-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 66

ಸ್ಫೂರ್ತಿಯ ಮಾತುಗಳು : ಸಂಚಿಕೆ - 66

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                        
    ಸೋಲಬೇಕೆಂಬ ಆಸೆಯುಳ್ಳವರು ಶೂನ್ಯ. ಗೆಲ್ಲುವುದೇ ಆಬಾಲವೃದ್ಧರಾದಿಯಾಗಿ ಸರ್ವರ ಗುರಿ. ಜೀವನ ಸಾಗರ ಬಹಳ ವಿಶಾಲ. ಅದರ ದಡ ಸೇರುವ ಪ್ರಯತ್ನದಲ್ಲಿ ಸೋಲುಗಳು, ಸವಾಲುಗಳು ನಿರಂತರ. ಎದುರಾದ ಎಲ್ಲ ಸವಾಲುಗಳನ್ನು ಹಿಮ್ಮೆಟ್ಟಿ ಮುಮ್ಮುಖವಾಗಿ ಸಾಗುವುದೇ ಗೆಲುವಿನ ರಾಜಬೀದಿ. ಸೋತಾಗ ಹಿಮ್ಮುಖವಾಗುವುದು ಮನುಜ ಸಹಜ ದೌರ್ಬಲ್ಯ. ಸೋತಾಗ ತನ್ನ ಸೋಲಿಗೆ ಕಾರಣಗಳನ್ನು ಹುಡುಕುವುದರ ಬದಲು ಯಾರು ಕಾರಣರೆಂದು ಹುಡುಕುವ ಮತ್ತು ಇತರರೆಡೆಗೆ ಬೆರಳು ತೋರುವ ಜಾಯಮಾನ ಮಾನವರಲ್ಲಿ ಸಾಮಾನ್ಯ. ಸೋಲಿಗೆ ಕಾರಣಗಳನ್ನು ಶೋಧಿಸಿ ಪರಿಹಾರೋಪಾಯಗಳನ್ನು ಕಾಣುವುದೆ ಜಾಣ ನಡೆ.
      ಪರೀಕ್ಷೆಯಲ್ಲಿ ಸೋತ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ತಯಾರಿಸಿದವರನ್ನು ದೂರುತ್ತಾರೆ. ತಮ್ಮ ಪರೀಕ್ಷಾ ಉತ್ತರ ಪತ್ರಿಕೆಗಳನ್ನು ತಿದ್ದಿದವರನ್ನು ಕಠಿಣವಾಗಿ ದೂಷಣೆ ಮಾಡುತ್ತಾರೆ. ಅಂಕಗಳನ್ನು ಕ್ರೋಢೀಕರಣ ಮಾಡಿದವರನ್ನೂ ದೂರುತ್ತಾರೆ..... ಹೀಗೆ ಅನೇಕರನ್ನು ದೂರುತ್ತಾರೆಯೇ ವಿನಹ ತಮ್ಮನ್ನು ಎಂದಿಗೂ ದೂರುವುದಿಲ್ಲ. ಹಾಗೆಂದ ಮಾತ್ರಕ್ಕೆ ಪರೀಕ್ಷಾ ವ್ಯವಸ್ಥೆಯಲ್ಲಿ ದೋಷಗಳೇ ಇಲ್ಲವೆಂದು ಅರ್ಥವಲ್ಲ. ಕಣ್ತಪ್ಪುಗಳು ಅಲ್ಲಲ್ಲಿ ಸಹಜ. ಆದರೆ ಸೋತ ವಿದ್ಯಾರ್ಥಿಯು ಸೋಲಿಗೆ ಕಾರಣಗಳನ್ನು ಹುಡುಕಿ ಅಂತರವಲೋಕನ ಮಾಡಿದರೆ ಜರೆಯಲು ಯಾರೂ ಸಿಗರು, ತನ್ನನ್ನೇ ನಿಂದಿಸಿ ಮುಂದೆ ಪರಿಹಾರಾತ್ಮಕ ಮತ್ತು ಪರ್ಯಾಯ ಪ್ರಯತ್ನಗಳನ್ನು ಮಾಡುತ್ತಾನೆ.
