-->
ಜೀವನ ಸಂಭ್ರಮ : ಸಂಚಿಕೆ - 89

ಜೀವನ ಸಂಭ್ರಮ : ಸಂಚಿಕೆ - 89

ಜೀವನ ಸಂಭ್ರಮ : ಸಂಚಿಕೆ - 89
ಲೇಖಕರು : ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ


                      
       ಮಕ್ಕಳೇ, ನಾನು ಮದ್ದೂರು ತಾಲೂಕಿನಲ್ಲಿ ಕ್ಷೇತ್ರ ಸಮನ್ವಯಾದಿಕಾರಿಯಾಗಿದ್ದೆನು. ನನ್ನ ಮಗ ಆಗ ಚಿಕ್ಕವನು. ಸುಮಾರು ಹತ್ತು, ಹನ್ನೆರಡು ವರ್ಷ ಇರಬೇಕು. ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನಲ್ಲಿ ಗಗನಚುಕ್ಕಿ ಬರಚುಕ್ಕಿ ಎಂಬ ಎರಡು ಜಲಪಾತವಿದೆ. ಅದರ ಸಮೀಪ ಮಾರಮ್ಮ ದೇವಸ್ಥಾನವಿದೆ. ಅಲ್ಲಿ ಹರಕೆ ಹೊತ್ತವರು ಪೂಜೆ ಮಾಡುತ್ತಾರೆ. ಅಲ್ಲಿಗೆ ನನ್ನ ಪತ್ನಿ ಸಂಬಂಧಿಕರು ಪೂಜೆ ಇಟ್ಟುಕೊಂಡಿದ್ದರು. ನನ್ನ ಕುಟುಂಬವನ್ನು ಆಹ್ವಾನಿಸಿದ್ದರು. ನಾನು ನನ್ನ ಮಗ ಮತ್ತು ಪತ್ನಿ ಅಲ್ಲಿಗೆ ಹೋಗಿದ್ದೆವು. ಪೂಜೆ ಆಯಿತು. ಪ್ರಸಾದ ತಿನ್ನಬೇಕು. ಅಲ್ಲಿ ಒಂದು ವಿಶಾಲ ಮರದ ಕೆಳಗೆ ಕುಳಿತು, ಪ್ರಸಾದ ಹಂಚಿದರು. ನನ್ನ ಮಗನ ಕೈಗೆ ಪ್ರಸಾದ ನೀಡಿದರು. ಆಟವಾಡುವ ವಯಸ್ಸು, ಆ ಪ್ರಸಾದ ಹಿಡಿದುಕೊಂಡು ಆಟವಾಡುತ್ತಿದ್ದನು. ಆ ಮರದಲ್ಲಿ ಮಂಗಗಳ ಗುಂಪು ಇತ್ತು. ಅದರಲ್ಲಿ ಒಂದು ಮಂಗ ಬಂದು, ನನ್ನ ಮಗನ ಕೈಯಲ್ಲಿದ್ದ ಪ್ರಸಾದ ಕಿತ್ತುಕೊಂಡು ಓಡಿತು. ನನ್ನ ಮಗ ಕಿರುಚಿಕೊಂಡು ಓಡಿ ಬಂದು ನನ್ನ ಬಳಿ ಕುಳಿತುಕೊಂಡನು. ಕಿತ್ತುಕೊಂಡು ಹೋದ ಮಂಗನನ್ನೇ ನೋಡುತ್ತಿದ್ದೆವು. ಆ ಮಂಗ ಕಿತ್ತುಕೊಂಡು ಓಡುತ್ತಿತ್ತು. ಆ ಮಂಗನನ್ನು ಉಳಿದ ಮಂಗಗಳು ಬೆನ್ನಟ್ಟಿದವು. ಕಿತ್ತುಕೊಂಡ ಮಂಗ ಪ್ರಸಾದವನ್ನು ತಿನ್ನಲು ಆಗುತ್ತಿಲ್ಲ ಏಕೆಂದರೆ ಉಳಿದ ಮಂಗಗಳು ಅದನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದವು. ಕಿತ್ತುಕೊಂಡ ಮಂಗ ಓಡಾಡಿ ಸುಸ್ತಾಗಿ ಆ ಪ್ರಸಾದ ಬಿಟ್ಟುಬಿಟ್ಟಿತು. ಉಳಿದ ಮಂಗಗಳಲ್ಲಿ ಒಂದು ಬಲಿಷ್ಠ ಮಂಗ ಅದನ್ನು ಎತ್ತಿಕೊಂಡು ಓಡುತ್ತಿತ್ತು. ಉಳಿದ ಮಂಗಗಳು ಅದರ ಬೆನ್ನು ಹತ್ತಿದ್ದವು.
