-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 17

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 17

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 17
ಲೇಖಕರು : ಪವಿತ್ರಾ 
ಸಹಶಿಕ್ಷಕರು 
ಸ.ಹಿ.ಪ್ರಾ ಶಾಲೆ ಹಳ್ಳಿಂಗೇರಿ 
ಕೊಕ್ಕಡ ಗ್ರಾಮ ಮತ್ತು ಅಂಚೆ 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ           
Mob : +91 99724 13072
       

         ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದುದು. ಶಿಕ್ಷಕನು ದೀಪದಂತೆ ಉರಿದು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುತ್ತಾನೆ.
       ಸರ್ವಶ್ರೇಷ್ಠ ವೃತ್ತಿಯಾದ ಶಿಕ್ಷಕ ವೃತ್ತಿಗೆ ನಾನು ಸೇರ್ಪಡೆಗೊಂಡು 16 ವರುಷಗಳೇ ಉರುಳಿದವು. ಪ್ರತಿದಿನ, ಪ್ರತಿಕ್ಷಣವೂ ನನಗೆ ಒಂದೊಂದು ರೀತಿಯ ವಿಶೇಷ ಅನುಭವ ನೀಡಿ ನನ್ನ ಜೀವನಕ್ಕೊಂದು ಅರ್ಥ ಕಲ್ಪಿಸಿದೆ.
         ಶಾಲೆಯಲ್ಲಿ ನಾವು ಮುಗ್ಧ ಮಕ್ಕಳೊಡನೆ ಅದರಲ್ಲೂ ನಲಿಕಲಿ ಮಕ್ಕಳೊಡನೆ ಬೆರೆಯುವ ಕ್ಷಣವದು ಅತಿ ಮಧುರ. ಅಂತೆಯೇ ನನ್ನ ವೃತ್ತಿ ಜೀವನದ ಮೊದಲ ಎರಡು ವರುಷಗಳ ಬಳಿಕ ಒಂದನೇ ತರಗತಿಗೆ ಸೇರಿದ ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಕಲಿಕೆಯಲ್ಲಿ ತೀರಾ ಹಿಂದುಳಿದಿದ್ದ. ಸರಿಯಾಗಿ ಮಾತೂ ಆಡುತ್ತಿರಲಿಲ್ಲ. ಶಾಲೆಗಂತೂ ಬರಲು ಕೇಳುತ್ತಿರಲಿಲ್ಲ. ಅಪರೂಪಕ್ಕೆ ಬಂದರೂ ತುಂಬಾ ಅಳುತ್ತಿದ್ದ. ಕನ್ನಡ ಪಾಠವನ್ನು ಶಾರದಾ ಮೇಡಂ, ಗಣಿತ ಪಾಠವನ್ನು ನಾನು ಮಾಡುತ್ತಿದ್ದೆ. ಹುಡುಗನಿಗೆ ಎಳ್ಳಷ್ಟೂ ಜೋರು ಮಾಡದೇ ಪ್ರೀತಿಯಿಂದ ನೋಡಿಕೊಂಡು ಶಾಲೆಗೆ ಬರುವಂತೆ ಹುರಿದುಂಬಿಸುತ್ತಿದ್ದೆವು. ನಾವು ಅದೆಷ್ಟೋ ಒತ್ತಡ ಇದ್ದರೂ ನಮ್ಮ ಜೊತೆಯಲ್ಲಿಯೇ ಕೂರಿಸಿಕೊಂಡು ಅಕ್ಷರ, ಅಂಕಿಗಳನ್ನು ಕಲಿಸುತ್ತಿದ್ದೆವು. ಅವನ ಹಠ, ಅಳು ಈಗಲೂ ಕಣ್ಣ ಮುಂದೆ ಕಂಡಂತೆ ಭಾಸವಾಗುತ್ತಿದೆ. ಅವನ ಅಮ್ಮ ಶಾಲೆಗೆ ಬಂದು ಅಳುವುದು. ಹಾಗೆಯೇ ಮಸೀದಿ, ದೇವಸ್ಥಾನಗಳಿಗೆ ಹರಕೆ ಹೇಳಿಕೊಂಡು ಮಗ ಶಾಲೆಗೆ ದಿನನಿತ್ಯ ಹೋಗಲಿ ಎಂದು ಬೇಡಿಕೊಳ್ಳುವ ಪರಿ ನಿಜಕ್ಕೂ ತುಂಬಾ ಬೇಸರವನ್ನುಂಟು ಮಾಡಿತ್ತು. ನಾನಂತೂ ಅವರಿಗೆ ಅಮ್ಮ, ನಿಮ್ಮ ಮಗ ಸರಿಯಾಗುತ್ತಾನೆ ಹೆದರಬೇಡಿ, ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡುತ್ತಿದ್ದೆ.
       ಕಡುಬಡತನ ಹಾಗೂ ಅನಕ್ಷರಸ್ಥ ಕುಟುಂಬದಿಂದ ಬರುತ್ತಿದ್ದ ಈ ವಿದ್ಯಾರ್ಥಿ ತಂದೆ ತಾಯಿಗೆ ಪ್ರೀತಿಯ ಏಕೈಕ ಸುಪುತ್ರನಾಗಿದ್ದ. ಹೇಗೋ ಎರಡನೇ ತರಗತಿಯವರೆಗೆ ಶಾಲೆಗೆ ಬರಲು ಉದಾಸೀನ ಮಾಡುತ್ತಿದ್ದರೂ ಮೂರನೇ ತರಗತಿಗೆ ಬಂದಾಗ ದಿನನಿತ್ಯ ಶಾಲೆಗೆ ಬರಲು ರೂಢಿ ಮಾಡಿಕೊಂಡ. ಆದರೆ ಕಲಿಕೆಗಾಗಿ ನಾವೇನು ಸರ್ಕಸ್ ಮಾಡಿದರೂ ಅವನ ಕಲಿಕಾ ಮಟ್ಟ ತೀರ ಹಿಂದುಳಿದಿತ್ತು. ಗುಣನಡತೆಯಲ್ಲಿ ತುಂಬಾ ಒಳ್ಳೆಯವನಾಗಿದ್ದ. 7ನೇ ತರಗತಿಗೆ ಬಂದಾಗ ಅವನ ಕಲಿಕೆ ಸಾಧಾರಣ ಮಟ್ಟದಲ್ಲಿ ಇತ್ತು. ಆದರೂ ನಾವು ಅವನನ್ನು ಮುದ್ದಿನಿಂದಲೇ ನೋಡಿಕೊಳ್ಳುತ್ತಿದ್ದೆವು. ಅವನು ಏಳನೇ ತರಗತಿ ಉತ್ತೀರ್ಣಗೊಂಡು ಹೈಸ್ಕೂಲ್ ಸೇರ್ಪಡೆಗೊಂಡ. ಆ ನಂತರ ಅವನ ಸಂಪರ್ಕ ನಮಗೆ ದೂರವಾಯಿತು.
      ಇತ್ತೀಚಿಗೆ ಒಂದು ದಿನ ಅವನ ಅಮ್ಮ ಸಿಕ್ಕಿದಾಗ ನನ್ನ ಬಳಿ ಓಡಿಬಂದು ಪ್ರೀತಿಯಿಂದ ಮಾತನಾಡಿಸಿ, "ನನ್ನ ಮಗನನ್ನು ಒಂದರಿಂದ ಏಳನೇ ತರಗತಿಯವರಿಗೆ ಸ್ವಂತ ಮಗುವಿನಂತೆ ನೋಡಿಕೊಂಡ ಟೀಚರ್ ನೀವು, ನಿಮ್ಮ ಮಡಿಲಿನಲ್ಲಿ ಅವನನ್ನು ಕೂರಿಸಿಕೊಂಡು ಬರೆಸಿ, ಕಲಿಸುತ್ತಿದ್ದದ್ದು ಮರೆಯಲಾಗದು. ನಿಮ್ಮ ಸುದ್ದಿ ನನ್ನ ಮಗ ಯಾವಾಗಲೂ ಹೇಳುತ್ತಿರುತ್ತಾನೆ" ಎಂದು ಹೇಳಿದರು. ನನ್ನ ಜೊತೆ ನನ್ನ ಸಹೋದ್ಯೋಗಿ ಶಿಕ್ಷಕಿಯರೂ ಇದ್ದರು. ನಿಜವಾಗಿ ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಅದೆಷ್ಟೋ ವಿದ್ಯಾರ್ಥಿಗಳಿಗೆ ನಾನು ವಿದ್ಯೆ ನೀಡಿದ್ದರೂ ಇವರಷ್ಟು ನೆನಪಿಟ್ಟು