-->
ನನ್ನಜ್ಜ ಮತ್ತು ಪರಿಸರ ದಿನಾಚರಣೆ..!! - ಲೇಖನ

ನನ್ನಜ್ಜ ಮತ್ತು ಪರಿಸರ ದಿನಾಚರಣೆ..!! - ಲೇಖನ

ಲೇಖಕರು : ಸುರೇಶ್ ಮರಕಾಲ ಸಾಯ್ಬರಕಟ್ಟೆ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಧ್ಯಾಪಕರು.
ಸರಕಾರಿ ಪದವಿ ಪೂರ್ವ ಕಾಲೇಜು, ಕುಕ್ಕುಜೆ,
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ.
Mob : 9481511921
  

      ನನಗಿನ್ನೂ ಬುದ್ಧಿ ಭಾಷೆ ಬೆಳೆಯುವ ಹೊತ್ತಿಗಾಗಲೇ ನನ್ನ ಅಜ್ಜ ಮುದುಕನಾಗಿದ್ದ. ಆದರೆ ಮುದುಕನೆಂದರೆ ಈಗಿನ ಮುದುಕರಂತಲ್ಲ! ಈಗಿನವರಂತೂ ಇಪ್ಪತ್ತೇಳಕ್ಕೇ ಮುದುಕರಾಗುತ್ತಾರೆ.! ಅವನಾದರೋ ಎಂಭತ್ತೆಂಟಕ್ಕೂ ಹದಿನೆಂಟರವರನ್ನ ನಾಚಿಸುವಂತಿದ್ದ...!! ಆ ಪ್ರಾಯದಲ್ಲೂ, ಪೋಕರಿ ಮಾಡಿ ಬಿಟ್ಟ ಬಾಣದಂತೆ ಓಡಾಡುತ್ತಿದ್ದ ಮಕ್ಕಳಾದ ನಮ್ಮನ್ನೇ ಅಟ್ಟಾಡಿಸಿ ಬೆರಸಾಡುತ್ತಿದ್ದ..!! ಇಂದು ನಮ್ಮ- ನಿಮ್ಮ ಹಾಗೆ ಆಕ್ಸಿಲರೇಟರ್ ಅದುಮಿ _'ಝೂಂ'_ ಎಂದು ಕಾರು  ಬೈಕು ಓಡಿಸಲು ಬಾರದ ಅನಕ್ಷರಸ್ಥನಾಗಿದ್ದ.  ಕಾರು ಬೈಕು ಓಡಿಸೋದು ಬಿಡಿ; ದಾರಿಯಲ್ಲಿ ಹೋಗುವಾಗ ಮೈಲು ದೂರದಲ್ಲಿ ಅಪರೂಪಕ್ಕೊಮ್ಮೆ ಹಾರ್ನ್ ಕೇಳಿದರೂ, ವಾಹನದ ಸದ್ದೆಂದರೆ ಅದೇನೋ ರಕ್ಕಸರ ಸದ್ದೇನೋ ಎಂಬಂತೆ ಹೆದರಿ ರಸ್ತೆ ಬದಿಯಲ್ಲಿ ನಡಕೊಂಡು ಹೋಗುತ್ತಿದ್ದ ನಮ್ಮನ್ನೆಲ್ಲ ಭೀಮ ಬಾಹುಗಳಿಂದ ಒಂದೇ ಪೆಟ್ಟಿಗೆ ಮಂಗಗಳನ್ನೆತ್ತಿ ಒಗೆವಂತೆ ಚರಂಡಿ ಬದಿಗೆ ಇಳಿಸಿಬಿಡುವಷ್ಟು ಅನಕ್ಷರಸ್ಥನಾಗಿದ್ದ...!!  ಆದರೆ ಅವನ ಒಂದೂವರೆ ಆಳೆತ್ತರದ ಆನೆ ಗಾತ್ರದ ಎತ್ತುಗಳ ಗಾಡಿ ಏರಿ ಹೊರಟನೆಂದರೆ, ನಡುರಾತ್ರಿ ಬಾಳೆಬರೆ ಘಾಟಿಯಲ್ಲಿ ಮಲಗಿ ನಿದ್ರಿಸಿಕೊಂಡೇ, ಇಪ್ಪತ್ತೊಂದು ಮೈಲಿ ದೂರದ ಆಗಿನ ಕಾಡು ಹಂದರದ ನಡುವಿನ ಮೂರು ಮಾಳಿಗೆಯ ನಮ್ಮ ಮನೆ ಮುಂದೆ ಎತ್ತಿನ ಗಾಡಿ ತಂದು ನಿಲ್ಲಿಸುತ್ತಿದ್ದ!   