      ತಾನು ತರಗತಿಯಲ್ಲಿ ತೊಡಗಿಸಿಕೊಂಡ ರೀತಿ, ಕಲಿಕೆಗೆ ಕೊಟ್ಟ ಮಹತ್ವ, ಸಮಯದ ಸದ್ಬಳಕೆ, ಕಲಿಕೆಯಲ್ಲಿ ಓರಗೆಯವರಿಂದ ಪಡೆದ ಸಹಕಾರ, ಮನೆಗೆಲಸದಲ್ಲಿದ್ದ ತನ್ನ ನಿಷ್ಠೆ, ಕಲಿಕಾ ಕೆಲಸಗಳ ದೈನಂದಿನ ವೇಳಾ ಪಟ್ಟಿ, ವ್ಯಾಯಾಮದಲ್ಲಿ ತನ್ನ ತೊಡಗಿಸುವಿಕೆ, ಜಾಲ ತಾಣಗಳ ಅನಗತ್ಯ ಸಂಗತಿಗಳಲ್ಲಿ ತನ್ನ ಸಮಯದ ದುರುಪಯೋಗ... ಹೀಗೆ ಹಲವಾರು ಕಾರಣಗಳು ಸಿಗುತ್ತವೆ. ಈ ಕಾರಣಗಳನ್ನು ಸರಿದಾರಿಗೆ ಚಲಾಯಿಸಿದರೆ ಸಮಾಧಾನಕರ ಗೆಲುವು ಖಂಡಿತ. ಶಾಲಾರಂಭದಿಂದಲೇ ತನ್ನನ್ನು ಅವಲೋಕಿಸುತ್ತಾ ತಪ್ಪು ನಡೆಗಳನ್ನು ನೇರ್ಪಡಿಸಿದರೆ, “ಸೋಲು” ಖಂಡಿತವಾಗಿಯೂ ಸೋಲುತ್ತದೆ.
     ಆರೋಗ್ಯವು ಸಂಪತ್ತಾದರೆ ಅನಾರೋಗ್ಯವು ಮಹಾ ವಿಪತ್ತು. ಆಹಾರ ವಿಹಾರಗಳಲ್ಲಿ ಯರ್ರಾಬಿರ್ರೀಯಾದಾಗ ಅನಾರೋಗ್ಯೆಂಬ ಸೋಲು ಶತಃ ಸಿದ್ಧ. ಜೀವ ಚೈತನ್ಯವನ್ನು ಅನಾರೋಗ್ಯವು ಕುಸಿತಗೊಳಿಸುತ್ತದೆ. ಚೈತನ್ಯ ಕುಸಿದರೆ ಸಾಧನೆಗಿಂತ ವಿಫಲತೆಗಳೇ ಅಧಿಕ. ಸೋಲನ್ನು ಮೀರಿ ನಿಲ್ಲಲು ಆರೋಗ್ಯದ ರಕ್ಷಣೆಗೆ ಸಂಬಂಧಿಸಿದ ಪ್ರಯತ್ನಗಳಿರಲೇಬೇಕು. ಮಿತ ಸಾತ್ವಿಕ ಆಹಾರ, ಸುವಿಹಾರ, ಸುವಿಚಾರ, ದೇಹ ಶ್ರಮಕ್ಕಾಗಿ ಚಟುವಟಿಕೆಗಳು, ಮನೋಲ್ಲಾಸಕ್ಕಾಗಿ ಸಮಯದ ನಿಗದಿ ಮುಂತಾದುವು ಉತ್ತಮ ಆರೋಗ್ಯಕ್ಕೆ ಪೂರಕವಾಗುತ್ತವೆ.
      ಹುಟ್ಟು ಮತ್ತು ಸಾವು ಅನಿರೀಕ್ಷಿತ. ಬಡವನಾಗಿಯೋ, ಶ್ರೀಮಂತನಾಗಿಯೋ ಹುಟ್ಟುವುದು ಆಧ್ಯಾತ್ಮಿಕ ಪರಿಭಾಷೆಯಲ್ಲಿ ಹೇಳುವುದಾದರೆ, “ಕರ್ಮಫಲ”. ಬಡತನವು ಸೋಲು ಎಂದು ನಂಬುವವರು ನಾವು. ಆದರೆ ಬಡತನವನ್ನು ಸೋಲಿಸಲು ಧೈರ್ಯಶಾಲಿಯಾದ ಸಾಧಕನಿಗೆ ಸಾಧ್ಯ ಎಂಬ ನಿಜ ವಿಚಾರವನ್ನು ಮರೆಯಬಾರದು. ಹೇಡಿಯಾದವನಿಗೆ ಸಾಧನೆಯ ಮೆಟ್ಟಲುಗಳನ್ನೇರಲು ಸಾಧ್ಯವಾಗದೇ ಬಡತನದಲ್ಲೇ ಕೊಳೆಯುತ್ತಾ ಸೋಲುತ್ತಾನೆ.
     ಪ್ರಬಲ ದೇಹಶಕ್ತಿಯುಳ್ಳ ಬಲವಂತರು ಸೋತಿಲ್ಲವೇ? ದೇಹ ಬಲವೂ ಗೆಲುವಿಗೆ ಬೇಕೇ ಬೇಕು. ಆದರೆ ದೇಹದ ಬಲದೊಂದಿಗೆ ಮನೋಬಲವೂ, ದೈವ ಬಲವೂ, ಮಾತಾ ಪಿತರ ಹಾರೈಕೆಯ ಬಲವೂ ಜೊತೆಯಾದರೆ ಅದು ಆನೆ ಬಲವಾಗುತ್ತದೆ. ದೇಹವು ಆರೋಗ್ಯ ಮತ್ತು ನೆಮ್ಮದಿಗಳ ತಾಣವಾದರೆ ಗೆಲುವು ನಿಶ್ಚಯ.
