-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 67

ಸ್ಫೂರ್ತಿಯ ಮಾತುಗಳು : ಸಂಚಿಕೆ - 67

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

ಸ್ಫೂರ್ತಿಯ ಮಾತುಗಳು : ಸಂಚಿಕೆ - 67
                           
      ಹೊಟ್ಟೆ ತುಂಬ ಊಟವಾದ ಮೇಲೆ ಐಸ್ ಕ್ರೀಂ ಕೊಟ್ಟರೆ ಅದನ್ನು ತಿನ್ನುವ ಬಯಕೆ, ಬಾಯಾರಿಕೆಯಿಲ್ಲದಿದ್ದರೂ ಸೇಬಿನ ಜ್ಯೂಸ್ ಸಿಕ್ಕಿದರೆ ಕುಡಿಯುವ ಬಯಕೆ, ಕಪಾಟಿನಲ್ಲಿ ಬೇಕಷ್ಟು ಉಡುಪುಗಳಿದ್ದರೂ ಬೇರೆಯವರು ಹೊಸ ಉಡುಪನ್ನು ಧರಿಸಿರುವುದನ್ನು ಕಂಡಾಗ ಖರೀದಿಸುವ ಬಯಕೆ, ಬೇರೊಂದು ರಾಜ್ಯವನ್ನು ನೋಡಿದಾಗ ಚಕ್ರವರ್ತಿಯಾದವನಿಗೆ ಅದನ್ನೂ ಆಳುವ ಬಯಕೆ, ಎದ್ದು ನಿಲ್ಲಲಾಗದ ಸ್ಥಿತಿಯಲ್ಲಿದ್ದರೂ ಕುಡುಕನಿಗೆ ಮತ್ತೊಂದು ಲೋಟ ಕುಡಿಯುವ ಬಯಕೆ.... ಹೀಗೆ ಬಯಕೆಗಳಿಗೆ ಮಿತಿಯಿಲ್ಲ. ನರಕ ಶಿಕ್ಷೆಯ ಸನಿಹದಲ್ಲಿದ್ದರೂ ಶ್ವೇತಕುಮಾರನಿಗೆ ರಂಭೆಯ ಸ್ನೇಹದ ಬಯಕೆಯಾಯಿತು. ಮನುಷ್ಯನು ಬಯಕೆಗಳ ಗೋಪುರದಲ್ಲೇ ತೇಲುತ್ತಿರುತ್ತಾನೆ. ಬಯಕೆಯು ಮನುಜ ಸಹಜ ಗುಣ. ಬಯಕೆಗಳಿರದವನು ಮನುಷ್ಯನಾಗಿರಲು ಅಸಾಧ್ಯ. ಆದರೆ ಬಯಕೆಯಲ್ಲಿ ಮಿತಿಯಿರುವುದು ಶ್ರೇಷ್ಠ ಗುಣ. ಬಸವಣ್ಣನವರು ಬಯಕೆಗಳ ರಾಹಿತ್ಯವೇ ಜೀವನ್ಮುಕ್ತಿಗೆ ಸಾಧನ ಎನ್ನುವರು. 
      ಈ ವಚನದ ಮೂಲಕ ಭಕ್ತಿ ಭಂಡಾರಿ ಬಸವಣ್ಣನವರು ಬಯಕೆಗಳ ಸೆಳೆತಕ್ಕೆ ಕಾರಣವಾಗುವ ಅಂಗಗಳನ್ನು ನಿಯಂತ್ರಿಸುವ ಶಕ್ತಿಯನ್ನು ಭಗವಂತನಿಂದ ಬೇಡುತ್ತಾರೆ. ಈ ವಚನಕ್ಕೆ ಒಂದು ಮಹತ್ತರವಾದ ಅರ್ಥವಿದೆ. ಶರೀರದ ಎಲ್ಲ ಅಂಗಾಂಗಗಳಿಗೆ ಅವುಗಳದೇ ಆದ ಚಂಚಲತೆಯಿದೆ. ಮನಸಿನ ಏಕಾಗ್ರತೆಗೆ ಭಂಗ ತಂದು, ಮನೋವಿಕಾರಕ್ಕೆ ಕಾರಣವಾದ ಚಂಚಲತೆಯನ್ನು ದೂರಮಾಡಲು