ಮಾತನಾಡಿದ್ದು...... ಅದೂ.... ತುಂಬಾ ವರುಷಗಳ ಬಳಿಕ! ಆಶ್ಚರ್ಯವಾಯಿತು. "ಸರಿ ಅಮ್ಮ, ಮಗ ಏನು ಕೆಲಸ ಮಾಡುತ್ತಿದ್ದಾನೆ?" ಎಂದು ಕೇಳಿದೆ. "ಬೆಂಗಳೂರಿನಲ್ಲಿ ಒಂದು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ, ಒಳ್ಳೆಯ ಗುಣ ನಡತೆ ಬುದ್ದಿವಂತಿಕೆಯಿಂದ ನಮ್ಮೆಲ್ಲರನ್ನು ಚೆನ್ನಾಗಿ ನೋಡಿಕೊಂಡು ಮನೆಗೆ ಬೇಕಾದ ಸಾಮಗ್ರಿಗಳನ್ನು ತಂದು ಕೊಡುತ್ತಾನೆ. ಆಶೀರ್ವಾದ, ವಿದ್ಯಾದಾನದಿಂದ ಇದೆಲ್ಲಾ ಸಾಧ್ಯವಾಯಿತು" ಎಂದು ಕೃತಜ್ಞತಾ ಭಾವನೆಯಿಂದ ನುಡಿದರು. ನನಗೆ ಇಷ್ಟು ದೊಡ್ಡ ಮಾತು ಕೇಳಿ ಏನೋ ಒಂಥರಾ ಮುಜುಗರವಾಯಿತು. ನಿಮ್ಮ ಮೊಬೈಲ್ ನಂಬರ್ ಕೊಡಿ, ಅವನಿಗೆ ಕೊಡುತ್ತೇನೆ, ನಿಮ್ಮನ್ನು ಕೇಳುತ್ತಿರುತ್ತಾನೆ ಅಂದ್ರು. ನನ್ನ ನಂಬರ್ ಕೊಟ್ಟೆ. ಅದೇ ದಿನ ಅವನು ವಾಟ್ಸಾಪ್ ವಾಯ್ಸ್ ಮೆಸೇಜ್ ಹಾಕಿದ. ನನಗೆ ವಿದ್ಯೆ ಕಲಿಸಿದ ಶಾರದಾ ಮೇಡಂ, ಪ್ರಮೀಳಾ ಮೇಡಂ, ಸುಂದರಿ ಟೀಚರ್ ಇವರೆಲ್ಲರ ನಂಬರ್ ಕೊಡಿ ಮೇಡಂ, ಇವರನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ.... ನಿಮ್ಮನ್ನಂತೂ ಬಿಲ್ಕುಲ್ ಮರೆಯಲ್ಲ ಅಷ್ಟು ಚೆನ್ನಾಗಿ ನೋಡಿಕೊಂಡಿದ್ದೀರಿ ಎಂದ.
      ನಿಜವಾಗಿಯೂ ಶಿಕ್ಷಕನಾದವನಿಗೆ ವಿದ್ಯಾರ್ಥಿಯೋರ್ವ ಬೆಳೆದು ದೊಡ್ಡವನಾದ ಮೇಲೂ ನೆನಪಿಟ್ಟು ಗೌರವಿಸುತ್ತಾನೆ ಎಂದರೆ ಅದಕ್ಕಿಂತ ದೊಡ್ಡ ಸನ್ಮಾನ ಬಿರುದೇ ಬೇಡ ಎಂದೆನಿಸಿತು. ನಾನು ಮಾತ್ರ ಈ ಶಾಲೆಯಲ್ಲಿ ಈಗಲೂ ಕರ್ತವ್ಯ ನಿರ್ವಹಿಸುತ್ತಿದ್ದು, ಅವನಿಗೆ ವಿದ್ಯೆ ನೀಡಿದ ಉಳಿದ ಗುರುಗಳು ಈ ಶಾಲೆಯಲ್ಲಿ ಈವಾಗ ಇಲ್ಲವಾದರೂ ಅವರೆಲ್ಲರ ನೆನಪು ಅವನ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿದೆ....! ಶಾಲಾ ದಿನಗಳಲ್ಲಿನ ಅವನ ಪರಿಸ್ಥಿತಿ ಮರುಕಳಿಸಿ ನಿಜವಾಗಿಯೂ ಆ ಹುಡುಗನೇ ಈ ತರಹ.... ಇಷ್ಟೊಂದು ಮಾತನಾಡುವಷ್ಟು ಹುಷಾರಾಗಿದ್ದಾನೆಯೇ ಎಂದು ನನಗನಿಸಿತು. ಈವಾಗ ಸರಿಯಾಗಿ ಓದಲು ಬರೆಯಲು ಬರುತ್ತಾ ಎಂದು ಕೇಳಿಯೇ ಬಿಟ್ಟೆ. ಹಾಂ! ಮೇಡಂ ಹಿಂದಿ, ಇಂಗ್ಲಿಷ್, ಕನ್ನಡ ಎಲ್ಲವೂ ಮಾತನಾಡುತ್ತೇನೆ... ಗೊತ್ತು ಎಂದ.
