ಹೃದಯದ ಮಾತು : ಸಂಚಿಕೆ - 04
Thursday, August 17, 2023
Edit
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಅದೊಂದು ಕೊಠಡಿಯಲ್ಲಿ ಕುಳಿತು ವೀಕ್ಷಿಸುತ್ತಿದ್ದೆ. ಗಾಜಿನ ಬಾಗಿಲನ್ನು ಹೊಂದಿರುವ ಕಿಟಕಿಯತ್ತ ದಿಟ್ಟಿಸುತ್ತಿದ್ದೆ. ಕಿಟಕಿಯ ಗಾಜು ಅರ್ಧ ತೆರೆದಿತ್ತು. ದುಂಬಿಯೊಂದು ಒಳಗಡೆ ಬರುವ ಪ್ರಯತ್ನದಲ್ಲಿತ್ತು. ಅದು ಹಾರುತ್ತಾ ಬಂದು ಅರ್ಧ ಮುಚ್ಚಿದ ಕಿಟಕಿಯ ಗಾಜಿಗೆ ಬಡಿದು ಕೆಳಗೆ ಬಿತ್ತು. ಮತ್ತೆ ಎದ್ದು ಅದೇ ಪ್ರಯತ್ನವನ್ನು ಮುಂದುವರೆಸುತ್ತಿತ್ತು. ಪ್ರತಿ ಬಾರಿಯೂ ಕಿಟಕಿಗೆ ಬಡಿದು ಕೆಳಕ್ಕೆ ಬೀಳುತ್ತಿತ್ತು. ಸ್ವಲ್ಪ ಹೊತ್ತು ವೀಕ್ಷಿಸಿ ತೆರಳಿದ ನಾನು ಸಂಜೆ ಹಿಂತಿರುಗುವಾಗ ಆಶ್ಚರ್ಯಗೊಂಡಿದ್ದೆ. ಮತ್ತೆ ಮತ್ತೆ ಪ್ರಯತ್ನಿಸಿ ಒಳಕ್ಕೆ ಬರಲಾಗದೆ, ಕಿಟಕಿಯ ಗಾಜಿಗೆ ಬಡಿದು ಆ ದುಂಬಿ ಸಂಜೆಯಾಗುವಾಗ ಸತ್ತು ಬಿದ್ದಿತ್ತು.
ದುಂಬಿಯ ಈ ಪ್ರಯತ್ನದಲ್ಲಿ ನಮಗೆ ಉತ್ತಮ ಪಾಠವಿದೆ. ಮತ್ತೆ ಮತ್ತೆ ಒಂದೇ ಪ್ರಯತ್ನವನ್ನು ಪಡುತ್ತಿದ್ದ ದುಂಬಿ ಸ್ವಲ್ಪ ತನ್ನ ದಿಕ್ಕನ್ನು ಬದಲಿಸಿ ಅರ್ಧ ತೆರೆದ ಬಾಗಿಲಿನ ಕಡೆಗೆ ಹಾರುತ್ತಿದ್ದರೆ ನಿರಾಯಾಸವಾಗಿ ಒಳಗಡೆ ಬರುತ್ತಿತ್ತು. ದುಂಬಿಯಂತೆ ನಾವು ಮಾಡಿದ್ದೆ ಮಾಡುತ್ತೇವೆ. ತತ್ಪಲವಾಗಿ ವಿಫಲತೆಯನ್ನು ಪಡೆಯುತ್ತೇವೆ. ವಿಫಲತೆ ಮತ್ತೆ ಮತ್ತೆ ಕಾಡಿದಾಗ ಹತಾಶರಾಗುತ್ತೇವೆ. ಈ ಹತಾಶೆಯು ದುಂಬಿಯಂತೆ ನಮ್ಮ ಬದುಕನ್ನು ಕೊನೆಯಾಗಿಸುತ್ತದೆ. ಬದಲಾಗಿ ನಮ್ಮ ದಿಕ್ಕನ್ನು ಸ್ವಲ್ಪ ಬದಲಾಯಿಸಿದಲ್ಲಿ ಗುರಿಯನ್ನು ಮುಟ್ಟಬಹುದು. ಯಶಸ್ಸು ಪಡೆಯಬಹುದು.
