ಇತಿಹಾಸ ಅರಿಯೋಣ… ಪ್ರಾಚ್ಯ ಪ್ರಜ್ಞೆ ಬೆಳೆಸೋಣ.. : ಸಂಚಿಕೆ - 01
Sunday, July 9, 2023
Edit
ಇತಿಹಾಸ ಅರಿಯೋಣ…
ಪ್ರಾಚ್ಯ ಪ್ರಜ್ಞೆ ಬೆಳೆಸೋಣ..
ಸಂಚಿಕೆ - 01
ಲೇಖಕರು : ಮಹೇಶ್ ಕುಮಾರ್. ವಿ. ಕರ್ಕೇರ
ಸಮಾಜವಿಜ್ಞಾನ ಅಧ್ಯಾಪಕರು
ಸರಕಾರಿ ಪದವಿಪೂರ್ವ ಕಾಲೇಜು
ಪ್ರೌಢಶಾಲಾ ವಿಭಾಗ ಸಿದ್ದಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : 9480763133
ಪ್ರಿಯ ವಿದ್ಯಾರ್ಥಿಗಳೇ…. ಭಾರತ ಕೇವಲ ಭೂಮಿಯ ಒಂದು ತುಣುಕಲ್ಲ. ಅದೊಂದು ಭವ್ಯ ಸಂಸ್ಕೃತಿ, ಪರಂಪರೆಯ ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಪುಣ್ಯ ಭೂಮಿ. ನಮ್ಮ ನೆಲದ, ನಮ್ಮ ಹಿರಿಯರ ಜ್ಞಾನ, ವಿಜ್ಞಾನ, ಕಲೆ ವಾಸ್ತುಶಿಲ್ಪ ಗಳ ಅದ್ಭುತ ಇತಿಹಾಸ ವನ್ನು ನಾವು ತಿಳಿಯಬೇಕು. ವಿವೇಕಾನಂದರ ವಾಣಿಯಂತೆ, "ಇತಿಹಾಸ ತಿಳಿಯದವ ಇತಿಹಾಸ ಸೃಷ್ಟಿಸಲಾರ.." ಇತಿಹಾಸ ಅರಿಯದವನಿಗೆ ಭವಿಷ್ಯವಿಲ್ಲ.
ನೀವೆಲ್ಲಾ 'ಬೃಹದೀಶ್ವರ ದೇವಾಲಯ' ದ ಹೆಸರು ಕೇಳಿದ್ದೀರಾ..? ವಿಶ್ವ ಪಾರಂಪರಿಕ ತಾಣಗಳಲ್ಲೊಂದಾಗಿರುವ, 'ಗ್ರೇಟ್ ಚೋಳ ಲಿವಿಂಗ್ ಟೆಂಪಲ್ಸ್' ಎಂದೇ ಬಣ್ಣಿಸಲ್ಪಟ್ಟಿರುವ ತಂಜಾವೂರಿನ ಬೃಹದೀಶ್ವರ ದೇವಾಲಯ ನಮ್ಮ ಹಿರಿಯರ ವಾಸ್ತುಶಿಲ್ಪದ ಕಲಾ ನೈಪುಣ್ಯಕ್ಕೆ, ತಂತ್ರಜ್ಞಾನದ ತಿಳಿವಿಗೆ ಸಾಕ್ಷಿ!
"ಚೋಳ ಸಾಮ್ರಾಜ್ಯ.."! ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಹೆಸರದು…! ಸುಮಾರು 1500ವರ್ಷಗಳ ಆಳ್ವಿಕೆಯೊಂದಿಗೆ ಪ್ರಪಂಚದಲ್ಲಿ ದೀರ್ಘ ಕಾಲ ರಾಜ್ಯವಾಳಿದ ವಂಶಗಳಲ್ಲಿ ಒಂದಾಗಿರುವುದು ನಮ್ಮ ಹೆಮ್ಮೆ..! ಒಂದನೇ ರಾಜರಾಜ ಮತ್ತು ರಾಜೇಂದ್ರ ಚೋಳ ಬಲಿಷ್ಠ ನೌಕಾಪಡೆ ಕಟ್ಟಿ ಭಾರತದಾಚೆಯ ಶ್ರೀಲಂಕಾ, ಇಂಡೋನೇಷ್ಯಾ ದವರೆಗೂ ಸಾಮ್ರಾಜ್ಯ ವಿಸ್ತರಿಸಿದ ರಣ ಸಾಹಸ ಮರೆಯೋದುಂಟೇ..?!