       ಮೊನ್ನೆ ಒಂದು ದಿನ ಅವನಿಗೆ ಫೋನ್ ಮಾಡಿದಾಗ "ಮೇಡಂ ನಮ್ಮ ಶಾಲೆಗೆ ಏನು ಬೇಕು ಕೇಳಿ ಕೊಡುತ್ತೇನೆ. ನಾನು ಕಲಿತ ಶಾಲೆಗೆ ಕೊಡುಗೆ ನೀಡುವುದು ನನಗೆ ಖುಷಿ" ಎಂದುಬಿಟ್ಟ. ಅದೇಕೋ.... ಅವನ ಮಾತು ಕೇಳಿ ನಿಜವಾಗಿಯೂ ಸಾರ್ಥಕತೆಯ ಭಾವ ನನ್ನಲ್ಲಿ ಮೂಡಿದಂತೆ ಭಾಸವಾಯಿತು...
         ಸ್ನೇಹಿತರೆ, ನೋಡಿ ... ಇದು ನಮಗೆ ಚಿಕ್ಕ ವಿಷಯವಾಗಿ ಮನಗಂಡರೂ ಒಳಾರ್ಥ ತುಂಬಾ ಇದೆ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಮೂದಲಿಸುವ ಬದಲು ನಮ್ಮ ಸ್ವಂತ ಮಕ್ಕಳಂತೆ ಭಾವಿಸಿ ವಿದ್ಯೆಯನ್ನು ಪ್ರೀತಿಯಿಂದ ಉಣ ಬಡಿಸಿದರೆ ಅವರು ಖಂಡಿತ ನೆನಪಿಡುತ್ತಾರೆ. ಆತ್ಮೀಯತೆಯನ್ನು ಸದಾ ಸ್ಮರಿಸುತ್ತಾರೆ. ನಮ್ಮ ಕೈಯ ಬೆರಳುಗಳು ಹೇಗೆ ಒಂದೇ ತೆರನಾಗಿರುವುದಿಲ್ಲವೋ ಹಾಗೆಯೇ ಮಕ್ಕಳು ಕೂಡ. ಕಲಿಯುವ ಮಕ್ಕಳನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು ನಿಜ. ಆದರೆ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳು ಶಿಕ್ಷಕರ ಮೇಲೆ ಇಟ್ಟಿರುವ ಪ್ರೀತಿ, ಗೌರವಕ್ಕೆ ಎಣ್ಣೆ ಇಲ್ಲ..!
       ಶಿಕ್ಷಕರಾದ ನಾವು ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗಾಗಿ ನಿಸ್ವಾರ್ಥ ಮನಸ್ಸಿನಿಂದ ಶ್ರಮಿಸೋಣ. ಶುಭವಾಗಲಿ...
..................................................... ಪವಿತ್ರಾ  
ಸಹಶಿಕ್ಷಕರು
ಸ.ಹಿ.ಪ್ರಾ ಶಾಲೆ ಹಳ್ಳಿಂಗೇರಿ 
ಕೊಕ್ಕಡ ಗ್ರಾಮ ಮತ್ತು ಅಂಚೆ 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 99724 13072
******************************************   



Ads on article

Advertise in articles 1

advertising articles 2

Advertise under the article