ಜೀವನ ಸಂಭ್ರಮ : ಸಂಚಿಕೆ - 92
Sunday, July 2, 2023
Edit
ಜೀವನ ಸಂಭ್ರಮ : ಸಂಚಿಕೆ - 92
ಲೇಖಕರು : ಎಂ.ಪಿ. ಜ್ಞಾನೇಶ್
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಈಗ ಶಾಲೆ ಪ್ರಾರಂಭವಾಗಿದೆ. ಪಾಠ ಪ್ರವಚನಗಳು ನಡೆಯುತ್ತಿದೆ. ಇದರ ಜೊತೆಗೆ ಕ್ರೀಡೆ ಮತ್ತು ಪ್ರತಿಭಾ ಕಾರಂಜಿ ತಯಾರಿ ನಡೆಯುತ್ತದೆ. ನಮ್ಮ ಪೋಷಕರಿಗೆ ಇದು ಇಷ್ಟವಾಗುವುದಿಲ್ಲ. ಏಕೆಂದರೆ ಬಹುತೇಕ ಪೋಷಕರ ಮನಸ್ಸಿನಲ್ಲಿ ಅಂಕಗಳ ಭೂತ ಹೊಕ್ಕಿದೆ. ಇದರಿಂದ ಈ ಕ್ರೀಡೆ ಮತ್ತು ಪ್ರತಿಭಾ ಕಾರಂಜಿ ಬಗ್ಗೆ ಒಲವಿಲ್ಲ. ಆದರೆ ಮಕ್ಕಳೇ ತಿಳಿದುಕೊಳ್ಳಿ ನಮ್ಮ ಸುಂದರ, ಶ್ರೀಮಂತ ಬದುಕಿಗೆ ಪೂರಕವಾದದ್ದೆ ಕ್ರೀಡೆ ಮತ್ತು ಪ್ರತಿಭಾಕಾರಂಜಿ. ಹಾಗಾದರೆ ಜ್ಞಾನ ಬೇಡವೇ...? ಬೇಕು. ಆದರೆ ಜ್ಞಾನವೊಂದೇ ಜೀವನವಲ್ಲ.
ಶಿಕ್ಷಣವೆಂದರೆ ಕೇವಲ ಜ್ಞಾನವಲ್ಲ. ಶಿಕ್ಷಣವೆಂದರೆ ದೈಹಿಕ ಬೆಳವಣಿಗೆ, ಬೌದ್ಧಿಕ ಬೆಳವಣಿಗೆ, ಮಾನಸಿಕ ಬೆಳವಣಿಗೆ, ನೈತಿಕ ಬೆಳವಣಿಗೆ, ಸಾಮಾಜಿಕ ಬೆಳವಣಿಗೆ, ಸಾಂಸ್ಕೃತಿಕ ಬೆಳವಣಿಗೆ, ಭಾವನಾತ್ಮಕ ಬೆಳವಣಿಗೆ ಮತ್ತು ವೈಜ್ಞಾನಿಕ ಬೆಳವಣಿಗೆ, ಇಷ್ಟೆಲ್ಲಾ ಬೆಳವಣಿಗೆ ಆದಾಗ ಅದು ಶಿಕ್ಷಣ. ಇಲ್ಲದೇ ಇದ್ದರೆ ಕೇವಲ ಬೌದ್ಧಿಕ ಜ್ಞಾನ ಹೆಚ್ಚಾದರೆ ಅವರು ಅಕ್ಷರವಂತ ಎಂದೇ ಭಾವಿಸಬೇಕು.