ಚೋಳರ ಪ್ರಸಿದ್ಧ ಅರಸ ಒಂದನೇ ರಾಜರಾಜ (ಸಾ.ಶ.985-1014) ತನ್ನ ಸಾಮ್ರಾಜ್ಯದಲ್ಲಿ ಬೃಹತ್ ಈಶ್ವರ ದೇವಾಲಯದ ಕನಸು ಕಂಡ. ದ್ರಾವಿಡ ಶೈಲಿಯ ಈ ದೇಗುಲದ ವಾಸ್ತುಶಿಲ್ಪಿ 'ಕುಂಜರ ಮಲ್ಲನ್ ರಾಜ ರಾಜ ಪೆರುಂತಚನ್ '. 5 ವರ್ಷಗಳಲ್ಲಿ (ಸಾ.ಶ.1004-1009) ನಿರ್ಮಾಣ ಗೊಂಡ ಈ ದೇಗುಲ ಸಂಪೂರ್ಣ ಗ್ರಾನೈಟ್ ಶಿಲೆಯಿಂದ ನಿರ್ಮಾಣ ಗೊಂಡಿರುವ ಪ್ರಪಂಚದ ಮೊದಲ ದೇವಾಲಯ ವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಗುಲದ ನಿರ್ಮಾಣಕ್ಕೆ ಬಳಸಲಾಗಿರುವ ಗ್ರಾನೈಟ್ ನ ಪ್ರಮಾಣ ಎಷ್ಟು ಗೊತ್ತೇ…? ಸುಮಾರು 1,30,000 ಟನ್…!!. ಇದಕ್ಕೂ ಮಿಗಿಲಾದ ಅಚ್ಚರಿ ಎಂದರೆ ದೇಗುಲದ ಸುತ್ತಮುತ್ತ 100ಮೈಲಿ ವ್ಯಾಪ್ತಿಯಲ್ಲಿ ಎಲ್ಲೂ ಗ್ರಾನೈಟ್ ಬೆಟ್ಠಗಳೇ ಇಲ್ಲ…!!
ದೇಗುಲದ ನಿರ್ಮಾಣಕ್ಕೆ ಯಾವುದೇ ಗಾರೆಯನ್ನು ಬಳಸದೆ ಇಂಟರ್ಲಾಕ್ ರೀತಿಯಲ್ಲಿ ಗ್ರಾನೈಟ್ ಶಿಲೆಯ ಬಳಕೆ ನೋಡುಗರಲ್ಲಿ ಬೆರಗು ಮೂಡಿಸುತ್ತದೆ. ದೇಗುಲದ ಗೋಪುರದ ಎತ್ತರ ಸುಮಾರು 216 ಅಡಿ.
ಪ್ರಿಯ ವಿದ್ಯಾರ್ಥಿಗಳೇ… ನಿಮ್ಮನ್ನು ಬೆಕ್ಕಸ ಬೆರಗಾಗಿಸುವ ಇನ್ನೊಂದು ವಿಚಾರ ಗೊತ್ತೇ….?! ಈ ಗೋಪುರ ದ ಮೇಲಿರುವ ಏಕಶಿಲಾ ಕಲಶ (ಕುಂಭ)ದ ತೂಕ 80ಟನ್..!! ಬರೋಬ್ಬರಿ 80,000 ಕೆ.ಜಿ…!!!.
ಯಾಂತ್ರಿಕ ತಂತ್ರಜ್ಞಾನ ಅಭಿವೃದ್ಧಿ ಆಗದ ಸಾವಿರ ವರ್ಷಗಳ ಹಿಂದೆ ಇಷ್ಟು ಭಾರದ ಶಿಲಾ ಕಲಶವನ್ನು 216 ಅಡಿ ಎತ್ತರದ ಗೋಪುರದ ಮೇಲೆ ಇಟ್ಟಿದ್ದಾದರೂ ಹೇಗೆ...? ಪ್ರಶ್ನೆ ನಿಮ್ಮನ್ನು ಕಾಡಿರಬೇಕಲ್ಲವೇ? ಸುಮಾರು 6.5ಕಿ.ಮೀ. ದೂರದವರೆಗೆ ಇಳಿಜಾರು (ramp) ನಿರ್ಮಿಸಿ ಆನೆ, ಕುದುರೆ, ಕಾರ್ಮಿಕರಿಂದ ಎಳೆದು ತರಲಾಗಿತ್ತು…!
ಎಲ್ಲಕ್ಕಿಂತ ಮಿಗಿಲಾಗಿ ಈ ದೇಗುಲಕ್ಕೆ ಪಂಚಾಂಗದ ಅಡಿಪಾಯವೇ ಇಲ್ಲವೆಂದರೆ ನಂಬುತ್ತೀರಾ..?!!
