-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 07

ನಿಷ್ಪಾಪಿ ಸಸ್ಯಗಳು : ಸಂಚಿಕೆ - 07

ನಿಷ್ಪಾಪಿ ಸಸ್ಯಗಳು : ಸಂಚಿಕೆ - 07
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
        

    ಪ್ರೀತಿಯ ಪುಟಾಣಿಗಳೇ.... ಹೇಗಿದ್ದೀರಿ...?
ಚೆನ್ನಾಗಿದ್ದೀರಲ್ವಾ... ಮಳೆಗಾಲದ ಸುಖದ ದಿನಗಳು ದಿನವೂ ನವೋಲ್ಲಾಸ ನೀಡುತ್ತಿವೆ ತಾನೇ? ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಗಮನವಿಟ್ಟು ನೋಡುತ್ತಿರುವಿರಲ್ಲವೇ... ಮಳೆರಾಯನ ಕೃಪೆಯಿಂದ ಅದೆಷ್ಟೋ ಹೊಸ ಸಸ್ಯಗಳು ಕಣ್ಣುಮಿಟುಕಿಸುತ್ತಿರುವುದನ್ನು ಕಂಡಿರಾ? ನೀರಿಗೆ ಅಂಥಹಾ ಒಂದು ವಿಶಿಷ್ಟ ಶಕ್ತಿಯಿದೆ ಗೊತ್ತಾ...!
       ಕೆಲವು ಸಸ್ಯಗಳು ನೀರಿನಲ್ಲೇ ಬೆಳೆಯುವುದುಂಟು. ತಾವರೆಯನ್ನು ನೀವು ನೋಡಿರಬಹುದು. ಆದರೆ ಅತ್ತ ನೀರೂ... ಇತ್ತ ಕೆಸರು ಮಣ್ಣೂ ಇದ್ದು ಬೆಳೆಯುವ ಕೆಲ ಸಸ್ಯಗಳಿವೆ. ಇದಕ್ಕೊಂದು ಉತ್ತಮ ಉದಾಹರಣೆ ಬಜೆ.
    ಸಾಮಾನ್ಯವಾಗಿ ಜೌಗು ಪ್ರದೇಶಗಳಲ್ಲಿ ಬೆಳೆಯುವ ಈ ಸಸ್ಯ ಗಿಡಮೂಲಿಕೆಗಳ ಸಾಲಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ಇದರ ಎಲೆ ಎರಡು ಮೂರು ಸೆಂಟಿಮೀಟರ್ ಅಗಲವಿದ್ದು ಸಾಮಾನ್ಯವಾಗಿ ಒಂದಡಿಯಷ್ಟು ಉದ್ದದ ಗಾಢ ಹಸಿರು ಬಣ್ಣ ಹೊಂದಿರುತ್ತದೆ. ಕಾಂಡದಲ್ಲಿ ಎಲೆಗಳು ಒತ್ತೊತ್ತಾಗಿದ್ದು ಗಿಡವು ಎರಡು ಅಡಿಗೂ ಹೆಚ್ಚು ಎತ್ತರ ಬೆಳೆಯುತ್ತದೆ.
     ಹಳ್ಳಿಗಳಲ್ಲಿ ಅಜ್ಜಿ ಅಮ್ಮಂದಿರಿಗೆ ಬಜೆ ಒಂದು ಮನೆಮದ್ದು. ಮಕ್ಕಳಿರುವ ಮನೆಗಳಲ್ಲಿ ಸರ್ವೇಸಾಮಾನ್ಯವಾಗಿ ಎಲ್ಲರೂ ಬಜೆಯನ್ನು ಬಳಸಿರುತ್ತಾರೆ. ಕೆರೆಯ ಬದಿಗಳಲ್ಲಿ, ತೋಡಿನ ಬದಿಗಳಲ್ಲಿ ಮದ್ದಿಗಿರಲಿ ಎಂದೇ ಗಿಡಗಳನ್ನು ಜೋಪಾನಮಾಡುತ್ತಿದ್ದರು. ಈಗ ಮಹಡಿಮನೆಗಳೇ ಆಗಿದ್ದರೂ ಚಟ್ಟಿಯಲ್ಲಿಯೂ ಈ ಗಿಡಗಳನ್ನು ಉಳಿಸಿಕೊಳ್ಳಲು ಕೆಲವರು ಪ್ರಯತ್ನಿಸುತ್ತಿರುವುದು ಅದರ ಮಹತ್ವಕ್ಕೊಂದು ಕೈಗನ್ನಡಿಯಾಗಿದೆ.
