-->
ಜಗಲಿ ಕಟ್ಟೆ : ಸಂಚಿಕೆ - 2

ಜಗಲಿ ಕಟ್ಟೆ : ಸಂಚಿಕೆ - 2

ಜಗಲಿ ಕಟ್ಟೆ : ಸಂಚಿಕೆ - 2
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ, ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


       ನಾಳೆ ಜೂನ್ - 05 ವಿಶ್ವ ಪರಿಸರ ದಿನ. ಕಳೆದ ಎರಡು ವರ್ಷಗಳಲ್ಲಿ 'ಹಸಿರು ಸೈನಿಕರು' - ಶೀರ್ಷಿಕೆಯಡಿಯಲ್ಲಿ ಗಿಡ ನೆಡುವ, ಗಿಡದ ಪರಿಚಯ ಹಾಗೂ ನೆಟ್ಟ ಗಿಡದ ಬೆಳವಣಿಗೆಯ ಕುರಿತಾಗಿ ಟಾಸ್ಕ್ ಗಳನ್ನು ನೀಡಲಾಗಿತ್ತು. ಇಲ್ಲಿ ತೋರಿರುವ ಸ್ಪಂದನೆ, ಮಕ್ಕಳ ಪ್ರೀತಿ...... ನಮಗಂತೂ ತುಂಬಾ ಖುಷಿ ಕೊಟ್ಟಿತ್ತು. ನೂರಾರು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿರುವುದು ಪರಿಸರದ ಬಗೆಗಿನ ಕಾಳಜಿಯನ್ನು ಎತ್ತಿ ತೋರಿಸುತ್ತದೆ.
   'ಎಲ್ಲಾ ಬೀಜದೊಳಡಗಿದೆ ಮರ
    ಬೆಳೆದು ಪೋಷಿಸುವವರದೇ ಬರ'
ಎನ್ನುವ ದಿವಂಗತ ರವಿಕೃಷ್ಣ ಒಡ್ಡಂಬೆಟ್ಟು ಅವರ ಕವನದ ಸಾಲುಗಳು ಇಲ್ಲಿ ಪ್ರಸ್ತುತವೆನಿಸುತ್ತದೆ. 
    ಮತ್ತೆ ಈ ಸಲದ ಪರಿಸರ ದಿನಾಚರಣೆಯ ನೆನಪಿಗೆ, ನಿಮ್ಮ ಹುಟ್ಟು ಹಬ್ಬ ಅಥವಾ ವಿಶೇಷ ಸಂದರ್ಭದ ನೆಪದಲ್ಲಿ ಹೊಸ ಗಿಡಗಳನ್ನು ನೆಡುವ ಅವಕಾಶ ಒದಗಿ ಬಂದರೆ ಮುಂದಿನ ಜಗಲಿ ಕಟ್ಟೆ ಸಂಚಿಕೆಯಲ್ಲಿ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ.
      ನಿನ್ನೆಯಷ್ಟೇ (ಜೂನ್ - 3) ನಮ್ಮ ಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆ ಹೀಗಿತ್ತು.... ಶಾಲಾವರಣದ 400 ಮೀ ಸುತ್ತ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸುವುದಾಗಿತ್ತು. ಐದು ವಿದ್ಯಾರ್ಥಿಗಳ ಒಂದು ತಂಡದಂತೆ ನೂರಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲ ತಂಡಗಳಿಗೂ ಒಂದೊಂದು ಕಪ್ಪು ಬಣ್ಣದ ತ್ಯಾಜ್ಯ ತುಂಬಿಸುವ ಲಕೋಟೆ ನೀಡಲಾಗಿತ್ತು. 
