-->
ಮನದ ಸಂಕಲ್ಪ ಬದುಕಿಗೆ ನೀಡುವುದು ಕಾಯಕಲ್ಪ

ಮನದ ಸಂಕಲ್ಪ ಬದುಕಿಗೆ ನೀಡುವುದು ಕಾಯಕಲ್ಪ

ಲೇಖಕರು : ಹರಿಣಾಕ್ಷಿ ಕಕ್ಯಪದವು, ಸಹ ಶಿಕ್ಷಕಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ದೇವಸ್ಯ ಮೂಡೂರು.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ. 
 

     ಒಂದು ಸಂಜೆ ಪ್ರಕೃತಿಯ ಮಡಿಲಲ್ಲಿ ಹಾಯಾಗಿ ಕಳೆಯುವ ಮನಸ್ಸಾಗಿತ್ತು. ಎರಡು ಬದಿಗಳಲ್ಲಿ ಹರಡಿಕೊಂಡಿರುವ ಗದ್ದೆಗಳ ಮಧ್ಯದ ಬದುವಿನಲ್ಲಿ ಮಕ್ಕಳೊಂದಿಗೆ ನಾನು ಗೆಳತಿಯ ಮನೆ ಕಡೆ ಸಾಗುತ್ತಿದ್ದೆ. ಎಲ್ಲೆಲ್ಲಿ ನೋಡಿದರೂ ಸುತ್ತಲೆಲ್ಲ ಕಾಣುವ ಗದ್ದೆಗಳು. ಅದರಲ್ಲಿ ನಿಂತಿರುವ ಹಚ್ಚ ಹಸಿರಿನ ತೆನೆಗಳು. ಗದ್ದೆಯ ಬದಿಯಲ್ಲಿ ಹರಿಯುತ್ತಿರುವ ಪುಟ್ಟ ತೋಡಿನ ಮೇಲ್ಭಾಗದಲ್ಲಿ ಒಂದು ಮನೆ. ಸುತ್ತಲಿನ ಪ್ರಕೃತಿಯನ್ನು ನೋಡಿ ಖುಷಿಪಡುತ್ತಾ, ಮಕ್ಕಳ ಜೊತೆ ನಗುತ್ತಾ ಹರಟುತ್ತಿರಬೇಕಾದರೆ ಇದ್ದಕ್ಕಿದ್ದಂತೆ ಮಗುವೊಂದು ಅಳುತ್ತಿರುವ ಧ್ವನಿ ಕೇಳಿಸಿತು. ಸರಿಯಾಗಿ ಕಿವಿಗೊಟ್ಟರೆ ಆ ಅಳುತ್ತಿರುವ ಧ್ವನಿ ತೋಡಿನ ಮೇಲ್ಭಾಗದಲ್ಲಿದ್ದ ಮನೆಯಿಂದಲೇ ಬರುತ್ತಿತ್ತು. ಮಗುವಿಗೆ ಸುಮಾರು 8 ಅಥವಾ 9 ವರ್ಷ ಇದ್ದಿರಬಹುದು. ಕೆಲವೇ ನಿಮಿಷಗಳಲ್ಲಿ ಮಗುವಿನ ಅಳುವಿನೊಂದಿಗೆ ತಾಯಿಯ ಬೈಗುಳದ ಧ್ವನಿಯೂ ಕೇಳಿ ಬಂದಿತು. ಸ್ವರ ತಾರಕ್ಕೇರುತ್ತಿದ್ದಂತೆ ನನ್ನ ಹಾಗೂ ಮಕ್ಕಳ ಗಮನ ನಮಗರಿವಿಲ್ಲದೆ ಆ ಕಡೆಗೆ ಹೋಯಿತು. ಅವರಿಬ್ಬರ ಸ್ವರದ ಮಧ್ಯೆ ತೂರಿಬಂದಂತೆ ಅಜ್ಜಿಯೊಬ್ಬರು ಮಾತನಾಡಲು ಪ್ರಾರಂಭಿಸಿದ್ದರು. "ಹೋಗಲಿ ಬಿಡು. ಈಗ ಕಲಿಯದಿದ್ದರೆ ಏನಂತೆ..?ಮುಂದೆ ದೊಡ್ಡವನಾದ ಮೇಲೆ ಆತ ಓದಲು ಬರೆಯಲು ಕಲಿಯಬಹುದು. ಅವನನ್ನು ಬಿಟ್ಟುಬಿಡು." ಎಂದರಾಕೆ. ಆಕೆ ಬಹುಶಃ ಆ ಹೆಂಗಸಿನ ಅತ್ತೆ ಇರಬೇಕು ಅನಿಸುತ್ತದೆ. ಅತ್ತೆಯ ಮಾತಿಗೆ ಎದುರಾಡುವುದು ಸರಿಯಲ್ಲವೆಂದು ಮಗುವಿನ ಅಮ್ಮನು ಬಹುಶಃ ಒಳಗಡೆ ಹೋಗಿರಬೇಕು. ಅವಳ ಧ್ವನಿ ಅಲ್ಲೇ ಅಡಗಿತು. ಮಗು ಖುಷಿಯಿಂದ ಚೆಂಡನ್ನು ಎತ್ತಿಕೊಂಡು ಹೊರಗಡೆ ಹೊರಟು ಹೋಯಿತು. ಇದೆಲ್ಲವನ್ನು ಆಲಿಸುತ್ತಿದ್ದ ನನ್ನ ಮಗಳು, "ಯಾಕಮ್ಮ..? ಅವನು ಹೋಂ ವರ್ಕ್ ಮಾಡುವುದಿಲ್ಲ..?" ಎಂದು ಕೇಳಿದಳು. ಮಗಳ ಪ್ರಶ್ನೆಗೆ ಏನು ಉತ್ತರಿಸಬೇಕೆಂದು ನಾನೊಮ್ಮೆ ತಡಕಾಡಿದೆ. ಆ ಮಗುವಿನ ಉದಾಸೀನತೆಯೋ, ಅಥವಾ ಮನೆಯ ಪರಿಸ್ಥಿತಿಯೋ, ಅಥವಾ ಬೌದ್ಧಿಕ ಹಿನ್ನಡೆಯೋ ಒಟ್ಟಾರೆ ಯಾವುದೋ ಒಂದು ಅಂಶ ಮಗು ಕಲಿಕೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳದಂತೆ ಮಾಡಿರಬಹುದು. ನನಗೆ ಸರಿಯಾದ ಕಾರಣ ಏನೆಂದು ತಿಳಿದಿರಲಿಲ್ಲ. ಆದರೆ ಮನಸ್ಸು ಮಾಡಿದರೆ ಎಲ್ಲಾ ಕಾರಣಗಳು ಸರಿದು ದೂರವಾಗುತ್ತವೆ ಎಂಬುದನ್ನು ನನ್ನ ಮಗಳಿಗೆ ತಿಳಿಸಿಕೊಡಬೇಕಾದ ಸಂದರ್ಭವೊಂದು ಒದಗಿ ಬಂದಿತ್ತು. ಈ ಸಮಯ ಅವಳಿಗೊಂದು ಕಥೆಯನ್ನು ಹೇಳಲು ಆರಂಭಿಸಿದೆ.. 

