ಜಗಲಿ ಕಟ್ಟೆ : ಸಂಚಿಕೆ - 6
Sunday, July 2, 2023
Edit
ಜಗಲಿ ಕಟ್ಟೆ : ಸಂಚಿಕೆ - 6
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿ
www.makkalajagali.com
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ
ಮಕ್ಕಳಲ್ಲಿ ಬರವಣಿಗೆಯ ಆಸಕ್ತಿಯನ್ನು ಇಮ್ಮಡಿಗೊಳಿಸುವ ವಿಶೇಷವಾದ ಕಾರ್ಯಕ್ರಮವನ್ನು ಮಕ್ಕಳ ಜಗಲಿಯು ಆಯೋಜಿಸಲು ಸಿದ್ಧವಾಗಿದೆ. ಈ ಬಗ್ಗೆ ಮುಂದಿನ ಜಗಲಿ ಕಟ್ಟೆಯ ಮಾತುಕತೆಯಲ್ಲಿ ಮಾತನಾಡೋಣ...... ಅಂದಿದ್ದೆ.
"ಮಕ್ಕಳ ಜಗಲಿ" - ಗೋಡೆ ಪತ್ರಿಕೆ ಪ್ರತಿ ಶಾಲೆಯಲ್ಲಿಯೂ ಆರಂಭವಾದರೆ ತುಂಬಾ ಸಂತೋಷ......
ಹೌದು ನಾನು ಚಿತ್ರಕಲಾ ಪದವಿಯನ್ನು ಮುಗಿಸಿದ ಮೇಲೆ ಮಂಗಳೂರಿನ ಸೃಜನಶೀಲ ಕಲಾವಿದ ಹಾಗೂ ಶಿಕ್ಷಣ ಚಿಂತಕ ಗೋಪಾಡ್ಕರ್ ಅವರ ಪರಿಚಯವಾಯಿತು. ಅವರ ಶಿಕ್ಷಣದ ಬಗೆಗಿನ ಚಿಂತನೆಗಳು ನನಗೆ ತುಂಬಾ ಇಷ್ಟವಾಯ್ತು. ಅವರು ಮಕ್ಕಳಿಗಾಗಿ ತನ್ನ ಮನೆಯನ್ನೇ ಅಧ್ಯಯನ ಕೇಂದ್ರವಾಗಿ ರೂಪಿಸಿ ಸ್ವರೂಪ ವಠಾರ ಎನ್ನುವ ಹೆಸರನ್ನಿಟ್ಟಿದ್ದರು. ಇಲ್ಲಿಗೆ ಸುತ್ತಮುತ್ತಲಿನ ಅನೇಕ ಮಕ್ಕಳು ಪ್ರತಿನಿತ್ಯ ಶಾಲೆ ಅವಧಿಯ ನಂತರ ಸಂಜೆ ಹೊತ್ತಿಗೆ ಬರುತ್ತಿದ್ದರು. ಪ್ರತಿ ದಿನವೂ ಇಲ್ಲಿ ಚಟುವಟಿಕೆ. ಹಾಡು, ಮಿಮಿಕ್ರಿ, ಕ್ವಿಜ್, ಕಥೆ ಬರೆಯುವುದು, ಕವನ ಬರೆಯುವುದು, ಪುಸ್ತಕ ಓದುವುದು, ಚಿತ್ರ ಬರೆಯುವುದು ಹೀಗೆ ನಾನಾ ತರಹ ಕೆಲಸಗಳಲ್ಲಿ ಮಕ್ಕಳು ಬ್ಯುಸಿಯಾಗಿದ್ದರು. ಮಕ್ಕಳು ಬರೆದ ಚಿತ್ರ, ಕಥೆ, ಕವನ, ಲೇಖನಗಳನ್ನು ಒಟ್ಟು ಸೇರಿಸಿ ಗೋಡೆ ಪತ್ರಿಕೆಯನ್ನೂ ಮಾಡುತ್ತಿದ್ದರು. ಅನೇಕ ಶಿಬಿರಗಳಲ್ಲಿಯೂ ಕೂಡ ಮಕ್ಕಳ ಮೂಲಕ ಗೋಡೆ ಪತ್ರಿಕೆಗಳನ್ನು ಮಾಡಿಸುತ್ತಿದ್ದರು. ಮಕ್ಕಳ ಸೃಜನಶೀಲ ಬರವಣಿಗೆಯ ಅಭಿವ್ಯಕ್ತಿಗೆ ಗೋಡೆ ಪತ್ರಿಕೆ ಬಹಳ ದೊಡ್ಡ ಮಾಧ್ಯಮ ಎಂಬುದು ನನಗಾಗಲೇ ತಿಳಿದುಹೋಯ್ತು.
2008ರಲ್ಲಿ ನಾನೀಗ ಇರುವ ಬಂಟ್ವಾಳ ತಾಲೂಕಿನ ಮಂಚಿ - ಕೊಳ್ನಾಡು ಶಾಲೆಗೆ ಚಿತ್ರಕಲಾ ಶಿಕ್ಷಕನಾಗಿ ನೇಮಕಾತಿ ಹೊಂದಿ ಬಂದೆ. ಚಿತ್ರದ ಜೊತೆ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಮೂಡಿಸುವ ಸಲುವಾಗಿ ಮುಖ್ಯ ಶಿಕ್ಷಕರಾಗಿದ್ಧ ಪುರುಷೋತ್ತಮ ಟಿ ಇವರ ಅನುಮತಿಯ ಮೇರೆಗೆ ಗೋಡೆ ಪತ್ರಿಕೆ ಆರಂಭ ಮಾಡಿದೆವು. ಐದು- ಆರು ವಿದ್ಯಾರ್ಥಿಗಳ ತಂಡದಂತೆ ಒಂದು ತರಗತಿಯಿಂದ ತಿಂಗಳಿಗೆ ಕನಿಷ್ಠ 08 -12 ಪತ್ರಿಕೆಗಳು ಹೊರ ಬರುತ್ತಿದ್ದವು. 8ನೇ,9ನೇ,10ನೇ ಒಟ್ಟು ಮೂರು ತರಗತಿಗಳಿಂದ 50-60 ಗೋಡೆ ಪತ್ರಿಕೆಗಳಂತೆ ಪ್ರತಿ ವರ್ಷ ಜೂನ್ ತಿಂಗಳಿಂದ ಸಾಧಾರಣ ಜನವರಿ ತಿಂಗಳವರೆಗೆ ಅಂದಾಜು 450 ಪತ್ರಿಕೆಗಳು ಪ್ರಕಟವಾಗುತ್ತಿತ್ತು.
ನಾನು ಕಂಡುಕೊಂಡಂತೆ ಬರೆಯುವ ಸಾಮರ್ಥ್ಯ, ಒಟ್ಟು ವಿನ್ಯಾಸದ ಕಲ್ಪನೆ, ಮಕ್ಕಳಲ್ಲಿ ಮೈಗೂಡಿಕೊಳ್ಳುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಸ್ವತಹ ಆಲೋಚಿಸುವ ಶಕ್ತಿ, ಬರೆಯುವ ಕಾರಣಕ್ಕಾಗಿ ಓದುವ ಹವ್ಯಾಸವನ್ನು ಬೆಳೆಸುವ ಸಾಮರ್ಥ್ಯವನ್ನು ಪಡೆಯುತ್ತಾರೆ. ಸ್ಪಷ್ಟವಾಗಿ ಬರೆಯುವ, ಸ್ಪಷ್ಟವಾಗಿ ಓದುವ ಪ್ರಬುದ್ಧತೆಯನ್ನು ಹೊಂದಿಕೊಳ್ಳುತ್ತಾರೆ.