      ವಿದ್ಯಾರ್ಥಿಗಳ ಉತ್ಸಾಹ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವ ಸವಾಲನ್ನು ಸ್ವೀಕರಿಸಿದ ಪ್ರೀತಿ ಅದ್ಭುತವಾಗಿತ್ತು. ಕೂಡಲೆ ಕಾರ್ಯಪ್ರವೃತ್ತರಾದ ಮಕ್ಕಳು.. ನೀಡಿದ ಸೂಚನೆಯ ಮೇರೆಗೆ ಕೇವಲ 45 ನಿಮಿಷದಲ್ಲಿ ಮತ್ತೆ ಶಾಲಾ ಮೈದಾನದಲ್ಲಿ ಹಾಜರ್. ಪ್ಲಾಸ್ಟಿಕ್ ಗಳ ರಾಶಿ ತುಂಬಿತ್ತು. ತ್ಯಾಜ್ಯ ತುಂಬಿಸಲು ನೀಡಿದ ಪ್ಲಾಸ್ಟಿಕ್ ಲಕೋಟೆ ಸಾಕಾಗದೆ ಹೋಟೆಲ್ ಇಸ್ಮಾಯಿಲ್ ನೀಡಿದ ಗೋಣಿ ಚೀಲದಲ್ಲಿ ರಾಶಿ ರಾಶಿ ಪ್ಯಾಸ್ಟಿಕ್ ಗಳನ್ನು ಹೆಕ್ಕಿ ತಂದಿದ್ದರು. ಅದಾಜು 75 ಕೆಜಿ ಪ್ಲಾಸ್ಟಿಕ್ ಸಂಗ್ರಹವಾಗಿತ್ತು.
        ದಿನಾ ಅಂಗಡಿಯಿಂದ ಚಾಕಲೇಟು, ಐಸ್ ಕ್ರೀಮ್, ತಿಂಡಿಯ ಪ್ಯಾಕೆಟ್ ಗಳನ್ನು ತಗೊಂಡು ರಸ್ತೆ ಬದಿಯಲ್ಲಿ ಬಿಸಾಡುತ್ತಿದ್ದ ನೆನಪುಗಳನ್ನು ಹಂಚಿಕೊಂಡ ವಿದ್ಯಾರ್ಥಿಯೊಬ್ಬ ಪ್ಲಾಸ್ಟಿಕ್ ರಾಶಿಗಳನ್ನು ಕಂಡಾಗ ಆಶ್ಚರ್ಯ ಚಕಿತನಾದ. ಪ್ರತಿಯೊಬ್ಬರೂ ತನ್ನ ಕಸವನ್ನು ತಾನೇ ನಿರ್ವಹಣೆ ಮಾಡಿದರೆ ಎಷ್ಟೊಂದು ಸುಂದರ ಅಲ್ಲವೇ....?
       ಕಳೆದ ಬೇಸಿಗೆ ರಜೆಯಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೆವು. ಊಟ ಮುಗಿಸಿ ನಮಗಿಂತ ಮುಂಚೆನೇ ಐಸ್ ಕ್ರೀಮ್ ತಿಂದ ನನ್ನ ಮಗಳು, ಎಂದಿನಂತೆ ಐಸ್ ಕ್ರೀಮ್ ತಟ್ಟೆಯನ್ನು ಡಸ್ಟ್ ಬಿನ್ ಗೆ ಬಿಸಾಡಿ ಬರುತ್ತೇನೆ ಅಂದು ಹೋದವಳು ಮುಖ ಸಪ್ಪೆ ಮಾಡಿ ಬಂದಳು. ಇನ್ನೂ ನಾಲ್ಕೂವರೆ ವರ್ಷ ಅವಳಿಗೆ. "ಯಾಕೆ, ಏನಾಯ್ತು" ಅಂದಾಗ , "ಡಸ್ಟ್ ಬಿನ್ ಇರಲಿಲ್ಲ" ಅಂದಳು. "ಮತ್ತೆಲ್ಲಿ ಹಾಕಿ ಬಂದೆ" ಅಂದಾಗ ದೂರದಲ್ಲಿ ಪ್ಯಾಸ್ಟಿಕ್ ರಾಶಿಯನ್ನು ತೋರಿಸಿ , "ಅಣ್ಣನವರು ಅಲ್ಲಿ ಹಾಕುತ್ತಿದ್ದರು ಅಲ್ಲೇ ಹಾಕಿ ಬಂದೆ" ಅಂದಳು.
        ಹಿರಿಯರನ್ನು ನೋಡಿ ಮಕ್ಕಳು ಕಲಿಯುತ್ತಾರೆ. ರಸ್ತೆ ಬದಿಯಲ್ಲಿ ಕಾಣುವ ಕಸವೂ ಹೀಗೆ.....!!!
