-->
ಜೀವನ ಸಂಭ್ರಮ : ಸಂಚಿಕೆ - 93

ಜೀವನ ಸಂಭ್ರಮ : ಸಂಚಿಕೆ - 93

ಜೀವನ ಸಂಭ್ರಮ : ಸಂಚಿಕೆ - 93
ಲೇಖಕರು : ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
          
     ಮಕ್ಕಳೇ ಈ ದಿನದ ಲೇಖನದಲ್ಲಿ ಜೀವನದ ದ್ಯೇಯಗಳ ಬಗ್ಗೆ ತಿಳಿದುಕೊಳ್ಳೋಣ. ಜೀವನದ ಹಲವು ಧ್ಯೇಯಗಳಲ್ಲಿ ಪ್ರಮುಖವಾಗಿ ನಾಲ್ಕು ದ್ಯೇಯಗಳು ಮುಖ್ಯವಾದವು.
▪️ ಸುಂದರವಾಗಿ ಬದುಕುವುದು.
▪️ ಸಂತೋಷವಾಗಿ ಬದುಕುವುದು.
▪️ ಶ್ರೀಮಂತವಾಗಿ ಬದುಕುವುದು.
▪️ ಶಾಂತವಾಗಿ ಬದುಕುವುದು.

     ಬದುಕು ದಿವ್ಯ, ಭವ್ಯ ಹಾಗೂ ಸುಂದರ ಆಗಿರಬೇಕಾದರೆ ನಾವು ಸುಂದರವಾಗಿ ಬದುಕಬೇಕು. ಅಂದರೆ ನಾವು ಮಾಡುವ ಯಾವುದೇ ಕೆಲಸವಾಗಲಿ ಅದು ಚಿಕ್ಕದೊ, ದೊಡ್ಡದೊ ಕನಿಷ್ಠವೋ, ಶ್ರೇಷ್ಠವೋ ಅದು ಮುಖ್ಯವಲ್ಲ. ನಾವು ಆ ಕೆಲಸವನ್ನು ಹೇಗೆ ಮಾಡುತ್ತೇವೆ ಎಂಬುದು ಮುಖ್ಯ. ಆ ಕೆಲಸದಿಂದಾಗುವ ಸಂತೋಷ ಮುಖ್ಯ. ಅದನ್ನು ಸುಂದರವಾಗಿ ಮಾಡುವುದು, ಸ್ವಚ್ಛವಾಗಿ ಮಾಡುವುದು ಮತ್ತು ಅಚ್ಚುಕಟ್ಟಾಗಿ ಮಾಡುವುದು. ಮಕ್ಕಳೇ ನಾವು ಶಾಲೆಗೆ ಹೋಗುತ್ತೇವೆ. ಎರಡೇ ಜೊತೆ ಬಟ್ಟೆ ಇದೆ. ಅದನ್ನೇ ಸ್ವಚ್ಛ ಮಾಡಿ, ಇಸ್ತ್ರಿ ಮಾಡಿ, ಸುಂದರವಾಗಿ ಹಾಕಿ ಕೊಂಡು ಹೋಗುವುದು. ಪುಸ್ತಕಗಳನ್ನು ಚೊಕ್ಕಟವಾಗಿ, ಶಿಸ್ತಾಗಿ ಜೋಡಿಸಿ ಇಡುವುದು. ನೋಟ್ಸ್ ಅನ್ನು ಸುಂದರವಾಗಿ ಬರೆಯುವುದು. ಚಿತ್ರಗಳನ್ನು ಬೇರೆ ಬೇರೆ ಬಣ್ಣ ಬಳಸಿ ಸುಂದರವಾಗಿ, ಸ್ವಚ್ಛವಾಗಿ ಬರೆಯುವುದು. ಶಾಲೆಯಿಂದ ಬಂದ ತಕ್ಷಣ ನಮ್ಮ ಸಾಮಗ್ರಿಗಳಾದ ಪುಸ್ತಕ, ಬಟ್ಟೆ, ಶೂಗಳನ್ನು ಎಲ್ಲಿಡಬೇಕು ಅಲ್ಲಿ ಸುಂದರವಾಗಿ ಇಡಬೇಕು. ಇಲ್ಲದರ ಕಡೆ ಗಮನ ಹರಿಸಬಾರದು. ಇರುವುದನ್ನು ಸುಂದರವಾಗಿ ಬಳಸುವುದು. ನಮ್ಮದು ಗುಂಗರು ಕೂದಲು ಅಥವಾ ಸಾದಾ ಕೂದಲು ಅಥವಾ ತೆಳು ಕೂದಲು ಅಥವಾ ದಟ್ಟವಾಗಿರಬಹುದು. ಯಾವುದು ಇದೆಯೋ ಅದನ್ನು ಸುಂದರವಾಗಿ ಮಾಡುವುದು. ಅಡುಗೆ ಮಾಡುವಾಗ ಒಂದು ವಸ್ತು ಇಲ್ಲ ಎಂದರೆ ಅದರ ಕಡೆ ಗಮನ ನೀಡದೆ, ಇರುವುದರಿಂದ ಸುಂದರವಾಗಿ ರುಚಿಕಟ್ಟಾದ ಅಡುಗೆ ಮಾಡುವುದು. ನಮ್ಮಲ್ಲಿ ಏನಿದೆಯೋ, ನಮಗೆ ಏನು ದಕ್ಕಿದಿಯೋ, ಅದನ್ನು ಸುಂದರವಾಗಿ ಬಳಸುವುದು. ಕೈ ಸುಂದರ ಮಾಡುವುದು ಎಂದರೆ ಚಿನ್ನದ ಉಂಗುರ ಹಾಕಿ ಅಲಂಕಾರ ಮಾಡುವುದಲ್ಲ. ನಮ್ಮ ಹತ್ತು ಬೆರಳು ಬಳಸಿ ಸುಂದರ ಕೆಲಸ ಮಾಡುವುದು. ಒಂದು ಉಂಗುರ ಮತ್ತೊಂದು ಉಂಗುರವನ್ನು ಸೃಷ್ಟಿಸಲಾರದು. ಆದರೆ ಬೆರಳು ಅಂತ ಎಷ್ಟು ಉಂಗುರಗಳನ್ನು ಬೇಕಾದರೂ ಸೃಷ್ಟಿಸಬಹುದು ಮತ್ತು ಕೈಗಳನ್ನು ಬಳಸಿ ದುಡಿದರೆ ಎಷ್ಟು ಬೇಕಾದರೂ ಉಂಗುರ ಸಂಪಾದಿಸಬಹುದು. ಅಂದರೆ ಸಂಪತ್ತು ನಮ್ಮ ದೇಹ, ದೇಹದ ಅವಯವಗಳು, ಇಂದ್ರಿಯಗಳು, ಬುದ್ಧಿ ಮನಸ್ಸು, ಭಾವ ಮತ್ತು ಜ್ಞಾನ ಇವುಗಳನ್ನು ಬಳಸಿ ಏನು ಬೇಕಾದರೂ ಮಾಡಬಹುದು. ಹಾಗಾಗಿ ಇವುಗಳನ್ನ ಸುಂದರವಾಗಿ ಬಳಸಬೇಕು.