ಬದುಕೊಂದು ಸುದೀರ್ಘ ಪಯಣ. ಸಫಲತೆ ತನ್ನಷ್ಟಕ್ಕೆ ಬರುವುದಿಲ್ಲ. ಅವಕಾಶ ದೊರೆತಾಗ ಬಳಸಿಕೊಳ್ಳುವವನೇ ಸಾಧಕನಾಗಬಲ್ಲ. ಒಂದೇ ಗುರಿಯೆಡೆಗೆ ಸಾವಿರಾರು ಬಾಣಗಳು ಗುರಿಯಿಟ್ಟಿರುತ್ತದೆ. ನಮ್ಮ ಬಾಣವೇ ಗುರಿಮುಟ್ಟಬೇಕಿದ್ದರೆ ಜಾಣ್ಮೆಯೊಂದಿಗೆ ಸಮಯ ಪ್ರಜ್ಞೆಯೂ ಬೇಕಿದೆ. ಇಂದು ನಮ್ಮ ದೇಶದಲ್ಲಿ ಪ್ರತಿವರ್ಷ 88 ಲಕ್ಷ ಮಂದಿ ಪದವಿ ಪಡೆದು ವಿದ್ಯಾಸಂಸ್ಥೆಯಿಂದ ಹೊರಬರುತ್ತಿದ್ದಾರೆ. ಇವರಲ್ಲಿ 8 ಲಕ್ಷ ಮಂದಿ ಮಾತ್ರ ಉದ್ಯೋಗ ಪಡೆಯುತ್ತಿದ್ದಾರೆ. ಉಳಿದ 80 ಲಕ್ಷ ಮಂದಿ...!! ಯೋಚಿಸಿ. 8 ಲಕ್ಷ ಮಂದಿಯಲ್ಲಿ ಒಬ್ಬರಾಗುವುದು ಅಷ್ಟೊಂದು ಸುಲಭವಲ್ಲ. ಆದರೆ ಅಸಾಧ್ಯವಲ್ಲ..!!
ಪಾಕಿಸ್ತಾನದ ಸಿಯಾಲ್ ಕೋಟ್ ಕ್ರಿಕೆಟ್ ಮೈದಾನ. 1989 ರಲ್ಲಿ ಅದೇ ಮೈದಾನದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದೆ. ಕೊನೆಯ ದಿನದ ಆಟ. ಭಾರತ ಅಮೂಲ್ಯ ನಾಲ್ಕು ವಿಕೆಟ್ ಕಳೆದುಕೊಂಡು ಸೋಲಿನ ದವಡೆಯಲ್ಲಿತ್ತು. ಆ ಸಮಯದಲ್ಲಿ ಕ್ರೀಸ್ ಕಡೆಗೆ 16ರ ಹರೆಯದ ಬಾಲಕನೊಬ್ಬ ಹೆಜ್ಜೆ ಇಡುತ್ತಾನೆ. ಮತ್ತೊಂದು ತುದಿಯಲ್ಲಿ ಅನುಭವಿ ನವಜೋತ್ ಸಿಂಗ್ ಸಿದ್ಧು. ಸಿದ್ಧುಗೆ ಹುಡುಗನನ್ನು ನೋಡಿ ಭಯವಾಗುತ್ತದೆ. ಬೌನ್ಸಿ ಫಿಚ್ ನಲ್ಲಿ ಚೆಂಡು ಅಚಾನಕ್ ಪುಟಿದೇಳುತ್ತಿತ್ತು. ಭಯಾನಕ ವೇಗದ ಬೌಲರ್ ಗಳು ಪಾಕಿಸ್ತಾನ ತಂಡದಲ್ಲಿ ಬೌನ್ಸರ್ ಗಳ ಮೇಲೆ ಬೌನ್ಸರ್ ಎಸೆಯುತ್ತಿದ್ದರು. ಸಿದ್ಧು ಬಳಿ ಬಂದು ಹುಡುಗನಿಗೆ ಕೆಲವು ಟಿಪ್ಸ್ ಕೊಡುತ್ತಾನೆ. ವಕಾರ್ ಯೂನಸ್ ವೇಗವಾಗಿ ಬಂದು ಎಸೆದ ಬಾಲ್ ಆ ಹುಡುಗನ ಮುಖಕ್ಕೆ ಬಡಿಯುತ್ತದೆ. ಮೂಗಿನಿಂದ ರಕ್ತಸ್ರಾವವಾಗಿ ಬಟ್ಟೆಯೆಲ್ಲಾ ಕೆಂಪಾಗುತ್ತದೆ. ಪ್ರತಿಯೊಬ್ಬರೂ ಭಯಭೀತರಾಗುತ್ತಾರೆ. ಇಷ್ಟು ಚಿಕ್ಕ ಹುಡುಗನನ್ನು ಆಯ್ಕೆ ಮಾಡಿದ ಬಗ್ಗೆ ಅವರಿಗೆಲ್ಲಾ ವಿಪರೀತ ಸಿಟ್ಟು ಬರುತ್ತದೆ. ಕೆಳಗೆ ಕುಸಿದಿದ್ದ ಬಾಲಕನ ಬಳಿ ಬಂದ ಸಿದ್ಧು "ನೀನು ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ ಗೆ ಹೋಗು" ಎಂದು ಸಲಹೆ ನೀಡುತ್ತಾನೆ. ಆದರೆ ಸ್ವಲ್ಪ ಹೊತ್ತಿನ ನಂತರ ಚೇತರಿಸಿಕೊಂಡ ಬಾಲಕ "ನಾನು ಆಡುತ್ತೇನೆ" ಎಂದು ಎದ್ದು ನಿಲ್ಲುತ್ತಾನೆ. ಇದನ್ನು ಅಲ್ಲಿದ್ದವರ್ಯಾರೂ ನಿರೀಕ್ಷೆ ಮಾಡಿರಲಿಲ್ಲ. ಎದ್ದು ನಿಂತ ಹುಡುಗ ಮುಂದಿನ ಚೆಂಡನ್ನೇ ಬೌಂಡರಿಗಟ್ಟುತ್ತಾನೆ. 57 ರನ್ನುಗಳನ್ನು ಸಿಡಿಸಿ, ಭಾರತವನ್ನು ಸೋಲಿನಿಂದ ಪಾರು ಮಾಡಿ ಮುಂದಿನ ಇತಿಹಾಸಕ್ಕೆ ಮುನ್ನುಡಿ ಬರೆಯುತ್ತಾನೆ. ಆ ಹುಡುಗನೇ ಈ ದೇಶದ ಕ್ರಿಕೆಟ್ ಪ್ರೇಮಿಗಳ ಹೃದಯ ಸಾಮ್ರಾಟ ಸಚಿನ್ ತೆಂಡುಲ್ಕರ್. ಸಚಿನ್ ಅಂದು ಎದ್ದು ನಿಂತು ಧೈರ್ಯ ತೋರದೇ ಇರುತ್ತಿದ್ದರೆ, ಮುಂದೆಂದೂ ಆತ ಎದ್ದು ನಿಲ್ಲುತ್ತಿರಲಿಲ್ಲ.
ಕಠಿಣ ಸಮಯದಲ್ಲಿ ತೆಗೆದು ಕೊಳ್ಳುವ ಗಟ್ಟಿ ನಿರ್ಧಾರಗಳೇ ನಮಗೆ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ನಾನು ಎಷ್ಟು ಮಾಡಿದ್ದೇನೆ..? ಎಂಬುವುದು ಮುಖ್ಯವಲ್ಲ. ನಾನು ಎಷ್ಟು ಮಾಡಬಹುದಿತ್ತು ಎಂಬುವುದು ಅತೀ ಮುಖ್ಯ. ಕನಸು ಕಾಣುವವನಿಗೆ ರಾತ್ರಿ ಬಹಳನೇ ಅಲ್ಪವಾಗಿ ತೋರಿದರೆ, ಕನಸು ಪೂರ್ತಿಮಾಡುವವನಿಗೆ ಹಗಲು ಅಲ್ಪವಾಗಿ ತೋರುತ್ತದೆ. ಎಲ್ಲವನ್ನೂ ಶಾಲಾ ಕಾಲೇಜುಗಳೇ ಕಲಿಸಿ ಕೊಡುವುದಿಲ್ಲ. ಖಾಲಿ ಹೊಟ್ಟೆ ಮತ್ತು ಖಾಲಿ ಜೇಬು ಬಹಳನೇ ಕಲಿಸಿಕೊಡುತ್ತದೆ. ನಾವು "ಹಣವಿದ್ದರೆ ಏನಾದರೂ ಮಾಡುತ್ತಿದ್ದೆ" ಎಂದು ಬಹಳನೇ ಬಾರಿ ಯೋಚಿಸಿದ್ದಿದೆ. ಆದರೆ "ನಾವು ಏನಾದರೂ ಮಾಡಿದರೆ ಹಣ ನಮ್ಮ ಬಳಿ ಬರುತ್ತದೆ" ಎಂಬುವುದನ್ನು ಮರೆತು ಬಿಡುತ್ತೇವೆ. ಸಮಯ ಬಹಳನೇ ಕಡಿಮೆಯಿಲ್ಲ ಎಂಬ ಹತಾಶೆಗಿಂತ, ಸಮಯ ಇನ್ನೂ ಇದೆ ಎಂಬ ಆಸೆ ಮೂಡಬೇಕು. ಸಫಲತೆಯಿಂದ ನಾವು ಜಗತ್ತಿಗೆ ಪರಿಚಯವಾದರೆ, ವಿಫಲತೆಯು ಜಗತ್ತನ್ನು ನಮಗೆ ಪರಿಚಯಿಸುತ್ತದೆ.
