-->
ಕಥೆ ರಚನೆ : ಮೌನೇಶ ಬಾರಕೇರ , ದ್ವಿತೀಯ ಪಿಯುಸಿ

ಕಥೆ ರಚನೆ : ಮೌನೇಶ ಬಾರಕೇರ , ದ್ವಿತೀಯ ಪಿಯುಸಿ

ಕಥೆ ರಚನೆ : ಮೌನೇಶ ಬಾರಕೇರ
ದ್ವಿತೀಯ ಪಿಯುಸಿ
ಪ್ರಭವಿತುಂ ಪಿ ಯು ಕಾಲೇಜ್ ಮಸ್ಕಿ, 
ತಾಲ್ಲೂಕು ಮಸ್ಕಿ, ಜಿಲ್ಲೆ ರಾಯಚೂರು
                                             

     "ನಡಿ ನಡಿ ದೌಡ್ ನಡಿ... 'ಆನೆ' ನ ನೋಡೋಕೆ ಬೀಡಾಂಗಿಲ್ಲ ನೋಡು ಮತ್ತೆ..... ಅಲ್ಲಲೇ ರಾಮ್ಯ ಅಷ್ಟ್ಯಾಕ ಪುರ್ಸೊತ್ತು ಮಾಡ್ತಿಲೇ. ಇರು ನಾನು ಬರ್ತಾ ಇದೀನಿ. ಲೋ ಸಿದ್ದ ನೀನಾಲೇ!. ಅಲ್ಲಲೇ ನೀನಾ ಲೇಟ್ ಮಾಡಿ ಅವನಿಗೆ ಬೈದ್ರ ಹೆಂಗs ಹಾಂ!. ಅಂತ ಅವರು ಸೋಮ ಬ್ಯಾರೆತರ ರಾಗ ಎಳದ. ಇರ್ಲಿ ನಡೀರಿ ಆ 'ಆನೆ' ಗೆ ಹುಲ್ಲು ತಗೊಂಡು ಹೋಗಿದ್ದಾರೆ ಈಗ ನೋಡಿದ್ರಾತು, ಮತ್ತೆ ಹೊತ್ತ ಆದ್ರ "ಆನೆ"ಯ ಓನರ್ ಬೀಡಾಂಗಿಲ್ಲ. ಇರ್ಲಿ ಮಾತು ಸಾಕು, ಜಲ್ದಿ ನಡೀರಿ ಅಂತ ರಾಜ ಎಲ್ಲರಿಗಿಂತ ಹಿಂದ ನಿಂತು ಜೋಕು ಮಾಡ್ತಾನ. ಅಷ್ಟ್ರಲ್ಲ ಸಿದ್ದ ಲೇ ನಾಳೇ ನೆ ದಸರಾ ಏನ್ ಲೇ ಅಂತ ಅಂದ. ಅದಕ್ಕ ರಾಮ್ಯಾ ಲೇ ದಸರಾ ಮೊನ್ನೆನೇ ಮುಗಿತು. ನಮ್ಮೂರಾಗ ಮಹಾನವಮಿ ಗೆ "ಆನೆ" ದೇವಿಯ ಮೂರ್ತಿ ಹೊರುತ್ತದ ಅಂತ ಉಲ್ಟಾ ಹೊಡೆದ. ಇದೇನು ಇಷ್ಟು ಹುಡುಗ್ರು ಎಲ್ಲಿಗೆ ಹೊರಟಿದ್ದಾರೆ ಅನ್ನೋದು ತಲೆಗೆ ಹುಳಾ ಬಿಟ್ಟಾಂಗ ಆಗಿ ಲೇ ಎಲ್ಲಿಗೆ ಹೊರಟಿದ್ದೀರಿ ಲೇ ಅಂತ ಕೇಳಿಯೇ ಬಿಟ್ಟೆ.
"ಹೇ ಅಣ್ಣ ಆಮೇಲೆ ಬಂದು ಕೇಳು ಈಗ ನಾವು ಕಾಲಿ ಇಲ್ಲ" ಅಂತ ಅವ ರಾಜ ಅನ್ನಬೇಕೆ!?.
