-->
ಜಗಲಿ ಕಟ್ಟೆ : ಸಂಚಿಕೆ - 7

ಜಗಲಿ ಕಟ್ಟೆ : ಸಂಚಿಕೆ - 7

ಜಗಲಿ ಕಟ್ಟೆ : ಸಂಚಿಕೆ - 7
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


      ಸುಮಾರು ಹದಿನಾರು ವರ್ಷಗಳ ಹಿಂದಿನ ನೆನಪು. ನಾನಿನ್ನೂ ಸರ್ಕಾರಿ ಕೆಲಸಕ್ಕೆ ಸೇರಿರಲಿಲ್ಲ. ಚಿತ್ರಕಲಾ ಪದವಿಯನ್ನು ಪೂರೈಸಿದ ಆರಂಭದ ದಿನಗಳು. ಸ್ವತಂತ್ರ ಕಲಾವಿದನಾಗಿ ದುಡಿಯುತ್ತಿದ್ದೆ. ಒಂದು ಸಲ ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆ ನನ್ನನ್ನೂ ಚಿಂತಿಸುವಂತೆ ಮಾಡಿತ್ತು....!! "ಸರಕಾರಿ ಶಾಲೆಗಳಿಗೆ ಹಳದಿ ಬಣ್ಣವನ್ನು ಮಾತ್ರ ಯಾಕೆ ಬಳಿಯುತ್ತಾರೆ....??" ಹೌದಲ್ಲ... ಸರಕಾರಿ ಶಾಲೆ ಯಾಕೆ ಆಕರ್ಷಕ ಬಣ್ಣದಿಂದ ಕಂಗೊಳಿಸಬಾರದು.... ಈ ರೀತಿಯ ಅವಕಾಶವಾದರೂ ಹೇಗೆ ಸಿಗುತ್ತದೆ..? ಕಾಯುತ್ತಾ ಇದ್ದೆ. 
    2007ರಲ್ಲಿ ಇಂತಹ ಒಂದು ಅವಕಾಶ ಲಭ್ಯವಾಯಿತು. ನನ್ನ ಆತ್ಮೀಯರು ಶ್ರೀದೇವಿ ಭಟ್ ಇವರು ಪುತ್ತೂರು ತಾಲೂಕಿನ ಗ್ರಾಮೀಣ ಭಾಗದ ಕಿರಿಯ ಪ್ರಾಥಮಿಕ ಶಾಲೆಯೊಂದರ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದರು. ನನಗೆ ಫೋನಾಯಿಸಿ ಶಾಲೆಯನ್ನು ಸುಂದರಗೊಳಿಸುವ ಕುರಿತಾಗಿ ಚರ್ಚಿಸಿದರು. ಕೇವಲ 15 ದಿನಗಳಲ್ಲಿ ಶಾಲೆಯ ಚಿತ್ರಣವೇ ಬದಲಾಯಿತು. ಹಳದಿ ಬಣ್ಣದ ಬದಲಿಗೆ ಮಕ್ಕಳು ಇಷ್ಟಪಡುವ ಮನೆಯ ವಾತಾವರಣದ ಆಕರ್ಷಕ ಬಣ್ಣವನ್ನು ನೀಡಲಾಯಿತು. ವರ್ಲಿ ಶೈಲಿಯ ರೇಖಾಚಿತ್ರಗಳನ್ನು ಬಳಸಿ ಶಾಲೆಯನ್ನು ಸೌಂದರೀಕರಣ ಗೊಳಿಸಲಾಯಿತು. ಸರಕಾರಿ ವ್ಯವಸ್ಥೆಯೊಳಗಿನ ಚೌಕಟ್ಟನ್ನು ಅರಿಯದ ನಮಗೆ ಶಾಲೆಯನ್ನು ಜನಸ್ನೇಹಿಯಾಗಿಸುವುದು ಮಾತ್ರ ನಮ್ಮ ಗುರಿಯಾಗಿತ್ತು.
        ಹತ್ತೇ ದಿನದಲ್ಲಿ ಮತ್ತೆ ನನಗೆ ಕರೆ ಬಂದಿತ್ತು... ವಿಷಯ ತಿಳಿದು ತುಂಬಾ ಆತಂಕಗೊಂಡೆ... ಶಾಲೆಯ ಸಂದರ್ಶನಕ್ಕಾಗಿ ಬಂದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯೋರ್ವರು...... ಶಾಲೆಗೆ ಹಳದಿ ಬಣ್ಣವನ್ನು ನೀಡದೆ ಬೇರೆ ಬಣ್ಣವನ್ನು ನೀಡಿದ್ದಕ್ಕೆ ಆಕ್ಷೇಪವನ್ನೆತ್ತಿದ್ದರು. ಮೇಲಾಧಿಕಾರಿಗಳಿಗೆ ತಿಳಿಸುವುದಾಗಿಯೂ ತನ್ನ ಅಧಿಕಾರವನ್ನು ಉಪಯೋಗಿಸಿದರು. ಆತಂಕದಿಂದಲೇ ಮೇಲಾಧಿಕಾರಿಯನ್ನು ಎದುರುಗೊಂಡ ಮುಖ್ಯ ಶಿಕ್ಷಕರಿಗೆ ಆಶ್ಚರ್ಯವೇ ಕಾದಿತ್ತು....!!
      ತುಂಬಿದ ಕೊಡ ತುಳುಕುವುದಿಲ್ಲ ಅನ್ನುವ ಮಾತಿನಂತೆ... ಸಂದರ್ಶನ ಗೈದ ಮೇಲಾಧಿಕಾರಿ ಶಾಲೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದೇ ತಡ... ತಮ್ಮ ವಿಶೇಷ ಕಾಳಜಿಯ ಪ್ರಯತ್ನಕ್ಕೆ ಇಡೀ ಶಾಲೆಯ ತಂಡವೇ ಹರ್ಷಗೊಂಡಿತ್ತು. ಮತ್ತೆಲ್ಲ ನಡೆದಿದ್ದೇ ಇತಿಹಾಸ. ವಿಷಯ ತಿಳಿದ ಅಧಿಕಾರಿಗಳೆಲ್ಲಾ ಶಾಲೆಯನ್ನು ನೋಡಲೆಂದೇ ಕುಗ್ರಾಮಕ್ಕೆ ಭೇಟಿ ನೀಡತೊಡಗಿದರು...!!
       ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಬದಲಾವಣೆಗೆ ಕಾರಣರಾಗುವವರು...!! ಗೋಪಾಡ್ಕರ್ ಪ್ರತಿಸಲ ಹೇಳುವ ಮಾತು ಇದೇ... "ಕಾರಣರಾಗಬೇಕು".
        ಮಕ್ಕಳ ಜಗಲಿಯಲ್ಲಿ ನೀವು ಪ್ರತಿಯೊಬ್ಬರೂ ಕಾರಣರಾಗುತ್ತಿದ್ದೀರಿ. ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಬೇರೆ ಬೇರೆ ಕಾರಣಗಳಿಗಾಗಿ ಮಕ್ಕಳ ಜಗಲಿಯಲ್ಲಿ ತೊಡಗಿಸಿಕೊಳ್ಳುತ್ತಾ ಮುಂದುವರಿಯುತ್ತಿರುವುದು ಆಶಾದಾಯಕವೆಂದೇ ಹೇಳಬಹುದು. 
      ಚಿತ್ರ , ಕಥೆ, ಕವನ, ಲೇಖನಗಳನ್ನು ಕಳಿಸುವ ವಿದ್ಯಾರ್ಥಿಗಳ ಸಂಖ್ಯೆ ಕಂಡಾಗ ನನಗೆ ತುಂಬಾ ಸಂತೋಷವಾಗುತ್ತಿದೆ. ಪೋಷಕರ ಮತ್ತು ಶಿಕ್ಷಕರ ಈ ರೀತಿಯ ಪ್ರೋತ್ಸಾಹ ಸದಾಕಾಲ ಇರಲಿ ಎಂಬುದಾಗಿ ಬಯಸುವೆ. 
      ಶಿಕ್ಷಕರ ಸ್ಕೂಲ್ ಡೈರಿ ಅಂಕಣಕ್ಕೆ ಅನೇಕ ಶಿಕ್ಷಕರು ಬರೆಯುತ್ತಿರುವುದು ನಿಮಗೆಲ್ಲ ಗೊತ್ತಿದೆ. ಸೊಗಸಾದ ಸ್ಪೂರ್ತಿದಾಯಕವಾಗಿರುವ ಅನುಭವಗಳು ನಮಗೆಲ್ಲ ಅನುಭವಗಳಾಗುತ್ತಿವೆ. ಇನ್ನಷ್ಟು ಎಲೆ ಮರೆಯಲ್ಲಿರುವ ಶಿಕ್ಷಕರು ನಿಮ್ಮ ಅನುಭವಗಳನ್ನು ಬರೆದು ಇನ್ನಷ್ಟು ಹೊಸತನಗಳಿಗೆ ಕಾರಣರಾಗಬೇಕೆಂಬುದಾಗಿ ಮಕ್ಕಳ ಜಗಲಿಯ ಬಯಕೆ.
