ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 20
Friday, July 28, 2023
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 20
ಹದಿನೈದು ವರುಷಗಳ ಹಿಂದೆ ಮಕ್ಕಳ ಗಣತಿಗಾಗಿ ಮನೆ-ಮನೆ ಭೇಟಿ ಮಾಡುವ ಸಂದರ್ಭ. ಊರಿಗೆ ಹೊಸಬನಾಗಿದ್ದರಿಂದ ಮನೆಯನ್ನು ಗುರುತಿಸಲು ನಾಲ್ಕು ಮಕ್ಕಳನ್ನು ಜತೆಗೆ ಕರೆದುಕೊಂಡು ಮಕ್ಕಳ ಗಣತಿ ಕಾರ್ಯಕ್ರಮ ಮಾಡುತ್ತಿದ್ದೆ. ಮಕ್ಕಳ ಜತೆಗೆ ಮಾತಾನಾಡುತ್ತಾ, ಊರವರ ಹಾಗೂ ಭೇಟಿ ಮಾಡಿದ ಮನೆಯವರ ಕಥೆಗಳನ್ನು - ಕುಟುಂಬ ಹಿನ್ನೆಲೆಗಳನ್ನು ಕೇಳುತ್ತಾ ತುಂಬಾ ಖುಷಿಯಿಂದ ಮನೆಮನೆ ಸುತ್ತಿ ಹೊಸ ಹೊಸ ಅನುಭವಗಳನ್ನು ಪಡೆಯುತ್ತಿದ್ದ ಸಂದರ್ಭವದು.
ಲೇಖಕರು : ಗೋಪಾಲಕೃಷ್ಣ ನೇರಳಕಟ್ಟೆ
ಸರಕಾರಿ ಪದವಿ ಪೂರ್ವ ಕಾಲೇಜು
(ಪ್ರೌಢಶಾಲೆ ವಿಭಾಗ) ನಾರ್ಶ ಮೈದಾನ
ಬಂಟ್ಟಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಸುಂದರವಾದ ಹಳ್ಳಿ ಹಿನ್ನೆಲೆಯ ಮನೆಯೊಂದರ ಮಕ್ಕಳ ಗಣತಿ (ಸೆನ್ಸಸ್) ಮಾಹಿತಿ ಪಡೆದು ಅವರ ಮನೆ ಮುಂದಿನ ಅಡಿಕೆ ಸಲಾಕೆಯಿಂದ ಮಾಡಿದ ಗೇಟ್ ನ್ನು ದಾಟುವ ಸಂದರ್ಭದಲ್ಲಿ ಸಲಾಕೆಯ ಮುಳ್ಳು (ಸೆರಿಬೆ) ಕೈಗೆ ತಾಕಿತು. ಕೈ ನೋವಿನಿಂದ ಒಮ್ಮೆಲೆ ಚೀರಾಡಿದೆ. ಜತೆಗಾರ ಮಕ್ಕಳು ಬೇಸರ ಪಟ್ಟರು. ನಂತರ ನನ್ನಷ್ಟಕ್ಕೆ ಸಮಾಧಾನ ಪಡುತ್ತಾ ಮುಂದುವರಿದೆ.