      ಆತ ಹುಟ್ಟಿದ್ದು ಆಸ್ಟ್ರೇಲಿಯಾದ ಒಂದು ನಗರದಲ್ಲಿ. ಹೆಸರು ನಿಕ್ ಜಿಸಿಕ್. ಅವನ ತಾಯಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದವರು. ನರ್ಸ್ ಆಗಿದ್ದ ಸಮಯದಲ್ಲಿ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಆಕೆ ಒಂದು ದಿನ ಗರ್ಭವತಿಯಾದಳು. ಮೊದಲೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಳು. ಪ್ರತಿ ತಿಂಗಳು ನುರಿತ ವೈದ್ಯರಿಂದ ಪರೀಕ್ಷೆಯನ್ನು ಮಾಡಿಸಿಕೊಳ್ಳುತ್ತಿದ್ದಳು. ಅವಳನ್ನು ಪರೀಕ್ಷಿಸುತ್ತಿದ್ದ ವೈದ್ಯರು 'ಏನೂ ಭಯ ಬೇಡ. ಮಗು ಚೆನ್ನಾಗಿ ಆರೋಗ್ಯವಾಗಿದೆ. ನಾರ್ಮಲ್ ಡೆಲಿವರಿ ಆಗುತ್ತದೆ.' ಎಂಬ ಭರವಸೆ ನೀಡಿದ್ದರು. ಆಕೆಗೂ ಆ ನಂಬಿಕೆ ಇತ್ತು. ಅಂತೆಯೇ ಪ್ರಸವದ ದಿನವೂ ಹತ್ತಿರ ಬಂದಿತ್ತು. ಎಲ್ಲರ ಎಣಿಕೆಯಂತೆ ಸುಸೂತ್ರವಾಗಿ ಹೆರಿಗೆಯೂ ಆಯ್ತು. ಆಕೆ ಗಂಡು ಮಗುವಿಗೆ ಜನ್ಮವಿತ್ತಿದ್ದಳು. ಆದರೆ ಮಗುವನ್ನು ನೋಡಿದ ವೈದ್ಯರು ಮಾತ್ರ ದಂಗಾಗಿದ್ದರು. ಆಗ ತಾನೇ ಹುಟ್ಟಿದ ಮಗುವಿಗೆ ಕೈಯಾಗಲಿ, ಕಾಲುಗಳಾಗಲಿ ಇರಲಿಲ್ಲ. ಸೊಂಟದ ಕೆಳಗೆ ನೇತಾಡುವಂತಿದ್ದ ಸ್ಪಂಜಿನಂತಹ ಎಡಪಾದ ಮಾತ್ರ ಇತ್ತು. ಅದರಲ್ಲಿ ಪುಟ್ಟದಾಗಿರುವ ಎರಡು ಮೂರು ಬೆರಳುಗಳು ಇದ್ದವು. ಎಲ್ಲರಲ್ಲೂ ಅವಳ ಬಗ್ಗೆ ಕನಿಕರದ ಮಾತುಗಳೇ. ಆದರೆ ಯಾರೂ ಮಗುವನ್ನು ಹತ್ತಿರ ಸೇರಿಸಿಕೊಳ್ಳಲಾಗಲೀ ಅಥವಾ ಅದರ ಶುಶ್ರೂಷೆ ಮಾಡಲಾಗಲೀ ಮುಂದಾಗಲಿಲ್ಲ...!!!
 
