮೇಲೆ ಅಭಿಮುಖವಾಗಿ ಜೋಡಣೆಯಾಗಿರುತ್ತವೆ. ಎಲೆಗಳ ಮೇಲ್ಭಾಗ ಹಸಿರಾಗಿದ್ದರೆ ತಳಭಾಗ ಬೂದಿ ಬಣ್ಣವಿರುತ್ತದೆ. ಜುಲೈ, ಆಗಷ್ಟ್ ತಿಂಗಳಲ್ಲಿ  ನೆಕ್ಕಿ ಯ ಪುಟ್ಟ ಗೆಲ್ಲುಗಳ ತುದಿಗಳಲ್ಲಿ ಹೂ ಗೊಂಚಲುಗಳು ಕಾಣಿಸಿಕೊಳ್ಳುತ್ತದೆ. ಗೊಂಚಲಲ್ಲಿ ಹೂವುಗಳ ಜೋಡಣೆ  ಸಮಾನಾಂತರ ವಾಗಿರುತ್ತದೆ. ಬಿಳಿ ನೆಕ್ಕಿಯ ಹೂಗಳು ತಿಳಿ ಬಣ್ಣವಾದರೆ ಕರಿನೆಕ್ಕಿ ಹೂಗಳ ಬಣ್ಣ ಸ್ವಲ್ವ ಗಾಢವೆನಿಸುವ ನೇರಳೆ.
     ಸಂಸ್ಕೃತದಲ್ಲಿ ಬಿಳಿಹೂಗಳ  ಗಿಡವನ್ನು ಸಿಂಧುವಾರಾ ಎಂದು ಕರೆದರೆ ನೇರಳೆ ಹೂಗಳ ಗಿಡವನ್ನು ಶೆಫಾಲಿ ಎಂದೂ ಪ್ರತ್ಯೇಕಿಸಿಯೂ ಗುರುತಿಸಿದ್ದಾರೆ. ಕಾಯಿಗಳು ಗುಂಡಗಿದ್ದು ನಾಲ್ಕು ಬೀಜಗಳನ್ನು ಹೊಂದಿರುತ್ತದೆ.
       ಈ ಗಿಡವನ್ನು ನೀವು ಗುರುತಿಸಲು ಇದರ ನಿರ್ಲಿಪ್ತತೆಯನ್ನು ಗಮನಿಸಬೇಕು. ಇದು ಗೆದ್ದೆನೆಂದು ಬೀಗದ, ಸೋತೆನೆಂದು  ಜೋಲು ಮೋರೆ ಹಾಕದ ಸದಾ ಒಂದೇ ರೀತಿ ಕಾಣಿಸುವ ಸಸ್ಯ. ಇದರ ಬೇರು, ಎಲೆ, ತೊಗಟೆ ಗಳ ಬಳಕೆ  ಆಯುರ್ವೇದ, ಯುನಾನಿ, ಹೋಮಿಯೋಪತಿ ಮಾತ್ರವಲ್ಲದೆ ಸಾಂಪ್ರದಾಯಿಕ ವಾಗಿಯೂ ಮಹತ್ವ ಪಡೆದಿದೆ. ಈ ಲಕ್ಕಿ ಗಿಡದಲ್ಲಿ ಎರಡು ವಿಧಗಳಿವೆ. ಒಂದು ಕರಿನೆಕ್ಕಿಯಾದರೆ   ಸಹಜವಾಗಿ ಇನ್ನೊಂದು ಬಿಳಿನೆಕ್ಕಿ. 
        ಕರಿನೆಕ್ಕಿ ಗಿಡದ  ಕಾಂಡ ಮತ್ತು ಎಲೆ ಹಸಿರು ಮಿಶ್ರಿತ ನೇರಳೆಯಾದರೆ ಬಿಳಿನೆಕ್ಕಿಯ ಕಾಂಡ ಮತ್ತು ಎಲೆ ತಿಳಿ ಹಸಿರಾಗಿರತ್ತದೆ. ಔಷಧಕ್ಕಾಗಿ ಕರಿನೆಕ್ಕಿಯೆ ಉತ್ತಮವೆಂಬ ಅಭಿಪ್ರಾಯ ಇದ್ದರೂ  ಎರಡನ್ನೂ ಬಳಸುವರು.
     ಕನ್ನಡದಲ್ಲಿ ನೆಕ್ಕಿ, ಲಕ್ಕಿ, ನೆಕ್ಕಿಲಿ, ನೋಚಿ ಎಂದೂ ಹೆಸರಿರುವ ನೆಕ್ಕಿ ವೈಜ್ಞಾನಿಕವಾಗಿ ವೈಟಿಕ್ಸ್ ನೆಗುಂಡೊ (Vitex negundo) ಆಗಿದ್ದು ವರ್ಬಿನೇಸಿ (Verbenaceae) ಸಸ್ಯ ಕುಟುಂಬಕ್ಕೆ ಸೇರಿದೆ.
        ಜೀರ್ಣಕ್ರಿಯೆಯ ಸಮಸ್ಯೆಗಳಲ್ಲಿ, ಕೆಮ್ಮು, ಅಸ್ತಮಾ, ವಾತ, ಕಫ, ಬಾಲಗ್ರಹ, ಜ್ವರ, ಸಂಧಿನೋವು, ಬಾಯಿಯ ದುರ್ಗಂಧ, ಗಂಡಮಾಲೆ, ಅಲರ್ಜಿ, ಪೋಲಿಯೋ, ಮೂರ್ಛೆರೋಗ, ನರದೌರ್ಬಲ್ಯಗಳಿಗೆ ಉಪಶಮನ ನೀಡುವಲ್ಲಿ ಸಹಕರಿಸುತ್ತಿರುವ ಈ ನಿಷ್ಪಾಪಿ ಸಸ್ಯ ಖಾರ, ಕಹಿ, ಒಗರು ರಸವನ್ನು ಹೊಂದಿದೆ. ಗಂಭೀರ ಅಡ್ಡಪರಿಣಾಮಗಳಿಲ್ಲದೇ ಇದ್ದರೂ ಉಷ್ಣ ಪ್ರವೃತ್ತಿಯದ್ದಾಗಿರುವುದರಿಂದ ಗರ್ಭಿಣಿಯರು, ಸೂಕ್ಷ್ಮ ದೇಹ ಪ್ರಕೃತಿಯವರು ಬಳಸುವಾಗ ಎಚ್ಚರವಹಿಸಬೇಕಾಗುತ್ತದೆ.  