ನೆಲದಿಂದ ನೇರವಾಗಿ ಕಟ್ಟಡವನ್ನು ನಿರ್ಮಿಸಲಾಗಿದ್ದರೂ, ನಿರ್ಮಾಣ ದ 1000 ವರ್ಷಗಳ ನಂತರವೂ ಕಿಂಚಿತ್ತೂ ಅಲುಗಾಡಿಲ್ಲ ಬೃಹದೀಶ್ವರ ದೇವಾಲಯ…!! ದೇಗುಲದ ಗರ್ಭಗುಡಿಯಂತೂ ಯಾವುದೇ ಕಂಬಗಳಿಲ್ಲದ ಅದ್ಭುತ ರಚನೆ..!!
ಆಶ್ಚರ್ಯಕರ ವಾಸ್ತವ ಸಂಗತಿ ಇದು.
ಜಗತ್ತಿನ ಎತ್ತರದ ಗೋಪುರಗಳಲ್ಲೊಂದಾದ ಇಟಲಿಯ ಪೀಸಾ ಗೋಪುರ ಕಾಲನ ಹೊಡೆತಕ್ಕೆ ಸಿಲುಕಿ ವಾಲಿದರೂ… ಸಾವಿರ ವರ್ಷಗಳಲ್ಲಿ ಹಲವು ಭೂಕಂಪಗಳನ್ನು ಎದುರಿಸಿದರೂ ಬೃಹದೀಶ್ವರ ದೇಗುಲದ ಗೋಪುರ ಇಂದಿಗೂ ಅಚಲವಾಗಿ ನಿಂತಿದೆ.
ಭಾರತೀಯ ವಾಸ್ತು ಶಿಲ್ಪಕಾರರು ಕೇವಲ ಶಿಲ್ಪಿಗಳಷ್ಟೇ ಆಗಿರದೆ ಭೌತಶಾಸ್ತ್ರದ ಪ್ರಕಾಂಡ ಪಂಡಿತರೂ ಆಗಿದ್ದರು ಎನ್ನುವುದಕ್ಕೆ ಜೀವಂತ ಉದಾಹರಣೆ ತಂಜಾವೂರಿನ ಬೃಹದೀಶ್ವರ ದೇವಾಲಯ.
ಇವೆಲ್ಲವನ್ನು ತಿಳಿದುಕೊಂಡಾಗ ನಮ್ಮ ಹಿರಿಯರ ಜ್ಞಾನ, ತಂತ್ರಜ್ಞಾನ ದ ಅಗಾಧ ಪಾಂಡಿತ್ಯದ ಬಗ್ಗೆ ಅಭಿಮಾನ ಉಕ್ಕುತ್ತದೆ, ಹೆಮ್ಮೆಯೆನಿಸುತ್ತದೆ ಅಲ್ಲವೇ..?
ಪ್ರಿಯ ವಿದ್ಯಾರ್ಥಿಗಳೇ.. ಭರತಭೂಮಿಯ ಉದ್ದಗಲಕ್ಕೂ ಇಂತಹ ಹಲವಾರು ಐತಿಹಾಸಿಕ ಅದ್ಬುತಗಳು ಇಂದಿಗೂ ನಮ್ಮ ಹಿರಿಯರ, ಗತಕಾಲದ ವೈಭವವನ್ನು ಸಾರುತ್ತಿವೆ. ಐತಿಹಾಸಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತಾ, ಗತಕಾಲದ ಇತಿಹಾಸವನ್ನು ತಿಳಿಯುತ್ತಾ, ಭವಿಷ್ಯದ ಬದುಕನ್ನು ಕಟ್ಟಿಕೊಂಡರೆ ಎಷ್ಟು ಸೊಗಸಲ್ಲವೇ..? ಇಂತಹ ರೋಚಕ ಐತಿಹಾಸಿಕ ಸಂಗತಿಗಳೊಂದಿಗೆ ಮತ್ತೊಮ್ಮೆ ಭೇಟಿಯಾಗೋಣ. ಸಮಾಜ ವಿಜ್ಞಾನ ದ 'ಸವಿ'ಯನ್ನು ಸವಿಯೋಣ…
ಸರ್ವೇ ಜನಾ: ಸುಖಿನೋ ಭವಂತು.
ಚಿತ್ರ ಕೃಪೆ: YouTube
ಸಮಾಜವಿಜ್ಞಾನ ಅಧ್ಯಾಪಕರು
ಸರಕಾರಿ ಪದವಿಪೂರ್ವ ಕಾಲೇಜು
ಪ್ರೌಢಶಾಲಾ ವಿಭಾಗ ಸಿದ್ದಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : 9480763133
*******************************************