-->
ಜಗಲಿ ಕಟ್ಟೆ : ಸಂಚಿಕೆ - 3

ಜಗಲಿ ಕಟ್ಟೆ : ಸಂಚಿಕೆ - 3

ಜಗಲಿ ಕಟ್ಟೆ : ಸಂಚಿಕೆ - 3
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


       ಪ್ರತಿ ಮನೆಯ ಮಗೂ ಶ್ರೇಷ್ಠ. ಪ್ರತಿಯೊಂದು ಮಗುವಿನಲ್ಲೂ ತನ್ನದೇ ಆದ ಪ್ರತಿಭೆ ಅಂತರ್ಗತವಾಗಿರುತ್ತದೆ. ಕಲೆ ಹಾಗೂ ಸಾಹಿತ್ಯಿಕ ಪ್ರತಿಭೆಯುಳ್ಳ ಎಲ್ಲಾ ಮಕ್ಕಳು ಜಗಲಿಯಲ್ಲಿ ಬೆಳೆಯಬೇಕೆಂಬಂದು ಮಕ್ಕಳ ಜಗಲಿಯ ಪರಿಕಲ್ಪನೆ. 
     ಎರಡು ವರ್ಷಗಳ ಹಿಂದೆ ಮಕ್ಕಳ ಜಗಲಿ ಆರಂಭವಾದಾಗ ಕೆಲವು ಮಕ್ಕಳಿಗಷ್ಟೆ ತಲುಪಿತ್ತು. ಮಕ್ಕಳ ಜಗಲಿಯ ಹಿತೈಷಿಗಳಾದ ನಿಮ್ಮೆಲ್ಲರ ಕಾಳಜಿಯಿಂದಾಗಿ ಜಗಲಿ ವಿಸ್ತಾರವಾಗಿ ಜಿಲ್ಲೆ , ರಾಜ್ಯ, ದೇಶದ ಗಡಿ ಮೀರಿ ಬಹಳಷ್ಟು ವಿದ್ಯಾರ್ಥಿಗಳು ಬೆರೆಯುತ್ತಿದ್ದಾರೆ. ಚಿತ್ರ ಮತ್ತು ಬರಹಗಳಲ್ಲಿ ಅಭಿರುಚಿ ಹೊಂದಿರುವ ಮಕ್ಕಳನ್ನು ಅವರ ನಿರಂತರ ಆಸಕ್ತಿಯ ನೆಲೆಯಲ್ಲಿ ಗುರುತಿಸಲಾಗುತ್ತಿದೆ. ಗುಣಮಟ್ಟಕ್ಕಿಂತಲೂ ಅವರ ಪರಿಶ್ರಮ, ಆಸಕ್ತಿ, ಶ್ರದ್ಧೆಯನ್ನು ಗಮನದಲ್ಲಿಟ್ಟುಕೊಂಡು ಪ್ರೋತ್ಸಾಹ ಕೊಡುವುದು ಮಕ್ಕಳ ಜಗಲಿಯ ಉದ್ದೇಶವಾಗಿದೆ. ದ್ವಿತೀಯ ಪಿಯುಸಿ ತನಕದ ವಿದ್ಯಾರ್ಥಿಗಳ ಚಿತ್ರ ಹಾಗೂ ಬರಹಗಳನ್ನು ಪ್ರಕಟಿಸುತ್ತಾ ಬೆಳೆಯಲು ಪೂರಕವಾಗುವಂತೆ ಅನುವು ಮಾಡಿಕೊಡಲಾಗುತ್ತದೆ.
      ಶನಿವಾರದ ಶಿಕ್ಷಕರ ಡೈರಿ ಅಂಕಣದಲ್ಲಿ ಶಿಕ್ಷಕ ಪ್ರೇಮನಾಥ ಮರ್ಣೆ ಬರೆದಿರುವ ಅನುಭವ ಲೇಖನವನ್ನು ನೆನಪಿಸುತ್ತಿದ್ದೇನೆ. ತರಗತಿಯಲ್ಲಿ ತುಂಬಾ ಕೀಟಲೆ ನೀಡುತ್ತಿದ್ದ ಬಾಲಕನ ಸಂಗೀತ ಆಸಕ್ತಿಯನ್ನು ಗುರುತಿಸಿ ಪ್ರಶಂಸೆಯ ಮಾತುಗಳನ್ನಾಡಿದ ಪ್ರೇಮ್ ಸರ್ ನಂತರದ ದಿನಗಳಲ್ಲಿ ಆ ಬಾಲಕನಲ್ಲಿ ನಡೆದ ತುಂಬಾ ಬದಲಾವಣೆಯನ್ನು ಸೊಗಸಾಗಿ ಲೇಖನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಪ್ರೀತಿ, ಆತ್ಮೀಯತೆ, ಕಾಳಜಿ, ಪ್ರೋತ್ಸಾಹ ತುಂಬಿದ ಮಾತುಗಳು ತುಂಬಾ ಪ್ರಭಾವ ಬೀರಬಹುದೆನ್ನುವುದಕ್ಕೆ ಉತ್ತಮ ಉದಾಹರಣೆ. ಜಗಲಿಯಲ್ಲಿ ತುಂಬಾ ಜನ ನೀವುಗಳು ಶಿಕ್ಷಕರಿದ್ದೀರಿ. ಇಂತಹ ಅನೇಕ ಪ್ರೇರಣೆ ನೀಡುವ ನಿಮ್ಮಅನುಭವಗಳು ಶಿಕ್ಷಕರ ಡೈರಿಯ ಅಂಕಣದಲ್ಲಿ ಮೂಡಿ ಬರಬೇಕೆಂಬುದು ನಮ್ಮ ಆಶಯ.