      ಕಳೆದ ಸಂಚಿಕೆಯಲ್ಲಿ 'ಮಕ್ಕಳ ಜಗಲಿ' ಆರಂಭವಾದ ಕುರಿತಾಗಿ ಪ್ರಸ್ತಾಪಿಸಿದ್ದೆ. ಈ ಬಗ್ಗೆ ಹಲವಾರು ಅನಿಸಿಕೆಗಳನ್ನು ನೀವು ಬರೆದು ಕಳಿಸಿದ್ದೀರಿ. ಅವುಗಳನ್ನು ಇಲ್ಲಿ ಪ್ರಕಟಿಸಲಾಗಿದೆ...
      
       ನಮಸ್ತೆ ನಾನು ಧೀರಜ್ ಕೆ ಆರ್ ನ ಅಮ್ಮ. ನನ್ನ ಮಗ ಮಕ್ಕಳ ಜಗಲಿ ಪ್ರಾರಂಭ ಆದಾಗಿಂದಲೂ ತನ್ನ ಪ್ರತಿಭೆಯನ್ನು ಚಿತ್ರಕಲೆಯ ಮೂಲಕ ಹಾಗೂ ಅಕ್ಕನ ಪತ್ರಕ್ಕೆ ಉತ್ತರಿಸುವ ಮುಖೇನ ಭಾಗವಹಿಸುತ್ತಾ ಬಂದಿದ್ದಾನೆ. ತುಂಬಾ ಒಳ್ಳೆಯ ಆನ್ಲೈನ್ ಪತ್ರಿಕೆ ಅಂತ ಹೇಳ್ಬೋದು. ಕೊರೋನ ಬಂದ ಮೇಲೆ ಮಕ್ಕಳು ಮೊಬೈಲ್ಗೆ ದಾಸರಾಗುವುದನ್ನು ತಪ್ಪಿಸಿ ಮನಸ್ಸು ಒಳ್ಳೆಯ ವಿಚಾರ ಗಳನ್ನು ಓದಿ ತಿಳಿದುಕೊಂಡು ಕಥೆ, ಕವನ, ಚಿತ್ರಕಲೆಯತ್ತ ತಮ್ಮ ಚಿತ್ತವನ್ನು ಕೊಂಡೊಯ್ಯುವಲ್ಲಿ ಜಗಲಿ ಮುಖ್ಯ ಪಾತ್ರ ವಹಿಸಿದೆ. ವಿವಿಧ ರಂಗೋಲಿಯ ಚಿತ್ತಾರ ಅಂತೂ ತುಂಬಾ ಚೆನ್ನಾಗಿತ್ತು. ಒಳ್ಳೊಳ್ಳೆ ಚಿತ್ರಕಲೆಗಳು ಇನ್ನೂ ಕಲಿಯುವ ಮಕ್ಕಳಿಗಂತೂ ಸ್ಫೂರ್ತಿ ದಾಯಕ. ತೇಜಸ್ವಿನಿ ಅಕ್ಕಾ ಒಳ್ಳೊಳ್ಳೆ ನೈಜ ಕಥೆಗಳನ್ನು ಮಕ್ಕಳಿಗೆ ಹೇಳುತ್ತಾ ಮಕ್ಕಳನ್ನು ಓದುವಂತೆ ಪ್ರೇರೇಪಿಸುತ್ತಿದ್ದರು. ಅದೆಷ್ಟೋ ಮಕ್ಕಳು ಓದುವ ಹಾಗೂ ಬರೆಯುವ ಅಭ್ಯಾಸ ರೂಡಿಸಿ ಕೊಂಡಿದ್ದಾರೆ. ನಿಜಕ್ಕೂ ಹೆಮ್ಮೆ ಪಡಬೇಕು. ಮಕ್ಕಳ ಜಗಲಿಯ ಸ್ಥಾಪಕರಾದ ತಾರಾನಾಥ್ ಕೈರಂಗಳ್ ಸರ್ ನಿಮಗೆ ಹಾಗೂ ತುಳಸಿ ಮೇಡಂ ನಿಮಗೂ ಧನ್ಯವಾದಗಳು 
............................ ದಿವ್ಯ ಕೆ ಆರ್ ಕೊಡೆಂಕೀರಿ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************