ಲೇ ನೀವು ಎಲ್ಲಿಗೆ ಹೊಂಟಿರಿ ಅಂತ ಹೇಳಿದ್ರ ನಾನು ನನ್ನ ಬೈಕಿನಲ್ಲಿ ಕರ್ಕೊಂಡು ಹೋಗ್ತೀನಿ ಅಂದೇ..... "ಹೇ ಇಲ್ಲ ಇಲ್ಲ ನಾವೇನು ಒಬ್ರಾ ಇಬ್ರಾ ನಾಲ್ಕು ಹುಡುಗ್ರು ಅದೀವಿ ನಿನ್ನ ಗಾಡಿ ಏನ್ ಏರೋಪ್ಲೇನ್ ಏನು?." ಹೋಗ್ರಿಲೇ ನಿಂದು ಬಾಳ ಐತಿ ನಾಳೇ ಕಾಲುವೆಗೆ ಈಜು ಆಡೋದಕ್ಕೆ ನನ್ನ ಬೈಕಿನ ಮೇಲೆ ಕರ್ಕೊಂಡು ಹೋಗು ಅಣ್ಣ ಅಂತ ಕೇಳ್ರಿ ಆವಾಗ ಐತೆ!. ಅಂತಂದು ಅವರ ವಿರುದ್ದ ದಿಕ್ಕಿಗೆ ಹೊರಟೆ. ಸ್ವಲ್ಪ ದೂರದ ನಂತರ ನಾಗ ಕಂಡ. ಅವನು ಮೆಲ್ಲಗೆ ಮೆಲ್ಲಗೆ ಹೆಜ್ಜೆಯನ್ನು ಇಟ್ಕೊಂಡು ಆನೆ ನಡ್ಕೊಂಡು ಬರೋ ಹಂಗೆ ಬರತಿದ್ದ.
"ಲೇ ನಾಗ ಎಲ್ಲಿಗೆ ಹೊಂಟಿ ಲೇ?..."
"ಇಲ್ಲೋ ಅಣ್ಣ ಇಲ್ಲಿ ಮಹಾಲಕ್ಷ್ಮಿ ಮಿಲ್ಲಿನ್ಯಾಗ ಆನೆ ಬಂದೈತಿ ಅಂತ ಅದಕ್ಕ ನೋಡಾಕ ಹೊಂಟೀನಿ".
"ಹಾಂ ಆನೆ ನಾ!, ನಡಿ ಲೇ ಹೋಗಾಂ ಬಾ". ಅದೇನೋ ಗೊತ್ತಿಲ್ಲ ಊರಿಗೆ ಬಂದ ಆನೆ ನ ಮೊದ್ಲು ನಾವೇ ನೋಡ್ಬೇಕು ಅಂತ ನಮ್ಮ ನಮ್ಮಲ್ಲೇ ಜಿದ್ದು. ಅದಕ್ಕೆ ನಾನು ನೋಡ್ತೀನಿ ಜಲ್ದಿ ಗಾಡಿ ಹತ್ತು ಅಂದೆ. ಅಷ್ಟೊಂದು ಯಾಕೆ ಅವಸರ ಮಾಡ್ತಿ ಅಣ್ಣಾ: ನಿಧಾನವಾಗಿ ಹೋಗೋಣ ಎಂದ. ಅದಕ್ಕೆ ನಾನು ಲೇ ನಿಮ್ಮ ದೋಸ್ತರೆಲ್ಲರೂ ಅಷ್ಟೊಂದು ಗಡಿಬಿಡಿಯಾಗಿ ಹೊಂಟಾರ ನೀನು ನೋಡಿದ್ರ ಹಿಂಗ್ ಹೊಂಟಿಯಲ್ಲ ಅಂದೇ... ಅದಕ್ಕ ಅವನು ಎನ್ ದೊಡ್ಡ ಬುದ್ಧ ಹೇಳಿದಂಗ "ನಿಧಾನವೇ ಪ್ರಧಾನ" ಅಂತ ನನಗ ದೊಡ್ಡ ಮಾತು ಹೇಳಿದ. ಲೇ ಹಂಗ ಹೇಳೋ ಟೈಮ್ ಅನ್ನಲೇ ಇದು ಅಂದೇ.