     ಅತ್ಯುತ್ತಮವಾಗಿ ಚಿತ್ರ ಬರೆಯುತ್ತಿದ್ದ ಹಾಗೂ ಉತ್ತಮ ಕಥೆ , ಕವನ, ಲೇಖನ ಬರೆಯುವ ಮಕ್ಕಳಿಗೆ ನಿರಂತರ ಪ್ರೋತ್ಸಾಹ ಕೊಡುವುದರ ಜೊತೆಗೆ.... ಚಿತ್ರ ಬರೆಯಲು ಮಾರ್ಗದರ್ಶನವಿಲ್ಲದ, ತೊದಲ ಬರಹದ ಅದೆಷ್ಟೋ ಮಕ್ಕಳು ಗೀಚಿ ಬರೆದು ಕಳಿಸಿದಾಗ ಅವರು ವ್ಯಯಿಸಿದ ಸಮಯ, ಶ್ರದ್ಧೆ, ಆಸಕ್ತಿಯನ್ನು ಮಾನದಂಡವಾಗಿಟ್ಟು ಪ್ರೋತ್ಸಾಹ ನೀಡುವ ಸಲುವಾಗಿ ಜಗಲಿಯ ಅಂಕಣದಲ್ಲಿ ಪ್ರಕಟಿಸುವ ಗಟ್ಟಿ ನಿರ್ಧಾರ ನಮ್ಮದಾಗಿದೆ. ಹೀಗೆ ಗೀಚಿ ಗೀಚಿ ಚಿತ್ರ ಬರೆದ, ಎಡವಿ ಎಡವಿ ಬರೆದ ವಿದ್ಯಾರ್ಥಿಗಳೀಗ ತುಂಬಾನೆ ಬೆಳೆದಿರುವುದು ನಿಮಗೇ ತಿಳಿದಿದೆ. 'ಉಗುಳಿ ಉಗುಳಿ ರೋಗ, ಬೊಗಳಿ ಬೊಗಳಿ ರಾಗ' ಎನ್ನುವ ಗಾದೆ ಮಾತಿನಂತೆ ನಿರಂತರ ತೊಡಗಿಸಿ ಕೊಳ್ಳುವಿಕೆ ನಮ್ಮಲ್ಲಿ ಬದಲಾವಣೆ ತರುತ್ತದೆ ಎನ್ನುವುದಕ್ಕೆ ಜಗಲಿಯಲ್ಲಿ ಬೆಳೆದಿರುವ ಮಕ್ಕಳೇ ಸಾಕ್ಷಿ. 
     ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಇವರ 'ಅಕ್ಕನ ಪತ್ರ' ಅಂಕಣವು ಮಕ್ಕಳಲ್ಲಿ ಪತ್ರ ಬರೆಯುವ ಅಭಿರುಚಿಯನ್ನು ಮೂಡಿಸಿತ್ತು. ಪ್ರತಿ 15 ದಿನಕ್ಕೊಮ್ಮೆ ಮಕ್ಕಳು ಬರೆಯುತ್ತಿದ್ದ ಪತ್ರಗಳಲ್ಲಿ ಭಾವನೆ ತುಂಬಿರುತ್ತಿತ್ತು. ಹೀಗೆ ಸ್ವಂತವಾಗಿ ಬರೆಯುವ ಹವ್ಯಾಸ ಕರಗತವಾದಲ್ಲಿ  ಕಥೆ, ಕವನ, ಲೇಖನ ನಿಮಗೆ ಇಷ್ಟವಾಗುವ ವಿಷಯ ಆಯ್ದು ನಮಗೆ ಬರೆದು ಕಳಿಸಿ.