      ಪದದಂಗಳ ಈ ವಾರ 74ನೇ ಸಂಚಿಕೆ ಪೂರೈಸಿದೆ. ರಮೇಶ್ ನಾಯ್ಕ ಉಪ್ಪುಂದ ರಚಿಸುತ್ತಿರುವ ಈ ಸಂಚಿಕೆಯನ್ನು ಪ್ರತಿಯೊಬ್ಬರು ಬಳೆಸಿಕೊಳ್ಳುತ್ತಾ ಪದ ಸಂಪತ್ತನ್ನು ಪಡೆದುಕೊಳ್ಳುತ್ತಿದ್ದೀರಿ ಎಂಬುದಾಗಿ ಭಾವಿಸುವೆ.
      ಕಳೆದ ಸಂಚಿಕೆಯಲ್ಲಿ ಪ್ರಸ್ತಾಪಿಸಿದ ಹಾಗೆ.... ನಿಮ್ಮ ಶಾಲೆಗಳಲ್ಲೂ ಗೋಡೆ ಪತ್ರಿಕೆಯನ್ನು ನಡೆಸುತ್ತಾ ಇದ್ದಿರಬಹುದು. ಇಲ್ಲವಾದಲ್ಲಿ ಮಕ್ಕಳ ಜಗಲಿಯ ಮೂಲಕ ಗೋಡೆ ಪತ್ರಿಕೆಯನ್ನು ಪ್ರತಿ ಶಾಲೆಯಲ್ಲಿ ನಡೆಸುವ ಯೋಜನೆಗೆ ನೀವೂ ಜೊತೆಯಾಗಿ. ಪ್ರತಿ ತರಗತಿಗೊಂದರಂತೆ ಅಥವಾ ಇಡೀ ಶಾಲೆಗೊಂದರಂತೆ ಗೋಡೆ ಪತ್ರಿಕೆಯನ್ನು ಆರಂಭ ಮಾಡಬಹುದು. ಮಕ್ಕಳ ಸ್ವಂತ ರಚನೆಯ ಬರಹಗಳನ್ನು ಪ್ರಕಟಿಸುವುದಕ್ಕೆ ಪ್ರೇರಣೆ ನೀಡಿ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಕಾರ್ಯ ನಾವು ಜೊತೆಯಾಗಿ ಮಾಡೋಣ.   
    ಗೋಡೆ ಪತ್ರಿಕೆಯಲ್ಲಿ ಪ್ರಕಟವಾದ ಉತ್ತಮ ಬರಹಗಳನ್ನು , ಚಿತ್ರಗಳನ್ನು, ಮಕ್ಕಳ ಜಗಲಿಗೂ ಕಳಿಸಿ. ನಿಮ್ಮ ಶಾಲೆಯಲ್ಲಿ ಗೋಡೆ ಪತ್ರಿಕೆಯನ್ನು ಆರಂಭಿಸಿದ ಸುದ್ದಿಯನ್ನು ಮಕ್ಕಳ ಜಗಲಿಗೆ ಫೋಟೋ ಸಮೇತ ಬರೆದು ಕಳಿಸಿ. 

     ಕಳೆದ ಸಂಚಿಕೆಯ ಜಗಲಿಕಟ್ಟೆ - 6 ಅಂಕಣದಲ್ಲಿ ವಿದ್ಯಾಗಣೇಶ್ , ಚಾಮೆತ್ತಮೂಲೆ ಮನೆ ಮತ್ತು ಶ್ರೀಮತಿ ‌ಕವಿತಾ ಶ್ರೀನಿವಾಸ್ ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ.... 

