ಸಮಾಜದ ದೃಷ್ಟಿ - ಕಥೆ ರಚನೆ : ಸ್ನೇಹ 9ನೇ ತರಗತಿ
Saturday, July 15, 2023
Edit
ಕಥೆ ರಚನೆ : ಸ್ನೇಹ
9ನೇ ತರಗತಿ
ಸರಕಾರಿ ಪ್ರೌಢಶಾಲೆ ತೋರಣಗಲ್ಲು.
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ,
ಶ್ರವಣಬೆಳಗೊಳದಲ್ಲಿ ವಾಸಿಸುತ್ತಿದ್ದ ಶ್ರವಣ ಎಂಬ ಹುಡುಗ ಅವಿದ್ಯಾವಂತನಾಗಿದ್ದರೂ ಪ್ರೀತಿ ಮತ್ತು ವಿಶ್ವಾಸ ತೋರುವುದರಲ್ಲಿ ಯಾವ ಮೇಧಾವಿಗಿಂತಲೂ ಕಡಿಮೆ ಇರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಇವನಿಗೆ ಹೆಣ್ಣುಮಕ್ಕಳನ್ನ ಕಂಡರೆ ಪ್ರೀತಿ, ವಿಶ್ವಾಸ ಮತ್ತು ಕರುಣೆ ಉಕ್ಕಿ ಬರುತ್ತಿತ್ತು. ಅವನ ಕಷ್ಟ ಏನೆಂದರೆ... ಎಲ್ಲರೂ ಅವನನ್ನು ಹೀಯಾಳಿಸುತ್ತಿದ್ದರು. ಅವನಿಗೆ ಜ್ಞಾನವಿಲ್ಲ ಅವಿದ್ಯಾವಂತನೆಂದು ನಡತೆ ಬಗ್ಗೆ ಮಾತಾಡುತ್ತಿದ್ದರು.
ಒಮ್ಮೆ ಹೀಗೆ ದಾರಿಯಲ್ಲಿ ಹೋಗಬೇಕಾದರೆ ಅಲ್ಲಿ ಏನೋ ಒಂದು ಜನರ ರಾಶಿ ಗುಂಪು ನಿಂತಿತ್ತು. ಹತ್ತಿರ ಹೋಗಿ ನೋಡಿದಾಗ ಅಲ್ಲಿ ಒಂದು ಕಾರ್ಯಕ್ರಮವಿತ್ತು. ಅದರಲ್ಲಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿ ಅತ್ಯುತ್ತಮ ನಟನೆಯನ್ನು ಮಾಡಿದವರಿಗೆ "ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ" ಯನ್ನು ಪ್ರದಾನ ಮಾಡಲಾಗುತ್ತಿತ್ತು. ಆ ಕಾರ್ಯಕ್ರಮದ ಪಕ್ಕದಲ್ಲೇ ಒಂದು ಹೆಣ್ಣನ್ನ ಗಂಡನು ಹೊಡೆಯುತ್ತಾ ನೋವು ಕೊಡುತ್ತಿದ್ದನು. ಇನ್ನೊಂದು ಕಡೆ ಹೆಣ್ಣುಮಗುವಿನ ಜನನವಾಯಿತೆಂದು ಬೇಸರ ಪಡುತ್ತಿರುವುದನ್ನು ನೋಡಿದನು. ಸ್ವಲ್ಪ ಹೊತ್ತು ಯೋಚಿಸುತ್ತಾ ನಿಂತುಕೊಂಡನು. ನಂತರ ಆ ಕಾರ್ಯಕ್ರಮದ ಒಳಗಡೆ ಹೋಗಿ ನೋಡಿದನು. ಅಲ್ಲಿ ಜ್ಞಾನೇಶ ಎಂಬ ಅತ್ಯುತ್ತಮ ನಟನಿಗೆ ಈ ಪ್ರಶಸ್ತಿಯನ್ನು ನೀಡುತ್ತಿರುವಾಗ "ನಾನು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಒಂದೆರಡು ಮಾತುಗಳನ್ನು ಆಡಬಹುದಾ" ಎಂದು ಮನವಿಮಾಡಿಕೊಂಡನು. ಕೆಲವರು ಆಗ ಇವನೊಬ್ಬ ಅವಿದ್ಯಾವಂತ ಇವನ ನಡತೆ ಸರಿ ಇಲ್ಲ ಎಂದು ಹೀಯಾಳಿಸುತ್ತ ಇದ್ದರು. ಯಾರೋ ಒಬ್ಬ ಅಲ್ಲಿನ ಸದಸ್ಯ ಆಡಿಕೊಳ್ಳುತ್ತಿರುವುದನ್ನು ತಡೆದು ಮಾತಾಡಲಿಕ್ಕೆ ಅವಕಾಶ ಕೊಟ್ಟನು.