"ಸರ್ ಕೈಗೆ ತಾಗಿರುವ ಮುಳ್ಳನ್ನು ತೆಗೆಯಿರಿ" ಎಂದು ನನ್ನ ಜತೆಗಿದ್ದ 8ನೇ ತರಗತಿಯ ಪ್ರವೀಣ ಹೇಳಿದ. "ಏಕೋ ಪ್ರವೀಣ, ಮುಳ್ಳನ್ನು ತೆಗೆಯುತ್ತಾ ಕೂತರೆ ನಮ್ಮ ಕೆಲಸ ಮುಗಿಯಲಿಕ್ಕಿಲ್ಲ. ಮೊದಲು ಮಕ್ಕಳ ಗಣತಿಯ ಮನೆ ಭೇಟಿ ಮುಗಿಯಲಿ. ಸಂಜೆ ಮನೆಗೆ ಹೋದ ನಂತರ ನಿಧಾನವಾಗಿ ಮುಳ್ಳನ್ನು ತೆಗೆದರಾಯಿತು" ಎಂದೆ. "ಇಲ್ಲ ಸರ್, ಹೇಗೂ ಮುಳ್ಳನ್ನು ತೆಗೆಯಲೇ ಬೇಕು ತಾನೆ. ಅದನ್ನು ಸಂಜೆಯ ಬದಲು ಈಗಲೇ ತೆಗೆಯಿರಿ ಸರ್. ಅದನ್ನು ಹಾಗೆಯೇ ಬಿಟ್ಟರೆ ಕೈಯ ನೋವು ಹೆಚ್ಚಾಗಿ ಸಂಜೆವರೆಗೂ ಇರುತ್ತದೆ. ಈಗಲೇ ತೆಗೆದರೆ ನೋವು ಕಡಿಮೆ ಆಗುತ್ತದೆ." ಎಂದ. ನಾನು "ಆಯಿತು ಮಾರಾಯ" ಎಂದು ಹೇಳಿ ಮುಂದಿನ ಮನೆಯ ಜಗಲಿಯಲ್ಲಿ ಕುಳಿತೆ. ಪ್ರವೀಣನು ಪರಿಚಯ ಇರುವ ಆ ಮನೆಯೊಳಗೆ ಹೋಗಿ ಸೂಜಿಯೊಂದನ್ನು ತಂದು ನನ್ನ ಕೈಯಲ್ಲಿ ಇಟ್ಟ. "ಸರ್, ಮುಳ್ಳನ್ನು ಈಗಲೇ ತೆಗೆಯಿರಿ " ಎಂದ. ಅವನ ಮುಗ್ಧ ಭಾವ ಹಾಗೂ ಕಾಳಜಿ ನೋಡಿ ಕೊನೆಗೆ ಮರುಮಾತಾನಾಡದೆ ಸೂಜಿಯ ಸಹಾಯದಿಂದ ಮುಳ್ಳನ್ನು ತೆಗೆದೆ. ಒಮ್ಮೆ ನೋವು ಅನಿಸಿದರೂ ಕೊನೆಗೊಮ್ಮೆ ಆರಾಮ ಎನಿಸಿತು. ಆ ನಂತರ ನೋವು ಮಾಯವಾಯಿತು. ಆ ದಿನ ತುಂಬಾ ಆರಾಮದಿಂದ ಸಂಜೆವರೆಗೂ ಮನೆ ಭೇಟಿ ಮುಂದುವರೆಸಿದೆ.
ಆ ವಿದ್ಯಾರ್ಥಿ ಹೇಳಿದ ಮಾತಿನಲ್ಲಿ ಅರ್ಥಪೂರ್ಣವಾದ ಒಳಗುಟ್ಟಿದೆ. ನಮ್ಮ ಬದುಕಿಗೆ ಬಂದಿರುವ ಮುಳ್ಳುಗಳಿಂತಿರುವ ಯಾವುದೇ ಸಮಸ್ಯೆಗಳನ್ನು "ಮತ್ತೆ ಪರಿಹರಿಸುವಾ... ಮತ್ತೆ ನೋಡೋಣ" ಎಂದು ಕಾಲ ದೂಡುತ್ತಾ ಹೋದರೆ ನಮ್ಮ ನೋವನ್ನು ಮತ್ತಷ್ಟು ಕಾಲಕ್ಕೆ ವಿಸ್ತರಿಸಿದಂತೆ...! ಆ ಕ್ಷಣದಲ್ಲಿಯೇ ಅದನ್ನು ಪರಿಹರಿಸಿದರೆ ನೆಮ್ಮದಿಯ ಬದುಕಿಗೆ ಹತ್ತಿರವಾದಂತೆ. ಹಾಗಾಗಿ ಚುಚ್ಚಿರುವ ಮುಳ್ಳನ್ನು ಆ ಕ್ಷಣದಲ್ಲಿಯೇ ಹೊರತೆಗೆಯುವ ಕೌಶಲ ಬೆಳೆಸೋಣ. ಈ ಘಟನೆಯನ್ನು ಆಗಾಗ ನೆನಪು ಮಾಡುತ್ತಾ ನೋವಿನಿಂದ ಮುಕ್ತನಾಗುವುದನ್ನು ಕಲಿತೆ. ಈ ಪಾಠ ಕಲಿಸಿದ ಪ್ರವೀಣನಿಗೆ ನನ್ನದೊಂದು ಸಲಾಂ.
ಸರಕಾರಿ ಪದವಿ ಪೂರ್ವ ಕಾಲೇಜು
(ಪ್ರೌಢಶಾಲೆ ವಿಭಾಗ) ನಾರ್ಶ ಮೈದಾನ
ಬಂಟ್ಟಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob: 9980223736
*******************************************