-->
ಜಗಲಿ ಕಟ್ಟೆ : ಸಂಚಿಕೆ - 9

ಜಗಲಿ ಕಟ್ಟೆ : ಸಂಚಿಕೆ - 9

ಜಗಲಿ ಕಟ್ಟೆ : ಸಂಚಿಕೆ - 9
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


         ಜಗಲಿಯ ಬಂಧುಗಳಿಗೆ ಪ್ರೀತಿಯ ನಮಸ್ಕಾರ..... ಕಳೆದ ಸಾಲಿನಿಂದ ಚಿತ್ರಕಲಾ ಸ್ಪರ್ಧೆಯ ಜೊತೆ ಜೊತೆಗೆ ರಾಜ್ಯಮಟ್ಟದ ಕಥೆ ಮತ್ತು ಕವನ ಸ್ಪರ್ಧೆಯನ್ನು ಆಯೋಜಿಸುತ್ತಿರುವುದು ನಿಮಗೆಲ್ಲ ತಿಳಿದಿದೆ. ನವೆಂಬರ್ 14ಕ್ಕೆ ಕಥೆ ಮತ್ತು ಕವನ ಸ್ಪರ್ಧೆಯ ಫಲಿತಾಂಶ ಹಾಗೂ ಜನವರಿ 10ನೇ ತಾರೀಕಿಗೆ ಚಿತ್ರಕಲಾ ಸ್ಪರ್ಧೆಯ ಫಲಿತಾಂಶವನ್ನು ನೀಡುತ್ತಿದ್ದೆವು. 
      ಈ ಸಾಲಿನಲ್ಲಿಯೂ ಸ್ಪರ್ಧೆಗಳನ್ನು ಮತ್ತೆ ಮುಂದುವರಿಸುತ್ತಿದ್ದೇವೆ... ಈ ಬಗ್ಗೆ ನಿಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಈ ಜಗಲಿಕಟ್ಟೆ ಮೂಲಕ ಕೇಳಿಕೊಳ್ಳುತ್ತಿದ್ದೇನೆ. ಅಂದಹಾಗೆ ಈ ಸ್ಪರ್ಧೆಯ ಉದ್ದೇಶ ಇರುವುದು ಇನ್ನೂ ಹೆಚ್ಚಿನ ಮಕ್ಕಳು ಜಗಲಿಯಲ್ಲಿ ತೊಡಗಿಸಿಕೊಳ್ಳಬೇಕೆನ್ನುವ ದೃಷ್ಟಿಯಿಂದ. ಮಕ್ಕಳ ಜಗಲಿಯ ಪರಿಚಯವಾಗಲಿ ಅನ್ನುವ ಕಾರಣದಿಂದ. 
     ಈ ಸಲದ ಜಗಲಿಕಟ್ಟೆ ಸಂಚಿಕೆಯಲ್ಲಿ ಬಹಳಷ್ಟು ಮಂದಿ ಅನಿಸಿಕೆಯನ್ನು ವ್ಯಕ್ತಪಡಿಸಿದ್ದೀರಿ. ನೀವು ಹೇಳುವ ಪ್ರತಿಯೊಂದು ಮಾತುಗಳು, ಇಲ್ಲಿ ತೊಡಗಿಕೊಳ್ಳುವ ಪ್ರತಿಯೊಬ್ಬರನ್ನು ಕೂಡ ಪ್ರೋತ್ಸಾಹಿಸಿದಂತಾಗುತ್ತದೆ. ಮಕ್ಕಳ ಜಗಲಿಯನ್ನು ಜೀವಂತವಾಗಿಸುತ್ತದೆ...!


