ಎಲ್ಲೆಲ್ಲಾ ಹುಡುಕಿದೆ.... ಕೊನೆಯಲ್ಲಿ..!! ಕಥೆ ರಚನೆ : ಪ್ರಣಮ್ಯ ಎನ್
Wednesday, July 19, 2023
Edit
ಕಥೆ ರಚನೆ : ಪ್ರಣಮ್ಯ ಎನ್
10ನೇ ತರಗತಿ
ಮಹಾಜನ ಸಂಸ್ಕೃತ ಕಾಲೇಜು ಹೈಯರ್
ಸೆಕೆಂಡರಿ ಸ್ಕೂಲ್
ಪೆರಡಾಲ ನೀರ್ಚಾಲ್ ಕಾಸರಗೋಡು ಜಿಲ್ಲೆ.
ಕೇರಳ ರಾಜ್ಯ.
ನಮ್ಮ ಮನೆಯಲ್ಲಿ ನನಗೆ ಅಚ್ಚುಮೆಚ್ಚಿನವರೆಂದರೆ ನನ್ನ ಅಜ್ಜಿ. ನಾನು ಹುಟ್ಟಿದಾಗಿನಿಂದ ಇಂದಿನವರೆಗೆ ಅಜ್ಜಿಯನ್ನು ಬಿಟ್ಟು ಇರಲೇ ಇಲ್ಲ. ಅಜ್ಜಿಗೂ ಹಾಗೆಯೇ ನಾನೆಂದರೆ ಬಹಳ ಪ್ರೀತಿ. ಹೀಗಿರುವಾಗ ನನ್ನ ಅಜ್ಜಿಗೆ ಸ್ವಲ್ಪ ದಿನಗಳ ಮಟ್ಟಿಗೆ ಅವರ ಅಮ್ಮನ ಮನೆಗೆ ಹೋಗಬೇಕಾಯಿತು. ಶಾಲೆ ಇರುವ ಕಾರಣ ನನಗೆ ಹೋಗಲಾಗಲಿಲ್ಲ. ಅಜ್ಜಿಗೂ ನನ್ನನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ. ನನ್ನ ಅಮ್ಮ ಇನ್ನೊಮ್ಮೆ ಹೋಗಬಹುದು ಎಂದು ಸಮಾಧಾನ ಮಾಡಿದರು. ಅಜ್ಜಿಯು ಕೂಡ ಬೇಗ ಹೋಗಿ ಬರುತ್ತೇನೆ ಎಂದು ಹೇಳಿದರು.
ನಾನು ಶಾಲೆಯಿಂದ ಬಂದಾಗ ಅಜ್ಜಿ ಮನೆಯಲ್ಲಿ ಇರಲಿಲ್ಲ. ನನಗೆ ಬಹಳ ದುಃಖವಾಯಿತು. ಮನೆ ಖಾಲಿ ಖಾಲಿ ಎನಿಸಿತು. ಸಾಯಂಕಾಲದ ತಿಂಡಿ ಕಾಫಿ ರುಚಿಸಲಿಲ್ಲ. ಓದಲು ಬರೆಯಲು ಮನಸ್ಸಿರಲಿಲ್ಲ. ರಾತ್ರಿ ಅಜ್ಜಿಯನ್ನು ನೆನೆಸುತ್ತಾ ಸರಿ ನಿದ್ದೆಯೂ ಬರಲಿಲ್ಲ. ಮರುದಿನ ಬೇಸರದಿಂದಲೇ ಎದ್ದು, ತಿಂಡಿ ತಿಂದು ಶಾಲೆಗೆ ನಡೆದೆ.
ದಿನಗಳು ಕಳೆದರೂ ಅಜ್ಜಿಯ ಬರುವಿಕೆಯ ಸುದ್ದಿಯೇ ಇಲ್ಲ. ಹೀಗೆ ವಾರಗಳೂ ಕಳೆದವು. ನಾನು ಅಜ್ಜಿ ಇಲ್ಲದೆ ಹೇಗೋ ಹೊಂದಿಕೊಳ್ಳುತ್ತಾ ನನ್ನ ಶಾಲಾ ಕೆಲಸಗಳನ್ನು ಮಾಡತೊಡಗಿದೆ. ಹೀಗಿರುವಾಗ ಒಂದು ದಿನ ಶಾಲೆಯಿಂದ ಮನೆಗೆ ಬಂದಾಗ ಯಾರೋ ಅಪರಿಚಿತರು ಮನೆಯಲ್ಲಿ ಇರುವುದು ಕಂಡಿತು. ಅವರು ನನ್ನನ್ನು ನೋಡಿ ನಕ್ಕರು. ನಿನ್ನ ಅಜ್ಜಿಯನ್ನು ಕರೆದುಕೊಂಡು ಬಂದಿದ್ದೇನೆ ಎಂದರು. ನಾನು ಖುಷಿಯಿಂದ ಅಜ್ಜಿ.... ಅಜ್ಜೀ... ಎಂದು ಕೂಗುತ್ತಾ ಒಳಗೋಡಿದೆ. ಆದರೆ ಅಜ್ಜಿ ಮನೆಯೊಳಗೆ ಇರಲಿಲ್ಲ. ಅವರ ಚೀಲ ಮಾತ್ರ ಇತ್ತು. ಅಜ್ಜಿ ಎಲ್ಲಿಗೆ ಹೋಗಿರಬಹುದು...? ಅವರಲ್ಲಿ ಕೇಳೋಣ ಎಂದು