ನಮ್ಮ ನಿಸರ್ಗವೇ ಸುಂದರ ಸ್ವರ್ಗ - ಲೇಖನ : ಲಿಖಿತ , 9ನೇ ತರಗತಿ
Tuesday, June 6, 2023
Edit
ಲೇಖನ : ಲಿಖಿತ
9ನೇ ತರಗತಿ
ಸರಕಾರಿ ಪ್ರೌಢ ಶಾಲೆ , ಸಿದ್ಧಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು…. ಜೂನ್ - 05 ಪ್ರಪಂಚದಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸುವ ಸುದಿನ…. ಪರಿಸರ ದಿನ ಕೇವಲ ಜೂನ್ 5ಕ್ಕೆ ಸೀಮಿತವಾಗಬಾರದು… ಪ್ರತಿ ದಿನವೂ ಪರಿಸರ ದಿನವೇ ಆಗಿರಬೇಕು.
ಸ್ವರ್ಗದಂತಿರೋ ಈ ನಿಸರ್ಗನ
ಕೆಡುವುತಿಹರು ಈ ಮಾನವರು.
ಪರಿಸರ ಸಂರಕ್ಷಣೆಗೆ ಪ್ರಕೃತಿಯನ್ನು
ದೇವರೆಂದು ಪೂಜಿಸಿದರು ಅಂದು
ಪರಿಸರವನ್ನೇ ನಾಶ ಮಾಡುತ್ತಾ ಕಟ್ಟಡಗಳ
ಕಟ್ಟುವ ದುಡಿಮೆಯಾಗಿದೆ ಇಂದು
ಎಂತಹ ವಿಪರ್ಯಾಸವಲ್ಲವೇ…!!!
ಈ ನೆಲ.. ಈ ಜಲ.. ಈ ಮಣ್ಣು.. ಇರಲಿ ಇರಲಿ ಹೀಗೆ… ಈ ಪ್ರಕೃತಿ ಕೊಟ್ಟ ಕೊಡುಗೆ ಅನ್ನೋ ಮಾತಂತೆ, ಪ್ರಕೃತಿ ಕೊಡುಗೆಯನ್ನು ಪ್ರೀತಿಸುವ, ರಕ್ಷಿಸುವ. ದುರುಪಯೋಗ ಪಡಿಸಿಕೊಳ್ಳದೇ ಉಳಿಸುವ ಕರ್ತವ್ಯ ನಮ್ಮದು. ಇತಿಹಾಸದ ಪುಟಗಳಲ್ಲಿ ನಿಸರ್ಗ ಸೌಂದರ್ಯಕ್ಕೆ, ಸಂಸ್ಕೃತಿ, ಸಂಸ್ಕಾರಗಳಿಗೆ, ವಿದೇಶದಿಂದ ಹೊಗಳಿಸಿಕೊಂಡ ದೇಶವನ್ನು ಇಂದು ಅದೇ ವಿದೇಶಿಯರಿಂದ ಕಸದ ತೊಟ್ಟಿ ಎಂದು ಗೇಲಿ ಗೊಳಗಾಗಿರುವುದು ವಿಪರ್ಯಾಸ.
ಪರಿಸರ ನಾಶಕ್ಕೆ ಮೂಲ ಕಾರಣ ಈ ಪ್ಲಾಸ್ಟಿಕ್ ಗಳು. ನಮ್ಮ ಉಳಿವು ಪರಿಸರದಲ್ಲಿ, ಅಳಿವು ಕೂಡಾ ಪರಿಸರದಲ್ಲಿ. 'ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು' ಎಂಬ ನಾಣ್ಣುಡಿಯಂತೆ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಇದಕ್ಕಾಗಿ ನಾವು ಹಲವಾರು ಕ್ರಮಗಳನ್ನು ಕೈಗೊಳ್ಳಬೇಕು.
▪️ವೈಯಕ್ತಿಕ ಸಮಾರಂಭಗಳಾದ ಹುಟ್ಟುಹಬ್ಬ, ಮದುವೆ, ವಾರ್ಷಿಕೋತ್ಸವ ಇನ್ನಿತರ ದಿನಗಳಲ್ಲಿ ಕೇಕು, ಹೆವೆನ್ ಟ್ರೆಜರ್, ಬಲೂನ್ಗಳು ಇಂತಹ ದುಬಾರಿ ವಸ್ತುಗಳ ಜೊತೆಗೆ ಆರೋಗ್ಯ ಹಾನಿಕಾರಕ ತಿನಿಸುಗಳ ತಿಂದು ಹುಚ್ಚು ಚಟಗಳೊಂದಿಗೆ ಆಚರಿಸುವ ಹಬ್ಬಗಳು ಬೇಕೆ...?
▪️ಆಡಂಬರದಿಂದ ಸಿರಿವಂತಿಕೆ ತೋರಿಸುವ ಬದಲು ಗಿಡಗಳ ನೆಟ್ಟು ಪರಿಸರ ಪ್ರೇಮಿಗಳು ಎನಿಸಕೊಳ್ಳಬಹುದಲ್ಲವೇ...?
ಸಾಲು ಮರದ ತಿಮ್ಮಕ್ಕನವರು ಸಿರಿವಂತಿಕೆಯಿಂದ ನಮಗೆ ಪರಿಚಿತರಲ್ಲ. ಗಿಡಗಳನ್ನು ನೆಟ್ಟು ಪೋಷಿಸಿದ್ದರಿಂದ ಅವರು ನಮಗೆ ಚಿರಪರಿಚಿತರು. ಸತ್ತವರ ಮೇಲೆ ಕಲ್ಲಿನ ಕಟ್ಟೆಯ ಕಟ್ಟುವ ಬದಲು, ಗಿಡ ನೆಟ್ಟು ಪಾತಿಯ ಕಟ್ಟಿದರೆ ಸತ್ತ ಪ್ರೀತಿ ಪಾತ್ರರು ಗಿಡದ ಮೂಲಕ ಜೀವಂತವಾಗಿ ಇದ್ದಾರೆ ಏನೋ ಎಂದು ಅನಿಸುತ್ತೆ. ಆಗಲೇ ಹೇಳಿದಂತೆ ಪರಿಸರ ನಾಶಕ್ಕೆ ಮೂಲ ಕಾರಣ ಪ್ಲಾಸ್ಟಿಕ್ ಗಳು. ಪ್ಲಾಸ್ಟಿಕ್ ಗಳಿಗಿಂತ ಅಪಾಯಕಾರಿ ಇನ್ನೊಂದಿದೆ ಅದೇ ಮನುಷ್ಯನ ದುರಾಸೆ. ನಮ್ಮ ದುರಾಸೆಯಿಂದಲೇ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ನಮ್ಮ ಐಶಾರಾಮವನ್ನು ತೋರಿಸಲು, ಮಾಲಿನ್ಯವನ್ನು ಮುಗಿಲು ಮುಟ್ಟಿಸುತ್ತಿರುವೆವು. ಪ್ಲಾಸ್ಟಿಕ್ ಗಳು ನಮ್ಮ ಹಸಿವು ನೀಗಿಸಲ್ಲ ಆದರೆ, ಹಸಿವು ನೀಗಿಸೋ ದ್ರವ್ಯವನ್ನು ಕಸಿಯುತ್ತಿದೆ. ಇಂತಹ ಪರಿಸ್ಥಿತಿ ನಮಗೆ ಬೇಕೆ? ಇದರ ಬದಲು ಪ್ಲಾಸ್ಟಿಕ್ ಗಳನ್ನು ಮಿತವಾಗಿ ಬಳಸಿ, ಎಲ್ಲೆಂದರಲ್ಲಿ ಎಸೆಯದೆ, ಕಸದ ಬುಟ್ಟಿಗೆ ಹಾಕಿ, ಔಷಧಿಗಳ ತವರಾದ ಪ್ರಕೃತಿಗೆ ಉಪಕರಿಸುವ, ಪ್ಲಾಸ್ಟಿಕ್ ಗಳನ್ನು ಮರುಬಳಕೆ ಮಾಡುವ, ಪರಿಸರ ಮಾಲಿನ್ಯ ವ ತಡೆಯುವ, ನಾವೆಲ್ಲಾ ಪರಿಸರದ ಮಿತ್ರರಾಗೋಣ. ಅದು ಸಾಧ್ಯವಿಲ್ಲದಿದ್ದರೆ ಶತ್ರುಗಳಂತೂ ಆಗೋದೇ ಬೇಡ. ನಮ್ಮ ಉಸಿರು ಅಡಗಿರುವುದು ಈ ಪ್ರಕೃತಿ ತೇರಿನಲ್ಲಿ. ಪ್ರಕೃತಿ ಮಾತೆಯ ಕೋಪಕ್ಕೆ ಕಾರಣವಾಗಿ ಪ್ರಕೃತಿ ವಿಕೋಪಕ್ಕೆ ತುತ್ತಾಗಬೇಕೆ...? ಅಥವಾ ಮಾತೆಯ ಪ್ರೀತಿ ಪಾತ್ರರಾಗಿ ಹಸಿರು ಪರಿಸರದಲ್ಲಿ ತಣ್ಣನೆಯ ಭೂಮಿಯಲ್ಲಿ ನೆಮ್ಮದಿಯಿಂದ ಜೀವಿಸಿ, ಮಾತೆಯ ಒಡಲಲ್ಲಿ ಖುಷಿಯಿಂದ ಜೀವ ತ್ಯಾಗ ಮಾಡಬೇಕೆ...? ನಾವೆಲ್ಲಾ ಯೋಚಿಸಬೇಕಾದ ವಿಚಾರ..!!!
9ನೇ ತರಗತಿ
ಸರಕಾರಿ ಪ್ರೌಢ ಶಾಲೆ , ಸಿದ್ಧಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************