    ನಮಸ್ಕಾರಗಳು ಸರ್... ನಾನು ಶಾನ್ವಿ. ಇಲ್ಲಿ ನಾನು ಮಕ್ಕಳ ಜಗಲಿಯ ಬಗ್ಗೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ. ನಾನು ಮಕ್ಕಳ ಜಗಲಿಗೆ ಇತ್ತೀಚಿಗೆ ಸೇರ್ಪಡೆಯಾಗಿದ್ದೇನೆ. ಆದರೂ ಕೂಡ ಅದು ನನ್ನ ಮೇಲೆ ಅಗಾಧ ಪರಿಣಾಮ ಬೀರಿವೆ. ಮಕ್ಕಳ ಜಗಲಿಯಲ್ಲಿ ಬರುವ‌ ಕತೆಗಳು, ಅಕ್ಕನ ಪತ್ರ, ಶಿಕ್ಷಣದ ಮುಖ್ಯಾಂಶ, ಇತ್ಯಾದಿಗಳು ನಮಗೆ ಪ್ರೇರಣೆಯಾಗಿದೆ. ಹಾಗು ನಾವು ಏನಾದರು ಚಿತ್ರ ಬಿಡಿಸಿದಾಗ, ಕ್ರಾಫ್ಟ್ ಮಾಡಿದಾಗ ಅದನ್ನು ನೋಡಿ ಪ್ರೋತ್ಸಾಹಿಸುತ್ತಾರೆ. ಆದ್ದರಿಂದ ನಮಗೆ ಇನ್ನಷ್ಟು ಇಂತಹ ಚಟುವಟಿಕೆಗಳಲ್ಲಿ ತೊಡಗಬೇಕು ಎನ್ನುವ ಉತ್ಸಾಹ ಮೂಡುತ್ತಿದೆ. ಶಾಲಾ ಶಿಕ್ಷಣ ಬಿಟ್ಟು ಬೇರೆ ಪ್ರಪಂಚವೇ ಇಲ್ಲಾ ಎನ್ನುವ ಪೋಷಕರಿಗೆ ಮತ್ತು ಮಕ್ಕಳಿಗೆ ಹಾಗು ತನ್ನ ಒಳಗೆ ಕಲೆಯಿದ್ದರೂ ಅದನ್ನು ತೋರಿಸಿಕೊಳ್ಳಲಾಗದೆ, ಹಾಗು ಅವರನ್ನು ಯಾರು ಗುರುತಿಸಿಕೊಳ್ಳುತ್ತಿಲ್ಲ , ಯಾರೂ ಪ್ರೋತ್ಸಾಹಿಸುತ್ತಿಲ್ಲ ಎನ್ನುವ ಮಕ್ಕಳ ಭಾವನೆಗಳನ್ನು ಮಕ್ಕಳ ಜಗಲಿಯವರು ಹೋಗಲಾಡಿಸುತ್ತಾರೆ. ಮಕ್ಕಳ ಜಗಲಿಯಲ್ಲಿ ಯಾರನ್ನು ಯಾವುದರಲ್ಲೂ ಬೇದ ಬಾವ ಮಾಡದೆ ಎಲ್ಲದರಲ್ಲೂ ಹುರಿದುಂಬಿಸುವ ಮಾತು ಕೇಳಿ ಬರುತ್ತದೆ.