     ನಮ್ಮ ನಿಜವಾದ ಸಂಪತ್ತು ಸಂತೋಷ. ಸಂತೋಷವಾಗಿ ಬದುಕಬೇಕಾದರೆ, ನಾವು ಏನನ್ನು ನೋಡಿದರೆ ಕಣ್ಣು ಅರಳುತ್ತದೆಯೋ? ಏನನ್ನು ಕೇಳಿದರೆ ಕಿವಿ ನಿಮಿರುತ್ತದೆಯೋ? ಏನು ಮಾಡಿದರೆ ಹೃದಯ ಅರಳುತ್ತದೆಯೋ? ಅದನ್ನು ಮಾಡುವುದು. ಇದನ್ನು ಮಾಡಿದರೆ ಸಂತೋಷ ಎಂದು ನಮ್ಮ ಮನಸ್ಸು ಹೇಳುತ್ತದೆ. ಇಲ್ಲವೇ ಬಲ್ಲವರ ಮನಸ್ಸು ಹೇಳುತ್ತದೆ. ಅದನ್ನು ಸದಾ ಮನಸ್ಸಿನಲ್ಲಿ ಇಟ್ಟುಕೊಂಡು ನಡೆಯಬೇಕು. ಸಂತೋಷ ಕೊಡುವ ಮನಸ್ಸನ್ನು ಕೆರಳಿಸದ ವಸ್ತುಗಳನ್ನು ನೋಡಬೇಕು. ಸಂತೋಷ ಕೊಡುವ ಮನಸ್ಸನ್ನು, ಕೆರಳಿಸದ, ಮುದ ಕೊಡುವ ಮಧುರ ಶಬ್ದ ಕೇಳಬೇಕು. ಪ್ರತಿಕ್ಷಣ ಪ್ರತಿ ಕೆಲಸದಲ್ಲಿ ಆನಂದ ಆಗುವ ಹಾಗೆ ಕೆಲಸ ಮಾಡಬೇಕು. ಪ್ರತಿ ಕ್ಷಣವನ್ನ ಅನುಭವಿಸಬೇಕು. ಹಾಗೆ ಪ್ರತಿ ಕ್ಷಣವನ್ನು ಪ್ರತಿ ಕೆಲಸದಲ್ಲಿ ಕಾಣಬೇಕಾದರೆ, ಅನುಭವಿಸಬೇಕಾದರೆ ನಿಧಾನ ಮತ್ತು ಸಾವಧಾನ ಅಗತ್ಯ. ಪ್ರತಿ ಕೆಲಸವನ್ನು ನಿಧಾನವಾಗಿ, ಸಾವಧಾನವಾಗಿ (ಎಚ್ಚರಿಕೆಯಿಂದ), ಶಾಂತಚಿತ್ತದಿಂದ, ಅನ್ಯ ಆಶ್ರಯ ಬಯಸದೆ, ಮಾಡುತ್ತಿದ್ದರೆ, ನಮಗೆ ಸಂತೋಷದ ಅನುಭವ ನೀಡುತ್ತದೆ. ಅಂದರೆ ಸಂತೋಷ ಆಗುವಂತೆ ಸುಂದರವಾಗಿ, ಸ್ವಚ್ಛವಾಗಿ ಮಾಡುವುದು. ಮನೆಯಲ್ಲಿ ಕಸ ಇದ್ದರೆ ಯಾರಿಗೆ ಸಂತೋಷ?. ಸ್ವಚ್ಛವಾಗಿದ್ದರೆ ಪ್ರತಿಯೊಬ್ಬರಿಗೂ ಸಂತೋಷ. ಇರುವ ವಸ್ತುವನ್ನು ಅಚ್ಚುಕಟ್ಟಾಗಿ, ಸುಂದರವಾಗಿ ಜೋಡಿಸಿದರೆ ಯಾರಿಗೆ ಸಂತೋಷವಾಗುವುದಿಲ್ಲ?. ಸಂತೋಷಪಡಬೇಕಾದರೆ ಗಳಿಸುವುದಲ್ಲ, ಗಳಿಸಿದ್ದನ್ನು ಸುಂದರವಾಗಿ ಬಳಸುವುದು. ಸಂತೋಷ ಆಗುವ ಹಾಗೆ ಬಳಸುವುದು. ಬಳಸುವುದರಿಂದ ನಮಗೆ ಸಂತೋಷದ ಅನುಭವವಾಗುತ್ತದೆ. ಬಳಸುವುದು ಮುಖ್ಯವೇ ವಿನಹ ಗಳಿಸುವುದಲ್ಲ. ಅಕ್ಕಿಯನ್ನು ಟನ್ ಗಟ್ಟಲೆ ಸಂಗ್ರಹಿಸಿದರೆ ಏನು ಪ್ರಯೋಜನ?. ಆ ಅಕ್ಕಿಯನ್ನು ಬಳಸಿ ರುಚಿರುಚಿಯಾದ ಆಹಾರ ತಯಾರಿಸಿ ತಿಂದರೆ ಸಂತೋಷ ಅಲ್ಲವೇ.
         ಒಂದು ಮರ. ಅದರ ಕೆಳಗೆ ನವಿಲು ಕುಣಿಯುತ್ತಿತ್ತು. ಆ ಮರದ ಒಂದು ಕೊಂಬೆಯ ಮೇಲೆ ಗಿಳಿ ಸುಂದರವಾಗಿ ಮಾತನಾಡುತ್ತಿತ್ತು. ಆದರೆ ಇನ್ನೊಂದು ಕೊಂಬೆಯಲ್ಲಿ ಕೋಗಿಲೆ ಹಾಡುತ್ತಿತ್ತು. ಅದರ ಮತ್ತೊಂದು ಕೊಂಬೆಯಲ್ಲಿ ಕಾಗೆ ಕೇಳಿ ಸಂತೋಷ ಪಡುತ್ತಿತ್ತು. ಅಲ್ಲಿಗೆ ಒಬ್ಬ ವ್ಯಕ್ತಿ ಬಂದು ಕಾಗೆಗೆ ಕೇಳಿದ "ನಿನಗೆ ಕುಣಿಯಲು ಬರುವುದಿಲ್ಲ, ಹಾಡಲು ಬರುವುದಿಲ್ಲ, ಮಾತನಾಡಲು ಬರುವುದಿಲ್ಲ, ಆದರೂ ಸಂತೋಷವಾಗಿರುವೆಯಲ್ಲ ಹೇಗೆ...? ಆಗ ಕಾಗೆ ಹೇಳಿತು. "ನವಿಲು ನನಗಾಗಿ ಕುಣಿಯುತ್ತದೆ. ಗಿಳಿ ನನಗಾಗಿ ಮಾತನಾಡುತ್ತದೆ. ಕೋಗಿಲೆ ನನಗಾಗಿ ಹಾಡುತ್ತದೆ. ನನಗೆ ಕುಣಿಯಲು, ಮಾತನಾಡಲು, ಹಾಡಲು ಬರೆದಿದ್ದರೇನು?. ನೋಡಿ, ಕೇಳಿ, ಸಂತೋಷ ಪಡುತ್ತೇನೆ." ಎಂದಿತು. ಈ ಜಗತ್ತೇ ನಮಗಾಗಿ ಇರುವಾಗ ನಾವು ನೋಡಿ, ಕೇಳಿ ಸಂತೋಷಪಡಬೇಕು.