ಕಳೆದ ಸಂಚಿಕೆಯ ಜಗಲಿಕಟ್ಟೆ - 8 ಅಂಕಣದಲ್ಲಿ ಶ್ರೀಮತಿ ‌ಕವಿತಾ ಶ್ರೀನಿವಾಸ್ , ವಿದ್ಯಾ ಕಾರ್ಕಳ ಸಹಶಿಕ್ಷಕಿ , ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ಜಗಲಿಕಟ್ಟೆಯಲ್ಲಿ ಅಡ್ಡಾಡಿದಾಗ..
    ಮಳೆಯ ಭರ, ಇಳೆಗೆ ಜ್ವರ. ಶೀತ , ನೆಗಡಿ, ಕೆಮ್ಮು, ಮೈ ಬಿಸಿ ಎಲ್ಲವೂ ಎಲ್ಲರಿಗೂ. ಹಿರಿಯರಿಗೆ ಸ್ವಲ್ಪ ವಿರಾಮವನ್ನೂ ಮಳೆ ನೀಡುತ್ತದೆ. ಮನೆಯೊಳಗೆ ಬೆಚ್ಚಗಿರಲು ಹೊರಗಿನ ಆರ್ದ್ರತೆ ಯಾಕೆ? ಹಪ್ಪಳ ಸಂಡಿಗೆ ಮೆಲ್ಲುತ್ತಾ ಬಿಸಿ ಬಿಸಿ ಕಾಫಿ ಸೇವಿಸಿದಾಗ ಸಿಗುವ ಮಜ ಅನುಭವಿಸಿದ ಸಜಗಳನ್ನು ಕಿತ್ತೊಗೆಯುತ್ತದೆ, ಜೀವನೋತ್ಸಾಹವ ಪುಟಿಯುತ್ತದೆ. ಅದರ ಪರಿಣಾಮದಿಂದಲೇ ಜಗಲಿಕಟ್ಟೆಯಲ್ಲಿ ಅಡ್ಡಾಡಿದೆ.
     ಪ್ರಕೃತಿಯನ್ನು ಮಕ್ಕಳ ಜಗಲಿಯಲ್ಲಿ ನೋಡುತ್ತಾ ಇದ್ದೇನೆ. ಯಾರಿವಳು ಪ್ರಕೃತಿ ಸಂಶಯವೇ? ನಮ್ಮ ಎಲ್ಲರ ಸಂಬಂಧಿ ಪ್ರಕೃತಿಯ ನೆನಪಾಗಲಿಲವೇ? ಛೇ! ಮರೆತರೆ ಹೇಗೆ? ಪ್ರಕೃತಿ ಚೆನ್ನಾಗಿದ್ದರೆ ನಮಗೆ ಊಟ , ಕಾಫಿ , ಹಾಲು , ಮಜ್ಜಿಗೆ , ಹಣ್ಣು ಎಲ್ಲ. ವಿಜಯಾ ಶೆಟ್ಟಿ ಸಾಲೆತ್ತೂರು ಮತ್ತು ಅರವಿಂದ ಕುಡ್ಲ ಪ್ರಕೃತಿಯನ್ನು ತುಂಬ ಗಮನಿಸುತ್ತಿದ್ದಾರೆ. ಆಹಾ! ನಾನಾ ರೂಪ, ವರ್ಣ, ಗಾತ್ರ, ಆಕಾರಗಳಿರುವ ಅಷ್ಟೊಂದು ಹಕ್ಕಿಗಳನ್ನು ಅರವಿಂದ ಕುಡ್ಲ ಹಿಡಿದುಕೊಟ್ಟು ನಮ್ಮಿಂದ ರಸಾಸ್ವಾದನೆ ಮಾಡಿಸಿದ್ದಾರೆ. ನಾನು ಹಕ್ಕಿಗಳನ್ನು ನಿತ್ಯ ನೋಡುತ್ತೇನೆ. ಆದರೆ ವೀಕ್ಷಿಸಿರುವುದಿಲ್ಲ, ಗಮನಿಸಿರುವುದಿಲ್ಲ. ಅರವಿಂದರೋ ಹಕ್ಕಿಯೆಂದೊಡನೆ ಸಪ್ಪಳ ರಹಿತವಾಗಿ ಅದರ ಹತ್ತಿರ ನುಸುಳಿ ಎಲ್ಲವನ್ನೂ ನಮಗೆ ಎಸಳು ಎಸಳಾಗಿ ಕೊಡುತ್ತಿದ್ದಾರೆ.
    ವಿಜಯಾ ಬಿ. ಶೆಟ್ಟಿ ತನ್ನ ಜ್ಞಾನ ಭಂಡಾರದ ಶಟ್ಟರ್ ತೆರೆದಿರುವುದು ಖುಷಿ ನೀಡಿದೆ. ನಿಷ್ಪಾಪಿ ಸಸ್ಯಗಳ ಜ್ಞಾನ ರಸವನ್ನು ನಾವು ಆಸ್ವಾದಿಸಲು ಎಷ್ಟೊಂದು ಸುಂದರ ಅವಕಾಶ ಅಲ್ವೇ? ಕೆಸು , ಬಜೆ ಹೀಗೆ ನಾನಾ ಪೊದರು ಗಿಡಗಳನ್ನು ಬೆದರದೆ ಹಂದರ ಹಂದರವಾಗಿ ಜಂತಿಯಾಗಿ ಹೆಣೆದು ಪರಿಚಯಿಸುತ್ತಲಿದ್ದಾರೆ ವಿಜಯಕ್ಕ. ಅರಿವಿದ್ದಾಗ ಬೆದರುವ ಪರಿಯಿರದು. ಒಂದು ಉತ್ತಮ ಖಜಾನೆಗೆ ಕೈಹಾಕಿದ್ದಾರೆ. ಮುಂದೆ ಇನ್ನೂ ಉತ್ತಮೋತ್ತಮ ಸಂಗ್ರಹಗಳು ಹೊರ ಬರುವುದು ಖಂಡಿತ. 
     ಪ್ರಕೃತಿಯಲ್ಲಿ ಹೇಗೆ ಸಂಭ್ರಮಿಸಬೇಕು, ಚಿಂತಿಸದೆ ಚಿಂತನೆ ಮಾಡುವ, ಏಳು ಬೀಳುಗಳನ್ನು ಸಮನಾಗಿ ಕಾಣುವ ಮನೋಸ್ಥೈರ್ಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ ಎಂ.ಪಿ ಮಕ್ಕಳಿಗೆ ತುಂಬುತ್ತಿರುವುದು ಶ್ಲಾಘನೀಯ. ಜೀವನ ಸಂಭ್ರಮ ಅಂಕಣ ಬದುಕಿಗೆ ಹೊಸ ಆಯಾಮ ನೀಡುವ ಕಂಕಣ. ಶಿಕ್ಷಣ, ಶಿಕ್ಷಕ ಮತ್ತು ವಿದ್ಯಾರ್ಥಿ ಮಿತ್ರನಾಗಿ ಮಕ್ಕಳ ಜಗಲಿಯಲ್ಲಿ ಜ್ಞಾನೇಶರ ಜ್ಞಾನ ಎಲ್ಲರ ನಲಿವಿಗೆ ಇಂಬಾಗಿದೆ.
     ಜಗಲಿಯಲ್ಲಿ ಆಡುವ ಅಸಂಖ್ಯ ಮಕ್ಕಳನ್ನು ಹೆಸರಿಸಿದರೆ ಅವರಿಗೆ ಖಂಡಿತ ಖುಷಿ ಆಗಬಹುದು. ಅವರ ಬಗ್ಗೆ ಉದ್ದನೆ ಪಟ್ಟಿಯಿದೆ, ಪ್ರಾಥಮಿಕದಿಂದ ಪದವಿ ತನಕದ ಜಾಣ ಜಾಣೆಯರು ಚಿತ್ರ, ಕತೆ, ಕವನ, ಲೇಖನಗಳ ಮೂಲಕ ಸಮಗ್ರ ಪ್ರಕೃತಿಯನ್ನು ನಮ್ಮ ಮುಂದೆ ತೆರೆದಿಡುತ್ತಿದ್ದಾರೆ. ಅವರ ಮುಗ್ಧ ಭಾಷೆ, ಮುಖದಲ್ಲಿ ಕಾಣುವ ಪ್ರೀತಿಯ ಕಳೆ, ಚಿಮ್ಮುವ ಸಾಹಿತ್ಯ ಬಿಂಬಗಳು ನನಗಂತೂ ಅವರಂತೆ ಆಗೋಣವೇ ಎಂದನಿಸುವಂತೆ ಮಾಡಿದೆ. ಏನು ಮಾಡಲಿ? ಮುಪ್ಪಿನಿಂದ ಹೊರಬರಲು, ಮಗುವಾಗುವ ಧೈರ್ಯ ತೋರಲು ನಾವು ಆಸಕ್ತರಾಗಿರುವುದಾದರೂ ಅಶಕ್ತರಲ್ಲವೇ? ಮಕ್ಕಳ ಜಗಲಿಯಲ್ಲಿ ಕುಣಿಯುವ ಎಲ್ಲ ಮುದ್ದು ಮಕ್ಕಳಿಗೆ, ಶಹಬ್ಬಾಸ್ .....!! ಅವರೆಲ್ಲರಿಗೂ ಏರು ಬದುಕು ಒದಗಲಿ, ಅವರ ಜೀವನೋತ್ಸಾಹಕ್ಕೆ ಇನ್ನೂ ಪ್ರೋತ್ಸಾಹವಿರಲಿ. ಭಾವ, ರಸ ಮತ್ತು ತತ್ವಗಳ ಆಗರವಾಗಿ ನಿಜ ಭಾರತೀಯತೆ ಅವರೆಲ್ಲರಲ್ಲಿ ಮೈಗೂಡಲಿ ಎಂದು ಕಟ್ಟೆಯಿಂದ ಹಾರೈಸೋಣ. 
   ಪ್ರೀತಿಯ ಪುಸ್ತಕ ಅಂಕಣದಲ್ಲಿ ಪೆರಿಯೋಡಿಯ ವಾಣಿಯಕ್ಕ ನಾನಾ ಕೃತಿಗಳ ರಸವನ್ನು ಉಣಿಸುತ್ತಿದ್ದಾರೆ. ರಸಪಾಕದ ಮೂಲಕ ಜ್ಞಾನದ ನಾಕಕ್ಕೆ ಓದುಗರನ್ನು ಒಯ್ಯುತ್ತಿದ್ದಾರೆ. ರಸಾಸ್ವಾದನೆಗೆ ಸಾಹಿತ್ಯಕ್ಕಿಂತ ಮಿಗಿಲಾದ ಸಂಪನ್ಮೂಲವಿಲ್ಲ. ಓದಿಸುವ ಅವರ ಪ್ರಯತ್ನ ಪ್ರಶಂಸಾರ್ಹ.
     ನಾರಾಯಣ ರೈ ಕುಕ್ಕುವಳ್ಳಿ ಮತ್ತು ಯಾಕೂಬ್ ಎಸ್ ಕೊಯ್ಯೂರು ಇಬ್ಬರೂ ಶೈಕ್ಷಣಿಕ ಸಾಧನೆಯ ಶೀಖರವೇರಿದವರು. ನಾರಾಯಣ ರೈಗಳು ವ್ಯಂಗ್ಯಚಿತ್ರಗಳ ಮೂಲಕವೂ ಸಮಾಜದ ಕಣ್ಣುಗಳನ್ನು ತೆರೆಸುತ್ತಿದ್ದಾರೆ. ಸಮಾಜದ ಅಂಕು ಡೊಂಕುಗಳನ್ನು ನೇರ್ಪಡಿಸುವುದು ಮಹಾನ್ ಕೆಲಸ. ಅವರ ಕ್ಷೇತ್ರಾನುಭವಗಳು ಶ್ರಮ ಮತ್ತು ಭಾವನೆಗಳ ಸಂಗಮವಾಗಿ ಓದುಗರ ಮನ ಮುಟ್ಟುತ್ತಿದೆ. ಅಧ್ಯಾಪಕರಿಗೆ ಸಹಸ್ರಾರು ಮನೋ ಧರ್ಮಗಳ ಪರಿಚಯವಾಗಿರುತ್ತದೆ. ಅಧ್ಯಾಪಕರು ಒಳಿತು ಕೆಡುಕುಗಳೆರಡನ್ನೂ ಉಂಡವರು. ಅವರ ಅನುಭವ ಪಾಠವನ್ನು ಧನಾತ್ಮಕವಾಗಿ ಸ್ವೀಕರಿಸಿದರೆ ಸಮಾಜ ಧನ್ಯವಾಗುತ್ತದೆ, ಅಹಂಕಾರದಿಂದ ಹೂಂಕರಿಸಿದರೆ ಸಮಾಜವೇ ಚಿಂದಿ ಚಿತ್ರಾನ್ನವಾಗುತ್ತದೆ. ಸಮಾಜ ಚಿನ್ನವಾಗಬೇಕು. ಭಿನ್ನವಾದರೆ ಭವಿಷ್ಯಕ್ಕೆ ಕೇಡು. ಇದೇ ಈ ಶಿಕ್ಷಕಧ್ವಯರ ಆಶಯವೆಂಬುದನ್ನು ಅವರ ಲೇಖನಗಳು ಧ್ವನಿಸುತ್ತಿವೆ.
     ರಮೇಶ ನಾಯ್ಕ್ ಉಪ್ಪುಂದ ಎಲ್ಲರನ್ನೂ ಪದದಂಗಳದಲ್ಲಿ ಆಡಿಸುತ್ತಿದ್ದಾರೆ. ಕಾಗದ ಪೆನ್ನು ಹಿಡಿದು ತಲೆ ಓಡಿಸಲು ಪ್ರಯತ್ನಿಸುವವರನ್ನು ನೋಡುವಾಗ ಮೊಬೈಲು ಗೀಳಿನಿಂದ ಹೊರ ತರುವ ಸುಂದರ ಪ್ರಯತ್ನ ಪದದಂಗಳದಲ್ಲಿದೆ ಎಂದು ಆಪ್ತವಾಗುತ್ತದೆ. ಜ್ಞಾನದ ಸಾಗರದಲ್ಲಿಳಿದು ಸ್ನಾನ ಮಾಡಲು ಬಯಸುವವರಿಗೆ ಆಕರ್ಷಕ ವೇದಿಕೆಯಿದು. ಉಪ್ಪುಂದರು ಬಂಟ್ವಾಳ ತಾಲೂಕಿನಲ್ಲಿ ಮಕ್ಕಳಿಗಾಗಿ ಅದ್ಭುತವಾದ ಕೆಲಸಗಳನ್ನು ಮಾಡಿದವರು. ಅವರ ಚಿಂತನೆ ಮಕ್ಕಳನ್ನು ಇನ್ನೂ ಉನ್ನತಿಗೇರಿಸುತ್ತದೆ ಖಂಡಿತ.
       ಬಹಳಷ್ಟು ಶಿಕ್ಷಕ ಶಿಕ್ಷಕಿಯರು ಡೈರಿ ಬರೆಯುತ್ತಿದ್ದಾರೆ. ಪ್ರವಾಸ ಕಥನಗಳೂ ಬರುತ್ತಿವೆ. ಅಕ್ಕನ ಪತ್ರ ಬರೆಯುವ ಅಂಬೆಕಲ್ಲು ತೇಜಸ್ವಿಯವರು ಯಾಕೋ ಜಗಲಿಯೊಳಗೆ ಇತ್ತೀಚೆಗೆ ಕಾಣಲಿಲ್ಲ. ನನ್ನ ಗಮನ ದೋಷವೋ ಏನೋ ಅರಿಯದು. ಮಕ್ಕಳಿಂದ ಹಿಡಿದು ಅನುಭವಿಗಳ ನಡುವೆ ನುಸುಳಿ ಏನೋ ಗೀಚಲು ನನಗೂ ಅವಕಾಶವಾಗಿದೆ. ಮನಸ್ಸೂ ಇದೆ. ಕೂಡಿದಷ್ಟು ದಿನ ಜೊತೆಯಾಗಿರೋಣ. ಹೇಳುವುದು ಬಹಳಷ್ಟು ಇದೆ. ಭೇಟಿಯಾಗೋಣ. ನಮಸ್ಕಾರ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