ಚಹಾದಂತೆ ಕಷಾಯವಾಗಿ ಅಲ್ಪ ಪ್ರಮಾಣದಲ್ಲಿ ಸೇವನೆ, ಕಷಾಯದ ಮಸಾಜ್, ಎಲೆಗಳ ಲೇಪ ಹೀಗೆ ಇತರ ಸಸ್ಯಮೂಲಗಳ ಜೊತೆಗೆ ಬಳಸಲ್ಪಡುವ ಈ ಸಸ್ಯವು ಕೀಟ ನಿರೋಧಕ ಗುಣವನ್ನು ಹೊಂದಿದೆ.
       ಮಕ್ಕಳೇ, ನೀವು ಹಳ್ಳಿಗಳಲ್ಲಿರುವ  ದನದ ಕೊಟ್ಟಿಗೆಗಳಿಗೆ ಹೋದರೆ ಮಾಡಿಗೆ ಈನೆಕ್ಕಿ ಸೊಪ್ಪನ್ನು ಕಟ್ಟಿರುತ್ತಾರೆ. ಏಕೆಂದರೆ ಹೀಗೆ ಅಲ್ಲಲ್ಲಿ ನೆಕ್ಕಿಸೊಪ್ಪು ಕಟ್ಟಿದರೆ ಜಾನುವಾರುಗಳಿಗೆ ತೊಂದರೆ ನೀಡುವ ಕೀಟಗಳು ಹಟ್ಟಿಯೊಳಗೆ ಬರುವುದಿಲ್ಲ ಎಂದು ನಮ್ಮ ಹಿರಿಯರು ಕಂಡುಕೊಂಡಿದ್ದರು.
       ಇನ್ನು  ಮನೆಗಳಲ್ಲಿ ಮರಣವಾದರೆ ಎಲ್ಲಿಂದಾದರೂ ನೆಕ್ಕಿಸೊಪ್ಪನ್ನು ತರುತ್ತಾರೆ. ಮೃತದೇಹದ ಮೇಲೆ ಕುಳಿತುಕೊಳ್ಳಬಹುದಾದ ನೊಣ, ಸೊಳ್ಳೆಗಳನ್ನು ಓಡಿಸಲು  ಸುತ್ತಲೂ ಕುಳಿತ ದು:ಖತಪ್ತ ಬಂಧುಗಳು ನೆಕ್ಕಿಎಲೆಯನ್ನು  ಬೀಸುತ್ತಿರುತ್ತಾರೆ. ಮಾತ್ರವಲ್ಲದೆ ಮಳೆಗಾಲದಲ್ಲಿ ಸೊಳ್ಳೆ ಯ ಕಾಟ ತಪ್ಪಿಸಲು ನೆಕ್ಕಿಯ ತೊಗಟೆ, ಎಲೆಗಳನ್ನು ಕೆಂಡಕ್ಕೆ ಹಾಕಿ ಹೊಗೆಯೆಬ್ಬಿಸುತ್ತಾರೆ.
        ಮಕ್ಕಳೇ, ಈ ನೆಕ್ಕಿಯ ಕತೆ ಎಷ್ಟುಚೆನ್ನಾಗಿದೆಯಲ್ಲವೇ...? ನಾವು ಈ ಸಸ್ಯಪ್ರಪಂಚದಿಂದ ಪಡೆದುಕೊಳ್ಳುವವರಲ್ಲದೇ  ಅವು ನಮ್ಮಿಂದ ಏನನ್ನೂ ನಿರೀಕ್ಷಿಸಲಾರವು. ಅವುಗಳ ಪಾಲಿಗೆ ನಾವು ರಕ್ಷಕರಾಗಬೇಕೆ ಹೊರತು ಕಂಟಕ ತರುವವರಾಗಬಾರದು ಅಲ್ಲವೇ....? ನಿಮ್ಮ ಪ್ರತಿಕ್ರಿಯೆಗಳಿಂದ ನಿಮಗೂ ಸಸ್ಯಗಳ ಬಗ್ಗೆ ಆಸಕ್ತಿ ಮೂಡಿರುವ ಬಗ್ಗೆ ತಿಳಿದುಕೊಂಡಿದ್ದೇನೆ. ಹಾಗಿದ್ದರೆ ನೀವೂ ನೆಕ್ಕಿ ಗಿಡ ಹುಡಕುವಿರಾ...? ಹಿತ್ತಲ ಮೂಲೆಯಲ್ಲಿ ಅಂಗೈಯಗಲದ ಜಾಗ ನೀಡುವಿರಾ....? 
       ಸರಿ ಮಕ್ಕಳೇ, ಮುಂದಿನವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗೋಣ... 
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ ,  ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************




Ads on article

Advertise in articles 1

advertising articles 2

Advertise under the article