-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 18

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 18

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 18
ಲೇಖಕರು : ಪ್ರೇಮ್, ಸಹಶಿಕ್ಷಕಿ
ಸರಕಾರಿ ಪದವಿಪೂರ್ವ ಕಾಲೇಜು ಮೂಲ್ಕಿ
ಮೂಲ್ಕಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
'
                        
       ನನ್ನ ಮನ ಕಲಕಿದ ಘಟನೆ ಇದು. ಎಂದೂ ಮರೆಯಲಾಗದ್ದು. ನಾವೆಲ್ಲಾ ನಮ್ಮ ಬಾಲ್ಯದಲ್ಲಿ ನಮ್ಮ ಮನೆಯ ಹತ್ತಿರ ಶಿಕ್ಷಕರ ತಲೆ ಎಲ್ಲಾದರೂ ಕಂಡರೆ ಸಾಕು, ಹೆದರಿ ಒಳಗೆ ಓಡಿ ಅಡುಗೆ ಕೋಣೆಯಲ್ಲಿ ಕದ್ದು ಕುಳಿತುಕೊಳ್ಳುತ್ತಿದ್ದೆವು. ಆದರೆ ಈಗಿನ ಕಾಲ ಹಾಗಿಲ್ಲ. ಶಿಕ್ಷಕರು ವಿದ್ಯಾರ್ಥಿಗಳಿಗೆ ಹೆದರುವ ಕಾಲ. ನಮಗೆ ಏನಾದರೂ ಶಾಲೆಯಲ್ಲಿ ಪೆಟ್ಟು ಬಿದ್ದರೆ ಮನೆಯಲ್ಲಿ ಬಂದು ಅದನ್ನು ಹೇಳಿದರೆ, ಕಾರಣವಿದ್ದು ಪೆಟ್ಟು ಬಿದ್ದಿದ್ದರೆ, ನಮಗೆ ಮನೆಯಲ್ಲಿ ಮತ್ತೆ ಹಿರಿಯರ ಸಹಸ್ರ ನಾಮರ್ಚನೆ ಗ್ಯಾರೆಂಟಿ ಇರುತ್ತಿತ್ತು. ಆದರೆ ಈಗಿನ ಕಥೆಯೇ ಬೇರೆ. 

      ಹೇಳಿ ಕೇಳಿ ವಿಜ್ಞಾನ, ಗಣಿತ ಮತ್ತು ಆಂಗ್ಲ ಭಾಷೆ ಸಾಧಾರಣವಾಗಿ ಎಲ್ಲಾ ಮಕ್ಕಳಿಗೂ ಕ್ಲಿಷ್ಟಕರವಾದ ವಿಷಯಗಳು. ಹಾಗಾಗಿ ಅವುಗಳನ್ನು ಬೋಧಿಸುವ ಶಿಕ್ಷಕರು ಬಹಳವೇ ಶಿಸ್ತಿನಲ್ಲಿ ಪಾಠಗಳನ್ನು ಮಾಡಿ ವಿಷಯಗಳನ್ನು ಹೇಳಿಕೊಡದಿದ್ದರೆ ಮುಂದೆ ಮಕ್ಕಳಿಗೆ ಬಹಳವೇ ತೊಂದರೆಯಾಗುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಮನೆ ಕೆಲಸವನ್ನು ಸರಿಯಾಗಿ ತಿದ್ದಬೇಕಾಗುತ್ತದೆ. ಎಲ್ಲೇ ತಪ್ಪುಗಳಿದ್ದರೂ ಕೂಡ ಅವುಗಳನ್ನು ಸರಿಪಡಿಸಿ ವಿದ್ಯಾರ್ಥಿಗಳಿಗೆ ಹೀಗಲ್ಲ ಹೀಗೆ ಎಂದು ಹೇಳಿ ಕೊಡಬೇಕಾಗುತ್ತದೆ. ವ್ಯಾಕರಣ ಆಗಿರಲಿ ಅಥವಾ ಯಾವುದೇ ಕಾನ್ಸೆಪ್ಟ್ ಆಗಿರಲಿ ಅವುಗಳನ್ನು ಸರಿಯಾದ ಕ್ರಮದಲ್ಲಿಯೇ ಹೇಳಿಕೊಡಬೇಕಾದದ್ದು ನಮ್ಮ ಕರ್ತವ್ಯ. 

