-->
ಜೀವನ ಸಂಭ್ರಮ : ಸಂಚಿಕೆ - 95

ಜೀವನ ಸಂಭ್ರಮ : ಸಂಚಿಕೆ - 95

ಜೀವನ ಸಂಭ್ರಮ : ಸಂಚಿಕೆ - 95
ಲೇಖಕರು : ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

                 
     ಮಕ್ಕಳೇ, ಈ ಲೇಖನ ಓದಿ. ಈ ಲೇಖನ ಸಾಧನೆ ಮಾಡಬೇಕೆನ್ನುವವರಿಗೆ ಮಾರ್ಗದರ್ಶನ ನೀಡುತ್ತದೆ.
    ಒಂದು ಕಾಲದಲ್ಲಿ ಭಾರತ ದೇಶ ಆಶ್ರಮಗಳ ನಾಡಾಗಿತ್ತು. ಆಶ್ರಮ ಎಂದರೆ ವಿದ್ಯಾ ಕೇಂದ್ರ. ನದಿಗಳ ಸಮೀಪ ಸುಂದರ ಗಿಡಮರಗಳ ಮಧ್ಯೆ ಗುರು ಶಿಷ್ಯರು ವಾಸ ಮಾಡುತ್ತಿದ್ದರು. ಅದು ತಪಸ್ವಿಗಳು ವಾಸ ಮಾಡುತ್ತಿದ್ದ ಸ್ಥಳ. ತಪಸ್ವಿಗಳು ಎಂದರೆ ಋಷಿಗಳು. ಅವರು ಜ್ಞಾನ ತಪಸ್ವಿಗಳಾಗಿರಬಹುದು, ಶಾರೀರಿಕ ತಪಸ್ವಿಗಳಾಗಿರಬಹುದು ಅಥವಾ ಲೌಕಿಕ ತಪಸ್ವಿಗಳಾಗಿರಬಹುದು. ಇಂತಹ ಋಷಿಗಳ ಸಮೀಪ ವಿದ್ಯಾರ್ಥಿಗಳು ಎಂಟನೇ ವಯಸ್ಸಿಗೆ ಬರುತ್ತಿದ್ದರು. ಸುಮಾರು 12 ವರ್ಷ ಕಲಿಯುತ್ತಿದ್ದರು. ಗುರುಗಳಿಗೆ ಶಿಷ್ಯರ ಕಲಿಕೆ ತೃಪ್ತಿ ನೀಡಿದರೆ ಊರಿಗೆ ಹೋಗಬಹುದಾಗಿತ್ತು. ನಂತರ ಲಗ್ನವಾಗಬಹುದಾಗಿತ್ತು. ವಿದ್ಯಾರ್ಥಿ ಕಲಿಯದಿದ್ದರೆ ಊರಿಗೆ ಕಳುಹಿಸುತ್ತಿರಲಿಲ್ಲ. ಏಕೆಂದರೆ ಕಲಿಯದೆ ಹೋದರೆ ಊರು ಹಾಳಾಗಬಹುದು ಎಂದು ಕಳುಹಿಸುತ್ತಿರಲಿಲ್ಲ.