     ಈ ಘಟನೆ ನೋಡಿದಾಗ ನನಗೆ ಕುರ್ಚಿಯ ಅಧಿಕಾರದ ನೆನಪು ಬಂದಿತ್ತು. ಒಂದು ಅಧಿಕಾರದ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಎಷ್ಟೊಂದು ಸ್ಪರ್ಧೆ ಹೋರಾಟ ಇದೆ ಅಲ್ಲವೇ. ಕುಳಿತವನು ಅಧಿಕಾರ ಅನುಭವಿಸುವುದಿಲ್ಲ. ಏಕೆಂದರೆ ಬೇರೆಯವರು ಅವನನ್ನು ಇಳಿಸಲು ಪ್ರಯತ್ನ ಪಡುತ್ತಿರುತ್ತಾರೆ. ಮತ್ತೆ ಆತ ತನ್ನ ಕುರ್ಚಿಯನ್ನು ಕಾಯಂ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾನೆ. ಹೀಗಾಗಿ ಅಧಿಕಾರ ಅನುಭವಿಸುವುದಿಲ್ಲ.
     ಮತ್ತೊಂದು ಘಟನೆ. ಒಂದು ಊರಲ್ಲಿ ಸಂತೆ ಇತ್ತು. ಆ ಸಂತೆಯಲ್ಲಿ ಒಬ್ಬ ವ್ಯಕ್ತಿ ತರಕಾರಿ ಮತ್ತು ಹಣ್ಣುಗಳನ್ನು ಗುಡ್ಡೆ ಹಾಕಿಕೊಂಡು ಕೂಗುತ್ತಿದ್ದನು. ಅವುಗಳ ಬೆಲೆ ತುಂಬಾ ಕಡಿಮೆ ಇತ್ತು. ಬಂದ ಬಂದವರೆಲ್ಲ ಅದನ್ನು ಹೆಚ್ಚು ದಿನಕ್ಕೆ ಆಗುತ್ತೆ ಎಂದು ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಂಡು ಹೋದರು. ಕೆಲವೇ ಗಂಟೆಯಲ್ಲಿ ಆ ಹಣ್ಣು ತರಕಾರಿ ಖಾಲಿ ಆಯಿತು. ಇದರಲ್ಲಿ ನನ್ನ ಸ್ನೇಹಿತರು ಸಾಕಷ್ಟು ಖರೀದಿಸಿದರು. ನಾನು ಖರೀದಿಸಿದ್ದೆ. ಬಹಳ ಸಂತೋಷದಿಂದ ಮನೆಗೆ ತಂದೆನು. ಇನ್ನು 15 ದಿನ ತರಕಾರಿ ಗೆ ತೊಂದರೆ ಇಲ್ಲ ಎಂದು ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟೆವು. ಆದರೆ ಒಂದು ವಾರ ಆ ತರಕಾರಿ ಹಣ್ಣುಗಳನ್ನು ಬಳಸಿದೆವು. ಅಷ್ಟರಲ್ಲಿ ಉಳಿದ ಹಣ್ಣು ಮತ್ತು ತರಕಾರಿ ಹಾಳಾಗಿ, ಬಳಸಲು ಸಾಧ್ಯವಿಲ್ಲದೆ ಹೊರ ಚೆಲ್ಲಿದೆವು.
       ಈ ಎರಡು ಘಟನೆಗಳ ಘಟನೆಗಳನ್ನು ವಿಶ್ಲೇಷಿಸಿದಾಗ ನಮಗೆ ತಿಳಿದುಬರುವುದು ಏನೆಂದರೆ