ಹೊರಗೋಡಿ ಬಂದೆ. ಆದರೆ ಅಷ್ಟರಲ್ಲಿ ಅವರು ಅಪ್ಪನೊಂದಿಗೆ ತೋಟಕ್ಕೆ ಹೋಗಿದ್ದಾರೆ ಎಂದು ತಿಳಿಯಿತು. ನಾನು ಅಜ್ಜಿಯನ್ನು ಎಲ್ಲಾ ಕಡೆ ಹುಡುಕಿದೆ. ಆದರೆ ಅಜ್ಜಿಯ ಸುಳಿವೇ ಇಲ್ಲ. ಎಲ್ಲಿ ಹೋಗಿರಬಹುದು...? ಎಂದು ಚಿಂತಿಸಿದೆ. ದನದ ಕೊಟ್ಟಿಗೆಗೆ ಹೋದೆ. ಅಮ್ಮನೇನೋ ಅಲ್ಲಿ ಇದ್ದರು. ನಾನು ಅಮ್ಮನಲ್ಲಿ ಅಜ್ಜಿ ಎಲ್ಲಿ ? ಎಂದು ಕೇಳಿದೆ. ಅಜ್ಜಿ ಅಲ್ಲೇ ಇದ್ದಾರಲ್ಲ. ಬಾ ನೀನು ತಿಂಡಿ ತಿನ್ನು. ನಿನಗಾಗಿ ನಿನ್ನ ಇಷ್ಟದ ತಿಂಡಿಗಳನ್ನು ಅಜ್ಜಿ ತಂದಿದ್ದಾರೆ ಎಂದಳು.
ನಾನು ಮನಸ್ಸಿಲ್ಲದ ಮನಸ್ಸಿನಿಂದ ತಿಂಡಿ ತಿಂದೆ. ಮನದಲ್ಲಿ ಅಜ್ಜಿಯದೇ ಚಿಂತೆ. ಕತ್ತಲಾಗುತ್ತಾ ಬಂತು. ಅಜ್ಜಿ ಎಲ್ಲಿ ಎಂದು ಮುಖ ಸಪ್ಪಗೆ ಮಾಡುತ್ತಾ ಕುಳಿತೆ. ಅಮ್ಮ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದ್ದಳು. ಏನಾಯಿತು ಇವರಿಗೆಲ್ಲ? ಯಾಕೆ ಯಾರೂ ಏನು ಹೇಳುತ್ತಿಲ್ಲ ಎಂದು ಚಿಂತಿಸಿದೆ. ಅಮ್ಮನೂ ಸರಿಯಾಗಿ ಉತ್ತರಿಸುತ್ತಿಲ್ಲ.
ಆಗ ದೂರದಿಂದ ಅಜ್ಜಿಯ ಸ್ವರ ಕೇಳಿಸಿತು. ತಂದೆ ಮತ್ತು ಅಪರಿಚಿತ ವ್ಯಕ್ತಿಯೊಂದಿಗೆ ಅಜ್ಜಿ ಮಾತನಾಡುತ್ತಾ ಬರುತ್ತಿದ್ದರು. ಅಜ್ಜಿಯನ್ನು ಕಂಡು ಅಜ್ಜಿಯ ಬಳಿಗೆ ಓಡಿದೆ.ಯಾವುದೋ ಗಿಡಮೂಲಿಕೆ ಬೇಕೆಂದು ಅಜ್ಜಿ ಹುಡುಕಲು ತೋಟದ ಕಡೆಗೆ ಹೋಗಿದ್ದರು. ಆ ಗಿಡದ ಪರಿಚಯ ಅಜ್ಜಿಗೆ ಮಾತ್ರ ಗೊತ್ತಿರುವುದು. ಹಾಗಾಗಿ ಅದನ್ನು ತರಲು ತೋಟಕ್ಕೆ ಹೋದವರು ಹುಡುಕಿ ತರುವಾಗ ಇಷ್ಟು ಹೊತ್ತಾಯಿತು, ಎಂದು ಅಜ್ಜಿ ನನ್ನಲ್ಲಿ ಎಲ್ಲಾ ವಿಷಯವನ್ನು ಹೇಳಿದರು. ಒಟ್ಟಿನಲ್ಲಿ ನನಗೆ ಅಜ್ಜಿಯನ್ನು ಕಂಡು ಬಹಳ ಸಂತೋಷವಾಯಿತು.ಅಜ್ಜಿ ಎಷ್ಟು ಹುಡುಕಿದೆ ನಿಮ್ಮನ್ನು, ಎಷ್ಟೊಂದು ಸತಾಯಿಸಿದಿರಿ ನೀವು ಎಂದು ಅಜ್ಜಿಯನ್ನು ಬಿಗಿದಪ್ಪಿಕೊಂಡೆನು. ಅಜ್ಜಿಯೂ ಪ್ರೀತಿಯಿಂದ ನನ್ನ ತಲೆ ಸವರಿದರು.
10ನೇ ತರಗತಿ
ಮಹಾಜನ ಸಂಸ್ಕೃತ ಕಾಲೇಜು ಹೈಯರ್
ಸೆಕೆಂಡರಿ ಸ್ಕೂಲ್
ಪೆರಡಾಲ, ನೀರ್ಚಾಲ್, ಕಾಸರಗೋಡು ಜಿಲ್ಲೆ.
ಕೇರಳ ರಾಜ್ಯ.
*******************************************