ಮಗನ ಹಟ - ಅಮ್ಮನ ಆತಂಕ - ಮೌನ ಅಪ್ಪ...!
Monday, June 12, 2023
Edit
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿದು ಹೋಯಿತು. ಮೌಲ್ಯಮಾಪನ ಮತ್ತು ಮರು ಮೌಲ್ಯಮಾಪನವೂ ನಡೆಯಿತು. ಅದೆಷ್ಟೋ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದರೆ, ಇನ್ನು ಕೆಲವರು ನಿರಾಸೆಗೊಂಡವರೂ ಇದ್ದಾರೆ. ನನ್ನ ಮಗನೂ ಈ ಬಾರಿಯ ಪರೀಕ್ಷೆ ಬರೆದಿದ್ದ. ಎಸ್.ಎಸ್.ಎಲ್.ಸಿ. ವರ್ಷಾರಂಭದಿಂದಲೇ ಆತನ ಅಮ್ಮನಿಗೆ ತನ್ನ ಮಗ ಉತ್ತಮ ಅಂಕ ಗಳಿಸಬೇಕೆಂಬ ಬಯಕೆ. ಬಹುಶ: ಬಹುತೇಕ ಅಮ್ಮಂದಿರ ಬಯಕೆಯೂ ಇದೇ ಇರಬಹುದು. ಪ್ರತಿ ದಿನ ಅಮ್ಮ ಮಗನ ಮಧ್ಯೆ ಒಂದು ವಾಗ್ವಾದ, ಸ್ವಲ್ಪ ಮುನಿಸು ಸಹಜ ಪ್ರಕ್ರಿಯೆ ಎಂಬಂತೆ ನಡೆಯುತ್ತಿತ್ತು. ಅಪ್ಪನಾದ ನಾನು ಮೂಕ ಪ್ರೇಕ್ಷಕನಾಗಿ ಅವರ ಮಧ್ಯೆ ನಡೆಯುತ್ತಿದ್ದ ಪ್ರತಿಯೊಂದು ಸಂಭವಗಳನ್ನೂ ನೋಡುತ್ತಿದ್ದೆ. ಸ್ವಾಭಾವಿಕವಾಗಿ ಆತ ಒಳ್ಳೆದು ಮಾಡಿದಾಗಲೆಲ್ಲಾ ಅವನು ನನ್ನ ಮಗ ಅಲ್ಲವಾ...? ಎಂಬ ಪ್ರಶ್ನೆ. ತಪ್ಪು ಮಾಡಿದಾಗಲೆಲ್ಲಾ 'ಆತ ನಿಮ್ಮ ಮಗ ಅಲ್ಲವೇ...?' ಎಂಬ ಕುಹಕ ಮಾತು.
ಮಗನ ಎಸ್.ಎಸ್.ಎಲ್.ಸಿ. ಅಮ್ಮನಿಗೆ ಆತಂಕ ಮೂಡಿಸಿತ್ತೇ ಹೊರತು ಮಗನಿಗಲ್ಲ. ಆತ ಪೂರ್ತಿ ವರ್ಷ ಗಂಭೀರವಾಗಿ ಓದಿದ್ದು ನಾನು ನೋಡಿಯೇ ಇಲ್ಲ. ಶಾಲೆಯಲ್ಲಿ ನಡೆಯುವ ಆಟೋಟ ಅಂದರೆ ಆತನಿಗೆ ಪಂಚಪ್ರಾಣ. ಪಿ.ಇ.ಟಿ. ಕ್ಲಾಸ್ ಇದೆ ಅಂದರೆ ಮನೆಯಿಂದಲೇ ದೇವರಲ್ಲಿ ಆ ತರಗತಿ ತಪ್ಪದಿರಲಿ ಎಂದು ಪ್ರಾರ್ಥಿಸುತ್ತಿದ್ದ. ಆತ ಆಡದ ಆಟಗಳೇ ಇಲ್ಲ. ಅದು ಕಬ್ಬಡಿಯಾಗಿರಲಿ, ತ್ರೋಬಾಲ್ ಇರಲಿ ಇಲ್ಲವೇ ಕ್ರಿಕೆಟ್ ಇರಲಿ. ಆದಿತ್ಯವಾರ ತಾನೇ ತಂಡ ಕಟ್ಟಿ ಕ್ರಿಕೆಟ್ ಪಂದ್ಯ ನಡೆಸುತ್ತಿದ್ದ. ಎಸ್.