ಜೀವನ ಸಂಭ್ರಮ : ಸಂಚಿಕೆ - 88
Sunday, June 4, 2023
Edit
ಜೀವನ ಸಂಭ್ರಮ : ಸಂಚಿಕೆ - 88
ಲೇಖಕರು : ಎಂ.ಪಿ. ಜ್ಞಾನೇಶ್
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ..... ಈ ಮಾಹಿತಿಯನ್ನು ಶಿಕ್ಷಕ ಮಿತ್ರ ಶಿವಕುಮಾರ್ ಚುನಾವಣೆ ಕೆಲಸದಲ್ಲಿ ಜೊತೆಯಲ್ಲಿದ್ದಾಗ ಮೊಬೈಲ್ ಗೆ ಕಳುಹಿಸಿದ ಮೆಸೇಜ್. ನಮ್ಮ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಒಪ್ಪಿಕೊಳ್ಳುವುದು. ಚಾಣಕ್ಯನ ಹೆಸರು ಕೇಳಿದ್ದೀರಿ. ಆತ ಒಂದು ಸಾಮ್ರಾಜ್ಯ ಸ್ಥಾಪಿಸಿ ರಾಜಗುರುವಾಗಿದ್ದವನು. ವಾಸ ಅರಣ್ಯದಲ್ಲಿ. ಗುಡಿಸಲು ಕಟ್ಟಿಕೊಂಡು ಇದ್ದನು. ಸುತ್ತ ಮುತ್ತ ಸುಂದರ ಹೂ ಹಾಗೂ ಹಣ್ಣಿನ ಗಿಡಗಳು. ದೇಹದ ಮೇಲೆ ಕನಿಷ್ಠ ಬಟ್ಟೆ. ಅತ್ಯಂತ ಕಡಿಮೆ ವಸ್ತುಗಳಿಂದ ಸುಂದರ ಜೀವನ ಸಾಗಿಸುತ್ತಿದ್ದನು ಎಂದು ಹೇಳುತ್ತಾರೆ. ಈಗ ಓದಿ.
1. ವಿಷ ಎಂದರೇನು?
ಚಾಣಕ್ಯ- ಆತ ಬಹು ಸುಂದರ ಉತ್ತರ ನೀಡಿದ್ದಾನೆ. ನಮ್ಮ ಅವಶ್ಯಕತೆಗಿಂತ ಏನು ಹೆಚ್ಚಾದರೂ ಅದು ವಿಷ. ಅದು ಅಧಿಕಾರವಿರಬಹುದು, ಐಶ್ವರ್ಯ, ಹಸಿವು, ದುರಾಸೆ, ಸೋಮಾರಿತನ ಇರಬಹುದು, ಪ್ರೇಮ, ಆಕಾಂಕ್ಷೆ, ದ್ವೇಷ ಯಾವುದಾದರೂ ಇರಬಹುದು. ಅದು ಅತಿಯಾದರೆ ವಿಷ.
2. ಭಯ ಎಂದರೇನು?
ಚಾಣಕ್ಯ- ಅನಿಶ್ಚಿತತೆಯನ್ನು ಒಪ್ಪದಿರುವುದು. ಆ ಅನಿಶ್ಚಿತತೆಯನ್ನು ಒಪ್ಪಿಕೊಂಡರೆ ಸಾಹಸವಾಗುತ್ತದೆ.
3. ಅಸೂಯೆ ಎಂದರೇನು?
ಚಾಣಕ್ಯ- ಇನ್ನೊಬ್ಬರಲ್ಲಿರುವ ಒಳ್ಳೆಯತನವನ್ನು ಒಪ್ಪದಿರುವುದು. ಆ ಒಳ್ಳೆಯತನವನ್ನು ಒಪ್ಪಿಕೊಂಡರೆ ಅದು ಪ್ರೇರಣೆ ಆಗುತ್ತದೆ.
4. ಕೋಪ ಎಂದರೇನು?
ಚಾಣಕ್ಯ - ನಮ್ಮ ನಿಯಂತ್ರಣದ ಆಚೆಯ ವಿಷಯಗಳನ್ನು ಒಪ್ಪುದಿರುವುದು. ಅದನ್ನು ಒಪ್ಪಿಕೊಂಡರೆ ಅದು ಸಹಿಷ್ಣುತೆಯಾಗುತ್ತದೆ.
5. ದ್ವೇಷ ಎಂದರೇನು?