 ◾ ಯಾವುದೂ ಶಾಶ್ವತವಾಗಿ ನಮ್ಮ ಬಳಿ ಇರುವುದಿಲ್ಲ. ಇದು ಪರಮ ಸತ್ಯ. ಇದು ಗೊತ್ತಿಲ್ಲವೇ....? ನಮಗೆಲ್ಲ ಗೊತ್ತು. ಆದರೂ ಹೆಚ್ಚು ಹೆಚ್ಚು ಸಂಗ್ರಹಿಸುವ ಆಸೆ. ನಮ್ಮನ್ನು ಈ ರೀತಿ ಮಾಡುತ್ತದೆ. ಹಣ, ಒಡವೆ, ಅಧಿಕಾರ ಮತ್ತು ಅಂತಸ್ತು ಯಾವುದೂ ಶಾಶ್ವತವಾಗಿ ನಮ್ಮ ಬಳಿ ಇರುವುದಿಲ್ಲ. ತುಂಬಿದ್ದು ಖಾಲಿಯಾಗಲೇಬೇಕು. ಏರಿದ್ದು ಇಳಿಯಲೇಬೇಕು. ಎಂಬ ಸತ್ಯ ಗೊತ್ತಿದ್ದರೂ, ನಮ್ಮ ಅತಿ ಆಸೆ ನಮ್ಮನ್ನು ಕಷ್ಟಕ್ಕೆ ತಲುಪಿಸುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು.....?
1. ಮೊದಲು ನಮ್ಮಲ್ಲಿ ಇರುವುದನ್ನು ಚೆನ್ನಾಗಿ ಅನುಭವಿಸಬೇಕು. ಇಂದಿನ ಅಥವಾ ಭವಿಷ್ಯದ ಬಗ್ಗೆ ಬಹಳ ತಲೆಕೆಡಿಸಿಕೊಳ್ಳಬಾರದು.
2. ಕುಳಿತುಕೊಳ್ಳುವ ಮೊದಲೇ ಈ ಜಾಗ ಖಾಯಂ ಅಲ್ಲ ಎಂದು ತಿಳಿದು ಕುಳಿತುಕೊಂಡರೆ, ಇಳಿಯುವಾಗ ಬೇಸರವಾಗುವುದಿಲ್ಲ. ಕುಳಿತಿರುವಷ್ಟು ದಿನ ಅನುಭವಿಸಲು ಸಾಧ್ಯವಾಗುತ್ತದೆ. ಅದು ಒಂದು ಗಂಟೆ, ಒಂದು ದಿನ, ಒಂದು ವರ್ಷ ಅಥವಾ ಅದು ಹತ್ತು ವರ್ಷವೂ ಆಗಿರಬಹುದು. ಇರುವಷ್ಟು ಸಮಯ ಅನುಭವಿಸುವುದನ್ನು ಕಲಿಯಬೇಕು.
3. ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತು ಅನುಭವಿಸಲಿಕ್ಕೆ ಇರುವುದು. ಹಾಗಾಗಿ ನಾವು ಎಷ್ಟು ಬಳಸುತ್ತೇವೆಯೋ ಅಷ್ಟನ್ನು ಸಂಗ್ರಹಿಸಬೇಕು. ಬಳಸದೆ ಇರುವ ವಸ್ತು ಎಷ್ಟಿದ್ದರೇನು ಪ್ರಯೋಜನ.....?
4. ನಾವು ಬಳಸದೆ ಇರುವ ವಸ್ತುಗಳನ್ನು ಬಳಸುವವರಿಗೆ ನೀಡಬೇಕು. ಆದರೆ ನಾವು ನೀಡುವುದಿಲ್ಲ. ಕಾರಣ ಅದಕ್ಕೆ ಹಣ ನೀಡಿ ಖರೀದಿಸಿರುವುದರಿಂದ. ಇದರಿಂದ ಮನೆಯಲ್ಲಿ ವಸ್ತುಗಳ ಸಂಗ್ರಹ ಹೆಚ್ಚಾಗುತ್ತದೆ. ಬಳಸದೆ ಇದ್ದರೂ ಪ್ರತಿಯೊಂದು ವಸ್ತು ಪ್ರತಿ ಕ್ಷಣ ಅದರಲ್ಲಿ ಕ್ರಿಯೆ ಜರುಗುವುದರಿಂದ ಅದರ ರೂಪ, ಗುಣ, ಬಣ್ಣ ಮತ್ತು ಅದರ ಸಾಮರ್ಥ್ಯ ಹಾಳಾಗುತ್ತದೆ. ಬಳಸುವವರಿಗೆ ನೀಡಿದರೆ, ಅನಾವಶ್ಯಕ ವಸ್ತು ಕಡಿಮೆಯಾಗಿ ನಿರ್ವಹಣೆ ಸುಲಭ ಮತ್ತು ಆ ವಸ್ತು ಇನ್ನೊಬ್ಬರಿಗೆ ಅನುಭವ ನೀಡುತ್ತದೆ.
5. ಉಚಿತವಾಗಿ ಅಥವಾ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಅತಿ ಖರೀದಿಸಬಾರದು. ಇದರಿಂದ ಬೇರೆಯವರಿಗೆ ಅದರ ಕೊರತೆಯಾಗುತ್ತದೆ. ಜಗತ್ತಿನ ಯಾವುದೇ ಪಕ್ಷಿ ಪ್ರಾಣಿ ತನ್ನ ಅಗತ್ಯತೆಗಿಂತ ಹೆಚ್ಚು ತಿನ್ನುವುದಿಲ್ಲ ಮತ್ತು ಸಂಗ್ರಹಿಸುವುದಿಲ್ಲ. ಒಂದು ವೇಳೆ ಸಂಗ್ರಹಿಸಿದರೂ ಅದು ನಮ್ಮ ಬಳಿ ಇರುವುದಿಲ್ಲ.