ಎಸ್.ಎಲ್.ಸಿ. ಪರೀಕ್ಷೆಯ ಬಗ್ಗೆ ಅಮ್ಮ ಅದೆಷ್ಟೇ ಹೇಳಿದರೂ ಆತ ಅದರ ಬಗ್ಗೆ ತಲೆಕೆಡಿಸಿಕೊಳ್ಳುವವನೇ ಅಲ್ಲ. ಸಂಜೆ ಮನೆಗೆ ಬಂದನೆಂದರೆ ಹೆಚ್ಚೆಂದರೆ ಅರ್ಧ ಗಂಟೆ ಏನಾದರೂ ಶಾಲೆಯ ಬಗ್ಗೆ ಬರೆಯುತ್ತಿದ್ದ ಇಲ್ಲವೇ ಓದುತ್ತಿದ್ದ. ನಂತರ ಒಂದೋ ಮೊಬೈಲ್ ಇಲ್ಲಾ ಅಂದರೆ ಟಿ.ವಿ. ಮುಂದೆ ಇರುತ್ತಿದ್ದ. ಅಮ್ಮನ ಆತಂಕ ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ದಿನೇ ದಿನೇ ಹೆಚ್ಚಾಗುತ್ತಿತ್ತು. ಕೆಲವೊಮ್ಮೆ ಆತನ ಮೇಲಿನ ಕೋಪ ನನ್ನ ಮೇಲೆ ತಿರುಗುತ್ತಿದ್ದದ್ದೂ ಇದೆ. ಆದರೆ ನಾನು ಶಿಕ್ಷಕನಾದರೂ, ಆತನನ್ನು ಗಮನಿಸುತ್ತಿದ್ದೆನೇ ಹೊರತು ಒತ್ತಡ ಹಾಕುವ ಕೆಲಸ ಮಾಡುತ್ತಿರಲಿಲ್ಲ. ಆತ ಏನೂ ಓದದಿದ್ದರೂ ನಿರಾಸೆಯಂತೂ ಮಾಡಲಾರ ಎಂಬ ವಿಶ್ವಾಸ ನನಗಿತ್ತು. ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲೂ ಆತ ಉತ್ತಮ ಸಾಧನೆಯನ್ನೇನೂ ತೋರಿರಲಿಲ್ಲ. ನಾನು ಆತ ಅದೆಷ್ಟೇ ಅಂಕ ಪಡೆದರೂ ಸ್ವೀಕಾರ ಮಾಡು ಮನೋಸ್ಥಿತಿಯಲ್ಲಿದ್ದೆ. ಆದರೆ ಆತನ ಅಮ್ಮನ ಆತಂಕ, ಭಯ ನೋಡುವಾಗ ನನಗೆ ಕಸಿವಿಸಿಯಾಗುತ್ತಿತ್ತು. ಕೆಲವೊಮ್ಮೆ ಆಕೆಯ ಒತ್ತಡಕ್ಕೆ ಬಿದ್ದು ಆತನಿಗೆ ಗದರಿಸಿದ್ದೂ ಇದೆ. ಆದರೆ ಆತ ಅದ್ಯಾವುದಕ್ಕೂ ತಲೆಕೆಡಿಸಿಕೊಂಡದ್ದೇ ಇಲ್ಲ. ನೀನು ಒಳ್ಳೆ ಅಂಕ ತೆಗೆಯದಿದ್ದರೆ ದೂರದ ಹಾಸ್ಟೆಲ್ ನಲ್ಲಿ ಹಾಕುತ್ತೇವೆ ಎಂದು ಗದರಿಸಿದ್ದೂ ಆಯಿತು. ಹಾಸ್ಟೆಲ್ ಸೇರಿಸಿದರೆ, ಕಂಪೌಂಡ್ ಹಾರಿ ಮನೆಗೆ ಬರುತ್ತೇನೆ ಎಂದು ಹೇಳುತ್ತಿದ್ದ.
