-->
ಜೀವನ ಸಂಭ್ರಮ : ಸಂಚಿಕೆ - 100

ಜೀವನ ಸಂಭ್ರಮ : ಸಂಚಿಕೆ - 100

ಜೀವನ ಸಂಭ್ರಮ : ಸಂಚಿಕೆ - 100
ಲೇಖಕರು : ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

                                   
     ಮಕ್ಕಳೇ, ನೀವೆಲ್ಲ ಕಳ್ಳೀ ಗಿಡ ನೋಡಿದ್ದೀರಿ. ಪಾಪಸ್ ಕಳ್ಳಿ, ರಟಗಳ್ಳಿ ಅಂದ್ರೆ ಕಾಂಡ ಅಗಲವಾಗಿದ್ದು, ಮೈಮೇಲೆ ಮುಳ್ಳುಗಳಿರುತ್ತದೆ. ಸಮೀಪಕ್ಕೆ ಹೋದರೆ ಚುಚ್ಚುತ್ತದೆ. ಈ ದಿನ ಈ ಗಿಡದಿಂದ ಕಲಿಯಬಹುದಾದ ನೀತಿಯ ಬಗ್ಗೆ ತಿಳಿದುಕೊಳ್ಳೋಣ.
      ಒಂದು ಬಾಳೆಯ ತೋಟವಿತ್ತು. ಸುಂದರವಾಗಿ ಬೆಳೆದು ಬಾಳೆಹಣ್ಣನ್ನು ನೀಡುತ್ತಿತ್ತು. ಆ ತೋಟದ ಅಂಚಿನಲ್ಲಿ ಒಂದು ರಟಗಳ್ಳಿ ಗಿಡದ ಕಾಂಡ ಸಣ್ಣದಾಗಿ ಕಾಣಿಸಿಕೊಂಡಿತು. ಅದರ ಮೇಲೆಲ್ಲ ಮುಳ್ಳುಗಳಿದ್ದವು. ಇದನ್ನು ನೋಡಿದ ಬಾಳೆ ಗಿಡದ ರಾಜ ಬಾಳೆಯ ಗಿಡ ಬಂದು ಕೇಳಿತು. "ನೀನು ಯಾರು ? ನೀನು ಇಲ್ಲಿಗೆ ಏಕೆ ಬಂದೆ....?" ಆಗ ರಟಗಳ್ಳಿ ಹೇಳಿತು, "ನನ್ನನ್ನು ಯಾರು ಸೇರಿಸಿಕೊಳ್ಳುತ್ತಿಲ್ಲ. ಎಲ್ಲರೂ ನನ್ನನ್ನು ಹೊರಗಿಟ್ಟಿದ್ದಾರೆ. ನಾನು ಬದುಕಬೇಕೆಂಬ ಆಸೆ. ನನಗೆ ಸ್ವಲ್ಪವೇ ಸ್ವಲ್ಪ ಜಾಗ ಸಾಕು. ನಾನು ಯಾರಿಗೂ ತೊಂದರೆ ಕೊಡುವುದಿಲ್ಲ. ತಾವು ದಯಮಾಡಿ ನಾನು ಬದುಕಲು ಸ್ವಲ್ಪ ಜಾಗ ನೀಡಿ" ಎಂದಿತು. ಆಗ ಬಾಳೆ ಗಿಡದ ರಾಜನಾದ ಬಾಳೆ ಗಿಡ ಪಾಪ ಬದುಕಲಿ ಬಿಡು ಎಂದು ಸುಮ್ಮನೆ ಆಯಿತು. ಒಂದೇ ಕಾಂಡ ತನ್ನ ಕವಲುಗಳನ್ನು ಹೆಚ್ಚು ಮಾಡುತ್ತಾ ಬೆಳೆದು, ಅದರ ಮುಳ್ಳು ಬಾಳೆ ಗಿಡಕ್ಕೆ ಚುಚ್ಚುತ್ತಿತ್ತು. ಆಗ ಬಾಳೆ ಗಿಡ ಕೇಳಿತು, "ಏಕೆ ಹೀಗೆ ಚುಚ್ಚುತ್ತಿ" ಎಂದು. ಆಗ ರಟಗಳ್ಳಿ ಹೇಳಿತು, "ಬೆಳೆಯಬೇಕಾದರೆ ತಾಗಿರಬೇಕು ಅಷ್ಟೇ, ನೀನೇನು ಬೇಜಾರು ಮಾಡಿಕೊಳ್ಳಬೇಡ" ಎಂದಿತು. ಹೀಗೆ ಬೆಳೆಯುತ್ತಾ ಬೆಳೆಯುತ್ತಾ, ಬಾಳೆ ಗಿಡದ ವನದ ಸುತ್ತ ಆವರಿಸಿಕೊಂಡಿತು. ಒಳಗಡೆ ಬಾಳೆ ಗಿಡ ಬಂಧಿಯಾಯಿತು. ಆಗ ಬಾಳೆಯ ಗಿಡಕ್ಕೆ ಜ್ಞಾನೋದಯವಾಗಿತ್ತು. ಆಗ ಬಾಳೆ ಗಿಡದ ರಾಜನಾದ ಬಾಳೆ ಗಿಡ ಕೇಳಿತು.... "ಅಲ್ಲ ನೀನು ಸ್ವಲ್ಪ ಜಾಗ ಸಾಕು ಅಂದೆ. ಈಗ ನಮ್ಮ ವನದ ಸುತ್ತ ಆವರಿಸಿಕೊಂಡಿದ್ದೀಯಲ್ಲ"  ಎಂದಿತು. ರಟಗಳ್ಳಿ ಹೇಳಿತು, "ನಾನು ಮೊದಲು ಜಾಗ ಕೇಳುವಾಗಲೇ ನೀನು ಜಾಗೃತನಾಗಿರಬೇಕಾಗಿತ್ತು. ಬೇರೆಯವರು ನನ್ನನ್ನು ಸೇರಿಸಿಕೊಳ್ಳುತ್ತಿಲ್ಲ, ಹೊರ ಹಾಕಿದ್ದಾರೆ ಅಂದಾಗ್ಲೇ ಎಚ್ಚರವಾಗಿ ಇರಬೇಕಾಗಿತ್ತು. ನೀನು ಜಾಗೃತಗೊಳ್ಳಲಿಲ್ಲ ಈಗ ನೋಡು ನನ್ನ ಪ್ರಭಾವ" ಎಂದು ನಕ್ಕಿತು. ಕೊನೆಗೆ ಬಾಳೆ ಗಿಡ ವನದ ತುಂಬೆಲ್ಲ ಆವರಿಸಿ ಕೊನೆಗೆ ಬಾಳೆ ಗಿಡ ನಾಶವಾಯಿತು. ಇದರ ನೀತಿ ಕೆಟ್ಟ ಮತ್ತು ದುಷ್ಟ ವ್ಯಕ್ತಿಗಳು, ಗಾಂಜ, ಅಫೀಮು, ಬೀಡಿ, ಸಿಗರೇಟು ಮತ್ತು ಮಾದಕ ವಸ್ತುಗಳು ಅಂತಹ ಕೆಟ್ಟ ವಸ್ತುಗಳು, ದುಷ್ಟ ಸಂಗತಿಗಳು ಹತ್ತಿರ ಬರುತ್ತಿದ್ದಾಗಲೇ ದೂರ ಇಡಬೇಕು. ಇಲ್ಲದಿದ್ದರೆ ಬಾಳೆ ಗಿಡಕ್ಕೆ ಆದ ನಾಶ ನಮಗೂ ಆಗುತ್ತದೆ. 