        ಹಾಗೆ ಒಂದು ದಿನ ಒಂಭತ್ತನೇ ತರಗತಿಯಲ್ಲಿ ನಾನು ಹಿಂದಿನ ದಿನದ ಮನೆ ಕೆಲಸದ ಬಗ್ಗೆ ಎಲ್ಲಾ ವಿದ್ಯಾರ್ಥಿಗಳನ್ನು ಕೇಳುತ್ತಿದ್ದೆ. ಮನೆ ಕೆಲಸವನ್ನು ಪೂರ್ತಿಯಾಗಿ, ಅರ್ಧಂಬರ್ಧ ಮಾಡಿ, ಮತ್ತೆ ಮಾಡದೇ ಇರುವವರು ಕೂಡ ಇದ್ದರು. ಮನೆ ಕೆಲಸ ಮಾಡಿದ ವಿದ್ಯಾರ್ಥಿಗಳಿಗೆ ಅದನ್ನು ನೋಡಿ ಸರಿಯಾಗಿ ತಿದ್ದಿ ಕೊಡುತ್ತಿದ್ದರೆ, ಮನೆ ಕೆಲಸ ಅರ್ಧಂಬರ್ಧ ಮಾಡಿದ ಮಕ್ಕಳಿಗೆ ಒಂದು ಸಣ್ಣ ಕೋಲಿನಲ್ಲಿ ಕೈಗೆ ಒಂದು ಪೆಟ್ಟು ಕೊಡುತ್ತಿದ್ದೆ. ಹಲವು ವರ್ಷಗಳ ಹಿಂದಿನ ಕಾಲವಾದ್ದರಿಂದ ವಿದ್ಯಾರ್ಥಿಗಳಿಗೆ ಪೆಟ್ಟು ಕೊಡಲೇಬಾರದು, ಕಣ್ಣರಳಿಸಿಯೂ ನೋಡಬಾರದು, ಏನಾದರೂ ಪದಗಳಿಂದ ಅವರನ್ನು ಗದರಿಸಬಾರದು ಎಂಬೆಲ್ಲ ಕಾನೂನುಗಳು ಆಗಿನ್ನೂ ಬಂದಿರಲಿಲ್ಲ. ಯಾರೆಲ್ಲ ಮನೆ ಕೆಲಸ ಮಾಡಿಲ್ಲವೋ ಅವರು ಎರಡೆರಡು ಪೆಟ್ಟುಗಳನ್ನು ಪಡೆಯಬೇಕಿತ್ತು. 

     ಹಾಗೆ ಒಂದು ಹುಡುಗ. ಹೆಸರು ವಿನಯ್ ಎಂದಿರಲಿ. ವಿನಯವೆಂದರೆ ಏನೆಂದೇ ತಿಳಿಯದವ. ಶಾಲೆಗೆ ಆಗಾಗ ಕಾರಣವಿಲ್ಲದೆ ತಪ್ಪಿಸಿಕೊಳ್ಳುತ್ತಿದ್ದ. ಕರೆದುಕೊಂಡು ಬರಲು ಶಿಕ್ಷಕರು ಹೋದರೆ ಮರದಲ್ಲಿ ನೇತಾಡುತ್ತ ಜೋಕ್ ಮಾಡುತ್ತಿದ್ದ, ಇಲ್ಲದೆ ಹೋದರೆ ಕೆರೆಗೆ ಹಾರಿ ಈಜಾಡುತ್ತಿದ್ದ. ಹೆದರಿದ ಶಿಕ್ಷಕರು ಹಿಂದೆ ಬರುತ್ತಿದ್ದರು. ಅಂತೂ ಇಂತೂ ಒಪ್ಪಿಸಿ ಅವನನ್ನು ಶಾಲೆಗೆ ಕರೆದು ತಂದಾಯ್ತು. 