       ಅದಕ್ಕ ಇಲ್ಲ ಅಣ್ಣ ನಾನು ಹಿಂದಿನ ವರ್ಷ ಇದೆ ತರ ಗಡಿಬಿಡಿಯಾಗಿ ಎಲ್ಲರೂ ಹೋದಂಗ ಆನೆ ನೋಡಾಕ ಹೊರಟಿದ್ದೆ. ಅವಾಗ ಅರ್ಧ ದಾರೀಲಿ ನಮ್ಮಣ್ಣ ಸೈಕಲ್ ತಗೊಂಡು ನನ್ನ ನಮ್ಮವ್ವನ ಜೊತೆಯಾಗ ಹೊಲಕ್ಕ ಮೇವು ಕೊಯ್ಯಲು ಹೋಗಬೇಕಂತ ಬಾ ಅಂದು ಕರ್ಕೊಂಡು ಹೋದ. ಅವಾಗ ನನಗೆ ಎಷ್ಟು ಸಿಟ್ಟು ಬಂದಿತ್ತು ಅಂದ್ರೆ ಅದು ಹೇಳಲಾರದು!. ಆದ್ರೂ ನಮ್ಮಣ್ಣ ಬಡಿತಾನ ಅಂತ ಹೋದೆ.. ಹೋದ ತಕ್ಷಣ ನಮ್ಮವ್ವ ಮೇವು ಕೊಯ್ತಿದ್ದಳು. ನಾನು ಆನೆ ನೋಡೊ ಚಾನ್ಸ್ ಮಿಸ್ ಆಗಿದ್ದಕ್ಕ ಮುನಿಸಿಕೊಂಡು ಸುಮ್ಮನೆ ಗುರ್ರ್ಂತ ಕೂತಿದ್ದೆ. ನಮ್ಮವ್ವ ಯಾಕ ಅಂತ ಕೇಳಿದಾಗ ಸಿಟ್ಟಿಲೇ ನಿನ್ನಿಂದ ಆನೆ ನೋಡೋ ಚಾನ್ಸ್ ಹೋಯ್ತು ಅಂತ ಬೈದೆ. ಅದಕ್ಕ ನಮ್ಮವ್ವ ನಿಧಾನವೇ ಪ್ರಧಾನ ಅಂತ ಹೇಳಿದ್ಲು. ಹೋಗ್ ಅತ್ತಾಗ.. ದೊಡ್ಡದಾಗಿ ಗಾದೆ ಮಾತು ಹೇಳತಾಳ ಅಂತ ಅಂದೇ. ಮರುದಿನ ಬೆಳಿಗ್ಗೆ ಹುಡುಗ್ರು ಎಲ್ಲ ನನ್ನ ನೋಡಿ ಗೇಲಿ ಮಾಡುವಾಗ ನನಗ ಅಳುನೇ ಬಂದಿತ್ತು. ಆಗ ನಾನು ನಮ್ಮವ್ವನ ಜೊತೆ ಹೊಲಕ್ಕ ಹೊರಟಿದ್ದೆ. ಆಗ ನಮ್ಮವ್ವ ಅಲ್ಲಿ ನೋಡು ಮಗ ಆನೆ ಅಂದ್ಲು. ನಿಜವಾಗಿ ಅಲ್ಲಿ ಲಾರಿಯಲ್ಲಿ ಆನೆ ನಿಂತಿತ್ತು. ಕೂಡ್ಲೇ ಅವ್ವನ ಹತ್ರ ಎರೆಡು ರೂಪಾಯಿ ಇಸ್ಕೊಂಡು ಆನೆಗೆ ಕೊಟ್ಟು ಆಶೀರ್ವಾದ ತಗೊಂಡೆ. ಆಗ ಬಾಳ ಸಂತೋಷ ಆಯ್ತು. ಅವತ್ತೇ ಗೊತ್ತಾಯ್ತು ತಾಳ್ಮೆ ಎಷ್ಟೊಂದು ಮುಖ್ಯ ಅಂತ ಅಂದು ನಾಗ ಕಥೆ ಹೇಳಿದ.