    ನಮಸ್ಕಾರಗಳು ಸರ್.. ಈ ಬಾರಿಯ ಸಂಚಿಕೆಗಳು ಒಂದಕ್ಕಿಂತ ಒಂದು ವಿಶೇಷವಾಗಿದ್ದವು. ನಮ್ಮ ಜ್ಞಾನದ ಅರಿವನ್ನು ಇನ್ನಷ್ಟು ಹೆಚ್ಚಿಸಲು ಕಾರಣವಾದವು... ಪದದಂಗಳ ಜೋಡಿಸುವ ಆಟ ತುಂಬಾ ಚೆನ್ನಾಗಿತ್ತು. ಒಮ್ಮೊಮ್ಮೆ ಉತ್ತರ ಸಿಗದ ಪ್ರಶ್ನೆಗಳಿಗೆ ಉತ್ತರ ನೋಡಿ ಕಲಿಯುವಂತಾಯಿತು. ಇದರಿಂದ ಗೊತ್ತಿಲ್ಲದ ಪದಗಳ ಅರ್ಥ ತಿಳಿದುಕೊಂಡ ಹಾಗಾಯಿತು. ಸಮಾಜದ ದೃಷ್ಟಿ ಕಥೆಯಲ್ಲಿ ಸ್ನೇಹ ರವರು ಬರೆದ ಕಥೆ ತುಂಬಾ ಅರ್ಥಪೂರ್ಣ ವಾಗಿತ್ತು. ಯಾರೊಬ್ಬರಿಗೂ ಬೆರಳು ತೋರಿಸಿ ಮಾತಾಡುವುದು ಸರಿಯಲ್ಲ. ಅವರವರ ಪ್ರತಿಭೆ ಅವರವರ ಪ್ರಯತ್ನಕ್ಕೆ ಬಿಟ್ಟಿದ್ದು.. ಅವಿದ್ಯಾವಂತನಾಗಿದ್ದರೂ "ಶ್ರವಣ" ಲೋಕ ಜ್ಞಾನದಲ್ಲಿ ಎಲ್ಲರಿಗಿಂತಲೂ ಮೇಧಾವಿ ಎಂಬುದನ್ನು ಸಾಬೀತು ಪಡಿಸಿದನು. ಸರ್ವಜನರನ್ನು ಗೌರವಿಸುವುದು ನಮ್ಮ ಕರ್ತವ್ಯ ವಾಗಿದೆ. ಮಕ್ಕಳ ಚಿತ್ರದಲ್ಲಿ ಮಕ್ಕಳ ಚಿತ್ರಗಳು ಮುದ್ದು ಮುದ್ದಾಗಿದ್ದವು. ಆಟಿದ ಅಮವಾಸೆ ಸಂಚಿಕೆಯಲ್ಲಿ ಶಾನ್ವಿ ಯವರು ಮೆಲುಕು ಹಾಕಿದ ನೆನಪುಗಳು ಸೊಗಸಾಗಿತ್ತು. ನಮಗೂ ಅಜ್ಜಿ ಮನೆ ನೆನಪು ಮಾಡಿದ ಶಾನ್ವಿ ಅವರಿಗೆ ಧನ್ಯವಾದಗಳು. ಜೀವನ ಸಂಭ್ರಮ ದಲ್ಲಿ ಬುದ್ಧಿವಂತ ಮತ್ತು ಪ್ರಜ್ಞಾವಂತ ಎಂಬ ಲೇಖನ ವಿಶೇಷವಾಗಿತ್ತು. ಹೆಚ್ಚು ಅಂಕ ಪಡೆದವನು ಬುದ್ಧಿವಂತ ಮತ್ತು ಕಡಿಮೆ ಅಂಕ ಪಡೆದವನು ದಡ್ಡ ಎಂದು ಭಾವಿಸುವುದು ತಪ್ಪು. ಬುದ್ಧಿವಂತರು ಒಂದು ಸಮಸ್ಯೆಗೆ ಒಂದೇ ಉತ್ತರ ಹುಡುಕುತ್ತಾರೆ. ಪ್ರಜ್ಞಾವಂತರು ಒಂದು ಸಮಸ್ಯೆಗೆ ಬೇರೆ ಬೇರೆ ಉತ್ತರ ಹುಡುಕುತ್ತಾರೆ. ಆದ್ದರಿಂದ ಯಾವುದಾದರು ಉಪಾಯದಿಂದ ಪರಿಹಾರ ಕಂಡುಕೊಳ್ಳುತ್ತಾರೆ. ಉದ್ಯೋಗ ಯಾವುದಾದರೂ ಆಗಬಹುದು ನಮ್ಮ ಮಕ್ಕಳಿಗೆ ಬದುಕು ಮುಖ್ಯ. ಅದು ಸುಂದರವಾಗಿರಬೇಕು. ಎಂದು ಮಕ್ಕಳ ಬದುಕಿನ ಬಗ್ಗೆ ಲೇಖನ ಬರೆದ ಮಾನ್ಯ ಶಿಕ್ಷಣಾಧಿಕಾರಿಗಳು ಬಂಟ್ವಾಳತಾಲೂಕು ಇವರಿಗೆ ಧನ್ಯವಾದಗಳು. ನಿಷ್ಪಾಪಿ ಸಸ್ಯಗಳು ಸಂಚಿಕೆ ಯಲ್ಲಿ ವಿಜಯ. ಬಿ. ಸಾಲೆತ್ತೂರು ಅವರು ಪರಿಚಯಿಸಿದ "ಬಜೆ" ಎಂಬ ಸಸ್ಯದ ಪರಿಚಯ ತುಂಬಾ ಉಪಯುಕ್ತವಾಗಿತ್ತು. ನಾವು ಕೂಡ ಮಕ್ಕಳಿಗೆ ಬಜೆಯನ್ನು ತೊದಲುವಿಕೆ ದೋಷ ಕ್ಕೆ ನಾಲಗೆಗೆ ಹಚ್ಚುತ್ತಿದ್ದೆವು. ಆದರೆ ಬೇರೆ ಎಲ್ಲಾ ಮನೆಮದ್ದಾಗಿ ಉಪಯೋಗಿಸಬಹುದು ಎಂದು ಗೊತ್ತಾಗಿದ್ದು ನಿಮ್ಮ ಲೇಖನ ಓದಿದ ಮೇಲೆ.. ಧನ್ಯವಾದಗಳು ಶಿಕ್ಷಕಿಗೆ. 
     ಆತ್ಮವಿಶ್ವಾಸ ಎಂಬ ಅಗೋಚರ ಶಕ್ತಿ.. ಲೇಖಕರಿಗೆ ಧನ್ಯವಾದಗಳು. ಹುಟ್ಟು ದರಿದ್ರವಿರಬಹುದು ಆದರೆ ಸಾವು ಚರಿತ್ರೆ ಯಾಗಬೇಕು ಎಂದು ಮಕಳಲ್ಲಿ ಆತ್ಮ ವಿಶ್ವಾಸವನ್ನು ತುಂಬಿದ್ದೀರಿ. ನಿಜವಾಗಿಯೂ ಆತ್ಮವಿಶ್ವಾಸ ನಮ್ಮ ಮಕ್ಕಳಲ್ಲಿ ಅಪೂರ್ವ ಬದಲಾವಣೆಯನ್ನು ತರುತ್ತದೆ. ಆತ್ಮವಿಶ್ವಾಸದ ಮೂಲಕ ಪ್ರಯತ್ನಿಸಿದರೆ ಯಶಸ್ಸು ನಮ್ಮದಾಗುತ್ತದೆ. ಎಂಬುದನ್ನು ಬಹಳ ಚೆನ್ನಾಗಿ ತಿಳಿಸಿದ್ದಾರೆ. 
     ಪ್ರೀತಿಯ ಪುಸ್ತಕ ಸಂಚಿಕೆ ಪರಿಚಯಿಸಿದ ವಾಣಿ ಪೆರಿಯೋಡಿ ಯವರು ನಮ್ಮ ಪಕ್ಕದ ಊರಿನವರು. ಸ್ವತಃ ನೋಡಿಲ್ಲ ಆದರೂ ಮಕ್ಕಳ ಜಗಲಿಯಲ್ಲಿ ಪರಿಚಯವಿದೆ. ಧನ್ಯವಾದಗಳು. ಮಕ್ಕಳ ಜೊತೆಗೆ ಪೋಷಕರಿಗೂ ಭಾಗವಹಿಸಲು ಅವಕಾಶ ಕಲ್ಪಿಸಿ ಕೊಟ್ಟ ಮಕ್ಕಳ ಜಗಲಿ ಪತ್ರಿಕೆಗೆ ಹೃದಯ ಪೂರ್ವಕ ಧನ್ಯವಾದಗಳು... ನಮಗೂ ಬರೆಯುವ ಹವ್ಯಾಸ ಬೆಳೆಸಿದ ತಾರಾನಾಥ ಕೈರಂಗಳ್ ಸರ್ ನಿಮಗೂ ಧನ್ಯವಾದಗಳು. 
................................ ಮಲ್ಲಿಕಾ ಧನಂಜಯ್
ತುಂಬೆ , ರಾಮಲ್ ಕಟ್ಟೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