     ಅವನು ಆ ದಿನ ಮನೆ ಕೆಲಸವನ್ನು ಮಾಡಿರಲಿಲ್ಲ. ಸರಿ, ನನ್ನ ನಿಯಮದ ಪ್ರಕಾರ ಅವನು ಎರಡು ಕೈಗೆ ಎರಡು ಪೆಟ್ಟು ತಿನ್ನಬೇಕಿತ್ತು. ಆದರೆ ಅವನು ಪೆಟ್ಟು ತಿನ್ನಲು ತಯಾರಿರಲಿಲ್ಲ. ಬೇಡ ಮೇಡಂ, ಬೇಡ ಎಂದು ಜೋರು ಜೋರಾಗಿ ಹೇಳುತ್ತಿದ್ದ. "ನೀನು ಮನೆ ಕೆಲಸ ಮಾಡದ ಕಾರಣ ನೀನು ಎರಡು ಪೆಟ್ಟು ತಿನ್ನಲೇಬೇಕು" ಎಂದು ಹೇಳಿದೆ. ಸರಿ ಎಂದು ಒಂದು ಕೈ ಮುಂದೆ ಚಾಚಿದ. ಆದರೆ ನಾನು ಇನ್ನೇನು ಪೆಟ್ಟು ಕೊಡಬೇಕು ಎನ್ನುವಷ್ಟು ಹೊತ್ತಿಗೆ ಕೈಯನ್ನು ಹಿಂದಕ್ಕೆ ಎಳೆದುಕೊಂಡ. ಕೈಗೆ ಹೊಡೆದ ಪೆಟ್ಟು ಕೈತಪ್ಪಿ ಆ ಕೋಲಿನ ತುದಿಯು ಕಣ್ಣಿನ ರೆಪ್ಪೆಗೆ ಸ್ವಲ್ಪ ತಾಗಿತ್ತು.

       ಹೇಳಿ ಕೇಳಿ ನಮ್ಮ ಕಣ್ಣಿನ ರೆಪ್ಪೆ ಕೂಡ ಸೂಕ್ಷ್ಮವಾದಂತಹ ಒಂದು ಅಂಗ. ಹಾಗಾಗಿ ಕೋಲಿನ ತುದಿ ಕಣ್ಣಿನ ರೆಪ್ಪೆಗೆ ತಾಗಿದ ಕೂಡಲೇ ಕಣ್ಣು ಬಹಳ ಊದಿಕೊಂಡ ಹಾಗೆ ಕಂಡಿತು. ಯಾವತ್ತೂ ವಿದ್ಯಾರ್ಥಿಗಳಿಗೆ ಪೆಟ್ಟು ಕೊಡದೆ ಇರುವ ನನಗೆ ಇದು ಭಯಂಕರ ಭಯವನ್ನು ಹುಟ್ಟಿಸಿತು. ಏನು ಮಾಡುವುದೆಂದು ತಿಳಿಯದೆ ನಡೆದ ಘಟನೆಯನ್ನು ಮುಖ್ಯ ಶಿಕ್ಷಕರಲ್ಲಿ ಹೇಳಿಬಿಟ್ಟೆ. 

      ನನ್ನ ದುರದೃಷ್ಟವೋ ಏನೋ ಎಂಬಂತೆ ಅವನ ಕಣ್ಣಿನಿಂದ ಧಾರಾಕಾರವಾಗಿ ನೀರು ಸುರಿಯುತ್ತಲೇ ಇತ್ತು. ಭಯಪಟ್ಟುಕೊಂಡ ನಾನು ಅವನನ್ನು ಬೇರೆ ವಿದ್ಯಾರ್ಥಿಗಳ ಜೊತೆ ಮನೆಗೆ ಕಳುಹಿಸಿದೆ. 