ಜಗತ್ತಿನಲ್ಲಿ ಇಂದು 97 ಶೇಕಡಾ ಜನ 3 ಶೇಕಡಾ ಜನರ ಏಳಿಗೆಗಾಗಿ ದುಡಿಯುತ್ತಾರೆ ಎಂಬುವುದು ದುರದೃಷ್ಟಕರ. ಏಕೆಂದರೆ ದುಡಿಸಿಕೊಳ್ಳುವ 3 ಶೇಕಡಾ ಜನ ಸೋಲನ್ನು ಒಪ್ಪಿಕೊಳ್ಳದವರು. ನಮ್ಮ ಗುರಿ ಆಕಾಶದತ್ತ ಇರಬೇಕು. ಆದರೆ ಹತ್ತುವ ಮೆಟ್ಟಿಲನ್ನು ನಾವೇ ಕಟ್ಟಬೇಕು. ಅಹಂಕಾರವು ನಮ್ಮನ್ನು ನಾಶಮಾಡುತ್ತದೆ. ಜಗತ್ತಿನ ಅತೀ ದೊಡ್ಡ ಹಡಗು ಟೈಟಾನಿಕ್. ಮುಳುಗಲು ಎಂದೆಂದೂ ಸಾಧ್ಯವಿಲ್ಲವೆಂದು ಜಗತ್ತಿಗೆ ಸಾರಿ ಹೇಳಲಾಗಿತ್ತು. 1912 ರ ಎಪ್ರಿಲ್ 10 ರ ಬುಧವಾರ ಜಗತ್ತಿಗೇ ಸವಾಲೆಸೆದು ಅಗರ್ಭ ಶ್ರೀಮಂತರನ್ನು ಗರ್ಭದೊಳಗೆ ಹೊತ್ತು ಪಯಣ ಹೊರಟ ಟೈಟಾನಿಕ್, ಮುಂದಿನ ಐದೇ ದಿನದಲ್ಲಿ ಉತ್ತರ ಅಟ್ಲಾಂಟಿಕ್ ಸಾಗರದ ಹಿಮಗಡ್ಡೆಗೆ ಅಪ್ಪಳಿಸಿ ನುಚ್ಚು ನೂರಾಗುತ್ತದೆ. ಅದರೊಂದಿಗೆ ಬೆರೆತ ಅಹಂಕಾರವು ಸಾಗರದ ತಳ ಸೇರುತ್ತದೆ.
ಬದುಕಿನ ಯಶಸ್ವಿಗೆ ಬುದ್ಧಿವಂತಿಕೆ ಬೇಕಿಲ್ಲ. ಜಗತ್ತಿನ ಬಹುತೇಕ ವ್ಯವಸ್ಥೆಗಳನ್ನು ಹಾಳುಮಾಡಿದ್ದೇ ಬುದ್ಧಿವಂತರು. ಯಶಸ್ಸಿಗೆ ಗುಣವಂತಿಕೆ ಅನಿವಾರ್ಯ. ಗುಣದೊಂದಿಗೆ ಗುರಿಯಿದ್ದಾಗ, ಗುರಿಯೆಡೆಗೆ ಮನಸ್ಸಿದ್ದಾಗ, ಮನಸ್ಸಿನಲ್ಲಿ ಹಠವಿದ್ದಾಗ, ಅದರೊಂದಿಗೆ ಸಾಧಕರ ಪ್ರೇರಣೆಯಿದ್ದಾಗ, ಸಾಧನೆಯ ಮಾರ್ಗದಲ್ಲಿ ಅಹಂಕಾರದ ಚಿಪ್ಪನ್ನು ಕಳಚಿಟ್ಟಾಗ, ದೃಢತೆ ಮತ್ತು ಧೈರ್ಯದಿಂದ ಮುನ್ನುಗ್ಗಿದಾಗ, ಗುರಿ ತಲುಪಬಲ್ಲೆವು. ಆಗಲೇ ನಮ್ಮ ಜೀವನ ಸಫಲತೆಯನ್ನು ಪಡೆಯುವುದು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
********************************************