   ಎಲ್ಲರಿಗೂ ನಮಸ್ಕಾರಗಳು.... ದಿನದಿಂದ ದಿನಕ್ಕೆ ಹೆಮ್ಮರವಾಗಿ ಬೆಳೆಯುತ್ತಾ, ಜ್ಞಾನವೆಂಬ ಫಲವನ್ನು ನಾಡಿಗೆಲ್ಲಾ ಹಂಚುತ್ತಿರುವ "ಮಕ್ಕಳ ಜಗಲಿ" ಯು ಇನ್ನಷ್ಟು ವಿಶಾಲವಾಗಿ ಬೆಳೆಯಲಿ ಎಂದು ಜಗಲಿ ಕಟ್ಟೆಯ ಮುಖೇನ ಶುಭ ಕೋರುತ್ತಿದ್ದೇನೆ....
     ಜೀವನವೆಂಬುವುದು ದೇವರು ನಮಗಿತ್ತ ಅದ್ಭುತ ವರದಾನವಾಗಿದೆ. ನಿಷ್ಕಲ್ಮಶ ಮನಸ್ಸಿನಿಂದಲೇ ಜನ್ಮ ಪಡೆದ ಮಗುವೊಂದು ಬೆಳೆಯುತ್ತಾ - ಬೆಳೆಯುತ್ತಾ ಬೇಕು-ಬೇಕುಗಳೆಂಬ ಆಸೆ, ಆಕರ್ಷಣೆಯ ಬೆನ್ನೇರಿ, "ಜ್ಞಾನ ಭಂಡಾರ" ವೆಂಬ ಸಂಪತ್ತನ್ನು ಸಂಪಾದಿಸುವ ಬದಲು, ಭೌತಿಕ ವಸ್ತುಗಳನ್ನು ಸಂಗ್ರಹಿಸುವ ಹವಣಿಕೆಯಲ್ಲೇ ಕಾಲ ವ್ಯಯ ಮಾಡಿದರೆ, ಮಾನಸಿಕವಾಗಿ ಸಧೃಡವಾಗುವುದು ಹೇಗೆ...? 
     ಮಕ್ಕಳು ಇಂದು ಅದೇನನ್ನು ಬೇಡಿದರೂ ಒದಗಿಸಿಕೊಡಬಲ್ಲ ಸಾಮರ್ಥ್ಯ ಹೆತ್ತವರಿಗಿದೆ, ತಮ್ಮ ಅಮೂಲ್ಯವಾದ 'ಸಮಯ' ಒಂದನ್ನು ಬಿಟ್ಟು!! ಬಹುಶ: ಈ ಕಾರಣದಿಂದಲೇ ಅದೆಷ್ಟೋ ಮಕ್ಕಳಲ್ಲಿದ್ದ ಅದ್ಭುತಕಲೆಗಳು ಬೆಳಕಿಗೆ ಬರುತ್ತಿಲ್ಲ. ಪ್ರೋತ್ಸಾಹದ ಮಾತುಗಳು, ಬೆನ್ನುತಟ್ಟುವ ಕೈಗಳು ಜೊತೆಯಿದ್ದರೆ ಮಕ್ಕಳು ಖಂಡಿತವಾಗಿಯೂ ಯಾವುದಾದರೊಂದು ಕ್ಷೇತ್ರದಲ್ಲಿಯಾದರೂ ಸಾಧನೆ ಮಾಡಬಲ್ಲರು ಎಂಬುವುದಂತು ಸತ್ಯ.  ಈ ನಿಟ್ಟಿನಲ್ಲಿ ಮಕ್ಕಳ ಪ್ರತಿಭೆಗಳಿಗೆ ಬೆಳಕು ಚೆಲ್ಲುವ ಕೆಲಸವನ್ನು ಜಗಲಿಯ ವೇದಿಕೆ ಮಮತೆಯಿಂದಲೇ ಮಾಡುತ್ತಿದೆ. ಕತೆ, ಕವನ, ಚಿತ್ರಕಲೆ ಹೀಗೆ ನಾನಾ ಬಗೆಯ ರಚನೆಯ ಅವಕಾಶಗಳಿಗೆ ಅಡಿಪಾಯವಾಗಿ ಮಕ್ಕಳಿಗೆ ಪ್ರೇರಣೆ ತುಂಬುತ್ತಿದೆ. ಪೋಷಕರಾಗಿ ನಾವೂ ನಮ್ಮ ಮಕ್ಕಳಿಗೆ ಕೇವಲ ಪಠ್ಯ ಪುಸ್ತಕದ ಜ್ಞಾನವನ್ನಷ್ಟೆ ಅಲ್ಲ, ಇತರ ಕ್ರಿಯಾತ್ಮಕ ಚಟುವಟಿಕೆಗಳಲ್ಲಿಯೂ ಭಾಗವಹಿಸುವಂತೆ ಪ್ರೇರೇಪಿಸುವುದು ಅಗತ್ಯ. 
     ಜಗಲಿ ಕಟ್ಟೆಯ 6ನೇ ಸಂಚಿಕೆಯಲ್ಲಿ ಪ್ರಕಟವಾದ, ಕಲೆಗಳ ಸಂಗ್ರಹಿತ "ಗೋಡೆ ಪತ್ರಿಕೆ" ಯ ಮಾಹಿತಿ ತುಂಬಾನೇ ಗಮನಾರ್ಹವಾಗಿತ್ತು. ಪ್ರತೀ ಶಾಲೆಯಲ್ಲೂ "ಗೋಡೆ ಪತ್ರಿಕೆ" ರಾರಾಜಿಸುವಂತಾಗಲಿ... 
       ಒಳಿತು ಹಾಗು ಕೆಡುಕುಗಳು ನಮ್ಮ ಜೀವನದಲ್ಲಿ ಘಟಿಸುವ ಅಥವಾ ಘಟಿಸಬಹುದಾದ ನಿತ್ಯ ನಿಯಮಗಳಾಗಿವೆ. ಆದರೆ ಕೆಲವೊಮ್ಮೆ ನಮ್ಮಲ್ಲಿರುವ ಸಹನೆ ಮತ್ತು ಬುದ್ಧಿವಂತಿಕೆಯ ನೆರವಿನಿಂದ ಕೆಡುಕನ್ನು ನಕಾರಾತ್ಮಕವಾಗಿ ಪರಿಗಣಿಸದೆ ಸಕಾರಾತ್ಮಕವಾಗಿ ಬದಲಾಯಿಸಲು ಪ್ರಯತ್ನ ಪಟ್ಟರೆ ಬಹುಶಃ ಒಳಿತಿನ ಹಾದಿಯಲ್ಲಿ ನಾವು ಸುಗಮವಾಗಿ ನಡೆಯಬಹುದು ಎಂಬುವುದಕ್ಕೆ ಮಕ್ಕಳ ಜಗಲಿಯೆ ಸಾಕ್ಷಿ. ಯಾಕೆಂದರೆ ಕೊರೋನಾವೆಂಬ ಮಹಾಮಾರಿಯ ಅಟ್ಟಹಾಸಕ್ಕೆ ಹೆದರಿ ಮೌನವಾಗಿದ್ದ ನಾವೆಲ್ಲರೂ ಮತ್ತೆ ಶಕ್ತಿವಂತರಾದುದೇ ಒಂದು ರೀತಿಯ ವಿಸ್ಮಯ. ಆದರೆ ಅಂತಹ ಭೀಕರ ಸನ್ನಿವೇಶಗಳ ನಡುವೆಯೇ, ಮಕ್ಕಳ ಕಲೆ ಕರಗಿ ಹೋಗಬಾರದೆನ್ನುವ ಉದ್ದೇಶದಿಂದ ಆರಂಭವಾದ ಈ ಪತ್ರಿಕೆ "ಮನಸ್ಸಿದ್ದರೆಮಾರ್ಗ" ಎಂಬುವುದನ್ನು ಸಾಬೀತು ಮಾಡಿದೆ.
     ಮಕ್ಕಳ ಕಲೆಗೆ ಬೆಳಕು ಚೆಲ್ಲುವುದರೊಂದಿಗೆ , ಇಂದು ಈ ಜಗಲಿ ಅದೆಷ್ಟೋ ಉತ್ತಮೋತ್ತಮ ಲೇಖಕರನ್ನು, ಜ್ಞಾನಿಗಳನ್ನು, ಸಂಶೋಧಕರನ್ನು ಹಾಗೂ ಬೇರೆ - ಬೇರೆ ಕ್ಷೇತ್ರಗಳಲ್ಲಿ ನಿಪುಣತೆ ಹೊಂದಿರುವ ಕಲಾಕಾರರನ್ನು ಪರಿಚಯಿಸುತ್ತಿದೆ. ಅಲ್ಲದೆ ಹೊಸ -ಹೊಸತರದ ಅನುಭವಗಳ ವಿಚಾರಗಳು ನಮ್ಮ ಮೆದುಳಿಗೆ ಮೇವಾಗುತ್ತಿವೆ. ಜಗಲಿಯ ಯಾವುದೇ ಒಂದು ಲೇಖನವನ್ನು ಓದಿ ಮುಗಿಸಿದ ಬಳಿಕ ಒಂದಷ್ಟು ಮಾಹಿತಿಗಳ ಸಂಗ್ರಹ 'ನನ್ನ ಜ್ಞಾನ ಭಂಡಾರ'ಕ್ಕೆ ಸೇರಿಕೊಂಡಿತೆಂದು ಖುಷಿಪಟ್ಟರೆ, ಮತ್ತಷ್ಟೂ ಓದುವ, ಬರೆಯುವ ಉತ್ಸಾಹ ನಮ್ಮೊಳಗೆ ಮೂಡುತ್ತದೆ.
     ಸಾಧನೆ ಮಾಡಲು ಮುಖ್ಯವಾಗಿ ಬೇಕಾಗಿರುವುದು ಮನಸ್ಸೇ ಹೊರತು ವಯಸ್ಸಲ್ಲ. ಸಾಧಿಸಬೇಕೆನ್ನುವ ಹಸಿವನ್ನು ಪರಿಶ್ರಮವೆಂಬ ಅಸ್ತ್ರದಿಂದ ಸಿದ್ಧಿಸೋಣವೆಂಬ ಆಶಯದೊಂದಿಗೆ.........
........................................... ವಿದ್ಯಾ ಗಣೇಶ್
ಚಾಮೆತ್ತಮೂಲೆ ಮನೆ , ಕೊಣಾಲು ಗ್ರಾಮ 
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************