       ಭಯದಿಂದ ಸಂಜೆಯಾಗುತ್ತಲೇ ಎರಡು ಮೂರು ಬಾರಿ ಅವನ ತಂದೆಗೆ ಫೋನ್ ಮಾಡಿ ವಿಚಾರಿಸಿದೆ. ಮೊದಲ ದಿನ ಚೆನ್ನಾಗಿ ಮಾತನಾಡಿದ ಮನುಷ್ಯ ಆ ಹುಡುಗನ ತಂದೆ ಮರುದಿನ ನಾನು ಫೋನ್ ಮಾಡುವಾಗ, ಬೇರೆ ಯಾರದೋ ಮಾತು ಕಟ್ಟಿಕೊಂಡು, "ನಿಮ್ಮ ಶಾಲೆಗೆ ನನ್ನ ಮಗುವನ್ನು ನಾನು ಹೊಡೆತ ತಿನ್ನಲು ಕಳಿಸಿದ್ದಲ್ಲ, ಹೊಡೆದು ಬುದ್ದಿ ಕಲಿಸುವುದು ಬೇಡ. ನಮ್ಮ ಮಕ್ಕಳಿಗೆ ಹೇಗೆ ಬುದ್ದಿ ಕಲಿಸಬೇಕೆಂದು ನಮಗೆ ತಿಳಿದಿದೆ. ನಿಮ್ಮ ಮೇಲೆ ನಾವು ಪೊಲೀಸ್ ಕಂಪ್ಲೇಂಟ್ ಕೊಡುತ್ತೇವೆ. ನಿಮಗೆ ಏನು ಹೇಳಬೇಕು ಅದನ್ನು ಪೊಲೀಸ್ ಸ್ಟೇಷನ್ ನಲ್ಲಿ ಹೇಳಿ. ನನ್ನ ಮಗ ಹೊಡೆಯುವಂತಹ ತಪ್ಪು ಅದೇನು ಮಾಡಿದ? ನೀವು ಇಂದು ನನ್ನ ಮಗನಿಗೆ ಕಣ್ಣಿಗೆ ಹೊಡೆದಿದ್ದೀರಿ. ನಾಳೆಯ ದಿನ ನನ್ನ ಮಗನ ಕಣ್ಣು ಹೋದರೆ ನೀವೇ ಜವಾಬ್ದಾರರಾಗುತ್ತೀರಾ...? ಅದು ನನ್ನ ಮಗನ ದೇಹದ ಒಂದು ಮುಖ್ಯ ಅಂಗದ ಪ್ರಶ್ನೆ...." ಎಂದೆಲ್ಲಾ ಜೋರಾಗಿ ಹೇಳಿದರು. 

      ಎರಡು ದಿನ ನನಗೆ ಊಟ ಸೇರದಾಯಿತು. ರಾತ್ರಿಯಾದರೂ ನಿದ್ದೆ ಬರದಾಯಿತು. ಅಳುತ್ತಾ ಕಾಲ ಕಳೆದುಬಿಟ್ಟೆ. ಏನು ಮಾಡುವುದೋ ತೋಚದಾಯಿತು. ಹೇಳಿಕೊಳ್ಳಲು ಪರಿಚಯದವರು ಅಲ್ಲಿ ಯಾರೂ ಇರಲಿಲ್ಲ. ತಪ್ಪಿಸಿಕೊಳ್ಳುವುದು ಹೇಗೆ ಎಂದೂ ತಿಳಿದಿರಲೇ ಇಲ್ಲ. "ಹೇಗೂ ನನ್ನ ಮೇಲೆ ಕಂಪ್ಲೇಂಟ್ ಹೋಗುವುದು ಗ್ಯಾರಂಟಿ" ಎಂದು ನನಗೆ ಖಚಿತವಾಯಿತು. ನನ್ನ ಮಗಳು ಆಗ ತುಂಬಾ ಚಿಕ್ಕವಳಾಗಿದ್ದಳು. ಬಹುಶಃ ಎರಡು ವರ್ಷ ವಯಸ್ಸು ಇರಬೇಕು. "ಏನಾದರೂ ನನ್ನನ್ನು ಪೊಲೀಸರು ಬಂದು ಎಳೆದುಕೊಂಡು ಹೋದರೆ ನನ್ನ ಮಗುವನ್ನು ಯಾರು ನೋಡಿಕೊಳ್ಳುತ್ತಾರೆ...?" ಎಂದು ಬೇಸರವಾಗಿ ರಾತ್ರಿ ಇಡೀ ನಿದ್ರೆ ಬರಲಿಲ್ಲ. ಬೆಳಗಿನ ಜಾವ ನಿದ್ದೆ ಬರುವಾಗಲೂ ನಾನು ಕನಸಿನಲ್ಲಿ ನನ್ನ ಮಗುವಿನ ಜೊತೆ ಪೊಲೀಸ್ ಸ್ಟೇಷನ್ ಒಳಗೆ ಕುಳಿತಂತಹ ಅನುಭವ ಆಗಿ ವಿಪರೀತ ಭಯ ಆಗುತ್ತಿತ್ತು. ಭಯದ ನೆರಳಿನಲ್ಲಿ ಬದುಕ ತೊಡಗಿದೆ. 

