ನೆನಪಾಗುಳಿದ ಶಿಶಿರನ ಚಿತ್ರಗಳು...!
Saturday, June 17, 2023
Edit
ಲೇಖನ : ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಅದೊಂದು ಅದಮ್ಯ ಪ್ರತಿಭೆ, ತುಂಬಾ ಚಿತ್ರ ಮಾಡಬೇಕು, ತುಂಬಾ ಪುಸ್ತಕ ಓದಬೇಕು, ಹಾಡುಗಾರನಾಗಬೇಕು, ಉತ್ತಮ ಮಾತುಗಾರನಾಗಬೇಕು, ಪರಿಸರದ ಬಗ್ಗೆ ಅಧ್ಯಯನ ಮಾಡಬೇಕು, ಹೀಗೆ ಕನಸುಗಳ ಪಟ್ಟಿ ತೆರೆದಿಡುತ್ತಾ ಹೋಗುವ ಶಿಶಿರ್ ಮಕ್ಕಳ ಜಗಲಿ ಆರಂಭವಾದಾಗಿನಿಂದ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದ ಪ್ರತಿಭಾವಂತ ಹುಡುಗ.
ಶಿಶಿರನಲ್ಲಿ ಕಲಿಯುವ , ತಿಳಿಯುವ ತುಡಿತ ಅಪರಿಮಿತ. ಶಾಲಾ ಬೇಸಿಗೆ ರಜೆ ಸಿಕ್ಕಿದ ಕೂಡಲೇ ಮಕ್ಕಳ ಶಿಬಿರಗಳಿಗೆ ಹಾಜರು. ಬೇಸಿಗೆ ಶಿಬಿರಗಳು ಎಲ್ಲೇ ಇರಲಿ ಭಾಗವಹಿಸುವುದು ಮುಖ್ಯ ಗುರಿಯಾಗಿತ್ತು. ಚಿತ್ರ, ಕ್ರಾಫ್ಟ್, ಹಾಡು , ನಾಟಕ, ಮೈಮ್, ಹೀಗೆ ಎಲ್ಲಾ ವಿಷಯಗಳಲ್ಲೂ ತರಬೇತಿ ಪಡೆಯುವುದೆಂದರೆ ತುಂಬಾ ಆಸೆ. ಸುಳ್ಯದ ರಂಗಮನೆ, ಆಳ್ವಾಸ್ ಚಿಣ್ಣರ ಮೇಳ ಹೀಗೆ ರಾಜ್ಯಮಟ್ಟದ ಮಕ್ಕಳ ಶಿಬಿರಗಳಲ್ಲಿ ನಿರಂತರವಾಗಿ ಭಾಗವಹಿಸುವುದಾಗಿತ್ತು.
ಮಕ್ಕಳ ಜಗಲಿಯಲ್ಲಿ 'ಜೀವನ ಸಂಭ್ರಮ' ಅಂಕಣವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದ ಶಿಶಿರ್ ಜೀವನವನ್ನು ಸಂಭ್ರಮದಿಂದ ಕಳೆಯುವ ಕುರಿತಾಗಿ ಚಿಂತಿಸುತ್ತಿದ್ದ. ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಮಯದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾದಾಗ ಖುದ್ದು ಜೀವನ ಸಂಭ್ರಮದ ಲೇಖಕರು ಹಾಗೂ ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾದ ಜ್ಞಾನೇಶ್ ಎಂ ಪಿ ಅವರನ್ನು ಭೇಟಿಯಾಗಿ ಸ್ಫೂರ್ತಿ ಪಡೆದಿದ್ದನು. ತತ್ಪರಿಣಾಮವಾಗಿ ಸ್ವಪರಿಶ್ರಮದಿಂದ ಹಾಗೂ ಶಾಲಾ ಶಿಕ್ಷಕರ ಸಮಯೋಚಿತ ಬೆಂಬಲದಿಂದ ಅತ್ಯಧಿಕ ಅಂಕದೊಂದಿಗೆ ಉತ್ತೀರ್ಣನಾಗಿರುವುದು ದೊಡ್ಡ ಸಾಧನೆಯೇ ಸರಿ. ತಾನು ಕಲಿಯುತ್ತಿದ್ದ ಶಾಲೆಯಲ್ಲಿ ಪ್ರತಿಯೊಂದು ವಿಷಯದಲ್ಲೂ ಮುಂದಿದ್ದ ಶಿಶಿರ್ ಎಲ್ಲಾ ಶಿಕ್ಷಕರಿಗೂ ಮೆಚ್ಚಿನ ವಿದ್ಯಾರ್ಥಿ.