     ಮಡಿಲೇರಿದ ಮಗು ತನ್ನನ್ನು ಅಪ್ಪಿಕೊಳ್ಳಬೇಕು. ತನ್ನ ಎರಡು ಕೈಗಳನ್ನು ನನ್ನ ಕುತ್ತಿಗೆಗೆ ಬಳಸಿ ಸರವಾಗಿಸಬೇಕು ಎಂದೆಲ್ಲ ಕನಸು ಕಾಣುವ ಅಮ್ಮನಂತೆ ಆ ತಾಯಿಗೆ ಕನಸು ಕಾಣಲಾಗಲಿಲ್ಲ. ಆ ಖುಷಿಯಲ್ಲಿ ಮೀಯಲಾಗಲಿಲ್ಲ. ಆದರೂ ದೇವರು ಕರುಣಿಸಿದ ಆ ಪುಟ್ಟ ಮಗುವನ್ನು ಸದೃಢನನ್ನಾಗಿ ಮಾಡಲು ತಾಯಿ ಪಣತೊಟ್ಟಳು. ಮಗುವಿಗೆ ಮೂರು ವರ್ಷಗಳಾಗುತ್ತಿದ್ದಂತೆ ಅವನ ಬೆರಳುಗಳ ಮಧ್ಯೆ ಚಾಕ್ ಪೀಸ್ ಇಟ್ಟು ಬರೆಯಲು ಅಭ್ಯಾಸ ಮಾಡಿಸಿಯೇ ಬಿಟ್ಟಳು..!!. ಮಗು ಅಮ್ಮ ಕಲಿಸಿದ ಅಭ್ಯಾಸಕ್ಕೆ ಒಗ್ಗಿಕೊಂಡಿತ್ತು…!! ತಂದೆ ತಾಯಿ ಬಹಳಷ್ಟು ಖುಷಿಯಾದರು. ಮಗುವಿಗೆ ಆರು ವರ್ಷವಾಗುತ್ತಿದ್ದಂತೆ ಶಾಲೆಗೆ ಸೇರಿಸಬೇಕೆಂದು ತೀರ್ಮಾನಿಸಿದರು. ಪ್ರತಿಷ್ಠಿತ ಶಾಲೆಗಳ ಮೆಟ್ಟಿಲೇರಿದರು. ಆದರೆ ಆ ಮಗುವನ್ನು ದಾಖಲು ಮಾಡಿಕೊಳ್ಳಲು ಯಾರೂ ಮುಂದು ಬರಲಿಲ್ಲ...!!

           ತಂದೆ ತಾಯಿ ಇಬ್ಬರೂ ಕೋರ್ಟ್ ಮೆಟ್ಟಿಲೇರಿದರು. ಕೋರ್ಟಿನಲ್ಲಿ ಪೋಷಕರ ಪರವಾಗಿ ತೀರ್ಪು ಹೊರಬಿತ್ತು..!!.  ಅನಿವಾರ್ಯವೆಂಬಂತೆ ಶಾಲೆ ನಿಕ್ ಜಿಸಿಕ್ ಗೆ ಪ್ರವೇಶವನ್ನು ನೀಡಿತು. ತನ್ನನ್ನು ಒಳಬರಲು ನಿರಾಕರಿಸಿದ ಸಂಸ್ಥೆಯವರೇ ಅಚ್ಚರಿ ಪಡುವಂತೆ ಹುಡುಗ ಬುದ್ಧಿವಂತನಾದ..!!. ತರಗತಿಯ ಎಲ್ಲ ಮಕ್ಕಳಿಗಿಂತ ಕಲಿಕೆಯಲ್ಲಿ ಮುಂದಿನ ಸ್ಥಾನವನ್ನು ಪಡೆದುಕೊಂಡ. 7ನೇ ತರಗತಿಯಾಗುತ್ತಿದ್ದಂತೆ ಶಾಲಾ ನಾಯಕನ ಪಟ್ಟವನ್ನ ಅಲಂಕರಿಸಿ ಶಾಲೆಯಲ್ಲಿ ಹಿಂದೆಂದೂ ಮಾಡದಂತಹ ಕಾರ್ಯಕ್ರಮವನ್ನು ನಡೆಸಿಕೊಟ್ಟ. ಅಪ್ಪನ ಸಹಕಾರದೊಂದಿಗೆ ಕೃತಕ ಕೈಕಾಲುಗಳ ಅಳವಡಿಕೆಯೊಂದಿಗೆ ಈಜನ್ನೂ ಕಲಿತ..!!. ಓದುತ್ತಾ, ಓದುತ್ತಾ ಡಬಲ್ ಡಿಗ್ರಿಯನ್ನು ಪಡೆದುಕೊಂಡ ಹುಡುಗ ಎಲ್ಲರಿಂದ ಶಹಭಾಷ್ ಗಿಟ್ಟಿಸಿಕೊಂಡ. ಎಲ್ಲರಿಗೂ ಸ್ಪೂರ್ತಿಯಾದ ಆತನ ಸಾಧನೆಯನ್ನು ಕಂಡ ಹಲವಾರು ಸಂಸ್ಥೆಗಳು ಆತನ ಬದುಕಿನ ಸ್ಪೂರ್ತಿಯ ಕಥೆಯನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸಿದವು. ದೇಶ ವಿದೇಶಗಳಿಗೆ ತೆರಳಿ ಭಾಷಣ ಮಾಡುತ್ತಾ ಇತರರಲ್ಲಿ ಜೀವನೋತ್ಸಾಹವನ್ನು ತುಂಬುವ ಕೆಲಸವನ್ನು ಮಾಡಿದಂತಹ ಆತ ತಾನು ಕೇವಲ ಫಿಸಿಕಲ್ ಹ್ಯಾಂಡಿಕ್ಯಾಪ್ಡ್. ಮೆಂಟಲಿ ಹ್ಯಾಂಡಿಕ್ಯಾಪ್ಡ್ ಅಲ್ಲ ಎಂಬುದನ್ನು ಜಗತ್ತಿಗೆ ಸಾರಿ ಬಿಟ್ಟ…!! ಸಾಧಕ ಬಾಲಕರ ಸಾಲಿನಲ್ಲಿ ಅಗ್ರಮಾನ್ಯನಾಗಿ ನಿಂತ…!! ಆಸ್ಟ್ರೇಲಿಯಾ ಸರ್ಕಾರದ 'ಯುವರತ್ನ' ಎಂಬ ಬಿರುದಿಗೆ ಪಾತ್ರನಾದ..!!

