-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 05

ನಿಷ್ಪಾಪಿ ಸಸ್ಯಗಳು : ಸಂಚಿಕೆ - 05

ನಿಷ್ಪಾಪಿ ಸಸ್ಯಗಳು : ಸಂಚಿಕೆ - 05
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

        
     ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ....?
             ಮನೆಯಲ್ಲೀಗ ಅಂಗಡಿಯ ರೆಡಿಮೇಡ್ ತರಕಾರಿಗಳ ನಡುವೆ ಮಳೆರಾಯನ ಕೃಪೆಯಿಂದ ಅಪರೂಪದ ಪಲ್ಯ, ಸಾಂಬಾರ್, ತಿಂಡಿ ತಿನಿಸುಗಳು ಕಾಣಿಸುತ್ತಿರಬಹುದು ಅಲ್ವಾ..!
        ಮುಂಗಾರಿನ ಒಂದು ಹದವಾದ ಮಳೆ ಬಿದ್ದರಾಯ್ತು. ಮನೆಯ ಸುತ್ತಲೂ, ತೋಟದ ನಡುವೆ, ಕೆರೆ ತೋಡುಗಳ ಬದಿಗಳಲ್ಲಿ , ಗುಡ್ಡದ ಬದಿಗಳಲ್ಲಿ ತಲೆಯೆತ್ತುವ ನಿಷ್ಪಾಪಿ ಸಸ್ಯ ಈ ಕೆಸು.
          ಮಳೆಗಾಲದುದ್ದಕೂ ಹಲವಾರು ರೂಪಗಳಲ್ಲಿ ಕಸವಲ್ಲದ ಈ ಕೆಸು ನಮ್ಮ ಮನೆಯೊಳಗೆ ಲಗ್ಗೆ ಇಡುತ್ತದೆ. ಇತ್ತೀಚೆಗೆ ಅನಾದರ, ಅವಕೃಪೆಗೆ ಒಳಗಾಗುತ್ತಿದ್ದರೂ ಒಂದು ಕಾಲದಲ್ಲಿದು ಬಡವರ ಆಪತ್ ಬಂಧುವಾಗಿತ್ತು. ಬಿರುಬೇಸಗೆಯುದ್ದಕೂ ನೆಲದಡಿ ಮೌನವಾಗುಳಿವ ಈ ಸಸ್ಯ ಮಳೆಗೆ ಸೊಂಪಾಗಿ ಬೆಳೆಯುತ್ತದೆ. ದಟ್ಟ ಹಸಿರು ವರ್ಣದ ಮೃದು ಎಲೆಗಳು ಅಗಲಗಲವಾಗಿ ಚಾಮರದಂತೆ ಹರಡಿಕೊಳ್ಳುತ್ತವೆ. ಎಲೆಗಳಿಗೆ ಗಟ್ಟಿತನ ನೀಡಲು ಸುಣ್ಣದ ಲವಣಗಳಿಂದಾದ ಸೂಜಿಯಂತಿರುವ ರಾಫೈಡ್ಗಳಿರುತ್ತವೆ. ಇವು ಎಲೆಗಳಿಗೆ ತುರಿಕೆಯ ಗುಣವನ್ನು ನೀಡಿವೆ. ತುರಿಕೆಗೆ ಹುಳಿಯೇ ಮದ್ದು. ತುಟಿಗಳು, ನಾಲಿಗೆ, ಗಂಟಲು ತುರಿಸದಂತೆ ಹುಳಿ ಶಮನಗೊಳಿಸುತ್ತದೆ. ಎಲೆಯ ಮೇಲೆ ಬೀಳುವ ನೀರ ಹನಿಗಳು ಮುತ್ತುಗಳಾಗಿ ಜಾರಿಬೀಳುವುದನ್ನು ನೋಡುವುದೇ ಸೊಗಸು. ಕೆಲವೊಮ್ಮೆ ಎಲೆಗಳ ನಡುವಿನಲ್ಲಿ ವಜ್ರದಂತೆ ಹೊಳೆಯುತ್ತಾ ಹನಿಯೊಂದು ನಿಂತಿರುವುದಿದೆ. ಜಾರುವ ಈ ನೀರ ಬಿಂದುಗಳು ನೋಡುಗನನ್ನು ತತ್ವಜ್ಞಾನಿಯಾಗಿಸುತ್ತದೆ. ಎಲೆ ವಾಲಿದತ್ತ ನೀರು ಜಾರುವುದು ಸಮಯ ಸಾಧಕರಿಗೆ ಉದಾಹರಣೆಯಾಗಿ ಕಾಣಿಸಿಕೊಳ್ಳುವುದಿದೆ. ನೀರಿನಲ್ಲೇ ಇದ್ದು ನೀರನ್ನು ಅಂಟಿಸಿಕೊಳ್ಳದೆ ಇರುವುದರಿಂದ ಗಿಡವನ್ನು ಫಂಗಸ್ ನಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗಿದೆ.
    ಎಲೆಗಳಿಗೆ ಆಧಾರ ನೀಡಲು ಎರಡು ಮೂರಡಿಗಳ ನೀರು ತುಂಬಿದ ಹಗುರವಾದ ದಂಟುಗಳಿರುತ್ತವೆ. ಇದರ ಹೊರಗೆ ಮೈಯ್ಯಲ್ಲಿ ತೆಳುವಾದ ನಾರಿನ ಹೊದಿಕೆ ಇರುತ್ತದೆ. ಈ ಕೆಸುವಿನ ಗಿಡವನ್ನು ಕಲ್ಪವೃಕ್ಷವೆಂದೂ ಕರೆಯಬಹುದು. ಇದರ ಎಲೆ, ಕಾಂಡ, ಬೇರು, ಗಡ್ಡೆ ಎಲ್ಲವೂ ರುಚಿಯಾದ ಆಹಾರವಾಗಿದೆ.
      ಕೆಸುವಿನಿಂದ ಪಲ್ಯ, ಸಾಂಬಾರು, ಮಜ್ಜಿಗೆ ಹುಳಿ, ಹಪ್ಪಳ, ಚಿಪ್ಸ್ ಕೂಡ ತಯಾರಿಸುತ್ತಾರೆಂದರೆ ಕೆಸುವಿನ ಸಾಮರ್ಥ ಅರ್ಥವಾಗಿರಲೇ ಬೇಕಲ್ವಾ...! ನಮ್ಮಜ್ಜಿ ಕೆಸುವಿನ ನಾಲ್ಕು ಕಾಲು (ಎಲೆಯ ತೊಟ್ಟಿನಂತಹ ಉದ್ದ ಕಾಂಡ) ತಂದು ಅದರ ಹೊರಭಾಗದ ನಾರನ್ನು ತೆಗ್ದು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ಹುಳಿ ಹಿಂಡಿ ಬೇಯಿಸಿ ಒಗ್ಗರಣೆ ಹಾಕಿದರೆ ಎರಡು ತುತ್ತು ಜಾಸ್ತಿಯೇ ಊಟ ಮಾಡುವಷ್ಟು ರುಚಿಯಿರುತ್ತಿತ್ತು.
     ನಾಗಾಲ್ಯಾಂಡಿನಲ್ಲಿ ಕೆಸುವಿನ ಎಲೆ ಒಣಗಿಸಿ ಪುಡಿಮಾಡಿ ಹಿಟ್ಟಿನೊಂದಿಗೆ ಬೆರೆಸಿ ಬಿಸ್ಕತ್ತು ಗಳಾಗಿ ಬೇಯಿಸಿ ಬೇಕೆಂದಾಗ ಮಾಂಸದ ಭಕ್ಷ್ಯಗಳಿಗೆ ಸೇರಿಸಲು ಈ ಬಿಸ್ಕತ್ತುಗಳನ್ನು ಕರಗಿಸುತ್ತಾರಂತೆ.