       ಕನ್ನಡದಲ್ಲಿ ಬಜೆ, ಅತಿಬಜೆ, ಕವಣ, ದಗಡೆ, ನಾರುಬೇರು, ಬಾಜೆಗಿಡ ಎಂದೆಲ್ಲಾ ಕರೆಸಿಕೊಳ್ಳುವ ಈ ಗಿಡ ಸಂಸ್ಕೃತ ಭಾಷೆಯಲ್ಲಿ ವಚಾ, ಉಗ್ರಗಂಧಾ, ಶತಪರ್ವಿಕಾ ಮೊದಲಾದ ಸುಂದರವಾದ ಹಾಗೂ ಅರ್ಥಭರಿತ ಹೆಸರುಗಳನ್ನು ಪಡೆದುಕೊಂಡಿದೆ.
    ಬಜೆಯ ವೈಜ್ಞಾನಿಕ ಹೆಸರು ಅಕೊರಸ್ ಕ್ಯಾಲಮಸ್ (Acorus calamus), ಇದರ ಕುಟುಂಬ ಎರೇಸಿ (Araceae) ಆಗಿದ್ದು ಇಂದು ರಾಜ್ಯದ ಅನೇಕ ಭಾಗಗಳಲ್ಲಿ ರೈತರಿಗೆ ಆರ್ಥಿಕ ಬೆಳೆಯಾಗಿಯೂ ಸಹಕರಿಸುತ್ತಿದೆ. ಬಜೆಯ ಗಿಡದಲ್ಲಿ ಔಷಧಿಗಾಗಿ ಬಳಸಲ್ಪಡುವ ಭಾಗ ಬೇರು. ಶುಂಠಿಯಂತೆ ಗುಪ್ತಕಾಂಡದ ಮೂಲಕವೇ ಇದರ ಸಂತಾನಾಭಿವೃದ್ಧಿಯಾಗುತ್ತದೆ. ಬಜೆ ಗಿಡದ ಬೇರನ್ನು ಮನೆಮದ್ದಾಗಿ ಬಹಳ ಹಿಂದಿನಿಂದಲೂ ಬಳಕೆ ಮಾಡಲಾಗುತ್ತಿದೆ. ಇಂದು ವೈಜ್ಞಾನಿಕವಾಗಿ ಅದರ ಔಷಧಾಂಶಗಳನ್ನು ಕಂಡುಕೊಂಡು ಆಯುರ್ವೇದದ ಹಲವಾರು ಮದ್ದಲ್ಲಿ ಬಳಸುತ್ತಿದ್ದಾರೆ. ಇದರ ಬಳಕೆ ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವ ಪ್ರಮಾಣ ಅತಿ ವಿರಳ. ಬಳಕೆಯ ಪ್ರಮಾಣದ ಬಗ್ಗೆ ಕಾಳಜಿ ಇರಬೇಕಾಗುತ್ತದೆ.
     ಮಲೆನಾಡಿನಲ್ಲಿ ಅಧಿಕ ನೀರಿನಂಶ ಇರುವೆಡೆಯೆಲ್ಲಾ ದೃಢವಾಗಿ ನಿಲ್ಲಬಲ್ಲ ಈ ಸಸ್ಯದ ಬೇರಿನ ರುಚಿ ಸವಿಯುವುದೇ ಒಂದು ವಿಶೇಷ ಅನುಭವ. ಕಹಿ, ಖಾರ ಮಾತ್ರವಲ್ಲದೆ ನಾಲಿಗೆಯಲ್ಲಿ ಕತ್ತರಿಸಿದಂತೆ ಸ್ವಲ್ಪ ಹೊತ್ತು ಅನುಭವ. ತೇಯುವ ಕಲ್ಲಿನಲ್ಲಿ ಇದರ ಬೇರನ್ನು ತೇಯುವಾಗ ಅದ್ಭುತ ವಾದ ಪರಿಮಳ ಹರಡುತ್ತದೆ. ಮಗುವಿಗೆ ಅಮೃತ ಈ ಬಜೆ. ಮಕ್ಕಳಿರುವ ಮನೆಗಳಲ್ಲಿ ಬಜೆಗೊಂದು ವಿಶೇಷ ಸ್ಥಾನ ಇದ್ದೇ ಇದೆ. ಹುಟ್ಟಿದ ಒಂದೆರಡು ತಿಂಗಳಿನಿಂದ ಏಳೆಂಟು ವರ್ಷಗಳವರೆಗೂ ವಾರದಲ್ಲಿ ಎರಡು ಮೂರು ದಿನವಾದರೂ ನೀಡುವುದುಂಟು. ಮಾತಿನ ತೊದಲುವಿಕೆಯ ದೋಷಕ್ಕೆ ಈ ಬಜೆ ರಾಮಬಾಣವಾಗಿದೆ. ಹಿರಿಯರ ಅನುಭವದ ಮೂಲಕ ಈ ಬಜೆಯು ನೆನಪಿನ ಶಕ್ತಿ, ವಾಕ್ಪಟುತ್ವ, ತೀಕ್ಷ್ಣ ಬುದ್ಧಿಶಕ್ತಿಯನ್ನು ಹೆಚ್ಚಿಸುವ ಪರಮ ಶಕ್ತಿಮದ್ದು ಎಂದು ಕೀರ್ತಿ ಪಡೆದಿದೆ.
