-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 14

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 14

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 14
ಲೇಖಕರು : ಸುನೀತರವಿ, ನೆಲೆಗದ್ದೆ, ಮಕ್ಕಿಮನೆ
ಕನ್ನಡ ಶಿಕ್ಷಕರು,
ಮೊರಾರ್ಜಿ ದೇಸಾಯಿ ವಸತಿ ಶಾಲೆ, 
ಹರಂದೂರು, ಕೊಪ್ಪ.
           
               
     ಅದೊಂದು ಕ್ರಿಶ್ಚಿಯನ್ನರ ಆಶ್ರಮ ಶಾಲೆ. ನಾನು ಅಲ್ಲಿನ ಶಿಕ್ಷಕಿಯಾಗಿ ಬೆಂಗಳೂರಿನ ಬಿಡದಿಯಲ್ಲಿ ವಾಸವಾಗಿದ್ದೆ. ಎಂಟನೇಯ ತರಗತಿಯ ಶಿಕ್ಷಕಿಯಾಗಿ ನನ್ನನ್ನು ನೇಮಿಸಿದ್ದರು. ಅದೇ ಶಾಲೆಯ ಮೂರನೇ ತರಗತಿಯಲ್ಲಿ ರಾಹುಲ್ ರೆಡ್ಡಿ ಎಂಬ ಪುಟ್ಟ ಬಾಲಕ ವಿದ್ಯಾಭ್ಯಾಸ ಮಾಡುತ್ತಿದ್ದನು. ಹುಡುಗ ತುಂಬಾನೇ ತುಂಟ. ತಂದೆ ತಾಯಿಗೆ ಗದರಿಸುತ್ತಾನೆ ಎನ್ನಲಾಗಿತ್ತು. ಇಷ್ಟೇ ಅಲ್ಲದೆ ಆತನು ಅಲ್ಲೇ ಪಕ್ಕದಲ್ಲಿರುವ ಕೇಂದ್ರೀಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯ ಜುಟ್ಟು ಹಿಡಿದು ಎಳಿದಿದ್ದನೆಂದು ಶಾಲೆಯಿಂದಲೇ ಮನೆಗೆ ಕಳುಹಿಸಿದ್ದರು. ತದನಂತರ ಬಂದು ಸೇರಿದ್ದ ಆಶ್ರಮ ಶಾಲೆ.
      ಬಾಲಕ ಇಲ್ಲಿಯೂ ತನ್ನ ಆಟ ಆರಂಭಿಸಿದ. ಪ್ರಾಂಶುಪಾಲರಿಗೆ ತುಂಬಾನೇ ಚಿಂತೆಯಾಯಿತು. ಇದ್ದಕ್ಕಿದ್ದಂತೆ ಅವರು ತಮ್ಮ ಯೋಜನೆ ಬದಲಿಸಿ ನನ್ನನ್ನು ಮೂರನೇ ತರಗತಿ ಶಿಕ್ಷಕಿಯನ್ನಾಗಿ ನೇಮಿಸಿದರು. ನನಗೆ ಕಸಿವಿಸಿಯಾಯಿತು.
       ಏನೇ ಆಗಲಿ ನನ್ನ ಕೈಲಾದಷ್ಟು ಪ್ರಯತ್ನ ಮಾಡಿ ಆತನನ್ನು ಬದಲಾಯಿಸುವೆನೆಂದು ಶಪಥ ನನ್ನೊಳಗೆ ನಾನೇ ಮಾಡಿಕೊಂಡೆ. ಯಾವುದೇ ಶಿಕ್ಷಕರ ಮುಂದೆ ಆತ ತರಲೆ ಮಾಡುತ್ತಿರಲಿಲ್ಲ. ಮುದ್ದು ಮುದ್ದಾದ ಅಂದದ ಬಾಲಕ. ನನಗಂತೂ ಆತ ತುಂಬಾನೇ ಇಷ್ಟವಾಗಿದ್ದ. ಪ್ರತಿ ದಿನ ಶಾಲೆ ಮೆಟ್ಟಿಲೇರಿದರೆ ಸಾಕು ಅವನದೇ ಕಂಪ್ಲೆಂಟ್. ರೆಡ್ಡಿ ಅವನಿಗೆ ಹೊಡೆದ, ಇವನಿಗೆ ಹೊಡೆದ ಎನ್ನುತ್ತಿದ್ದರು. ಯಾವುದೇ ಮನೆಗೆಲಸ ಮಾಡುತ್ತಿರಲಿಲ್ಲ. ಹೊಡೆದ ಏಟು ಆತನಿಗೆ ಲೆಕ್ಕಕ್ಕೇ ಇರುತ್ತಿರಲಿಲ್ಲ. 