    ಅದರ ಎಲೆಯ ತರಹಾವರಿ ಪತ್ರೊಡೆ ತಿನ್ನದವರೇ ಇಲ್ಲವೇನೊ. ಎಲೆಯನ್ನು ಸ್ವಲ್ಪ ಬಾಡಲು ಬಿಟ್ಟು ಕಟ್ಟುವ ಸೇಟ್ಲ ಹಲಸಿನ ಬೀಜದೊಟ್ಟಿಗೆ ರುಚಿಕರ ಪಲ್ಯವಾಗುತ್ತದೆ. ಕೇವಲ ಕೆಸುವಿನೆಲೆಗೆ ಸಾಂಬಾರ ವಸ್ತುಗಳನ್ನು ಸೇರಿಸಿ ಮಾಡುವ ಸಾರೂ ವಿಶೇಷ ರುಚಿ ನೀಡುತ್ತದೆ. ತುಳುನಾಡಿನ ಆಟಿ ತಿಂಗಳಲ್ಲಿ ಕೆಸುವಿನೆಲೆ ತಿನ್ನಲೇ ಬೇಕೆಂದು ಹಿರಿಯರ ನಂಬಿಕೆ. ಹೊಟ್ಟೆಗೆ ಹೋಗಿರಬಹುದಾದ ಕೂದಲು, ಉಗುರಿನಂತಹ ಕಲ್ಮಶಗಳನ್ನು ಹೊರಹಾಕುವ ಶಕ್ತಿ ಕೆಸುವಿಗಿದೆ ಎನ್ನುತ್ತಾರೆ.
       ಮಕ್ಕಳೇ ನೀವು ಕೆಸು ಗಿಡವನ್ನು ನೋಡುವಾಗ ಅದರ ಬಣ್ಣಗಳನ್ನೂ ಗಮನಿಸಿರುವಿರಲ್ಲವೇ...? ದಕ್ಷಿಣ ಏಷಿಯಾ ಮೂಲದ ಕೆಸು ಅಮೆರಿಕ, ಆಫ್ರಿಕಾ, ವೆಸ್ಟ್ ಇಂಡೀಸ್, ನೇಪಾಳ, ಭಾರತ, ಪೂರ್ವ ಹಿಮಾಲಯ ಹೀಗೆ ವಿಶ್ವದ ಬಹುಭಾಗದಲ್ಲಿ ಕಂಡುಬರುತ್ತದೆ.          
       ಅಲಂಕಾರಿಕವಾಗಿಯಲ್ಲದೆ ತೋಟದ ಕೆಸು, ಕಾಡಕೆಸು, ಹಾಲುಕೆಸು, ನಾಟಿಕೆಸು, ಘಟ್ಟದ ಕೆಸು, ಕರಿಕೆಸು, ಬೇರುಕೆಸು, ಮರಕೆಸು ಹೀಗೆ ಅದರ ಗುಣಕ್ಕೆ ಹೊಂದಿಕೊಂಡ ಹಲವಾರು ಜಾತಿಗಳು ನಮ್ಮಲ್ಲಿವೆ.
        ಸೈಪ್ರಸ್ ನಲ್ಲಿ ರೋಮನ್ ಸಾಮ್ರಾಜ್ಯದ ಕಾಲದಲ್ಲೇ ಕೆಸುವಿನ ಬಳಕೆ ಇತ್ತೆನ್ನಲಾಗಿದೆ. ಗ್ರೀಕ್ ನಲ್ಲೂ ಸಂಪ್ರದಾಯದ ಭಾಗವಾಗಿದೆ. ಫೆಸಿಫಿಕ್ ದ್ವೀಪ ಅದರಲ್ಲೂ ಹವಾಯಿ ದ್ವೀಪವಾಸಿ ಜನರಿಗೆ ಕೆಸು ಪೂಜನೀಯ ಸಸ್ಯ. ಅಲ್ಲಿ ಅದಕ್ಕೆ ಸಂಬಂಧಿಸಿದಂತೆ ಸುಂದರವಾದ ಜನಪದ ಕತೆಯಿದೆ.
       ತುಳುನಾಡಿನಲ್ಲಿ ಹೊಸ ಅಕ್ಕಿ ಊಟ ಹಾಗೂ ಹೊಸ ಭತ್ತದ ತೆನೆ ತಂದು ಮನೆ ತುಂಬಿಸುವಾಗ ಮನೆಯಲ್ಲಿ ಬೆಳೆದ ಮುಳ್ಳುಸೌತೆ, ಹೀರೆ, ಹರಿವೆಗಳ ಜೊತೆಗೆ ಸ್ಥಾನ ಪಡೆಯುವುದು ಕಡು ಕಪ್ಪು ಬಣ್ಣದ ಕೆಸು. ನಮ್ಮಲ್ಲಿ ಈ ಕೆಸುವಿಗೆ ಸಾಂಪ್ರದಾಯಿಕವಾಗಿ ವಿಶೇಷ ಸ್ಥಾನಮಾನವಿದೆ.
     Colocasia esclulenta ಎಂಬ ಸಸ್ಯಶಾಸ್ರ್ತೀಯ ಹೆಸರುಳ್ಳ ಕೆಸು Araceae ಕುಟುಂಬಕ್ಕೆ ಸೇರಿದೆ