ನಿಮ್ಮ ಶಾಲೆಗಳಲ್ಲೂ ಗೋಡೆ ಪತ್ರಿಕೆಯನ್ನು ನಡೆಸುತ್ತಾ ಇದ್ದಿರಬಹುದು. ಇಲ್ಲವಾದಲ್ಲಿ ಮಕ್ಕಳ ಜಗಲಿಯ ಮೂಲಕ ಗೋಡೆ ಪತ್ರಿಕೆಯನ್ನು ಪ್ರತಿ ಶಾಲೆಯಲ್ಲಿ ನಡೆಸುವ ಯೋಜನೆಗೆ ನೀವೂ ಜೊತೆಯಾಗಿ. ಪ್ರತಿ ತರಗತಿಗೊಂದರಂತೆ ಅಥವಾ ಇಡೀ ಶಾಲೆಗೊಂದರಂತೆ ಗೋಡೆ ಪತ್ರಿಕೆಯನ್ನು ಆರಂಭ ಮಾಡಬಹುದು. ಮಕ್ಕಳ ಸ್ವಂತ ರಚನೆಯ ಬರಹಗಳನ್ನು ಪ್ರಕಟಿಸುವುದಕ್ಕೆ ಪ್ರೇರಣೆ ನೀಡಿ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಕಾರ್ಯ ನಾವು ಜೊತೆಯಾಗಿ ಮಾಡೋಣ.
ಗೋಡೆ ಪತ್ರಿಕೆಯಲ್ಲಿ ಪ್ರಕಟವಾದ ಉತ್ತಮ ಬರಹಗಳನ್ನು , ಚಿತ್ರಗಳನ್ನು, ಮಕ್ಕಳ ಜಗಲಿಗೂ ಕಳಿಸಿ. ನಿಮ್ಮ ಶಾಲೆಯಲ್ಲಿ "ಮಕ್ಕಳ ಜಗಲಿ" ಗೋಡೆ ಪತ್ರಿಕೆಯನ್ನು ಆರಂಭಿಸಿದ ಸುದ್ದಿಯನ್ನು ಮಕ್ಕಳ ಜಗಲಿಗೆ ಫೋಟೋ ಸಮೇತ ಬರೆದು ಕಳಿಸಿ.
ಕಳೆದ ಸಂಚಿಕೆಯ ಜಗಲಿಕಟ್ಟೆ - 5 ಅಂಕಣದಲ್ಲಿ ಪೋಷಕರು, ವೈಷ್ಣವಿ ರಾವ್ 5ನೇ ತರಗತಿ ಮಂಗಳೂರು , ಶಿಫಾನ ಪ್ರಥಮ ಪಿಯುಸಿ , ಸೌಮ್ಯ ಕಾರ್ಕಳ ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....