     ಬದುಕು ಶ್ರೀಮಂತವಾಗಬೇಕಾದರೆ ದೇಹ ಮತ್ತು ಮನಸ್ಸು ಶ್ರೀಮಂತವಾಗಬೇಕು. ದೇಹ ಶ್ರೀಮಂತ ಎಂದರೆ ಬಲಿಷ್ಠವಾಗಬೇಕು. ಅದಕ್ಕಾಗಿ ದೇಹದ ಪ್ರತಿ ಅಂಗಕ್ಕೆ ಕೆಲಸ ನೀಡಬೇಕು. ಪ್ರತಿ ಅಂಗಕ್ಕೆ ಚೆನ್ನಾಗಿ ಕೆಲಸ ನೀಡಬೇಕು ಆಗ ದೇಹ ಬಲಿಷ್ಠವಾಗುತ್ತದೆ. ನಮ್ಮ ಸುಂದರ ಬದುಕಿಗೆ ವಸ್ತುಗಳು ಅಗತ್ಯ. ಅವುಗಳನ್ನು ಸಂಗ್ರಹಿಸಬೇಕು. ಎಲ್ಲಿ ಸಂಗ್ರಹಿಸಬೇಕು? ಅದು ಬಹಳ ಮುಖ್ಯ. ಮನೆಯಲ್ಲಿ ಸಂಗ್ರಹಿಸುವುದಲ್ಲ. ಮನಸ್ಸಿನಲ್ಲಿ ಸಂಗ್ರಹಿಸಬೇಕು. ವಸ್ತುಗಳ ಜ್ಞಾನ, ವಿಶೇಷ ಗುಣಲಕ್ಷಣಗಳನ್ನು, ಸೌಂದರ್ಯ, ಮಾಧುರ್ಯಗಳನ್ನು, ಮನಸ್ಸಿನಲ್ಲಿ ಸಂಗ್ರಹಿಸಬೇಕು. ಆಗ ನಮ್ಮ ಮಾತಿನಲ್ಲಿ ಮಧುರತೆ ಇರುತ್ತದೆ. ಕೆಲಸದಲ್ಲಿ ಸೌಂದರ್ಯ ಇರುತ್ತದೆ. ನೋಡಿದ ವಸ್ತುಗಳಲ್ಲಿ ಸೌಂದರ್ಯ ಮಾಧುರ್ಯ ಮಾತ್ರ ಗುರುತಿಸುತ್ತದೆ. ಕೆಟ್ಟದರಲ್ಲಿ ಒಳ್ಳೆಯದನ್ನು ಗುರುತಿಸುತ್ತದೆ. ನಮಗೆ ವಯಸ್ಸಾದಂತೆ ಕಣ್ಣು, ಕಿವಿ ಸೇರಿದಂತೆ ಬಹುತೇಕ ಅಂಗಗಳು ದುರ್ಬಲವಾಗುತ್ತದೆ. ಅಂತಹ ಸಂದರ್ಭದಲ್ಲಿ ಕಣ್ಣು ಕಾಣದಿದ್ದರೂ ಸಹ, ಕಿವಿ ಕೇಳದಿದ್ದರೂ ಸಹ, ಮನಸ್ಸಿನ ಸೌಂದರ್ಯ, ಮಾಧುರ್ಯ ಕಾಣಿಸುತ್ತದೆ. ಈ ರೀತಿ ಬದುಕು ಶ್ರೀಮಂತ ಬದುಕು. ಚಿನ್ನ, ಬೆಳ್ಳಿ, ರತ್ನ, ಹಣ ಸಂಗ್ರಹಿಸುವುದಲ್ಲ‌. ಸ್ವರ್ಗ ನರಕ ಮಾಡುವುದು, ನಮ್ಮ ಮನಸೇ ಹೊರತು ವಸ್ತುಗಳಲ್ಲ...!!