ದೇವರಲ್ಲಿ ಅವರ ಭಿನ್ನಹವಿದೆ. ಪರಮಾತ್ಮನ ಪ್ರಾಪ್ತಿಗೆ ಬಾಹ್ಯ ಸೆಳೆತಗಳನ್ನು ಮೀರಿ ನಿಲ್ಲುವ ಶಕ್ತಿ ಎಲ್ಲರಿಗೂ ಬೇಕು. ಮುಕ್ತಿಯನ್ನು ಪಡೆಯಲು ವಿಕೃತ ಮನಸ್ಸು ತಡೆಯೊಡ್ಡುತ್ತದೆ. ಮಿತವಾದ ಬಯಕೆಗೆ ಅನಿಯಂತ್ರಿತ ವಿಕೃತ ಮನಸ್ಸೇ ಕಾರಣ. ಬಯಕೆಯ ಸಂಗವಳಿದು ಅನುಭಾವಸಂಗ ನಮಗೆ ಉಳಿಯ ಬೇಕು.
      ಬಯಕೆಗಳು ಸಾಂಸಾರಿಕ ಜಂಜಡ. ಜಂಜಡದಿಂದ ಮುಕ್ತಿಯೇ ಜೀವನ್ಮುಕ್ತಿ. ಅನುಭಾವಿಯಾದವನಿಗೆ ವಿಕಾರ ಮನಸ್ಸು ಇರುವುದಿಲ್ಲ. ಪ್ರಪಂಚದೊಳಗಿದ್ದರೂ ಅನುಭಾವಿಗಳು ಪ್ರಾಪಂಚಿಕ ಮೋಹಗಳಿಂದ ಮುಕ್ತರಾಗುತ್ತಾರೆ. ಕೆಸರೊಳಗಿದ್ದರೂ ಕೆಸರನ್ನಂಟಿಸಿಕೊಳ್ಳದ ಕಮಲದಂತೆ ಅನುಭಾವಿಗಳು ಸಂಸಾರದೊಳಗಿದ್ದರೂ ಕಾಮನೆಯ ಕೆಸರನ್ನು ಅಂಟಿಸಿಕೊಳ್ಳದೆ, ನಿರ್ಮಲರೂ ನಿಶ್ಚಿಂತರೂ ಆಗಿರುತ್ತಾರೆ. ಬಸವಣ್ಣ ಅನುಭಾವದ ಉತ್ತುಂಗ ಶಿಖರವೇರಿದ ಮಹಾನುಭಾವ. ಸಕಲ ಸಾಧನೆಗಳ ಶಿಖರಾರೋಹಿಯಾಗಿ ಲೋಕಕ್ಕೆ ಸತ್ಪಥದ ದಿಕ್ಸೂಚಕರಾದರು.
     ಸೆಳೆತಗಳಿಗೆ ಜಾರದಿರಲು, ಬಯಕೆಗಳಿಗೆ ಮುಗಿ ಬೀಳದಿರಲು ಇಂದ್ರಿಯಗಳ ಪಾತ್ರವು ಮುಖ್ಯವಾಗಿರುತ್ತದೆ. ಹೆಳವನಾದರೆ ಸೆಳೆತದೆಡೆಗೆ ಹೋಗಲಾಗದು. ಅಂಧತ್ವವೂ ಬಯಕೆಯ ನಿಯಂತ್ರಣಕ್ಕೆ ಪೂರಕ. ಕಿವುಡುತನವೂ ಅನ್ಯ ವಿಷಯಕ್ಕೆಳೆಸದಂತೆ ನಿಯಂತ್ರಣ ಸಾಧ್ಯವಿದೆ. ಕೈಕಾಲು, ಕಣ್ಣು, ಕಿವಿಗಳಿಲ್ಲದೆ ಬದುಕಿರದು. ಹೆಳವನ ಮಾಡು, ಕುರುಡನ ಮಾಡು, ಕಿವುಡನ ಮಾಡು ಎನ್ನುವಲ್ಲಿ ಆ ಅಂಗಗಳು ಬೇಡವೆಂಬ ಆಶಯವಿಲ್ಲ. ಆಕರ್ಷಣೆಗೊಳಗಾಗಿ ಮನದೊಳಗೆ ಹೊಸ ಹೊಸ ಬಯಕೆಗಳು ಹುಟ್ಟದಿರಲಿ ಎಂಬ ಘನವಾದ ಆಶಯವಷ್ಟೇ ಇದೆ. ಮಕ್ಕಳೇ, ಬಯಕೆಗಳಿರಲಿ, ಬಯಕೆ ವ್ಯಾಮೋಹವಾಗದಂತೆ ಎಚ್ಚರಿಕೆಯಿರಲಿ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article