-->
ಹಕ್ಕಿ ಕಥೆ : ಸಂಚಿಕೆ - 108

ಹಕ್ಕಿ ಕಥೆ : ಸಂಚಿಕೆ - 108

ಹಕ್ಕಿ ಕಥೆ : ಸಂಚಿಕೆ - 108
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

               
           ಮಕ್ಕಳೇ ನಮಸ್ತೇ... ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಹಿಮಾಲಯದ ರುದ್ರನಾಥ ಎಂಬಲ್ಲಿಗೆ ಚಾರಣ ಹೊರಟಿದ್ದ ನಮ್ಮ ಬೇಸ್ ಕ್ಯಾಂಪ್ ಸಗರ್ ಹಳ್ಳಿ ವೃತ್ತಾಕಾರದಲ್ಲಿ ಗುಡ್ಡಗಳಿಂದ ಆವೃತವಾಗಿತ್ತು. ಗುಡ್ಡದ ಮಧ್ಯದಲ್ಲಿ ರಸ್ತೆ. ಒಂದು ತುದಿಯಿಂದ ಬರುವ ವಾಹನವನ್ನು ನೋಡಲಾರಂಭಿಸಿದರೆ ಅದು ನಮ್ಮ ಮುಂದೆಯೇ ಹಾದು ಇನ್ನೊಂದು ತುದಿಯವರೆಗೆ ಹೋಗುವುದನ್ನು ಸುಮಾರು ಐದರಿಂದ ಹತ್ತು ನಿಮಿಷ ನೋಡುತ್ತಾ ನಿಲ್ಲಬಹುದು. ರಸ್ತೆಯ ಕೆಳಗೆ ಇಳಿಜಾರಿನಲ್ಲಿ ಮೆಟ್ಟಿಲುಗಳನ್ನು ಮಾಡಿದಂತೆ ಕಾಣುವ ಗದ್ದೆಗಳು. ರಸ್ತೆಯ ಮೇಲ್ಭಾಗಕ್ಕೂ ಹಲವೆಡೆ ಗದ್ದೆಗಳು. ರಸ್ತೆಯ ಎರಡೂ ಬದಿಗೆ ಒಂದರ ಮೇಲೊಂದು ಜೋಡಿಸಿದಂತೆ ಕಾಣುವ ಮನೆಗಳು ಇಡೀ ಹಳ್ಳಿಯನ್ನೇ ಅಲಂಕಾರ ಮಾಡಿದಂತೆ ಕಾಣುತ್ತಿದ್ದವು. ಕತ್ತಲಾದ ನಂತರ ಎಲ್ಲ ಮನೆಗಳಿಂದ ಉರಿಯುವ ದೀಪಗಳು ಒಂದುರೀತಿ ಇಡೀ ಗುಡ್ಡಕ್ಕೇ ದೀಪದ ಅಲಂಕಾರ ಮಾಡಿದಂತೆ ಕಾಣುತ್ತಿದ್ದವು.
      ಮರುದಿನ ಬೆಳಗ್ಗೆ ನಮ್ಮ ಚಾರಣ ಆರಂಭ. ನಾಲ್ಕು ಗಂಟೆಗೆ ಎದ್ದು ನಿತ್ಯಕರ್ಮಗಳನ್ನೆಲ್ಲ ಮುಗಿಸಿ ಐದು ಗಂಟೆಗೆ ನಾವೆಲ್ಲರೂ ತಯಾರಾಗಿ ಪ್ರಾರ್ಥನೆಯನ್ನು ಮಾಡಿ ಚಾರಣ ಆರಂಭ ಮಾಡಿದೆವು. ಐದು ಗಂಟೆಗಾಗಲೇ ಬೆಳಕಾಗಿತ್ತು. ನಾವು ನಡೆಯುವ ದಾರಿ ಸ್ಪಷ್ಟವಾಗಿ ಕಾಣುವಷ್ಟು ಬೆಳಕು ಮೂಡಿತ್ತು. ಪ್ರಾರಂಭದಿಂದಲೇ ನಿರಂತರವಾದ ಏರುದಾರಿಯಲ್ಲಿ ಸುಮಾರು ಹತ್ತು ಕಿಲೋಮೀಟರ್ ನಡೆಯಬೇಕಿತ್ತು. ಪ್ರಾರಂಭದಲ್ಲಿ ಹಳ್ಳಿಯ ಮನೆಗಳು, ಗದ್ದೆಗಳು, ದನದ ಕೊಟ್ಟಿಗೆಗಳು, ಬೆಳಗ್ಗೆ ಹಾಲುಕರೆದು, ಕೊಟ್ಟಿಗೆ ಕೆಲಸ ಮಾಡುತ್ತಿರುವ ಹಳ್ಳಿಗರು ಅಲ್ಲಲ್ಲಿ ಕಾಣಸಿಗುತ್ತಿದ್ದರು. ಹಳ್ಳಿಯ ಮನೆಗಳಿಗೂ ಇದೇ ರಸ್ತೆಯ ಮೂಲಕ ಹೋಗಬೇಕಾದ ಕಾರಣ ರಸ್ತೆಗೆ ಕಾಂಕ್ರೀಟು ಹಾಸಿತ್ತು. ಸುಮಾರು ಮೂರರಿಂದ ನಾಲ್ಕು ಅಡಿ ಅಗಲದ ರಸ್ತೆಯಲ್ಲಿ ನಾವುಗಳು ಒಬ್ಬೊಬ್ಬರಾಗಿ ಗುಡ್ಡವನ್ನು ಹತ್ತಲು ಪ್ರಾರಂಭಮಾಡಿದೆವು. ಕೇವಲ ಮೂರು ಕಿಲೋಮೀಟರ್ ನಡೆಯಲು ಬರೋಬ್ಬರಿ ಎರಡು ಗಂಟೆಗಳನ್ನೇ ತೆಗೆದುಕೊಂಡಿದ್ದವು. ಎಲ್ಲರಿಗೂ ಹಸಿವಾಗಿತ್ತು. ಹಳ್ಳಿಯ ಗದ್ದೆಗಳು ಕೊನೆಯಾಗತೊಡಗಿತ್ತು. ಆಗಷ್ಟೇ ನಮಗೆರಡು ಪುಟ್ಟ ಢಾಬಾಗಳು ಕಾಣಿಸಿದವು. ರಾತ್ರಿ ಒಂದಷ್ಟು ಮಳೆಯೂ ಬಂದದ್ದರಿಂದ ಢಾಬಾದ ಮಾಲೀಕ ಆಗಷ್ಟೇ ಎದ್ದು, ಬೆಂಕಿ ಹಚ್ಚಿ ಚಹಾ ಕುದಿಸಲು ಪ್ರಾರಂಭ ಮಾಡಿದ್ದ. ನಮಗೂ ಚಹಾ ಬೇಕೆಂದು ಹೇಳಿ ಅಲ್ಲೇ ದಣಿವಾರಿಸಿಕೊಳ್ಳುತ್ತ, ಬಿಸ್ಕೆಟ್ ತಿನ್ನಲು ಪ್ರಾರಂಭ ಮಾಡಿದೆವು. ಕಟ್ಟಿಗೆ ಸ್ವಲ್ಪ ಒದ್ದೆ ಇದ್ದುದರಿಂದ ಬೆಂಕಿ ಸರಿಯಾಗಿ ಉರಿಯುತ್ತಿರಲಿಲ್ಲ. ಚೆನ್ನಾಗಿ ಬೆಳಕು ಮೂಡಿ ಸುತ್ತಲಿನ ವಾತಾವರಣ ಶುಭ್ರವಾಗಿದ್ದರಿಂದ ನಾನು ಸುತ್ತಲೂ ನೋಡಲಾರಂಭಿಸಿದೆ.
    ಹಿಂದಿನ ದಿನ ನೋಡಿದ ಹಿಮಾಲಯದ ಬುಲ್ ಬುಲ್ ಮತ್ತು ಕಳಿಂಗ ಪಕ್ಷಿಗಳು ಹಾರಾಡುತ್ತಿದ್ದವು. ಪಕ್ಕದ ಗದ್ದೆಯ ಆಕಡೆ ಅಂಚಿನಲ್ಲಿ ಒಂದು ಕಪ್ಪು ಬಣ್ಣದ ಮತ್ತೊಂದು ಕಂದು ಬಣ್ಣದ ದೊಡ್ಡ ಕೋಳಿಯ ಗಾತ್ರದ ಹಕ್ಕಿಗಳು ಗದ್ದೆಯಲ್ಲಿ ಓಡಾಡುತ್ತ ನೆಲವನ್ನು ಕುಟುಕುತ್ತ ಹುಳುಹುಪ್ಪಟೆಗಳನ್ನು ಹಿಡಿದು ತಿನ್ನುತ್ತಿದ್ದವು. ಮೊದಲಿಗೆ ಹಳ್ಳಿಗರು ಸಾಕಿದ ಕೋಳಿ ಎಂದುಕೊಂಡ ನಾನು ಅದರ ಬಾಲದ ಆಕಾರ ನೋಡಿ ಸಂಶಯವಾಗಿ ನನ್ನ ಬೈನಾಕುಲರ್ ಮೂಲಕ ನೋಡಿದೆ. ಕಡುನೀಲಿಯೋ ಕಪ್ಪೋ ಎಂದು ತಿಳಿಯದಂತಹ ಬಣ್ಣ, ತಲೆಯ ಮೇಲೊಂದು ಬಿಳೀ ಜುಟ್ಟು, ಎದೆಯ ಭಾಗದಲ್ಲೂ ಬಿಳೀಬಣ್ಣ, ಕಣ್ಣಿನ ಸುತ್ತಲೂ ಕೆಂಪುಬಣ್ಣದ ಅಲಂಕಾರ. ಒಂದು ಹಕ್ಕಿ ಹೀಗಾದರೆ ಇನ್ನೊಂದು