       ಎತ್ತುಗಳು ಮನೆಮುಂದೆ ನಿಂತು, ಮನೆ ಬಂತೆಂದು ತಮ್ಮ ಕುತ್ತಿಗೆಗೆ ಕಟ್ಟಿದ್ದ ಮಣಭಾರದ ತುರ, ಘಮ್ಚಣ, ಗಘ್ಘರಗಳನ್ನ ಘಣ-ಘಣ ಮಾಡಿ ಎಬ್ಬಿಸಿದರೆ ಅಜ್ಜನಿಗೆ ಎಚ್ಚರ...!! ಆ ಎರಡು ಎತ್ತುಗಳೊಂದಿಗೆ ಅಪ್ಪ ಮಗನ ರೀತಿ ಬದುಕಿದ್ದ! ಆ ಎರಡು ಎತ್ತುಗಳು - ಒಬ್ಬನ ಹೆಸರು ರಾಜುವಂತೂ- ನಿಜವಾಗಿಯೂ ಮಕ್ಕಳ ಹಾಗೇ ಇದ್ದರು. ಕಾರಿನ ಹಾರ್ನ್‌ಗೆ ಮಾರು ಹಾರಿ ನಮ್ಮನ್ನ ಬದಿಗೆ ದೂಡುವ ಅಜ್ಜ, ಆ ಎರಡು ಎತ್ತುಗಳೊಂದಿಗೆ ಎಂತಹ ಅವಿನಾಭಾವ ಸಾಮರಸ್ಯ ಇಟ್ಟುಕೊಂಡಿದ್ದನೆಂದರೆ;  ಒಂದು ದಿನವೂ ಆ ಎತ್ತುಗಳು ರಾತ್ರಿ ಕತ್ತಲ ಕಾಡಲ್ಲಿ ದಾರಿ ತಪ್ಪಲಿಲ್ಲ; ಒಂದು ದಿನವೂ ಅಜ್ಜ ಗಾಡಿಯಲ್ಲಿ ನಿದ್ರೆ ಬಿಡಲಿಲ್ಲ...!!
   ಅಜ್ಜನ ಹುಕ್ಕುಂ, ನಾವು- ನಾಲ್ಕಾರು ಪೋಕರಿ ಹುಡುಗರು ಹುಡುಗಿಯರು ಶಾಲೆಗೆ ಹೊರಡುವ ಮುನ್ನ ತಲಾ ಒಂದೊಂದು ಬೀಳು ಹೆಡಿಗೆ ಸೆಗಣಿ ಹೆಕ್ಕಿ ತರಬೇಕು. ಮನೆ ಹಿಂದಿನ ಹಕ್ಕಲು, ಹಾಡಿ, ಗುಡ್ಡೆ, ಮಣ್ಣು ರಸ್ತೆಗಳಲ್ಲಿ ಬಿದ್ದ ಸೆಗಣಿ ಗುಡ್ಡೆಗಳು ನಮ್ಮ ಪಾಲಿಗೆ ಸಾಕ್ಷಾತ್ ಚಿನ್ನದುಂಡೆಗಳು! ಮುಗಿಬಿದ್ದು ಬಾಚಿಕೊಳ್ಳುವುದರಲ್ಲೂ ಪೈಪೋಟಿ. ಇದೆಲ್ಲದರ ಮಧ್ಯೆ ತುಂಬದ ಬುಟ್ಟಿಯವನಿಗೋ ಬುಟ್ಟಿಯವಳಿಗೋ ಅಷ್ಟಿಷ್ಟು ಸಹಾಯ ಮಾಡಿ ತುಂಬಿಸುವ ಕಳಕಳಿ. ತುಂಬಿ ತುಳುಕುತ್ತಿದ್ದ ಸೆಗಣಿ ಬುಟ್ಟಿಯನ್ನು ನಮಗೆ ಹಾಗೆ ಖಂಡಿತ ಅನಿಸುತ್ತಿತ್ತು! ಹೊತ್ತುಕೊಂಡು ಮನೆಗೆ ಬಂದರೆ ಕಣ್ಣಳತೆಯಲ್ಲೇ ಯಥಾಪ್ರಕಾರ ಅಜ್ಜನ 'ಇವತ್ತೂ ಕೂಡಾ ನಿನ್ನ ಹೆಡಿಗೆ ಅರ್ಧ ಇತ್ತಲನಾ..?’ ಎಂಬ ಗದರಿಕೆ! ಅಂತೂ ಅಜ್ಜನ ‘ಸೆಗಣಿ ಪರೀಕ್ಷೆ’ ಯಲ್ಲಿ ಪಾಸಾಗಿ ಅವನು ಹೇಳಿದ ಅರೆಬಳ್ಳಿ, ಹೊಂಯ್ಗ, ಕೊಡಸ, ಐದುಮುಡಿ ಯಾವುದೋ ಒಂದು ಗದ್ದೆಯಲ್ಲಿ ಅವನು ಆಜ್ಞಾಪಿಸಿದ ಮೂಲೆಯಲ್ಲಿ ಅವತ್ತಿನ ನಮ್ಮೆಲ್ಲರ ಸೆಗಣಿಯನ್ನು ತೊತೊಪನೆ ರಾಶಿ ಹಾಕಿದಾಗಲೇ ನಮ್ಮ ತಲೆಯ ಮೇಲಿನ ಭಾರ ಇಳಿದು, ಅಜ್ಜನ ಮೊಗದಲ್ಲಿ ಒಂದು ಸಂತೃಪ್ತಿಯ ನಗೆ ಮೂಡುತ್ತಿತ್ತು. ಆದರೆ ಅದನ್ನ ತೋರಿಸಗೊಡದೆ, ಶಾಲೆಯಲ್ಲಿ ರಘುರಾಮ ಮೇಸ್ಟ್ರು ಹೇಳುತ್ತಿದ್ದ ಸಾಕ್ಷಾತ್ ಹಿಮಾಲಯ ಪರ್ವತದಂತೆಯೇ ಕಾಣುತ್ತಿದ್ದ  ಸೆಗಣಿ ರಾಶಿಯನ್ನು ಅಜ್ಜ ಅತ್ಯಂತ ಕ್ಷುದ್ರ ವಸ್ತುವಿನಂತೆ ಕಾಣುವುದು ಮಾತ್ರ ಅಂದು ನಮಗೆಲ್ಲ ಬೇಸರ ತರಿಸುತಿತ್ತು! ಆದರೆ ಆ ಮುನಿಸಿನ ಹಿಂದಿನ ಅಂತರಾಳ ಅರ್ಥವಾಗಲು ನನಗೆ ದಶಕಗಳೇ ಹಿಡಿದವು! ನನಗೆ ಇಂದು ಅನಿಸುವುದು ತನ್ನ ಸುತ್ತಲಿನ ಪರಿಸರದೊಂದಿಗೆ ಅವನು ಒಂದು ಋಷಿ ಸದೃಶ ಜೀವನವನ್ನು ನಡೆಸಿದ...!!
     ನಾವೆಲ್ಲ ಸೆಗಣಿ ಶಾಸ್ತ್ರ ಮುಗಿಸಿಕೊಂಡು ಮೈಕೈ ತೊಳೆದುಕೊಂಡು ಶಾಲೆಯ ವಿದ್ಯೆಗೆ ಹೊರಡುವುದರೊಳಗೆ ಅವನು ಗಂಗಾಳದ ತುಂಬ ಅಕ್ಕಿ, ನುಚ್ಚು ತುಂಬಿ ಕೋಳಿಗಳಿಗೆ ಹಾಕಿ, ಅದರಲ್ಲಿ ಮನೆಯ ಗುಬ್ಬಚ್ಚಿಗಳಿಗೆ ಪಾಲು ನೀಡಿ, ಕೊಟ್ಟಿಗೆಯ ಸಾಲು ಸಾಲು ಗೋ-ಸಂಪತ್ತಿಗೆ ಬೆಚ್ಚಗಿನ ಕಲಗಚ್ಚು ಎರೆದು, ರಾಶಿ ತಂಗಳನ್ನವನ್ನು ಉಂಡು ಮೇಟಿ ವಿದ್ಯೆಗೆ ಹೊರಟಾಗಿರುತಿತ್ತು!! ಪರಿಸರ ಎಂಬುದು ಅವನಿಗೆ ನಿಜವಾದ ಧ್ಯಾನದ ಸ್ಥಳವಾಗಿತ್ತು. ಈ ಕ್ಷಣಕ್ಕೆ ನಾನು ಹೀಗೆಂದರೆ ಬಹುಜನರಿಗೆ ಉತ್ಪ್ರೇಕ್ಷೆಯಾಗಿ ಕಂಡೀತು, ನಾನು ಪ್ರೌಢ ಶಾಲೆ ಮೆಟ್ಟಿಲು ಹತ್ತುವವರೆಗೆ ಅಜ್ಜನ ಯಜಮಾನಿಕೆಯಲ್ಲಿದ್ದ ಗದ್ದೆಗಳಲ್ಲಿ ಚಿನ್ನ ಬೆಳೆಯುತಿತ್ತು....!! ವರ್ಷಕ್ಕೆ ಕನಿಷ್ಠ ಮೂರು ಬೆಳೆಗಳು, ರಾತ್ರಿ ಹಳ್ಳಿಮನೆ ವಾಸ, ಏತದಿಂದ ಮೊಗೆದು ಹಾಕುವ ನೀರು, ಚಳಿಗಾಲದಲ್ಲಿ ತೋಡಿಗೆ ಹಾಕಿದ ಕಟ್ಟಿನ ನೀರು, ಇಂದಿನ ಲೆಕ್ಕದಲ್ಲಿ ಹೇಳುವುದಾದರೆ ಪ್ರತಿ ಗದ್ದೆಯೊಳಗೂ ಲೋಡುಗಟ್ಟಲೆ ಕೊಟ್ಟಿಗೆ ಗೊಬ್ಬರ. ಆದರೆ ಜೀವ ಹೋದರೂ ಊಹೂಂ - ಒಂದು ದಿನಕ್ಕೂ ರಾಸಾಯನಿಕ ಗೊಬ್ಬರ ಮುಟ್ಟಿದವನಲ್ಲ!! "ಗರ‍್ಮೆಂಟ್ ಗೊಬ್ರ ಹಾಕಿ ವಿಷ ತಿನ್ಕನಾ?" ಎಂದು ತನ್ನ ಸರೀಕರೊಂದಿಗೆ ಪ್ರಶ್ನಿಸುತಿದ್ದ..!! ಹೆಚ್ಚು ಕಡಿಮೆ ಜಪಾನಿನಲ್ಲಿ ಸಹಜ ಕೃಷಿಯ ಪವಾಡ ಪುರುಷ ಫುಕವೋಕಾನಂತೆಯೆ ಪರಿಸರಕ್ಕೆ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ತೊಂದರೆ ನೀಡುತ್ತಿದ್ದ. ಫುಕವೋಕಾ ಯಾರೆಂದೇ ಅಜ್ಜನಿಗೆ ಗೊತ್ತಿರಲಿಲ್ಲ, ಜಪಾನ್ ಬಿಡಿ ಹೆಚ್ಚೇಕೆ ಅವನು ನಮ್ಮೂರಿನಿಂದ ಇಪ್ಪತ್ತು ಕಿಲೋಮೀಟರ್ ದೂರದ ಉಡುಪಿಯನ್ನೂ ಸರಿಯಾಗಿ ನೋಡಿದವನಲ್ಲ. ಆದರೆ ಅನೇಕ ವಿಚಾರಗಳಲ್ಲಿ ಪರಿಸರದ ಬಗೆಗಿನ ಅಜ್ಜನ ಯೋಚನೆ-ಯೋಜನೆಗಳು ಯಥಾವತ್ತಾಗಿ ಫುಕವೋಕನನ್ನು ಹೋಲುತಿದ್ದವು..!!