      ಇದೇ ಆಶ್ರಮದಲ್ಲಿ ಭೂಪದೇವ ಎಂಬ ವಿದ್ಯಾರ್ಥಿ ಇದ್ದನು. ಈತನ ಜೊತೆಗೆ ಬಂದವರು ಕಲಿತು ಹೋಗುತ್ತಿದ್ದರು. ಈತನಿಗೆ ಬಿಡುಗಡೆ ಮಾಡಿರಲಿಲ್ಲ. ಈತ ಗುರುಗಳ ಬಳಿ ಹೋಗಿ ಹೋಗುವುದಾಗಿ ಹೇಳುತ್ತಿದ್ದ. ಗುರುಗಳು ನೀನು ಇನ್ನು ಕಲಿತಿಲ್ಲ ಇರು ಎಂದು ಹೇಳುತ್ತಿದ್ದರು. ಈತ ಈ ರೀತಿ ಚಿಂತಿಸಿದ ಗುರುಗಳು ಹೇಳುವುದು ನನ್ನ ಮೈ ಗೆ ಹತ್ತುವುದಿಲ್ಲ, ಮನಸ್ಸಿಗೆ ಅಂಟುವುದಿಲ್ಲ. ಇದು ನನಗೆ ಅಸಾಧ್ಯ. ಗುರುಗಳು ಕೇಳಿದರೆ ಪ್ರಯೋಜನವಿಲ್ಲ. ಗುರುಗಳಿಗೆ ಹೇಳದೆ ಇಂದೆ ರಾತ್ರಿ ತಪ್ಪಿಸಿಕೊಂಡು ಹೊರಡಲು ತೀರ್ಮಾನಿಸಿ, ರಾತ್ರಿ ಆಶ್ರಮದಿಂದ ಹೊರಟನು. ರಾತ್ರಿಯೆಲ್ಲ ನಡೆದು, ಬೆಳಿಗ್ಗೆಯೂ ನಡೆದು, ಮಧ್ಯಾಹ್ನವಾಗಿತ್ತು. ದೇಹಕ್ಕೆ ಆಯಾಸವಾಗಿತ್ತು. ಹಸಿವಾಗಿತ್ತು. ನೀರಡಿಕೆಯಾಗಿತ್ತು. ಸುತ್ತಮುತ್ತ ನೋಡಿದ ಒಂದು ಊರಿನ ಹತ್ತಿರ ಬಂದಿದ್ದನು. ಅಲ್ಲಿ ಒಂದು ಕಲ್ಲಿನ ಬಾವಿ ಕಂಡಿತು. ಅಲ್ಲಿ ಒಬ್ಬಳು ಮಹಿಳೆ ಮಣ್ಣಿನ ಗಡಿಗೆಯಿಂದ ರಾಟೆ ಬಳಸಿ ನೀರನ್ನು ಸೇದುತ್ತಿದ್ದಳು. ಆ ಬಾವಿಯ ಹತ್ತಿರ ಬಂದು ನೋಡಿದ. ಆ ಮಹಿಳೆಗೆ ನೀರನ್ನು ಹಾಕುವಂತೆ ಕೇಳಿದ. ಆ ಮಹಿಳೆ ಕೈ ಬಳಸಿ ನೀರನ್ನು ಸುರಿಯುತ್ತಿದ್ದಳು. ನೀರು ಕುಡಿದನು. ನಂತರ ನೋಡಿದ ಮಣ್ಣಿನ ಗಡಿಗೆ ಇಟ್ಟಿದ್ದ ಕಲ್ಲು ಗುಂಡಿಯಾಗಿತ್ತು. ಆಗ ಭೂಪದೇವ ಮಹಿಳೆಗೆ ಕೇಳಿದ. ಈ ಕಲ್ಲಿನ ಚಪ್ಪಟೆಯಲ್ಲಿ ಗುಂಡಿ ಹೇಗಾಯಿತು....?. ಆಗ ಮಹಿಳೆ ಹೇಳಿದಳು, "ಕಲ್ಲಿನ ಚಪ್ಪಡಿ ಆದರೇನು, ಇಟ್ಟರೆ, ಇಟ್ಟರೆ ಮೆಲಮೆಲ ಇಟ್ಟರೆ ಕಲ್ಲಿನ ಚಪ್ಪಡಿ ಕೂಡ ತಗ್ಗು ಅದೇ ಆಗುತ್ತೆ". ಆಗ ಆತನಿಗೆ ಹೊಳೆಯಿತು. ಮಾಡಿದ್ರೆ, ಮಾಡಿದ್ರೆ, ಬಿಟ್ಟು ಬಿಡದೆ ಮಾಡಿದ್ರೆ, ಆಗ್ತದೆ. ಮಣ್ಣಿನ ಕೊಡ ಇಟ್ರೆ, ಕಲ್ಲು ಸವಿಯುತ್ತದ್ದೆ. ಬಿಟ್ಟುಬಿಡದೆ ಓದಿದ್ರೆ ನನಗೆ ಯಾಕೆ ಆಗೋದಿಲ್ಲ. ಮತ್ತೆ ಆಶ್ರಮಕ್ಕೆ ಹೋಗಲು ತೀರ್ಮಾನಿಸಿ, ವಾಪಸು ಆಶ್ರಮಕ್ಕೆ ಬಂದನು. 