      ಮಗಳು ಕಥೆಗೆ ಹ್ಞೂಂ ಗುಟ್ಟುತ್ತಿದ್ದಳು. ನಾಲ್ಕು ವರ್ಷದ ಅವಳಿಗೆ ಅದೆಷ್ಟು ಅರ್ಥವಾಯಿತೋ ಗೊತ್ತಿಲ್ಲ. ಆದರೆ ಕೈ ಕಾಲಿಲ್ಲದೆ ಬರೆಯಲು ಅಭ್ಯಾಸ ಮಾಡಿದ ನಿಕ್ ಅವಳ ಮನಸ್ಸಿನಲ್ಲಿ ಸ್ಥಿರವಾಗಿ ಉಳಿದಿದ್ದ.

        ಪ್ರೀತಿಯ ಮಕ್ಕಳೇ, ಈ ಹುಡುಗನ ಕಥೆ ಕೇಳುತ್ತಿದ್ದಂತೆ ನಮ್ಮ ಎಲ್ಲ ದೌರ್ಬಲ್ಯಗಳು ಮೂಲೆಗುಂಪಾಗುತ್ತವೆ. ನಮ್ಮೊಳಗಿನ ಶಕ್ತಿಚೈತನ್ಯಗಳು ಪುಟಿದೇಳುತ್ತವೆ. ನಮ್ಮಲ್ಲಿರುವ ಸಾಧ್ಯತೆಗಳನ್ನು ಹುಡುಕುತ್ತಾ ಹೋದಂತೆ ಎಲ್ಲವೂ ಸಾಧ್ಯವಾಗುತ್ತಾ ಹೋಗುತ್ತದೆ. 'ಮನಸ್ಸಿದ್ದರೆ ಮಾರ್ಗ' ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುವ ಈತ ನಮ್ಮೊಳಗಿನ ಚೈತನ್ಯವನ್ನು ಬಡಿದೆಬ್ಬಿಸುತ್ತಾನೆ.