     ಇದನ್ನ ಕೇಳಿದ ನಾನು "ಹೇ ಹೌದ ಇರ್ಲಿ ನಾವು ತಾಳ್ಮೆಯಿಂದ ಹೋಗೋಣ ಮತ್ತೆ ಈ ಬೈಕಲ್ಲಿ ಹೋದ್ರೆ ಪೆಟ್ರೋಲ್ ವೇಸ್ಟ್ ಆಗುತ್ತೆ ಅದಕ್ಕೆ ಮನೇಲಿ ಬಿಟ್ಟು ತಾಳ್ಮೆಯಿಂದ ಹೋಗೋಣ ಎಂದು ಹೋದೆವು. ಆದ್ರೆ ಅಲ್ಲಿ ಆನೆ ಹೋಗಿ ಸುಮಾರು ಹೊತ್ತಾಯ್ತಂತೆ. ಅಲ್ಲಿ ನಿಂತಿದ್ದ ಹುಡಿಗ್ರೆಲ್ಲ ನನ್ನ ಗೇಲಿ ಮಾಡಕತಿದ್ರು. ನನಗ ಆಗ್ಲೇ ಗೊತ್ತಾಯ್ತು ಅತಿಯಾದರೆ ಅಮೃತವೂ ವಿಷ ಅಂತ. ಆದ್ರೂ ಚಿಂತೆ ಇಲ್ಲ ನಾಳೇ ಮೆರವಣಿಗೆಯೊಳಗ ನೋಡಿದ್ರ ಆತು ಅಂತ ಸುಮ್ಮನಾದೆ...!!!
.................................... ಮೌನೇಶ ಬಾರಕೇರ ದ್ವಿತೀಯ ಪಿಯುಸಿ 
ಪ್ರಭವಿತುಂ ಪಿ ಯು ಕಾಲೇಜ್ ಮಸ್ಕಿ, 
ತಾಲ್ಲೂಕು ಮಸ್ಕಿ, ಜಿಲ್ಲೆ ರಾಯಚೂರು.
*******************************************

                  

      ಗುಂಡಪ್ಪ ಸರ್ ಬಾಳ ಅಂದ್ರೆ ಬಾಳ ಒಳ್ಳೆಯವರು. ಪ್ರಮಾಣಿಕತೆಯುಳ್ಳ ವ್ಯಕ್ತಿ. ಇವರಿಗೆ ಮಕ್ಕಳು ಎಂದರೆ ಅಷ್ಟೊಂದು ಪ್ರೀತಿ, ಕಾಳಜಿ. ಅದೇನೋ ಗೊತ್ತಿಲ್ಲ!, ಗುಂಡಪ್ಪ ಸರ್ ಮಕ್ಕಳ ಮೇಲೆ ತೋರುವ ಕಾಳಜಿ ನಂಗಂತೂ ಬಾಳ ಇಷ್ಟ ಅಂತ ಸೋಮು ದಿನಾಲು ಹೇಳಿದ್ದೆ, ಹೇಳಿದ್ದು. ಆದ್ರೆ ಅವನು ಹೇಳೋ ಮಾತಿನಲ್ಲಿ ಒಂದಿಷ್ಟಾದರೂ ದೋಷವಿಲ್ಲ. ಆ ಗುರುಗಳಲ್ಲಿನ ಗುಣ ಅಂತಹದ್ದು. ಅವಾ ಸೋಮ ಯಾಕ ದಿನಾ ಗುಂಡಪ್ಪ ಸರ್ ನ ನೆನಪು ಮಾಡ್ಕೊಂತಿದ್ದ ಅಂದ್ರೆ, ಸೋಮ ಬೇಜವಾಬ್ದಾರಿಯವ. ಒಟ್ಟ ಶಾಲಿಯಾಗ ಮಾಷ್ಟರರು ಹೇಳಿದ ಮಾತಾಗಲಿ, ಹೋಂ ವರ್ಕ್ ಆಗಲಿ ಏನೂ ಮಾಡಲ್ಲ. ಎಲ್ಲ ಸರ್ಸು ಬಡೀತಾರೆ. ಆದ್ರೆ ಗುಂಡಪ್ಪ ಸರ್ ಬಡಿಯಾಗಿಲ್ಲ. ಗುಂಡಪ್ಪ ಸರ್ ಅವನನ್ನ ತಿದ್ದುವ ಪ್ರಯತ್ನ ಮಾಡುತ್ತಿದ್ದಾರೆ ಅಂತ ಅವನಿಗೇನು ಗೊತ್ತು!.