'ಅಕ್ಕನ ಪತ್ರ' ಬಹಳ ಇಷ್ಟದ ವಿಷಯವಾಗಿತ್ತು. ತೇಜಸ್ವಿ ಅಂಬೆಕಲ್ಲು ಬರೆಯುತಿದ್ದ ಪ್ರತಿ ಪತ್ರಗಳಿಗೂ ಶಿಶಿರನ ಉತ್ತರ ಖಾಯಂ ಆಗಿತ್ತು. ಶಿಶಿರನ ಅಮ್ಮ ಶ್ರೀಮತಿ ಕವಿತಾ ಹಾಗೂ ತಂದೆ ವಕೀಲರಾದ ಶ್ರೀನಿವಾಸ ದೈಪಲ ತಿಳಿಸುವಂತೆ.... "ಪತ್ರ ಬರೆಯುವುದಕ್ಕಾಗಿ ಹಲವಾರು ಪುಸ್ತಕಗಳನ್ನು ಓದುತ್ತಿದ್ದ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತಹ ಸಂದರ್ಭದಲ್ಲಿ ಕೂಡ ಪತ್ರ ಬರೆಯುವುದನ್ನು ಮರೆತಿರಲಿಲ್ಲ." ಹೀಗೆ ನೆನಪುಗಳನ್ನು ಹಂಚಿಕೊಳ್ಳುತ್ತಾರೆ.
ಶಿಶಿರನಿಗೆ ಚಿತ್ರ ಬಿಡಿಸುವುದೆಂದರೆ ಬಹಳ ಖುಷಿ. ವ್ಯಕ್ತಿ ಚಿತ್ರಗಳನ್ನು ಅತಿ ಹೆಚ್ಚು ಬಿಡಿಸುತ್ತಿದ್ದ. ಸಾಹಿತಿಗಳ, ಕ್ರೀಡಾಪಟುಗಳ, ನಟರ ಹಾಗೂ ತಾನು ಇಷ್ಟ ಪಟ್ಟ ವ್ಯಕ್ತಿಗಳ ಪೆನ್ಸಿಲ್ ಶೇಡಿಂಗ್ ಕಲಾಕೃತಿಗಳು ತುಂಬಾ ಸುಂದರವಾಗಿ ಮೂಡಿ ಬಂದಿದೆ. ಕಲಾಕೃತಿಗಳ ಕುರಿತು ತನ್ನ ಚಿತ್ರಕಲಾ ಶಿಕ್ಷಕರು, ಇನ್ನಿತರ ಕಲಾವಿದರ ಜೊತೆ ತನ್ನ ಸಂದೇಹಗಳನ್ನು ಕೇಳಿ ಪರಿಹರಿಸಿಕೊಳ್ಳುವುದು ರೂಢಿಯಾಗಿತ್ತು. ಇಲ್ಲಿ ಬಿಡಿಸಿರುವ ಚಿತ್ರಗಳಲ್ಲಿ ಪ್ರೀತಿ ಇದೆ. ಆಸಕ್ತಿ ಅಡಗಿದೆ. ಏನಾದರೂ ಒಂದು ಸಾಧನೆ ಮಾಡಬೇಕೆನ್ನುವ ಹಂಬಲ ಅದರಲ್ಲಿದೆ.....
ಈ ನಾಡಿಗೆ ಕೊಡುಗೆಯಾಗಬೇಕಾಗಿದ್ದ ಅದ್ಭುತ ಪ್ರತಿಭೆಯೊಂದು ಮರೆಯಾಯಿತು. ಮಕ್ಕಳ ಜಗಲಿಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತಿದ್ದ ಶಿಶಿರ ಇನ್ನಿಲ್ಲ..... ಮಕ್ಕಳ ಜಗಲಿಯಲ್ಲಿ ನೀ ಬರೆದ ಪತ್ರಗಳ, ನೀ ಬರೆದ ಚಿತ್ರಗಳ ನೆನಪು ಸದಾ ಇರುತ್ತದೆ. ಮತ್ತೆ ಹುಟ್ಟಿ ಬಾ ಕಂದ....
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************