ಶ್ರವಣ ಸಂತಸದಿಂದ ವೇದಿಕೆ ಮೇಲೆ ಹೋಗಿ ಭಾಷಣ ಮಾಡುವಾಗ ಒಂದು ಪ್ರಶ್ನೆಯನ್ನು ಹಾಕಿದ "ಜಗತ್ತಿನಲ್ಲಿ ನಾವು ಕೊಡುವ ಪ್ರಶಸ್ತಿಗಿಂತ ಮೀರಿ ಬೆಳೆದ ನಟಿ ಯಾರು..?" ಎಂದು ಕೇಳಿದ. ಕೆಲವರು ಅರಿಯದೆ ತಮ್ಮ ತಮ್ಮ ನೆಚ್ಚಿನ ನಟಿಯರ ಹೆಸರನ್ನು ಹೇಳಿದರು. ಆಗ ಶ್ರವಣನು ನಗುತ್ತಾ ಹೇಳಿದನು "ನಾವು ಜಗತ್ತಿನಲ್ಲಿ ಪ್ರಶಸ್ತಿಯನ್ನು ನೀಡಲಾಗದಷ್ಟು ಬೆಳೆದಿರುವ ನಟಿ ಎಂದರೆ, ಅಲ್ಲಿ ಗಂಡನ ಕೈಯ್ಯಲ್ಲಿ ಒದೆ ತಿಂದು ಹೊರಗಡೆ ನನ್ನ ಗಂಡ ನನ್ನನ್ನು ರಾಣಿಯಂತೆ ನೋಡಿಕೊಳ್ಳುತ್ತಾನೆ ಎಂದು ಹೇಳುತ್ತಿದ್ದಾಳಲ್ಲ ಅದೇ "ಹೆಣ್ಣು". ಬಡತನ ಇದ್ದರೂ ತವರಲ್ಲಿ ಶ್ರೀಮಂತಳೆಂದು ಮೆರೆಯುತ್ತಾಳಲ್ಲ ಅದೇ "ಹೆಣ್ಣು". ಅನ್ನವಿಲ್ಲದಿದ್ದಾಗ ಹಸಿವಿಲ್ಲದಂತೆ ನಟಿಸುತ್ತಾಳಲ್ಲ ಅದೇ "ಹೆಣ್ಣು" ನೋವಿನಿಂದ ಕಣ್ಣೀರು ಬಂದರೂ ಆನಂದಬಾಷ್ಪವೆಂದು ಹೇಳುತ್ತಾಳಲ್ಲ ಅದೇ "ಹೆಣ್ಣು". ಅಳುತ್ತಿರುವ ಆ ಮಗುವಿಗೆ ನಗುತ್ತಾ ನೋವನ್ನ ಮರೆಸುತ್ತಾಳಲ್ಲ ಅದೇ "ಹೆಣ್ಣು". ತಿಂಗಳ ಆ ಐದು ದಿನ ಸಹಿಸಲಾರದ ನೋವಿದ್ದರೂ ನಗುತ್ತಾ ನಗಿಸುತ್ತಾ ಕಳೆಯುತ್ತಾಳಲ್ಲ ಅದೇ "ಹೆಣ್ಣು". ಸಂಬಳವಿಲ್ಲದೆ ಯಾರಿಗೂ ತೊಂದರೆ ಕೊಡದೆ ತನ್ನ ಪಾತ್ರವನ್ನ ಅಚ್ಚುಕಟ್ಟಾಗಿ ನಡೆಸುತ್ತಾಳಲ್ಲ ಅವಳೇ ಈ ಎಲ್ಲ ಪ್ರಶಸ್ತಿಗಿಂತಲೂ ಮೀರಿದವಳು. ಆಕೆಗೆ ಪ್ರಶಸ್ತಿ ಕೊಡದಿದ್ದರೂ ಗೌರವ ಕೊಟ್ಟು ಪ್ರೀತಿಯಿಂದ ನಡೆದುಕೊಳ್ಳಿ" ಎಂದು ಹೇಳಿ ತನ್ನ ಭಾಷಣವನ್ನು ಮುಗಿಸುತ್ತಾನೆ.
ಕೆಳಗೆ ಬಂದಮೇಲೆ ಹೀಯಾಳಿಸಿದ ಪ್ರತಿಯೊಬ್ಬರೂ ಅವನ ಹತ್ತಿರ ಕ್ಷಮೆ ಕೇಳಿ ಹೀಗೆಂದರು "ನೀನು ಅವಿದ್ಯಾವಂತನೆಂದು ಇಷ್ಟು ದಿನ ನೋವು ಕೊಟ್ಟೆವು. ನಿನಗೆ ಪುಸ್ತಕದ ಜ್ಞಾನ ಇಲ್ಲದಿದ್ದರೂ ಲೋಕದ ಜ್ಞಾನದಲ್ಲಿ ನಮಗಿಂತ ದೊಡ್ಡವನು. ಈ ಪ್ರಶಸ್ತಿ ಕೂಡ ನಿನಗೆ ಸಲ್ಲಲೇಬೇಕು. ಏಕೆಂದರೆ ನೀನು ಕೂಡ ಸಮಾಜದ ವಿದ್ಯಾವಂತನಾಗಿದ್ದರೂ ಅವಿದ್ಯಾವಂತನೆಂದು ನಟಿಸಿದೆ. ನಾವೆಲ್ಲ ಹೀಯಾಳಿಸಿದರೂ ನಗುಮುಖದಿಂದ ಇರುತ್ತಿದ್ದೆ. ಎಂದು ಅವನಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಯಾರೇ ಆಗಲಿ ಒಬ್ಬರ ಜ್ಞಾನವನ್ನು ನೋಡಿ ನಡತೆಯ ಬಗ್ಗೆ ಮಾತಾಡಬಾರದು. ಪ್ರಸ್ತುತ ಸಮಾಜ ನೋಡುತ್ತಿರುವ ಕಣ್ಣು ಹೀಗೆ ಇದೆ. ಈ ಲೋಕದಲ್ಲಿ ಇರುವ ಪ್ರತಿಯೊಬ್ಬರೂ ಜ್ಞಾನ ಇರುವಂತವರು. ಸರ್ವರೂ ಸರ್ವರನ್ನು ಗೌರವಿಸಿ.
9ನೇ ತರಗತಿ
ಸರಕಾರಿ ಪ್ರೌಢಶಾಲೆ ತೋರಣಗಲ್ಲು.
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ,
*******************************************