      ಆದರೆ ಅಜ್ಜನ ಈ ಯೋಚನೆಗಳು ಮನೆಮಂದಿಗೆ ಒಂದಷ್ಟು ಹೆಚ್ಚು ಒತ್ತಡ ನೀಡುತ್ತಿತ್ತೇನೋ. ಮನೆ ಹೆಂಗಸರಿಗೆ ಬೆಳಿಗ್ಗಿನಿಂದ ರಾತ್ರಿ ಮಲಗೋವರೆಗೂ ಮೈತುರಿಸಿಕೊಳ್ಳಲೂ ಇಲ್ಲದ ಪುರುಸೊತ್ತು. ನಾವು ಮಕ್ಕಳದ್ದು ಸೆಗಣಿ ಕಥೆಯಾದರೆ, ಹೆಂಗಸರಿಗೆ ಸೂರ್ಯ ಪ್ರತ್ಯಕ್ಷನಾಗುವ ಎಷ್ಟೋ ಘಳಿಗೆ ಮೊದಲೇ ಎದ್ದು, ಮನೆಯ ಅಷ್ಟೂ ಕೆಲಸ ಮುಗಿಸಿ, ಅಜ್ಜ ಗದ್ದೆಗೆ ಇಳಿವ ಮೊದಲೇ ಕೊಟ್ಟಿಗೆಯಲ್ಲಿದ್ದ ದನಗಳ ಕೊಂಬು ಮಾಡಿಗೆ ತಾಗುವಷ್ಟು ಎತ್ತರದ ಸೊಪ್ಪನ್ನು ಹಾಡಿ, ಹಕ್ಕಲುಗಳಿಂದ ತರುವ ಜವಾಬ್ದಾರಿ. ಅದು ಮುಗಿಯಿತೆಂದರೆ ಮರುಕ್ಷಣ ಕೊಟ್ಟಿಗೆ ಹಿಂದಿನ ಮೂರಾಳೆತ್ತರದ ಗೊಬ್ಬರದ ಗುಂಡಿಯಿಂದ ಗೊಬ್ಬರ ತುಂಬಿಕೊಂಡು ಗದ್ದೆಗೆ ತುಂಬಿಸುವ ಕೈಂಕರ್ಯ! ಅದಾದ ಕೂಡಲೆ ಮಧ್ಯಾಹ್ನದ ಊಟದ ತಯಾರಿ, ಮಧ್ಯೆ ಅಜ್ಜನ ಗಾಡಿ ಎತ್ತುಗಳ ಮಜ್ಜನ, ಅವರಿಬ್ಬರ ಉಪಚಾರಿಕೆ. ಕರೆಂಟು, ಮಿಕ್ಸಿ, ಗ್ರೈಂಡರ್, ಟಿ.ವಿ, ಮೊಬೈಲ್.... ಊಹೂಂ ಯಾವುದನ್ನೂ ಕೇಳಬೇಡಿ..!!  ಇಂದು ಯಾವುದನ್ನು ತ್ಯಜಿಸಿ ಅರೆಕ್ಷಣವೂ ಬದುಕಲಾರೆವೋ, ಅದನ್ನು ಅರೆಕ್ಷಣವೂ ಬಳಸದೆ ಸುಖವಾಗಿ ಬಾಳಿದರು. ಅಷ್ಟು ಪರಿಸರಕ್ಕೆ ಹತ್ತಿರವಾಗಿ ಬೆಳೆದುಬಿಟ್ಟವರವರು. 
       ಮನೆಯಲ್ಲಿನ ಗಂಡಸರು, ಯುವಕರಿಗೆ ಅವರದೇ ಆದ ಹತ್ತಾರು ಕರ್ತವ್ಯಗಳು. ಕಣ್ಣಿಗೆ ಸೂಜಿ ಬಿದ್ದರೂ ಕಾಣದ ಕತ್ತಲಲ್ಲಿನ ಅಜ್ಜನ ಗದ್ದೆ ಹೂಡುವ (ಉಳುಮೆ) ಒಳಾಲಿನ ಸುಸ್ವರಕ್ಕೆ ನಾನು ಎಚ್ಚರಗೊಂಡಿದ್ದು ಅದೆಷ್ಟು ಸಲವೋ! ಜೋಡು ಎತ್ತುಗಳ ಹೆಗಲಿಗೆ ನೊಗ ಕಟ್ಟಿದನೆಂದರೆ ಗದ್ದೆಯ ಮಣ್ಣು ಪಾಯಸವಾಗಬೇಕು!! ಅವನಿರುವಷ್ಟು ಕಾಲ ಟಿಲ್ಲರ್, ಟ್ರಾಕ್ಟರ್‌ಗಳಿಗೆ ನಮ್ಮ ಗದ್ದೆಗಳ ಒಳಗೆ ಕಾಲಿರಿಸುವ ಧೈರ್ಯ ಬರಲಿಲ್ಲ! ಕೊಟ್ಟಿಗೆ ಗೊಬ್ಬರ, ಬಿಜಿಗುಟ್ಟುವ ಸೆಗಣಿಯ ಫಲವತ್ತತೆಯಿಂದ ತಲೆಬಾಗಿ ಭಾರದಿಂದ ತೂಗಲೂ ಕಷ್ಟವಾಗುವ ತೆನೆಗಳಿಗೆ ಅಜ್ಜ ಸಾಂತ್ವನ ಹೇಳುತ್ತಿದ್ದನೇನೋ!! ಆತನ ಜೀವಿತದ ಕೊನೆಯವರೆಗೂ ರಾಸಾಯನಿಕ ಗೊಬ್ಬರದ ಒಂದು ಹರಳೂ ನಮ್ಮ ಗದ್ದೆ, ಗಿಡಗಂಟಿಗಳ ಬುಡಕ್ಕೆ ಇಳಿಯಲಿಲ್ಲ...!!