    ನಾವು ಎಷ್ಟೋ ಬಾರಿ 'ನನ್ನಿಂದ ಸಾಧ್ಯವಿಲ್ಲ, ಇದು ನನ್ನಿಂದ ಆಗದು' ಎಂಬ ನಕಾರಾತ್ಮಕ ಅಂಶಗಳನ್ನು ತುಂಬಿಕೊಂಡು ಅದನ್ನೇ ಜಪ ಮಾಡುತ್ತಾ , ದುರ್ಬಲರಾಗಿ ಹೋಗುತ್ತೇವೆ. 'ನಾನು ಗೆದ್ದೆ ಗೆಲ್ಲುತ್ತೇನೆ , ನನ್ನಿಂದ ಇದು ಸಾಧ್ಯ , ನಾನು ಮಾಡಿಯೇ ತೀರುತ್ತೇನೆ' ಎನ್ನುವಂತಹ ಛಲ ಹೊತ್ತ ಮನಸ್ಸನ್ನು ನಾವು ನಿರ್ಮಾಣ ಮಾಡಿದರೆ ಅಡೆತಡೆಗಳು ತನ್ನಿಂದ ತಾನಾಗಿಯೇ ನಿವಾರಣೆಯಾಗುತ್ತವೆ. ದಾರಿ ಸುಗಮವಾಗುತ್ತದೆ.
ಎಲ್ಲದಕ್ಕೂ ಮುಖ್ಯವೆನಿಸುವುದು ನಮ್ಮ ಮನಸ್ಸಿನ ಸಂಕಲ್ಪವಷ್ಟೆ. 

     ಪ್ರೀತಿಯ ಮಕ್ಕಳೇ, ನಾವು 80 ಕೆ.ಜಿ ತೂಕವಿರಲಿ, 60 ಕೆ.ಜಿ ತೂಕವಿರಲಿ, ನಮ್ಮ ಇಡೀ ದೇಹವನ್ನ ನಿಯಂತ್ರಿಸುವುದು ಕೇವಲ ಒಂದೂವರೆ ಕೆ.ಜಿ ಯಷ್ಟು ತೂಕವಿರುವ ಮೆದುಳು. ಈ ಮೆದುಳಿನೊಳಗೊಂದು ಪುಟ್ಟ ಮನಸ್ಸಿದೆ. ಈ ಮನಸ್ಸು ನಮ್ಮ ಹತೋಟಿಗೆ ನಿಲುಕಿದರೆ ನಾವು ಏನನ್ನೂ ಸಾಧಿಸಲು ಸಾಧ್ಯ.
ಹಾಗಾಗಿ ಮನಸ್ಸಿನ ಆರೋಗ್ಯವನ್ನು ಕಾಪಾಡುವುದು ಅತಿ ಅವಶ್ಯ. ನಿತ್ಯದ ಒಳ್ಳೆಯ ಅಭ್ಯಾಸವಾದ ಮುಂಜಾನೆ ಬೇಗನೆ ಎದ್ದು ಮಾಡುವಂತಹ ಪ್ರಾಣಾಯಾಮ, ಯೋಗ, ಧ್ಯಾನಗಳು ಮನಸ್ಸಿನ ಆರೋಗ್ಯಕ್ಕೆ ಸಹಕಾರಿಯಾಗಿ ನಿಲ್ಲುತ್ತವೆ. ನೀವೆಲ್ಲರೂ ಕಲಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು, ವಿದ್ಯಾರ್ಥಿ ಜೀವನದಲ್ಲಿ ಕಲ್ಪಿಸಿಕೊಂಡಂತಹ ಗುರುತರವಾದ ಗುರಿಯನ್ನು ಸಾಧಿಸಬೇಕೆಂದು ಪಣತೊಟ್ಟಿದ್ದೆ ಆಗಿದ್ದರೆ ನಿಮ್ಮ ಮನಸ್ಸಿನ ಆರೋಗ್ಯವನ್ನು ಮೊತ್ತ ಮೊದಲಾಗಿ ಕಾಪಾಡಿಕೊಳ್ಳಿ. 