ಎಲ್ಲರಿಗೂ ನಮಸ್ಕಾರಗಳು. "ಮಕ್ಕಳ ಜಗಲಿ" ವೇದಿಕೆಗೆ ಇದು ನನ್ನ ಮೊದಲ ಅನಿಸಿಕೆಯ ಬರಹ. ಬರವಣಿಗೆ ನನಗೆ ತುಂಬಾನೇ ಆಸಕ್ತಿದಾಯಕವಾದ ಕ್ಷೇತ್ರವಾಗಿದೆ. ಸಮಯ ಸಿಕ್ಕಾಗಲೆಲ್ಲಾ ಏನನ್ನಾದರೂ ಗೀಚುತ್ತಾ ಇದ್ದ ನನಗೂ ಪತ್ರಿಕೆಗಳಲ್ಲಿ ನನ್ನ ಬರಹಗಳನ್ನು ಪ್ರಕಟಿಸಬೇಕೆಂಬ ಹುಚ್ಚು ಆಸೆ ಇತ್ತು. ಬಹುಶಃ ಮಕ್ಕಳ ಜಗಲಿ ನನಗೊಂದು ಸುವರ್ಣಾವಕಾಶವನ್ನು ಒದಗಿಸಿದೆ ಎಂದರೆ ತಪ್ಪಲ್ಲ. "ಅಕ್ಕನ ಪತ್ರ" ಅಂಕಣಕ್ಕೆ ಪ್ರತಿಕ್ರಯಿಸುತ್ತಿದ್ದ ನನ್ನ ಮಗಳು ಪ್ರಣಮ್ಯಾ, ನನಗೆ ನೀಡಿದ ಪ್ರೋತ್ಸಾಹ ಬಹುಶ: ಜಗಲಿಯ ವೇದಿಕೆಗೆ ನಾನೂ ಸಧಸ್ಯೆಯಾಗಿ ಹೆಜ್ಜೆಯಿಡಲು ಕಾರಣವಾಗಿದೆ. ರಾಜ್ಯ ಮಟ್ಟದ ಕವನ ಸ್ಪರ್ಧೆಯ ತರುವಾಯ ನಮಗೆ ಪರಿಚಯವಾದ ಜಗಲಿ ಇಂದು ಹತ್ತು-ಹಲವು ಸಮಾಚಾರಗಳನ್ನು ಹೊತ್ತು ತರುತ್ತಿರುವುದು ಸಂತಸದ ಸಂಗತಿಯಾಗಿದೆ. ಆದರೆ ಬಾಳಿ ಬದುಕಬೇಕಾಗಿದ್ದ ಎಳೆಯ ಬಾಲಕ ಶಿಶಿರ್ ನ ಅಗಲಿಕೆಯ ವಿಚಾರ ತುಂಬಾನೇ ನೋವುಂಟುಮಾಡಿತು. ಆ ಬಾಲಕ ಮತ್ತೆ ಹುಟ್ಟಿ ಬರುವಂತಾಗಲಿ.
ಗೀಚಿ- ಗೀಚಿ ಪುಸ್ತಕದ ಪುಟದೊಳಗೆಯೇ ಅವಿತು ನಿರಾಶೆಯ ಭಾವ ಹೊತ್ತಿದ್ದ ನನ್ನ ಕೈ ಬರಹಗಳಿಗೆ ಇದೀಗ ಜೀವ ತುಂಬುವ ಭರವಸೆ ಬಂದಿದೆ. ಇನ್ನಷ್ಟು ವಿಚಾರಗಳನ್ನು ತಿಳಿದು ಪ್ರತಿಕ್ರಯಿಸುವ ಹೊಸ ನಿರೀಕ್ಷೆಯೊಂದಿಗೆ ...
.......................................... ವಿದ್ಯಾಗಣೇಶ್
ಚಾಮೆತ್ತಮೂಲೆ ಮನೆ
ಕೊಣಾಲು ಗ್ರಾಮ ಮತ್ತು ಅಂಚೆ
ಕಡಬ ತಾಲೂಕು, ದ.ಕ - 574 229
**************************************
ನಮಸ್ಕಾರಗಳು ಸರ್.....