     ನಮಸ್ಕಾರಗಳು ಸರ್..... ಆತ್ಮವಿಶ್ವಾಸ ಮೂಡಿದಾಗ ಪ್ರಯತ್ನ ತನ್ನಿಂತಾನೇ ಹೊರಹೊಮ್ಮುತ್ತದೆ, ಪ್ರಯತ್ನ ಮಾಡದೆ ಯಾರು ಸಾಧಕನಾಗಲಾರ ಎಂದು ಅಪ್ರತಿಮ ಸಾಧಕಿ ಪದ್ಮಶ್ರೀ ಪುರಸ್ಕೃತೆ ಸುನೀತಾ ಕೃಷ್ಣನ್ ಅವರು ಜೀವನದಲ್ಲಿ ತೋರಿದ ಆತ್ಮವಿಶ್ವಾಸದ ಬಗ್ಗೆ ತಿಳಿಸಿಕೊಟ್ಟ ಉತ್ತಮ ಲೇಖನ ನಮಗೆಲ್ಲರಿಗೂ ಪ್ರೇರಣಾದಾಯಕವಾಗಿದೆ. ಧನ್ಯವಾದಗಳು ಯಾಕೂಬ್ ಎಸ್. ಕೊಯ್ಯುರು ಸರ್.
    ಜಗಲಿಕಟ್ಟೆ ಸಂಚಿಕೆ :8ರಲ್ಲಿ ತಿಳಿಸಿದ ಹಾಗೆ ನೀವು, ಶಿಕ್ಷಕರ ಬಳಗವೆಲ್ಲಾ ಸೇರಿ ರಚಿಸಿದ ಮಕ್ಕಳ ನಾಟಕ ತಂಡ ಹಾಗೂ ನಾಟಕ ಪ್ರದರ್ಶನ, 'ಮಂಚಿ ಮಕ್ಕಳ ಕೊಲಾಜ್ ಚಿತ್ರ ಪಯಣ' ಈ‌ ಎರಡು ಕಾರ್ಯಕ್ರಮಗಳು ಸ್ಪರ್ಧೆಯ ಭಯವಿಲ್ಲದೆ, ಖುಷಿಯಿಂದ ‌ಎಷ್ಟೊಂದು ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಕಾರಣವಾಗಿರಬಹುದು. ಎಲ್ಲಿ ಮನಸ್ಸಿನಿಂದ ಕೆಲಸ ಮಾಡುತ್ತಾರೋ ಅಲ್ಲಿ ಒಳ್ಳೆಯ ಶಿಕ್ಷಣ ಎಂಬ ಮಾತನ್ನು ನೆನಪಿಸಿಕೊಳ್ಳುವಂತೆ ಮಾಡಿತು. ನಿಮ್ಮೆಲ್ಲರ ಒಳ್ಳೆಯ ಮನಸ್ಸುಗಳಿಗೆ ‌ನನ್ನ ಹೃತ್ಪೂರ್ವಕ ನಮನಗಳು. ಧನ್ಯವಾದಗಳು ಸರ್
....................... ಶ್ರೀಮತಿ ‌ಕವಿತಾ ಶ್ರೀನಿವಾಸ್
'ಚೈತನ್ಯ' ನೆಲ್ಯಡ್ಕ, ಅಂತರ, 
ನರಿಕೊಂಬು ಗ್ರಾಮ ಮತ್ತು ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
***************************************