ಇಂದು ನಾವು ನೋಡುತ್ತಿರುವುದು ಅಕ್ಷರವಂತರನ್ನು. ವಿದ್ಯಾವಂತರನ್ನಲ್ಲ. ಅವರಲ್ಲಿ ಜ್ಞಾನ ಇದೆ, ಭಾವನೆಗಳು ಸತ್ತಿವೆ. ನಮ್ಮ ಜೀವನ ಸುಂದರ, ಶ್ರೀಮಂತ ಮಾಡುವುದು ಭಾವನೆಯೇ ವಿನಃ ಜ್ಞಾನವಲ್ಲ. ಅಂದರೆ ಜ್ಞಾನದಷ್ಟೇ ಮಹತ್ವ ಭಾವನೆಗೆ ಇದೆ. ಪುಸ್ತಕದಿಂದ ಜ್ಞಾನ ಮತ್ತು ವೈಜ್ಞಾನಿಕ ಮನೋಭಾವ ಬೆಳೆಯುತ್ತದೆ. ಉಳಿದ ಐದು ವಿಭಾಗಗಳು ಅಂದರೆ ದೈಹಿಕ, ಮಾನಸಿಕ, ನೈತಿಕ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾದದ್ದು ಕ್ರೀಡೆ ಮತ್ತು ಪ್ರತಿಭಾಕಾರಂಜಿ. ಇವು ನಮ್ಮ ಸುಂದರ ಮತ್ತು ಶ್ರೀಮಂತ ಬದುಕಿಗೆ ಪೂರಕ.
ಮಕ್ಕಳೇ, ನೀವು ಪ್ರತಿಯೊಬ್ಬರನ್ನು ನೋಡಿ. ನಮ್ಮೆಲ್ಲರ ರೂಪ - ಬಣ್ಣ ಭಿನ್ನ ಬಿನ್ನ. ದೈಹಿಕ ಸಾಮರ್ಥ್ಯ, ಆಸಕ್ತಿ, ಅಭಿರುಚಿ, ಆಲೋಚನೆ ಮತ್ತು ವಿಚಾರ ಗಳು ಭಿನ್ನ-ಭಿನ್ನ. ಈ ಭಿನ್ನತೆ ಇರುವುದರಿಂದಲೇ ಜಗತ್ತು ವೈವಿಧ್ಯಮಯವಾಗಿದೆ. ನಿಸರ್ಗ ನಮಗೆಲ್ಲ ಭಿನ್ನ-ಭಿನ್ನ ಆಸಕ್ತಿ, ಆಲೋಚನೆ, ಸಾಮರ್ಥ್ಯ ಇಟ್ಟಿದೆ. ಕೆಲವರಲ್ಲಿ ಹಾಡು, ನರ್ತನ, ಶಿಲ್ಪ, ಚಿತ್ರಕಲೆ, ವಾದ್ಯ ನುಡಿಸುವುದು, ಜಾನಪದ ಹೀಗೆ ವೈವಿಧ್ಯತೆಯನ್ನು ನಮಗೆ ನಿಸರ್ಗ ತುಂಬಿದೆ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ "ನಿಸರ್ಗ ನಮ್ಮಲ್ಲಿ ಏನು ಇಟ್ಟಿದ್ಯೋ ಅದನ್ನು ಹೊರ ತೆಗೆಯುವುದು ಶಿಕ್ಷಣ" Education Is The Manifestation Of Divine Perfection. ನಿಸರ್ಗ ಏನು ಇಟ್ಟಿದ್ಯೋ ಅದನ್ನು ಮಾತ್ರ ಹೊರ ತೆಗೆಯುವುದು ಶಿಕ್ಷಣ ಆದರೆ ಅಷ್ಟನ್ನೇ ಹೊರ ತೆಗೆದರೆ ಅದೊಂದರಲ್ಲಿ ಮಾತ್ರ ಶ್ರೀಮಂತವಾಗುತ್ತದೆ. ಉಳಿದ ಸಾಮರ್ಥ್ಯ ಬಡವಾಗುತ್ತದೆ. ಅಂದರೆ ನಿಸರ್ಗ ಇಟ್ಟಿರುವುದಕ್ಕೆ ಪ್ರಾಧಾನ್ಯತೆ ನೀಡಿ, ಉಳಿದ ಸಾಮರ್ಥ್ಯಗಳನ್ನು ಅನುಭವಿಸಬೇಕಾದರೂ ಬೇಕಾಗುತ್ತದೆ.