    ಗುರುಗಳು ಆತನಿಗೆ ಹೇಳಿದರು. ಮೊದಲು ನಿನ್ನ ತಲೆಯಲ್ಲಿ ಹೊಕ್ಕಿದೆಯಲ್ಲ ಆಗೋದಿಲ್ಲ ಅನ್ನೋದನ್ನು ಮೊದಲು ತೆಗೆ ಎಂದರು. ಈ ಭೂಪದೇವನೇ ಮುಂದೆ ದೊಡ್ಡ ಸಂತನಾದನು.
ಈ ಕಥೆಯನ್ನು ವಿಶ್ಲೇಷಣೆ ಮಾಡೋಣ. ಈ ಕಥೆಯ ಸಾಧನೆಗೆ ಹೇಗೆ ಪ್ರೇರಣೆ ನೀಡುತ್ತದೆ ನೋಡೋಣ.
        ಬೇರೆಯವರು ಮಾಡುತ್ತಾರೆ ಅಂದ ಮೇಲೆ ನನ್ನ ಕೈಯಲ್ಲಿ ಆಗುವುದಿಲ್ಲ ಎಂದರೆ ಹೇಗೆ....?. "ಅಸಾಧ್ಯ" ಎನ್ನುವುದೇ ಸಾಧನೆಗೆ ಅಡ್ಡಿ. "ಸಾಧ್ಯ" ಎಂದು ಹುಚ್ಚಾಗಿ ಹೋಗಬಾರದು. ಸಾಧ್ಯ ಎಂದು ಬೆಟ್ಟದಿಂದ ಜಿಗಿಯಬಾರದು. ಜಿಗಿಯಲೂ ಸಾಧ್ಯ, ಸಾಧನೆ ಮಾಡಿದರೆ ಮಾತ್ರ. ಸಾಧನೆ ಮಾಡಿದರೆ ಅಸಾಧ್ಯವಾದುದು ಯಾವುದು ಇಲ್ಲ....!!. ಈಗ ತೋಟ ನೋಡುತ್ತೇವೆ. ಮೊದಲಿಗೆ ಅದು ಬೆಟ್ಟ, ಗುಡ್ಡ, ಕಲ್ಲುಗಳಿಂದ ಕೂಡಿತ್ತು. ಸಾಧ್ಯ ಇದೆ ಎಂದು ಹಿರಿಯರು ಮಾಡಿದರು. ಈಗ ಸುಂದರ ತೋಟವಾಗಿದೆ.

      ಛಲ ತೊಡುವುದು, ಮಾಡೆ ತೀರುತ್ತೇನೆ ಎಂದು ಹಟ ಮಾಡುವುದು. ಮನಸ್ಸನ್ನು ಗಟ್ಟಿ ಮಾಡುವುದು. ಸಿಂಹ ಕಾಡಿನ ರಾಜನಾದರೂ, ಎಷ್ಟೇ ಬಲಶಾಲಿಯಾದರು, ಅದು ಮಲಗಿದ್ದಲ್ಲಿಗೆ ಯಾವ ಪ್ರಾಣಿಯೂ ಹೋಗುವುದಿಲ್ಲ. ಅದು ತನ್ನ ಆಹಾರಕ್ಕಾಗಿ ಬೇಟೆಯಾಡಬೇಕು. ಬೇಟೆಯಾಡದಿದ್ದರೆ ಒಂದು ಮೊಲವು ಸಹ ಹತ್ತಿರ ಹೋಗುವುದಿಲ್ಲ. ಮೊಲಕ್ಕೆ ಸಿಂಹದಷ್ಟು ಶಕ್ತಿ ಇಲ್ಲದಿದ್ದರೂ, ತಪ್ಪಿಸಿಕೊಳ್ಳುವುದನ್ನು ಕಲಿತಿರುತ್ತದೆ. ಅದಕ್ಕೆ ಮೊಲಗಳ ಸಂಖ್ಯೆ ಅಷ್ಟು ಹೆಚ್ಚಾಗಿರುವುದು.