       ಅಂದೇ ನನ್ನ ವೃತ್ತಿ ಜೀವನದಲ್ಲಿ ಹೊಸತೊಂದು ಪಾಠವನ್ನು ಕಲಿತುಕೊಂಡೆ. ಅದೇನೆಂದರೆ ವಿದ್ಯಾರ್ಥಿಗಳು ಹೋಂ ವರ್ಕ್ ಮಾಡದೆ ಇದ್ದರೆ ಅದನ್ನು ನಾವು ಕೇಳುವುದು ತಪ್ಪು ಎಂದಾದರೆ ಶಿಕ್ಷಕರು ಯಾವ ರೀತಿ ಹೇಳಿ ಕೊಡುವುದು? ಪಾಠ ಬೋಧನಾ ವಿಧಾನಗಳನ್ನು ಬದಲಾಯಿಸಿಕೊಂಡೆ. ಏನೇನು ಮನೆ ಕೆಲಸ ಕೊಡಬೇಕಿತ್ತೋ, ಅದನ್ನು ಶಾಲೆಯಲ್ಲಿಯೇ ಬರೆಯಿಸುವುದು. ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ವರ್ಕ್ ಕೊಡಬೇಕೆಂದಿದ್ದರೂ ಕೂಡ ಅದನ್ನು ಶಾಲೆಯಲ್ಲಿಯೆ ಬರೆಯಿಸುವುದು. ಅದನ್ನೇ ಅಭ್ಯಾಸ ಮಾಡಿಕೊಂಡೆ. "ಯಾವುದೇ ಪೋಷಕರಿಗೂ ಕೂಡ ನಾನು ಕೊಟ್ಟ ಮನೆ ಕೆಲಸ ಅಥವಾ ಪ್ರಾಜೆಕ್ಟ್ ವರ್ಕ್ ಹೊರೆ ಅನ್ನಿಸಬಾರದು. ವಿದ್ಯಾರ್ಥಿಗಳಿಗೆ ನಾನು ಶಿಕ್ಷೆ ಕೊಡುವ ಹಾಗೆ ಆಗಬಾರದು. ಆಂಗ್ಲ ಭಾಷೆಯನ್ನು ಅವರು ಖುಷಿ ಖುಷಿಯಾಗಿ ಕಲಿಯಬೇಕು. ಭಾಷೆಯನ್ನು ನಾನು ಸುಲಭವಾಗಿ ಹೇಳಿಕೊಡಬೇಕು" ಅಂದುಕೊಂಡೆ. 