      ಇಂದು ಥರೇವಾರಿ ಚೆಲ್ಲುವ ಕಳೆನಾಶಕಗಳ ಹೆಸರನ್ನೇ ಅವನು ಕೇಳಿದವನಲ್ಲ. ಹಾಗೊಂದು ಬಗೆಯ ವಿಷವೂ ಇದೆಯೆಂಬ ಕಲ್ಪನೆಯೂ ಅವನಿಗಿರಲಿಲ್ಲ. ಆದರೂ ಗದ್ದೆಯಲ್ಲಿ ನಾಟಿ ಮಾಡಿದ ಭತ್ತದ ಸಸಿಗಳ ನಡುವಿನ ಕಳೆ ಕೀಳಲು ಹೆಂಗಸರು ಇಳಿದರೆ, ಐದು ಮುಡಿ ಗದ್ದೆ ಜಾಲಾಡಿದರೂ ಬೆರಳೆಣಿಕೆಯ ಕಳೆ ಸಿಗುತ್ತಿತ್ತು. ಆಗೆಲ್ಲ ಅಜ್ಜ ತನ್ನ ಗಜಗಾತ್ರದ ಎದೆಯನ್ನೂ ಉಬ್ಬಿಸುತ್ತಿದ್ದ, ಜೊತೆಗೆ ನಮ್ಮ ಬೆಳಗ್ಗಿನ ಸೆಗಣಿ ಬುಟ್ಟಿಯ ಖೋಟಾವನ್ನು ಏರಿಸುತಿದ್ದ...!!
      ಅನಕ್ಷರಸ್ಥನಾಗಿದ್ದ ಅಜ್ಜನಿಗೆ ಸುತ್ತಲಿನ ಪರಿಸರವನ್ನು ಸಲೀಸಾಗಿ ಓದುವ ತಾಕತ್ತು ಇತ್ತು!! ಅವನಿಗಿದ್ದ ಪರಿಸರದ ಆಸಕ್ತಿ ದೈವೀಕವಾದದ್ದು. ಅವನಿಗದನ್ನು ಯಾವ ಶಾಲೆ ಕಾಲೇಜೂ ಹೇಳಿ ಕೊಡಲಿಲ್ಲ. ಎಲ್ಲದರಲ್ಲೂ ದೇವರು, ದೈವಗಳನ್ನು ಕಾಣುವ ಅವನಿಗೆ ಪ್ರಕೃತಿಯ ಇಂಚಿಂಚೂ ದೇವರ ವಾಸಸ್ಥಾನವಾಗಿ ಕಾಣುತ್ತಿದ್ದಿರಬೇಕು. ತೆಂಗಿನ ಮರ ಹತ್ತುವಾಗಲೂ, ಮೊದಲು ಮರಕ್ಕೆ ಎರಡೂ ಕೈಗಳಿಂದ ದೇವರಿಗೆ ನಮಸ್ಕರಿಸುವುದಕ್ಕಿಂತಲೂ ಭಾವುಕವಾಗಿ ಕೈಮುಗಿದು, ತುಳಿದು ಪಾಪ ಮಾಡುತ್ತಿದ್ದೇನೆ ಕ್ಷಮೆ ಇರಲಿ ಎಂದೇ ಮರಕ್ಕೆ ಕಾಲು ನೀಡುತ್ತಿದ್ದ.!  ದೀಪಾವಳಿಯ ನರಕ ಚತುರ್ದಶಿ ದಿನ ನಮ್ಮ ಕುಂದಾಪುರ ಪರಿಸರದ ಆಚರಣೆಯಂತೆ ಗದ್ದೆಗೆ ಹಾಕಲು ಕೆಸಕಾರ, ಸೆಟಗ, ಗಂಗಮ್ಮನ ಸೊಪ್ಪು, ತುಂಬೆ ಹೂಗಳನ್ನು ಕೊಯ್ದು ತರುವಾಗಲೂ ನಾವು ಇಂದು ಮಾಡುವಂತೆ ‘ಶಾಸ್ತ್ರ’ ಮಾಡುವಂತಿರಲಿಲ್ಲ!!  ಸಂಜೆ ಗದ್ದೆಗಿಳಿದಾಗ ಅನ್ನ ನೀಡುವ ಪ್ರತೀ ಮಣ್ಣಿನ ಕಣಕ್ಕೂ ತೃಪ್ತಿಯಾಗುವಷ್ಟು ಬೊಗಸೆ-ಬೊಗಸೆ ಕಾಡು ಹೂಗಳ ತರ್ಪಣವಾಗಬೇಕು, ಮುಷ್ಠಿ-ಮುಷ್ಠಿ ಅರಿಶಿನದೆಲೆ ಹಿಟ್ಟು, ಮನೆಯ ಒರಳಲ್ಲಿ ಮಾಡಿದ ಅವಲಕ್ಕಿ, ಜೋಡಿ ಎಲೆಯಡಿಕೆ ತಾಂಬೂಲ ಸಮರ್ಪಣೆಯಾಗಬೇಕು. ಗದ್ದೆಯ ಕತ್ತಲನ್ನು ಸೀಳುವಂತೆ ನೆಣೆ ಹಚ್ಚಿ, ಇಡೀ ಊರೇ ಗಾಡಿ ಶೀನ - ನನ್ನಜ್ಜ ನ ‘ಹೊಲಿ ಕೊಟ್ರೋ ಬಲಿ ತಗಂಡ್ರೋ.....’ ಹೊಲಿ ಹಾಡನ್ನು ಕಿವಿಯಾಲಿಸಿ ಕೇಳಬೇಕು!!