ಕ್ರೀಡೆ ಮತ್ತು ಪ್ರತಿಭಾ ಕಾರಂಜಿಯಿಂದ ಹೇಗೆ ಸುಂದರ ಬದುಕಿಗೆ ಕಾರಣವಾಗುತ್ತದೆ...? ಇಲ್ಲಿ ಜಾತಿ, ಧರ್ಮ, ಭಾಷೆ, ಲಿಂಗ ಮತ್ತು ಪ್ರದೇಶ ಮುಖ್ಯವಾಗುವುದಿಲ್ಲ. ಇಲ್ಲಿ ಬೆರೆಯುವಿಕೆ ಮುಖ್ಯವಾಗುತ್ತದೆ. ಇದರಿಂದ ಮಕ್ಕಳಿಗೆ ಸಾಮಾಜಿಕ ಮತ್ತು ಮಾನಸಿಕ ಬೆಳವಣಿಗೆ ಆಗುತ್ತದೆ. ಸಾಮಾಜಿಕವಾಗಿ ಹೊಂದಿಕೊಂಡು ಹೋಗುವುದನ್ನು ಕಲಿಯುತ್ತೇವೆ. ಇನ್ನೊಬ್ಬ ಕಷ್ಟದಲ್ಲಿದ್ದಾಗ ನೆರವಾಗಬೇಕೆಂಬುದನ್ನು ಕಲಿಯುತ್ತೇವೆ. ಇದರಿಂದ ಸಾಮಾಜಿಕ ಬೆಳವಣಿಗೆ ಆಗುತ್ತದೆ. ಇಲ್ಲಿ ತಾರತಮ್ಯ ಅನುಭವ ಮರೆಯಾಗಿ, ಸಮಾನತೆ ನೆಲೆಸುತ್ತದೆ. ಇದರಿಂದ ಸಾಮಾಜಿಕ ಮತ್ತು ಮಾನಸಿಕ ಬೆಳವಣಿಗೆಯಾಗುತ್ತದೆ.
ಕ್ರೀಡೆಯಿಂದ ದೇಹ ಮತ್ತು ಮನಸ್ಸು ಬೆಳೆಯುತ್ತದೆ. ನಾವು ಕ್ರೀಡೆಯನ್ನು ಪ್ರಶಸ್ತಿಗಾಗಿ ಆಡುವುದಲ್ಲ, ನಮ್ಮ ನಮ್ಮ ಸಂತೋಷಕ್ಕೆ ಆಡಬೇಕು. ಸಂತೋಷದಂತಹ ಬಹುಮಾನ ಇನ್ನೊಂದಿಲ್ಲ. ಸಂತೋಷಕ್ಕೆ ಸರಿಸಾಟಿಯಾದ ವಸ್ತು ಈ ಜಗತ್ತಿನಲ್ಲಿ ಇಲ್ಲ. ಹಾಗಾಗಿ ನಾವೆಲ್ಲರೂ ಬಹುಮಾನ ಪ್ರಶಸ್ತಿ ಮರೆತು ಸಂತೋಷಕ್ಕಾಗಿ ಆಡಬೇಕು. ಆಗ ನಮ್ಮಲ್ಲಿ ಎಂಡಾರ್ಫಿನ್ ಎನ್ನುವ ಸಂತೋಷದ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದರಿಂದ ನಮ್ಮ ದೇಹ, ಮನಸ್ಸು ಮತ್ತು ದೇಹದೊಳಗಿರುವ ಪ್ರತಿಯೊಂದು ಅಂಗಗಳು ಉಲ್ಲಾಸದಿಂದ ಕೆಲಸ ಮಾಡುತ್ತದೆ. ಆಟದ ಪಿರಿಯಡ್ ನಂತರ ಕಷ್ಟಕರವಾದ ವಿಷಯವನ್ನು ಸುಲಭವಾಗಿ ಕಲಿಯಬಹುದು. ಹಾಗಾಗಿ ದೈಹಿಕ ಚಟುವಟಿಕೆ ಮತ್ತು ಕ್ರೀಡೆಯನ್ನು ಕಡೆಗಣಿಸಬಾರದು. ದೈಹಿಕ ಚಟುವಟಿಕೆಯಿಂದ ದೇಹದ ಪ್ರತಿಯೊಂದು ಭಾಗಕ್ಕೆ ರಕ್ತ ಸಂಚಾರವಾಗಿ ಮೂಳೆ, ಕೀಲು, ಸ್ನಾಯುಗಳಿಗೆ ಅಂಗಗಳು ವ್ಯಾಯಾಮವಾಗಿ ಬಲಿಷ್ಠವಾಗುತ್ತದೆ. ಸುಂದರ ಬದುಕಿಗೆ ದೇಹ ಬಲಿಷ್ಠ ವಾಗುವುದು ಅಗತ್ಯ.