      ಬಂಟ್ಟಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಎಂ.ಪಿ. ಇವರ 'ಜೀವನ - ಸಂಭ್ರಮ' ಅಂಕಣ ದಲ್ಲಿ ಪ್ರಕಟವಾಗಿರುವ ಬರಹಗಳು ಈಗಾಗಲೇ ಪುಸ್ತಕ ರೂಪದಲ್ಲಿ ಬಿಡುಗಡೆಯಾಗಿದೆ. ಮಕ್ಕಳ ಜಗಲಿಯಲ್ಲಿ ನಿರಂತರವಾಗಿ ಕವನ ಬರೆಯುತ್ತಿದ್ದ ಮಂಚಿ - ಕೊಳ್ನಾಡು ಪ್ರೌಢಶಾಲೆಯ ವಿದ್ಯಾರ್ಥಿನಿಯರಿಂದ ಎರಡು ಕವನ ಸಂಕಲನಗಳು ಬಿಡುಗಡೆಯಾಗಿದೆ. 10ನೇ ತರಗತಿಯ ಧೃತಿ ಕಲ್ಲಾಜೆ ಇವರ 'ಮರವಾಗು' ಮತ್ತು 9ನೇ ತರಗತಿಯ ಗ್ರೀಷ್ಮಾ ಕುಲಾಲ್ ಇವರ 'ಓ - ಮಾನವ' ಕವನ ಸಂಕಲನ ಬಿಡುಗಡೆಯಾಗಿರುವುದು ಇನ್ನುಳಿದ ವಿದ್ಯಾರ್ಥಿಗಳಿಗೆ ಮಾದರಿಯೆನಿಸಿದೆ. ಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆಯವರ 'ಬದಲಾಗೋಣವೇ ಪ್ಲೀಸ್...!' ಮತ್ತು ಅರವಿಂದ ಕುಡ್ಲ ಇವರ 'ಹಕ್ಕಿ - ಕಥೆ' ಪುಸ್ತಕ ರೂಪದಲ್ಲಿ ಹೊರಬರಲು ಸಿದ್ಧತೆ ನಡೆದಿದೆ.
      
    
    ಮಕ್ಕಳ ಜಗಲಿಯಲ್ಲಿ ಪ್ರಕಟವಾದ ಶರ್ಮಿಳಾ ಕೆ. ಎ‌ಸ್. ರವರ ಕವನಗಳು ಉತ್ಕೃಷ್ಟವಾದವುಗಳು. ‌ಶರ್ಮಿಳಾರವರು ತನ್ನ ವಯಸ್ಸಿಗೆ ಮೀರಿ ತನ್ನ ಪ್ರತಿಭೆಯನ್ನು ತನ್ನ ಕವನಗಳ ಮೂಲಕ ತೋರಿಸಿರುವುದು ಶ್ಲಾಘನೀಯ. ಅವರಿಗೆ ನನ್ನ ಹೃತ್ಪೂರ್ವಕ ನಮನಗಳು. ಕವಿಯಿತ್ರಿ ತನ್ನಲ್ಲಿರುವ ಭಾವನೆಗಳಿಗೆ ಸೂಕ್ತ ಪದಪುಂಜಗಳ ಮೂಲಕ ಸೃಜನಾತ್ಮಕವಾದ ಹೊಳಪು ನೀಡಿ ಕವನಗಳನ್ನು ಸೃಷ್ಟಿಸಿರುವುದಂತೂ ನನಗೆ ತುಂಬಾ ಸಂತೋಷವಾಗಿದೆ. ಸಮಾಜ ವಿಜ್ಞಾನದ ಬಗ್ಗೆ ಅವರಿಗಿರುವ ಅಭಿಮಾನವನ್ನು, ಪುಸ್ತಕವು ಮಸ್ತಕಕ್ಕೆ ನೀಡುವ ಜ್ಞಾನದ ಕುರಿತು, ಸಂಗೀತಕ್ಕಿರುವ ಅಪಾರ ಶಕ್ತಿಯ ಬಗ್ಗೆ, ಶಿಕ್ಷಕರು ಜ್ಞಾನ ಮತ್ತು ಜೀವನಕ್ಕೆ ದಾರಿದೀಪ ವೆಂಬುದನ್ನು ತನ್ನ ಕವನದ ಮೂಲಕ ವ್ಯಕ್ತಪಡಿಸಿರುತ್ತಾರೆ. ಮುಂದೆ ‌ ಶರ್ಮಿಳಾರವರು ಕನ್ನಡ ಸಾಹಿತ್ಯ ಚಟುವಟಿಕೆಗಳಲ್ಲಿ ಇನ್ನೂ ಹೆಚ್ಚು ತೊಡಗಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ನನ್ನ ಪ್ರೀತಿಯ ಹಾರೈಕೆ. ಇಂತಹ ಹಲವಾರು ಪ್ರತಿಭೆಗಳನ್ನು ಪರಿಚಯಿಸಿ, ಅವರಿಗೆ ಪ್ರೋತ್ಸಾಹ ನೀಡುತ್ತಿರುವ ಮಕ್ಕಳ ಜಗಲಿಗೆ ಅಬಾರಿಯಾಗಿರುತ್ತೇನೆ.