    ನಾನು ಮೊದಲು ಆತನ ಫ್ಯಾಮಿಲಿ ಬಗ್ಗೆ ತಿಳಿದೆ. ಅವರು ತುಂಬಾನೇ ಪಾಪದವರೆಂದು ತಿಳಿಯಿತು. ಆದರೆ ಅವರಿರುವ ಏರಿಯಾದವರು ತುಂಬಾನೇ ಕೆಟ್ಟ ರೀತಿಯಲ್ಲಿ ವರ್ತಿಸುತ್ತಾರೆ ಎಂದು ತಿಳಿಯಿತು. ಹೀಗಾಗಿ ನನ್ನ ನಡೆಯನ್ನು ಬದಲಿಸಿದೆ. ಹೊಡೆಯುವ ಬದಲು ಆತನನ್ನು ಪ್ರೀತಿಯಿಂದ ನೋಡಬೇಕೆನಿಸಿತು. ಆತನನ್ನು ತರಗತಿಯಲ್ಲಿ ಹೊಗಳಲಾರಂಭಿಸಿದೆ. ರೆಡ್ಡಿ ಎಲ್ಲರಿಗಿಂತ ಜಾಣ... ಆತ ತುಂಬಾ ವೇಗವಾಗಿ ಮತ್ತು ಚೆನ್ನಾಗಿ ಬರೆಯುತ್ತಾನೆ!! ಎಂದೆ. ಅದು ಪರಿಣಾಮಕಾರಿಯಾಯಿತು. ಆತ ಖುಷಿ ಖುಷಿಯಾಗಿ ಬರೆದು ಮುಗಿಸಿದ. ಆತನನ್ನು ತರಗತಿ ನಾಯಕನಾಗಿ ಮಾಡಿದೆ. ಗಲಾಟೆ ನಿಯಂತ್ರಣಕ್ಕೆ ಬಂತು. ಉಳಿದ ವಿದ್ಯಾರ್ಥಿಗಳಿಗೂ ಆತನನ್ನು ಪ್ರೀತಿಯಿಂದ ನೋಡಲು ಹೇಳಿದೆ. ಎಲ್ಲವೂ ತಣ್ಣಗಾಯಿತು...!!!
     ಆತ ತನ್ನ ನಡೆಯನ್ನು ನಿಧಾನವಾಗಿ ಬದಲಾಯಿಸಿದ. ಆತನ ಪೋಷಕರನ್ನು ಕರೆಸಿ ಮನೆಯಲ್ಲಿ ಆತನಿಗೆ ಶಾಂತತೆಯ ವಾತಾವರಣ ಹಾಗೂ ಪ್ರೀತಿ ನೀಡಲು ತಿಳಿಸಲಾಯಿತು. ಅಂದಿನಿಂದ ರೆಡ್ಡಿ ಎಲ್ಲರ ನೆಚ್ಚಿನ ವಿದ್ಯಾರ್ಥಿಯಾದ. ನನ್ನ ಪಾಲಿಗೆ ಅವನ ಬದಲಾವಣೆ ಬಹು ದೊಡ್ಡ ಬಹುಮಾನದಂತೆ ಕಂಡಿತು. ಆ ದಿನ ಎಲ್ಲೇ ಇದ್ದರೂ ಮರೆಯಲಾರೆನು..!!!
   ಒಂದು ಸಣ್ಣ ಪ್ರೀತಿ ಎಂಥ ಕಠಿಣ ಸಂದರ್ಭವನ್ನೇ ಬದಲಾಯಿಸಬಹುದು.
.................. ಸುನೀತರವಿ, ನೆಲೆಗದ್ದೆ, ಮಕ್ಕಿಮನೆ
ಕನ್ನಡ ಶಿಕ್ಷಕರು,
ಮೊರಾರ್ಜಿ ದೇಸಾಯಿ ವಸತಿ ಶಾಲೆ, 
ಹರಂದೂರು, ಕೊಪ್ಪ.
Mob : +91 94813 13844
******************************************   


Ads on article

Advertise in articles 1

advertising articles 2

Advertise under the article