           ಮಕ್ಕಳ ಜಗಲಿ ತುಂಬಾ ಮಕ್ಕಳಿಗೆ ಸ್ಪೂರ್ತಿಯಾಗಿದೆ ಹಾಗು ದಾರಿ ದೀಪವಾಗಿದೆ ಎಂದರೆ ತಪ್ಪೇನು ಇಲ್ಲ. ಮಕ್ಕಳ ಜಗಲಿ ಹೀಗೆ ಮುನ್ನಡೆಯಲಿ ಎನ್ನುವುದು ನನ್ನ ಆಶಯ. ಹೀಗೆ ನನ್ನ ಮಾತನ್ನು ಕೊನೆಗೊಳಿಸುತ್ತಿದ್ದೇನೆ. ನನಗೆ ಮಕ್ಕಳ ಜಗಲಿಯ ಮೇಲೆ ಆಸಕ್ತಿ ಮೂಡಲು ಹಾಗು ನನಗೆ ಸ್ಪೂರ್ತಿ ನಮ್ಮ ಶಿಶಿರ (cousin brother)
.................................................... ಶಾನ್ವಿ ವಿ  
ಪ್ರಥಮ ಪಿಯುಸಿ 
ಸೈಂಟ್ ಅಲೋಸಿಯಸ್ ಪದವಿಪೂರ್ವ ಕಾಲೇಜು 
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
*******************************************

 

    ನಮ್ಮ ಮನೆಯ ಕಟ್ಟೆಯಲ್ಲಿರುವ ನನ್ನ ಎಲ್ಲಾ ಬಂಧುಗಳಿಗೆ ನಮಸ್ಕಾರ. ಕೋವಿಡ್ -19 ಈ ಸಂದರ್ಭದಲ್ಲಿ ನಮ್ಮ ಮಕ್ಕಳೆಲ್ಲ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದ ಸಂದರ್ಭದಲ್ಲಿ ಅವರಲ್ಲಿರುವ ಪ್ರತಿಭೆಯ ಅನಾವರಣಕ್ಕಾಗಿ ವೇದಿಕೆ ಕಲ್ಪಿಸಿ ಕೊಡುವ ಉದ್ದೇಶದಿಂದ ಪ್ರಾರಂಭವಾದ ಮಕ್ಕಳ ಜಗಲಿ ಇಂದು ಎಲ್ಲರ ಮನೆಯ ಜಗಲಿಕಟ್ಟೆಯಾಗಿದೆ. ತಾರಾನಾಥ ಕೈರಂಗಳ ರವರಂತಹ ಕ್ರಿಯಾಶೀಲ ಶಿಕ್ಷಕರು, ಸಮಾನ ಮನಸ್ಕರ ಕೂಡುವಿಕೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯ, ರಾಷ್ಟ್ರಮಟ್ಟದ ಪ್ರತಿಭೆಗಳಿಗೆ ವೇದಿಕೆಯಾಗಿರುವುದು ಸಂತಸದಾಯಕ ವಿಷಯವಾಗಿದೆ. ಮಕ್ಕಳು ಪಠ್ಯ ವಿಷಯದ ಜೊತೆಯಲ್ಲಿ ಪಠ್ಯೇತರ ವಿಷಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಅವರಲ್ಲಿ ಅಡಕವಾಗಿರುವ ಪ್ರತಿಭೆಗಳಿಗೆ ಜಗಲಿಯ ಮೂಲಕ ವೇದಿಕೆ ಕಲ್ಪಿಸುವ ಮಹತ್ತರವಾದ ಉದ್ದೇಶದಿಂದ ಪ್ರಾರಂಭವಾಗಿ ಇಂದು ಅದೆಷ್ಟೋ ವಿದ್ಯಾರ್ಥಿಗಳು, ಅಧಿಕಾರಿಗಳು, ಶಿಕ್ಷಕರು ಹಿರಿಯರು ಈ ಜಗಲಿಯಲ್ಲಿದ್ದುಕೊಂಡು ಭವಿಷ್ಯತ್ತಿನ ಸುಸಂಸ್ಕೃತ ಪ್ರಜೆಗಳ ನಿರ್ಮಾಣದಲ್ಲಿ ಜೊತೆಯಾಗಿರುವ ಮೂಲಕ ಮಕ್ಕಳಿಗೆಲ್ಲರಿಗೂ ಪ್ರೇರಕ ಶಕ್ತಿಗಳಾಗಿ ಮೂಡಿ ಬರುತ್ತಿದೆ. ವಿದ್ಯಾರ್ಥಿಗಳೆಲ್ಲರೂ ಇದರ ಪ್ರಯೋಜನ ಪಡೆಯುವಂತಾಗಲಿ. ಪ್ರತಿ ಶಾಲೆಯ ವಿದ್ಯಾರ್ಥಿಗಳು ನಮ್ಮ ಜಗಲಿಕಟ್ಟೆಗೆ ಬರುವಂತಾಗಲಿ. ಎಲ್ಲರ ಭವಿಷ್ಯ ಉಜ್ವಲವಾಗಲಿ. ಮಕ್ಕಳ ಜಗಲಿ ಇನ್ನಷ್ಟು ಹೊಸ ಪ್ರತಿಭೆಗಳಿಗೆ ಬುನಾದಿಯಾಗಲಿ ಎನ್ನುವ ಆಶಯದೊಂದಿಗೆ
...................................... ಶ್ರೀಮತಿ ಸುರೇಖಾ 
ದೈಹಿಕ ಶಿಕ್ಷಣ ಶಿಕ್ಷಕರು 
ಸರಕಾರಿ ಪ್ರೌಢಶಾಲೆ, ನ್ಯೂ ಪಡ್ಪು, ಹರೇಕಳ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
*******************************************


       ನಮಸ್ಕಾರಗಳು ಸರ್..... ಜಗಲಿಯಲ್ಲಿ ಪ್ರಕಟವಾಗುವ ಎಲ್ಲಾ ಲೇಖನಗಳು, ಮಕ್ಕಳ ಕವನಗಳು, ಚಿತ್ರಕತೆ ಓದಲು ತುಂಬಾ ಸಂತೋಷವಾಗುತ್ತದೆ. ಮಕ್ಕಳ ಬರವಣಿಗೆಯನ್ನು ಓದುವಾಗ ಎಷ್ಟು ಚೆನ್ನಾಗಿ ಕತೆ, ಕವನ ಬರೆಯುತ್ತಿದ್ದಾರೆ ಚಿತ್ರ ಬಿಡಿಸುತ್ತಾರೆ ಜಗಲಿಯಲ್ಲಿ ಎಷ್ಟು ಸಂಭ್ರಮಿಸುತ್ತಿದ್ದಾರೆ ಅನಿಸುತ್ತದೆ. 