6. ಸಂಗ್ರಹಿಸುವಾಗ ಕೊರತೆಯಾಗದಂತೆ ಮತ್ತು ಹೆಚ್ಚು ಆಗದಂತೆ ಸಂಗ್ರಹಿಸಬೇಕು. ಅಂದರೆ ಪ್ರತಿಯೊಂದರಲ್ಲೂ ಇತಿಮಿತಿಯನ್ನು ಪಾಲಿಸಬೇಕು. ಯಾವುದೇ ಆಗಲಿ ಅತಿ ಆದರೆ ವಿಷ. ಕೊರತೆಯಾದರೆ ದುಃಖ ಉಂಟಾಗುತ್ತದೆ. ಆದ್ದರಿಂದ ನಮ್ಮ ಜೀವನ ಅತಿಯೂ ಆಗದೆ ಕೊರತೆಯೂ ಆಗದೆ ಮಧ್ಯಮ ಮಾರ್ಗ ಅನುಸರಿಸಬೇಕು. 
7. ನಾವು ಶ್ರೀಮಂತರಾಗಿ ಬಾಳಬೇಕಾದರೆ ಅನುಭವದಲ್ಲಿ ಶ್ರೀಮಂತರಾಗಬೇಕು. ವಸ್ತು ಇರುವುದು ಅನುಭವಿಸಲು ಅಂದಾಗ ಅದನ್ನು ಸಂಗ್ರಹಿಸಬೇಕಾಗಿಲ್ಲ. ಆ ವಸ್ತು ನನ್ನದಾದರೇನು ಮತ್ತೊಬ್ಬರದಾದರೇನು? ಅನುಭವ ಮಾಡಿಕೊಳ್ಳುವುದು ಮುಖ್ಯ. ಆದರೆ ನಮ್ಮ ಮನಸ್ಸು ಆಗಲ್ಲ ಅದು ನನ್ನ ಬಳಿ ಇಲ್ಲವಲ್ಲ ಎಂಬ ಕೊರಗು. ಜಗತ್ತಿನ ಎಲ್ಲಾ ವಸ್ತುಗಳನ್ನು ನನ್ನದಾಗಿ ಮಾಡಿಕೊಳ್ಳಲು ಸಾಧ್ಯವೇ.....? ಸಾಧ್ಯವಿಲ್ಲ. ಆದ್ದರಿಂದ ವಸ್ತು ಯಾರದಾದರೇನು....? ಅನುಭವ ಮಾಡಿಕೊಳ್ಳುವುದು ಮುಖ್ಯ. ಅದರ ಸೌಂದರ್ಯ ಮಾಧುರ್ಯ, ಸುವಾಸನೆ, ಸ್ಪರ್ಶ ಮತ್ತು ಸುರುಚಿಯನ್ನು ಅನುಭವಿಸಬೇಕು. ಅದನ್ನು ಮನಸ್ಸಿನಲ್ಲಿ ತುಂಬಬೇಕೆ ವಿನಃ ವಸ್ತುವನ್ನು ಮನೆಯಲ್ಲಿ ಸಂಗ್ರಹಿಸುವುದಲ್ಲ.
8. ಮನಸ್ಸಿನಲ್ಲಿ ತುಂಬಿರುವ ಸೌಂದರ್ಯ, ಮಾಧುರ್ಯ, ಸುವಾಸನೆ, ಸುರುಚಿ, ಸ್ಪರ್ಶ ಇವು ನಮಗೆ ಸದಾ ಸಂತೋಷವಾಗಿರುವಂತೆ ಮಾಡುತ್ತದೆ. ಇದರಿಂದ ಜೀವನ ಮಧುರವಾಗುತ್ತದೆ.
     ಆದುದರಿಂದ ಮಕ್ಕಳೇ ನಾವು ಬಳಸುವಷ್ಟನ್ನೇ ಖರೀದಿಸುವ, ಬಳಸುವಷ್ಟನ್ನೇ ಮನೆಯಲ್ಲಿ ಇಟ್ಟುಕೊಳ್ಳೋಣ, ಇರುವುದನ್ನೇ ಚೆನ್ನಾಗಿ ಅನುಭವಿಸೋಣ. ಇದೇ ಸುಂದರ ಜೀವನದ ಲಕ್ಷಣ ಅಲ್ಲವೇ, ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************



Ads on article

Advertise in articles 1

advertising articles 2

Advertise under the article