          ನಾನು ಮರುದಿನದಿಂದ ಮನೆಕೆಲಸ ತಿದ್ದುವಾಗ ವಿದ್ಯಾರ್ಥಿಗಳು ಅದನ್ನು ಒಪ್ಪಿಸದೆ ಇದ್ದರೆ ಅವರನ್ನು ಗದರಿಸುವ, ಹೊಡೆಯುವ , ಹಕ್ಕು ನನಗಿಲ್ಲ ಎಂಬ ಸತ್ಯವನ್ನು ಅರಿತು ಅದನ್ನು ನೆನಪಿಟ್ಟುಕೊಂಡೆ. ಆದ್ದರಿಂದ ಇನ್ನು ಮುಂದೆ ನಾನು ಯಾವುದೇ ರೀತಿಯ ಮನೆ ಕೆಲಸ ಕೊಡುವುದಿಲ್ಲ. ಅಕಸ್ಮಾತ್ ಕೊಟ್ಟರೂ ಕೂಡ ಅದನ್ನು ಬರೆಯದೇ ಇದ್ದರೆ ಕೇಳಲಾಗದು. ಅದಕ್ಕೆ ಯಾವುದೇ ರೀತಿಯ ಪನಿಷ್ಮೆಂಟ್ ಕೊಡಲಾಗದು. ಆದ್ದರಿಂದ ಶಿಕ್ಷಕರು ಸರಕಾರಿ ಶಾಲೆಗಳಲ್ಲಿ ಯಾವುದೇ ವಿದ್ಯಾರ್ಥಿಗೆ ಒತ್ತಡ ಹೇರುವಂತಿಲ್ಲ. ಅವರು ಶಾಲೆಗೆ ಬರುವುದೇ ದೊಡ್ಡದು. ಅಕಸ್ಮಾತ್ ಅವರು ದೀರ್ಘ ಗೈರು ಹಾಜರಾದರೆ ಅಥವಾ ಆಗಾಗ ಬರುವುದೇ ಇಲ್ಲ ಎಂದಿದ್ದರೆ, ಅವರ ಮನೆಗೆ ಹೋಗಿ ಅವನನ್ನು ಕರೆದುಕೊಂಡು ಬರುವ ಹಾಗೆ ನಾವು ಮನವೊಲಿಸಬೇಕು...!! 
   
      ಯಾರೋ ಒಬ್ಬರು ತರಬೇತಿ ನೀಡುತ್ತಾ ಹೇಳಿದ ಹಾಗೆ ಇಂದು ಹಿಂದಿನ ಹಾಗೆ ಗಂಜಿ ಅನ್ನ ತಿಂದು ಶಾಲೆಗೆ ಬರುವ ಮಕ್ಕಳಲ್ಲ, ಅವರಿಗೆ ಬೋಧನಾ ಪದ್ಧತಿ ಹಿಂದಿನದ್ದು ರುಚಿಸುವುದಿಲ್ಲ. ಹೀಗೆಲ್ಲಾ ಫಾಸ್ಟ್ ಫುಡ್, ನೂಡಲ್ಸ್ , ಪಿಜ್ಜಾ, ಬರ್ಗರ್ ಇವುಗಳನ್ನು ತಿಂದು ಬೆಳೆದ ಮಕ್ಕಳಿಗೆ ಕಲಿಕೆಯ ವಿಧಾನವು ಕೂಡ ಪಿಜ್ಜಾ, ಬರ್ಗರ್, ನೂಡಲ್ಸ್ನಂತೆ ವಿವಿಧತೆಯಲ್ಲಿ ಕೂಡಿರಬೇಕು. ಮತ್ತೆ ಹೆಚ್ಚಿನ ಮಕ್ಕಳು ಹುಟ್ಟುವಾಗಲೇ ದೈಹಿಕವಾಗಿ ತೊಂದರೆಗೆ ಒಳಗಾಗಿರುವ ಕಾರಣ ಅವರ ಪೋಷಕರು ಹೇಗೆ ಹೇಳುತ್ತಾರೋ ಹಾಗೆ ನಾವು ಅವರನ್ನು ನೋಡಿಕೊಳ್ಳಬೇಕು. ಈ ತರದ ತರಹೇವಾರಿ ಪದ್ಧತಿಯನ್ನು ಅನುಸರಿಸಿದಾಗ ಮಾತ್ರ ನಾವು ಶಿಕ್ಷಕರಾಗಿ ಮುಂದುವರೆಯಲು ಸಾಧ್ಯ. ಇಲ್ಲದೆ ಹೋದರೆ ಹಿಂದಿನ ಪದ್ದತಿಯನ್ನು ಅನುಸರಿಸುತ್ತೇವೆ ಅಂದುಕೊಂಡರೆ ನಮ್ಮ ಕೆಲಸದ ಮಾದರಿ ಕ್ಲಿಷ್ಟಕರವೆನಿಸುತ್ತದೆ.  

