-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 72

ಸ್ಫೂರ್ತಿಯ ಮಾತುಗಳು : ಸಂಚಿಕೆ - 72

ಸ್ಫೂರ್ತಿಯ ಮಾತುಗಳು : ಸಂಚಿಕೆ - 72
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                    
         ಜಯಕೀರ್ತಿ ಎಂಬ ಕನ್ನಡ ಭಾಷಾ ಅಧ್ಯಾಪಕರು ತರಗತಿಯ ವಿದ್ಯಾರ್ಥಿಗಳಿಗೆ ರಸವತ್ತಾದ ಕಥೆಯನ್ನು ಹೇಳಲು ಇಚ್ಛಿಸಿದರು. ಅವರಿಗೆ ಮೇಜಿನ ಮೇಲೆ ಕುಳಿತು ಕಥೆ ಹೇಳುವುದೆಂದರೆ ಬಹಳ ಖುಷಿ. ಮೇಜಿನ ಮೇಲೆ ಕುಳಿತು ಕಥೆ ಹೇಳಿದರೆ ಅದು ಮಕ್ಕಳಿಗೂ ಆಕರ್ಷಕವೆನಿಸುತ್ತಿತ್ತು. ಕಥೆ ಹೇಳುವ ಸಿದ್ಧತೆಗಾಗಿ ಕೌಶಲನೆಂಬ ವಿದ್ಯಾರ್ಥಿಯನ್ನು ಬಳಿಗೆ ಕರೆದು, ತರಗತಿಯ ಮೂಲೆಯಲ್ಲಿದ್ದ ಮರದ ಮೇಜೊಂದನ್ನು ತರಗತಿಯ ಮಧ್ಯೆ ತಂದಿರಿಸಲು ಸೂಚಿಸಿದರು.
     ಕೌಶಲನು ಮೇಜಿನ ಬಳಿಗೆ ಹೋದನು. ಮೇಜು ಬಹಳ ಭಾರವಾಗಿತ್ತು. ಅದನ್ನು ಚಲಿಸುವಂತೆ ಮಾಡಲು ಬಹಳ ಪ್ರಯತ್ನಿಸಿದನು. ನಾಲ್ವರಿದ್ದರೆ ಆ ಮೇಜನ್ನು ಸರಾಗವಾಗಿ ಎತ್ತಿ ತರಲು ಸಾಧ್ಯವಾಗುತ್ತಿತ್ತು. ಬಹಳಷ್ಟು ಸೆಣಸಾಟ ಮಾಡಿದರೂ ಕೌಶಲನಿಗೆ ಮೇಜನ್ನು ಒಂದಿಂಚೂ ಚಲಿಸುವಂತೆ ಮಾಡಲಾಗದೆ ಸುಸ್ತಾದನು. ತನಗೆ ಆಗುವುದಿಲ್ಲ ‘ಸರ್’ ಎಂದು ಅಧ್ಯಾಪಕರಿಗೆ ಹೇಳಿದನು. ಅಧ್ಯಾಪಕರು ಇಡೀ ತರಗತಿಯನ್ನೊಮ್ಮೆ ವೀಕ್ಷಿಸಿದರು. ಬೇರೆ ಯಾರು ಅದನ್ನು ಇಲ್ಲಿಗೆ ತರಬಲ್ಲಿರಿ ಎಂದು ಮಕ್ಕಳನ್ನು ಕೇಳಿದರು. ಕೌಶಲನಿಗಿಂತ ಸ್ವಲ್ಪ ಬಲಶಾಲಿಯಾದ ವಿದ್ಯಾರ್ಥಿ ಭಂಜರನು ಮುಂದೆ ಬಂದನು. ಅವನಿಗೂ ಆ ಮೇಜನ್ನು ಸ್ಥಳಾಂತರಿಸಲು ಅಸಾಧ್ಯವಾಯಿತು. ಅಧ್ಯಾಪಕರಲ್ಲಿ ತನ್ನ ಅಸಹಾಯಕತೆಯನ್ನು ವ್ಯಕ್ತ ಪಡಿಸಿದನು. ಅಧ್ಯಾಪಕರು ಮುಗುಳು ನಗುತ್ತಾ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನು ವೀಕ್ಷಿಸ ತೊಡಗಿದರು. ಈಗ ತನ್ನನ್ನು ಕರೆಯಬಹುದೇ ಎಂದು ಊಹಿಸುತ್ತಿದ್ದ ಎಲ್ಲ ವಿದ್ಯಾರ್ಥಿಗಳೂ ಸಪ್ಪೆ ಮೋರೆಯೊಂದಿಗೆ ಕುಳಿತಿದ್ದರು.
      ಅಧ್ಯಾಪಕರು ತರಗತಿಗೆ ಒಂದು ಪ್ರಶ್ನೆಯನ್ನು ಹಾಕಿದರು. ಈ ವಿದ್ಯಾರ್ಥಿಗಳಿಗೆ ಆ ಮೇಜನ್ನು ತರಗತಿಯ ನಡುವೆ ಎತ್ತಿಡಲು ಆಗಲಿಲ್ಲ. ಯಾಕೆ ಹೀಗಾಗಿರಬಹುದು? ಎಂದಾಗ ವಿದ್ಯಾರ್ಥಿಗಳು, “ಅವರ ಶಕ್ತಿ ಸಾಕಾಗಲಿಲ್ಲ” ಎಂದು ಉತ್ತರಿಸಿದರು. ಹಾಗಾದರೆ ನಾನು ಪ್ರಯತ್ನಿಸಲೇ ಎಂದರು. ಮಕ್ಕಳು ಮೌನವಾದರು. ತಾನು ಪ್ರಯತ್ನಿಸಿದರೂ ಮೇಜನ್ನು ಸ್ಥಳಾಂತರಿಸಲು ಅಧ್ಯಾಪಕರಿಗೆ ಅಸಾಧ್ಯವಾಯಿತು. ಭಂಜರನನ್ನು ಕರೆದರು, ಮೇಜಿನ ಇನ್ನೊಂದು ತುದಿಯನ್ನು ಹಿಡಿ ಎಂದರು. ಈಗ ನಾವು ಒಟ್ಟಾಗಿ ಈ ಮೇಜನ್ನು ಎತ್ತಿ ಅಲ್ಲಿಡೋಣ ಎಂದರು. ಇಬ್ಬರೂ ಸೇರಿದಾಗ ಆ ಮೇಜನ್ನು ಅನಾಯಾಸವಾಗಿ ಸ್ಥಳಾಂತರಿಸಲು ಸಾಧ್ಯವಾಯಿತು.
     ಅಧ್ಯಾಪಕರು ಒಂದು ನೆಗೆತದೊಂದಿಗೆ ಮೇಜಿನ ಮೇಲೆ ಅಲಂಕೃತರಾದರು. ತರಗತಿಯನ್ನು ಸ್ಥೂಲವಾಗಿ ಅವಲೋಕಿಸಿದರು. ವಿದ್ಯಾರ್ಥಿಗಳಿಗೆ, “ಈ ಘಟನೆಯಿಂದ ಏನನ್ನು ನೀವು ಅರ್ಥ ಮಾಡಿರುವಿರಿ? ಎಂದು ತರಗತಿಗೆ ಕೇಳಿದರು. ಎಲ್ಲ ಮಕ್ಕಳಿಗೆ ಏನು ಹೇಳಬೇಕೆಂದು ಹೊಳೆಯದಿದ್ದರೂ, ಕೌಶಲನು ಮಾತ್ರ ಎದ್ದು ನಿಂತು, “ನನಗಿದು ಹೊಳೆಯಲೇ ಇಲ್ಲ ಸರ್, ನಾನು ಒಬ್ಬನ ಸಹಕಾರ ಪಡೆದು ಮೇಜನ್ನು ಎತ್ತಿಡಬಹುದಿತ್ತು.” ಎಂದನು. ಅಧ್ಯಾಪಕರು ಮುಗುಳು ನಕ್ಕರು. ತರಗತಿಯು, “ಒಬ್ಬನಿಂದ ಮಾಡಲಾಗದ ಕೆಲಸವನ್ನು ಇತರರ ಸಹಕಾರ ಪಡೆದು ಮಾಡುವುದು ಸುಲಭ” ಎಂಬ ನೈತಿಕ ಪಾಠವನ್ನು ಅರ್ಥಮಾಡಿಕೊಂಡಿತ್ತು.