..................................... ಶ್ರೀನಿವಾಸ್ ದೈಪಲ
'ಚೈತನ್ಯ' ನೆಲ್ಯಡ್ಕ, ಅಂತರ
ನರಿಕೊಂಬು ಗ್ರಾಮ ಮತ್ತು ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************     ಮಕ್ಕಳ ಜಗಲಿ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿದೆ. ಮಕ್ಕಳಲ್ಲಿ ಕಲಿಯುವ ಆಸಕ್ತಿಗಳನ್ನು ಉಂಟುಮಾಡುತ್ತದೆ.
ಚಿತ್ರ ಬಿಡಿಸುವ ಅಭ್ಯಾಸ, ಕವನ ಬರೆಯುವ ಅಭ್ಯಾಸ , ಹಾಡುಗಳನ್ನು , ಕಥೆಯನ್ನು ಬರೆಯುವ ಅಭ್ಯಾಸವನ್ನು ಸಹ ಹೆಚ್ಚಿಸುತ್ತದೆ. ಇಂತಹ ಒಳ್ಳೆಯ ಮಕ್ಕಳ ಜಗಲಿಯ ತಂಡಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು
............................. ಪ್ರೇಮಾ ಶಿವಪ್ಪ ಶಿರಹಟ್ಟಿ 
10ನೇ ತರಗತಿ
ಎಸ್ ಡಿ ಎನ್ ವೈ ಸರಕಾರಿ ಪ್ರೌಢ ಶಾಲೆ
ಯಲಿಶಿರೂರ
ತಾಲೂಕು ಗದಗ , ಜಿಲ್ಲಾ ಗದಗ
*******************************************       ಕೊರೊನ‌ ಕಾಲಘಟ್ಟದಲ್ಲಿ ಶಾಲಾ‌ ಚಟುವಟಿಕೆಗಳಿಲ್ಲದೆ ಮನೆಯಲ್ಲಿಯೇ ಬಂಧಿಯಾಗಿದ್ದ ಮಕ್ಕಳಿಗೆ ಆನ್ಲೈನ್ ನಲ್ಲಿ ಕೆಲವೊಂದು ಸಂಸ್ಥೆಗಳು ನಡೆಸುತ್ತಿದ್ದ‌ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದ ನಮಗೆ ಸಂಬಂಧಿಕರೊಬ್ಬರು ಮಕ್ಕಳ ಜಗಲಿಯ ವಾಟ್ಸಾಪ್ ನಂಬರ್ ನೀಡಿ ಮಕ್ಕಳು ರಚಿಸಿದ ಚಿತ್ರಗಳನ್ನು ಕಳುಹಿಸಬಹುದು ಎಂದರು. ಮಕ್ಕಳ ಜಗಲಿಗೆ ಮಗನ ಚಿತ್ರಗಳನ್ನು ಕಳುಹಿಸಿದೆವು. ಅದು ಪ್ರಕಟಗೊಂಡಾಗ ತುಂಬಾ ಸಂತೋಷಪಟ್ಟೆವು. ಹೀಗೆ ಜಗಲಿಯ ನಂಟು ಬೆಳೆಯಿತು. ನಂತರ ಮುಂದೆ ಇನ್ನಷ್ಟು ಚಿತ್ರಗಳು, ಕೊಲಾಜ್ ಚಿತ್ರ, ಹಸಿರು ಯೋಧರು ಅಕ್ಕನ ಪತ್ರದ ಮೂಲಕ ಮಗನ ಆಸಕ್ತಿಯು ತೆರೆದು ಕೊಳ್ಳಲು ಮನೆಯಲ್ಲಿ ಕುಳಿತೇ ಅವಕಾಶ ಸಿಕ್ಕಾಗ ಮಗನ ಸಂಭ್ರಮ ಹೇಳತೀರದು. ಅಕ್ಕನ ಪತ್ರ ವಂತು ಪುಸ್ತಕ ಓದುವುದರಲ್ಲಿ ಆಸಕ್ತಿ ಕಡಿಮೆಯಿದ್ದ ನನ್ನ ಮಗನನ್ನು ಹೆಚ್ಚು ಓದುವಂತೆ ಪ್ರೇರೇಪಿಸಿತು. ಅಕ್ಕನ ಪತ್ರಕ್ಕಾಗಿ ಕಾಯುವುದು, ಇತರ ಮಕ್ಕಳು ‌ಹೇಗೆ ಬರೆದಿದ್ದಾರೆ ‌ಎಂಬ ಕುತೂಹಲ ನೋಡಲು ಚೆನ್ನಾಗಿತ್ತು. ಅಕ್ಕ ತೋರಿದ ಪ್ರೀತಿ ಹಾಗಿತ್ತು. ಯಾವ ವಿಚಾರ ಅಕ್ಕನಲ್ಲಿ ಹಂಚಿಕೊಳ್ಳಲಿ ಎಂಬುದು ಯಾವುದಾದರೊಂದು ಪುಸ್ತಕ ‌ಓದಿಸುತ್ತಿತ್ತು. ಬರವಣಿಗೆಯ ಶೈಲಿ ‌ಉತ್ತಮ ಪಡಿಸಿಕೊಳ್ಳಲು ಸಹಾಯ ಮಾಡುತ್ತಿತ್ತು. ಜಗಲಿಯಲ್ಲಿ ಪ್ರಕಟವಾಗುವ ಉತ್ತಮ ವೈಚಾರಿಕ ಲೇಖನಗಳನ್ನು ಮಗನಿಗೆ ಓದಿ ಹೇಳಲು ತುಂಬಾ ಖುಷಿ. ಪರೀಕ್ಷೆಯ ಸಂದರ್ಭದಲ್ಲಿ ಪ್ರಕಟವಾದ ಶಿಕ್ಷಕರ ಲೇಖನಗಳು ತುಂಬಾ ಸಹಕಾರಿಯಾದವು. ಉತ್ತಮವಾದ ಲೇಖನಗಳನ್ನು ಬರೆದು ಮಕ್ಕಳಿಗೆ ಮಾಹಿತಿ ನೀಡುತ್ತಿರುವ ಎಲ್ಲರಿಗೂ ನಮ್ಮ ಹೃತ್ಪೂರ್ವಕ ನಮನಗಳು. ನಮ್ಮಂತಹ ಪೋಷಕರಿಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಜಗಲಿಯನ್ನು ಮುಕ್ತಗೊಳಿಸಿದ್ದಕ್ಕೆ ಮಕ್ಕಳ ಜಗಲಿಯ ತಾರಾನಾಥ್ ಸರ್ ದಂಪತಿಗಳಿಗೆ ನಮ್ಮ ಧನ್ಯವಾದಗಳು. ಮಕ್ಕಳ ಜಗಲಿಯು ಇನ್ನಷ್ಟು ವಿಸ್ತಾರಗೊಳ್ಳಲಿ ಹೆಚ್ಚು ಪ್ರತಿಭೆಗಳಿಗೆ ಅವಕಾಶ ದೊರೆಯಲಿ ಎಂದು ಆಶಿಸುತ್ತೇನೆ.
................................ ಶ್ರೀಮತಿ ‌ಕವಿತಾ ಶ್ರೀನಿವಾಸ್
'ಚೈತನ್ಯ' ನೆಲ್ಯಡ್ಕ, ಅಂತರ
ನರಿಕೊಂಬು ಗ್ರಾಮ ಮತ್ತು ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************
  


       ನಿಮಗೆ ನನ್ನ ನಮನ ಗಳು...... ನಾನು ಈ ವೇದಿಕೆಯಲ್ಲಿ ನೀಡಬಯಸುವ ಸಣ್ಣ ಸಲಹೆ ಏನೆಂದರೆ ಪ್ರತಿ ವಾರದ ಕೊನೆ ಅಂದರೆ ಶನಿವಾರ ಅಥವಾ ಭಾನುವಾರದಂದು ಮಕ್ಕಳಿಗೆ ಸಾಹಿತ್ಯದಲ್ಲಿ ಇನ್ನೂ ಹೆಚ್ಚು ಆಸಕ್ತಿ ಬೆಳೆಸುವ ಸಲುವಾಗಿ ಮಕ್ಕಳಿಗೆ ನಿರ್ದಿಷ್ಟ ವಿಷಯದ ಬಗ್ಗೆ ಕವನ \ ಕಥೆ ಇತ್ಯಾದಿ ಸಾಹಿತ್ಯ ಪ್ರಕಾರಗಳನ್ನು ನೀಡಬೇಕಾಗಿ ಈ ಮ‌ೂಲಕ ವಿನಂತಿಸಿಕೊಳ್ಳುತ್ತೇನೆ. ಇದರಿಂದ ಮಕ್ಕಳಲ್ಲಿನ ಸಾಹಿತ್ಯಾಭಿರುಚಿ ವೃದ್ಧಿಯಾಗಬಹುದೆನ್ನುವುದು ನನ್ನ ಅಭಿಪ್ರಾಯ.