       ಸೋಮು ಹೇಳುತ್ತಿದ್ದ ಮಾತು ಕೇಳಿದ್ರ "ಹೇ ಇವಾ ಎಷ್ಟೊಂದು ಶ್ಯಾಣ್ಯ" ಇರಬಹುದು ಅಂತ ಹೇಳ್ತೀರಾ. ಅಷ್ಟೊಂದು ಮಾತಿನಲ್ಲೇ ಮನೆ ಕಟ್ತಾನೇ. ಮಾತೇ ಇವನ ಬಂಡವಾಳ ಹೊರತು, ಯಾವುದೇ ಕೆಲಸವನ್ನು ಸಹ ಮಾಡುವುದಿಲ್ಲ. ಯಾವುದೇ ಕೆಲಸ ನೋಡಬೇಕಾದರೆ ಸೋಮುವಿನ ಅಕ್ಕ ಸುಷ್ಮಾಳನ್ನ ನೋಡಿ ಕಲಿಯಬೇಕು. ಆದ್ರೆ ಸೋಮು ಈ ಮಾತನ್ನು ಒಪ್ಪುವಂಗಿಲ್ಲ. ಎಲ್ಲದರಲ್ಲೂ ತಾನೇ ಮೊದಲು ಎಂದು ಜಂಬ ಕೊಚ್ಗೊಂತಾನ. ಮೊನ್ನೆ ತಾನೇ "ಹೇ ನಾನು ನಾಳೇ ನಡೆಯುವ ಟೆಸ್ಟ್ ನಾಗ ಔಟ್ ಆಫ್ ಔಟ್ ಮಾರ್ಕ್ ತೆಗಿತೀನಿ ಅಂತ ಹೇಳಿ ಫೇಲ್ ಆದ. ಅದಕ್ಕಾಗಿ ಗುಂಡಪ್ಪ ಸರ್ ಸೋಮುನ ಕೊಠಡಿಗೆ ಕರ್ದು, ಅವನಿಗೆ ಇಷ್ಟವಾದ ರವೆ ಉಂಡೆಯನ್ನು ಕೊಟ್ಟು ಸ್ವಲ್ಪ ಬುದ್ಧಿಮಾತನ್ನು ಹೇಳಿದ್ರು. ಅದಕ್ಕೆ ಇವಾ ರವೆ ಉಂಡೆ ಸಲುವಾಗಿ ಸೋಮು ಪೂರ್ತಿ ಅವರ ಪ್ರಭಾವಕ್ಕೊಳಗಾದನು. ಇವತ್ತು ಅಕ್ಕ ಸುಷ್ಮಾಳಿಗಿಂತ ಮೊದಲೇ ಮನೇಲಿ ಪುಸ್ತಕ ಹಿಡಿದು ಓದಾಕತ್ಯಾನ. ಸೋಮುವಿನ ತಂದೆ "ಹೋ!. ಬಾಳ ಸಂತೋಷ, ಇವತ್ತು ನನ್ನ ಮಗ ಪುಸ್ತಕ ಹಿಡಿದು ಓದಾಕತ್ಯಾನ ಅಂತ ಬಜಾರದಲ್ಲಿರೋ ರವೆ ಉಂಡೆಯನ್ನು ತಂದ". ಅಷ್ಟೇ ಸಾಕು ಸೋಮುವಿನ ಗಮನವೆಲ್ಲ ಆ ರವೆ ಉಂಡೆಯಲ್ಲಿಯೇ ಮುಳುಗಿತು. ಗುಂಡಪ್ಪ ಸರ್ ನ ರವೆ ಉಂಡೆಗಿಂತ ಬಜಾರದಲ್ಲಿರೋ ರವೆ ಉಂಡೆ ತುಂಬಾ ಸುವಾಸನೆ ಬೀರುತ್ತಿದ್ದವು. ಅಲ್ಲಿಗೆ ಗುಂಡಪ್ಪ ಸರ್ ನ ಮಾತು ಉಂಡೆಯಲ್ಲಿಯೇ ಅಂತ್ಯವಾಯ್ತು.