ಚಾಣಕ್ಯ- ಒಬ್ಬ ಮನುಷ್ಯನನ್ನು ಅವನಿರುವಂತೆ ಒಪ್ಪದಿರುವುದು. ಆ ಮನುಷ್ಯನನ್ನು ಬೇಷರತ್ತಾಗಿ ಅವನಿರುವಂತೆ ಒಪ್ಪಿಕೊಂಡರೆ ಅದು ಪ್ರೀತಿಯಾಗುತ್ತದೆ.
ಈ ಮೇಲ್ಕಂಡ ಎಲ್ಲವೂ ಒಪ್ಪಿಕೊಳ್ಳುವುದಕ್ಕೆ ಸಂಬಂಧಿಸಿದವುಗಳಾಗಿವೆ. ವಿರೋಧಿಸುವಿಕೆ ಒತ್ತಡವನ್ನು ಸೂಚಿಸುತ್ತದೆ. ಒಪ್ಪಿಕೊಳ್ಳುವಿಕೆ ಒತ್ತಡವನ್ನು ದೂರ ಮಾಡುತ್ತದೆ. ಶಾಂತವಾಗಿ ಆಲೋಚಿಸಿ ಮಕ್ಕಳೇ.
ಒಪ್ಪಿಕೊಳ್ಳುವುದು ಎಂದರೆ ಹೇಗಿದೆಯೋ ಹಾಗೆ ಒಪ್ಪಿಕೊಳ್ಳಬೇಕು. ನಾವು ಭಾವಿಸಿದಂತೆ ಒಪ್ಪಿಕೊಳ್ಳುವುದಲ್ಲ. ಹೀಗೆ ಒಪ್ಪಿಕೊಳ್ಳಬೇಕಾದರೆ ಮನಸ್ಸು ಸ್ವಚ್ಛವಾಗಿರಬೇಕು. ನಾವು ಭಾವಿಸಿದಂತೆ ಜಗತ್ತಿಲ್ಲ. ಒಂದು ವಸ್ತುವನ್ನು ಪ್ರೀತಿಯಿಂದ ನೋಡಿದರೆ ಒಂದು ರೀತಿ ಕಾಣುತ್ತದೆ. ದ್ವೇಷದಿಂದ ನೋಡಿದರೆ ಮತ್ತೊಂದು ರೀತಿ ಕಾಣುತ್ತದೆ.
ಉದಾಹರಣೆಗೆ, ಒಂದು ಹೂವನ್ನು ಹೂ ಮಾರುವವ ಹಣದ ದೃಷ್ಟಿಯಿಂದ ನೋಡುತ್ತಾನೆ. ಅವನಿಗೆ ಹೂವಿನ ಸೌಂದರ್ಯ, ಸುವಾಸನೆ ಬೇಕಾಗಿಲ್ಲ. ಒಬ್ಬ ವಿಜ್ಞಾನಿ ಅದರ ಭಾಗಗಳನ್ನೆಲ್ಲ ವಿಭಜಿಸಿ ಅದರ ರಚನೆ ಕಾರ್ಯ ತಿಳಿದು ಸಂತೋಷ ಪಡುತ್ತಾನೆ. ಒಬ್ಬ ಕವಿ ಹೂವಿನ ಸೌಂದರ್ಯ ಸುವಾಸನೆಯನ್ನು ಮನಸ್ಸಿನಲ್ಲಿ ತುಂಬಿಕೊಂಡು, ಸಂತೋಷದ ಅನುಭವ ಪಡೆದು, ಸುಂದರ ಪದಗಳ ಮೂಲಕ ಕವಿತೆ ರಚಿಸುತ್ತಾನೆ. ಪ್ರೇಮಿಗೆ ಒಂದು ರೀತಿ ಕಂಡರೆ, ಪ್ರೇಮ ವೈಫಲ್ಯದವರೆಗೆ ಮತ್ತೊಂದು ರೀತಿ ಕಾಣುತ್ತದೆ. ಹೂ ಒಂದೇ, ಅದು ಹೇಗಿದೆಯೋ ಹಾಗೇ ಇದೆ. ನೋಡುವವರ ದೃಷ್ಟಿ ಬೇರೆ ಬೇರೆ. ಒಪ್ಪಿಕೊಳ್ಳುವವರು ಅದು ಹೇಗಿದಿಯೋ ಹಾಗೆ ಒಪ್ಪಿಕೊಳ್ಳುವುದನ್ನು ಕಲಿಯಬೇಕಾಗುತ್ತದೆ. ಅಲ್ಲವೇ ಮಕ್ಕಳೇ.....
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************