      ಮಕ್ಕಳ ಜಗಲಿಯ ಎಲ್ಲ ಬಂಧು ಮಿತ್ರರಿಗೂ ನನ್ನ ನಮಸ್ಕಾರಗಳು. ನಾನು ಜಗಲಿಯ ಜೊತೆ ಕಳೆದದ್ದು ಕೆಲವೇ ದಿನಗಳಾದರೂ ಮನದಲ್ಲಿ ಒಳ್ಳೆಯ ಭಾವನೆ, ಕುತೂಹಲ ಮೂಡಿಸಿದೆ. ಏನೂ ತಿಳಿಯದ ನನ್ನಲ್ಲಿ ನನ್ನ ಶಿಕ್ಷಕರು ಬರವಣಿಗೆಯ ಹವ್ಯಾಸ ಮೂಡುವಂತೆ ಮಾಡಿದರು. ನನ್ನ ಬರವಣಿಗೆಗೆ ಮೆಚ್ಚುಗೆಯನ್ನು ನೀಡಿದ ಜಗಲಿಯ ಶಿಕ್ಷಕರಿಂದ ಬಂಧು ಮಿತ್ರರಿಂದ ಉತ್ತೇಜನ ದೊರೆಯುವಂತೆ ಮಾಡಿತು. ಕಾಣದ ಅದೆಷ್ಟೋ ಕೈಗಳು ನಮ್ಮಂತಹ ಎಳೆಯರನ್ನು ಜಗಲಿಯಿಂದ ಹರಸುವಂತಾಯಿತು. ಪ್ರತಿ ವಾರಾಂತ್ಯವೂ ಅಕ್ಕನ ಪತ್ರದ ಭಾವನೆಗಳು ಎಲ್ಲರ ಮನ ಕದ್ದಿದೆ. ಹಲವು ಮಕ್ಕಳ ಕತೆ, ಕವಿತೆಗಳು ಮನಸ್ಸನ್ನು ರಂಜಿಸುತ್ತಿವೆ. ಅನೇಕ ಜಗಲಿಯ ಹಿರಿಯರ ಮಾತುಗಳು ನಮ್ಮೆಲ್ಲರಿಗೂ ಸ್ಪೂರ್ತಿ ತುಂಬುತ್ತಿವೆ. ಜಗಲಿಯ ಪ್ರತಿ ಮಕ್ಕಳಿಗೂ ಒಂದೊಳ್ಳೆ ಸಾಧನೆಯ ದಾರಿಯನ್ನು ಹುಡುಕಿ ಹೋಗುವಂತಹ ಮೆಟ್ಟಿಲನ್ನು ರೂಪಿಸಿಕೊಟ್ಟಿರುವ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಈ ಜಗಲಿಕಟ್ಟೆಗೆ ಇನ್ನೂ ಹೆಚ್ಚಿನ ಮಕ್ಕಳ ಆಗಮನವಾಗಲಿ, ಜಗಲಿಯ ಮಕ್ಕಳಾದ ನಮ್ಮೆಲ್ಲರಿಗೂ ನಿಮ್ಮನ್ನೆಲ್ಲ ಕಾಣುವ ಅವಕಾಶ ದೊರೆಯುವಂತಾಗಲಿ, ಪ್ರತಿಯೊಬ್ಬರ ಮನೆಯ ಅಂಗಳದಲ್ಲಿಯು ಜಗಲಿ ಶೋಭಿಸುವಂತಾಗಲಿ. ಶುಭವಾಗಲಿ.. ಇಂತಿ,
.................. ರಮ್ಯ ಶ್ರೀನಿವಾಸ್ ಚಕ್ರಸಾಲಿ
ದ್ವಿತೀಯ ಪಿಯುಸಿ, ದಾವಣಗೆರೆ
****************************************



      ಮಕ್ಕಳ ಜಗಲಿಯ ನನ್ನ ಆತ್ಮೀಯ ಶಿಕ್ಷಕ -ಶಿಕ್ಷಕಿಯರಿಗೆ ಜನನಿ ಮಾಡುವ ನಮಸ್ಕಾರಗಳು. ಜಗಲಿ ಕಟ್ಟೆ ಸಂಚಿಕೆ 1 ಅಂಕಣವನ್ನು ಆರಂಭಿಸಿರುವ ತಾರಾನಾಥ ಕೈರಂಗಳ ಸರ್ ಗೆ ಹೃತ್ಪೂರ್ವಕ ಧನ್ಯವಾದಗಳು. ಜಗಲಿಯ ನನ್ನ ಅನುಭವ ಅನಿಸಿಕೆಗಳನ್ನು ಬರೆದು ಕಳಿಸಬೇಕೆಂದು ಎಷ್ಟೋ ದಿನಗಳಿಂದ ಆ ಸಮಯದ ನಿರೀಕ್ಷೆಯಲ್ಲಿದ್ದೆ. ಕೊರೊನಾ ಸಮಯದ ಸಂದಿಗ್ದತೆಯು ನಮಗೆ ಅನೇಕ ಪಾಠಗಳನ್ನು ಕಲಿಸಿದೆ. ಕೊರೊನಾ ಸಮಯದಲ್ಲಿ ನಮಗೆ ಶಾಲೆಗೆ ರಜೆ ಇತ್ತು. ಇ - ಪತ್ರಿಕೆ ಮಕ್ಕಳ ಜಗಲಿಯಲ್ಲಿ ಬರುವ ಕಥೆ , ಕವನ, ಲೇಖನ, ಚಿತ್ರಕಲೆ, ಕ್ರಾಫ್ಟ್ ಹೀಗೆ ಹಲವಾರು ಕಲಾ ಚಟುವಟಿಕೆಗಳನ್ನು ನಾನು ತಪ್ಪದೇ ನೋಡುತ್ತೇನೆ. ಇದರಿಂದ ನನ್ನಲ್ಲೂ ಕಥೆ, ಕವನ, ಅಕ್ಕನ ಪತ್ರ, ಚಿತ್ರಕಲೆ, ಕ್ರಾಫ್ಟ್ ಮಾಡುವ ಹುಮ್ಮಸ್ಸು ಮೂಡಿತು. ನನಗೂ ನನ್ನ ತಮ್ಮನಿಗೂ ಮಕ್ಕಳ ಜಗಲಿಗೆ ಚಿತ್ರ ಬಿಡಿಸಿ ಕಳಿಸುವುದೆಂದರೆ ಎಲ್ಲಿಲ್ಲದ ಸಂತೋಷ. ಕಥೆ ಬರೆಯುವುದರಲ್ಲಿ ಮೆಚ್ಚುಗೆ ಪ್ರಮಾಣ ಪತ್ರ ಸಿಕ್ಕಿದಾಗ ತುಂಬಾ ಸಂತೋಷವಾಯಿತು. ಮಕ್ಕಳ ಜಗಲಿ ನಮ್ಮ ಜಗಲಿ. ಇದರಿಂದ ನಾನು ಸಾಕಷ್ಟು ಒಳ್ಳೆಯ ಅಭ್ಯಾಸಗಳನ್ನು ಕಲಿತೆನು. ಮಕ್ಕಳ ಜಗಲಿಯಲ್ಲಿ ಅವಕಾಶ ಸಿಕ್ಕಿದಕ್ಕೆ ತುಂಬಾ ಸಂತೋಷವಾಯಿತು. ಇದರಿಂದ ಸಮಾಜದಲ್ಲಿ ಉತ್ತಮ ವಿದ್ಯಾರ್ಥಿಯಾಗಿ ಗುರುತಿಸಿಕೊಳ್ಳುವುದಕ್ಕೆ ಸಹಾಯವಾಯಿತು. ನಮ್ಮಂತಹ ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆಯನ್ನು ತೋರಿಸುವ ವೇದಿಕೆ ಎಂದು ಹೇಳಿದರೆ ತಪ್ಪಾಗಲಾರದು. ಎಳೆಯ ಮಕ್ಕಳ ಪ್ರತಿಭೆಯನ್ನು ತೋರಿಸುವ ಪತ್ರಿಕೆ. ಒಟ್ಟಿನಲ್ಲಿ ಹೇಳುವುದಾದರೆ ನನಗೆ ಮತ್ತು ನನ್ನ ತಮ್ಮನಿಗೆ ಮಕ್ಕಳ ಜಗಲಿ ಎಂದರೆ ತುಂಬಾ ತುಂಬಾ ಇಷ್ಟ. ಪ್ರೋತ್ಸಾಹ ಕೊಡುತ್ತಿರುವ ನನ್ನ ಪ್ರೀತಿಯ ಪೋಷಕರಿಗೂ ಹಾಗೂ ಗುರುಗಳಿಗೂ ಧನ್ಯವಾದಗಳು.