         ಏನೂ ಹೇಳಿದ್ರು ಇವ ಸೋಮು ಯಾರ ಮಾತು ಕೇಳಾವಲ್ಲ. ಯಾಕ ಕೇಳಾವಲ್ಲ ಅಂದ್ರ ಅದಕ್ಕ ಉತ್ತರ ಗುಂಡಪ್ಪ ಸರ್ ಗೆ ಮಾತ್ರ ಗೊತ್ತು. ಅದೇನಂದ್ರ ಅವ ಇನ್ನೂ ಮೂರನೇ ಕ್ಲಾಸ್. ಇಷ್ಟು ಬೇಗ ಅವನಿಗೆ ಕಷ್ಟದ ಅರಿವು ಮೂಡಿಸೋದು ಬೇಡ ಅಂತ. ಆದ್ರೆ ಆ ಚಿಕ್ಕ ವಯಸ್ಸಿನಲ್ಲೇ ಅವನನ್ನ ಯಾವ ಓಣಿಗಾದರೂ ಬಿಟ್ಟು ಬಂದ್ರೆ ಆಗಲೇ ಓಡಿ ಬಂದು ಬೀಡಾವ. ಇದೆ ಅವನ ಪ್ಲಸ್ ಪಾಯಿಂಟ್.
       ಇಂತ ವಿಷಯ ತಿಳಿಯಲು ಆ ಗುಂಡಪ್ಪ ಸರ್ ನಂಥ ಮಾಸ್ತರರಿಂದ ಮಾತ್ರ ಸಾಧ್ಯ. ಆದ್ರ ಇವನ್ನ ಸೋಮುವಿನ ತಂದಿ ತಾಯಿ ತಿಳಿಬೇಕಲ್ಲ. ಇವ ಹಿಂಗಾದ್ರ ಮಾತು ಕೇಳಲ್ಲ ಅಂತಂದು, ದೂರದ ಊರಿಗೆ ಹಾಸ್ಟೆಲ್ ಗೆ ಹಾಕಿ ಬಂದುಬಿಟ್ರು. ಆದ್ರೆ ಇವನು ಹಾಸ್ಟೆಲ್ ಗೆ ಹೋಗುವ ಮೊದಲು "ನೀವು ಏನೂ ವರ್ರಿ ಮಾಡ್ಕೊಬ್ಯಾಡದ್ರಿ" ಅಂತ ಹೇಳ್ತಾ ಇದ್ದಾನೆ. ಇವನ ಮಾತೇನು ಕೇಳೋದು ಬರಿ ಜಂಬದ ಮಾತು ಅಂತ ತಿಂಗಳಿಗೊಮ್ಮೆ ಬಂದು ಹೋಗ್ತಿದ್ರು. ಅವನಿಗಿಷ್ಟವಾದ ರವೆ ಉಂಡೆಯನ್ನು ಪ್ರತಿ ತಿಂಗಳು ಒಯ್ಯುತ್ತಿದ್ದರು.