     ನಡ ಸರಕಾರಿ‌ ಪ್ರೌಢಶಾಲೆಯ ಗಣಿತ ಶಿಕ್ಷಕರಾದ ಯಾಕೂಬ್ ಎಸ್. ಕೊಯ್ಯೂರು ಸರ್ ಬರೆದಿರುವ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೊಂದು ಹೃದಯದ ಮಾತು ಹಾಗೂ ಇಂದಿನ ನಿರ್ಧಾರ, ನಾಳೆಯ ಬೆಳಕಾಗಲಿ ಲೇಖನ‌ ತುಂಬಾ ಇಷ್ಟವಾಯ್ತು. ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಕ್ಕಳಿಗೆ ತಂದೆ, ತಾಯಿ, ಗುರುಗಳ ನಿರೀಕ್ಷೆಗೆ ತಕ್ಕ ಸಾಧನೆ ಮಾಡಿ ಯಶಸ್ವಿಯಾಗಿ ಎಂದು ಎಷ್ಟು ಸೊಗಸಾಗಿ ತಿಳಿ ಹೇಳಿದ್ದಾರೆ. ಇನ್ನು ಓ ಮುದ್ದು ಮನಸೇ... ಸಂಚಿಕೆ ಯಲ್ಲಿ ಆಪ್ತ ಸಮಾಲೋಚಕರಾದ ಗುರುರಾಜ ಇಟಗಿಯವರು ಬರೆದಿರುವ ಮಳೆ ದಿನಗಳು ಲೇಖನ ನಮ್ಮ ಬಾಲ್ಯದ ಮಳೆಯ ದಿನಗಳನ್ನು ನೆನಪಿಸಿದ್ದಂತು ನಿಜ. ಈ ಓದಿನ ಖುಷಿಯನ್ನು ನೀಡಿದ ನಿಮಗೆಲ್ಲರಿಗೂ ಧನ್ಯವಾದಗಳು ಸರ್.
....................... ಶ್ರೀಮತಿ ‌ಕವಿತಾ ಶ್ರೀನಿವಾಸ್
'ಚೈತನ್ಯ' ನೆಲ್ಯಡ್ಕ, ಅಂತರ, 
ನರಿಕೊಂಬು ಗ್ರಾಮ ಮತ್ತು ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**************************************


     ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡ ಮಕ್ಕಳ ಜಗಲಿ ಕುಟುಂಬದ ಶಾನ್ವಿ ವಿ , ಪ್ರಥಮ ಪಿಯುಸಿ , ಮಕ್ಕಳ ಜಗಲಿಯ ಶೀರ್ಷಿಕೆ ಗೀತೆ ಹಾಡಿದ್ದ ಕುಮಾರಿ ಶ್ರೀರಕ್ಷಾ ಎಸ್ ಹೆಚ್ ಇವರ ಅಮ್ಮ ಶ್ರೀಮತಿ ಸುರೇಖಾ ಮತ್ತು ಶಿಶಿರನ ಅಮ್ಮ ಶ್ರೀಮತಿ ‌ಕವಿತಾ ಶ್ರೀನಿವಾಸ್ ಎಲ್ಲರಿಗೂ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article