ಅಂತೂ ಅಂತಿಮ ಪರೀಕ್ಷೆ ಬಂದೇ ಬಿಟ್ಟಿತ್ತು. ಅಮ್ಮನ ಒತ್ತಾಯಕ್ಕೆ ಮಣಿದು ರಾತ್ರಿ ಶಾಲೆಯಲ್ಲೇ ಕುಳಿತು ಎಂಟು ಗಂಟೆ ತನಕ ಓದುತ್ತಿದ್ದ. ಅದೊಂದೇ ಆತ ಮಾಡಿದ ಒಳ್ಳೆಯ ಕೆಲಸ. ಆದರೆ ಅಲ್ಲಿಂದ ಮನೆಗೆ ಬಂದರೆ ಪುಸ್ತಕ ಮುಟ್ಟುತ್ತಿರಲಿಲ್ಲ. ಪ್ರಶ್ನಿಸಿದರೆ ಅದೆಲ್ಲಾ ಶಾಲೆಯಲ್ಲಿ ಓದಿ ಬಂದಿದ್ದೇನೆ ಎನ್ನುತ್ತಿದ್ದ. ಇನ್ನು ಪರೀಕ್ಷೆ ಬಂದೇ ಬಿಟ್ಟಿತು. ಇನ್ನಾದರೂ ಸ್ವಲ್ಪ ಗಂಭೀರತೆ ಬರಬಹುದೆಂದು ಭಾವಿಸಿದ್ದೆವು. ಆದರೆ ಅದೇ ಸಮಯಕ್ಕೆ ಐಪಿಎಲ್ ಬಂದೇ ಬಿಟ್ಟಿತು. ಆತನಿಗೆ ಪರೀಕ್ಷೆಗಿಂತ ಐಪಿಎಲ್ ಮುಖ್ಯವಾಗಿತ್ತು. ನಾನು ಎಷ್ಟೇ ಮೌನವಾಗಿದ್ದರೂ ಮನಸ್ಸಿನಲ್ಲೊಂದು ದುಗುಡವಿತ್ತು. ಆದರೆ ಕಡೆಗೂ ಗಂಭೀರವಾಗಿ ಓದದ ಮಗನ ಬಗ್ಗೆ ಅಮ್ಮ ತೀರಾ ಹತಾಶಳಾಗಿದ್ದಳು. ಅವಳು ತಾಳ್ಮೆಯನ್ನು ಕಳೆದು ಕೊಳ್ಳುತ್ತಿದ್ದದ್ದೂ ನಾನು ಗಮನಿಸುತ್ತಿದ್ದೆ.
ಎಲ್ಲಾ ಆತಂಕಗಳ ಮಧ್ಯೆ ಕಡೆಯ ಪರೀಕ್ಷೆಯೂ ಮುಗಿದೇ ಹೋಯಿತು. ಹೇಗೆ ಬರೆದಿದ್ದಿ ಎಂದು ಪ್ರಶ್ನಿಸಿದರೆ ನಗುತ್ತಿದ್ದ. ಕಡೆಗೆ ಅಮ್ಮನ ಆತಂಕ ನೋಡಿ ಆತನಿಗೇ ದಿಗಿಲಾಗಿತ್ತು. ಫಲಿತಾಂಶದ ದಿನ ಹತ್ತಿರ ಬರುತ್ತಿದ್ದಂತೆ ಅಮ್ಮನ ಬಳಿ ಬಂದು "ನಿನ್ನ ಮಗಳಿಗಿಂತ ಒಂದು ಅಂಕವಾದರೂ ಜಾಸ್ತಿ ತೆಗೆಯುತ್ತೇನೆ" ಎಂದು ಹೇಳತೊಡಗಿದ. ಆದರೆ ನಮಗ್ಯಾರಿಗೂ ಆ ನಂಬಿಕೆ ಇರಲಿಲ್ಲ. ಮಗಳು ಓದುತ್ತಿದ್ದ ರೀತಿಗೂ ಈತ ಓದುತ್ತಿದ್ದ ರೀತಿಗೆ ಅಜಗಜಾಂತರವಿತ್ತು. ಅಂದು ಫಲಿತಾಂಶದ ದಿನ. ಅಮ್ಮ ದಿಗಿಲುಗೊಂಡಿದ್ದಳು. ನನ್ನ ಬಳಿ ಬಂದ ಮಗ "ಅಪ್ಪ ನನಗೆ ಕಡಿಮೆ ಅಂಕ ಬಂದರೆ ಅಮ್ಮನ ಮುಂದೆ ನಿಲ್ಲಲು ಸಾಧ್ಯವಿಲ್ಲ, ನಾನು ನೇರ ಬೆಂಗಳೂರಿಗೆ ಬಸ್ಸು ಹತ್ತುತ್ತೇನೆ, ಮನೆಗೆ ಬರುವುದಿಲ್ಲ" ಅಂದಾಗ ನನಗೆ ನಿಜಕ್ಕೂ ಶಾಕ್ ಹೊಡೆದ ಅನುಭವ. ಆತ ಸ್ನೇಹಿತನ ಮನೆಗೆ ಹೊರಟಿದ್ದ. ಕಾರಲ್ಲಿ ಕೂರಿಸಿ ಸಮಧಾನ ಪಡಿಸಿದೆ. "ನೀನು ಫೇಲಾದರೂ ಮನೆಗೆ ಬಾ, ನಿನ್ನೊಂದಿಗೆ ನಾನಿದ್ದೇನೆ" ಎಂದು ಧೈರ್ಯ ತುಂಬಿ ಕಳುಹಿಸಿದೆ. ಫಲಿತಾಂಶ ಬಂದೇ ಬಿಟ್ಟಿತು. 