ಸ್ಫೂರ್ತಿಯ ಮಾತುಗಳು : ಸಂಚಿಕೆ - 70
Monday, July 3, 2023
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 70
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಜ್ಞಾನವನ್ನು ಸುಜ್ಞಾನ ಮತ್ತು ಅಜ್ಞಾನ ಎಂದು ಎರಡು ವಿಧಗಳಾಗಿ ಗುರುತಿಸಿದರೆ ಸುಜ್ಞಾನವು ಶಾಶ್ವತವಾದ ಗೌರವಾದರಗಳನ್ನು ಮಾನವನಿಗೊದಗಿಸುತ್ತದೆ. ಅಜ್ಞಾನವೂ ಎಂದೆಂದಿಗೂ ಪ್ರಯೋಜನಕ್ಕೆ ಬಾರದ ವಿಚಾರ. ಅಜ್ಞಾನಿಯೆಂದೊಡನೆ ಏನೂ ತಿಳಿದವನಲ್ಲ ಎಂದು ಹೇಳುವಂತಿಲ್ಲ. ಬಹಳ ಓದಿದವರನ್ನೂ ತುಂಬ ತಿಳಿದವರು ಎಂದೂ ವರ್ಣಿಸುವಂತಿಲ್ಲ. ಕೆಲವರು ಕೆಲವು ವಿಷಯಗಳಲ್ಲಿ ಅಜ್ಞಾನಿಗಳಾದರೆ ಇನ್ನೂ ಕೆಲವರಿಗೆ ಹಲವು ವಿಚಾರಗಳು ತಿಳಿದಿರುತ್ತವೆ. ಕೆಲವದರ ಬಗ್ಗೆ ಮಾತ್ರವೇ ಜ್ಞಾನವುಳ್ಳವರನ್ನು ಅರೆಜ್ಞಾನಿಗಳೆಂದು ಹೇಳಬಾರದು. ಅರೆಜ್ಞಾನಿಯೆಂದರೆ ಒಂದು ನಿರ್ದಿಷ್ಟ ಸಂಗತಿಯ ಅರ್ಧಭಾಗ ಅಥವಾ ಅದಕ್ಕಿಂತಲೂ ಕಡಿಮೆ ತಿಳಿದವನು. ಅವನ ಜ್ಞಾನ ಆ ವಿಷಯದ ಕುರಿತಾಗಿ ಅರ್ಧದಷ್ಟೂ ಇರಬಹುದು, ಅದಕ್ಕಿಂತ ಹೆಚ್ಚೂ ಇರಬಹುದು, ಕಡಿಮೆಯೂ ಆಗಿರಬಹುದು; ಆದರೆ ಪೂರ್ಣ ಅರಿವಿಲ್ಲದೇ ಇರುವ ಪ್ರಕರಣವಿದು. ಪೂರ್ಣ ಅರಿವಿದ್ದರೆ ಆತ ಜ್ಞಾನಿ ಅಥವಾ ಸುಜ್ಞಾನಿಯಾಗುತ್ತಾನೆ.
ಒಬ್ಬ ಮಿತ್ರನಲ್ಲಿ ‘ಹಪ್ಪಳ’ ಗೊತ್ತೇ ಎಂದು ಕೇಳಿದೆ. ಹೌದು ಎಂದ. “ಯಾವುದರ ಹಪ್ಪಳ ಗೊತ್ತು?” ಎಂದಾಗ ಅವನು ಉದ್ದಿನಿಂದ ತೊಡಗಿ ಉಪ್ಪುಸೊಳೆಯ ತನಕ ಹತ್ತಕ್ಕೂ ಮೀರಿದ ಹಪ್ಪಳದ ಹೆಸರನ್ನು ಹೇಳಿದನು. ಅದರ ರುಚಿಯನ್ನು ವರ್ಣಿಸಿದನು. ಹಪ್ಪಳವನ್ನು ಬಳಸಿ ಮಾಡಬಹುದಾದ ತಿಂಡಿಗಳನ್ನು, ಹಪ್ಪಳ ಕಾಯಿಸುವ ರೀತಿಯನ್ನು ವಿವರಿಸಿದನು. ಇವನು ಹಪ್ಪಳದ ಬಗ್ಗೆ ಜ್ಞಾನಿ ಎನ್ನೋಣವೇ? ಅವನಲ್ಲಿ ಹಪ್ಪಳ ತಯಾರಿಯ ಬಗ್ಗೆ ಕೇಳಿದಾಗ ಅವನಿಗೇನೂ ತಿಳಿಯದು. ಆದ್ದರಿಂದ ಅವನು ಹಪ್ಪಳದ ಬಗ್ಗೆ ಅರೆ ಜ್ಞಾನಿ. ಹಪ್ಪಳವನ್ನೇ ತಿಂದಿಲ್ಲ, ನೋಡಿಲ್ಲ ಅನ್ನುತ್ತಿದ್ದರೆ ಅವನು ಹಪ್ಪಳದ ಬಗ್ಗೆ ಅಜ್ಞಾನಿ. ಆದರೆ ಅವನಿಗೆ ಚಕ್ಕುಲಿ ಮಾಡುವ ವಿಧಾನದಿಂದ ತೊಡಗಿ ಕುರು ಕುರು ಸದ್ದು ಮಾಡಿ ತಿನ್ನುವ ತನಕದ ಎಲ್ಲವೂ ತಿಳಿದಿದೆಯೆಂದಾದರೆ ಅವನು ಚಕ್ಕುಲಿಯ ಬಗ್ಗೆ ಜ್ಞಾನಿಯಾಗುತ್ತಾನೆ. ಹೀಗೆ ಕೆಲವರು ಕೆಲವನ್ನು ತಿಳಿದಿರುತ್ತಾರೆ, ಕೆಲವನ್ನು ತಿಳಿದಿರುವುದಿಲ್ಲ ಎಂದ ಮಾತ್ರಕ್ಕೆ ಅವರು ಅಜ್ಞಾನಿಗಳಾಗುವುದಿಲ್ಲ. ಜ್ಞಾನದ ಕ್ಷೇತ್ರಗಳು ಸಹಸ್ರಾರು. ಯಾವುದಾದರೂ ಒಂದು ಕ್ಷೇತ್ರದಲ್ಲಿ ಜ್ಞಾನಿಗಳಾಗಿರುತ್ತಾರೆ.ಅದಕ್ಕಾಗಿಯೇ ಕೃಷಿ ಜ್ಞಾನಿ, ಮೋಟಾರುಗಳ ಜ್ಞಾನಿ, ಕಂಪ್ಯೂಟರ್ ಜ್ಞಾನಿ ಎಂಬ ಜ್ಞಾನ ವಿಶೇಷಗಳನ್ನು ಹೇಳುವುದು.
ಒಬ್ಬ ವ್ಯಕ್ತಿ ಮನೆಯಿಂದ ಹೊರಗಡೆ ನೋಡಿಲ್ಲ, ಮಾತನಾಡಿಲ್ಲ, ಓದಿಲ್ಲ, ಕಲಿತಿಲ್ಲ. ಅವನಿಗೆ ಆಧುನಿಕತೆಯ ಬಗ್ಗೆ ಪರಿವೇ ಇರುವುದಿಲ್ಲ. ವಿದ್ಯುತ್ ಸ್ವಿಚ್ ಬಗ್ಗೆ ಅರಿವಿಲ್ಲ. ಮೊಬೈಲ್ ಬಳಕೆ ತಿಳಿಯದು ಹೀಗೆ ಬಾಹ್ಯ ಜಗದ ಅರಿವಿರದವನನ್ನು ಬಾವಿಯ ಕಪ್ಪೆಯೆಂದು ಹೇಳುತ್ತಾರೆ. ಅವರು ಸಂಪೂರ್ಣ ಅಜ್ಞಾನಿಗಳು. ಹಾಗಾದರೆ ಓದಿದವರು ಅಜ್ಞಾನಿಗಳಾಗುತ್ತಾರೆಯೇ? ಹೌದು. ಓದಿದವರಿಗೂ ಲೋಕ ಜ್ಞಾನ ಮತ್ತು ವ್ಯವಹಾರ ಜ್ಞಾನ ಇರದಿದ್ದಾಗ ಅವರೂ ಅಜ್ಞಾನಿಗಳೇ ಸೈ. ಓದಿದ ವಿಚಾರಗಳನ್ನು ಎಲ್ಲೂ ಅನ್ವಯಿಸುವ ಸಾಮರ್ಥ್ಯ ಇರದು. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಪಾಸಾದರೂ ಬದುಕಿನ ಯಾವ ಹಂತದಲ್ಲೂ ಅವರು ಕಲಿತುದನ್ನು ಉಪಯೋಗಿಸಲು ಜ್ಞಾನಹೀನರಾದರೆ ಅದು ಅಜ್ಞಾನ ಅಲ್ಲವೇ?