     ಪ್ರಕೃತಿ, ಪರಿಸರದೆಡೆಗೆ ಅಂತಹ ಆರ್ತತೆ ಅವನಿಗಿತ್ತು. ಗೋಪೂಜೆ ದಿನವಂತೂ ಮಾತಾಡಲು ಬಾಯಿ ಬಂದಿದ್ದರೆ ಕೊಟ್ಟಿಗೆಯ ಹಸುಗಳು ಹಾಡು ಹಾಡಿಕೊಂಡು ಕುಣಿದಾಡುತ್ತಿದ್ದವೇನೊ.....!!  ಮದುಮಕ್ಕಳಂತೆ ಅವುಗಳನ್ನೆಲ್ಲ ಸಿಂಗರಿಸಿ, ತೋಡಿನ ಕೆಂಪು ನೊರಜು ಕಲ್ಲುಗಳನ್ನು, ಜೇಡಿಯನ್ನು ಅರೆದು ಕೆಂಪು-ಬಿಳಿ ಬಣ್ಣ ತಯಾರಿಸಿ ಹಸು, ಕರುಗಳ ಮೈಮೇಲೆ ಚಿತ್ತಾರ ಬಿಡಿಸಿ, ದಾಸವಾಳ ಹೂಹಾರ ಹಾಕಿ ಶಂಖ ಜಾಗಟೆಯೊಂದಿಗೆ ಮದುಮಕ್ಕಳ ದಿಬ್ಬಣ ಹೊರಟಂತೆ ಮನೆ ಹಿಂದಿನ ಹಾಡಿಗೆ ಬಿಟ್ಟು ಬರುತಿದ್ದ. ಆಗೆಲ್ಲ ಅವನ ಉತ್ಸಾಹ, ಎಣೆ ಮೀರಿದ ತಾದ್ಯಾತ್ಮ ನೋಡಬೇಕಿತ್ತು...!!
     ಇಂದು ಆ ಉತ್ಸಾಹ ಬಿಡಿ; ಗೋಪೂಜೆ ಮಾಡಲು ಎಷ್ಟೋ ಮನೆಗಳಲ್ಲಿ ಕೊಟ್ಟಿಗೆಯೇ ಇಲ್ಲ!! ಇದ್ದವರಿಗೂ ಅದನ್ನೊಂದು ‘ಶಾಸ್ತ್ರ’ ಮಾಡಿ ಮುಗಿಸುವುದರೊಳಗೆ ಸಾಕು ಸಾಕಾಗುತ್ತದೆ...!!
       ನಮ್ಮ ಗದ್ದೆ ಸಾಲಿನ ಬದಿಯಲ್ಲಿ ಒಂದು ಸಣ್ಣ ತೋಡು ಇದೆ. ಮೊದಲೆಲ್ಲ ಫೆಬ್ರವರಿವರೆಗೂ ನೀರಿನ ಒರತೆಯಿಂದ ತುಂಬಿ ಹರಿಯುತಿತ್ತು. ಇಂದಿನ ಕಥೆ ಕೇಳಬೇಡಿ! ಸುಗ್ಗಿ ಬೆಳೆಯ ನೀರ ಆಸರೆಗಾಗಿ ಅಜ್ಜನ ಮುಂದಾಳತ್ವದಲ್ಲಿ ಪ್ರತಿ ವರ್ಷ ಆ ತೋಡಿಗೆ ಕಟ್ಟು ಹಾಕುತಿದ್ದ. ನಮಗೆಲ್ಲ ಆಗ ಹಬ್ಬ! ಪುರುಸೊತ್ತು ಸಿಕ್ಕಾಗೆಲ್ಲ ನಮ್ಮ ಪಾಲಿಗೆ ಅದು ಈಸು ಬೀಳುವ ಸರೋವರವಾಗುತಿತ್ತು!! ಕಡಿದ ಬಾಳೆ ದಿಂಡುಗಳೇ ನಮ್ಮ ದೋಣಿಗಳು, ಜೋಡಿ ಗೋಟು ಕಾಯಿಗಳೇ ತೆಪ್ಪಗಳು!! ವರ್ಷಂಪ್ರತಿ ಡಿಸೆಂಬರ್ ಕೊನೆಯ ವಾರದಲ್ಲಿ ತೋಡಿಗೆ ಕಟ್ಟು ಹಾಕುವುದು ವಾಡಿಕೆ. ಆದರೆ ಕೆಲವು ಬಾರಿ ನವೆಂಬರ್ ಮುಕ್ತಾಯಕ್ಕೂ ಮೊದಲೇ ಕಟ್ಟು ಹಾಕುತಿದ್ದ, ಕೇಳಿದರೆ ಈ ಬಾರಿ ಮಳೆ ಕಮ್ಮಿ, ಬೇಗ ನೀರು ಒಣಗುತ್ತದೆ ಎನ್ನುತಿದ್ದ. ಹೊರಗಡೆ ಧಾರಾಕಾರ ಸುರಿವ ಮಳೆ ನೋಡಿ, "ಈ ಮಳೆ ನಿಲ್ಲುವುದುಂಟೆ, ಈ ತೋಡು ಡಿಸೆಂಬರ್ ಒಳಗೆ ಒಣಗುವುದುಂಟೆ" ಎಂದು ಎಲ್ಲರೂ ಅಂದುಕೊಂಡರೆ, ಪವಾಡ ನಡೆದಂತೆ ಆ ವರ್ಷ ಅಕಾಲಕ್ಕೇ ಮಳೆ ನಿಲ್ಲುತಿತ್ತು!! ಗದ್ದೆಗಳಿಗೆ ಅಜ್ಜನ ತೋಡಿನ ನೀರು ಆಸರೆಯಾಗುತಿತ್ತು!!  