      ಈ ಕಥೆಗೆ ಪೂರಕವಾಗಿ ನಡೆದ ಒಂದು ಘಟನೆ. ಒಂದು ಸರ್ಕಾರಿ ಶಾಲೆ ಇತ್ತು. ಅಲ್ಲಿ ಸಾಕಷ್ಟು ಮಕ್ಕಳಿದ್ದರು. ಉತ್ತಮ ಶಿಕ್ಷಕರಿದ್ದರು. ಪಾಠ, ಪಠ್ಯೇತರ ಚಟುವಟಿಕೆ ಚೆನ್ನಾಗಿ ನಡೆಯುತ್ತಿತ್ತು. ಒಮ್ಮೆ ಫಲಿತಾಂಶ ಘೋಷಣೆ ಆಯಿತು. ಮೂರು ಮಕ್ಕಳು 9ನೇ ತರಗತಿಯಲ್ಲಿ ಅನ್ನುತ್ತೀರ್ಣರಾದರು. ನಂತರ ಆ ಮಕ್ಕಳಿಗೆ ಮರು ಪರೀಕ್ಷೆ ಮಾಡಿದರು, ಪ್ರಗತಿ ಕಾಣಲಿಲ್ಲ. ಬೇರೆ ದಾರಿ ಇಲ್ಲದೆ ಅನುತ್ತೀರ್ಣರಾದರು. ಅನುತ್ತೀರ್ಣರಾದ ಮಕ್ಕಳ ಪೋಷಕರು ಶಿಕ್ಷಕರ ಮೇಲೆ ಅಸಮಾಧಾನಗೊಂಡರು. ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರು. 
    ಒಬ್ಬ ಹಳೆಯ ವಿದ್ಯಾರ್ಥಿ ಶಾಲೆಯ ಪ್ರತಿಯೊಂದು ಚಟುವಟಿಕೆಯಲ್ಲೂ ಭಾಗವಹಿಸುತ್ತಾ ನ್ಯೂನ್ಯತೆ ಗುರುತಿಸುವುದನ್ನು ಮಾಡುತ್ತಿದ್ದನು. ಒಮ್ಮೆ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಿತು. ಧ್ವಜಾರೋಹಣ ನಡೆಯಿತು. ತರಗತಿವಾರು ವಿದ್ಯಾರ್ಥಿಗಳು ಗುಂಪಾಗಿ ಸಾಲಿನಲ್ಲಿ ನಿಂತಿದ್ದರು. ಆ ಗುಂಪಿನ ಮುಂದೆ ತರಗತಿ ನಾಯಕ ಘೋಷಣೆ ಕೂಗುವುದು ವಾಡಿಕೆ. ಆಗ ತರಗತಿಯ ಮಕ್ಕಳು ಜೈಕಾರ ಹಾಕುತ್ತಾರೆ. ಒಂದು ತಂಡದ ನಾಯಕ ಮಹಾತ್ಮ ಗಾಂಧೀಜಿಕಿ ಎಂದಾಗ ಆ ತರಗತಿ ಮಕ್ಕಳು ಜೈ ಎಂದು ಕೂಗಿದರು. ಹೀಗೆ ಬೇರೆ ಬೇರೆ ತಂಡ ಜೈಕಾರ ಕೂಗುವಾಗ, ಈ ಹಳೆಯ ವಿದ್ಯಾರ್ಥಿ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಾನೆ. ಒಂದೊಂದು ತಂಡ ಒಬ್ಬೊಬ್ಬರ ಹೆಸರಿನಲ್ಲಿ ಜೈಕಾರ ಕೂಗುತ್ತಾರೆ. ನೆಹರೂ, ಸರ್ದಾರ್ ವಲ್ಲಭಾಯ್ ಪಟೇಲ್, ಸುಭಾಷ್ ಚಂದ್ರ ಬೋಸ್, ವೀರ ಸಾವರ್ಕರ್ ಕಿ ಹೀಗೆ ಕೂಗಿದಾಗ ಆಯಾ ತಂಡದ ಮಕ್ಕಳು ಜೈಕಾರ ಕೂಗುತ್ತಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ವೀರ ಸಾವರ್ಕರ್ ದೇಶದ್ರೋಹಿ, ಬ್ರಿಟಿಷರ ಕ್ಷಮಾಪಣೆ ಕೇಳಿದವನು. ಈತನಿಗೆ ಮಕ್ಕಳಿಂದ ಜೈಕಾರ ಹಾಕಿಸಿದ ಶಾಲೆಯವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವವರೆಗೂ ಶೇರ್ ಮಾಡಿ ಎಂದು ಹಾಕಿ, ಶಾಲಾ ವಾತಾವರಣ ಹೊಲಸು ಮಾಡಲು ಪ್ರಯತ್ನಿಸಿದನು. ಇದು ಸಾಮಾಜಿಕ ಜಾಲತಾಣದಲ್ಲಿ ಶಾಲೆಯ ಹೆಸರಿಗೆ, ಶಿಕ್ಷಕರಿಗೆ ಮುಜುಗರ ತರುವಂತೆ ಆಯಿತು. ಆಗ ಮುಖ್ಯ ಶಿಕ್ಷಕಿ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರ ನೀಡುತ್ತಾರೆ. ಆಗ ಪೋಷಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿ ಶಾಲೆಯಲ್ಲಿ ಸೇರಿ ಸಭೆ ನಡೆಸುತ್ತಾರೆ. ಶಾಲೆಯ ವಾತಾವರಣ ಸರಿಯಾಗಲಿ, ಶಾಂತವಾಗಲಿ ಎಂದು ಆ ಶಾಲೆಯ ಮುಖ್ಯ ಶಿಕ್ಷಕರು, ವೀರ ಸಾವರ್ಕರ್ ಹೆಸರು ಹೇಳಿಸಿದ್ದು ನಿಮಗೆ ಅಷ್ಟೊಂದು ನೋವಾಗಿದ್ದರೆ ಕ್ಷಮಿಸಿ ಎಂದು ಪೋಷಕರಲ್ಲಿ ಹೇಳುತ್ತಾರೆ. ಈ ಹಳೆ ವಿದ್ಯಾರ್ಥಿ ಪೊಲೀಸ್ ಠಾಣೆಯಲ್ಲಿ ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟು ಬಂದು, ಬೇರೆಯವರ ಮೊಬೈಲ್ ನ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಗೊಂದಲ ಸೃಷ್ಟಿಸುತ್ತಾನೆ. ಇದರಿಂದ ಶಿಕ್ಷಕರು ಬೇಸರಗೊಂಡು ಹಿರಿಯ ಅಧಿಕಾರಿಯನ್ನು ಭೇಟಿ ಮಾಡುತ್ತಾರೆ. ಆ ಹಿರಿಯ ಅಧಿಕಾರಿ ಎಲ್ಲಾ ಶಿಕ್ಷಕರಿಗೆ ಸಮಾಧಾನ ಮಾಡಿ ಕಳಿಸುತ್ತಾರೆ. ಶಿಕ್ಷಕರೇ ಅಸಮಾಧಾನಗೊಂಡರೆ ಮಕ್ಕಳ ಕಲಿಕೆ ಮೇಲೆ ಕೆಟ್ಟ ಪರಿಣಾಮವಾಗುತ್ತದೆ ಎಂಬುದನ್ನು ಅರಿತು ಸಮಾಧಾನ ಪಡಿಸುತ್ತಾರೆ. ಸಮಾಧಾನಪಡಿಸಿದ ರೀತಿ ಹೀಗಿದೆ.