       ಮಕ್ಕಳೇ, ಎಲ್ಲ ಕೆಲಸಗಳನ್ನೂ ಒಬ್ಬರಿಂದಲೇ ಮಾಡಲಾಗುತ್ತದೆ ಎಂದೇನಿಲ್ಲ. ಅಸಾಧ್ಯವಾದ ಕೆಲಸಗಳನ್ನು ಇತರರ ಸಹಕಾರ ಪಡೆದು ಸಾಧಿಸುವುದು ಜಾಣತನ. ಕೈಲಾಗದುದನ್ನು ಮಾಡುವ ವ್ಯರ್ಥ ಪ್ರಯತ್ನ ಎಂದೂ ಸಮುಚಿತವಲ್ಲ. ಸಹಕಾರ ನೀಡಿದವರಿಗೆ ಪ್ರತಿ ಸಹಕಾರ ನೀಡುವುದು ಜೀವನದ ಮೌಲ್ಯ. ಯಾವುದೋ ಕೆಲಸ ಮಾಡುವ ವ್ಯಕ್ತಿಗೆ ಆ ಕೆಲಸವನ್ನು ಸುಲಭಗೊಳಿಸಲು ನೆರವಾಗುವುದೇ ‘ಸಹಕಾರ’. ಮರವೇರುವವನೊಬ್ಬನಿಗೆ ಏಣಿ ಹಿಡಿದು ಸಹಕರಿಸಿದರೂ ಅದು ಸಹಕಾರವೇ ಆಗುತ್ತದೆ.
     ಸಹಕಾರ ಮಾಡಬಹುದಾದ ಕ್ಷೇತ್ರಗಳು ನೂರಾರಿವೆ. ಓದಿನಲ್ಲಿ ಹಿಂದೆ ಉಳಿದವನಿಗೆ ಓದಲು ಬರೆಯಲು ಮಾರ್ಗದರ್ಶನ ನೀಡಿ ಸಹಕರಿಸಬಹುದು. ಹಣಕಾಸಿನ ಸಮಸ್ಯೆಯಲ್ಲಿರುವವರಿಗೆ ಸಾಲ ಅಥವಾ ಉದಾರ ನೀಡಿ ಸಹಕರಿಸಬಹುದು. ಯಾರದೋ ತೋಟದೊಳಗೆ ಜಾನುವಾರು ಹೊಕ್ಕು ಮೇಯತ್ತಿದ್ದರೆ ಅವುಗಳನ್ನು ಹೊರಗಟ್ಟಿ ತೋಟದ ಮಾಲಿಕನಿಗೆ ಸಹಕಾರ ನೀಡಬಹುದು. ಮದುವೆ ಮನೆಯಲ್ಲಿ ಚಪ್ಪರ ಕಟ್ಟಲು, ಚಪ್ಪರ ಶೃಂಗರಿಸಲು, ಅಡುಗೆ ತಯಾರಿಸಲು, ಅಡುಗೆಯನ್ನು ವಿತರಿಸಲು ಸಹಕರಿಸಬಹುದು. ಸಹಕಾರ ವೆಚ್ಚದಾಯಕವಲ್ಲ. ನೀಡಿದ ಸಹಕಾರದಿಂದಾಗಿ ನಮಗೂ ಇತರರ ಸಹಕಾರ ಸಿಗುತ್ತದೆ. ಸಹಕಾರದಿಂದ ಸಮಾಜ ಪ್ರಗತಿಯಾಗಲಿ ಎಂಬ ಉದ್ದೇಶದಿಂದ ನಾನಾ ಸಹಕಾರಿ ಸಂಘಗಳು ಹುಟ್ಟಿವೆ. ಸಹಕಾರವೂ ನಮ್ಮ ನಿಮ್ಮ ಜೀವನ ಸಿದ್ಧಾಂತವಾಗಲಿ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 



Ads on article

Advertise in articles 1

advertising articles 2

Advertise under the article