ಪರಿಸರದ ಅನೂಹ್ಯ ನಡೆಗಳನ್ನು ಊಹಿಸುವುದರಲ್ಲಿ, ಅರ್ಥೈಸಿಕೊಳ್ಳುವುದರಲ್ಲಿ ಅಜ್ಜ ಅಷ್ಟೊಂದು ಪರಿಣತನಾಗಿದ್ದ! ಅಜ್ಜನೊಬ್ಬನೆ ಎಂದಲ್ಲ, ಊರ ಜನರೆಲ್ಲ ಆಚರಿಸುತ್ತಿದ್ದ ಹೊಸ್ತು, ಜಕ್ಕಣಿ, ಅಜ್ಜಿ, ಸೋಣೆಯಾರತಿ, ಆರೋಡು ಹಬ್ಬ, ಆಸಾಡಿ ಹಬ್ಬ, ನೈಲಾಡಿ ಕೀಳು (ಈ ಶಬ್ದಗಳು ಇಲ್ಲಿನ ಆಚರಣೆಯ ಪಾರಿಭಾಷಿಕ ಶಬ್ದವಾಗಿದ್ದು, ಗ್ರಾಂಥಿಕ ಪದಗಳು ಇಲ್ಲದಿರುವುದರಿಂದ ಹಾಗೇ ನೀಡಿದ್ದೇನೆ) ಹೀಗೆ ಪ್ರತಿಯೊಂದರಲ್ಲೂ ಪರಿಸರದ ಆರಾಧನೆ ಇದ್ದೇ ಇರುತಿತ್ತು. 
      ನಾಟಿ ಕೆಲಸವೆಲ್ಲ ಮುಗಿದು, ಎತ್ತು ಹೋರಿಗಳಿಗೆ ಉಳುಮೆ ಕೆಲಸ ಮುಗಿದ ಕೊನೆಯ ದಿನ ಅವುಗಳಿಗೆ ‘ಯರ್ಥ’ ಕೊಡುತಿದ್ದ. ಅವತ್ತು ಕೊಟ್ಟಿಗೆಯ ಜೀವಾತ್ಮಗಳಿಗೆ ಹಬ್ಬ. ಉದ್ದು, ಹೆಬ್ಬಲಸಿನ ಮರದ ಚಕ್ಕೆ, ಅಕ್ಕಿಯ ರಸಪಾಕದ ಯರ್ಥ. ಅದೆಷ್ಟು ರುಚಿಯಾಗಿರುತಿತ್ತೆಂದರೆ ಎತ್ತು ಕೋಣಗಳ ಜೊತೆಗೆ ದಿನವೂ ಸೆಗಣಿ ಚಾಕರಿ ಮಾಡಿ ‘ಕಷ್ಟ’ ಪಡುತಿದ್ದ ನಾವೂ ಮನೆಯ ಹೆಂಗಸರಲ್ಲಿ ಕಾಡಿ ಬೇಡಿ ನಮ್ಮ ಪಾಲಿನ ಯರ್ಥ ಸವಿಯುತಿದ್ದೆವು. ಸಂಜೆ ಮತ್ತೆ ಅವುಗಳಿಗೆ ತೆಂಗಿನ ಕಾಯಿ ಮಿಶ್ರಣ ಮಾಡಿದ ಹುರುಳಿಯ ಸವಿಯೂಟ!!  ಜೂನ್-ಜುಲೈ ಮಳೆ ಲೆಕ್ಕಿಸದೆ ಮನೆ ಒಡೆಯನಿಗೆ ನಿಸ್ವಾರ್ಥ ದುಡಿಮೆ ದುಡಿದ ಮೂಕ ಪ್ರಾಣಿಗಳಿಗೆ ಅವುಗಳ ಪ್ರೀತಿಯ ದ್ಯೋತಕವಾಗಿ ನೀಡುತಿದ್ದ ‘ಯರ್ಥ’ ಕೇವಲ ಕೊಡು-ಕೊಂಬುವಿಕೆಯ ಮಾತಾಗಿರದೆ, ಭಾಷೆಗೆ ಮೀರಿದ ಅನೂಹ್ಯ ಬಂಧನದ ದ್ಯೋತಕವಾಗಿತ್ತು. ಅಜ್ಜ ಮತ್ತು ಆತನ ಬಹುತೇಕ ಪೀಳಿಗೆಯವರು ತನ್ನ ಸುತ್ತಲಿನ ಪರಿಸರದೊಂದಿಗೆ, ಪಶು-ಪಕ್ಷಿಗಳೊಂದಿಗೆ ಲಾಭ ನಷ್ಟದ ಲೆಕ್ಕಾಚಾರ ಇಟ್ಟುಕೊಳ್ಳುವಷ್ಟು ಬುದ್ಧಿವಂತರಾಗಿರಲಿಲ್ಲ! 