      ಮಳೆಗಾಲದಲ್ಲಿ ಉದ್ದಕ್ಕೆ ಬೆಳೆಯುವ ಕೆಸುವಿನ ಬೇರು ಬಹಳ ರುಚಿಯಾಗಿರುತ್ತದೆ. ಬಟಾಟೆಯಂತಹ ರುಚಿ ಇರುವ ಗಡ್ಡೆಗಳನ್ನು ನೀಡುವ ಕೆಸುವನ್ನು ರೈತರು ಕೃಷಿಯನ್ನಾಗಿಯೂ ಮಾಡಿಕೊಳ್ಳುತ್ತಾರೆ. ಕಾಡುಹಂದಿ, ಹೆಗ್ಗಣಗಳಲ್ಲದೆ ಇತರ ತೊಂದರೆಗಳು ಈ ಬೆಳೆಗಿಲ್ಲ. ಯಾವುದೇ ಕೆಲಸ ಮಾಡಲು ಬಾರದ ದುರ್ಬಲತೆಗೆ "ನಿನ್ನ ಕೈಯಲ್ಲಿ ಕೆಸುವೂ ಬೇಯದು". ಎಂದು ಹಂಗಿಸುವುದಿದೆ.
       ಬೇಸಗೆಯಲ್ಲಿ ಜೀವವನ್ನು ಮುಷ್ಟಿಯಲ್ಲಿಟ್ಟುಕೊಂಡು ನೆಲದೊಳಗೆ ಮೌನವಾಗಿ ತಪಸ್ಸಲ್ಲಿದ್ದಂತೆ ಕೂರುವ ಕೆಸು ಎಲ್ಲೋ ಕೆಸರಲ್ಲಿ, ಜೌಗಲ್ಲಿ, ನೀರಿನ ಆಶ್ರಯ ಇದ್ದಲ್ಲೆಲ್ಲಾ ಕಾಳಜಿಯನ್ನೇ ಬೇಡದೆ ಹಸಿರು ಹರಡಿ ಆನೆಯ ಕಿವಿಗಳಂತೆ ಅಂದವಾಗಿ ಬೆಳೆದು ನಿಲ್ಲುತ್ತದೆ. ಬೇಕರಿ ತಿನಿಸುಗಳಿಗೆ ದಾಸರಾದ ನಾವು ಕೆಸುವಿನ ದಂಟಿನ ಸಾರಿಗೆ ಮನ ಸೋಲಲಾರೆವು. ಅದರ ರುಚಿ ಹೆಚ್ಚಿಸುವಂತೆ ಮಾಡುವ ಅಂಬಟೆ ಕಾಯಿ ಮರವನ್ನೂ ಕಾಣಲಾರೆವು. 
        ಮಕ್ಕಳೇ, ನಾವು ಇನ್ನು ಬದಲಾಗಬೇಕಿದೆ. ಸುಲಭದಲ್ಲಿ ಬೆಳೆಯಬಹುದಾದ ಕೆಸುವನ್ನು ನಾವೆಲ್ಲರೂ ಬೆಳೆಯಬಹುದು. ಯಾವುದೇ ರಾಸಾಯನಿಕ ವಸ್ತುಗಳ ಬಳಕೆ ಇರದ ಇದರ ಯಾವುದೇ ಭಾಗವನ್ನು ಇಷ್ಟಪಟ್ಟು ತಿನ್ನಲು ರೂಢಿಸಿಕೊಳ್ಳಬೇಕು. ಇಲ್ಲವಾದರೆ ಇದೂ ನಮ್ಮ ನಡುವೆ ಕಣ್ಮರೆಯಾಗಲು ಹೆಚ್ಚು ಸಮಯ ಬೇಕಾಗದು ಅಂತ ಅನಿಸುತ್ತಿದೆ. ನೀವೇನಂತೀರಾ.....?
    ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗೋಣ.
........................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************



Ads on article

Advertise in articles 1

advertising articles 2

Advertise under the article