       ಒಬ್ಬ ವ್ಯಕ್ತಿ ಹಸಿದಿದ್ದಾನೆ, ದಾಹವಾಗಿದೆ, ಮಾವಿನ ಮರದ ಕೆಳಗೆ ಕುಳಿತಿದ್ದಾನೆ. ಮಾವಿನ ಮರದಲ್ಲಿ ಮಾವಿನ ಹಣ್ಣುಗಳು ಮರಗಳನ್ನು ತುಂಬಿದೆ. ಮಾವಿನ ಮರಹತ್ತಿ ಕೀಳದೆ ಇದ್ದರೆ, ದಾಹ ಹಸಿವು ನೀಗುವುದಿಲ್ಲ. ಮಂತ್ರ ಹಾಕಿದರೆ ಮಾವಿನಕಾಯಿ ಬೀಳುವುದಿಲ್ಲ. ದೈಹಿಕವಾಗಿ ಸಾಮರ್ಥ್ಯಗಳಿಸಬೇಕೆಂದು ಹುಡುಗ ಪುಸ್ತಕಗಳನ್ನು ಓದಿದ್ದಾನೆ. ದೈಹಿಕ ಸಾಮರ್ಥ್ಯ ಹೇಗೆ ಪಡೆಯಬೇಕೆಂದು ಇಡೀ ಗ್ರಂಥಾಲಯವನ್ನೇ ಓದಿದ್ದಾನೆ. ಆದರೆ ಒಂದು ದಿನ ಓಡಲಿಲ್ಲ. ಹೇಗೆ ದೈಹಿಕ ಸಾಮರ್ಥ್ಯ ಬರುತ್ತೆ? ಕಲಿತಿದ್ದು ಕ್ರಿಯಾ ರೂಪಕ್ಕೆ ಬರಬೇಕು. ಬರಿ ಕನಸು ಕಂಡರೆ ಸಾಲದು. ಕ್ರಿಯಾಶೀಲರಾಗಬೇಕು. ಕ್ರಿಯಾಶೀಲರಾಗದಿದ್ದರೆ ಏನು ಓದಿದರೂ ಪ್ರಯೋಜನವಿಲ್ಲ. ಅದು ಅನುಭವವಾಗುವುದಿಲ್ಲ. ಕೇವಲ ಆಸೆಪಟ್ಟರೆ ಏನೂ ಪ್ರಯೋಜನವಿಲ್ಲ...!!
 
       ಪರಿಶ್ರಮ ಎಂದರೆ ಪ್ರಯತ್ನ ಮಾಡಬೇಕು. ಕಷ್ಟ ಪಡಬೇಕು. ಪತಂಜಲಿ ಹೇಳುತ್ತಾನೆ "ಎಷ್ಟು ದಿವಸ ಪರಿಶ್ರಮ ಪಡಬೇಕು ಅಂದರೆ ನೀನು ಇರುವ ತನಕ ಅಥವಾ ಅದು ಸಾಧನೆಯಾಗುವ ತನಕ". ಕೆಲವು ವಿದ್ಯಾರ್ಥಿಗಳು ಹೇಳುತ್ತಾರೆ. ನನಗೆ ಓದಿದ್ದು ನೆನಪಿನಲ್ಲಿ ಉಳಿಯುವುದಿಲ್ಲ ಎಂದು. ಓದಿರುವುದು ಕೇವಲ ಒಮ್ಮೆ. ಒಮ್ಮೆ ಓದಿದರೆ ನೆನಪು ಉಳಿಯುತ್ತದೆಯೇ?. ಎಷ್ಟು ಬಾರಿ ಓದಿದರೆ ನೆನಪು ಉಳಿಯುತ್ತದೆಯೋ, ಅಷ್ಟು ಬಾರಿ ಓದಬೇಕು. ನಾವು ಶಿಶುವಾಗಿದ್ದಾಗ ನಮ್ಮ ತಂದೆ ತಾಯಿ ನಮಗೆ ಹೆಸರನ್ನು ಇಟ್ಟಿರುತ್ತಾರೆ. ನಾವು ನಮ್ಮ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳಲು ಒಂದು ವರ್ಷ ಕಲಿಯುತ್ತೇವೆ. ನಂತರ ಅವರು ಕರೆದಾಗ ಪ್ರತಿಕ್ರಿಯೆ ನೀಡುತ್ತೇವೆ. ನೆನಪಿನಲ್ಲಿಡಲು ಮತ್ತೆ ಮತ್ತೆ ಪುನಶ್ಚರಣ. ಪುನಾ ಪುನಃ ಮೆಲಕು ಹಾಕಬೇಕು.