................................................. ಸುನೀತಾ
ಪ್ರಥಮ ಪಿಯುಸಿ
ಎಕ್ಸೆಲ್ ಪಿಯು ಕಾಲೇಜ್ ಗುರುವಾಯನಕೆರೆ 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


      ಮಕ್ಕಳ ಜಗಲಿಗೆ ಜನನಿ ಮಾಡುವ ನಮಸ್ಕಾರಗಳು. ಮೊದಲನೆಯದಾಗಿ ಜೂನ್- 5 ವಿಶ್ವ ಪರಿಸರ ದಿನದ ಹಾರ್ಥಿಕ ಶುಭಾಶಯಗಳು. ಪ್ರತೀ ವರ್ಷ ನಾವು ಶಾಲೆಯಲ್ಲಿ ಜೂನ್- 5 ವಿಶ್ವ ಪರಿಸರ ದಿನದಂದು ಗಿಡಗಳನ್ನು ನೆಡುತ್ತೇವೆ. ನಮ್ಮ ಶಾಲೆಯ ಅಧ್ಯಾಪಕ ವೃಂದದವರಿಂದ ನಮ್ಮ ಶಾಲೆಯ ಹತ್ತಿರದಲ್ಲಿರುವ ಕೊಯಿಲ ಕೆ.ಸಿ.ಫಾರ್ಮನಲ್ಲಿರುವ ನರ್ಸರಿಯಿಂದ ನಮ್ಮ ಶಾಲೆಯ ಎಲ್ಲಾ ಮಕ್ಕಳಿಗೆ ಹಾಗೂ ಶಾಲೆಯ ಸುತ್ತಮುತ್ತ ನೆಡಲು ಉಚಿತವಾಗಿ ಗಿಡಗಳನ್ನು ಕೊಟ್ಟರು. ಶಾಲಾ ಅಧ್ಯಾಪಕ ವೃಂದದವರು, ಶಾಲಾಭಿವೃಧ್ಧಿ ಸಮಿತಿ ಹಾಗೂ ಪೋಷಕ ವೃಂದದವರು ನಮ್ಮ ಶಾಲೆಯ ಸುತ್ತಮುತ್ತ 450 ಅಡಿಕೆ ಗಿಡ, 300 ಬಾಳೆ ಗಿಡ, 15 ತೆಂಗಿನ ಗಿಡಗಳನ್ನು ನೆಟ್ಟಿದ್ದಾರೆ. 
      ಶಾಲೆಯ ಸುತ್ತಮುತ್ತ ಹಣ್ಣುಹಂಪಲು ಗಿಡ ಹಾಗೂ ಹೂಗಿಡಗಳನ್ನು ನೆಡಲಾಗಿದೆ. ನಮ್ಮ ಶಾಲೆಯ ಸುತ್ತಮುತ್ತ ಹಸಿರಾದ ಪರಿಸರ ಇರುವ ಕಾರಣ ಉತ್ತಮವಾದ ಗಾಳಿ ಹಾಗೂ ಉತ್ತಮವಾದ ವಾತಾವರಣ ಸಿಗುತ್ತದೆ. ನಮ್ಮ ಕೊಯಿಲ ಕೆ.ಸಿ.ಫಾರ್ಮನ ಗುಡ್ಡದಲ್ಲಿ ಎಲ್ಲೆಂದರಲ್ಲಿ ಕಸ-ಕಡ್ಡಿಗಳನ್ನು ಎಸೆಯುತ್ತಾರೆ. ಹೊರಗಿನಿಂದ ಬಂದ ಜನರು ಪ್ಲಾಸ್ಟಿಕ್ ಗಳನ್ನು ಎಸೆದು ಹೋಗುತ್ತಾರೆ. ನಮ್ಮ ಕೆ.ಸಿ.ಫಾರ್ಮ್ ನ ಪರಿಸರ ಮಲೀನಗೊಳ್ಳುತ್ತಿದೆ. ನಮ್ಮ ಊರಿನ ಮನೆಯ ದನಕರುಗಳು ಮೇಯಲು ಹೋದಾಗ ಪ್ಲಾಸ್ಟಿಕ್ ವಸ್ತುಗಳನ್ನು ತಿಂದು ಅವುಗಳ ಆರೋಗ್ಯ ಹದಗೆಟ್ಟು ದನಕರುಗಳು ಸಾಯುವ ಪರಿಸ್ಥಿತಿಯಲ್ಲಿರುತ್ತವೆ. ಮನುಷ್ಯ ಮನರಂಜನೆಗಾಗಿ ಮದ್ಯಪಾನ ಕುಡಿದು ಬಾಟಲಿಗಳನ್ನು ಎಸೆದು ಹೋಗುತ್ತಾರೆ. ಇದರಿಂದ ನಮ್ಮ ಪರಿಸರವು ಹಾಳಾಗುತ್ತಿದೆ. ಪ್ಲಾಸ್ಟಿಕ್ ವಸ್ತುಗಳನ್ನು ಆದಷ್ಟು ಕಡಿಮೆ ಮಾಡಬೇಕು. ಪ್ಲಾಸ್ಟಿಕ್ ಚೀಲ ಬಿಡಿ. ಬಟ್ಟೆ ಚೀಲ ಹಿಡಿ.