ಜ್ಞಾನ ಎನ್ನುವುದು ಖಡ್ಗ. ಖಡ್ಗವನ್ನು ಮಸೆಯತ್ತಾ, ಬಳಸುತ್ತಾ ಇದ್ದಂತೆ ಹರಿತವಾಗುಳಿಯುತ್ತದೆ. ಹಾಗೆಯೇ ಬಳಕೆಯಾಗದ ಜ್ಞಾನವು ಮಸುಕು ಆಗತೊಡಗುತ್ತದೆ. ಮಸುಕಾಗುವುದೆಂದರೆ ಅಂಧಗೊಳ್ಳುವುದೆಂದರ್ಥ. ಜ್ಞಾನದಾನದಿಂದ ಜ್ಞಾನವು ನಿತ್ಯ ಹೊಳಪನ್ನು ಪಡೆಯುತ್ತಲೇ ಇರುತ್ತದೆ. ಜ್ಞಾನವು ಆದಾನ ಪ್ರದಾನಗಳಿಗೊಳಗಾದಾಗ ಜ್ಞಾನದ ವಿಸ್ತಾರ ಮತ್ತು ತೀಕ್ಷ್ಣತೆ ದೃಢವಾಗುತ್ತಲೇ ಹೋಗುತ್ತದೆ. ನಿರಂತರವಾಗಿ ಹರಿತವಾಗಿರುವ ಖಡ್ಗದಂತೆ ನಿತ್ಯೋಪಯುಕ್ತವಾಗುತ್ತದೆ. ಅನುಭವಗಳು ಜ್ಞಾನವರ್ಧನೆಗೆ ಶಕ್ತಿ ತುಂಬುತ್ತವೆ. ರಾಜರನ್ನು ಸೋಲಿಸಲು ಹಿಂದಿನ ಕಾಲದಲ್ಲಿ ಖಡ್ಗಗಳು ಬಳಕೆಯಾಗುತ್ತಿದ್ದುವು. ಪಂಡಿತರನ್ನು ಸೋಲಿಸಲು ರಾಜರ ಖಡ್ಗದ ಬದಲಿಗೆ ಜ್ಞಾನ ಖಡ್ಗವೇ ಬೇಕಾಗುತ್ತಿತ್ತು. ನಮಗೆ ಬೇಕಾದ ಜ್ಞಾನವು ಅಸಂಖ್ಯ ಗ್ರಂಥಗಳಲ್ಲಿ ಸಂಚಯವಾಗಿವೆ. ಸಮಯ ಮತ್ತು ಮನಸ್ಸುಗಳನ್ನು ಹೊಂದಾಣಿಕೆ ಮಾಡಿ ಗ್ರಂಥಾಲಯಗಳ ಬಳಕೆ ಮಾಡುವುದು ಅತ್ಯಗತ್ಯವಾಗಿದೆ. ಲೋಕಜ್ಞಾನ ನಮಗೆ ವಶವಾಗಲು ಲೋಕಸಂಚಾರವೂ, ಬಂಧು ಬಳಗ ಮತ್ತು ಸಾರ್ವಜನಿಕರೊಡನೆ ಬೆರೆಯುವ ಮನೋಗುಣವೂ ಬೇಕಾಗುತ್ತದೆ.
ರಾಜಾಧಿರಾಜರಿಗಿಂತ ಜ್ಞಾನಕ್ಕೆ ಅಧಿಕ ಗೌರವ ಇದೆ. ರಾಜನ ಆಸ್ಥಾನದೊಳಗೆ ಜ್ಞಾನಿಯು ಪ್ರವೇಶಿಸುತ್ತಿದ್ದರೆ ಸ್ವಯಂ ರಾಜನೂ ಎದ್ದು ನಿಂತು ಗೌರವಿಸುವುದನ್ನು ಕಥೆಗಳಲ್ಲಿ ಓದಿದ್ದೇವೆ. ರಾಜನಿಗೆ ಅವನ ರಾಜ್ಯದೊಳಗೆ ಮಾತ್ರ ಗೌರವವಿದ್ದರೆ ಜ್ಞಾನಿಗೆ ಸರ್ವತ್ರ ಗೌರವಿರುತ್ತದೆ. ಜ್ಞಾನಿಗೆ ಇಂದಿಗೂ ಎಲ್ಲೆಡೆ ಮನ್ನಣೆಯಿದೆ.
ನಾವು ಮಹಾಜ್ಞಾನಿಗಳಾಗಿ ನಮ್ಮೂರು ಮತ್ತು ಪರ ಊರುಗಳಲ್ಲಿ ಗೌರವಾದರಗಳಿಗೆ ಭಾಜನರಾಗಲು ಶ್ರಮಿಸೋಣ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************