      ಈ ಸಲದ ಶಿಕ್ಷಕರ ಸ್ಕೂಲ್ ಡೈರಿಯಲ್ಲಿ ಪ್ರಕಟವಾದ ಲೇಖನ. ಪ್ರಸ್ತುತ ಬೇಕಾದ ಬರಹ ಇದು. ಎಲ್ಲ ಕಾಲದಲ್ಲಿಯೂ ಎಲ್ಲ ಹಂತದ ಶಿಕ್ಷಕರು ಬೇರೆ.. ಬೇರೆ ರೂಪದಲ್ಲಿ ವಿದ್ಯಾರ್ಥಿಗಳ ಐಲವ್ಯೂ ದೂರುಗಳನ್ನು ನಿಭಾಯಿಸಲೇಬೇಕಾಗುತ್ತದೆ. ಇಲ್ಲಿ ನಾರಾಯಣ ಮೇಷ್ಟ್ರು ನೋಡಿದಂತೆ ವಿಷಯವನ್ನು ತಿಳಿಯಾಗಿ ನೋಡಿದರೆ ಪ್ರಸಂಗ ಅಲ್ಲಿಗೆ ಸುಖಾಂತ್ಯವಾಗಿ ಮುಗಿದೂ ಹೋಗುತ್ತದೆ. ಹಾಗಲ್ಲದೆ ಆ ಐಲವ್ಯೂವನ್ನು ಶಿಕ್ಷಕರು ಘನಗಂಭೀರ ವಿಚಾರಣೆಗೆ ಎತ್ತಿಕೊಂಡರೋ ಅವು ಬೇರೆಯೇ ಪರಿಣಾಮ, ಬೇರೆಯೇ ತಿರುವುಗಳು. ನಾವು ಇಂತಹ ವಿಷಯಗಳನ್ನು ಹೀಗೆ ಸಹಜವಾಗಿ ಸ್ವೀಕರಿಸಿದರಷ್ಟೇ.. ಮಕ್ಕಳಲ್ಲಿ ಸಹಜ ಬೆರೆಯುವಿಕೆ ತರಲು ಸಾಧ್ಯ ಎನ್ನುವುದನ್ನು ಸರಳವಾಗಿ ಸೂಕ್ತವಾಗಿ ನಿರೂಪಿಸಿದ ಈ ಬರಹಕ್ಕೆ ವಂದನೆಗಳು. 
   ಆತ್ಮವಿಶ್ವಾಸದ ಬಗ್ಗೆ ಬಹಳ ಪ್ರೇರಣಾ ದಾಯಿಯಾದ ಬರಹ. ನಾನು ಸುನೀತಾ ಕೃಷ್ಣನ್ ಬಗ್ಗೆ ಇದೇ ಮೊದಲ ಬಾರಿ ಓದಿದೆ. ಇವರ ಬಗ್ಗೆ ಇನ್ನಷ್ಟು ತಿಳಿಯಲು ಇಲ್ಲಿಯ ಸಣ್ಣ ಪರಿಚಯ ಸ್ಫೂರ್ತಿಯಾಗಿದೆ. ಆಸಕ್ತಿಕರವಾದ ಸೊಗಸಾದ ಬರಹಕ್ಕೆ ಯಾಕೂಬ್ ಸರ್ ರಿಗೆ ವಂದನೆಗಳು.  
....................... ವಿದ್ಯಾ ಕಾರ್ಕಳ, ಸಹಶಿಕ್ಷಕಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
***************************************