............................................... ಜನನಿ .ಪಿ
7ನೇ ತರಗತಿ 
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಕೊಯಿಲ ಕೆ.ಸಿ.ಫಾರ್ಮ 
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
****************************************



     ಮಕ್ಕಳ ಜಗಲಿಯ ಎಲ್ಲಾ ಕುಟುಂಬಸ್ಥರಿಗೂ ನನ್ನ ನಮಸ್ಕಾರ. ಮಕ್ಕಳ ಜಗಲಿಯ ಬಗ್ಗೆ ಹೇಳಿ ಮುಗಿಯದಷ್ಟು ಅನಿಸಿಕೆಗಳಿವೆ. ಅನಿಸಿಕೆಗಳಲ್ಲಿ ನನ್ನ ಒಂದೆರಡು ಅನಿಸಿಕೆ ಮೂರು ವರ್ಷಗಳ ಹಿಂದೆ ಕೊರೋನ ಎಂಬ ವೈರಸ್ ಬಂದಾಗ ಶಾಲೆಗಳಿಲ್ಲದೆ ಮನೆಯಲ್ಲಿ ಕುಳಿತಿರುವಂತಹ ಸಮಯದಲ್ಲಿ ಪರಿಚಯವಾದಂತಹ ಕುಟುಂಬವೇ ಮಕ್ಕಳ ಜಗಲಿ.
      ಮೂರು ವರ್ಷಗಳಿಂದ ನಿರಂತರವಾಗಿ ಮಕ್ಕಳ ಜಗಲಿಯಲ್ಲಿ ಕತೆ ಕವನಗಳನ್ನು ಬರೆದು ನನ್ನಲ್ಲಿ ಅಡಗಿದ್ದ ಪ್ರತಿಭೆಯನ್ನು ಎತ್ತಿ ತೋರಿಸಿದಂತಹ ಮಕ್ಕಳ ಜಗಲಿಯ ತಾರಾನಾಥ್ ಸರ್ ಅವರಿಗೆ ತುಂಬು ಹೃದಯದ ಧನ್ಯವಾದ. ನನಗೆ ಪ್ರೋತ್ಸಾಹ ಕೊಟ್ಟಂತಹ ನನ್ನ ಪ್ರೀತಿಯ ಭಾರತೀ ಟೀಚರ್ ಇವರನ್ನು ಮರೆಯಲಾಗದ ನೆನಪು. ಮಕ್ಕಳ ಜಗಲಿಯು ನಮ್ಮ ಪ್ರತಿಭೆಗಳನ್ನು ಎತ್ತಿ ತೋರಿಸುವ ವೇದಿಕೆ. ಈ ಮಕ್ಕಳ ಜಗಲಿಯಲ್ಲಿ ಕತೆ ಕವನಗಳನ್ನು ಬರೆದು ಕನ್ನಡದ ಅರಿವು ಮೂಡಿದೆ. ಮಕ್ಕಳ ಜಗಲಿಯಲ್ಲಿ ನನ್ನ ಶಾಲಾ ವಿದ್ಯಾಭ್ಯಾಸಕ್ಕೆ ತುಂಬಾ ಉಪಯೋಗವಾಗಿದೆ. ಮಕ್ಕಳ ಜಗಲಿಯೂ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ.
...................................................... ಶಿಫಾನ
ಪ್ರಥಮ ಪಿಯುಸಿ
ಅನುಗ್ರಹ ವುಮೆನ್ಸ್ ಕಾಲೇಜ್ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


    ನೀವೂ ನಮ್ಮ ಜೊತೆಯಾಗಿ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article