1. ದುಷ್ಟರು ತಮ್ಮ ತಲೆಯಲ್ಲಿ ತುಂಬಿಕೊಂಡಂತಹ ಹೊಲಸನ್ನು ಬೇರೊಬ್ಬರ ತಲೆಗೆ ಹಾಕಿ ಸಮಾಧಾನ ಪಟ್ಟುಕೊಳ್ಳುತ್ತಾರೆ. ಬುದ್ಧಿವಂತರಾದ, ಸುಶಿಕ್ಷಿತರಾದ ತಾವು ಆ ಹೊಲಸನ್ನು ನಿಮ್ಮ ತಲೆಗೆ ಹಾಕಿಕೊಳ್ಳಬೇಡಿ. ಕೆಲವು ದಿನ ಸಾಮಾಜಿಕ ಜಾಲತಾಣದಿಂದ ದೂರ ಇರಿ. ಜನರಿಗೆ ಮಾಡಲು ಬೇರೆ ಕೆಲಸ ಇದೆ. ನೀವು ಈ ಹೊಲಸು ತಲೆಗೆ ಹಾಕಿಕೊಂಡು, ಪ್ರತಿಕ್ರಿಯೆ ನೀಡಿದರೆ ಅದು ಇನ್ನೂ ಹೆಚ್ಚು ಹೊಲಸಾಗುತ್ತದೆ.
2. ದುಷ್ಟರು ಕೊರತೆಯಿಂದ ಸರಿ ಇರುವುದನ್ನು ಮುಚ್ಚಲು, ದುಃಖದಿಂದ ಸುಖವನ್ನು ಮುಚ್ಚಲು, ಕುರೂಪದಿಂದ ಸೌಂದರ್ಯ ಮುಚ್ಚಲು, ಕೆಟ್ಟದ್ದರಿಂದ ಒಳ್ಳೆಯದನ್ನು ಮುಚ್ಚಲು, ನೋವಿನಿಂದ ಸಂತೋಷ ಮುಚ್ಚಲು ಪ್ರಯತ್ನಿಸುತ್ತಾರೆ. ಸುಸಿಕ್ಷಿತರಾದ ತಾವು ಸರಿಯಿಂದ ಕೊರತೆ ಮುಚ್ಚಲು, ಸುಖದಿಂದ ದುಃಖ ಮುಚ್ಚಲು, ಸೌಂದರ್ಯದಿಂದ ಕುರೂಪ ಮುಚ್ಚಲು, ಒಳ್ಳೆಯದರಿಂದ ಕೆಟ್ಟದ್ದನ್ನು ಮುಚ್ಚಲು, ಸಂತೋಷದಿಂದ ನೋವನ್ನು ಮುಚ್ಚಲು, ಪ್ರಯತ್ನ ಪಡಬೇಕು.
3. ದುಷ್ಟರನ್ನು ದ್ವೇಷಿಸಬೇಡಿ, ಪ್ರೀತಿಸಬೇಡಿ. ಪ್ರೀತಿಸಿದರೆ ಅವರ ಕೆಲಸಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ದ್ವೇಷಿಸಿದರೆ ಹಗೆತನ ಸಾಧಿಸಲು ಅವಕಾಶ ನೀಡಿದಂತಾಗುತ್ತದೆ. ಹಾಗಾಗಿ ಅವರ ಕಡೆ ಗಮನಹರಿಸಬೇಡಿ.
       ಮೊದಲೇ ಆತ ಶಾಲಾ ಚಟುವಟಿಕೆಯಲ್ಲಿ ಪ್ರತಿಯೊಂದು ನ್ಯೂನ್ಯತೆ ಗುರುತಿಸುತ್ತಿದ್ದಾನೆ ಎಂದಾಗಲೇ ಎಚ್ಚರಿಕೆ ವಹಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ. ರಟಗಳ್ಳಿಯಾಗಿ ಬಂದು ಶಾಲೆಯನ್ನು ಆವರಿಸಿದ್ದಾನೆ. ಮೊದಲೇ ದೂರವಿಟ್ಟಿದ್ದರೆ ಶಾಲಾ ವಾತಾವರಣ ಚೆನ್ನಾಗಿರುತ್ತಿತ್ತು ಅಲ್ಲವೇ ಮಕ್ಕಳೇ...
......................................... ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************Ads on article

Advertise in articles 1

advertising articles 2

Advertise under the article