    ಶಾಂತವಾಗಿ ಬದುಕುವುದೇ ಶ್ರೇಷ್ಠ ಜೀವನ. ಪರಮ ಶಾಂತಿಗೆ ಕೈವಲ್ಯ ಅಥವಾ ಮುಕ್ತಿ ಎನ್ನುವರು. ಪತಂಜಲಿ ಮಹರ್ಷಿ ಹೇಳಿದ್ದು ಚಿತ್ತ ವೃತ್ತಿ ನಿರೋಧವೇ ಯೋಗ. ಶಾಂತಿ ಅನುಭವಕ್ಕೆ ಬರಬೇಕಾದರೆ, ಮನಸ್ಸು ಸ್ವಚ್ಛವಾಗಿರಬೇಕು. ಅದರಲ್ಲಿ ರಾಗ ದ್ವೇಷ ಯಾವುದು ಇರಬಾರದು. ಉದಾಹರಣೆಗೆ ನಿದ್ರೆ ಮಾಡುವುದು ಶಾಂತಿಗೆ ಉದಾಹರಣೆ. ಮನಸ್ಸಿನಲ್ಲಿ ಯಾವುದೇ ಅತಿಯಾದ ಪ್ರೇಮ ಅಥವಾ ದ್ವೇಷ ಇದ್ದರೆ ನಿದ್ರೆ ಬರುವುದಿಲ್ಲ. ನಿದ್ರೆ ಬರಬೇಕಾದರೆ ಮನಸ್ಸು ಖಾಲಿಯಾಗಿ ಸ್ವಚ್ಛವಾಗಿರಬೇಕು. ಆಗ ನಿದ್ರೆ ಬರುತ್ತದೆ. ನಿದ್ರೆಯಲ್ಲಿ ನಮ್ಮ ದೇಹ, ಮನಸ್ಸು, ಬುದ್ಧಿ, ಅಂತಸ್ತು, ಬಟ್ಟೆ, ಹಣ, ಒಡವೆ, ಮನೆ, ರಾಗ, ದ್ವೇಷ, ಕಾಮ ಮತ್ತು ಕ್ರೋಧ ಯಾವುದು ನಮ್ಮ ಅರವಿಗೆ ಬರುವುದಿಲ್ಲ. ನಮಗೆ ನಿದ್ರೆಯಲ್ಲಿ ಅದು ಗೊತ್ತಾಗೋದಿಲ್ಲ. ಆ ಸ್ಥಿತಿ ನಾವು ಎಚ್ಚರವಾಗಿರುವಾಗ ಆ ಶಾಂತಿಯ ಅನುಭವ ಆಗಬೇಕಾದರೆ, ಮನಸ್ಸು ಸ್ವಚ್ಛವಾಗಿ ಖಾಲಿಯಾಗಿರಬೇಕು. ಆಗ ನಿದ್ರೆಯಲ್ಲಾದ ಶಾಂತಿಯ ಅನುಭವವಾಗುತ್ತದೆ. ಹೀಗೆ ಬದುಕಬೇಕು ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************Ads on article

Advertise in articles 1

advertising articles 2

Advertise under the article