       ಹಾಗೆ ಸರಿಯಾದ ಬಳಿಕ ಆ ವಿದ್ಯಾರ್ಥಿಯ ಪೋಷಕರ ಬಳಿ ಮಾತನಾಡದೆ, ವಿದ್ಯಾರ್ಥಿಯಲ್ಲಿ ಅವನು ಚೆನ್ನಾಗಿದ್ದಾನೆ ಎಂದು ಕೇಳಿ ತಿಳಿದುಕೊಂಡ ಬಳಿಕ ನಿರಾಳವಾಗಿ ಮನಸ್ಸಿಗೊಂದಷ್ಟು ನೆಮ್ಮದಿಯನ್ನು ಪಡೆದುಕೊಂಡು ಮುಂದಿನ ಕಲಿಕಾ ಚಟುವಟಿಕೆಯ ಪ್ರಕ್ರಿಯೆಯನ್ನು ಬದಲಾಯಿಸಿಕೊಂಡು, ಉತ್ತಮವಾದ ಶಿಕ್ಷಕಿ ಎನಿಸಿಕೊಳ್ಳಲು ನನ್ನನ್ನು ನಾನೇ ಬದಲಾಯಿಸಿಕೊಂಡೆ. ಆದರೆ ಆ ಘಟನೆಯನ್ನು ನೆನೆಯುತ್ತಿದ್ದರೆ ಮನದಲ್ಲಿ ಈಗಲೂ ಝುಂ ಎನ್ನುತ್ತದೆ ಒಮ್ಮೆ!

     ಗುರುಗಳ ಕೆಲಸ ದೇವರ ಕೆಲಸ. ಒಬ್ಬ ವೈದ್ಯ ತಪ್ಪು ಮಾಡಿದರೆ ಒಂದು ಎರಡು ರೋಗಿಯಷ್ಟೇ ಸಾಯಬಹುದು. ಆದರೆ ಒಬ್ಬ ಶಿಕ್ಷಕ ತಪ್ಪು ಮಾಡಿದರೆ ಅವನ ಜೀವನದಲ್ಲಿ ಹಲವಾರು ವಿದ್ಯಾರ್ಥಿಗಳ ಬಾಳು ನಾಶವಾಗುತ್ತದೆ. ಆದ ಕಾರಣ ಶಿಕ್ಷಕರ ಕೆಲಸವು ಮಹಾನ್ ವ್ಯಕ್ತಿತ್ವಗಳನ್ನು ನಿರ್ಮಿಸುವ ಸಲುವಾಗಿ ಅಲ್ಲದೆ , ಪೋಷಕರೆದುರು ಮಕ್ಕಳ ತಪ್ಪನ್ನು ಹೇಳಲೂ ಆಗದೆ ಎರಡು ದೋಣಿಯ ಮಧ್ಯೆ ನಿಂತು ಎರಡೂ ದೋಣಿಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುವಂತಹ ಜವಾಬ್ದಾರಿಯುತ ಕಾರ್ಯ. ಈ ಗುರುವಿನ ಕಾರ್ಯ ಅದನ್ನು ಸಂತಸದಿಂದಲೇ ಸ್ವೀಕರಿಸಿಕೊಂಡು ಬರುತ್ತಿರುವ ಎಲ್ಲಾ ಶಿಕ್ಷಕರಿಗೂ ಒಳಿತಾಗಲಿ ಎನ್ನುವುದಲ್ಲದೆ ಇನ್ನೇನು ತಾನೇ ಹೇಳಲು ಸಾಧ್ಯ ಅಲ್ಲವೇ? ನೀವೇನಂತೀರಿ?
..................................................... ಪ್ರೇಮ್
ಸಹಶಿಕ್ಷಕಿ
ಸರಕಾರಿ ಪದವಿಪೂರ್ವ ಕಾಲೇಜು ಮೂಲ್ಕಿ
ಮೂಲ್ಕಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************   
Ads on article

Advertise in articles 1

advertising articles 2

Advertise under the article