       ಅತ್ಯಂತ ಸರಳವಾಗಿ ಬದುಕಿದ, ಮಣ್ಣಿನೊಂದಿಗೆ, ಗಿಡಗಳೊಂದಿಗೆ ಮಾತಾಡಬಲ್ಲವನಾಗಿದ್ದ ಅಜ್ಜ ನೂರಾರು ಸಲ ಬಹುಗುಣರನ್ನ ನೆನಪಿಸಿದ್ದಿದೆ. ಅವನೇನೂ ಫುಕವೋಕಾ, ಬಹುಗುಣ, ತಿಮ್ಮಕ್ಕ, ಮೇಧಾ ಪಾಟ್ಕರ್‌ರಂತೆ ಜನರಿಗೆ ತಿಳಿದಿಲ್ಲ. ಆದರೆ ಪರಿಸರಕ್ಕೆ ಅತ್ಯಂತ ಹತ್ತಿರವಾಗಿ ಬದುಕುವ ವಿಚಾರಕ್ಕೆ ಬಂದಾಗ ಅವನ ಕೊಡುಗೆ ಮೇರು ಸದೃಶವಾದದ್ದು ಎನಿಸುತ್ತದೆ.
      ಇಂದು ಜೂನ್ 05, ವಿಶ್ವ ಪರಿಸರ ದಿನಾಚರಣೆ!! ಅಜ್ಜನಿಗೆ ಹೀಗೊಂದು ಆಚರಣೆ ಇತ್ತೆಂದು ಗೊತ್ತಿರಲಿಲ್ಲ. ಬಹುಷಃ ಅದರ ಅಗತ್ಯವೂ ಅವನಿಗಿರಲಿಲ್ಲ. ಪ್ರತಿದಿನವೂ ಪರಿಸರವನ್ನು ಪೂಜಿಸಿ, ಅದರೊಂದಿಗೇ ಬೆಳೆದ ಅವನಿಗೆ ಒಂದರ್ಥದಲ್ಲಿ ಪ್ರತಿಕ್ಷಣವೂ ಪರಿಸರ ಆಚರಣೆಯೇ ಆಗಿತ್ತು. ಇಂದು ನಮ್ಮ ಪೀಳಿಗೆ ಹಾಗಲ್ಲ, ಒಂದು ಕಡೆಯಿಂದ ಪರಿಸರವನ್ನು ಎಷ್ಟು ಸಾಧ್ಯವೋ ಅಷ್ಟು- ಪ್ರತ್ಯಕ್ಷವೋ ಪರೋಕ್ಷವೋ- ಹಾಳು ಮಾಡುತ್ತಾ, ಈ ದಿನ ಬಂದಾಗ ಶಂಖ ಜಾಗಟೆಯ ರವವನ್ನೂ ಮೀರಿ ಭಾಷಣ ಬಿಗಿಯುವವರನ್ನೂ, ಕಾರ್ಯಕ್ರಮ ನಡೆಸಿ ಧನ್ಯರಾದೆವು ಅನ್ನುವುದನ್ನು ಯೋಚಿಸಿದಾಗ ಯಾಕೋ ನಿಜವಾಗಿಯೂ ಶತಃಪ್ರತಿಶತ ಪರಿಸರದೊಂದಿಗೆ ಹುಟ್ಟಿ, ಎಳ್ಳಷ್ಟೂ ಪರಿಸರಕ್ಕೆ ದ್ರೋಹವೆಸಗದೇ, ಮಣ್ಣನ್ನು ನೀರನ್ನು ತಾಯಿಯಂತೆ ಪ್ರೀತಿಸಿ, ಪೂಜಿಸಿ ಸಂತನಂತೆ ಬಾಳಿ ಅಳಿದ ಅಜ್ಜನಂತವರು ಇಂದಿನ ದಿನಾಚರಣೆಯ ನಿಜವಾದ ಹೀರೋಗಳೆನಿಸುತ್ತಾರೆ..!!
     ಶಾಲೆ ಕಾಲೇಜುಗಳಲ್ಲಿ ಇಂತಹ ಅವಧೂತರ ಕಥೆಗಳನ್ನು ಹೇಳುವುದಕ್ಕೆ ಯಥಾವಕಾಶ ಇಲ್ಲದಿರಬಹುದು. ಆದರೆ ಪ್ರತೀ ಮನೆಯಲ್ಲೂ ಇರಬಹುದಾದ ಇಂತಹ ಸಾಧಕರ ಕಥೆಗಳನ್ನು ಇಂದಿನ ನಮ್ಮ ಮಕ್ಕಳಿಗೆ ಹೇಳುವ, ತನ್ಮುಖೇನ ಎಲ್ಲರಲ್ಲಿ ಪರಿಸರದ ಕಡೆಗೆ ಆಂತರ್ಯದಿಂದ ಆಸ್ಥೆ, ಕಾಳಜಿ ಮೂಡಿಸುವ ಮೂಲಕ ನಿಜವಾದ ‘ಪರಿಸರ ದಿನಾಚರಣೆ’ ಪ್ರತಿ ಮನೆಯಲ್ಲೂ, ಪ್ರತೀ ಮನದಲ್ಲೂ ನಡೆಯುವಂತಾಗಲಿ ಎಂಬುದೇ ಆತ್ಮೀಯ ಹಾರೈಕೆ...
.................. ಸುರೇಶ್ ಮರಕಾಲ ಸಾಯ್ಬರಕಟ್ಟೆ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಧ್ಯಾಪಕರು.
ಸರಕಾರಿ ಪದವಿ ಪೂರ್ವ ಕಾಲೇಜು, ಕುಕ್ಕುಜೆ,
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ.
Mob : 9481511921
******************************************** 


Ads on article

Advertise in articles 1

advertising articles 2

Advertise under the article