ಹಕ್ಕಿ ಕಡುಕಂದು ಬಣ್ಣ, ತಲೆಯ ಮೇಲೊಂದು ಜುಟ್ಟು, ಕಣ್ಣಿನ ಸುತ್ತಲೂ ಕೆಂಪು ಬಣ್ಣ, ಹೀಗಿರುವ ಇದು ಹೆಣ್ಣು, ಇನ್ನೊಂದು ಕಪ್ಪು ಬಣ್ಣದ ಹಕ್ಕಿ ಗಂಡು ಎಂದು ಅಂದಾಜು ಮಾಡಿದೆ. ಸಾಧ್ಯವಾದಷ್ಟು ಹತ್ತಿರ ಹೋಗಲು ಪ್ರಯತ್ನಿಸಿ ಅವುಗಳು ಗಾಬರಿಯಾಗದಂತೆ ನಾಲ್ಕಾರು ಚಿತ್ರ ತೆಗೆದೆ. ಆಗತಾನೇ ಮಂಜು ಕವಿಯಲು ಪ್ರಾರಂಭವಾಗಿ ಸ್ಪಷ್ಟ ಚಿತ್ರ ಸಿಗಲಿಲ್ಲ. ಅವು ಯಾವ ಹಕ್ಕಿಗಳು ಎಂದು ಚಹಾ ಅಂಗಡಿ ಮಾಲೀಕನನ್ನು ಕೇಳಿದರೆ ಜಂಗ್ಲೀ ಮುರ್ಗಾ (ಕಾಡುಕೋಳಿ) ಎಂದು ಹೇಳಿದ.
      ಆದರೆ ಇದನ್ನು ಎಲ್ಲೋ ನೋಡಿದ ನೆನಪಾಗುತ್ತಿತ್ತು. ಎಲ್ಲಿ ಎಂದು ಯೋಚಿಸುತ್ತಿರುವಾಗ ಬಿಸಿಬಿಸಿ ಚಹಾ ಬಂತು. ಎರಡು ಗುಟುಕು ಚಹಾ ಏರಿಸಿದಾಗ ನೆನಪಾಯಿತು. ನಮ್ಮ ಮಂಗಳೂರಿನ ಪಿಲಿಕುಳ ಉದ್ಯಾನದ ಝೂನಲ್ಲಿ ಫೆಸೆಂಟ್ ಎಂಬ ಹೆಸರಿನಲ್ಲಿ ಈ ಹಕ್ಕಿಯನ್ನು ನೋಡಿದ ನೆನಪಾಯಿತು. ಹಿಮಾಲಯದ ತಪ್ಪಲು ಪ್ರದೇಶದಲ್ಲಿ ಮಾತ್ರ ಕಾಣಸಿಗುವ ಈ ಕೋಳಿಯ ಸಂಬಂಧಿಯನ್ನು ಬಂಧನವಿಲ್ಲದ ಮುಕ್ತ ವಾತಾವರಣದಲ್ಲಿ ನೋಡಿ ಸಂತೋಷವೂ ಆಯಿತು. ಇವುಗಳ ಜೀವನಕ್ರಮ ನಮ್ಮೂರಿನ ಕೋಳಿಗಳನ್ನೇ ಹೋಲುತ್ತದೆಯಂತೆ. ನಾವು ಕುಡಿಯುತ್ತಿದ್ದ ಚಹಾ ಮುಗಿಯಿತು, ನಮ್ಮ ಚಾರಣ ಮತ್ತೆ ಮುಂದುವರೆಯಿತು. ಚಾರಣದಲ್ಲಿ ಸಿಕ್ಕ ಇನ್ನೊಂದು ಹಕ್ಕಿಯ ಕಥೆಯೊಂದಿಗೆ ಮತ್ತೆ ಮುಂದಿನ ವಾರ ಸಿಗೋಣ. 
ಇಂಗ್ಲೀಷ್ ಹೆಸರು: Kalij Pheasant
ವೈಜ್ಞಾನಿಕ ಹೆಸರು: Laphura leucomelanos
ಚಿತ್ರ : ಅರವಿಂದ ಕುಡ್ಲ 
      ಮುಂದಿನ ವಾರ ಇನ್ನೊಂದು ಹೊಸ ಹಕ್ಕಿಯನ್ನು ನೋಡಿದ ಕಥೆಯೊಂದಿಗೆ ಮತ್ತೆ ಸಿಗೋಣ.           
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************



Ads on article

Advertise in articles 1

advertising articles 2

Advertise under the article