      ಆಯುರ್ವೇದ ದಲ್ಲಿ ನೆಗಡಿ, ಕೆಮ್ಮು, ಕಫ, ಜಂತುಹುಳು, ಹೊಟ್ಟೆಯುಬ್ಬರ, ಸಂಧಿವಾತ, ಕಿವಿನೋವು, ಮೂತ್ರಕೋಶದ ಕಲ್ಲು, ಮಗುವಿಗೆ ಹಲ್ಲು ಬರುವಾಗ ಬರುವ ಜ್ವರ, ಕಿವಿನೋವು, ಮೂರ್ಛೆರೋಗ, ಇತ್ಯಾದಿಗಳಿಗೆ ಬಳಸಲಾಗುತ್ತದೆ. ಕೆಂಡದ ಮೇಲೆ ಇದರ ಬೇರನ್ನು ಹಾಕಿ ಹೊಗೆ ಎಬ್ಬಿಸಿದರೆ ಸೊಳ್ಳೆಗಳೂ ದೂರ ಹೋಗುತ್ತವೆ.
        ಬೇರುಗಳಿಂದ ಇಷ್ಟೊಂದು ಪ್ರಯೋಜನ ಇರುವ ಈ ಗಿಡವಿದ್ದಲ್ಲಿ ವಿಷದ ಹಾವುಗಳು ಕೂಡ ಸುಳಿಯುವುದಿಲ್ಲವೆನ್ನುತ್ತಾರೆ. ಇಂದು ಬಜೆ ಬೇಕೆಂದರೆ ಗ್ರಂಥಿಗೆ ಅಂಗಡಿಗಳಿಂದ ದುಡ್ಡು ಕೊಟ್ಟು ಪಡಕೊಳ್ಳುವ ನಾವು ಗಿಡದ ಪರಿಚಯವನ್ನೇ ಮರೆತುಬಿಟ್ಟಿದ್ದೇವೆ. ಅಜ್ಜಿ ತನ್ನ ಮೊಮ್ಮಕ್ಕಳಿಗೆ ದೂರದೃಷ್ಟಿ ಯಿಂದ ನಾಲಿಗೆಗೊಂದಿಷ್ಟು ಬಜೆ ಹಚ್ಚೋಣವೆಂದು ಬಂದರೆ ಅದನ್ನು ಬುದ್ಧಿವಂತರಾದ ನಾವು ಅಪಹಾಸ್ಯ ಮಾಡುತ್ತೇವೆ. ಇದು ಸರಿಯಲ್ಲ ತಾನೇ...?
      ಮಕ್ಕಳೇ, ಬಜೆಯಂತಹ ನಿಷ್ಪಾಪಿ ಸಸ್ಯವನ್ನು ನಾವು ಅಲಂಕಾರಕ್ಕಾಗಿಯೂ ಅಂಗಳದಲ್ಲಿ ಇರಿಸಿಕೊಳ್ಳಬಹುದು. ಇದರ ಹಸಿ ಬೇರಿನ ಪ್ರಯೋಜನ ವನ್ನೂ ಪಡೆದುಕೊಳ್ಳಬಹುದು. ಮಾತ್ರವಲ್ಲದೆ ಪ್ರಕೃತಿ ನೀಡಿರುವ ಈ ಸಸ್ಯದ ಉಳಿವಿಗೊಂದು ಸಹಕಾರವನ್ನೂ ನೀಡಬಹುದು. ಹೌದು ತಾನೇ... ಅದೆಷ್ಟು ಮುಗ್ಧ ಸಸ್ಯವೆಂದರೆ ನಿಮಗರಿವೇ ಇಲ್ಲದೆ ಬಜೆಯನ್ನು ಪ್ರೀತಿಯಿಂದ ಬೆಳೆಸತೊಡಗುವಿರಿ.... ದಿನಾ ಅದರ ಯೋಗಕ್ಷೇಮ, ಅದರ ಜೊತೆ ಮಾತುಕತೆ ನಡೆಸುವಿರಿ. ಖಂಡಿತ ಪ್ರಯತ್ನಿಸುವಿರಲ್ಲವೇ..
ಮುಂದಿನ ವಾರ ಮತ್ತೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗೋಣ.
............ ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************



Ads on article

Advertise in articles 1

advertising articles 2

Advertise under the article