ಪ್ರೇಮನಾಥ್ ಮರ್ಣೆ ಸರ್ ಬರೆದ ಶಿಕ್ಷಕರ ಸ್ಕೂಲ್ ಡೈರಿ ಸಂಚಿಕೆ :13ರ ಬಗ್ಗೆ ನನ್ನ ಅನಿಸಿಕೆಗಳು. ತರಗತಿಯಲ್ಲಿ ಇತರ ವಿದ್ಯಾರ್ಥಿಗಳಿಗೆ ಕೀಟಲೆ ಮಾಡುತ್ತಿದ್ದ ಹುಡುಗನೊಬ್ಬನಲ್ಲಿದ್ದ ಸಂಗೀತ ಪ್ರತಿಭೆಯನ್ನು ಗುರುತಿಸಿ, ಬೆನ್ನುತಟ್ಟಿ ಪ್ರೋತ್ಸಾಹಿಸಿ ಅವಕಾಶ ನೀಡಿ, ಮುಂದೆ ಅವನು ಹವ್ಯಾಸಿ ಗಾಯಕನಾಗಲು ಕಾರಣಕರ್ತರಾದ ಪ್ರೇಮನಾಥ್ ಸರ್ ನಿಮಗೆ ಮಕ್ಕಳ ಜಗಲಿಯ ಮೂಲಕ ನನ್ನ ವಂದನೆಗಳನ್ನು ಸಲ್ಲಿಸುತ್ತೇನೆ. ಆ ಹುಡುಗನ ಅಂದಿನ ಪೇಪರ್ ಕಟ್ಟಿಂಗ್ ಫೋಟೋ ಸಹಿತ ವರದಿಯನ್ನು ನಿಮ್ಮ ಲೇಖನದಲ್ಲಿ ಪ್ರಕಟಿಸಿದ್ದೀರಿ ನಿಮಗೆ ವಿದ್ಯಾರ್ಥಿಯ ಬಗ್ಗೆ ಇರುವ ಪ್ರೀತಿ, ಕಾಳಜಿ ಎಂತಹದ್ದು ಎಂದು ತೋರಿಸುತ್ತದೆ. ಆ ವಿದ್ಯಾರ್ಥಿಯೂ ಕೂಡ ನಿಮ್ಮ ಮೇಲೆ ಇಟ್ಟಿರುವ ಗೌರವ ತುಂಬಾ ಇಷ್ಟವಾಯ್ತು.
ಶಂಭೂರಿನ ಪ್ರೌಢಶಾಲೆಯಲ್ಲಿ ನಡೆದ ಕಲಿಕಾ ಹಬ್ಬದಲ್ಲಿ ತಾರಾನಾಥ್ ಸರ್ ನಮಗೆ ನಿಮ್ಮನ್ನು ಪರಿಚಯಿಸಿದ್ದರು. ಆ ದಿನ ನೀವು ನಮ್ಮ ಶಿಶಿರನ ಬಗ್ಗೆ ವಿಚಾರಿಸಿ ನನಗೆ ಧೈರ್ಯ ತುಂಬಿ ತುಂಬಾ ಮಾತನಾಡಿದ್ದೀರಿ. ಆಗಲೇ ನಿಮ್ಮ ಬಗ್ಗೆ ನನಗೆ ತುಂಬಾ ಗೌರವ ಮೂಡಿತು. ನಿಮ್ಮ ಲೇಖನ ಓದಿದ ಮೇಲಂತೂ ಮಕ್ಕಳ ಮನಸ್ಸನ್ನು ಅರಿಯುವ ನಿಮ್ಮಂತಹ ಶಿಕ್ಷಕರು ಪ್ರತಿಯೊಂದು ಶಾಲೆಯಲ್ಲೂ ಎಲ್ಲಾ ವಿದ್ಯಾರ್ಥಿಗಳಿಗೂ ಸಿಗಲಿ ಎಂದು ಆಶಿಸುತ್ತೇನೆ.
....................... ಶ್ರೀಮತಿ ಕವಿತಾ ಶ್ರೀನಿವಾಸ್
'ಚೈತನ್ಯ' ನೆಲ್ಯಡ್ಕ, ಅಂತರ,
ನರಿಕೊಂಬು ಗ್ರಾಮ ಮತ್ತು ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
**************************************
ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡ ಮಕ್ಕಳ ಜಗಲಿ ಕುಟುಂಬದ ವಿದ್ಯಾಗಣೇಶ್ ಚಾಮೆತ್ತಮೂಲೆ ಮನೆ, ಶ್ರೀಮತಿ ಕವಿತಾ ಶ್ರೀನಿವಾಸ್ ಇಬ್ಬರಿಗೂ ಧನ್ಯವಾದಗಳು.
ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************