    ಹೀಗೆ ಕೆಲವು ತಿಂಗಳುಗಳ ಕಾಲ ಹೋಗುತ್ತಾ ಬರುತ್ತಾ ಇದ್ದರು. ಸೋಮು ಸ್ವಲ್ಪ ಹಾಸ್ಟೆಲ್ ನ ಅನುಭವವನ್ನು ಉಣ್ಣುತ್ತಿದ್ದನು. ಯಾಕೋ ಎರಡೂ ಮೂರು ತಿಂಗಳಾಗ್ತಾ ಬಂತು ಅವ್ವ ಅಪ್ಪ ಬರಾವಲ್ಲರಲ್ಲ. ಅಲ್ಲಿ ಊರಾಗ ಏನಾರ ಆಗೇತಿ ಅನ್ನೋದು ಗೊತ್ತಿಲ್ಲ. ನಲವತ್ತು ರವೆ ಉಂಡೆಗಳು ಹಾಗೆ ಉಳಿದಿವೆ. ಸೋಮುವಿಗೆ ತಿನ್ನಲು ಹೋದರೆ ತಾಯಿಯ ನೆನಪಾಗುತ್ತಿದೆ. ಇಲ್ಲಿ ಏನೂ ಇಷ್ಟವಾಗುತ್ತಿಲ್ಲ. ಯಾಕೆ ಅಂತಾನೂ ಗೊತ್ತಿಲ್ಲ...?. ಅಂತ ಸೋಮು ಅಳುಮುಖದಿಂದ ದಿನಾ ಊರಿನ ದಾರಿ ಕಾಯುತ್ತಿದ್ದಾನೆ. ಸೋಮುವಿನ ತಂದೆ ತಾಯಿಯರು ಸ್ವಲ್ಪ ದಿನದ ಮಟ್ಟಿಗೆ ಅವನನ್ನು ಭೇಟಿಯಾದರು ಮತ್ತು ಇವನಿಗೆ ರೂಢಿಯಾಗಿರಬಹುದೆಂದು ಸುಮ್ಮನಿದ್ದರು. ಆದ್ರೆ ಇವ ಸೋಮುವಿಗೆ ಏನು ಗೊತ್ತು. ಆಗಲೇ ಇವನಿಗೆ ಒಂದು ಉಪಾಯ ಬಂತು. ಕೊಠಡಿಯ ಡಬ್ಬದಲ್ಲಿದ್ದ ನಲವತ್ತು ರವೆ ಉಂಡೆಯನ್ನು ಅಲ್ಲಿರುವ ಹುಡುಗರಿಗೆ ಐದು ರೂಪಾಯಿಯಂತೆ ಮಾರಿ ತನ್ನ ಊರನ್ನು ತಲುಪಿದನು.
      ಬಹಳ ದಿನದಿಂದ ತಮ್ಮನ ಅಗಲಿಕೆಯಿಂದ ಬೇಸತ್ತ ಅಕ್ಕ ಸುಷ್ಮಾಳ ಮುಖದಲ್ಲಿ ಸಂತಸ ಹುಟ್ಟಿತು. ಇವನ ಚಾತುರ್ಯವನ್ನು ತಾಯಿ ಹೊಗಳಿದರೆ, ಹಾಸ್ಟೆಲ್ ಗೆ ಕಟ್ಟಿದ ಅಷ್ಟೊಂದು ಹಣ ವ್ಯರ್ಥವಾಯಿತೆಂದು ಸೋಮುವಿನ ತಂದೆ ಗೊಣಗುತ್ತಾ ಗುಂಡಪ್ಪ ಸರ್ ನ ಶ್ಯಾಲಿಗೆ ಹಾಕಿದ.
.................................... ಮೌನೇಶ ಬಾರಕೇರ ದ್ವಿತೀಯ ಪಿಯುಸಿ 
ಪ್ರಭವಿತುಂ ಪಿ ಯು ಕಾಲೇಜ್ ಮಸ್ಕಿ, 
ತಾಲ್ಲೂಕು ಮಸ್ಕಿ, ಜಿಲ್ಲೆ ರಾಯಚೂರು.
*******************************************Ads on article

Advertise in articles 1

advertising articles 2

Advertise under the article