604 ಅಂಕ ಪಡೆದಿದ್ದ. ಅಕ್ಕನಿಗಿಂತ 6 ಅಂಕ ಕಡಿಮೆ. ಮನೆಗೆ ಬಂದವನೇ ಅಮ್ಮನ ಎದುರು ಕುಳಿತು "ಅಮ್ಮ ನಿನಗೆ 604 ಅಂಕಗಳು ಸಾಲದೇ?" ಎಂದು ಪ್ರಶ್ನಿಸಿದ. ಆದರೆ ಅಕ್ಕನಿಗಿಂತ ಕಡಿಮೆ ಬಂದದ್ದು, ಆತ ಮಾತು ಉಳಿಸಿಕೊಂಡಿರಲಿಲ್ಲ. ನನ್ನ ಬಳಿಗೆ ಬಂದವನೇ "ಅಪ್ಪ ನನಗೆ ಅಕ್ಕನಿಗಿಂತ ಒಂದು ಅಂಕ ಜಾಸ್ತಿ ಬರಲೇ ಬೇಕು, ನೀನು ಮರು ಮೌಲ್ಯಮಾಪನಕ್ಕೆ ಹಾಕುತ್ತೀಯಾ?" ಅಂದ. ಅಷ್ಟೊಂದು ಹಣ ಕಟ್ಟಿ ಯಾಕೆ...? ಅಂದೆ. ಇಲ್ಲ ಆತನ ಒತ್ತಾಯಕ್ಕೆ ಮರು ಮೌಲ್ಯಮಾಪನಕ್ಕೂ ಹಾಕಿದೆ. ಅದರ ಫಲಿತಾಂಶವೂ ಬಂದೇ ಬಿಟ್ಟಿತು. ಆಶ್ಚರ್ಯವೆಂದರೆ ಆತ ಮರು ಮೌಲ್ಯಮಾಪನದಲ್ಲಿ 611 ಅಂಕಗಳನ್ನು ಪಡೆದು ಅಕ್ಕನಿಗಿಂತ ಒಂದು ಅಂಕ ಹೆಚ್ಚು ಪಡೆದು ಮಾತು ಉಳಿಸಿಕೊಂಡ. ಅಮ್ಮನ ಬಳಿ ಬಂದು ನಾನೆಷ್ಟೇ ಓದದಿದ್ದರೂ 611 ಅಂಕಗಳನ್ನು ಪಡೆದಿಲ್ಲವೇ....? ಎಂದು ಅಮ್ಮನಲ್ಲಿ ಹೇಳತೊಡಗಿದ. "ಅಮ್ಮ ಇಪ್ಪತ್ತನಾಲ್ಕು ಗಂಟೆ ಓದಿದವರು ನನಗಿಂತ ಹೆಚ್ಚೆಂದರೆ ಹದಿನಾಲ್ಕು ಅಂಕ ಪಡೆದಿರಬಹುದು. ಆದರೆ ಯಾವುದನ್ನೂ ತಲೆಕೆಡಿಸಿಕೊಳ್ಳದೆ ನಿನ್ನ ಮಗ ತೆಗೆದ ಈ 611 ನೀನು ಬಯಸುತ್ತಿದ್ದ 625 ಅಂಕಗಳಿಗಿಂತ ಗ್ರೇಟ್" ಎನ್ನುವಾಗ ಅವನ ಅಮ್ಮ ಸಮಾಧಾನವಾಗದಿದ್ದರೂ, ನನಗಂತೂ ಆತನ ಬಗ್ಗೆ ಹೆಮ್ಮೆ ಮೂಡಿತು. ಮುಂದೆ ಅದೇನನ್ನೋ ಸಾಧಿಸಬಲ್ಲ ಎಂಬ ಭರವಸೆ ಮೂಡಿತು. ನಮ್ಮ ಒತ್ತಡಕ್ಕಿಂತ ಅವರಿಷ್ಟದಂತೆ ಓದುವುದೇ ಉತ್ತಮ ಅನ್ನಿಸಿತು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************