ಪ್ಲಾಸ್ಟಿಕ್ ಅಳಿಸಿ - ಪರಿಸರ ಉಳಿಸಿ... ಧನ್ಯವಾದಗಳು
................................................... ಜನನಿ .ಪಿ
7ನೇ ತರಗತಿ 
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಕೊಯಿಲ ಕೆ.ಸಿ.ಫಾರ್ಮ 
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*******************************************ನನ್ನ ಹೆಸರು ಸಾತ್ವಿಕ್ ಗಣೇಶ್ ,  
   ಮಕ್ಕಳ ಜಗಲಿಯ ಎಲ್ಲಾ ಬಂಧು ಮಿತ್ರರಿಗೆ ನನ್ನ ನಮಸ್ಕಾರಗಳು. ತಾರಾನಾಥ್ ಸರ್ ಅವರು
ಮಕ್ಕಳ ಮೇಲಿನ ಪ್ರೀತಿಯಿಂದ ತುಂಬಾ ಯೋಚನೆ ಮಾಡಿ ಕೊರೋನ ಬಂದು ಹೊರಗೆ ಹೋಗಲು ಆಗದೇ ಇರುವ ಸಂದರ್ಭದಲ್ಲಿ ಅಧ್ಯಾಪಕರು ಮನೆಯಿಂದಲೇ ದೂರದ ಊರಿನಲ್ಲಿ ಇರುವ ಮಕ್ಕಳಿಗೆ ಒಳ್ಳೆಯ ವಿಷಯಗಳನ್ನು ತಿಳಿಸಲು ಮಕ್ಕಳಿಗೋಸ್ಕರ ಆರಂಭಿಸಿದ ಒಂದು ಆನ್ಲೈನ್ ಪತ್ರಿಕೆ ಮಕ್ಕಳ ಜಗಲಿ. ಇದಕ್ಕೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್. ಈ ಒಂದು ಪತ್ರಿಕೆಯಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಸಂತಸವಾಗುತ್ತದೆ. ಇದು ನನಗೆ ಒಳ್ಳೆಯ ವಿಷಯಗಳನ್ನು ತಿಳಿಯಲು ಸಹಾಯವಾಗುತ್ತದೆ. ನಾನು ಬಿಡಿಸಿದ ಚಿತ್ರಗಳು ಮೊದಲಬಾರಿಗೆ ಇದರಲ್ಲಿ ಪ್ರಕಟವಾದಾಗ ತುಂಬಾ ಸಂತೋಷವಾಯಿತು. ಚಿತ್ರವು ಪ್ರಕಟವಾದಾಗ ಹೆಚ್ಚು ಹೆಚ್ಚು ಚಿತ್ರ ಮಾಡುವಂತೆ ಪ್ರೋತ್ಸಾಹವು ದೊರೆತಿದೆ. ನನ್ನ ಹಾಗೆಯೇ ತುಂಬಾ ವಿಧ್ಯಾರ್ಥಿಗಳು ಚಿತ್ರ , ಕಥೆ, ಕವನ ಮೊದಲಾದವನ್ನು ಬರೆಯುವವರು ಹಳ್ಳಿಯಲ್ಲಿ ಇರುತ್ತಾರೆ. ಅವರಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು ಇದು ತುಂಬಾ ಸಹಕಾರಿಯಾಗಿದೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತದೆ. ಈ ಒಂದು ವೇದಿಕೆಯಲ್ಲಿರುವ ಎಲ್ಲಾ ಗುರುಗಳು ಬೇರೆ ಬೇರೆ ರೀತಿಯಲ್ಲಿ ನಮಗೆಲ್ಲಾ ಒಳ್ಳೆಯ ವಿಷಯಗಳನ್ನು ಹೇಳಿ ಕೊಡುತ್ತಿದ್ದಾರೆ. ಎಲ್ಲರಿಗೂ ನಮ್ಮ ಧನ್ಯವಾದಗಳು ಸರ್ .