    ತಾನಸೇನಾ ದೊಡ್ಡ ಸಂಗೀತಗಾರ. ಆತ ಹುಡುಗನಾಗಿದ್ದಾಗ ಸಂಗೀತ ಕಲಿಯಲು ಗುರು ಹರಿದಾಸನ ಬಳಿ ಹೋಗುತ್ತಾನೆ. ಹರಿದಾಸ ಋಷಿ ಸದೃಶ ವ್ಯಕ್ತಿ. ಆತನಿಗೆ ಸರಿಗಮಪದನಿಸ ಸ್ವರಗಳನ್ನು ಹೇಳಿಕೊಟ್ಟು, ಅಭ್ಯಾಸ ಮಾಡುವಂತೆ ಹೇಳಿದ. ತಾನಸೇನಾ ಬೆಳಗ್ಗೆಯಿಂದ ಸಂಜೆವರೆಗೆ ಅಭ್ಯಾಸ ಮಾಡಿ, ಸಂಜೆ ಗುರುಗಳ ಬಳಿಗೆ ಬಂದ. ತಾನು ಕಲಿತಿರುವುದನ್ನು ಒಪ್ಪಿಸಿ, ಹೊಸದನ್ನು ಕಲಿಯಬೇಕೆಂಬ ಅಪೇಕ್ಷೆಯಿಂದ. ಗುರುಗಳು ಹೇಳಿದರು. ಈ ಸ್ವರಗಳನ್ನು ಒಂದು ವರ್ಷ ಅಭ್ಯಾಸ ಮಾಡು. ದಿನ 10 ಗಂಟೆ ಅಭ್ಯಾಸ ಮಾಡಬೇಕು ಎಂದನು. ಅಲ್ಲಿಯವರೆಗೆ ನನಗೆ ಮುಖ ತೋರಿಸಬೇಡ ಎಂದರು. ತಾನ ಸೇನಾ ಒಂದು ವರ್ಷ ಈ ಸ್ವರಗಳನ್ನು ದಿನಕ್ಕೆ 10 ಗಂಟೆ ಅಭ್ಯಾಸ ಮಾಡಿದ. ಆತನಿಗೆ ಸ್ವರ ಗಟ್ಟಿಯಾಗಿತ್ತು. ಸರ ಗಟ್ಟಿಯಾದ ಬಳಿಕ ಯಾವ ರಾಗವೇನು?.