      ಆಟದಲ್ಲಿ ಅಂತಿಮವಾಗಿ ಒಬ್ಬ ಅಥವಾ ಒಂದು ತಂಡಕ್ಕೆ ಮಾತ್ರವೇ ಗೆಲುವು ಸೀಮಿತ. ಹಾಗಾದರೆ ಸೋಲುವವರೇ ಅಧಿಕವೆಂದಾಯಿತು. ಪ್ರಥಮ ಸೋಲಿನೊಂದಿಗೆ ಆಟಗಳಿಗೆ ಸಂನ್ಯಾಸ ನೀಡಿದರೆ ಮತ್ತೆ ಗೆಲ್ಲುವ ಅವಕಾಶವೇ ದೊರೆಯದು. ಸೋಲಿನ ಬೆನ್ನ ಹಿಂದೆ ಗೆಲುವು ನಗುತ್ತಾ ಕಾಯುತ್ತಿರುತ್ತದೆ. ಸರದಿ ಬಂದಾಗ ನಮಗೂ ಗೆಲುವು ನಿಶ್ಚಿತ. ಸರದಿ ಕಾಯುವ ತಾಳ್ಮೆ, ಗೆಲುವಿಗಾಗಿ ನಿರಂತರ ಪ್ರಯತ್ನ ನಮ್ಮಲ್ಲಿ ಅವಿನಾಶಿಯಾಗಿರಬೇಕು.
       ನವಕೋಟಿ ನಾರಾಯಣ ಎಂದೇ ಪ್ರಚಾರದಲ್ಲಿದ್ದ ಶ್ರೀನಿವಾಸ ನಾಯಕರು ಜಿಪುಣರಾಗಿದ್ದರು. ಜಿಪುಣತನದಿಂದ ಅವರು ಗೆಲ್ಲಲಿಲ್ಲ. ತನ್ನ ಸರ್ವ ಸಂಪತ್ತನ್ನೂ ದಾನ ಮಾಡಿ ಭಗವಂತನನ್ನು ಗೆದ್ದರು. ಪುರಂದರದಾಸರಾದರು. ತಾನು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಲಾಗದವರಿಗೆ ಗೆಲುವಿರದು. ಮಾತನಾಡುವಾಗ ಹೇಳುತ್ತಾರೆ, ”ನಾನು ಮದುವೆಯಾಗಿ ಸೋತೆ, ಈ ಕಾಲೇಜಿಗೆ ಸೇರಿ ಸೋತೆ, ಆ ಕೆಲಸಕ್ಕೆ ಸೇರಿ ಸೋತೆ, ಈ ಬೆಳೆಯನ್ನು ಬೆಳೆಸಿ ಸೋತೆ, ಅಲ್ಲಿ ಕೊಳವೆ ಬಾವಿ ತೋಡಿಸಿ ಸೋತೆ...” ಇವರು ಎಂದಿಗೂ ಗೆದ್ದೆ ಎಂಬ ಮಾತನ್ನು ಹೇಳುವುದಿಲ್ಲ. ಬದುಕಿನಲ್ಲಿ ಹತ್ತಾರು ಗೆಲುವುಗಳು ಅವರಿಗೂ ದಕ್ಕಿರುತ್ತದೆ. ಆ ಗೆಲುವುಗಳನ್ನು ಗೌಣವಾಗಿ ಕಾಣುವ ಮನೋ ಪ್ರವೃತಿಯವರು ಸೋತೆನೆಂದು ಹೇಳಿರುವ ಎಲ್ಲ ಸಂಗತಿಗಳಲ್ಲೂ ಗೆದ್ದಿರಲೂ ಬಹುದು, ಅಥವಾ ಗೆದ್ದೇ ಗೆದ್ದಿರುತ್ತಾರೆ. ಅಸಂತೃಪ್ತರಿಗೆ ಗೆಲುವುಗಳೂ ಸೋಲುಗಳಾಗಿಯೇ ಕಾಣುತ್ತವೆ. ಆತ್ಮ ತೃಪ್ತಿಯೂ ಗೆಲುವಿಗೆ ಮೂಲಾಧಾರ
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 



Ads on article

Advertise in articles 1

advertising articles 2

Advertise under the article