ಕ್ರೀಡೆ ಮತ್ತು ಪ್ರತಿಭಾ ಕಾರಂಜಿಯಿಂದ ನೈತಿಕ ಬೆಳವಣಿಗೆಯಾಗುತ್ತದೆ. ಯಾವುದು ಸರಿ ಯಾವುದು ತಪ್ಪು ಎಂಬ ವಿವೇಕ ಬೆಳೆಯುತ್ತದೆ. ಇದರಿಂದ ಸರಿಯಾದ ನಿರ್ಧಾರ ಕೈಗೊಳ್ಳಲು ಸಹಾಯಕ. ನೈತಿಕ ಬೆಳವಣಿಗೆ ಎಂದರೆ ಕೇವಲ ತಪ್ಪು ಗುರುತಿಸುವುದಲ್ಲ. ಒಳ್ಳೆಯದನ್ನು ಗುರುತಿಸಿ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಾಯಕ. ಪ್ರತಿಭಾ ಕಾರಂಜಿ ಮತ್ತು ಕ್ರೀಡೆ ಭಾವನಾತ್ಮಕ ಬೆಳವಣಿಗೆಗೆ ಪೂರಕ. ಒಬ್ಬ ವ್ಯಕ್ತಿ ಬಿದ್ದಾಗ ಅವನನ್ನು ಕಾಳಜಿ ಮಾಡಬೇಕೆನ್ನುವ ಭಾವನೆ ಬರುತ್ತದೆ. ಹಾಡು, ಗಾಯನ, ಮಾತುಗಾರಿಕೆ, ಭಾಷಣ, ಪ್ರಬಂಧ, ರಸಪ್ರಶ್ನೆ, ಜಾನಪದ ಯಾವುದೇ ಇರಲಿ ಭಾವನೆ ಪ್ರಮುಖ ಪಾತ್ರ ವಹಿಸುತ್ತದೆ. ಭಾವನೆ ತುಂಬಿದಾಗ ರಾಗ ಮಧುರವಾಗುತ್ತದೆ. ಭಾವನೆ ತುಂಬಿದಾಗ ಮಧುರ ಮಾತುಗಳು ಹೊರಡುತ್ತವೆ. ಭಾವನೆ ಉತ್ತಮವಾಗಿದ್ದಾಗ ಸುಂದರ ಕಲ್ಪನೆ ವಿಚಾರ ಮೂಡಲು ಸಾಧ್ಯವಾಗುತ್ತದೆ.
ಮಕ್ಕಳೇ ನಾವು ನಮಗೆ ಆಸಕ್ತಿ ವಿಷಯದಲ್ಲಿ ಭಾಗಿಯಾಗೋಣ. ಅದರಲ್ಲಿ ತರಬೇತಿ ಹೊಂದಿ ಸಂತೋಷಕ್ಕಾಗಿ ಭಾಗವಹಿಸೋಣ. ಪ್ರಶಸ್ತಿಗಾಗಿ ಅಲ್ಲ. ನಮ್ಮಲ್ಲಿ ಇಲ್ಲದಿರುವ ಸಾಮರ್ಥ್ಯವನ್ನು ನೋಡಿ, ಕೇಳಿ, ತಿಳಿದು ಸಂತೋಷ ಪಡೋಣ. ಅದು ನಮ್ಮಲ್ಲಿ ಇಲ್ಲ ಎಂಬ ಭಾವನೆ ಬಾರದಿರಲಿ. ನಾವು ಗಳಿಸಲು, ಎಣಿಸಲು, ಹೋಲಿಸಲು ಬಂದವರಲ್ಲ. ಸಂತೋಷ ಪಡಲು ಬಂದವರು ಅಲ್ಲವೇ ಮಕ್ಕಳೇ.
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************