    ಬಜೆ ಗಿಡದ ಪರಿಚಯ ಚೆನ್ನಾಗಿ ಮೂಡಿ ಬಂದಿದೆ. ನಮ್ಮ ಸುತ್ತಲಿನ ಉಪಯುಕ್ತ ಗಿಡಗಳ ಪರಿಚಯ ಮಕ್ಕಳಿಗೆ ಅತಿ ಅವಶ್ಯಕ..
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
***************************************



     ಮಕ್ಕಳ ಜಗಲಿ ಬಗ್ಗೆ ನನ್ನ ಅನಿಸಿಕೆ:
ಮಕ್ಕಳ ಜಗಲಿಯೊಂದು ನಮ್ಮ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು ಇರುವ ಒಂದು ಅವಕಾಶ. ಚಿತ್ರಕಲೆ ಮತ್ತು ಕಥೆ ಬರೆಯುವುದು ನನ್ನ ಪ್ರತಿಭೆ. ನಾನು ಅದನ್ನು ಮಕ್ಕಳ ಜಗಲಿ ಗೆ ಮೊಬೈಲ್ ಮೂಲಕ ಕಳುಹಿಸುತ್ತೇನೆ. ಇದರಿಂದ ನನಗೆ ಚಿತ್ರಕಲೆ ಮತ್ತು ಕಥೆಗಳನ್ನು ಬರೆಯುವುದರಲ್ಲಿ ಇನ್ನೂ ಆಸಕ್ತಿ ಹೆಚ್ಚಾಗಿದೆ. ಅದು ನಮ್ಮ ಕಲ್ಪನಾ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ನಾವು ಇನ್ನಷ್ಟು ಉತ್ತಮವಾಗಿ ಚಿತ್ರವನ್ನು ಅಥವಾ ಕಥೆಗಳನ್ನು ರಚಿಸಬಹುದು. ಇದರಲ್ಲಿ ನಮ್ಮ ಅನೇಕ ಪ್ರತಿಭೆಗಳನ್ನು ಬೆಳೆಸಬಹುದು. ಧನ್ಯವಾದಗಳು
....................................................... ಗಣ್ಯ 
8ನೇ ತರಗತಿ
ಸರಕಾರಿ ಪ್ರೌಢಶಾಲೆ ನಯನಾಡು
ಪಿಲಾತಬೆಟ್ಟು, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
***************************************
                         