     ನಾನು ಕೂಡ ಅದೆಷ್ಟೋ ಕಡೆ ಇದೇ ರೀತಿ ಕಸ ಹಾಕಿರುವುದನ್ನು ನೋಡಿರುವೆನು. ಒಬ್ಬರು ಕಸ ಹಾಕಿದಲ್ಲಿ ಮತ್ತೊಬ್ಬರು ಚಿಕ್ಕವರಿಗಿಂತ ಹೆಚ್ಚು ದೊಡ್ಡವರೆ ಈ ಕೆಲಸವನ್ನು (ಕೆಲವು ಜನರು ಮಾತ್ರ) ಬಹಳ ಬೇಗನೆ ಮಾಡುವರು. ಆದರೆ ಒಳ್ಳೆಯ ಕೆಲಸ ಇದೇ ರೀತಿಯಾಗಿ ಮಾಡಿದ್ದರೆ ಎಲ್ಲರಿಗೂ ತುಂಬಾ ಪ್ರಯೋಜನವಾಗುತ್ತಿತ್ತು. ದಾರಿಯಲ್ಲಿ ಹೋಗುವಾಗ ಕಸವನ್ನು ಕಂಡಾಗ ತುಂಬಾ ಬೇಸರವಾಗುತ್ತದೆ .
     ಪರಿಸರ ಸಂರಕ್ಷಣೆ ನಮ್ಮೆಲ್ಲರ ಹಕ್ಕು ಪರಿಸರವನ್ನು ಸಂರಕ್ಷಿಸುವ ಹೊಣೆ ನಮ್ಮದು . ಇದು ಒಬ್ಬರು ಇಬ್ಬರು ಸೇರಿ ಮಾಡಬೇಕಾದ ಕೆಲಸವಲ್ಲ. ಎಲ್ಲರೂ ಸೇರಿ ಮಾಡಬೇಕು. ಎಲ್ಲರೂ ಪ್ರಯತ್ನ ಪಟ್ಟರೆ ಮತ್ತು ಅಲ್ಲಲ್ಲಿ ಕಸವನ್ನು ಹಾಕದೇ ಇದ್ದಲ್ಲಿ ನಮ್ಮ ದೇಶವನ್ನು "ಪ್ರಧಾನಮಂತ್ರಿ ನರೇಂದ್ರ ಮೋದಿ" ಯವರು ಹೇಳಿದಂತೆ ಸ್ವಚ್ಛ ಭಾರತವನ್ನಾಗಿ ಮಾಡಬಹುದು. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಮರಗಳನ್ನು ಉಳಿಸಿ ಗಿಡಗಳನ್ನು ನೆಟ್ಟು , ಪರಿಸರವನ್ನು ಉಳಿಸೋಣ.
.................................... ಸಾತ್ವಿಕ್ ಗಣೇಶ್
9ನೇ ತರಗತಿ
ಸರಕಾರಿ ಪದವಿ ಪೂರ್ವ ಕಾಲೇಜು, ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
*******************************************


     ಓದುಗರ ಮಾತುಕತೆಯಲ್ಲಿ..... ಚಿತ್ರಕಲೆ ಮತ್ತು ಬರವಣಿಗೆಯಲ್ಲಿ ತುಂಬಾ ಆಸಕ್ತಿ ಹೊಂದಿರುವ ಪ್ರತಿಭಾವಂತ ವಿದ್ಯಾರ್ಥಿ ಶಿಶಿರನ ಪೋಷಕರಾದ ಶ್ರೀನಿವಾಸ್ ದೈಪಲ , ಶ್ರೀಮತಿ ‌ಕವಿತಾ ಶ್ರೀನಿವಾಸ್, ವಿದ್ಯಾರ್ಥಿಗಳಾದ ಪ್ರೇಮಾ ಶಿವಪ್ಪ ಶಿರಹಟ್ಟಿ , ಸುನೀತಾ, ಜನನಿ ಪಿ, ಸಾತ್ವಿಕ್ ಗಣೇಶ್ ಇವರು ಸೊಗಸಾದ ಅಭಿಪ್ರಾಯಗಳನ್ನು ತಿಳಿಸಿದ್ದಾರೆ... ಸುನೀತಾ ಇವರು ತಿಳಿಸಿದಂತೆ ವಿದ್ಯಾರ್ಥಿಗಳಿಗೆ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ವಿಚಾರವನ್ನು ಸ್ವೀಕರಿಸುತ್ತೇವೆ......
       ನೀವೂ ನಮ್ಮ ಜೊತೆಯಾಗಿ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
*********************************************
Ads on article

Advertise in articles 1

advertising articles 2

Advertise under the article