ಪರಿಶ್ರಮ ಹೇಗಿರಬೇಕೆಂದರೆ ದೀರ್ಘಕಾಲ, ನಿರಂತರವಾಗಿ, ಉತ್ಸಾಹದಿಂದ ಮಾಡಬೇಕು. ಆಗ ದೃಢಭೂಮಿಕೆ ಸಿದ್ಧವಾಗುತ್ತದೆ. ಪೈಲ್ವಾನ್ ಆಗಬೇಕಾದರೆ ಒಮ್ಮೆ ಕಸರತ್ತು ಮಾಡಿ ಬಿಟ್ಟು ಇನ್ನೊಂದು ವಾರಕ್ಕೆ ಕಸರತ್ತು ಮಾಡಿದರೆ ಆಗುವುದಿಲ್ಲ. ದಿನನಿತ್ಯ ನಿರಂತರವಾಗಿ, ಉತ್ಸಾಹದಿಂದ ಮಾಡಬೇಕು. ಯಾವ ಸಾಧನೆ ಮಾಡಬೇಕೋ ಆ ಸಾಧನೆಯನ್ನೇ ಮಾಡಬೇಕು. ಸಾವಕಾಶ, ಸಾವಕಾಶ, ನಿಧಾನವಾಗಿ ಹೆಜ್ಜೆ ಇಡುತ್ತಿದ್ದರೆ, ಸಾವಿರ ಗಾವುದ ಹೋಗಬಹುದು. ಹೆಜ್ಜೆಯನ್ನೆ ಇಡದಿದ್ದರೆ ಒಂದು ಹೆಜ್ಜೆ ಮುಂದೆ ಹೋಗುವುದಿಲ್ಲ. ಪರಿಶ್ರಮ ಎಂದರೆ ಎಲ್ಲಾ ರೀತಿ ಶ್ರಮಪಡಬೇಕು. ಬರೀ ಕಾಲಿನ ಶ್ರಮ, ಕೈ ಶ್ರಮ ಅಲ್ಲ. ಎಲ್ಲಾ ಅವಯವಗಳನ್ನು ಬಳಸಿ, ದೈಹಿಕವಾಗಿ, ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಶ್ರಮ ಮಾಡಬೇಕು.

      ಪರಿಶ್ರಮ ಮಾಡುವವನಿಗೆ ಆತಂಕ ಎದುರಾಗುತ್ತದೆ. ಕುಳಿತವನಿಗೆ ಅಲ್ಲ. ಪರೀಕ್ಷೆಗೆ ಕುಳಿತವನಿಗೆ ಆತಂಕ, ಸುಮ್ಮನಿರುವವನಿಗೆ ಆತಂಕ ಇಲ್ಲ. ನಮಗೆ ಆತಂಕ ಉಂಟಾದಾಗ ಆತಂಕ ದೊಡ್ಡದಲ್ಲ ಎನ್ನುವ ಭಾವ ಇರಬೇಕು. ಅದು ಕಷ್ಟ ಅಂತ ಭಾವಿಸಬಾರದು. ಯಾರೆಲ್ಲಾ ಏನೇ ಅಂದ್ರು ತಲೆಕೆಡಿಸಿಕೊಳ್ಳಬಾರದು. ಯಾವುದೇ ಆತಂಕವಾಗಲಿ, ದುಃಖವಾಗಲಿ, ಸುಖವಾಗಲಿ ಶಾಶ್ವತವಲ್ಲ ಎಂಬ ಸತ್ಯ ತಿಳಿದಿರಬೇಕು. 
     ಭಗೀರಥ ಗಂಗಾನದಿಯನ್ನು ಹಿಮಾಲಯದಿಂದ ಭೂಮಿಗೆ ತರಲು ಹೋದಾಗ, ಪ್ರತಿ ಹಂತದಲ್ಲೂ ಅಡ್ಡಿ. ಆ ಅಡ್ಡಿಯನ್ನೆಲ್ಲ ನಿವಾರಿಸುತ್ತಿರುವಾಗ ಮತ್ತೊಬ್ಬ ಅದನ್ನು ಪೂರ್ತಿ ಕುಡಿದೆ ಬಿಟ್ಟ. ಆಗ ಅದನ್ನು ಹರಿಸಿಯೆ ತೀರುತ್ತೇನೆಂದು ಹಠ ಮಾಡಿ ಪರಿಶ್ರಮಪಟ್ಟು ಹರಿಸಿಯೇ ಬಿಟ್ಟ. ಅದಕ್ಕೆ ಭಗೀರಥ ಪ್ರಯತ್ನ ಎನ್ನುತ್ತಾರೆ. ಹಾಗೆ ಯಾರೇ ಅಡ್ಡಿಪಡಿಸಲಿ, ಸಾಧಿಸಲೇಬೇಕೆಂಬ ಹಠವಿದ್ದರೆ ಯಾವುದೇ ಸಾಧನೆ ಯಶಸ್ವಿಯಾಗುತ್ತದೆ ಅಲ್ವೇ ಮಕ್ಕಳೇ...
......................................... ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article