     ನಾನು ಭಾರತಿ ಹೆಗಡೆ. ನನಗೆ ಮಕ್ಕಳ ಜಗಲಿಯಲ್ಲಿ ಬರುವ ಎಲ್ಲಾ ಬಗೆಯ ಲೇಖನಗಳು ಮಕ್ಕಳ ಚಿತ್ರಗಳು ತುಂಬಾ ಇಷ್ಟ. ಇದರಲ್ಲಿ ಬರುವ ನಿಷ್ಪಾಪಿ ಸಸ್ಯಗಳು ತುಂಬಾ ಇಷ್ಟ. ನಮ್ಮ ಕಡೆ ಕೂಡ ಆ ತರದ ತುಂಬಾ ಸಸ್ಯಗಳು ಇವೆ. ಅದರಲ್ಲಿ ಹೇಳುವ ಒಂದೊಂದು ಸಸ್ಯವು ತುಂಬಾ ಉಪಯೋಗಕಾರಿ ಮತ್ತು ಅಳಿವಿನ ಅಂಚಲ್ಲಿ ಇರುವಂಥವು. ಈಗಿನ ಜನರಿಗೆ ಎಷ್ಟೋ ಗಿಡಗಳ ಬಗ್ಗೆ ತಿಳಿದಿರುವುದಿಲ್ಲ. ಈ ಲೇಖನ ತುಂಬಾ ಉಪಯೋಗವಾಗಿದೆ. ಮಕ್ಕಳ ಜೊತೆಯಲ್ಲಿ ಬರುವ ಎಲ್ಲಾ ಲೇಖನಗಳು ನನಗೆ ತುಂಬಾ ಇಷ್ಟ. ಪ್ರತಿ ಸಲಿ ಮಕ್ಕಳ ಜಗಲಿಯಲ್ಲಿ ಬರುವ ಎಲ್ಲಾ ಲೇಖನವನ್ನು ಓದುತ್ತೇನೆ. ಮಕ್ಕಳ ಚಿತ್ರವನ್ನು ನೋಡುತ್ತೇನೆ. ಮಕ್ಕಳ ಜೊತೆ ತುಂಬಾ ಉಪಯುಕ್ತ ಮಾಹಿತಿಯನ್ನು ಕೊಡುತ್ತೆ ತುಂಬಾ ಧನ್ಯವಾದಗಳು....
.............................. ಭಾರತಿ ರಂಗನಾಥ ಹೆಗಡೆ 
ಹಳ್ಳಿ ಬೈಲ್ 
ತಾಲೂಕು ಸಿದ್ದಾಪುರ , ಜಿಲ್ಲೆ ಉತ್ತರ ಕನ್ನಡ
***************************************
 

    ಜಗಲಿ ಕಟ್ಟೆಗೆ ನಮಸ್ತೇ. ನಾನು ದೀಕ್ಷಾ ಕುಲಾಲ್. ನಿಷ್ಪಾಪಿ ಸಸ್ಯಗಳು, ಲೇಖಕರು : ವಿಜಯ ಬಿ. ಶೆಟ್ಟಿ ಸಾಲೆತ್ತೂರು ಇವರ ಸಂಚಿಕೆ. ಇವರು ಬರೆದಿರುವ ಬಜೆ ಗಿಡದ ಪರಿಚಯ ನನಗೆ ತುಂಬಾ ಇಷ್ಟವಾಯಿತು. ಅವರ ಸಂಚಿಕೆ ಎಲ್ಲವೂ ಇಷ್ಟವಾಗಿದೆ. ಕೆಲವೊಂದು ಸಸ್ಯಗಳು -ಗಿಡಗಳು ನನ್ನ ಮನೆಯ ಸುತ್ತ ಮುತ್ತ -ಪರಿಸರದಲ್ಲಿ ಹಾಗೂ ನನ್ನ ಅಜ್ಜಿ ಮನೆಯ ಪರಿಸರದಲ್ಲಿ ನಾನು ಕಂಡಿದ್ದೇನೆ, ತುಂಬಾ ಖುಷಿ ಆಗುತ್ತೆ. ನನಗೆ ಗಿಡಗಳ, ಸಸ್ಯಗಳ ಹಾಗೂ ಅದರಲ್ಲಿ ಸಿಗುವಂತಹ ಪ್ರಯೋಜನಗಳ ಬಗ್ಗೆ ಮೇಡಮ್ ಬಹಳ ಚೆನ್ನಾಗಿ ಎಲ್ಲ ಸಂಚಿಕೆಯಲ್ಲಿ ತಿಳಿಸುತ್ತಾರೆ. ಹಾಗೂ ನಾನು ಇದುವರೆಗೆ ಕಾಣದ ಗಿಡ ಬಜೆ ಗಿಡ. ಬಜೆಯನ್ನು ನೋಡಿದ್ದೇನೆ. ನನಗೆ ನನ್ನ ಅಮ್ಮ ತೋರಿಸಿದ್ದಾರೆ. ಆದರೆ ಗಿಡ ಮಾತ್ರ ಇಷ್ಟರ ತನಕ ನೋಡಲಿಲ್ಲ. ನಾನು ಮಕ್ಕಳ ಜಗಲಿಯಲ್ಲಿ ನಿಷ್ಪಾಪಿ ಸಸ್ಯಗಳ ಪೋಟೋ ಮೂಲಕ ನೋಡಿದೆ. ತುಂಬಾ ಖುಷಿ ಆಯ್ತು, ಅಚ್ಚರಿ ಕೂಡ ಆಯಿತು. ಏಕೆಂದರೆ ಗಿಡ ಬಹಳ ಹಸಿರಾಗಿ ಇತ್ತು ಹಾಗೂ ಮಣ್ಣಿನ ಅಡಿಯಲ್ಲಿ ಆಗುವಂತಹ ಗಿಡ ಎಂದು ಈ ಲೇಖನದಲ್ಲಿ ನಾನು ತಿಳಿದುಕೊಂಡೆನು. ಹೀಗೆಯೇ ಇನ್ನೂ ಮುಂದೆ ಮಕ್ಕಳ ಜಗಲಿಯಲ್ಲಿ ಈ ರೀತಿ ಹೊಸ ಪರಿಚಯದ ಗಿಡಗಳು, ಸಸ್ಯಗಳು ಮೂಡಿ ಬರಲಿ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ನನ್ನ ಅನಿಸಿಕೆ ಧನ್ಯವಾದಗಳು.
........................................... ದೀಕ್ಷಾ ಕುಲಾಲ್ 
7ನೇ ತರಗತಿ 
ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ 
ಶಾಲೆ ಕಲ್ಲಡ್ಕ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
***************************************
 
ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡ ಮಕ್ಕಳ ಜಗಲಿ ಕುಟುಂಬದ ರಮೇಶ ಎಂ. ಬಾಯಾರು , ಮಲ್ಲಿಕಾ ಧನಂಜಯ್ , ವಿದ್ಯಾ ಗಣೇಶ್ ಚಾಮೆತ್ತಮೂಲೆ ಮನೆ , ಶ್ರೀಮತಿ ‌ಕವಿತಾ ಶ್ರೀನಿವಾಸ್ , ಸೃಜನಶೀಲ ಶಿಕ್ಷಕಿ ವಿದ್ಯಾ ಕಾರ್ಕಳ , ಶ್ರೀರಾಮ ಮೂರ್ತಿ ನಿವೃತ್ತ ವಿಜ್ಞಾನ ಶಿಕ್ಷಕರು , ಭಾರತಿ ರಂಗನಾಥ ಹೆಗಡೆ ಹಳ್ಳಿ ಬೈಲ್ , ಗಣ್ಯ , ದೀಕ್ಷಾ ಕುಲಾಲ್ , ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************




Ads on article

Advertise in articles 1

advertising articles 2

Advertise under the article