      ಸ್ವಚ್ಛಂದವಾಗಿ ಹರಿಯುತ್ತಿರುವಂತಹ ನದಿ, ಸುತ್ತಲಿನ ಕಶ್ಮಲಗಳು ಸೇರಿಕೊಂಡಾಗ ಮಾತ್ರ ಮಲಿನಗೊಳ್ಳುವಂತೆ ನಮ್ಮ ಮನಸ್ಸನ್ನು ಅನಗತ್ಯ ವಿಚಾರಗಳಿಂದ ದೂರವಿರಿಸಬೇಕು. ಉತ್ತಮ ಪುಸ್ತಕದ ಓದು, ಉತ್ತಮ ಸ್ಥಳದ ಭೇಟಿ, ಉತ್ತಮ ವ್ಯಕ್ತಿಗಳ ಭೇಟಿ ಮನಸ್ಸಿನ ಆರೋಗ್ಯವನ್ನು ಇಮ್ಮಡಿಗೊಳಿಸುವುದರೊಂದಿಗೆ ನಮ್ಮ ಏಕಾಗ್ರತೆ ಹಾಗೂ ಜ್ಞಾನದ ಬೆಳವಣಿಗೆಗೆ ಸಹಕಾರಿ ಯಾಗುತ್ತವೆ. ವ್ಯಕ್ತಿತ್ವ ಅರಳುತ್ತದೆ. ಹಲವಾರು ಉತ್ತಮ ಪುಸ್ತಕಗಳಲ್ಲಿ ರಾಬಿನ್ ಶರ್ಮ ರವರ "ಫೆರಾರಿ ಮಾರಿದ ಫಕೀರ" ಹಾಗೂ "ಐದು ಎ.ಎಂ." ಎಂಬ ಪುಸ್ತಕಗಳು ನಮ್ಮ ಬದುಕನ್ನೇ ಬದಲಾಯಿಸುವ ಶಕ್ತಿಯುಳ್ಳ ಪುಸ್ತಕಗಳಾಗಿವೆ. ನಾನಂತೂ ಆ ಪುಸ್ತಕಗಳನ್ನು ಓದಿ ಬಹಳ ಖುಷಿ ಪಟ್ಟೆ. ನೀವೂ ಅವುಗಳನ್ನು ಖರೀದಿಸಿ ಓದಿ ಹಾಗೂ ಹಲವಾರು ಉತ್ತಮ ಪುಸ್ತಕಗಳನ್ನು ಮತ್ತು ಎಲ್ಲಕ್ಕಿಂತ ಪ್ರಮುಖವಾಗಿ ನಿತ್ಯದ ಪತ್ರಿಕೆಗಳನ್ನ ಓದುವ ಅಭ್ಯಾಸವನ್ನು ರೂಢಿಸಿಕೊಂಡು ಜಾಣರಾಗಿ. ಸುತ್ತಲಿನ ಅರಿವನ್ನ ಹೆಚ್ಚಿಸಿಕೊಳ್ಳಿ. ಯಾಕೆಂದರೆ ಜ್ಞಾನಿಯ ಮುಂದೆ ಎಲ್ಲರೂ ತಲೆಬಾಗುತ್ತಾರೆ. 

      ಸರಿ ಮಕ್ಕಳೆ, ಹಾಗಾದ್ರೆ ಪುಸ್ತಕ ಓದುವ ಹವ್ಯಾಸ ಹಾಗೂ ಅಭ್ಯಾಸವನ್ನು ರೂಡಿಸಿಕೊಳ್ತೀರಲ್ವಾ…… ಶುಭವಾಗಲಿ.
ಚಿತ್ರಗಳು : ಅಂತರ್ಜಾಲ ಕೃಪೆ
..................... ಹರಿಣಾಕ್ಷಿ ಕಕ್ಯಪದವು, ಸಹ ಶಿಕ್ಷಕಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ದೇವಸ್ಯ ಮೂಡೂರು.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ. 
********************************************Ads on article

Advertise in articles 1

advertising articles 2

Advertise under the article